ಸುಂದರ ಮಂಗಳವೀ ಬೈಗು!
ರುದ್ರ ಮನೋಹರವೀ ಬೈಗು!

ನೆಚ್ಚಳಿದಳಿದಿಹ ಚೆಲುವೆಯರೆಲ್ಲರ
ಕೆನ್ನೆಗಳೆಳೆಗೆಂಪೀ ಬೈಗು;
ರಕ್ಕಸನುರದಾ ರುಧಿರವನೀಂಟಿದ
ನರಹರಿ ಕೋಪವು ಈ ಬೈಗು!

ಭಾರತ ಪುತ್ರರು ಚೆಲ್ಲಿದ, ಚೆಲ್ಲುವ
ಶೋಣಿತ ರಣಧುನಿ ಈ ಬೈಗು;
ಹುಟ್ಟಿದ ಕೂಡಲೆ ಹಸಿದೇ ಮಡಿದಿಹ
ಹಸುಮಕ್ಕಳ ಚೆಲುವೀ ಬೈಗು!

ಗೋಪಿಯರೊಡಗೂಡಾಡುವ ಹಾಡುವ
ಕೃಷ್ಣನ ಪ್ರೇಮವು ಈ ಬೈಗು;
ಬರುತಿಹ ಲೋಹಿತ ವಿಪ್ಲವ ಸೂಚಕ
ರಕ್ತದ ಬುಗ್ಗೆಯು ಈ ಬೈಗು!

ಪರತಂತ್ರತೆಯನು ದಹಿಸುವ ಮಸಣದ
ಸೂಡಿನ ಕೇಸುರಿ ಈ ಬೈಗು;
ಸ್ವಾತಂತ್ರ್ಯದ ಆರಾಧನೆಗೆತ್ತಿದ
ಕುಂಕುಮದಾರತಿ ಈ ಬೈಗು!

ಸುಂದರ ಮಂಗಳವೀ ಬೈಗು!
ರುದ್ರ ಮನೋಹರವೀ ಬೈಗು!