‘New Historicism’ ಎಂಬ ಈ ಪರಿಕಲ್ಪನೆಯನ್ನು  ಕನ್ನಡದಲ್ಲಿ ‘ನವ ಚಾರಿತ್ರಿಕ ವಾದ’ ಎಂಬ ಹೆಸರಿನಿಂದ ಕರೆಯಲಾಗುತ್ತಿದೆ. ಆದರೆ ಈ ಪರಿಕಲ್ಪನೆ ಇದ್ದಕ್ಕಿದ್ದ ಹಾಗೆ ಹುಟ್ಟಿಕೊಂಡಿದ್ದಲ್ಲ. ಇದಕ್ಕೆ ತನ್ನದೇ ಆದ ಹಿನ್ನೆಲೆ ಹಾಗು ನಡೆದು ಬಂದ ಹಾದಿಯ ಚರಿತ್ರೆ ಇದೆ. ವಿದ್ವಾಂಸರಲ್ಲಿ ಈ ಕುರಿತು ಒಂದೇ ಮಾತಿನ ಉತ್ತರವಿಲ್ಲ. ಆದರೆ ಇದರ ಪ್ರಕ್ರಿಯೆಯ ಬಗ್ಗೆ ಚರಿತ್ರಕಾರರಲ್ಲಿ ಯಾವುದೇ ಅನುಮಾನಗಳು ಇದ್ದಂತೆ ಇಲ್ಲ. ಬಹುಶಃ ಈ ಹಿನ್ನೆಲೆಯಲ್ಲಿಯೇ ಜಗತ್ತಿನ ವಿವಿದೆಡೆಗಳಲ್ಲಿ ‘ನವ ಚಾರಿತ್ರಿಕವಾದ’ವು ಭಿನ್ನ ಸ್ವರೂಪ ಗಳಲ್ಲಿ ಇತ್ತು ಎಂಬುದನ್ನು ವಿದ್ವಾಂಸರು ವಿಶ್ಲೇಷಿಸಲು ಪ್ರಯತ್ನಿಸಿದ್ದಾರೆ. ಕಳೆದ ಶತಮಾನದ ಮಧ್ಯಭಾಗದಲ್ಲಿ ಮಾರ್ಕ್ಸ್‌ವಾದಿ ಸೈದ್ಧಾಂತಿಕತೆಯಲ್ಲಿ ಉಂಟಾದ ತಲ್ಲಣ, ಸಂಘರ್ಷಗಳಿಂದ ಹೊಸ ಬಗೆಯ ಚಿಂತನಾಧಾರೆಗಳು ಹುಟ್ಟಿಕೊಂಡವು. ಅಂಥ ಚಿಂತನಾಧಾರೆಗಳಲ್ಲಿ ನವ ಚಾರಿತ್ರಿಕವಾದದ ಚಿಂತನಾ ನೆಲೆಯೂ ಒಂದು.

ಸಾಂಪ್ರದಾಯಿಕ ಚಿಂತನೆಗಳು ಅನೇಕ ಪ್ರಶ್ನೆಗಳಿಗೆ ಉತ್ತರ ಕೊಡಲಾಗದ ಹಂತದಲ್ಲಿ ಮಾರ್ಕ್ಸ್‌ವಾದವೂ ಸಹ ಸಮಸ್ಯೆಗೆ ಸಿಲುಕಿತು. ಸಂರಚನಾವಾದಿ (Constructulist) ಹಾಗೂ ನಿರಚನಾವಾದಿ (De-Constructulist) ಚಿಂತಕರು ಸಹ ತಮ್ಮದೇ ಆದ ಸೈದ್ಧಾಂತಿಕ ಸಂಘರ್ಷಗಳಲ್ಲಿ ತಲ್ಲೀನರಾಗುವಂತೆ ಆಯಿತು. ಹೊಸದಾಗಿ ಹುಟ್ಟಿಕೊಂಡಿದ್ದ ರಾಚನಿಕೋತ್ತರವಾದವೂ ಅಂಥ ಭರವಸೆಯನ್ನೇನೂ ಮೂಡಿಸಿರಲಿಲ್ಲ. ಆಗ ‘ನವ ಚಾರಿತ್ರಿಕ ವಾದ’ವು ತನ್ನ ಟಿಸಿಲುಗಳನ್ನು ಒಡೆದುಕೊಂಡು ‘ಹೊಸ ಸಾಂಸ್ಕೃತಿಕ ಚರಿತ್ರೆ’ಯ ಹೆಸರಿನಲ್ಲಿ ಹುಟ್ಟಿಕೊಂಡಿತು.

ಕಳೆದ ಶತಮಾನದ ಎಪ್ಪತ್ತರ ದಶಕದ ವೇಳೆಗೆ ಒಂದು ಬಗೆಯ ಐಡಿಯಾಲಾಜಿಗಳ ಸಂಕೀರ್ಣತೆ ಕಾಣಿಸಿಕೊಂಡಿತು. ಫ್ರಾಂಕ್ ಲಿನ್ಟ್ರಿಚಿಯಂಥ ರೂಪನಿಷ್ಟ ವಿಮರ್ಶಕರೂ ಸಹ ಏಕಮುಖಿಯಾದ ಐತಿಹಾಸಿಕ ಧೋರಣೆಗಳಿಗೆ ಬೆಂಬಲಿಸಿದ್ದೇ ಹೆಚ್ಚು. ತನ್ನ ‘ಆಫ್ಟರ್ ದಿ ನ್ಯೂ ಕ್ರಿಟಿಸಿಸಂ’ ಕೃತಿಯು ಇತಿಹಾಸ ವಿರೋಧಿ ನೆಲೆಯಿಂದಲೇ ಹೊರಟದ್ದು. ಕ್ರೈಸ್ತಧರ್ಮ ಪ್ರಭಾವಿತ ಇತಿಹಾಸದ ತತ್ವಗಳಿಗೆ ಹೇಗೆ ಪ್ರಭಾವಿತರಾಗಿದ್ದರೋ ಹಾಗೆಯೇ ಜಡ ಮಾರ್ಕ್ಸ್‌ವಾದಿ ಇತಿಹಾಸಕ್ಕೂ ಜೋತುಬಿದ್ದಿದ್ದರು. ಇದನ್ನೇ ‘ಮೀರಲಾಗದ ದಿಗಂತ’ ಮೊದಲಾದ ಬರೆಹಗಳಲ್ಲಿ ಫೆಡ್ರಿಕ್ ಜೇಮ್ಸನ್ ಪ್ರಪಾದಿಸಿರುವುದು. ರಾಚನಿಕೋತ್ತರ ಕಾಲಘಟ್ಟದ ಚಿಂತನೆಗಳು ‘ಪುನರುಜ್ಜೀವನ’ (ರೆನೈಸಾನ್ಸ್), ಮಾರ್ಕ್ಸಿಸ್ಟೋತ್ತರ, ಸಂಸ್ಕೃತಿ ಮೀಮಾಂಸಾ ಚರಿತ್ರೆಯ ತತ್ವಗಳನ್ನು ಹುಟ್ಟುಹಾಕಿದವು. ಈ ಘಟ್ಟದಲ್ಲಿಯೆ ಹೊಸ ಬಗೆಯಲ್ಲಿ ಇತಿಹಾಸವನ್ನು ನೋಡಲು ಬಯಸುವ ವಿದ್ವಾಂಸರು ಒಂದುಗೂಡುವಂತೆ ಆಗಿದ್ದು. ಪಕ್ವಗೊಂಡ ಈ ಕಾಲಘಟ್ಟ ಏಕಮುಖಿ ನೆಲೆಯ ‘ಇತಿಹಾಸ’ವನ್ನು ಸೃಷ್ಟಿಸುವು ದಕ್ಕಿಂತ ಬಹುಮುಖಿ ನೆಲೆಯ ‘ಇತಿಹಾಸಗಳು’ ಎಂದು ಕರೆಸಿಕೊಳ್ಳುವಲ್ಲಿ ತಯಾರಿ ನಡೆಸಿತ್ತು.

ಇಂಥ ಹಿನ್ನೆಲೆಗಳಲ್ಲಿ ಅಂದರೆ ೧೯೮೦ರ ದಶಕದ ಆರಂಭದಲ್ಲಿ ಹಿಂದಿನ ಎಲ್ಲ ಬಗೆಯ ಸಂಪ್ರದಾಯಬದ್ಧ ಮನೋ-ಚಿಂತನೆಗಳಿಗೆ ಹೊಸ ಆಲೋಚನ ಕ್ರಮದ ಪ್ರತಿರೋಧಗಳು ಕಾಣಿಸಿಕೊಂಡವು. ಒಂದು ಬಗೆಯ ಚಳವಳಿ ಸ್ವರೂಪದ ಈ ಪ್ರತಿಕ್ರಿಯೆ, ಪ್ರತಿರೋಧಗಳಿಗೆ ಜಗತ್ತಿನ ಚರಿತ್ರಕಾರರು ಒಂದುಗೂಡುವುದರ ಮುಖೇನ ಸ್ಪಂದಿಸತೊಡಗಿದರು. ಹೈಡೆನ್ ವೈಟ್ ರಂಥ ಚರಿತ್ರಕಾರರು ಈ ಚಳವಳಿಯ ಮುಂಚೂಣಿಯಲ್ಲಿದ್ದು ತಾವು ಪ್ರಪಾದಿಸಿದ ಚಾರಿತ್ರಿಕಾಂಶಗಳಿಗೆ ‘ಹೊಸ ಸಾಂಸ್ಕೃತಿಕ ಚರಿತ್ರೆ’(New cultural history)ಯ ಹೆಸರಿನ ಮೂಲಕ ಗುರುತಿಸಿಕೊಳ್ಳುವಂತೆ ಮಾಡಿದರು. ಪ್ರಾನ್ಸಿನಲ್ಲಿಯೂ ಲಿನ್ ಹಂಟ್, ಧಾಮಸ್ ಲಾಕ್ವಿಯರ್ ಮೊದಲಾದವರು ಈ ಪಂಥದ ಚರಿತ್ರಕಾರರೊಂದಿಗೆ ಕಾಣಿಸಿಕೊಳ್ಳುವಂತೆ ಆಯಿತು.

ರೋಜರ್ ಕಾರ್ಟಿಯರ್‌ನಂತೂ ಮೂಲಭೂತವಾದಿತನದ ಚರಿತ್ರೆಯ ಆಶಯಗಳನ್ನು ಪ್ರಶ್ನಿಸಲಾರಂಭಿಸಿದ. ಹೊಸ ತಂತ್ರದ ಪರಿಕರ, ವಿಧಾನಗಳು ಹಿಂದಿನದೆಲ್ಲವನ್ನೂ ವಿಭಿನ್ನ ನೆಲೆಗಳಲ್ಲಿ ವಿಶ್ಲೇಷಿಸುವಂಥ ಸ್ಥಿತ್ಯಂತರಗಳಾದವು. ಈ ಬಗೆಯ ಪ್ರಭಾವ, ಪರಿಣಾಮಗಳು ಭಿನ್ನ ಬಗೆಯಲ್ಲಿ ಬೇರೆ ಬೇರೆ ಜ್ಞಾನಶಿಸ್ತುಗಳ ಮೇಲೆ ಹಾಗೂ ವಿದ್ವಾಂಸರನ್ನು ಗಮನ ಸೆಳೆಯುವಂತೆ ಮಾಡಿದ್ದವು. ಮಾರ್ಕ್ಸ್‌ವಾದಿ ಸೈದ್ಧಾಂತಿಕ ನೆಲೆಗಳಲ್ಲಿಯೆ ಒಂದು ಬಗೆಯ ಸಾಂಸ್ಕೃತಿಕ ನಿಲುವುಗಳು ಅನಾವರಣಗೊಂಡದ್ದು ಗಮನಾರ್ಹ. ಎಂಭತ್ತರ ದಶಕದಲ್ಲಿಯೆ ಈ. ಪಿ.ಧಾಂಪ್ಸನ್, ರೇಮಂಡ್ ವಿಲಿಯಂಸ್‌ರಂಥ ಖ್ಯಾತ ವಿದ್ವಾಂಸರು ‘Cultural materialism’ ಎಂಬ ಪರಿಕಲ್ಪನೆಯ ಮೂಲಕ ಗುರುತಿಸಿಕೊಳ್ಳುವಂತೆ ಆಯಿತು. ೧೯೨೦ರ ದಶಕದಲ್ಲಿ ಫ್ರಾನ್ಸಿನ ‘ಆನಲ್ಸ್ ಪಂಥ’ದ ಹುಟ್ಟಿಗೆ ಕಾರಣರಾಗಿದ್ದ ಮಾರ್ಕ್‌ಬ್ಲಾಕ್ ಹಾಗೂ ಫೇಬರ್‌ರಂಥ ಖ್ಯಾತ ಇತಿಹಾಸತಜ್ಞರ ಅನುಯಾಯಿಗಳು ಸಹ ಈ ಹೊಸ ಸಾಂಸ್ಕೃತಿಕ ಚರಿತ್ರೆಗೆ ಮಾರುಹೋದರು. ಈ ಬಗೆಯ ಚರಿತ್ರೆಯು ಫುಕೋನ ಚಿಂತನೆ ಗಳಿಂದಲೂ ವಿಸ್ತೃತವಾಯಿತು. ಅಂತೆಯೇ ಸಾಹಿತ್ಯ ತತ್ವಚಿಂತಕರಾದ ಜಾಕ್ಯೂಸ್ ಡೆರಿಡಾ ಹಾಗೂ ಮಿಖಾಯಿಲ್ ಭಕ್ತಿನ್, ಹೈಡೆನ್ ವೈಟ್‌ರಂಥವರಿಂದಲೂ ಹೊಸ ಸಾಂಸ್ಕೃತಿಕ ಚರಿತ್ರೆಯ ಚಹರೆಗಳು ಅನಾವರಣಗೊಂಡದ್ದು ಗಮನಾರ್ಹ. ಅನೇಕ ಚರಿತ್ರಕಾರರು ನವ ಚಾರಿತ್ರಿಕವಾದ ಅಥವಾ ಹೊಸ ಸಾಂಸ್ಕೃತಿಕ ಚರಿತ್ರೆಯ ಪಂಥವನ್ನು ಪ್ರತಿನಿಧಿಸಿದರು. ಅದೇ ರೀತಿಯಲ್ಲಿ ಸಾಹಿತ್ಯ ಚಿಂತಕರು ಸಹ ಸಾಂಸ್ಕೃತಿಕ ಅಧ್ಯಯನದ ನೆಲೆಗಳಲ್ಲಿ ಕಾಣಿಸಿಕೊಳ್ಳುವಂತೆ ಆಯಿತು. ೧೯೮೨ರ ವೇಳೆಗೆ ಸ್ಟೀಫನ್ ಗ್ರೀನ್ ಬ್ಲಾಟ್ ಮೊಟ್ಟಮೊದಲ ಬಾರಿಗೆ ‘ನವ ಚಾರಿತ್ರಿಕವಾದ’ ಎಂಬ ನಿಖರವಾದ ಪರಿಕಲ್ಪನೆಯನ್ನೇ ಹುಟ್ಟು ಹಾಕಿದ್ದು ಗಮನಾರ್ಹ ಸಂಗತಿ.

ಸಾಹಿತ್ಯ ಮತ್ತು ಚರಿತ್ರೆಯ ವಿದ್ವಾಂಸರಿಂದ ರೂಪುತಳೆದ ಈ ಹೊಸ ಪರಿಕಲ್ಪನೆ ಅನ್ಯಜ್ಞಾನ ಶಿಸ್ತುಗಳಿಗೆ ಅಳವಡಿಕೆ ಆಗುವ ಮುನ್ನವೇ ಕೆಲವು ಅನುಮಾನ, ವಿವಾದಗಳಿಗೂ ಎಡೆಮಾಡಿಕೊಟ್ಟಿತು. ಆ ಮೊದಲಿಗೆ ಈ ಎರಡು ಜ್ಞಾನ ಶಾಖೆಗಳವರು ಪರಸ್ಪರ ‘ಅಹಂ’ ಹಾಗೂ ‘ಕೀಳರಿಮೆ’ಗಳ ಮುಖೇನ ನವ ಚಾರಿತ್ರಿಕವಾದದ ತಿರುಳನ್ನೇ ಅರ್ಧ ಮಾಡಿ ಕೊಳ್ಳುವಲ್ಲಿ ಸೋತದ್ದು ಉಂಟು. ಅಂದರೆ ಚರಿತ್ರಕಾರರಿಗೆ ಸಾಹಿತ್ಯ ನೆಲೆಯವರು ತಮ್ಮನ್ನು ತಾವು ‘ನವ ಚರಿತ್ರಕಾರ’ರೆಂದು ಗುರುತಿಸಿಕೊಳ್ಳುವುದು ಎಷ್ಟರಮಟ್ಟಿಗೆ ಸರಿ ಎಂಬ ಅನುಮಾನ ಕಾಡಿತು. ಕತೆ, ಕಾವ್ಯ, ಕಾದಂಬರಿ, ನಾಟಕ ಮೊದಲಾದ ಸಾಹಿತ್ಯಕ ಪರಿಕರಗಳಿಂದ ಹಾದು ಹೋಗುವ ಸಾಹಿತ್ಯ ವಿಮರ್ಶಕರು ಸಾಹಿತ್ಯೇತರ ಅದರಲ್ಲೂ ಭಿನ್ನ ಬಗೆಯ ಚರಿತ್ರೆಯ ಪಠ್ಯಗಳನ್ನು ವಿಶ್ಲೇಷಿಸುವುದರ ಔಚಿತ್ಯವನ್ನು ಪ್ರಶ್ನಿಸಿದರು. ಅಂತೆಯೇ ಸಾಹಿತ್ಯ ವಿಮರ್ಶಕರೂ ಸಹ ಸಾಹಿತ್ಯ ಕೃತಿ ಅಥವಾ ಇನ್ನಾವುದೇ ಪಠ್ಯವೊಂದನ್ನು ಭಿನ್ನವಾಗಿಸಿ (ಪ್ರತ್ಯೇಕಿಸಿ) ನೋಡಲು ಸಾಧ್ಯವಿದೆಯೇ ಎಂಬ ತಕರಾರು ತೆಗೆದರು. ಅಲ್ಲದೆ ಸಾಹಿತ್ಯ, ಸಮಾಜ, ಭಾಷೆ, ಸಂಸ್ಕೃತಿ ಸಂಗತಿಗಳನ್ನು ಚಾರಿತ್ರಿಕ ಸಂದರ್ಭವೊಂದಕ್ಕೆ ಮೇಳೈವಿಸಿ ನೋಡಲಾಗದೆ, ಸಂವಾದಿ ರೂಪಿಯಾಗಿ ಅನುಭವ-ಅನುಭೂತಿಗಳನ್ನು ಹೊಂದದೆ ಹೇಗೆತಾನೆ ಸಾಂಸ್ಕೃತಿಕ ಸಂರಚನೆಗಳ ಮೊತ್ತವಾಗಿ ಚರಿತ್ರಕಾರರು ಫಲಿತಗಳನ್ನು ಪಡೆಯಲು ಸಾಧ್ಯ ಎಂಬ ಪ್ರಶ್ನೆಗಳನ್ನು ಹಾಕಿದರು. ಇದರಿಂದ ಸಾಹಿತ್ಯ-ಚರಿತ್ರೆಗಳೊಂದಿಗೆ ಬೆರೆತು ಹೋಗಿರುವ ನವ ಚಾರಿತ್ರಿಕವಾದದ ಅರ್ಧ-ವ್ಯಾಖ್ಯಾನಗಳು ಈ ಎರಡೂ ಪಂಥದವರ ಪ್ರತ್ಯೇಕಿಸಿ ನೋಡುವ ಚಿಂತನೆಗಳು ಎಷ್ಟರಮಟ್ಟಿಗೆ ಅರ್ಧಹೀನವಾದುವು ಎಂಬುದನ್ನು ಸಾಬೀತು ಮಾಡುವಂತೆ ಆಯಿತು. ಆದ್ದರಿಂದಲೇ ‘ನವ ಚಾರಿತ್ರಿಕವಾದ’ದ ಚಿಂತನೆಗಳು ಇನ್ನುಳಿದ ಜ್ಞಾನಶಾಖೆಗಳಲ್ಲೂ ಹೊಸ ಪ್ರಯೋಗಶೀಲತೆಗಳನ್ನು ಹೊಂದುವುದರ ಜೊತೆಗೆ ಗಂಭೀರ ವಾದ ಚರ್ಚೆಗಳಿಗೆ ಎಡೆಮಾಡಿಕೊಟ್ಟದ್ದು.