ಬಂದ ದುಃಖದ ನೆನಪು ಹಿಂದೆ,
ಬರುವ ದುಃಖದ ಭಯವು ಮುಂದೆ,
ನಡುವೆ ಇಂದಿಹ ದುಃಖ ಪೀಠದಿ
ನೆಗಹಿ ಗಗನಕೆ ಮುಖವನು
ಹಾರುತಿರುವೆನು ಕಾಳಕೂಟದಿ
ಕಾಣಲಮೃತದ ಸುಖವನು.

ತಲೆಯ ಮೇಗಡೆ ಮುಳ್ಳುಮುಡಿಯಿದೆ,
ನೊಂದ ಕೊರಳಲಿ ನರಳು ನುಡಿಯಿದೆ,
ಹಿಡಿದ ವೀಣೆಯ ತಂತಿ ಮಿಡಿದರೆ
ಹೊಮ್ಮುತಿದೆ ಬರಿ ರೋದನ!
ದುಃಖ ದುಃಖದ ನಡುವೆ ಮಡಿದರೆ,
ಶವವೆ ಸುಖದ ನವೋದನ!

ನೀಲಿ ಬಾನಿಗೆ ಮುಗಿದು ಕೈಯನು,
ಧರೆಯ ಧೂಳಿಯೊಳುರುಳಿ ಮೈಯನು,
ಪರಮ ಕರುಣಾಶಾಲಿ ದರ್ಶನ
ಕೊಟ್ಟು ಕಾಯುವನೆಂದಿರೆ,
ಮೃತ್ಯುಶೀತಲ ಹಸ್ತ ಸ್ಪರ್ಶನ
ವರದಿನಳಿವುದು ತೊಂದರೆ!