ಪುಟ್ಟ ಮನೆ. ಮೇಲೆ ದಟ್ಟೈಸಿ ಕವಿದಿವೆ ಮೋಡ.
ಒಡಲೊಳಗೆ ದೂರದ ಗುಡುಗು. ಸೋ ಎಂದು ಸುರಿದ
ಸೋನೆಯ ಮಳೆಗೆ ದಾರಿಯೆಲ್ಲಾ ಕೆಸರು. ಹಸಿರು
ಮುಸುಕಿರುವ ಕೊಂಬೆ ತೊಟ್ಟಿಲಿನೊಳಗೆ ಪವಡಿಸಿವೆ
ಪಕ್ಷಿ. ಈ ಮನೆಯೊಳಗೆ ಸಣ್ಣಗೆ ಉರಿವ ಹಣತೆಯ
ಬೆಳಕು. ಹೊಸ ಹರೆಯದವರಿಬ್ಬರೇ ಕೂತು ಸುಖ
ಸಲ್ಲಾಪ ನಡಸಿದ್ದಾರೆ. ಅವನು ಕವಿ, ಅವಳವನ
ಮುದ್ದಿನ ಮಡದಿ. ಅವಳ ಕಥಾ ಕುತೂಹಲಕ್ಕೆ
ಹಣತೆ ಬೆಳಕಿನ ಒಳಗೆ ತೆರೆದುಕೊಳ್ಳುತ್ತಲಿದೆ
ತ್ರೇತಾಯುಗದ ಸೀತಾಪರಿತ್ಯಾಗದದ್ಭುತ
ಕರುಣ ಕಥೆ. ಬರಿ ಕಥೆಯೆ? ಪಟ್ಟಪಾಡಿನ ಪ್ರತಿಮೆ.
ಕವಿ-ರಸಿಕರಿಬ್ಬರೂ ಬೆಳೆದ ಪ್ರತಿಭೆಯ ದುಡಿಮೆ.
ಕತೆ ಮುಗಿವ ಹೊತ್ತಿಗೆ ಬೆಳಗು, ಇರುಳಿಗೆ ವಿದಾಯ.
ಹೊಸ್ತಿಲ ಹೊರಗೆ ಹೊಚ್ಚ ಹೊಸದನಿಯ ನವೋದಯ!