ಶೂನ್ಯತೆಯೇನಿದು ಹೃದಯದಲಿ
ಚೆಲ್ವಿನ ನೇಸರಿನುದಯದಲಿ?

ಎಂದಿನ ತೆರದಿ ವಿಹಂಗಮ ಸಂಕುಲ
ಚಂದದೊಳಿಂಚರ ಗೈಯುತಲಿರಲು,
ಎಂದಿನ ತೆರದಲಿ ಹಸುರು ಹುಲ್ಲಿನಲಿ
ಮಂಜಿನ ಮಣಿಗಳು ರಂಜಿಸುತಿರಲು;

ಎಂದಿನಂತೆ ತಂಗಾಳಿಯು ತಳಿರಲಿ
ಹಿಂದೆ ಮುಂದೆ ನಲಿದಾಡುತಲಿರಲು,
ಎಂದಿನಂತೆ ಬೆಳ್ಮುಗಿಲಿನ ಮುಂದೆಯು
ಅಲ್ಲಿ ಇಲ್ಲಿ ಅಲೆದಾಡುತಲಿರಲು!

ಜಗವೆಲ್ಲವು ಆನಂದದಿ ತುಂಬಿರೆ
ಸ್ವರ್ಗ ನಿಸರ್ಗವನಾಲಿಂಗಿಸಿರೆ,
ಸೊಬಗಿನ ಸೊದೆಯನು ಈಂಟಲು ಬಯಸಿ
ಜೀವವು ಕಾದಿದೆ ಬಲು ನೀರಡಸಿ!