ಕತ್ತಲೆ ಕೋಣೆಯೊಳೇನನು ಮಾಡುವೆ?
ಮಿತ್ರನೆ, ಬಾ ಹೊರಗೆ!
ತಿಳಿಬೆಳುದಿಂಗಳ ಹೊಳೆಯಿಳಿಯುತಲಿದೆ;
ಬಾ, ಬಾ, ಬಾ ಹೊರಗೆ!

ಸುಂದರ ಮೋಹನ ಚಂದ್ರನ ಕಾಂತಿ
ಎಲ್ಲೆಡೆ ಹಬ್ಬಿಹುದು;
ಹುಣ್ಣಿಮೆಯಿರುಳಿನ ನೀರವ ಶಾಂತಿ
ತಿರೆಯನು ತಬ್ಬಿಹುದು.

ಬಾನ್ನೀರೆಯ ಸವಿಗನಸುಗಳಂದದಿ
ಬೆಳ್ಮುಗಿಲೋಡುತಿವೆ;
ಚೆನ್ನೆಯರಿಣುಕುವ ಕಣ್ಣುಗಳಂದದಿ
ತಾರೆಗಳಾಡುತಿವೆ.

ಜೊನ್ನನು ಕುಡಿಯುವ ಬೆಳ್ಮುಗಿಲೊಡಲಲಿ
ಮಳೆಬಿಲ್ಮೂಡುತಿವೆ;
ಮಳೆಬಿಲ್ಲೊಡಲ ಮುಗಿಲ್ಗಳು ಸರಸಕೆ
ಶಶಿಯನು ಕಾಡುತಿವೆ.

ಬನಗಳ ತಂಪನು ತಹ ತಂಗಾಳಿಯು
ತಣ್ಣನೆ ಬೀಸುತಿದೆ;
ದಣಿದಿಹ ಭೂಮಿಯ ಬಾಳಿನ ಎದೆಯಲಿ
ಸಯ್ಪನು ಸೂಸುತಿದೆ.

ಶಿವನೇ ಚಂದಿರನಂದದಿ ತೋರುತ
ಬಂದನು ಬಾನೆದೆಗೆ!
ಶಿವನೇ ಜೊನ್ನಾಗಿಳಿಯುತಲಿರುವನು
ಸಗ್ಗದಿನಿಳೆಯೆಡೆಗೆ!

ಸೌಂದರ್ಯೋಪಾಸನೆಗಿದೆ ಪೊಳ್ತೈ;
ಬಾ, ಬಾ ಸಾಧನೆಗೆ!
ಸೌಂದರ್ಯದಿ ಶಿವ ಮೈದೋರಿಹನೈ,
ಬಾ ಆರಾಧನೆಗೆ!