ನಾಡಿನ ಪುಣ್ಯದ ಪೂರ್ವದಿಗಂತದಿ
ನವ ಅರುಣೋದಯ ಹೊಮ್ಮುತಿದೆ!
ಚಿರ ನೂತನ ಚೇತನದುತ್ಸಾಹದಿ
ನವೀನ ಜೀವನ ಚಿಮ್ಮುತಿದೆ!
ಅಭಿನವ ಮಧುಕೋಕಿಲ ಕಲಕಂಠದಿ
ಸ್ವರ ಸುರಚಾಪಗಳುಣ್ಮುತಿವೆ!
ಶ್ಯಾಮಲ ಕಾನನ ಸುಮಸಮ್ಮೇಲದಿ
ಇಂಚರ ಸಾಸಿರ ಪೊಣ್ಮುತಿವೆ!
ಕಿವಿ ಕಣ್ಣಾಗುತಿದೆ!
ಕಣ್ ಕಿವಿಯಾಗುತಿದೆ!

ಭೂಮವ್ಯೋಮದ ನೀಲಾಂಗಣದಲಿ
ಕೆಂದೆರೆಮುಗಿಲಿನ ರಂಗೋಲಿ
ರಂಜಿಸುತಿದೆ ಹೊಳೆ ತೆರೆಯಚ್ಚೊತ್ತಿದ
ಕೆಂಪನೆ ನುಣ್ಮಳಲನು ಹೋಲಿ!
ಹಿಮಮಣಿ ಸಿಂಚಿತ ತೃಣವಿಸ್ತಾರದಿ
ನೇಸರು ಕಿಡಿಬಲೆ ನೆಯ್ಯುತಿದೆ;
ವಿಹಂಗ ದಂಪತಿ ತರುಶಾಖಾಗ್ರದಿ
ಪ್ರೇಮಾಲಾಪನೆ ಗೈಯುತಿದೆ.
ನವೀನ ಹೃದಯಗಳೇಳಿ,
ನವೀನ ಗಾನವ ಕೇಳಿ!
ನಾಡಿನ ಪುಣ್ಯದ ಪೂರ್ವದಿಗಂತದಿ
ನವ ಅರುಣೋದಯ ಹೊಮ್ಮುತಿದೆ!
ಚಿರ ನೂತನ ಚೇತನದುತ್ಸಾಹದಿ
ನವೀನ ಜೀವನ ಚಿಮ್ಮುತಿದೆ!