ತೆರೆಬಿದ್ದು ನೊರೆಯೆದ್ದು ಭೋರ್ಗರೆವ ಕಡಲೊಂದು
ಬಿಸಿಲ ಬೆಳ್ವೆಳಗಿನಲಿ ಮಿಂಚುತಿಹುದು.
ಮುದ್ದಾದ ಮಗುವೊಂದು ಮೊರೆಮೊರೆದು ಹಿಂಜರಿವ
ಬಲ್ದೆರೆಗಳಗ್ರದಲಿ ತೇಲುತಿಹುದು!
ಕಣ್ಣರಳಿ ಮೈಯುಬ್ಬಿ ಕೆಚ್ಚಿನಿಂದೆದೆಯುಬ್ಬಿ
ಹಾರಿದಳು ಕೈಚಾಚಿ ಹೆರದ ಹೆಣ್ಣು!
ಮುಂಬರಿದು ತೇಲಿ ಕಂದನ ಹಿಡಿಯೆ, ಕೈ ತಪ್ಪಿ
ಚಿಮ್ಮುತಿದೆ ಚೆಲ್ವಿನಾ ಮುದ್ದುಗಣ್ಣು!
ಕಲ್ಪಗಳು ಮಿಂಚಿದುವು; ಬಯಕೆ ಕೈಗೂಡಲಿಲ್ಲ!
ಕಟ್ಟಕಡೆಗಪ್ಪಿದಳು ಕಂದನನು ತಾಯಿಯಾಗಿ!
ಎಚ್ಚತ್ತು ಕಣ್ದೆರೆಯೆ ಸೊಗದ ಕಂಬನಿಯೊಳಾಳ್ದ
ತಲೆದಿಂಬು ತಕ್ಕೆಯೊಳಗಿಹುದು! ಹಾ ಬಂಜೆಗನಸೆ!