ತಿಳಿಬಾನೆಡೆಯಲಿ ಚೆಲುವಿನ ತಿಂಗಳು
ಕಣ್ಣಿಗೆ ತಣ್ಣನೆ ಮೂಡಿದನು!
ನೋಡುತ ನಿಂತ ವಿಮರ್ಶಕನೊಬ್ಬನು
ಇಂತು ವಿಮರ್ಶೆಯ ಮಾಡಿದನು:

“ಕಣ್ಣಿಗೆ ಕಾಣುವ ಬೊಮ್ಮನ ಸಿಟ್ಟಿಯೊ
ಳೀ ತಣ್ಗದಿರನೆ ಸುಂದರನು;
ಪೊನ್ವೆಳಗನು ಸೂಸುವ ಜೊನ್ನೊಡಲನೆ
ಶಾಂತಿಯ ಕಾಂತಿಯ ಮಂದಿರನು!
ಆದರೆ ಬಿಂಬದ ಬಿತ್ತರ ಸಾಲದು!
ಏನಂದರು ಬೆಂಗದಿರನ ಹೋಲದು!
ಅಲ್ಲದೆ ನಡುವೆ ಕಳಂಕವಿದೆ!
ತಾವರೆ ಚೆಲುವಾಗಿರಲೇನಂತೆ?
ದುಂಬಿಯದರ ಬಂಡುಣಲೇನಂತೆ?
ವಾತಾವರಣದಿ ಪಂಕವಿದೆ!”

ಅಲ್ಲಿಯೆ ಪಕ್ಕದೊಳರಳುತಲಿದ್ದ
ಹೂವೊಂದಿವನ ವಿಮರ್ಶೆಯ ಕೇಳಿ
ನಕ್ಕಿತು ಬಹು ಮೃದುಹಾಸ್ಯದಲಿ.
ಅಲ್ಲಿಯೆ ಮೇಗಡೆ ಇಣುಕುತಲಿದ್ದ
ತಾರೆಗಳೆಲ್ಲ ವಿಮರ್ಶೆಯ ಕೇಳಿ
ಕಿರುನಗೆ ಬೀರಿದುವಾಸ್ಯದಲಿ.

ಜೊನ್ನದ ಮಳೆಯೊಳು ನಲಿನಲಿದಾಡಿ
ಬಳಿ ಇರುಳ್ವಕ್ಕಿಯು ಹಾಡುತ್ತಿತ್ತು.
ಏತಕೊ ಏನೋ? ತಿಳಿಯದು ನೋಡಿ:
ನಾಯಿಯು ಕೂಡಾ ಬೊಗಳುತ್ತಿತ್ತು!

ಕೆಲಸವಿದ್ದ ಚಳಿಗದಿರನು, ಕೇಳದೆ
ಪ್ರೌಢ ವಿಮರ್ಶೆಯ, ಮೂಡಿದನು.
ಮೂಡಿಯೆ ಮೂಡಿದನು!
ಕೆಲಸವಿಲ್ಲದ ವಿಮರ್ಶಕನಾದರೊ
ನಿಂತು ವಿಮರ್ಶೆಯ ಮಾಡಿದನು.
ಮಾಡಿಯೆ ಮಾಡಿದನು!