ಸಬಕ್ತಗೀನ್! ಸಬಕ್ತಗೀನ್!
ಪೆಸರ್ ಕೇಳ್ದು ಬಲ್ಲೆಯೇನ್?
ಕರುಣೆಗೊಂದು ಕೋಡವನ್,
ಎರ್ದೆಯೊಲ್ಮೆಗೆ ಬೀಡವನ್.
ಕಬ್ಬಿಗರ್ಗೆ ಪಾಡವನ್,
ಕತೆ ಅವನದೆ ಪಾಡುವೆನ್!

ಬೇಂಟೆಗೆನುತಮೊಂದು ದಿನಂ
ಪೋದನವನ್. ದಟ್ಟಬನಂ
ಬೆಟ್ಟವೇರ್ದು, ಮುಗಿಲ ಮೀರ್ದು
ಪರ್ಬಿದತ್ತು. ಬನವ ಸಾರ್ದು
ಬೇಂಟೆಗಾರ ಸಬಕ್ತಗೀನ್
ತೊಳಲ್ದನ್ ನಿಡುಪೊಳ್ತು ತಾನ್.

ಬತ್ತಳಿಕೆಯು ಬೆನ್ನಮೇಲ್
ಅತ್ತಮಿತ್ತಮಲೆಯುತ್ತಿತ್ತು;
ತಲೆಯುಡುಗೆಯು ನೆತ್ತಿಮೇಲ್
ಪಿಂದೆ ಮುಂದೆಯಾಡಿದತ್ತು.
ಅವನ ಕುದುರೆ ಬಲು ತೊಳಲ್ದು
ನೊರೆಗರೆದುದು ಕಡು ಬಳಲ್ದು.
ಬೇಂಟೆಯೇಂ ಕಾಣ್ದುದಿಲ್ಲಂ,
ಬಾಣಮೊಂದು ಚಿಗಿದುದಿಲ್ಲಂ.
ಬೆಂಕೆಯುಗುಳ್ವ ಬಿಸಿಲ್ಗರೆದು
ಪಗಲ ಪೊಳ್ತದಿರ್ದುದುರಿದು!
ಬಾಯಾರ್ದುದು ಕುದುರೆ ತಾನ್,
ಬಾಯಾರ್ದನ್ ಸಬಕ್ತಗೀನ್.
ನೀರನೀಂಟಲೆಂದು ಬಗೆದು,
ಕುದುರೆಯಿಂದೆ ಕೀಳ್ಗೆ ನೆಗೆದು,
ಕೊಳನನೊಂದು ತಡಿಯ ಸೇರ್ದು,
ಕುದುರೆ ಆಳ್ ಉದಕವ ಪೀರ್ದು,
ತಣ್ಣೆಳಲೊಳ್ ಮಲಗಿದನ್,
ಸಬಕ್ತಗೀನ್ ಮಲಗಿದನ್.

ಸಬಕ್ತಗೀನ್ ಮಲಗಿರ್ದವನ್
ನಿದ್ದೆಗಳೆದು ಮೇಲೆಳ್ದನ್.
ಜಿಂಕೆಯೊಂದು ಮರಿಯ ಕೂಡೆ
ಜಲವನೀಂಟುತಿತ್ತು. ನೋಡೆ,
ಬೇಂಟೆಗಾರ ಸಬಕ್ತಗೀನ್
ಕೈಕೊಂಡನ್ ಬಿಲ್ ಬಾಣಮನ್.
ಪಾರ್ದು, ಜಿಂಕೆ ಪಾರಿದತ್ತು;
ಮಿಗದೆಳೆವರಿ ಅಲ್ಲೆ ಇತ್ತು!
ಸಬಕ್ತಗೀನ್ ಕುದುರೆಯೇರ್ದು
ಮರಿಯದಿರ್ದ ತಡಿಯ ಸೇರ್ದು
ನೆಗಪಿ ಅದನ್ ಪಿಡಿದುಕೊಂಡು
ಬೀಡಿಗೊಯ್ವುತಿರಲ್, ಕಂಡು,
ಒಲ್ಮೆ ಅಳಿಸೆ ಸಾವ ಭಯವ,
ಪಿನ್ ಪೋದುದು ತಾಯಿ ಹಯವ!
ಪೆತ್ತ ಬಸಿರ್ ಬೆದುರ್ವುದೇನ್?
ಪಡೆದ ಕರುಳ್ ಅಗಲ್ವುದೇನ್?
ಜಿಂಕೆ ಮರಿಯ ಕರೆವವೋಲ್,
ಬಸಿರ್ ಬೇನೆಯುಸುರ್ವವೋಲ್,
“ಸಬಕ್ತಗೀನ್, ಸಬಕ್ತಗೀನ್,
ಕಂದನಳಿಯಲ್ ಅಳಿವೆ ನಾನ್!
ಎನ್ನ ಕರುಳನೊಯ್ವೆಯ ನೀನ್?
ಮಗುವನ್ ಕೊಡಯ್ ಬರ್ದುಕುವೆ ನಾನ್!”
ಎಂದು ಮೊರೆಯಿಡುವಂತೆವೋಲ್
ಮೊರೆಯುತಿರ್ದುದದರ ಗೋಳ್!

ಸಬಕ್ತಗೀನ್ ಕೇಳ್ದನದನ್;
ಎರ್ದೆಗರಗಿದನ್, ಮನಮರುಗಿದನ್:
ಕರುಣೆಯದುವೆ ದೇವರಲ್ತೆ?
ಕಣ್‌ಪನಿಯೆ ತೀರ್ಥಮಲ್ತೆ?
ಸಬಕ್ತಗೀನನೆರ್ದೆಯೊ ‘ಳಲ್ಲನ್’
ಕರುಣೆಯೋಲ್ ನೆಲಸಿದನ್!
ಸಬಕ್ತಗೀನ್ ಮರಿಯ ತೆಗೆದು,
ತನ್ನ ತೋಳೊಳ್ ತಳ್ಕೆ ಬಿಗಿದು,
ಮೆಯ್ ತುಂಬಲ್ ಮುತ್ತುಕೊಟ್ಟು,
ಅದರ ಪಣೆಗೆ ಪಣೆಯನಿಟ್ಟು,
ಪಿಂದೆ ಬರ್ಪ ಮಿಗವ ನೋಡಿ
“ಬಾರ ತಾಯೆ, ನಿನ್ನ ಬೇಡಿ
ದಿದೋ ಮರಿಯ ಕೊಟ್ಟಪೆನ್!
ಇಗೋ ಮಗುವ ಬಿಟ್ಟಪೆನ್!”
ಎಂದು ಮರಿಯ ಬಿಟ್ಟನಂದು.
ಬಡತನಮನ್ ಬಿಟ್ಟನಂದು!

ತಾಯಿಜಿಂಕೆ ಓಡಿಯೋಡಿ
ಬಂದು, ಮುದ್ದುಮರಿಯ ಕೂಡಿ,
ಪಿಂದೆ ಪಿಂದೆ ತಿರುಗಿ ನೋಡಿ,
ದಿಟ್ಟಿಯಟ್ಟಿ, ಎರ್ದೆಯ ತೋಡಿ,
“ತಿರೆಯನಾಳ್ವನಕ್ಕೆ” ಎಂದು
ಪರಕೆಗೈದು ಪೋದುದಂದು!

ವರವನೀವ ಶಕ್ತಿ ‘ಅಲ್ಲಂ’
ಗೊರ್ವನಿಗೇ ಇರ್ಪುದಿಲ್ಲಂ!
ತಾಯಿಯಳ್ಕರಿತ್ತ ವರಂ
‘ಅಲ್ಲ’ನ ವರದಂತೆ ಚಿರಂ!
ಅಪ್ಪುದೊ? ಅಲ್ತೊ? ಕೇಳ ನೀನ್,
ಪೇಳ್ವನವನ್ ಸಬಕ್ತಗೀನ್!