ಅದೊ ಮತ್ತೆ! ಆ ಮರದ ಛಾಯೆ!
ಎಂದಿನಂತೆಯೆ ಬಿದ್ದು ಸಾಯುತಿಹುದಲ್ಲಿ!-
ಈ ನಿಯಮದಾಳ್ವಿಕೆಯು ನನ್ನ ಪೀಡಿಸುತಲಿದೆ
ಪೂರ್ವಜನ್ಮದ ಮಹಾ ಅಭಿಶಾಪದಂದದಲಿ.
ನಿಯಮಗಳ ನುಂಗಿ ಜೀರ್ಣಿಸಿ ಮೀರಲೆನ್ನೆದೆ
ಕಾತರದಿ ಕಾಯುತಿದೆ.-

ಆ ಮರದ ಛಾಯೆ,
ಮಸಿಯ ಚೆಲ್ಲಿದ ತೆರದಿ ಹಸುರು ಬಯಲಿನ ಮೇಲೆ
ನೀಳವಾಗೊರಗಿಹುದು ಅಪಶಕುನ ರೂಪದಲಿ.
ಬಗೆಯ ಕದಡುವುದದರ ಮುಗ್ಧಮೌನದ ವಾಣಿ
ಮೊರೆಯುತೆನ್ನೆದೆಗಾವುದೋ ನಾನು ಮರೆತಿರುವ
ಸ್ವಾತಂತ್ರ್ಯ ಸಂದೇಶವನು ಸಾರಿ. ಬಿದ್ದಿಹುದು
ಬಯಲಿನಲಿ ವಿಕ್ರೀತ ದಾಸನೊಲು, ಬಿಡುಗಡೆಯ
ಪಡೆಯಲಾರದೆ ಬಯಸಿ! ದಿನದಿನವು ನೋಡುತಿಹೆ.
ದಿನದಿನವು ಬೆಳಗು ಹಗಲೆನ್ನದೆಯೆ, ಬಾನಿನಲಿ
ರವಿ ಹೊಳೆಯುವಾಗೆಲ್ಲ, ಮರದ ಕಾಲ್ದೆಸೆಯಲ್ಲಿ
ಬಿದ್ದು ಬೇಸರದೆ ಸಾಯುತ್ತಿಹುದು. ಶಿವ ಶಿವಾ
ಒಂದು ಕ್ಷಣವಾದರೂ ವೈವಿಧ್ಯಕಾದರೂ
ಬಿಸಿಲಿದ್ದು ಮರವಿದ್ದು ನೆಳಲಿರದೆ ಹೋಗದೇ?
ಎಲ್ಲಿ ನೋಡಿದರೆಲ್ಲರೂ ದಾಸರೆಯೆ. ಶಿವಾ
ಈಶರೊಬ್ಬರ ಕಾಣೆ! ಬೆಂಕಿಗಾವಾಗಲೂ
ಹೊಳೆವ ದಹಿಸುವ ದಾಸ್ಯ; ಗಾಳಿಗಾವಾಗಲೂ
ಬೀಸಿ ಚಲಿಸುವ ದಾಸ್ಯ; ನಿಂತ ನೀರಿಗೆ ಸದಾ
ದಡದ ವಸ್ತುಗಳ ಮರುಬಿಂಬಿಸುವ ದಾಸ್ಯ!
ದಾಸ್ಯದಾಲಯವೀ ಮಹಾವಿಶ್ವ! ಎಲ್ಲವೂ
ವಜ್ರಬಂಧನಗ್ರಸ್ತವಾಗಿಹವು! ಒಂದು ದಿನ
ನೀರು ಸುಡಬಾರದೇ? ಒಂದು ಸಲವಾದರೂ
ಕಲ್ಲು ಹಕ್ಕಿಯ ತೆರದಿ ಹಾರಾಡಬಾರದೇ?
ಒಂದು ಕ್ಷಣಕಾದರೂ ದಾಸ್ಯನಿಯಮಗಳಳಿದು
ಸ್ವಾತಂತ್ರ್ಯ, ಸ್ವಾಚ್ಛಂದ್ಯ, ಹುಚ್ಚಾಟವಾಗದೇ?
ಎಲ್ಲ ಹಾಳಾದರೂ ಆಗಿಹೋಗಲಿ ಇಂದೆ!
ಬೇಕಾದುದೆನೆಗೆ ಆ ಸ್ವಾತಂತ್ರ್ಯಶ್ರೀಯೊಂದೆ!