ಪೃಥಿವಿಯಾ ಪ್ರಥಮ ಪ್ರಭಾತದಲಿ, ಇತಿಹಾಸ
ದೃಷ್ಟಿಗಸ್ಪಷ್ಟ ಅಜ್ಞಾತ ಪ್ರಾಚೀನದಲಿ,
ಚಿರಧವಲ ಹಿಮಶೈಲ ಪೃಥುಲೋರು ಪ್ರೇಂಖದಲಿ
ನವಜಾತ ಶಿಶುವಾಗಿ ನಲಿದ ಮಂಗಲಮಯೀ
ಆರ್ಯಮಾತೆಯ ಮೊದಲ ತೊದಲ ನಾಗರಿಕತೆಯ
ಸಾಮಗಾನದ ವಾಣಿಯಿಂದೆ ಮೂಡಿದ ಮೂರ್ತಿ
ನೀನೆಲೌ ಸಂಸ್ಕೃತದ ವಾಗ್ದೇವಿ! ಮಾನವನು
ವನ ಭವನದಲಿ ಮೊದಲು ಬಾನೆಡೆಗೆ ಮೊಗವೆತ್ತಿ
ಕೈಮುಗಿದು ದೇವನಾಶೀರ್ವಾದವನೆ ಬಯಸಿ
ವೇದದಲಿ ಪ್ರಾರ್ಥಿಸಿದ ದನಿ ನಿನ್ನದೆಲೆ ತಾಯೆ!
ಉಪನಿಷತ್ತಿನಲಿ ಋಷಿಗಳು ನಿನ್ನನಾಶ್ರಯಿಸಿ
ತಮ್ಮ ಮಹದಾಲೋಚನಾ ಮಂಜರಿಯ ನೆಯ್ದು
ಏಕಮೇವಾದ್ವಿತೀಯಂ ಬ್ರಹ್ಮವನು ಸಾರಿ,
‘ತತ್ತ್ವಮಸಿ,’ ‘ಬ್ರಹ್ಮಾಸ್ಮಿ,’ ‘ಸೋಹಮೆಂ’ಬುವ ಮಂತ್ರ
ತೂರ್ಯದಲಿ ಶಿಶುನರಗೆ ಅಭಯಮತವನು ಹೇಳಿ
ಜ್ಯೋತಿದರ್ಶನವಿತ್ತರಲ್ತೆ, ಹೇ ಗಾಯತ್ರಿ!
ಮೈತ್ರೇಯಿ ಯಾಜ್ಞವಲ್ಕ್ಯಾದಿಗಳು ತವಸ್ತನ್ಯ
ಪೀಯೂಷ ಪಾನದಿಂ ಮೃತ್ಯುವನೆ ಉತ್ತರಿಸಿ
ಅಮೃತರಾಗಿಹರಲ್ತೆ? ವ್ಯಾಸ ವಾಲ್ಮೀಕಿಗಳು
ಮೃದು ಮಧುರ ಧೀರ ಗಂಭೀರ ತವ ವಾಣಿಯಿಂ
ಕಾವ್ಯಕಾಹಿನಿಯ ರಸವಾಹಿನಿಯ ಸ್ರೋತದಲಿ
ಜನಗಣದ ಹೃದಯ ದುಃಖದ ತಾಪ ಪಾಪಗಳ
ತವಿಸುತಾನಂದವರ್ಷವ ಕರೆದು ಲೋಕದಲಿ
ಸ್ವರ್ಣಸ್ವಪ್ನದ ನಂದನೋದ್ಯಾನವನು ಸೃಜಿಸಿ
ಕವಿಕುಲ ಶಿರೋಮಣಿಗಳಾಗಿ ರಂಜಿಪರಲ್ತೆ?
ಕಾಳಿದಾಸಾದಿಗಳು, ಭಾಸ ಭವಭೂತಿಗಳು,
ಜ್ಞಾನಿ, ವೈಯಾಕರಣ, ರಸಋಷಿ, ವಿಭೂತಿಗಳು
ನಿನ್ನ ನಿರ್ಜರ ನಿರ್ಝರಿಣಿಯಲ್ಲಿ ಕ್ರೀಡಿಸುವ
ಕವಿ ಶಿಶುಗಳಾಗಿಹರು!
ಆರ್ಯರಾಗಿಹ ನಾವು
ನಿನ್ನ ಮೊಲೆವಾಲ ಸವಿಯಿಲ್ಲದೆಯೆ ಬದುಕುವೆವೆ?
ನೀನಿಲ್ಲದೆಲ್ಲಿಯದು ಭರತಖಂಡದ ಬದುಕು,
ಸಂಪತ್ತು, ಸಂಸ್ಕೃತಿ? ನಮ್ಮ ಜೀವನ ಗಂಗೆ
ನಿನ್ನೆದೆಯ ಅಕ್ಷಯ ಹಿಮಾಲಯವು ಸರ್ವದಾ
ದಾನಮಾಡುವ ಪುಣ್ಯಜಲ ತೀರ್ಥದಿಂದಲ್ತೆ
ಬತ್ತದೆಯೆ ತುಂಬಿ ನೂತನವಾಗಿ ಚಿರವಾಗಿ
ಹರಿಯುತಿದೆ?
ಹೇ ದಿವ್ಯ ಸಂಸ್ಕೃತ ಹಿಮಾಚಲವೆ,
ಗಗನಚುಂಬಿತವಾಗಿ ಬೆಳೆದು ನೀ ನಿಂತಿರುವೆ;
ಸ್ಥಿರತೆಯದು ಸಾವಲ್ಲ, ಜೀವಿತ ಚರಮ ಲಕ್ಷ್ಯ!
ಬೆಳೆಯುತಿಹ ನಿನ್ನೀ ಹಸುಳೆಗಳಿಗೆ ತಾವ ಕೊಡು;
ಹರಕೆಗೈ; ಸ್ತನ್ಯಪಾನವ ನೀಡು, ಹೇ ಜನನಿ!
ಹಸಿದ ಹಸುಳೆಯ ಕೈಯ ಅಶನವನು ಕಸಿಯುವುದು
ಹಿರಿಯ ಸಂಸ್ಕೃತಿ ಪಡೆದ ಸಂಸ್ಕೃತ ಮಹೀಯಸಿಗೆ
ಗೌರವದ ಕುರುಹಲ್ಲ! ತಾಯಿ ಮಗುವಿಗೆ ಕರುಬಿ
ವೈಯಾರಿಯಾಗುವುದು, ಅಯ್ಯೊ, ಲಕ್ಷಣವಲ್ಲ!
ಮಗು ಬೆಳೆಯಲೆಳಸುವುದು ಜನನಿಯ ಮರಣಕಲ್ಲ:
ಜನನಿಗದು ಅಭಿಮಾನ, ತೇಜಸ್ಸು, ಶ್ರೇಯಸ್ಸು!
ಸಂಪ್ರದಾಯದ ಆರ್ಯೆ, ನಿನಗೇಕೆ ತರಳೆಯರ
ಈ ನವ ನವೀನ ಪರಸಂಸ್ಕೃತಿಯ ಅನುಕರಣ
ಲೋಲುಪತೆ? ಅದು ನಮಗಿರಲಿ ಬಿಡು, ಜಗದ್ವಂದ್ಯೆ!