ಮೂಡುವನದೊ ಈ ಹೊಸವರುಷದ ರವಿ
ಹೊಂಗಿರಣದ ನವರಂಗಿನಲಿ
ಪೂರ್ವದಿಗಂಚಲ ಚಂಚತ್ಕಾಂಚನ
ಸರಸಿಯ ಸ್ವರ್ಣಸುಪೂರದಲಿ.

ಮಂಜಿನ ಮೋಹರ ಹಿಂಜರಿದಿದೆ, ಆ
ರವಿಕರಸ್ಪರ್ಶಾಘಾತದಲಿ
ಹೊಸ ಚೈತನ್ಯದ ಹಾಲ್ ತುಳುಕಾಡಿದೆ
ಸೃಷ್ಟಿಯ ಹೃದಯದ ಪಾತ್ರೆಯಲಿ.

ಹಳೆಬಾಳಿನ ಹಳೆಜಡತೆಯು ಮುಳುಗಿತು
ಹಳೆಸಂಜೆಯ ಗೋಧೂಳಿಯಲಿ
ಹೊಸಬಾಳಿನ ಹೊಸಚೇತನವರಳಿದೆ
ಚೈತ್ರೋದಯ ಸುಮಹೃದಯದಲಿ.

ಬಗ್ಗಿಪ ಸುಗ್ಗಿಯ ಕೋಗಿಲೆಯುಲಿಯಲಿ
ನವೀನ ಸ್ಫೂರ್ತಿಯು ಚಿಮ್ಮುತಿದೆ
ಕವಿಹೃದಯದ ನವ ಸುಮಧುರಪೂರದಿ
ಯುಗ ಯುಗಗಳು ಮಿಂದೇಳುತಿವೆ.