ಭಗವಂತನಿಲ್ಲಿರದೆ ಮತ್ತೆಲ್ಲಿ ವೈಕುಂಠ
ದಲ್ಲಿಹನೆ? ವೈಕುಂಠವಿರುವುದೆಲ್ಲಿ
ಈ ದಿವ್ಯ ಭವ್ಯ ಸುಂದರ ದೃಶ್ಯದಲ್ಲಿರದೆ?
ಹುಣ್ಣಿಮೆಯ ಬೆಳ್ದಿಂಗಳಪ್ಪಿನಲ್ಲಿ
ಮಿಂಚುತಿಹ ಕಿರಿದೆರೆಯ ನಿರಿಗಳಿಂ ಮೆರೆವ ಕೆರೆ;
ಸುತ್ತಲೂ ಸಾಲ್ಗೊಂಡ ಸೊಡರ ಮಾಲೆ!
ಪಡಿನೆಳಲ ದರ್ಪಣದಿ ವಿವಿಧ ವೈಚಿತ್ರ್ಯಮಯ
ಸ್ವರ್ಗೀಯ ಮೋಹನ ಜ್ಯೋತಿಶಾಲೆ!
ಬಾನಿನಲಿ ಕಾಣಿಸದೆ ಕೂಗುತಿದೆ ತೇನೆಯಕ್ಕಿ;
ತಣ್ಪುಗಣ್ಣಿರುಳಿನಲಿ ನುಣ್ಬೊಗರು ಮಾಯೆ ಹಬ್ಬಿ
ನಿದ್ದೆಗದ್ದಿದೆ ಬುವಿಯು; ಕವಿಯು ವಿಶ್ವವನೆ ತಬ್ಬಿ
ಸತ್ತಿಹನು ಸೌಂದರ್ಯದಿಂಪು ತಕ್ಕೆಯಲಿ ಸಿಕ್ಕಿ!