ಬರೆಯುತಿರೆ ಮೂಡುವುದು
ನಲ್ಗಬ್ಬವೊಮ್ಮೆ;
ಮೂಡಬಹುದಲ್ಲಲ್ಲಿ
ಬೆಳ್ಗಬ್ಬವೊಮ್ಮೆ.

ಹಾಡುತಿರೆ ಹೊಮ್ಮುವುದು
ಸವಿಯ ದನಿಯೊಮ್ಮೆ;
ನಡುವೆ ಚಿಮ್ಮಲು ಬಹುದು
ಕೀಚುದನಿಯೊಮ್ಮೆ!

ಈಶ್ವರನ ಕವನದಲಿ
ನೀನೊಂದು ತಪ್ಪು!
ಮೇಣವನ ಜಾಣ್ಮೆಯಲಿ
ನೀನೊಂದು ಬೆಪ್ಪು!

ನಿನ್ನ ಕೊರಳಿನ ಕೂಗು
ಅಶುಭವದಕಾಗಿ!
ಮೇಣಿರುಳೆ ನಿನಗಾಯ್ತು
ನಿಲಯವದಕಾಗಿ!

ಶ್ರೀಪತಿಯ ಕೊಳಲಿನಲಿ
ನೀನಪಸ್ವರ.
ಅಜಸತಿಯ ವೀಣೆಯಲಿ
ನೀ ಕುಸ್ವರ!

ಅಂತು ನೀನೂ ಕೂಡ
ಕವನ, ಎಲೆ ಗೂಬೆ!
ಅಂತು ನೀನೂ ಕೂಡ
ಗಾನ, ಎಲೆ ಗೂಬೆ!