ಸ್ವರ್ಗವೆ, ಭೂಮಿಯೊಳಿರದಿರೆ ನೀನು
ಮೇಣೆಲ್ಲಿಯು ನೀನಿಲ್ಲಾ ಇಲ್ಲಾ!

ದೇವತೆಗಳು ನಾವಾಗಲಾರದಿರೆ
ದೇವತೆಗಳು ಇನ್ನಿಲ್ಲಾ ಇಲ್ಲಾ!
ಅಪ್ಸರಿಯರು ನಾವಾಗಲಾರದಿರೆ
ಅಪ್ಸರಿಯರು ಬೇರಿಲ್ಲಾ ಇಲ್ಲಾ!

ಮೊರೆಮೊರೆಯುತ ಓಡುವ ಈ ತೊರೆಯಿರೆ,
ತೆರೆಗಳ ತುದಿಯಲಿ ತಿರುಗುವ ನೊರೆಯಿರೆ,
ಹಸುರು ಬನಗಳಲಿ ಹೂಬಿಸಿಲೊರಗಿರೆ,
ಕೋಮಲ ರವಿಯಿರೆ, ನಾಕವು ಈ ಧರೆ!

ಸುಗ್ಗಿಯ ಸೊಬಗಲಿ ತಿಂಗಳ ಬೆಳಕಲಿ
ಸಗ್ಗವು ಬಿದ್ದಿರುವುದು ಅಲ್ಲಲ್ಲಿ!
ಕಬ್ಬಿಗನಿಂಚರ ಸೊದೆಯುಂಡು ಚೆಲ್ಲಿ
ಸಗ್ಗವ ಮಾಳ್ಪನು ಈ ಬುವಿಯಲ್ಲಿ!