ಕಳೆದ ಶತಮಾನದ ಉತ್ತರಾರ್ಧದಲ್ಲಿ ಪಡುವಣ ದಿಕ್ಕಿನಿಂದ ಬೀಸಿದ ಒಂದು ಗಾಳಿ ನಮ್ಮ ಸಾಹಿತ್ಯದ ಮಹಾರಣ್ಯದಲ್ಲಿ ನವ ವಸಂತೋದಯಕ್ಕೆ ಕಾರಣವಾಯಿತು. ಹೊಸ ಬೆಳಕು, ಹೊಸ ಚಿಗುರು, ಹೊಸ ಕಂಠಗಳು ತೆರೆತೆರೆಯಾಗಿ ಚಿಮ್ಮಿ ಮ್ಲಾನವಾಗಿದ್ದ ಆವರಣವನ್ನು ನವೋಲ್ಲಾಸದಿಂದ ತುಂಬಿದುವು. ಬಹುಕಾಲದಿಂದ ಹರಿದು ಬಂದು ನಿಂತಲ್ಲಿಯೇ ನಿಂತ ನೀರಿಗೆ ಹೊಸ ನೀರು ನುಗ್ಗಿ ಸಂಗಮವಾಗಿ ವಿವಿಧ ಛಂದೋಗತಿಗಳಲ್ಲಿ ಪ್ರವಹಿಸಿ ವಿಶಾಲವಾದ ಕ್ಷೇತ್ರವನ್ನು ಹಸುರಾಗಿಸಿತು. ಅನೇಕ ಬಗೆಯ ಕೃಷಿಗೆ, ಪ್ರಯೋಗಕ್ಕೆ ನಮ್ಮವರು ಕೈ ಹಾಕಿ ನೂತನತೆಯನ್ನು ಬೆಳೆದರು.

ಈ ನವೋದಯದ ಪರಿಣಾಮವಾಗಿ ಕವಿಮನೋಧರ್ಮದಲ್ಲಿ ಸ್ಪಷ್ಟವಾಗಿ ಗುರುತಿಸುವಂತಹ ತೀವ್ರವಾದ ಬದಲಾವಣೆಗಳಾಗಿವೆ. ಮೊದಲನೆಯದು ವಸ್ತುವನ್ನು ಕುರಿತದ್ದು: ಹಿಂದಿನ ಕವಿಗಳು ರಾಮಾಯಣ ಭಾರತಾದಿಗಳಿಂದ ಪುರಾಣ ಪ್ರಸಿದ್ಧವಾದ ಕಥಾನಕಗಳನ್ನು ಆರಿಸಿಕೊಂಡು ತಮ್ಮ ಪ್ರತಿಭೆಯನ್ನು ವಿಸ್ತರಿಸಬೇಕಾಗಿತ್ತು. ಜೊತೆಗೆ ಅವರನ್ನು ಜಗ್ಗುತ್ತಿದ್ದ ಕವಿಸಮಯಾದಿ ಕಟ್ಟುಪಾಡುಗಳನ್ನು ಅದರ ಹಿಂದಿನ ಪಂಡಿತ ಮನೋಧರ್ಮವನ್ನೂ ಗೌರವಿಸಬೇಕಾಗಿತ್ತು. ಒಟ್ಟಿನಲ್ಲಿ ಅವರ ಸೌಂದರ‍್ಯಾನುಭವ ಬಹುಮಟ್ಟಿಗೆ ವಸ್ತುನಿಷ್ಠ ಮಾಧ್ಯಮದ ಮೂಲಕ ಅಭಿವ್ಯಕ್ತಿಯನ್ನು ಪಡೆಯಬೇಕಾಗಿತ್ತು. ಆದರೆ ನವೋದಯದ ಕವಿಗೆ ಅಂತಹ ಪೌರಾಣಿಕ ವಸ್ತುವಿನ ಅಗತ್ಯ ಅನಿವಾರ‍್ಯವೇನಲ್ಲ. ತನ್ನ ಕಣ್ಣಿಗೆ ಕಂಡದ್ದು, ಮನಸ್ಸಿಗೆ ತಟ್ಟಿದ್ದು, ಏನು ಬೇಕಾದರೂ ತನ್ನ ಪರಿಭಾವನೆಯ ವಸ್ತುವಾಗಬಹುದು ಇವನಿಗೆ. ಏನನ್ನು ಬೇಕಾದರೂ ಸೌಂದರ‍್ಯಾನುಭವದ ವಸ್ತುವನ್ನಾಗಿಸಿಕೊಂಡು ಅದರಿಂದ ರಸವನ್ನು ನೀಡುವೆನೆಂಬ ಧೈರ‍್ಯ, ನಂಬುಗೆ – ಈ ಕವಿಗಿದೆ. ಇದಕ್ಕೂ ಮಿಗಿಲಾಗಿ ವಸ್ತುವೊಂದನ್ನು ಕುರಿತು ಇಂದಿನ ಕವಿ ನೋಡುವ ದೃಷ್ಟಿಯಲ್ಲೂ ವೈವಿಧ್ಯತೆಯಿದೆ. ಎಲ್ಲಕ್ಕೂ ಮಿಗಿಲಾಗಿ ತನ್ನ ಅನುಭವವನ್ನು ಅಭಿವ್ಯಕ್ತಗೊಳಿಸುವ ರೀತಿಯಲ್ಲೂ ವಿಶೇಷ ವೈವಿಧ್ಯತೆಯಿದೆ. ಹಿಂದಿನ ಕಂದ ಷಟ್ಪದಿಗಳ ಕಟ್ಟನ್ನು ಮುರಿದು ಸ್ವತಂತ್ರವಾದ ಛಂದೋರೂಪಗಳನ್ನು ಇಂದಿನ ಕವಿ ನಿರ್ಮಿಸಿಕೊಂಡಿದ್ದಾನೆ. ರಮಣೀಯವಾದ ಅಚ್ಚುಕಟ್ಟಾದ ರಚನೆಯಿಂದ ಹಿಡಿದು ಸ್ವಚ್ಛಂದ ಛಂದಸ್ಸಿನವರೆಗೆ ವಿವಿಧ ಛಂದೋರೂಪಗಳನ್ನು ನಾವು ಗುರುತಿಸಬಹುದು. ಒಂದು ಮಾತಿನಲ್ಲಿ ಈ ಪರಿವರ್ತನೆಯನ್ನು ಕುರಿತು ಹೇಳುವುದಾದರೆ, ಕವಿಯ ಮನೋಧರ್ಮ ವಸ್ತುನಿಷ್ಠವಾದ ಮಹಾಕಾವ್ಯ ಪದ್ಧತಿಯಿಂದ ವ್ಯಕ್ತಿನಿಷ್ಠವಾದ ಭಾವಗೀತೆಯ ಪದ್ಧತಿಗೆ ಬದಲಾಗಿದೆ.

ಹೊಸಗನ್ನಡ ಕಾವ್ಯವನ್ನು ಭಾವಗೀತೆ ಎಂದು ಹೆಸರಿಸಿರುವ ಕ್ರಮದಲ್ಲೇ ನಾವು ಸ್ಪಷ್ಟವಾಗಿ ಇಂದಿನ ಕವಿಮನೋಧರ್ಮವನ್ನು ಗುರುತಿಸಬಹುದು. ಭಾವಗೀತೆಯ ಪ್ರಧಾನ ಲಕ್ಷಣ ಅದು ವ್ಯಕ್ತಿನಿಷ್ಠವಾಗಿರಬೇಕೆನ್ನುವುದು. ಇಲ್ಲಿ ಭಾವ ಎಂದರೆ ಕವಿಭಾವ; ಕವಿಯ ಪರಿಭಾವನೆಯಿಂದ ರಸತ್ವಕ್ಕೇರಿದ ಭಾವ; ಹಾಗೆ ರಸತ್ವಕ್ಕೇರಿದ ಯಾವ ಭಾವವೇ ಆಗಲಿ (ಆಲಂಕಾರಿಕರು ಹೇಳುವ ಒಂಬತ್ತು ಭಾವಗಳಷ್ಟೆ ಇಲ್ಲಿ ನಿಯತವಲ್ಲ) ಕವಿಯ ವ್ಯಕ್ತಿನಿಷ್ಠವಾದ ಸೌಂದರ‍್ಯಾನುಭವದ ಗೀತವಾಗುತ್ತದೆ. ಆದುದರಿಂದ ಈ ‘ಭಾವ’ ಕವಿಯ ಸೌಂದರ‍್ಯಾನುಭವವೇ. ಭಾವಗೀತ ಎಂದರೆ ಸೌಂದರ‍್ಯಾನುಭವದ ಗೀತ.

ಭಾವ – ಎಂದರೆ, ಆಗುವಿಕೆ; ಒಂದು ಸ್ಥಿತಿಯಿಂದ ಮತ್ತೊಂದು ಸ್ಥಿತಿಗೆ ಆಗುವ ಪರಿವರ್ತನೆ[1] ಎಂದು ಸಂಸ್ಕೃತದಲ್ಲಿ ಅರ್ಥವಿದೆ. ಕವಿಕರ್ಮದಲ್ಲೂ ಸಹ ಕವಿಯ ಮನಸ್ಸು ಭವಸ್ಥಿತಿಯಿಂದ ಭಾವಸ್ಥಿತಿಗೆ ಪರಿವರ್ತನೆ ಹೊಂದುವುದರಲ್ಲೇ ಕಾವ್ಯದ ಉಗಮವಿದೆ. ‘ಭವದ ಮೇಲಿಂದೆದ್ದು ಭಾವದೊಳು’ ಸಂಚರಿಸುವುದರಲ್ಲಿಯೆ ವಸ್ತುವಿಗೆ ಕಾವ್ಯತ್ವ ಪ್ರಾಪ್ತವಾಗುತ್ತದೆ ಕವಿಯ ಪರಿಭಾವನೆಯಲ್ಲಿ. ಹೀಗೆ ಕವಿ ಪರಿಭಾವನೆಯಲ್ಲಿ ನಾವು ಗುರುತಿಸುವ ‘ಈ ಭಾವ’ ಅಥವಾ ಸೌಂದರ‍್ಯಾನುಭವ ವಸ್ತುವಿನೊಂದಿಗೆ ಕವಿ ಪಡೆಯುವ ಒಂದು ರೀತಿಯ ಐಕ್ಯಾತಾನುಭವರೂಪವಾದುದು. ವಸ್ತುವೊಂದನ್ನು ಕುರಿತು ಪರಿಭಾವಿಸುತ್ತಾ ಕವಿ, ಒಂದು ರೀತಿಯ ಆತ್ಮಸಂಗವನ್ನು ಪಡೆಯುವುದು, ಹಾಗೂ ತಾನೇ ನೋಡುವ ವಸ್ತುವೇ ಆದೆನೆನ್ನುವುದು – ಈ ಅನುಭವದ ಶಿಖರ. ಕವಿದೃಷ್ಟಿ, ವಸ್ತುವಿನಲ್ಲಿ ಸಂಗಮಿಸಿ ಮೂರನೆಯದೊಂದನ್ನು ತೆರೆದು ತೋರುವುದು ಈ ಒಂದು ಸಾಮರಸ್ಯಾನುಭವದಿಂದಲೇ. ಯಾವಾಗ ಕವಿ ಭವಸ್ಥಿತಿಯಿಂದ ಭಾವಸ್ಥಿತಿಗೇರಿ ವಸ್ತುಭಾವಲೀನವಾಗುವನೋ ಆ ಭಾವ ಅಥವಾ ಸೌಂದರ‍್ಯಾನುಭವ[2] ಅನಿವಾರ‍್ಯವಾಗಿ ಗೀತರೂಪವೊಂದನ್ನು ಧರಿಸಿದಾಗ ಅದು ಭಾವಗೀತ ಎನ್ನಿಸಿಕೊಳ್ಳುತ್ತದೆ. ಕವಿ ತಾನು ಹಸುರನ್ನು ಕಾಣುತ್ತಾ ಹಸುರೇ ಆದೆನೆನ್ನುವಷ್ಟರಮಟ್ಟಿನ ಒಂದು ಸಾಮರಸ್ಯವನ್ನು ವಸ್ತುವಿನೊಂದಿಗೆ ಪಡೆಯುವುದು ಈ ಭಾವದ ಲಕ್ಷಣ. ಕವಿ ‘ಹಸುರಾದುದು ಕವಿಯಾತ್ಮಂ ರಸಪಾನ ಸ್ನಾನದಲಿ’, ಎಂದಾಗ ಆ ಮಾತು ಕವಿ ಹಸುರೆಂಬ ವಸ್ತುವಿನಲ್ಲಿ ತಾನು ಒಂದಾದ ‘ಭಾವ’ವನ್ನು ಹೇಳುವ ಒಂದು ರೀತಿ. ಹೀಗೆ ನೇರವಾಗಿ ಆ ಐಕ್ಯತಾಭಾವವನ್ನು ಹೇಳಿದಾಗಲಾಗಲೀ, ‘ಹಸುರು ಚೆಲುವಿನ ಎದೆಯುಸಿರು’ ಎಂದು ಹೇಳಿದಾಗಲಾಗಲೀ, ಹಸುರನ್ನು ಕಲ್ಪನಾಮಯವಾಗಿ ಬಣ್ಣಿಸಿದಾಗಲಾಗಲೀ – ಅದು ಕವಿ ಚೆಲುವಿನ ವಸ್ತುವಿನೊಂದಿಗೆ ಕವಿ ಪಡೆದ ಆ ಸಾಮರಸ್ಯಾನುಭವದ ಅಭಿವ್ಯಕ್ತಿಯೇ. ಅಥವಾ ಅದು ಕವಿಯ ಭಾವವನ್ನು ಹೇಳುವ ಗೀತವೇ. ಇದು ಭವದ ಮಾತಲ್ಲ: ಭಾವದ ಗೀತೆ. ಆ ಭಾವ ಮಾತಿಗೂ ಮೀರಿದ ಉಕ್ತಿಯೊಂದನ್ನು ಬಯಸುವುದರಿಂದಲೇ ‘ಭಾವಗೀತೆ’ಯಾಯಿತು. ಭಾವಗೀತವೆಂದರೆ ಕವಿಯ ವ್ಯಕ್ತಿನಿಷ್ಠವಾದ ಸೌಂದರ‍್ಯಾನುಭವದ ಗೀತರೂಪವಾದ ಅಭಿವ್ಯಕ್ತಿ ಎಂದು ಹೇಳಬಹುದು.

ಹಿಂದಿನ ಕವಿಗಳ ಕಾಲಕ್ಕಿಂತ ಇಂದಿನ ಕವಿಗಳ ಕಾಲ ವಿಶೇಷ ವೈವಿಧ್ಯತೆಯಿಂದ ತುಂಬಿದೆ. ಅನುಭವ ಕ್ಷೇತ್ರ ವಿಶಾಲವಾದಂತೆ ಜಟಿಲವೂ ಆಗಿದೆ. ಹಳೆಯ ನಂಬಿಕೆಗಳನ್ನು ತಲೆಕೆಳಗು ಮಾಡುವ ಹೊಸ ವಿಚಾರಗಳು, ಸಮಾಜದ ಅನೇಕ ಕಟ್ಟುಕಟ್ಟಳೆಗಳ ಬುಡವನ್ನೆಲ್ಲಾ ಅಲ್ಲಾಡಿಸುವ ನೂತನ ಪದ್ಧತಿಗಳೂ, ವಿಜ್ಞಾನ ತೆರೆದು ತೋರುವ ನೂರಾರು ವಿಸ್ಮಯಾದ್ಭುತಗಳು, ಪ್ರಪಂಚಾದ್ಯಂತ ನಡೆಯುತ್ತಲಿರುವ ಸಾಮಾಜಿಕ ರಾಜಕೀಯ ಚಳುವಳಿಗಳ ಪರಿಣಾಮದಿಂದ ನಮ್ಮ ಜನತೆಯಲ್ಲಾದ ಪರಿವರ್ತನೆಗಳು, ಮಹಾಮೇಧಾವಿಗಳ ಹೊಸ ತತ್ವ, ಆಲೋಚನೆ, ಸಿದ್ಧಾಂತಗಳು, ವಿವೇಕಾನಂದ, ಅರವಿಂದ, ಗಾಂಧಿ ಮೊದಲಾದ ಮಹಾವ್ಯಕ್ತಿಗಳ ಪ್ರಭಾವಗಳು – ನಮ್ಮ ಬದುಕನ್ನು ಪರಿವರ್ತಿಸಿವೆ. ಈ ಎಲ್ಲ ಪರಿವರ್ತನೆಯ ಪ್ರಭಾವ ಕವಿಚೇತನದ ಮೇಲೆ ಆಗುವುದು ಅನಿವಾರ‍್ಯ; ಕವಿ ಮನೋಧರ್ಮ ಇದೆಲ್ಲವನ್ನು ಪ್ರತಿಬಿಂಬಿಸುವುದೂ, ಪ್ರತಿನಿಧಿಸುವುದೂ, ಪ್ರತಿಮಿಸುವುದೂ ಅನಿವಾರ‍್ಯ.

ಈ ಹೊಸ ಕಾವ್ಯ ಬಹುಮುಖವಾಗಿ ಆವಿರ್ಭವಿಸಿದೆ. ಪ್ರಧಾನವಾದ ಕವಿತ್ರಯರಾದ ಶ್ರೀ ಕುವೆಂಪು, ಬೇಂದ್ರೆ, ಪು.ತಿ.ನ. ಇವರು ಮತ್ತು ಉಳಿದ ಕವಿಗಣವೂ ಸೇರಿ ನವೋದಯ ಕಾವ್ಯವನ್ನು ಕಟ್ಟಿದ್ದಾರೆ. ಕುವೆಂಪು ಅವರ ಕಾವ್ಯ ಹುಟ್ಟಿಕೊಂಡದ್ದು ಮಲೆನಾಡಿನ ಸಹ್ಯಾದ್ರಿಯ ಪರ್ವತಾರಣ್ಯಗಳಲ್ಲಿ. ಅದುವರೆಗೂ ಕನ್ನಡ ಜನತೆಯ ಕಣ್ಣಿಗೆ ಕೇವಲ ‘ಭಯಂಕರ’ವಾದ ಆ ಮಲೆನಾಡಿನ ರುದ್ರಸೌಂದರ‍್ಯ ‘ರಸಿಕಧೀರ’ರಾದ ಕುವೆಂಪು ಅವರ ವಾಣಿಯಲ್ಲಿ ಸಾವಿರ ಬಗೆಯಾಗಿ ಮೈದೋರಿ ಬೆರಗುಗೊಳಿಸಿತು. ಕಂಡರಿಯದ ಕೇಳರಿಯದ ಆ ಸೌಂದರ‍್ಯದಲ್ಲಿ ನಿಸರ್ಗದ ಅನೇಕ ಮುಖಗಳ ಪರಿಚಯವಾಗಿತು. ಪ್ರಕೃತಿಯ ಸಾನಿಧ್ಯದಲ್ಲಿ ಕವಿ ಪಡೆದ ವಿವಿಧಾನುಭವಗಳೂ, ಪ್ರಕೃತಿ ಉಪಾಸನೆಯಲ್ಲಿ ಕವಿದರ್ಶಿಸಿದ ಪರಮಾನುಭವಗಳೂ ಕಾವ್ಯ ಸೌಂದರ‍್ಯವಾಗಿ ಅಭಿವ್ಯಕ್ತಿಯನ್ನು ಪಡೆದವು. ಪ್ರಕೃತಿಯನ್ನು ಕುರಿತ ಒಂದು ಬಗೆಯ ಚಿರಂತನ ದಾಹ, ಸೌಂದರ‍್ಯದ ಕಡಲಿನಲ್ಲಿ ಧುಡುಮ್ಮನೆ ಧುಮುಕಿ ರಸಪಾನ ಸ್ನಾನಗೈಯ್ಯುವ ಆ ಸಿದ್ಧಿ, ಇವುಗಳು ಕುವೆಂಪು ಅವರಲ್ಲಿ ತೀವ್ರತರವಾಗಿ ಅನುಭವಕ್ಕೆ ಬರುತ್ತವೆ. ಅವರ ಕಾವ್ಯಕ್ಕೆ ಪ್ರಕೃತಿ ಶ್ವಾಸಕೋಶವಾದರೆ, ಅಧ್ಯಾತ್ಮ ಮತ್ತೊಂದು ಶ್ವಾಸಕೋಶ. ಶ್ರೀ ರಾಮಕೃಷ್ಣ ಅರವಿಂದರು ತಿದ್ದಿದ ಅನುಭಾವ ದೃಷ್ಟಿ ಅದು ತೆರೆದು ತೋರಿರುವ ಚೆಲುವು ಇವರ ಎಲ್ಲ ಕವಿತೆಯ ಜೀವಾಳವಾಗಿದೆ. ಬೇಂದ್ರೆಯವರ ಕವಿತೆಯ ಉಗಮ ಜನ ಜೀವನದಿಂದ. ಕಡಲಿನಿಂದ ಎದ್ದ ಮುಗಿಲು, ಬೆಂದ ನೆಲದ ಮೇಲಾಡಿ ಹರ್ಷವರ್ಷವನ್ನು ಸುರಿಸುವಂತೆ ಇವರ ಕವಿತೆ. ಜೀವನ ಸೌಂದರ‍್ಯವನ್ನು – ಅದರಲ್ಲೂ ಬಾಳಿನ ಏಳು ಬೀಳುಗಳಲ್ಲಿ ಪಟ್ಟಪಾಡುಗಳನ್ನು ಜನಸಾಮಾನ್ಯದ ಆಡುಮಾತಿನಲ್ಲಿ ಹಾಡನ್ನಾಗಿ ಮಾಡಿ ನೀಡುವ ಮೋಡಿ ಇವರಿಗೆ ಕರಗತವಾಗಿದೆ. ಶ್ರೀ ಅರವಿಂದರ ಪ್ರಭಾವ ಇವರ ಅನುಭಾವ ಗೀತಗಳಲ್ಲಿ ಕಾಣುತ್ತದೆ. ಜನಸಂಗ ದೂರವಾದ ಪರ್ವತಾರಣ್ಯಗಳ ಚೆಲುವನ್ನು ಕುವೆಂಪು ಅವರು ತೆರೆದು ತೋರಿದರೆ, ಜನ ಜೀವನದ ಆಡುಂಬೊಲವಾದ ನಿಸರ್ಗದ ಚೆಲುವನ್ನು ಬೇಂದ್ರೆಯವರು ತೋರಿದ್ದಾರೆ, ಕುವೆಂಪು ಅವರ ಸೌಂದರ‍್ಯಾನುಭವದಲ್ಲಿ ಅಸ್ಪಷ್ಟತೆಯ ಮಬ್ಬಿಲ್ಲ; ಕಣ್ಕಟ್ಟಿಲ್ಲ. ಕವಿಯಾವ ಎತ್ತರಕ್ಕೇರಿದರೂ, ಆ ಏರುವೆ ಸ್ಪಷ್ಟವಾಗಿ ತೋರುತ್ತದೆ. ಆದರೆ ಬೇಂದ್ರೆಯವರಲ್ಲಾದರೋ ಬರೀ ಸಾನು ಪ್ರದೇಶ ದೃಗ್ಗೋಚರವಾದರೆ, ಅದರ ಶಿಖರ ಸದಾ ಅಸ್ಪಷ್ಟತೆಯ ಮಬ್ಬಿನಲ್ಲಿ ಮರೆಯಾಗಿರುತ್ತದೆ. ಇವರಿಬ್ಬರ ಅನುಭಾವ ಗೀತೆಗಳನ್ನೋದಿದರೆ ಈ ಅಂಶ ಸ್ಪಷ್ಟವಾಗುತ್ತದೆ. ಮತ್ತೊಬ್ಬ ಪ್ರಮುಖ ಕವಿ ಪು.ತಿ.ನ. ಅವರ ವಿಶಿಷ್ಟತೆಯೇ ಬೇರೆ. ಕುವೆಂಪು ಅವರಲ್ಲಿ ಸೌಂದರ‍್ಯವನ್ನು ಕುರಿತ ಧ್ಯಾನಶೀಲತೆಯೇ ರಸಾನುಭವದ ಉಗಮವಾದರೆ, ಪು.ತಿ.ನ. ಅವರಲ್ಲಿ ಚೆಲುವಿನ ಅನುಭವವನ್ನು ಕುರಿತ ಚಿಂತನಶೀಲತೆಯೇ ರಸಾನುಭವದ ಉಗಮವಾಗಿದೆ. ಪು.ತಿ.ನ. ಅವರು ಜಿಜ್ಞಾಸುವಾದ ಕವಿ. ಅವರಿಗೆ ವಸ್ತುವಿನ ಚೆಲುವು ಮನಸ್ಸಿನಲ್ಲಿ ಮಾಡುವ ಆನಂದಾನುಭವವಷ್ಟೆ ಕಾವ್ಯದ ವಸ್ತುವಲ್ಲ; ಆನಂದಾನುಭವದ ಚಿಂತನೆಯೂ ಇವರ ಕವಿತೆಯ ವಸ್ತು. ನಿಸರ್ಗವಾಗಲೀ, ಜೀವನವಾಗಲೀ, ಇವರಿಗೆ ಪ್ರಧಾನವಾಗಿ ಚಿಂತನೆಯ ವಸ್ತು. ಹಾಗೆ ಚಿಂತನಾಪ್ರಸೂತವಾದ ಆನಂದಾನುಭವವೇ ಇವರ ಕೃತಿಗಳಲ್ಲಿ ಮೂರ್ತಗೊಳ್ಳುತ್ತದೆ. ಈ ಚಿಂತನೆಯೆಲ್ಲ ಬಹು ಮಟ್ಟಿಗೆ ಕೊರಗಿನಲ್ಲಿ ವಿಷಾದದಲ್ಲಿ ನಿಲುಗಡೆಯಾಗಿರುವಂತೆ ತೋರುತ್ತದೆ. ಕುವೆಂಪು ಅವರಲ್ಲಿ ಉತ್ಸಾಹವೂ, ಪು.ತಿ.ನ. ಅವರಲ್ಲಿ ವಿಷಾದವೂ, ಬೇಂದ್ರೆಯವರಲ್ಲಿ ಉಲ್ಲಾಸವೂ ಸೌಂದರ‍್ಯಾನುಭವದ ಸ್ಥಾಯಿಯಾಗಿರುವಂತೆ ತೋರುತ್ತದೆ. ಕುವೆಂಪು, ಬೇಂದ್ರೆ ಅವರಲ್ಲಿ ರಾಮಕೃಷ್ಣ, ಅರವಿಂದರ ಪ್ರಭಾವವನ್ನು ಗುರುತಿಸಬಹುದು. ಈ ಮೂವರು ಕವಿಗಳ ರೀತಿ ಬೇರೆ ಬೇರೆಯಾದರೂ, ಗುರಿ ಒಂದೇ. ಜೀವನವನ್ನು ಕುರಿತು, ಸಾಮಾನ್ಯ ಜನತೆಯನ್ನು ಕುರಿತು ಅಲ್ಲಿರಬಹುದಾದ ಚಾರಿತ್ರ್ಯದ ಚೆಲುವನ್ನು ತೆರೆದು ತೋರಿದವರು ಕಥನ ಕವಿ ಶ್ರೀನಿವಾಸರು. ಇವರು ಪ್ರಧಾನವಾಗಿ ಕತೆಗಾರರು; ಅವರ ಕಥನದ ಚೆಲುವೂ ಮೆಚ್ಚುವಂಥದು. ಅಂತೆಯೇ ‘ಎಂಡಗುಡಕ’ ಪ್ರಪಂಚವನ್ನು ತೆರೆದು ತೋರಿದ ರಾಜರತ್ನಂ ಅವರ ವಿಶಿಷ್ಟತೆಯೂ ಚಿರಂತನವಾದುದು. ಇದರ ಜೊತೆಗೆ ಮನೆಯ ಹೊಸ್ತಿಲ ಒಳಗೆ ಮನೆಮಾಡಿದ ಸಂಸಾರದ ಸೌಂದರ‍್ಯವನ್ನು ತೆರೆದು ತೋರಿದ ಕೆ.ಎಸ್. ನರಸಿಂಹಸ್ವಾಮಿಯವರನ್ನು ಮರೆಯುವ ಹಾಗಿಲ್ಲ. ಇವರ ಕಾವ್ಯದ ನಯ, ನವುರು, ಕೌಶಲ – ಅಪೂರ್ವವಾದ ಸ್ನಿಗ್ಧ ಮಾಧುರ‍್ಯದಿಂದ ಮಲ್ಲಿಗೆಯ ಕಂಪಿನಂತೆ ಎದೆಯ ಬಾಗಿಲನ್ನು ತಟ್ಟುತ್ತದೆ. ಹೊಸಿಲಾಚೆಯ ನಗರ ನಾಗರಿಕತೆಯ ಗೊಂದಲವನ್ನು, ಅವ್ಯವಸ್ಥೆಯನ್ನು – ಕಾವ್ಯದ ಸೌಂದರ‍್ಯಾನುಭವದ ವಸ್ತುವಾಗಿಸಲು ಪ್ರಯತ್ನಿಸುತ್ತಿದ್ದಾರೆ ನಮ್ಮ ನವ್ಯ ಕವಿಗಳು. ಬೇರೊಂದು ನೂತನ ಸೃಷ್ಟಿಯ ಹಂಬಲ ಇವರೆದೆಯಲ್ಲಿ ತುಡಿಯುತ್ತಿದೆ. ನಿಂತಲ್ಲೆ ನಿಲ್ಲದೆ ಹೊಸತೊಂದನ್ನು ಹಿಡಿಯುವ ಕಾತರ ಇವರಲ್ಲಿ ಮೂಡಿರುವುದು ಒಂದು ಒಳ್ಳೆಯ ಸೂಚನೆ.

ನವೋದಯದ ಕವಿಗಣ ಈ ಮೂವತ್ತು ನಾಲ್ವತ್ತು ವರುಷಗಳಲ್ಲಿಯೇ ಆಂಗ್ಲ ಸಾಹಿತ್ಯ ನೂರಾರು ವರ್ಷಗಳಲ್ಲಿ ಸಾಧಿಸಿದ್ದನ್ನು ಸಾಧಿಸಿದೆ ಎಂದರೆ ಅದು ಉತ್ಪ್ರೇಕ್ಷೆಯ ಮಾತಲ್ಲ. ಕೆಲವು ಮುಖಗಳಲ್ಲಿಯಂತೂ ಆಂಗ್ಲಸಾಹಿತ್ಯ ಕಾಣದ ಎತ್ತರ – ಆಳಗಳನ್ನು ಅದು ಸ್ಪರ್ಶಿಸಿದೆ ಎನ್ನಲು ಹಿಂಜರಿಯಬೇಕಾಗಿಲ್ಲ. ಈ ಕಾವ್ಯ ಸೃಷ್ಟಿಯ ಸರಿಯಾದ ವಿಮರ್ಶೆಯಾಗಲೀ, ಮೌಲ್ಯ ನಿರ್ಣಯವಾಗಲಿ ತುಂಬ ಕಷ್ಟ. ಏಕೆಂದರೆ ನಮ್ಮಲ್ಲಾಗಿರುವ ಕಾವ್ಯಸೃಷ್ಟಿಯ ಆಸ್ವಾದನಕ್ಕೆ ತಕ್ಕ ‘ಸಹೃದಯ ಸೃಷ್ಟಿ’ ಈಗಾಗಲೇ ಆಗಿದೆ ಎಂದು ಧೈರ್ಯವಾಗಿ ಹೇಳಿಕೊಳ್ಳುವಂತಿಲ್ಲ. ಅನಂತರ ವಿಮರ್ಶನ ದೃಷ್ಟಿ ಉದಯವಾಗಿ ಇದರಲ್ಲಿ ಜಳ್ಳೆಷ್ಟು ಕಾಳೆಷ್ಟು ಎನ್ನುವುದನ್ನು ಕೇರಿ ತೂರಿ ನೋಡಬೇಕಾಗಿದೆ. ಆದುದರಿಂದ ಮೊದಲು ಈ ಸಾಧನೆಯ ಮುಖಗಳ ಪರಿಯ ಅಗತ್ಯವಷ್ಟೇ ಅಲ್ಲ, ಅನಿವಾರ‍್ಯವೂ ಹೌದು – ರಸವಿಮರ್ಶಕರಿಗೆ.

* * *


[1] Monior Williams : Sanskrit – English Dictionary  p. 754.

[2] ಸೌಂದರ‍್ಯಾನುಭವ ಎಂದರೆ ಕೇವಲ ಆಹ್ಲಾದಕಾರಿಯಾದ, ಸಂತೋಷಕಾರಿಯಾದ ಅನುಭವ ಎಂದಲ್ಲ. ಹರ್ಷವಾಗಲೀ ಶೋಕವಾಗಲೀ, ಏನೇ ಆಗಲಿ, ರಸತ್ವಕ್ಕೇರಿದರೆ ಅದು ಸೌಂದರ‍್ಯಾನುಭವವೇ.