ಮೇರೆಯರಿಯದಿಹ ನೀಲಿಯಾಗಸವ
ಮುಡಿದಿಹ ಪರ್ವತಶೃಂಗವಿದು;
ಮಳೆಯ ಮೋಡಗಳು ಹಾರಿಬಂದಿಲ್ಲಿ
ತಾಂಡವವಾಡುವ ರಂಗವಿದು.
ಗುಡುಗು ಮಿಂಚುಗಳು ಸರಸವಾಡುತ್ತ
ಸಿಡಿಲನು ಹಡೆಯುವ ತಾಣವಿದು;
ನೇಸರಿಂದುಗಳು ನಿಚ್ಚಪಯಣದಲಿ
ವಿಶ್ರಮಿಸುವ ನಿಲ್ದಾಣವಿದು.

ಇಲ್ಲಿ ರಾತ್ರಿಯಲಿ ಹೊಳೆವ ಚುಕ್ಕಿಗಳು
ಮಿಣು ಮಿಣುಗುವ ಕಣ್ಬೇಟದಲಿ
ಬಹವು ತಣ್ಗದಿರನೆಡಬಲಂಗಳಲಿ
ತಣಿಯೆ ಬೆಳ್ದಿಂಗಳೂಟದಲಿ.
ಚೈತ್ರಮಾಸದಲಿ ತರು ಲತಾಳಿಗಳ
ತಳಿರು ಹೂವುಗಳ ಸಿರಿ ಮೆರೆಯೆ,
ಶುಕ ಪಿಕಂಗಳಿನಿದನಿಯ ಬೀರುತ್ತ
ಭಾವುಕರ ಮೋಹಿಸುತ ಕರೆಯೆ,
ಯಕ್ಷಕಿನ್ನರರು, ರಮಣ ರಮಣಿಯರು,
ಬಹರು ಗಾನದಲಿ ಮೈಮರೆಯೆ;
ಪ್ರಣಯ ಕೂಟಗಳ ಸರಸದಾಟಗಳ
ಸೊಗದ ಕಂಬನಿಯ ಸರಿ ಸುರಿಯೆ!

ಇಲ್ಲಿ ಮಾಗಿಯಲಿ ಬಿಳಿಯ ಮಂಜುಗಳು
ಬಂದು ಕಿಕ್ಕಿರಿದು ಕವಿಯುವುವು;
ಇಲ್ಲಿ ಹದ್ದುಗಳು ಚೀರುತಾಗಸದಿ
ವನದ ಮೌನವನು ತಿವಿಯುವುವು.
ಇಲ್ಲಿ ಮರುದನಿಗಳುದಿಸಿಯೊಮ್ಮೆಮ್ಮೆ
ಬದುಕಿ ಬಂಡೆಗಳು ಕೂಗುವುವು;
ಇಲ್ಲಿ ಜೀವನವೆ ಸಾವನೊಲಿದೊಮ್ಮೆ
ಜೀವ ಸಾವುಗಳು ತಾಗುವುವು.


ಬನದ ಗಾಳಿಗಳು ಕರ್ಮಬಂಧನದಿ
ಮುಕ್ತಿ ಹೊಂದುವಾಸ್ಥಾನವಿದು;
ಕಾರ ಮೊದಲನೆಯ ತೋರ ಮಳೆಹನಿಗಳ್
ಇಳಿವ ಮೊದಲ ಸೋಪಾನವಿದು.
ಏಳು ಬಣ್ಣಗಳ ಮಳೆಯ ಬಿಲ್ಲುಗಳು
ಬಂದುಳಿವ ಕಲಾಶಾಲೆಯಿದು;
ನವಿಲುಗಳು ಬಂದು ಗರಿಗೆದರಿ ಕುಣಿವ
ಮಳೆಯ ರಾಜನುಯ್ಯಾಲೆಯಿದು.
ಹರಿಣ ಹುಲ್ಲೆಗಳು ಹುಲಿಯು ಹಂದಿಗಳು
ಬಂದಲೆವ ಪರ್ಣಶಾಲೆಯಿದು.
ಬ್ರಹ್ಮ ಪುರುಷನಿಗೆ ಭೂಮಿದೇವಿ ತಾನ್
ಅರ್ಪಿಸಿದ ಕುಸುಮ ಮಾಲೆಯಿದು.


ಗೋಪ ಬಾಲಕರು ತುರುವ ಮೇಯಿಸುತ
ಬಿಸಿಲ ಬೇಗೆಯಲಿ ನೆರಳಿನಲಿ
ಕೊಳಲನೂದುವರು, ಉಲಿಯೆ ದೊಂಟೆಗಳು,
ಬಿದಿರಗಂಟೆಗಳು ಕೊರಳಿನಲಿ.
ಇರುಳು ಹಗಲುಗಳು ದಿನವು ಬಂದಿಲ್ಲಿ
ಚುಂಬಿಸೊಲಿಯುವುವು ರಹಸ್ಯದಲಿ!
ಬೆಳಗು ಬೈಗುಗಳು ಪೂರ್ವ ಪಶ್ಚಿಮದಿನ್
ಇಣಿಕಿ ನೋಡುವುವು ಹಾಸ್ಯದಲಿ!
ಇಲ್ಲಿ ಕಬ್ಬಿಗನು ತೇಲುತೈತಂದು
ಹಾಡಿ ಕನ್ನಡದ ಕಬ್ಬವನು
ನಚ್ಚಿನಿನಿಯಳಹ ಕವಿತೆಯೊಡಗೂಡಿ
ಬಾಳಿಗೀಯುವನು ಗಬ್ಬವನು.
ಎತ್ತ ನೋಡಿದರು ಸುತ್ತ ಹಸುರು ಕಡಲ್
ಒತ್ತಿ ಮುತ್ತಿಡುತಲಿಹುದಿಲ್ಲಿ;
ಇಲ್ಲಿ ಶೃಂಗಾರವಿಲ್ಲಿ ಸೌಂದರ್ಯ
ವಿಲ್ಲಿ ರಸಯೋಗ ಸುಖವಿಲ್ಲ!

ಹಸುರು ಹುಲ್ಲಿನಲಿ ಮೊಲಗಳೈತಂದು
ಚನ್ನೆಯಾಡುವುವು ಚಂದದಲಿ;
ಅಲೆವ ದೆವ್ವಗಳು ಕೂಡ ಬಂದಿಲ್ಲಿ
ಚೀರಿ ಕುಣಿವುವಾನಂದದಲಿ!
ಕಣ್ಗೆ ನೋಟವಿದು, ಎದೆಗೆ ಬೇಟವಿದು,
ನನ್ನನೊಲಿದವಳ ಕೂಟವಿದು;
ರಸಿಕರಾರಾಮವಿದುವೆ ಮಧುಧಾಮ,
ಮಂಗಳದ ತುಂಗ ಕೂಟವಿದು!
ನಿದ್ದೆಮಾಳ್ಪ ಪೇರಾನೆಗಳ ತೆರದಿ
ಕರಿಯ ಬಂಡೆಗಳು ಬಿದ್ದಿಹವು;
ಗಿರಿಯ ಕಾಯುತಿಹ ಹಸುರು ಕೋಟೆಯೊಲು
ಸುತ್ತ ಹೆಮ್ಮರಗಳೆದ್ದಿಹವು!
ಶಾಂತಿ ವಿಶ್ರಾಂತಿ ನಿರತೆಯಾನಂದ
ಮೌನ ಮುಕ್ತಿಗಳಿಗಿದು ಬೀಡು;
ಗಿರಿಯ ಗೆಲ್ಗಂಬದಿಂದ ರಂಜಿಪುದು
ನನ್ನ ನಚ್ಚಿನ ಮಲೆಯ ನಾಡು!
ವಿಶ್ವವೆಲ್ಲವೂ ಕರ್ಮರಂಗದಲಿ
ಕದನವಾಡುತಿರಲಾದಿಯಲಿ,
ಸಹ್ಯರಸಋಷಿಯು ಕುಳಿತು ಯೋಗದಲಿ
ಮುಳುಗಿರುವನಿನ್ನೂ ಸಮಾಧಿಯಲಿ!