ಮೌನವಿರೆ ಬಾನಿನಲಿ, ನಿದ್ದೆಯಿರೆ ಬನಗಳಲಿ,
ಬಿಸಿಲು ಮಲಗಿರೆ ಹಸುರು ಬಯಲಿನಲ್ಲಿ;
ನಾಡದ್ದಿರಲು ಹಗಲ ನಡುನಿದ್ದೆಗನಸಿನಲಿ;
ಜೋಂಪಿಸುತ್ತಿಹ ಮರದ ಮನಸಿನಲ್ಲಿ
ನೆರಳೊಂದು ಕನಸಿನಂತಿರೆ; ತೇಲಿ ನೆಳಲಿನಲಿ,
ಕರಿಯ ಕಿರುಬಂಡೆಗಳ ತೆರದೊಳಲ್ಲಿ
ಮಲಗಿ ತುರುಗಳು ಮೆಲಕು ಮೇಯುತಿರೆ; ಕೊಳಲೂದಿ
ನಲಿಯುವೆಲೆ ದನಗಾಹಿ, ತಿರೆಯೊಳಿಲ್ಲಿ
ನಿನಗೆ ದೊರಕುವ ಸೊಗದ ಮೈಮೆಯನು ಬಲ್ಲೆಯೇನು?
ನೀನರಿಯದಿರಬಹುದು! ನಾನದನು ತಿಳಿಯೆನೇನು?
ನಡೆ ಪಟ್ಟಣಕೆ: ಅಲ್ಲಿ ಸಂತೆಗಳ ನಡುವೆ ಸಿಕ್ಕಿ
ನೀನುಳಿದ ಸೊಗವ ನೆನೆದಳಬಹುದು ಬಿಕ್ಕಿ ಬಿಕ್ಕಿ!