ನೀಲಿ ಬಣ್ಣದ ಹೊಗೆಯ ತಿಳಿಯ ತೆಳುಮುಸುಕಿನಲಿ
ಕಾಡು ಬೀಡಾಗಿರುವ ಮಲೆನಾಡಿನಚಲಗಳ
ಹಿಂದುಗಡೆ ದೂರದಲಿ ಮೂಡಿಬಹ ಮುಂಬೆಳಗು
ಮಿಂಚಿನುರಿದೋರಿದುದು. ತಂಗಾಳಿ ಬೀಸಿದುದು.
ಪಕ್ಷಿಗಳ ಪರಿಷತ್ತು ನೆರೆಯುತಿರೆ ಮೋಟಾರು
ಮಿಂಚಿದುದು ಗುಂಪು ಮರಗಳ ನಡುವೆ ಕೆಂಪಾದ
ಹೆದ್ದಾರಿಯಲಿ. ದೂರ ದೂರದೂರಕೆ ಸರಿದು
ಶಿವಮೊಗ್ಗೆ ದೂರಾಯ್ತು. ಕಾರ್ತಿಕದ ನೆಲದ ಸಿರಿ
ಎರಡು ಕೆಲದೊಳು ಕಂಗೊಳಿಸಿ ಮನವ ಸೆರೆಗೈದು
ಮೋಹಿಸಿತು ಬೆಳೆಯುವೆಳಬಿಸಿಲಿನಲಿ: ಗದ್ದೆಗಳು,
ಹಸುರಾಗಿ ಎದೆ ನಿಮಿರಿ ಎದೆಯೆತ್ತರಂ ಬೆಳೆದು
ತೆನೆಮೂಡಿ ಹಸುರು ಮಲೆಗಳ ಹದುಳ ತಕ್ಕೆಯಲಿ
ಸೆರೆಸಿಕ್ಕಿ, ಮೃದುಪವನ ಹತಿಗೆ ತೆರೆತೆರೆಯಾಗಿ
ತಲೆದೂಗಿ, ಶಾಲಿವನ ವನಧಿಯೊಲು ಮುದ್ದಾಗಿ
ಮೆರೆವ ಬಿತ್ತರದ ಗದ್ದೆಗಳು; ನಡು ನಡುವೆಯಲಿ
ಹೆಮ್ಮರಗಳೆಡೆಯೊಳಿಹ ಕಿರುಗುಡಿಸಲೂರುಗಳು;
ಬನದ ಮರೆಜ್ಞಾತವಾಸದಲಿ ತಪಗೈವ
ಮಲೆನಾಡಿನೊಂದೆ ಮನೆ ಹಳ್ಳಿಗಳು; ಅಲ್ಲಲ್ಲಿ
ಮೆರೆವ ಸಿರಿವಸಿರ ತೋಟಗಳಡಕೆ ತೋಟಗಳು;
ನಡುನಡುವೆಯಲ್ಲಲ್ಲಿ ಗದ್ದೆ ಬಯಲುಗಳಲ್ಲಿ
ಮುಗುದ ಮೊಗವೆತ್ತಿ ನೋಡುವ ಕರ್ಮಯೋಗಿಗಳು,
ನೇಗಿಲಿನ ಯೋಗಿಗಳು; ಎಲರೊಳಲೆಯಲೆಯಾಗಿ
ಬಳುಕಿ ನಲಿಯುವ ಹುಲ್ಲು ಬಯಲಿನಲಿ ಮೇಯುತಿಹ
ತುರುಗಳನು ಕಾವ ಕಂಬಳಿಯ ತುರುಗಾಹಿಗಳು;
ಕೆಂಪು ಬಿಳಿ ತಾವರೆಗಳರಳಿರುವ ಮಲೆಯ ಕೆರೆ;
ಮಡಿವಾಳ, ಕಾಜಾಣ, ಮೀಂಚುಳ್ಳಿ, ಕಾಮಳ್ಳಿ,
ಗಿಳಿಯು, ಕೋಗಿಲೆ, ಬಿಳಿಯ ಕೊಕ್ಕರೆಯ ಮೊದಲಾದ
ಹಕ್ಕಿಗಳು; ಮುಗಿಲ ಮುಟ್ಟುವ ದಟ್ಟಕಾಡುಗಳು,
ಹೆದ್ದಾರಿಯನು ಬರಿಯ ಕಿರುಗಲ್ಲಿಯನೆ ಮಾಡಿ
ಭೀಮನನೆ ಮಲೆಯುತಿಹ ಹೆಬ್ಬನದ ಬೀಡುಗಳು;
ತಲೆಯ ಮೇಗಡೆ ದೂರ, ಬನಗಳಿಕ್ಕಟ್ಟಿನಲಿ
ನೀಲಿ ಬಣ್ಣದ ನೀರು ಹರಿವ ಕಾಲುವೆಯಂತೆ
ಹರಿಯುತಿಹ ತಿಳಿಬಾನು; ಕುಳಿರನೊಡರಿಪ ಚಳಿಯ
ಮಳೆಗರೆಯುತಿಹ ಬನದ ಬಿಡುವ ಕಾಣದ ನೆಳಲ
ಹೆಗ್ಗಡಲು; ಬನಗತ್ತಲೆಯ ನಡುವೆ ಕಡುನೀಲಿ
ಬಟ್ಟಿಟ್ಟು, ನಸುನೀಲಿಯನು ತೊಟ್ಟು, ನೋಟಕರ
ಬಗೆ ನಲ್ಮೆಯೊಳೆ ಬೆಚ್ಚಿ ಹಿಗ್ಗುವಂದದಿ ಮಾಡಿ
ರಂಜಿಸುವ ಗುರಗಿ ಗಿಡಗಳ ಕುಸುಮ ಸಮ್ಮೇಳ;
ಅಲ್ಲಲ್ಲಿ ಹೆಬ್ಬಿದಿರು ಕಿರುಬಿದಿರು ಬೀಡುಗಳ
ಬನದ ಕಾಲ್ದೆಸೆಯಲ್ಲಿ ಧೀರವಾಗೆದ್ದಿರುವ
ಗುಡಿಯ ಗೋಪುರದಂಥ ಹುತ್ತಗಳು; ಕಾಡಿನಾ
ಬಲೆನೆರಳಿನಲಿ ಚಿಮ್ಮಿ ಮಿಂಚಿ ಹೋಗುವ ಜಿಂಕೆ;
ಜೀರ್ದುಂಬಿಗಳ ಚೀರುದನಿ; ಮೈಲಿಕಲ್ಲುಗಳು;
ನಿರ್ಜನತೆ ನೀರವತೆ ಗಾಂಭೀರ್ಯ ಮೌನಗಳು;
ಉಬ್ಬುಗಳು, ತಗ್ಗುಗಳು, ಕಣಿವೆಗಳು, ಬೆಟ್ಟಗಳು,
ದುರ್ಗಮ ಶ್ರೇಣಿಗಳು, ಸಹ್ಯಾದ್ರಿ ಘಟ್ಟಗಳು!
ಏನು ದನಿ?

ಘೂರ್ಮಿಸುವ ದನಿಯೇನು? ಅರುವತ್ತು
ಮೈಲಿಗಳು ಕರಗಿಹೋದುದು ನಿಜವೆ?
ಹೌದೌದು!
ನೋಡಲ್ಲಿ, ಹರಿವ ಹೊಳೆ! ಇದೆ ದಾಟುಗಂಡಿ!
ತೆಪ್ಪವಿದೆ ನೋಡಲ್ಲಿ; ಅಂಬಿಗರ ಕರೆ ಹೋಗು!
ಇನ್ನೆರಡೆ ಫರ್ಲಾಂಗಿನಲಿ ಧುಮುಕಿ ವಿಪ್ಲವವ
ವಿರಚಿಸುವ ಸುತರಂಗೆ, ಏನಿಲ್ಲಿ ಶಾಂತಿಯನು
ನಟಿಸುತಿಹಳೈ!

ಏನಿದೀ ದೃಶ್ಯ! ಈ ಕಾಡು
ಆ ಪರ್ವತಾಗ್ರದಿಂ ಹೊಳೆಗೆ ಹಾರುವೆನೆಂದು
ಓಡೋಡಿ ಐತಂದು ಮುಗ್ಗರಿಸಿ ನಿಂತಿಹುದು
ದಡದ ತುದಿಯಂಚಿನಲಿ ನಿಟ್ಟುಸಿರೆಳೆದು, ಬಾಗಿ
ಮುಂಗಡೆಗೆ! ಗಗನವನೆ ಕಿರಿದಾಗಿ ಮಾಡಿಹವು
ಈ ಭೀಮ ಪರ್ವತ ಶ್ರೇಣಿಗಳು!
ತೇಲಿದುದು

ತೆಪ್ಪ. ಮೈಸೂರು ಬಂಗಲೆಗೆ ನಿಟ್ಟೋಟದಲಿ
ಹಾರಿದುದು ಮೋಟಾರು! ಅಯ್ಯೊ ಎದೆ ಹಿಗ್ಗುತಿದೆ!
ಜೀವ ಸಿಡಿದೊಡೆಯುತಿದೆ! ನೋಡಲ್ಲಿ! ನೋಡಲ್ಲಿ!
ಕ್ರಾಂತಿ! ತಾಂಡವಲೀಲೆ! ವಿಲಯ! ವಿಪ್ಲವ! ಹುಚ್ಚು!
ಸೌಂದರ್ಯಮಾಯೆ! ಜೋಗದ ಭೀಷ್ಮ ಜಲಪಾತ!
ಪಾತಾಳ! ಪಾತಾಳ! ಏನಾತ್ಮಹತ್ಯ!
ಹಾರದಿರು! ಹಾರದಿರು! ಓ ಶರಾವತಿ ನಿಲ್ಲು!
ಈ ಗರ್ಜನೆಯೊಳೆಲ್ಲಿ ಕಬ್ಬಿಗನ ಕಿರುಸೊಲ್ಲು?
ನಾನೇಕೆ ಕುದಿಯುತಿಹೆನಿಂತು ಉದ್ವೇಗದಲಿ?
ಬೆಟ್ಟ ಕಾಡುಗಳೆಲ್ಲ, ಮುಗಿಲು ಬಾನುಗಳೆಲ್ಲ,
ಶಾಂತಿಯಲಿ ಮೌನದಲಿ ನಿಂತು ನೋಡುತ್ತಿಹವು;
ಯಾರೊಬ್ಬರೆದೆಯಲ್ಲಿ ಇನಿತು ತಳಮಳವಿಲ್ಲ!
ಎಲ್ಲರೂ ಜೋಗದೀ ಜೋಗುಳವನಾಲಿಸುತ
ಮೈಮರೆತು ನಿದ್ದೆಗೈಯುತ್ತಿಹರು; ನೂರಾರು
ಶತಮಾನಗಳ ನಿದ್ದೆ! ಶಬ್ದವನೆ ಮೌನಮಂ
ಗೈದಿರುವ ನಿದ್ದೆ! ಮೇಣಿದು ಪ್ರಕೃತಿದೇವಿಗೇಂ
ಗರುಡಿಯೋ? ಬನಬೆಟ್ಟ ಬಾನುಗಳು ಪ್ರೇಕ್ಷಕರೊ?
ಹಾರುತಿಹ ಹೊಳೆಯಿವಳು ಬರಿಯಾಟಗಾರ್ತಿಯೋ?
ಆಟವಾಡುತಲಿಹಳು, ನೋಟ ನೋಡುತಲಿಹರು!
ಎಂದಿಗೂ ಮುಗಿಯದಿದೆ ಈ ಆಟ ನೋಟಗಳು!
ಕುದಿಯದಿರು ಎಲೆ ಮನವೆ; ನೀನು ನೋಟಕನಾಗಿ
ನಿಂತು ನೋಡೀ ರುದ್ರಲೀಲೆಯನು. ಯುಗಗಳಿಂ
ನೋಡಿಯೂ ಬಾನು ತಣಿದಿಲ್ಲ; ಮಲೆಯೋಳಿಗಳು
ನೋಡಿ ಬೇಸರಲಿಲ್ಲ; ಕಾಡುಗಳು ದಣಿದಿಲ್ಲ;
ಭೂದೇವಿ ನೊಂದಿಲ್ಲ; ಎಲ್ಲವನು ಕನಸಿನಲಿ
ಕಾಣುತಿಹ ಬೊಮ್ಮನಿಗೆ ಈ ಲಲಿತ ಸ್ವಪ್ನವನು
ಕಂಡು ಪೂರೈಸಲಾಸೆಯೆ ಇಲ್ಲ! ಸಿಲುಕಿಹನು
ತನ್ನ ಕನಸಿನ ಮೋಹದಲಿ ತಾನೆ! ಸೌಂದರ್ಯ
ಎಂದಿದನು ಕರೆಯುವೆನೆ ಬಹು ಭಯಂಕರವಾಗಿ
ತೋರುತಿದೆ; ರೌದ್ರವೆಂದೊರೆಯುವೆನೆ ಕಣ್ಗಳಿಗೆ
ಮಳೆಬಿಲ್ಲಿನಿಂಪುತನ ತೋರುತಿದೆ. ಅಂದೆನಗೆ
ಎರಡು ವರುಷಗಳಾಚೆಯಲಿ ರೌದ್ರದಂದದಲಿ
ರಂಜಿಸಿತು; ಇಂದೆನಗೆ ಸಂಗಾತಿಯಂದದಲಿ
ಸೌಂದರ್ಯವನು ತೋರಿ ನಲಿಯುತಿದೆ! ಓ ಪ್ರಕೃತಿ,
ನೀನು ನಮ್ಮಾತ್ಮದಾ ಭಾವಜಲಧಿಯೊಳೇಳ್ವ
ಬುದ್ಬುದ ಸ್ವರೂಪಿಣಿ; ನಮ್ಮ ಸಂಸ್ಕಾರದಲಿ
ಹುದುಗಿರುವ ಬಣ್ಣವನೆ ತೊಟ್ಟು ಮೆರೆವಳು ನೀನು!
ನೀ ರಾಣಿ, ನಾವು ಕಿಂಕರರಾಗಲೊಪ್ಪಿದರೆ;
ನೀ ದೇವಿ, ಭಕ್ತರಾಗಿರೆ ನಾವು; ನೀ ನಲ್ಲೆ,
ನಾವು ರಸಋಷಿಗಳಾಗಿರೆ; ನೀನು ಬರಿ ದಾಸಿ,
ಪ್ರಭುಗಳಾದರೆ ನಾವು ಬೊಮ್ಮದೊಂದಿಗೆ ಸೇರಿ!

ಬನದ ಹಸುರಿಂದ ಹಸುರ್ಗಟ್ಟಿ ಹಗಲಿನ ಬಿಸಿಲು
ಮೇರೆಯರಿಯದೆ ಮಲಗಿಹುದು ಮೇರೆದೋರದಿಹ
ತಳಿರ ಹೆಗ್ಗಡಲ ಮೇಲೆ; ಚಲಿಸದೆಯೆ ನಿಂತಿಹುದು
ನೀಲಿಮಾ ನಿರ್ಮಲ ನಭೋವಿತಾನಂ, ಮಲೆಯ
ಮಸ್ತಕದ ನಿಬಿಡ ಭೂರುಹ ಶಿಖರದಂಚಿನಲಿ
ಹರಿದಂತವನು ರಚಿಸಿ; ಮಾಲೆ ಮಾಲೆಗಳಾಗಿ
ಮುದ್ದೆ ಮುದ್ದೆಗಳಾಗಿ ಮಂದೆ ಮಂದೆಗಳಾಗಿ
ತೆರೆಯ ಹಿಂಗಡೆ ತೆರೆಯು ಬೆಂಬತ್ತಿಯುರುಳ್ವಂತೆ
ಮಲೆಗಳೆಂಬುವ ಮಲ್ಲರೇಂ ಮಲೆತು ನಿಮಿರಿಹರು
ಗಾಳಿವಟ್ಟೆಯನಂಡಲೆವದೊಂದು ಬಿಂಕದಲಿ!
ಆದರೆಂತಹ ಮೌನ! ಮೇಣಿದೆಂತಹ ಶಾಂತಿ
ಈ ಹಸುರು ಹುಚ್ಚಿನಲಿ? ಜಲಪಾತ ಗರ್ಜನೆಯೆ
ಮೌನಕ್ಕೆ ಒಂದು ತಳಹದಿಯಂತೆ ತೋರುತಿದೆ!
ಕಾಡುಗಳೊ ಕಿವಿಮುಚ್ಚಿ ಕಣ್ಮುಚ್ಚಿ ಮುಳುಗಿಹವು
ತುದಿಮೊದಲರಿಯದಿಹ ಸಮಾಧಿಯಲಿ; ಎಲ್ಲವೂ
ಜಲಪಾತ ನಾಟಕಕೆ ಸಮೆದಿರುವ ರಂಗದೊಲು
ರಂಜಿಸಿವೆ.

ಧುಮುಕುತಿದೆ ಹುಚ್ಚು ಹೊಳೆ ಕವಲೊಡೆದು;
ಹಾಲು ಹೊಳೆಗರೆವಂತೆ, ಹಿಟ್ಟುರುಳಿ ಸುರಿವಂತೆ,
ಬಿಳಿಮಂಜು ಹರಿವಂತೆ, ಹತ್ತಿ ತೊರೆಯಿಳಿವಂತೆ,
ಬಿಳಿಯ ಮಲ್ಲಿಗೆ ಮೊಗ್ಗುಗಳ ಗಿರಿಯ ನಿರ್ಝರಿಣಿ
ಎಡೆಬಿಡದೆ ಧುಮುಧುಮುಕಿ ಹರಿವಂತೆ, ಬೆಳ್ನೊರೆಯ
ಹೊಳೆ ತುಂತುರಿನ ವೇಷವನು ಧರಿಸಿ ನೆಗೆವಂತೆ,
ಮುಗಿಲ ಬೆಳ್ದೊರೆಯಂತೆ ಕರಿಬಂಡೆಗೆದುರಾಗಿ
ಧುಮುಕುತಿದೆ ಹುಚ್ಚುಹೊಳೆ ಓಂಕಾರವನು ಕೂಗಿ!
ಈ ಅನಾಹತ ನಾದದಲಿ ಮುಳುಗಿ ಮರವಟ್ಟು
ಯೋಗಮೂರ್ಛೆಗೆ ಸಂದು ಹೋದಂತಿಹುದು ತಿರೆ!
ಕ್ರಾಂತಿಯಿಂದಲೆ ಶಾಂತಿ ಹೊರಹೊಮ್ಮಿದಂತಿಹುದು.
ಪಾತಾಳದೊಂದು ಕಡೆಯಿಂದ ಮತ್ತೊಂದೆಡೆಗೆ
ಹಬ್ಬಿದಂತಿದೆ ಮೆರೆವ ಆ ನೀಳ ಮಳೆಬಿಲ್ಲು
ಆ ದೂರದಾಳದಲಿ! ಕೆಳಗಿರುವ ನೀರೇಳು
ರಂಗುಗಳನುಟ್ಟು ರಂಜಿಸಿದೆ. ಅದೊ ಕೆಳಗಲ್ಲಿ
ಬಿದ್ದು ಹರಿಯುವ ನೀರು ಧುಮುಕಿದಾಯಾಸದಲಿ
ಬೆವರಿ ಮೆಲ್ಲಗೆ ಹರಿಯುತಿದೆ ನಿಟ್ಟುಸಿರನೆಳೆದು;
ಪತಿಯೊಡನೆ ನೀಚ ಕಲಹವನಾಡಿ ಕೋಪದಲಿ
ಕ್ಷಣಿಕ ಉದ್ರೇಕದಲಿ ಬಾಳು ಬೇಸರವೆಂದು
ಹುಸಿನಂಬುಗೆಯನಾಂತು ಮನೆಯಿಂದ ಪೊರಮಟ್ಟು
ಗುಟ್ಟಾಗಿ ಆತ್ಮ ಹತ್ಯಂ ಗೈಯಲುಜ್ಜುಗಿಸಿ
ಕೈಗೂಡದೆಯೆ ಸೋತು, ಗುಟ್ಟು ಬಯಲಪ್ಪುದೋ
ಎಂಬ ಭಯದಲಿ ನಾಚಿ ಬನದ ಹೊದರಿನ ನಡುವೆ
ಮುದುಗಿ ಹುದುಗುವ ಹೆಣ್ಣು ಹರಿದು ನುಸಿವಂದದಲಿ
ಕೆಳಗೆ ಹಾರಿದ ಹೊಳೆಯು ಮೈಯುಡುಗಿ ಕಿರಿದಾಗಿ
ನಾಚಿ ಬೆವರುತ ನಡುಗಿ ಬಂಡೆಯಡಿಯಲಿ ಹೊಕ್ಕು
ಮೈಗರೆದು ಮರೆಯಾಗಿ ಮರಳಿನಿತು ದೂರದಲಿ
ಬೆಟ್ಟಗಳ ಕಿರುಗಣಿವೆಯಿಕ್ಕಟ್ಟಿನಲಿ ಇಣಿಕಿ,
ಯಾರೊ ಕಂಡರು ಎಂದು ತಿರುಗಿ ನೋಡುತ್ತಳುಕಿ,
ನಡೆಯಲಾರದೆ ನಡೆದು ಹರಿಯುವಳು, ಪಾವನೆ
ಪಾಪದಿ ಪತಿತಳಾಗಿ! ಓ ಸಖಿ ಶರಾವತಿಯೆ,
ರುದ್ರಕಾರ್ಯವನೆಸಗಿ ಕ್ಷುದ್ರಳಾದೆನು ಎಂದು
ದುಗುಡಪಡಬೇಡಮ್ಮ; ಬಾಳಿನಲಿ ಬೀಳುವುದು
ಸಹಜವಾಗಿರುವಂತೆ ಬಿದ್ದೇಳುವುದು ಸಹಜ.
ಸಾಧಕಗೆ ಬೀಳುವುದು ಏಳುವುದರಂತೆಯೇ
ಚಿಹ್ನೆಯು ಪುರೋಗತಿಗೆ. ನಿಲ್ಲುವುದೆ ಸಾವು;
ಚಲಿಸುವುದೆ ಬಾಳು. ನನ್ನಿಯನರಸಿ ತೆರಳುವರು
ನಾವು; ನಮಗೇಳುವುದು ಬೀಳುವುದು ಗುರಿಯಲ್ಲ.
ಎದ್ದರೂ ಬಿದ್ದರೂ ನನ್ನಿಯೆಡೆಗೆಡೆಬಿಡದೆ
ಮೇಲೇರುವುದೆ ಗಮ್ಯ. ದಿಟದಿಂದಲಾವಗಂ
ದಿಟಕೇರುವೆವೆ ಹೊರತು ಸಟೆಯಿಂದಲೆಂದಿಗೂ
ದಿಟಕೇರಲರಿದು. ಸಟೆಯೆನಿತನೊಡ್ಡೈಸಿದಡೆ
ದಿಟದ ಕಿಡಿ ಚಿಮ್ಮುವುದು? ಮಿಥ್ಯೆ ಬಾಹುಳ್ಯದಿಂ
ಸತ್ಯವೆಂತಾಗುವುದು? ಕತ್ತಲೆಯ ಮೊತ್ತಮಂ
ನಾವೆನಿತು ಕಡೆದರೂ ಕಾಂತಿಯಣುವಾದರೂ
ಹೊಮ್ಮುವುದೆ?

ಎದೆಗೆಡದೆ ನಡೆ, ಸಖಿ ಶರಾವತಿಯೆ;
ನಿನ್ನಿನಿಯ ಕಡಲೊಡೆಯನನ್ನರಸಿ ನೀನಾವ
ಕೆಚ್ಚಿನಲಿ ಅಡಿಗಳೊಂಬೈನೂರನೆಣಿಸದೆಯೆ,
ನನ್ನಿಯನ್ನರಸುತಿಹ ಧೀರ ಜಿಜ್ಞಾಸು ತಾಂ
ಧೈರ್ಯದಿಂದೆಂತುಟಜ್ಞಾನದಾ ಮೋಹವನು
ಕಲ್ಲುಮನಸನು ಮಾಡಿ ಕಡಿದು ನುಗ್ಗುವನಂತೆ
ಧುಮುಕಿದೆಯೊ, ಮೇಣದೇ ಕೆಚ್ಚಿನಲಿ ಸಹ್ಯಾದ್ರಿ
ಕಂದರಗಳಿಡುಕಿನಲಿ ಹಿಂಜರಿಯದೆಯೆ ನುಗ್ಗು!
ನಿನ್ನ ಮನದನ್ನನನು ನೀನು ಸೇರಲೆ ಬೇಕು!
ನನ್ನಿಯೆಂಬುದು ಕೊರಳಿನಲಿ ಮುಡಿವ ಕೋಮಲದ
ಹೂಮಾಲೆಯಲ್ತು, ಎದೆಗಿರಿದುಕೊಳ್ಳಲೆ ಬೇಕೆ
ಬೇಕಾಗಿರುವ ಹೊನ್ನಿನ ಕತ್ತಿ ಎಂಬುದನು
ತಿಳಿದು ನಡೆ ಎದೆಗೆಡದೆ, ಓ ಸಖಿ ಶರಾವತಿಯೆ;
ನಿನ್ನ ಮನದೆಣಿಕೆಯನು ನೀ ಪಡೆದೆ ಪಡೆವೆ!

ನೀಲಿಯಾಕಾಶದಲಿ, ಮಿಡಿದರೊಡೆಯುವುದೇನೊ
ಎಂಬಂದದಲಿ ತೊಳೆದ ತೆಳು ನೀಲಿಗಾಜಿನೊಲು
ತೋರುವಾಕಾಶದಲಿ, ತೊಳಲಿ ಬಹ ಹಾಲ್ಗೆನೆಯ
ನೊರೆಮುಗಿಲ ಬೆಳ್ದೆರೆಯ ನಡು, ತೇಲಿಯೈತರಲು
ಹುಣ್ಣಿಮೆಯ ಚಂದಿರನು, ಬೆಟ್ಟ ಬನಗಳ ಮೇಲೆ
ಬೆಳ್ದಿಂಗಳನು ಚೆಲ್ಲಿ; ಕತ್ತಲೆಯನಟ್ಟುತ್ತ,
ಹಕ್ಕಿಗಳನೆಚ್ಚರಿಸಿ ನುಣ್ಚರವ ದನಿಗೈಸಿ,
ಬನದ ಹಸುರಿನ ಸಿರಿಯ ಹೊನ್ನಿನಲಿ ಮೀಯಿಸುತ
ಹೊಂದೇರನೇರಿ ಪಗಲಾಣ್ಮನು ದಿಗಂತದಲಿ
ಪೂರ್ವ ಪರ್ವತದುತ್ತಮಾಂಗದಲಿ ಮೈದೋರೆ;
ತಿರೆಯೆಲ್ಲವನು ನುಂಗಿ ಕಾಳರಾತ್ರಿಯು ನಿಲಲು
ಮೌನದಲಿ; ಜೌವನವ ಕೊನರಿಸುತ ಬಿಂಕದಲಿ
ವೈಯಾರದಲಿ ಚೈತ್ರನೈತರಲು; ಬಾನಿನಲಿ
ಕರ್ಮುಗಿಲ ಕೆದರುತ್ತ, ಮಿಂಚುಗಳ ಬೀಸುತ್ತ,
ಸಿಡಿಲುಗಳನೆರಗಿಸುತ ಭೋರಿಡುತ ಗರ್ಜಿಸುತ
ಮುಂಗಾರು ಮೊಗದೋರಲಾನೆಮಳೆಗರೆಗರೆದು;
ಚಳಿಗೆ ಕಂಬಳಿ ಹೊದೆದು ಮಾಗಿಯೈತರೆ, ಗಿರಿಯ
ತಪ್ಪಲಲಿ ಮಂಜುಗಳ ಮಂದೆಯನು ಮೇಯಿಸುತ;
ತರಗೆಲೆಯ ತುಳಿದು ಮರ್ಮರನಾದ ಗೈಯುತ್ತ
ಬನದ ತರುಗಳ ನಡುವೆ ಬಿಸಿಯುಸಿರ ಬೇಸಗೆಯು
ದಣಿದುಬರೆ; ವರ್ಷಸೋಪಾನಗಳನೇರುತ್ತ,
ಯುಗಗಳೆಂಬುವ ಘಟ್ಟದಲಿ ತಂಗಿ ಮುಂಬರಿದು
ಕಾಲದೇವನು ಯಾತ್ರೆಗೈಯುತಿರೆ; ಭಾರತವೊ,
ರಾಮಾಯಣವೊ ಮಿಂಚಿ ಮುಳುಗುತಿರೆ; ಹರಿ ತನ್ನ
ನಿದ್ದೆಯಲಿ ಜಗದ ಕನಸನು ಕಂಡು ನಲಿಯುತಿರೆ
ನೀ ಧುಮುಕು, ಓ ಸಖಿ ಶರಾವತಿಯೆ, ಇಲ್ಲಿ ಬಹ
ಜನರೆದೆಯ ಕನ್ನಡಿಗೆ ತಗುವ ಬಿಂಬವನಿತ್ತು!

ನೋಡಿದವರೆದೆಯಲ್ಲಿ ಕಿರಿಯತನವನು ಅಳಿಸಿ,
ತನ್ನ ಮೀರುವ ಹಿರಿತನಕೆ ಮಣಿದು ಮೈಮರೆವ
ಹಿರಿತನವು ಮೂಡುವಂತೆಸಗುವುದೆ ಹೆಗ್ಗುರುತು
ದಿಟವಾದ ಹಿರಿತನಕೆ. ತನ್ನನೇ ತಾ ಮೀರಿ
ಮುಂಬರಿಯದಿಹ ಬಾಳು ಮಳಲ ಬಯಲಿನ ಬಾಳು.
ಮಹಿಮೆಯಿರುವುದು ಮಹಿಮೆ ಮೂಡುವಂದದಿ ಮಾಡೆ;
ದೊಡ್ಡದಿರುವುದು ಕಿರಿದರೆದೆಯಲ್ಲಿ ದೊಡ್ಡತನ
ಮೊಳೆದೋರುವಂತೆ ಆದರ್ಶವನು ತೋರಿಸಲು.
ಓ ಸಖಿ ಶರಾವತಿಯೆ, ನನ್ನೆದೆಯ ರಂಗದಲಿ
ಹಿರಿಯ ಭಾವಗಳುದಿಸುವಂತೆಸಗಿರುವ ನೀನು
ಹಿರಿಯಳೌ: ನಿನ್ನ ಬಳಿಯೊಳೆ ಕುಳಿತು ಧ್ಯಾನದಲಿ
ಮುಳುಗುವೆನು-ಸತ್ಯಸೌಂದರ್ಯಧಾಮದೆಡೆಗೆ!