“ಕುಹೂ! ಕುಹೂ!”-ಕೋಕಿಲವಾಣಿ!
ಜಗ ಜುಮ್ಮೆಂದುದು ಅದ ಕೇಳಿ!
ನೀರವ ಪರ್ವತ ಕಾನನ ಶ್ರೇಣಿ
ಮರುದನಿಗೈದಿತು ಮುದತಾಳಿ.-
ಗಾನವ ಕೇಳಿ ಮಹಾಂಬರ ಸುಮ್ಮನೆ
ಮಾತಾಡದೆ ಬಣ್ಣಿಸುತಿತ್ತು!
ಕಂದರದಲ್ಲಿದ್ದೊಂದು ಸರೋವರ
ತೆರೆಗಳ ಕೈಪರೆಯಿಕ್ಕಿತ್ತು!
ಮಾಧುರ್ಯದಿ ಪಿಕ ತನ್ನನೆ ಮರೆಯುತೆ
“ಕುಹೂ! ಕುಹೂ!” ಕೂಗಿತ್ತು!
ಆಲಿಸಿದೊರ್ವನು ಗಾನಕೆ ನೊಂದು
ಸೂಚನೆ ಕೊಟ್ಟನು ಇಂತೆಂದು:-
“ಮಲೆಗಳಲುಲಿಯುವ ಓ ಕೋಗಿಲೆಯೇ,
ಬಲು ಚೆಲುವಿದೆ ನಿನ್ನೀ ಗಾನ!
ಇಂಗ್ಲೀಷಿಗೆ ತರ್ಜುಮೆ ಮಾಡಿದರೆ
ದೊರೆವುದು ನೋಬೆಲ್ ಬಹುಮಾನ!
ಅರಣ್ಯ ರೋದನ! ಸುಮ್ಮನೆ ಹಾಡುವೆ!
ಕೇಳುವರಾರಿಲ್ಲಿ?”-
ಕೂಗಿತು ಕೋಗಿಲೆ “ಕುಹೂ” ಎಂದು!
ತಲ್ಲಣಿಸಿತು ಜಗ ಜುಮ್ಮೆಂದು!