ಬಣ್ಣದ ರೆಕ್ಕೆಯ, ಬಣ್ಣದ ಕೊಕ್ಕಿನ,
ಬಣ್ಣದ ಗಾನದ ಬನಗಳ ಬೆಸ್ತನೆ,
ಬಣ್ಣದ ಜೀವದ ಮೀಂಗುಲಿಯೆ,
ಮಾನವರರಿಯದ ಗಾನ ತರಂಗದೊಳ್
ಏನನು ಸಾರುವೆ ವಿಪಿನಪ್ರವಾದಿಯೆ,
ಹಳ್ಳಿಯ ಜೋಯಿಸ ಮೀಂಚುಳ್ಳಿ?

ನಿನ್ನುಲಿಯನು ಕೇಳಿದ ಹಳ್ಳಿಗರು
ನೆಂಟರ ಸಾವನು ಸಾರುವುದೆಂದು
ಮನದಲಿ ತಲ್ಲಣಗೊಳ್ಳುವರು!
ತರಳೆಯರಾದರೊ ಬಿಸುಸುಯ್ಯುತ್ತ
ತಿರುಗಲು ಹೋಗಿಹ ಗಂಡರ ನೆನೆದು
ಸುಮ್ಮನೆ ನಿನ್ನನು ಶಪಿಸುವರು!

ಕಬ್ಬಿಗನಾದರೊ ಸಂತಸದಿಂದ
ಬನದಿಂದೈತಹ ದನಿಯನು ಕೇಳಿ
ನಿನ್ನನು ಕೀರ್ತಿಸಿ ವಂದಿಪನು!
ಹೆದರುವುದೇತಕೆ ಹಾಡೆಲೆ ಹಕ್ಕಿ,
ಹಾಡುವ, ಹಾರುವ, ಬಣ್ಣದ ಚುಕ್ಕಿ!
ಮೂರ್ಖರ ಮಾತಿಗೆ ಮರುಗುವರೆ?

ಮಿಂಚಿನ ಬಳ್ಳಿಗೆ ಕಾಮನ ಬಿಲ್ಲಿಗೆ
ಜನಿಸಿದ ಹೂವೋ ಹಕ್ಕಿಯೊ ನೀನು?
ಕಿಟ್ಟನ ಕೊಳಲಿನ ಕಣ್ಣೇನು?
ವೇಗದ ನೋಡಲು ಮಿಂಚಿನ ಮರಿಯು!
ಬಣ್ಣವು ಕಾಮನಬಿಲ್ಲಿಗೆ ದೊರೆಯು!
ಕೊಳಲಿನ ದನಿಗೆಣೆಯಿಂಚರವು!

ಮೋನದ ಬನಗಳ ಗಾನದಿ ತುಂಬುವೆ:
ಮಲಗಿಹ ಗಿರಿಗಳನೆಚ್ಚರಗೊಳಿಸುವೆ;
ಮೌನವನಿನ್ನೂ ಹೆಚ್ಚಿಸುವೆ!
ಯಾರಾನಂದಕೆ ಹಾಡುವೆ ನೀನು?
ನಿನ್ನೊಲಿದಾರನು ಕರೆಯುವೆ ನೀನು?
ಪಕ್ಷಿಯೆ, ಯಾರನು ಮೆಚ್ಚಿಸುವೆ?

ಎಳೆತನದಲಿ ಕೆರೆಯಂಚಿನ ಮೇಲೆ
ತಣ್ಣೀರಾಟವ ನಾನಾಡುತಲಿರೆ
ತೀರದ ಮರಗಳ ಮರೆಯಿಂದ
ಬಣ್ಣದ ಬಾಣದ ತೆರದಲಿ ಮಿಂಚಿ
ಹೊಳೆಯುವ ಮೀನನು ಕೊಕ್ಕಿನೊಳಿಟ್ಟು
ನೀ ಹಾರುತಲಿರೆ ಬೆರಗಾದೆ!

ಬಾಲನು ಬೆರಗಾದೆನು ನಾನಂದು;
ಯುವಕನು ಬೆರಗಾಗಿಹೆ ನಾನಿಂದು;
ಮುದಿತನದಲಿ ಬೆರಗಾಗುವೆ ಮುಂದೆ:
ಏಕೆಂದರೆ “ಮನುಜಗೆ ಮಗು ತಂದೆ!”