ಬೇಸಗೆಯು ಬಂದೆನ್ನ ಪರ್ಣಶಾಲೆಯ ಮುಂದೆ
ಬಣ್ಣದ ಕನಸುಗಳನು ಹೆಣೆಯುತಿಹುದು;
ಬೇಸತ್ತ ಬಿಸಿಯುಸಿರು ಮರದ ತಳಿರೊಳು ಹುದುಗಿ
ಸೋಮಾರಿಯಂತೆ ಕನವರಿಸುತಿಹುದು.
ಹಕ್ಕಿಗಳ ಸರವಿಲ್ಲ; ಜಂತುಗಳ ಸುಳಿವಿಲ್ಲ;
ಜಗದ ಜೀವದ ಕರ್ಮ ಕುಗುರುತಿಹುದು.
ನನ್ನೆದೆಯ ಆಳದಲಿ ಪಿಸುಮಾತುಗಳು ಸೇರಿ
ಏನನೋ ಒಳಸಂಚು ನಡಸುತಿಹವು!
ಗುಡಿಯ ಹೊಸಲೊಳು ಕುಳಿತು ಶೂನ್ಯ ದಿಗ್ದೇಶವನು,
ನಾನರಿಯೆ, ಸುಮ್ಮನೆಯೆ ನೋಡುತಿರುವೆ!
ನೀನು ಬಳಿಯೊಳೆ ಕುಳಿತು ಕಬ್ಬಿಗನನೀಕ್ಷಿಸುತ
ಮುದ್ದಿನ ಮುಗುಳ್ನಗೆಯ ಬೀರುತಿರುವೆ!