ಜೀವನ ವನದಲಿ ಕವನ ಮಯೂರಂ,
ನಿಖಿಲ ಭುವನ ಮನ ನಯನ ವಿಹಾರಂ,
ಕಲ್ಪನೆಕಣ್ಗಳ ಸಾಸಿರ ನೂರಂ
ತೆರೆದು ಕುಣಿವುದಾವೇಶದಲಿ,
ದಿನ ದಿನ ನಿಶಿ ನಿಶಿ ಮಾಯಾ ರೂಪಸಿ
ಮೆರೆಯಲು ನವ ನವ ವೇಷದಲಿ.

ತಿಮಿರದ ತೀರದಿ ಪ್ರತ್ಯುಷೆಮೂರುತಿ
ಬೆಳಗೆ ದಿನೇಶಗೆ ಮಂಗಳದಾರತಿ,
ಸ್ವರ್ಣಸಲಿಲ ಸಮ ಶೀತಲ ದೀಧಿತಿ
ಶೋಭಿಸೆ ಪ್ರಾಚ್ಯದಿಗಂಗದಲಿ,
ಕುಣಿ ಓ ಮೋಹಿನಿ, ಕವನ ಕಲಾಪಿನಿ,
ಮಾನಸ ಮಾಯಾರಂಗದಲಿ.

ಖಗ ಶತ ಕೂಜನ ಮುಖರಿತ ವನದಲಿ,
ಪಲ್ಲವ ಮುದ್ರಿತ ವಿಜನವಿಪಿನದಲಿ,
ಶ್ಯಾಮಲ ಶಾದ್ವಲ ಭುವನ ಶಯನದಲಿ
ಪೀತ ಅರುಣ ಶಪನಾತಪದಿ,
ಅರ್ಧನಿಮಾಲಿತ ಅರ್ಧೋನ್ಮೀಲಿತ
ಸಂಧ್ಯಾ ತಾಪಸಿಯಿರೆ ತಪದಿ;

ದೀರ್ಘದಿಗಂತದ ರೇಖಾ ತೋರಣ,
ನೀಲಾಕಾಶದ ಸ್ವರ್ಗಾರೋಹಣ,
ಮೃಣ್ಮಯ ಶೈಲದ ಚಿನ್ಮಯ ಧಾರಣ
ವಿರಚಿತ ರಸಲಿಪಿ ಭಿತ್ತಿಯಲಿ,
ನಿರ್ಜರ ಸಂಗಿನಿ ಭಾವ ತರಂಗಿನಿ
ಪ್ರವಹಿಸೆ ರಸಋಷಿ ಚಿತ್ತದಲಿ;

ರಿಕ್ತಗಗನದಲಿ ಪಡುವಣ ಗಾಳಿ
ಬೀಸುತ ಬರೆ ಕಾರ್ಮುಗಿಲನು ತೇಲಿ,
ಕರಿಗಳನಟ್ಟುವ ಹರಿಯನು ಹೋಲಿ,
ವಿದ್ಯುದ್ ವಜ್ರಾಘಾತದಲಿ,
ಹರ್ಷೋತ್ಕರ್ಷಂ ಪ್ರಥಮ ಸುವರ್ಷಂ
ಸುರಿಯೆ ಅಜಸ್ರಸ್ರೋತದಲಿ;

ಇತಿ ಜೀವನ ಶತ ಹಾಸ ವಿಲಾಸದಿ,
ಮುಕ್ತಿಯ ಬಂಧುರ ಮಾಯಾ ಪಾಶದಿ
ರಚಿತ ಕಲಾಮಯ ರಾಸನಿವಾಸದಿ,
ವಿಕಸಿತ ಅಕ್ಷಿಸಹಸ್ರದಲಿ
ಕುಣಿ ಓ ಮೋಹಿನಿ, ಕವನ ಕಲಾಪಿನಿ,
ಸುಂದರ ಲಾಸ್ಯಅಜಸ್ರದಲಿ.