ಮೂಡಲಲಿ ಬನದುಡೆಯ ಪೆರ್ಬೆಟ್ಟದಂಚಿನಲಿ
ಮಗುವಿನೆಳೆನಗೆಯಂತೆ ಬೆಳಕು ಹಬ್ಬಿ
ಮೆಲು ಮೆಲನೆ ಮೌನದಲಿ ಬಾಂದಳದೊಳಡಿಯಿಟ್ಟು
ಮೂಡಿದನು ತಣ್ಗದಿರನಿಳೆಯ ತಬ್ಬಿ!

ಮೇಲೆ ಹೊಳೆದುವು ತಾರೆ; ಬಿಳಿಯ ಮುಗಿಲಲ್ಲಲ್ಲಿ
ಸೊಬಗಿನಲಿ ಸೆರೆ ಸಿಕ್ಕಿ ಚಲಿಸಲಿಲ್ಲ;
ಸದ್ದಿಲ್ಲದಿರುಳಿನಲಿ ಕೌಮುದಿಯ ಕುಡಿಕುಡಿದು
ಮೈಮರೆತು ಮಲಗಿದುವು ಬನಗಳೆಲ್ಲ!

ಕಬ್ಬಿಗನ ಮಾತುಗಳ ಬಡತನಕೆ ನನ್ನೆದೆಯು
ಮರುಕದಲಿ ಮುಳುಗುತಿರೆ ಮೂಕನಾದೆ!
ಜೊನ್ನದಿಂಪನು ನೋಡಿ, ಜೊನ್ನದೊಳು ತೇಲಾಡಿ
ಜೊನ್ನದಲಿ ಜೊನ್ನಾಗಿ ಕರಗಿಹೋದೆ!