ಜ್ಯೋತ್ಸ್ನೆ ತುಂಬಿ ತುಳುಕಿ ಹರಿಯೆ
ಸ್ನಿಗ್ಧಶರತ್ಕಾಲದಿ,
ಮುಗಿಲು ರಂಗವಲ್ಲಿ ಬರೆಯೆ
ವ್ಯೋಮ ಪಟದ ನೀಲದಿ,
ವಿಯತ್ತಳದಿ ಮೌನ ಮುದ್ರೆ
ಜಗನ್ಮುಖದಿ ಶಾಂತ ನಿದ್ರೆ
ಮೆರೆಯೆ ಕೂಗಿ ಕರೆವೆ ನೀನು,
ಮುದ್ದು ಜೊನ್ನವಕ್ಕಿಯೆ;
ಮೇಲೆ ನೋಡೆ ಬರಿಯ ಬಾನು;
ಕಾಣೆ ನೀನು ಹಕ್ಕಿಯೆ!

ದೂರ ಹಾರಿ ಕರೆವೆಯೊಮ್ಮೆ
ಸ್ವರ್ಗವಾಣಿಯಂದದಿ;
ಬಳಿಗೆ ಸುಳಿದು ಉಲಿವೆಯೊಮ್ಮೆ
ಮರ್ತ್ಯವೀಣೆಯಂದದಿ.
ಏನು ಮೋಹ, ಏನು ಮಾಯೆ!
ನಿನ್ನ ಕಲೆಯ ನೆರಳ ಛಾಯೆ
ನನ್ನ ಕಲೆ, ತೇನೆ ಹಕ್ಕಿ!
ನಿನಗೆ ಮುಕ್ತಿಯಾಗಿದೆ.
ನುಡಿಯ ಬಲೆಯ ಸೆರೆಗೆ ಸಿಕ್ಕಿ
ನನಗೆ ದಾಸ್ಯವಾಗಿದೆ.

ತ್ಯಾಗಿಯಂತೆ ನೆಲವನುಳಿಯೆ:
ಮಮತೆ ಮರಿಯ ಗೂಡಿದು.
ಭೋಗಿಯಂತೆ ನಭವ ಹಳಿಯೆ:
ಸಿರಿಯ ತವರು ಬೀಡದು!
ಹಗಲಿನಲ್ಲಿ ನೆಲಕೆ ಸೇರಿ,
ಇರುಳಿನಲ್ಲಿ ಬಾನ್ಗೆ ಹಾರಿ
ಬಿಸಿಲು ತಂಪುಗಳನು ಮೀರಿ
ಸಮತೆಯಿಂದ ನಡೆವುದಂ
ಕಲಿಸು ನನಗೆ ಮೊದಲು; ಕೊನೆಗೆ
ನೆಲ ಬಾನ್ಗಳ ಪಡೆವುದಂ!