ಮೂಡುದೆಸೆಯ ಬೆಟ್ಟದುದಿಯನೇರಿ ನೇಸರೆಸೆವ ಮುನ್ನ,
ಬೆಳಕು ತಿಳಿಯ ಬಾನಿನಿಂದ ತುಳುಕಿ ಭೂಮಿಗಿಳಿವ ಮುನ್ನ,
ಹಂಡಹಕ್ಕಿ ಸಿಳ್ಳಿನಿಂದ ಜಗವನೆಳ್ಚರಿಸುವ ಮುನ್ನ,
ಹರಿಯುವಿರುಳ ಮಡಿಲಿನಿಂದ ಶಾಂತಿ ಚಿಮ್ಮಿ ಬರುವಳು!

ಕಣ್ಣುಹೋಹ ಕಡೆಗಳಲ್ಲಿ ತಳಿರು ಹೂವು ಮೊಗ್ಗು ಮೆರೆಯೆ,
ಬಳ್ಳಿಗಳಲಿ ಮರಗಳಲ್ಲಿ ಹಕ್ಕಿ ಬಳಗ ಹಾಡಿ ಕರೆಯೆ,
ಹೊಳೆವ ಹಿಮದ ಮಣಿಗಳೆಲ್ಲ ಎಳೆಯ ಬಿಸಿಲಿನಲ್ಲಿ ಮಿರುಗೆ,
ನನೆಯ ಕೊನೆಯ ತೊಟ್ಟಿಲೇರಿ ಶಾಂತಿ ನಗುತ ಬರುವಳು!

ಸದ್ದೆ ಇಲ್ಲದಿರುಳಿನಲ್ಲಿ ಮಲೆಗಳೆಲ್ಲ ಮಲಗಿ ಇರಲು,
ಹಿಂಡನಗಲಿ ಬಂದ ಮುಗಿಲು ಇಲ್ಲಿ ಅಲ್ಲಿ ಅಲೆಯುತಿರಲು,
ಮರದ ಕರಿಯ ನೆರಳಿನಲ್ಲಿ ಮಿಣುಕು ಹುಳುಗಳಿಣುಕುತಿರಲು,
ಚಂದ್ರಕಿರಣತತಿಯಮೇಲೆ ಶಾಂತಿ ತೇಲಿ ಬರುವಳು!

ಬಾಳ ಬಲೆಯ ನಡುವೆ ಸಿಲುಕಿ ಜೀವ ಬರಿದೆ ನೋಯುತಿರಲು
ಬಗೆಯು ಕದಡಿ, ಬೆಪ್ಪುಹೆಚ್ಚಿ, ತಿಳಿವು ಬಟ್ಟೆಗೆಡುತಲಿರಲು,
ದೇವನೆದೆಯ ನಿಲಯದಲ್ಲಿ ಕುಣಿವ ದನಿಯ ನೆನಪು ಬರಲು,
ಸೊಗದ ಬಾಗಿಲೊಡೆದುಕೊಂಡು ಶಾಂತಿ ನಗುತ ಬರುವಳು!