ಅ ಹ ಹಾ!
ಈಶ್ವರ ಸೃಷ್ಟಿಯ ಚೆಲುವೆನಿತು!
ಅ ಹ ಹಾ!
ಮಾನವ ಜನ್ಮದ ಗೆಲುವೆನಿತು!

ತಳಿರೊಳು ಹೊಳೆಯುವ ಹನಿಗಳ ತೊಳಗಿ
ನಸುಗಣ್ದೆರೆಯುವ ತಿರೆಯನು ಬೆಳಗಿ
ಮೂಡಣ ಬಾನಿನ ಕರೆಯೊಳು ಮೂಡಿ
ಮೆರೆವುದು ನೇಸರು, ಕಂಗಳೆ, ನೋಡಿ!

ತಣ್ಣನೆ ತೀಡುವ ಸುಸಿಲೆಲರಲ್ಲಿ
ಬಗ್ಗಿಸಿ ಕೋಗಿಲೆ ನಿಡುಸರದಲ್ಲಿ
ಸಗ್ಗವ ಕರೆಯುವ ಪುಗಿಲನು ಕೇಳಿ
ಸುಗ್ಗಿಯ ಮುದವನು, ಕಿವಿಗಳೆ, ತಾಳಿ!

ತೆಂಕಣ ಗಾಳಿಯು ಬರೆವರೆ ಬೀಸಿ,
ಬಿಂಕದೊಳೆಸೆಯಲು ಬನಗಳ ದೇಸಿ,
ಸೋಂಕಿನ ಸೊಗದಲಿ ನಲಿಯೈ, ತನುವೆ!
ಸಿರಿಸೊಬಗೊಳು ಮೈಮರೆಯೈ, ಮನವೆ!