ಕಬ್ಬಿಗರರಿಯದೆ ಕೀರ್ತಿಯ ಪಡೆಯದ,
ಕಾವ್ಯರಂಗದಲಿ ನಲಿನಲಿದಾಡದ,
ರಸಿಕರ ಕಂಗಳ ಬೆಳಕಿಗೆ ಬೀಳದ,
ಸುಂದರ ತರುಗಳೆ, ಸುಂದರ ಮೃಗಗಳೆ,
ಸುಂದರ ಸುಮಗಳೆ ಪಕ್ಷಿಗಳೆ,
ಮನ್ನಿಸಿ ಕವಿಗಳ ಪಾಪವನು;
ಮುನಿಗಳೆ ಕೊಡದಿರಿ ಶಾಪವನು!

ಮರೆತಿರೆ ನಾ ಹಾಡಿಹ ಕವನಗಳಲಿ
ಮನ್ನಿಸಿ ನನ್ನಪರಾಧವನು!
ನಿಮ್ಮನು ಮಲೆನಾಡಿನ ಬಣ್ಣನೆಯಲಿ
ತೊರೆದರೆ ನಾನೆ ನರಾಧಮನು!
ಗೆಳೆಯನು, ಶಿಷ್ಯನು, ದಾಸನು ನಿಮಗೆ;
ಗುರುಗಳು ಪೂಜ್ಯರು ನೀವೆನಗೆ!
ಚಿರಋಣಿಯಾಗಿಹೆ ನಾ ನಿಮಗೆ!

ನೇಹಿಗರಿಲ್ಲದೆ ಬೇಸರಗೊಂಡಿರೆ,
ಏಕಾಂಗಿಯಾಗಿ ನಾ ತೊಳಲುತಲಿರೆ
ಸಂತಸವಿತ್ತಿರಿ ಜತೆಗೂಡಿ!
ಲೋಕದ ಮೋಹದ ಮಾಯೆಯ ಬಲೆಯಲಿ
ಹೊಲಬುಗೆಟ್ಟು ನಾ ಬರಿದೆ ತಿರುಗುತಿರೆ
ಕರುಣಿಸಿ ದಾರಿಯ ತೋರಿದಿರಿ!

ಕತ್ತಲು ಕವಿತರೆ, ಬೆದರುತಲೆದೆಯಿರೆ,
ಶಾಂತಿಯ ಕಾಂತಿಯ ನೀಡಿದಿರಿ!
ತವಸಿಗಳರಿಯದೆ, ಸಾಧಿಸಿ ಬಯಸುವ
ಸತ್ಯದ ನೆಲೆಯನು ಬಡ ಕಬ್ಬಿಗನಿಗೆ
ಒಲ್ಮೆಯ ದಾನವ ಮಾಡಿದಿರಿ!

ಹಿಂದೆಯು ನೆಚ್ಚಿದೆ, ಮುಂದೆಯು ನೆಚ್ಚುವೆ,
ಮಾರ್ಗದರ್ಶಿಗಳು ನೀವೆನಗೆ.
ದೇವನ ರೂಪವ ಕಾಣುವೆ ನಿಮ್ಮಲಿ,
ದೇವನ ವಾಣಿಯ ಕೇಳುವೆ ನಿಮ್ಮಲಿ,
ನಿಮ್ಮನುಭವದಲಿ ಶಿವನನುಭವವಿದೆ,
ದೇವನ ಪ್ರತಿನಿಧಿಗಳು ನೀವು!
ತರುಗಳೆ, ಸುಮಗಳೆ, ಮೃಗಗಳೆ, ಖಗಗಳೆ,
ನಿಮಗಿದೊ ನಮಿಸುವೆ ಭಕ್ತಿಯಲಿ!