ಕುಲದ ಹೆಮ್ಮೆ, ನೆಲದ ಹೆಮ್ಮೆ,
ಎಲ್ಲ ಮಾಯೆ;
ಬರಿಯ ತಿರುಳುಗೆಟ್ಟ ನೆರಳು,
ಟೊಳ್ಳು ಛಾಯೆ.
ಬಿದಿಯ ಸರಳಿಗಿರದು ಸರಳು!
ಕರಗಲರಿದು ಜವನ ಕರುಳು!
ಮುಡಿಯ ನೆತ್ತಿ,
ಹಿಡಿದ ಕತ್ತಿ
ಪುಡಿಯೊಳೆಲ್ಲ ಕಡೆಯೊಳುರುಳಿ
ಮಣ್ಣು ತಿಂದು ಪೋಪವು;
ಹೊಲದ ಕತ್ತಿ ಬನದ ಕೊಡಲಿ
ಯೊಡನೆ ಒಂದೆಯಾಪವು!


ಕತ್ತಿ ಹಿಡಿದು ಕೆಲರು ಗೆಲ್ಲ
ಬಹುದು ರಣದಲಿ;
ಮೆರೆಯಬಹುದು ಸಿರಿಯನೆಲ್ಲ
ಕೊಂದ ಕಣದಲಿ.
ಆದರೇನು? ನರವು ಹರಿದು
ಬೀಳರೇನು ಸೊಕ್ಕು ಮುರಿದು?
ಇಂದು ನಾಳೆ,
ಬಹುದು ವೇಳೆ:
ಸುಮ್ಮನಹರು ಮಾತು ಸತ್ತು
ರಣದ ಕೀಳುಬದಿಯಲಿ;
ಬೀರರೆಲ್ಲ ಸವಿಯ ತುತ್ತು
ಜವಗೆ ತುತ್ತತುದಿಯಲಿ!


ಹಣೆಯ ಮೇಲೆ ಜಸದ ಮಾಲೆ
ಬಾಡದಿರುವುದೆ?
ಹಿರಿಯ ಗೆಯ್ಮೆ ಗೈದ ಮೈಮೆ
ಬೀಳದಿರುವುದೆ?
ಗೆದ್ದು ಬಿದ್ದ ಬೀರರೆಲ್ಲಿ?
ನೋಡು, ಜವನ ದಾಡೆಯಲ್ಲಿ!
ಎಲ್ಲ ಕಡೆಗೆ
ಮಸಣದೆಡೆಗೆ!
ನಾವು ಗೈದ ಸೈಪದೊಂದೆ
ಕಟ್ಟಕಡೆಯೊಳುಳಿವುದು!
ಪುಡಿಯೊಳಿಳಿದು ಹೋದಮೇಲೆ
ಮೊಳೆತು ತಳಿತು ನಲಿವುದು!*

 


* ಜೆ.ಶರ್ಲಿ ಕವಿಯ “Death the Leveller” ಎಂಬುದರ ಅನುವಾದ.