ಇಂದು ಜಯಿಸುವೆ ನಾಳೆ ಜಯಿಸುವೆ
ಎಂದು ಭರವಸೆಯಿಟ್ಟು ನಿನ್ನೊಳು,
ಕದನವಾಡಿದೆನು!
ಇಂದು ನಾಳೆಗಳೆಲ್ಲ ಸಂದುವು;
ಬಂದಿತಂತಿಮಕಾಲವಾದರು
ಕದನ ಮುಗಿಯದಿದೆ!

ಅರಿಗಳನುಪಮವೀರರೆಂಬುದ-
ನರಿಯದೆ ಸಹಾಯವನುಪೇಕ್ಷಿಸಿ
ಬರಿದೆ ಹೋರಿದೆನು.
ಕೆಲರ ಜಯಿಸಿದೆ; ಕೆಲರ ಪಳಗಿಸು-
ತುಳಿದವರ ಬಲವಮಿತವಾಗಲು
ಧರೆಯ ಚುಂಬಿಸಿದೆ!

ಬೀಳುತೇಳುತ ಧೈರ್ಯಗುಂದದೆ
ಬೀಳಹೊಯ್ದೆನು ಶತ್ರು ಸುಭಟರ-
ನಾದರುಳಿದಿಹರು;
ಹೀನವಾಗುತಲಿಹುದು ಬಲುಮೆಯು
ದೀನನಾಗಿಹೆ ನಾನು, ಜನನಿಯೆ,
ಕಾದು ಬಳಲಿಹೆನು.

ಒಮ್ಮೆ ನಿನ್ನಯ ಕೃಪೆಯ ತೋರೌ;
ಒಮ್ಮೆ ನಿನ್ನಯ ಬಲವ ನೀಡೌ;
ಸದೆವೆ ಶತ್ರುಗಳ!
ಬಲುಮೆಯಳಿಯಲು ನಿನ್ನ ಬೇಡುವೆ;
ಒಲುಮೆಯೇ ಹಿರಿಬಲುಮೆ, ತಾಯೇ,
ಕದನರಂಗದಲಿ!