ನವ ಚಾರಿತ್ರಿಕವಾದಿಗಳು ಕಾಲದಿಂದ ಕಾಲಕ್ಕೆ ಹೊಸ ಚಿಂತನೆಗಳ ಮೂಲಕ ಪ್ರತಿಕ್ರಿಯಿಸುತ್ತಾ ಬಂದಿದ್ದಾರೆ. ಈ ಪ್ರತಿಕ್ರಿಯೆ ಸಾಹಿತ್ಯದ ಸ್ವರೂಪ, ಚರಿತ್ರೆಯನ್ನು ಗ್ರಹಿಸುವ ಕ್ರಮ, ಮಾನವನ ಸ್ವಭಾವಕ್ಕೆ ಸಂಬಂಧಿಸಿದಂತೆ, ಓದುಗ ವರ್ಗವನ್ನು ಕುರಿತು ಹಾಗೂ ವಿಮರ್ಶೆಯ ವಿಧಿ-ವಿಧಾನದ ಸ್ವರೂಪಗಳನ್ನು ಕುರಿತು ನಡೆಸಿದ ಚಿಂತನೆಗಳೇ ಆಗಿವೆ. ಅವುಗಳನ್ನು ಪ್ರತ್ಯೇಕವಾಗಿ ಪರಿಶೀಲಿಸಬಹುದು.

. ಸಾಹಿತ್ಯವನ್ನು ಗ್ರಹಿಸುವ ಬಗೆ

ಸಾಹಿತ್ಯವನ್ನು ಕೇವಲ ಸೌಂದರ್ಯಾತ್ಮಕ (Easthetic) ಪರಿಧಿಗಳಲ್ಲಿಯೇ ನೋಡುವ ಜರೂರು ಇಲ್ಲ. ಸಾಹಿತ್ಯ ಕೃತಿಯೂ ಒಂದು ಪಠ್ಯವೇ ಆಗಿರುವುದರಿಂದ ಅದನ್ನು ಇನ್ನಿತರ ಪಠ್ಯಗಳಿಂದ ಹೊರತುಪಡಿಸಿ ನೋಡಲು ಬರುವುದಿಲ್ಲ. ಧರ್ಮ, ತತ್ವ, ಚರಿತ್ರೆ, ವಿಜ್ಞಾನ, ಕಾನೂನು ಮೊದಲಾದ ಜ್ಞಾನಶಾಖೆಗಳಂತೆಯೇ ಸಾಹಿತ್ಯಕ ಪಠ್ಯವೂ ನಿಗದಿತ ಕಾಲ, ಪ್ರದೇಶಗಳ ಸನ್ನಿವೇಶಗಳಿಗೆ ಬದ್ಧವಾಗಿಯೇ ಇರುತ್ತದೆ. ಹೀಗಾಗಿ ಆಯಾ ಕಾಲಘಟ್ಟದ ಆರ್ಧಿಕತೆ, ಸಮಾಜ, ರಾಜಕಾರಣ ಹಾಗೂ ಸಂಸ್ಕೃತಿ ಕೇಂದ್ರಿತ ವಿಚಾರಗಳಿಂದ ಸಾಹಿತ್ಯದ ಸ್ವರೂಪವನ್ನು ಅಥವಾ ಕಲಾತ್ಮಕ ಮೌಲ್ಯಗಳನ್ನು ಗುರುತಿಸಲು ಸಾಧ್ಯ ಆಗುವುದಿಲ್ಲ. ಅಲ್ಲದೆ ಸಾಹಿತ್ಯದ ಪಠ್ಯವನ್ನು ವಿಶೇಷವಾಗಿಯೋ ಅಥವಾ ಅನನ್ಯವಾಗಿಯೋ ನೋಡುವ ನೋಟವನ್ನು ನವ ಚರಿತ್ರಕಾರರು ಒಪ್ಪುವುದಿಲ್ಲ.

ಸಾಂಪ್ರದಾಯಿಕ ಕ್ರಮಗಳಿಂದ ಸಾಹಿತ್ಯದ ಸ್ವರೂಪವನ್ನು ಗ್ರಹಿಸುವ ಪರಿಪಾಠವನ್ನು ಇವರು ಒಪ್ಪದೆ, ಸಾಹಿತ್ಯವು Homogenius ಆದುದೆಂದು, ಸ್ವತಂತ್ರ ಘಟಕವೆಂದೂ, ಪರಿಪೂರ್ಣವಾದುದೆಂದೂ ಭಾವಿಸುವುದಿಲ್ಲ. ಇದನ್ನು ತಿರಸ್ಕರಿಸುವ ನವಚಾರಿತ್ರಕಾರರು ಸಾಹಿತ್ಯವು ವಾಸ್ತವತೆಯ ಪ್ರತಿರೋಧಗಳನ್ನು ಕಲಾತ್ಮಕವಾಗಿ ಬಗೆಹರಿಸಿಕೊಳ್ಳಬಲ್ಲದು ಎಂಬುದನ್ನು ಅಲ್ಲಗಳೆಯುತ್ತಾರೆ. ಇಂಥ ನೆಲೆಗಳಿಂದ ಹೊರಡುವ ನಂಬಿಕೆ, ವಿಮರ್ಶಾ ಸ್ವರೂಪವನ್ನು ನವ ಚರಿತ್ರಕಾರರು ಪ್ರಶ್ನಿಸಿ ತಿರಸ್ಕರಿಸಿದರು.

ನವ ಚರಿತ್ರಕಾರರು ಸಾಹಿತ್ಯ ಪಠ್ಯವು ಸೃಷ್ಟಿಯಾದ ಸನ್ನಿವೇಶದಲ್ಲಿ ವೈವಿಧ್ಯಮಯವಾದ ಧ್ವನಿಗಳನ್ನು ಅಂತರ್ಗತ ಮಾಡಿಕೊಂಡೇ ಹುಟ್ಟಿರುತ್ತದೆ ಎನ್ನುತ್ತಾರೆ. ಈ ಧ್ವನಿಗಳು ಆಯಾ ಸನ್ನಿವೇಶಕ್ಕೆ, ಕೆಲವು ಪ್ರತಿರೋಧಗಳಿಗೆ ಕಲಾತ್ಮಕ ಪರಿಹಾರಗಳನ್ನು ಸೂಚಿಸುವುದರ ಮುಖೇನ ತಾತ್ಕಾಲಿಕ ಸಂತಸವನ್ನುಂಟು ಮಾಡಿರುತ್ತವೆ. ಇಂಥ ಮರೆಮಾಚಿದ ಸಂಘರ್ಷಾ ತ್ಮಕ ಅಲಕ್ಷಿತ ಧ್ವನಿಗಳನ್ನು ಗುರುತಿಸುವುದೇ ನವ ಚರಿತ್ರಕಾರರ ಸಾಹಿತ್ಯಕ ಸ್ವರೂಪದ ನಿಲುವು.

ಜಾತಿ, ಲಿಂಗ, ವರ್ಗ, ಪ್ರಭುತ್ವ ಮೊದಲಾದವುಗಳ ಆಕ್ರಮಣಶೀಲತೆಗಳನ್ನು ಸಾಹಿತ್ಯದ ಪಠ್ಯವು ಅನಾವರಣಗೊಳಿಸುವ ಸಾಮರ್ಧ್ಯವನ್ನು  ಹೊಂದಿರುತ್ತದೆ. ಅದನ್ನು ಗ್ರಹಿಸಲು ಹೊಸ ಬಗೆಯ ದೃಷ್ಟಿ, ಅನುಭವಜನ್ಯ ಗ್ರಹಿಕೆಗಳನ್ನು ನವ ಚರಿತ್ರಕಾರರು ಪ್ರಪಾದಿ ಸುತ್ತಾರೆ.

. ಚರಿತ್ರೆಯನ್ನು ಗ್ರಹಿಸುವ ಕ್ರಮ

ಚರಿತ್ರೆಯ ನಿರಂತರತೆಯನ್ನು ಪ್ರಪಾದಿಸುವ ನವ ಚರಿತ್ರಕಾರರು ಹಿಂದಿನ ಜಡ್ಡುಗಟ್ಟಿದ ಮಾರ್ಕ್ಸ್‌ವಾದಿ ನಿಲುವುಗಳನ್ನು ತಿರಸ್ಕರಿಸುತ್ತಾರೆ. ಗತಕಾಲದ ಸತ್ಯ ಮತ್ತು ವಾಸ್ತವತೆಯ ಸಂಗತಿಗಳ ಮೊತ್ತವನ್ನಾಗಿ ಚರಿತ್ರೆಯ ವಿನ್ಯಾಸವನ್ನು ಇವರು ಒಪ್ಪುವುದಿಲ್ಲ. ಚರಿತ್ರೆಯನ್ನು ನೈಜ ಚಿತ್ರಣವೆಂತಲೂ, ಸಾಹಿತ್ಯವನ್ನು ನೈಜತೆಯ ಪ್ರತಿಬಿಂಬವೆಂತಲೂ ಪರಿಭಾವಿಸಿದ್ದ ಹಿಂದಿನ ಮಾರ್ಕ್ಸ್‌ವಾದಿ ಚಿಂತಕರನ್ನು ಇವರು ಒಟ್ಟಾಗಿ ತಿರಸ್ಕರಿಸಿದರು. ಬದಲಾಗಿ ಯುರೋಪಿನ ಪುನರುಜ್ಜೀವನದ ಕಾಲಘಟ್ಟದಲ್ಲಿ ಜ್ಞಾನಶಿಸ್ತುಗಳನ್ನು ಪ್ರತ್ಯೇಕಿಸಿ ನೋಡುವ ನೋಟವನ್ನು ಮನದಟ್ಟು ಮಾಡಿಕೊಡುತ್ತಾರೆ. ಈ ಬಗೆಯ ಪ್ರತ್ಯೇಕತೆಯ ಧೋರಣೆಯು (ಸಾಹಿತ್ಯ ಹಾಗೂ ಸಾಹಿತ್ಯೇತರ) ಐಡಿಯಾಲಜಿಗಳ ಪ್ರಭಾವದಿಂದಾಗಿಯೇ ಹುಟ್ಟಿ ಕೊಂಡಿತ್ತು. ಆದರೆ ಕೇವಲ ಸಾಹಿತ್ಯಕ ವಿಮರ್ಶೆಯ ಅನುಕೂಲಕ್ಕಾಗಿ ಈ ಭಿನ್ನತೆಯೆಂಬುದನ್ನು ನವ ಚರಿತ್ರಕಾರರು ಅನಾವರಣಗೊಳಿಸಿದರು.

ಚರಿತ್ರೆಯನ್ನು ಕೇವಲ ಖಚಿತತೆಯ ಚೌಕಟ್ಟಿಗೆ ಜೋಡಿಸದೆ ಅದನ್ನು ಪ್ರಾತಿನಿಧಿಕವಾಗಿ (Representation), ಸಂವಾದ ರೂಪಿಯಾಗಿ (Interaction)  ಅನುಸಂಧಾನಗೊಳ್ಳುವ ನೆಲೆಯಲ್ಲಿ ಮಂಡಿಸುತ್ತಾರೆ. ಜಾತಿ, ವರ್ಗ, ಸಂಘರ್ಷ, ಜನಾಂಗ, ಪ್ರಭುತ್ವ ಮೊದಲಾದವು ಗಳನ್ನು ನವ ಚರಿತ್ರಕಾರರು ತಮ್ಮ ವಿಶ್ಲೇಷಣೆಗಳ ಮುಖೇನ ಪರಿಶೀಲನೆ ಮಾಡಿದ್ದಾರೆ. ಅಧಿಕಾರದ ಸ್ತರಗಳನ್ನು ಗ್ರಹಿಸುವುದರ ಮೂಲಕ ಚರಿತ್ರೆಯು ಸಂಸ್ಕೃತಿಯ ಇನ್ನಿತರೆ ಚಹರೆ ಗಳನ್ನು, ಸ್ತರಗಳನ್ನು ತಿಳಿದುಕೊಳ್ಳಲು ಅನುಕೂಲ ಮಾಡಿಕೊಡುತ್ತದೆ ಎಂಬುದು ಇವರ ನಿಲುವು. ಪರಿಚಿತವಾದ ಅರ್ಧಗಳಿಂದ ಹೊರತುಪಡಿಸಿಯೂ ಚರಿತ್ರೆಯನ್ನು ನೋಡಲು ಸಾಧ್ಯವಿದೆ ಎಂಬುದೇ ಇವರ ಅಚಲವಾದ ನಂಬಿಕೆ.

. ಮಾನವನ ಸ್ವಭಾವವನ್ನು ಕುರಿತ ಚಿಂತನೆ

ಎಲ್ಲರನ್ನೂ ಸಮನಾಗಿ ಕಾಣುವ ಬಂಡವಾಳಶಾಹಿಗಳ ಮನುಷ್ಯತ್ವದ ಸ್ವಭಾವವನ್ನು ನವ ಚರಿತ್ರಕಾರರು ಒಪ್ಪುವುದಿಲ್ಲ. ಯಾವುದೇ ಕೃತಿಯ ಸೃಷ್ಟಿಯು ಸುಸಂಬದ್ಧ, ಸ್ವತಂತ್ರ, ವಿಶಿಷ್ಟ ವ್ಯಕ್ತಿಯೊಬ್ಬನ ಸಾಮರ್ಥ್ಯ ಎಂಬುದನ್ನು ಇವರು ನಿರಾಕರಿಸುತ್ತಾರೆ. ಮನುಷ್ಯನು ಸೃಷ್ಟಿಸುವ ಪ್ರಕ್ರಿಯೆಯಲ್ಲಿ ಸಮಾಜವೊಂದರ ಅಧಿಕಾರದ ಐಡಿಯಾಲಜಿಯ ಫಲಿತ ವಾಗಿಯೇ ಇರುತ್ತಾನೆ ಎಂಬುದು ಇವರ ನಿಲುವು. ಈ ವಾದವನ್ನು ಮಂಡಿಸಿದ ಸ್ಟೀಫನ್ ಗ್ರೀನ್‌ಬ್ಲಾಟನು ‘ಲೇಖಕ ಎಷ್ಟರ ಮಟ್ಟಿಗೆ ಸ್ವತಂತ್ರ’ ಎಂಬುದರ ಬಗೆಗೆ ತನ್ನ ವಿಚಾರ ಗಳನ್ನೂ ಮಂಡಿಸಿದ್ದಾನೆ. ಅಂತೆಯೇ ಇನ್ನಿತರೆ ನವ ಚರಿತ್ರಕಾರರು ಸಹ ಈ ಕುರಿತು ವಿಭಿನ್ನ ವಾದ-ವಿವಾದಗಳನ್ನು ಮಾಡಿದ್ದಾರೆ.

ಲೇಖಕನು ತನ್ನ ಕೃತಿಯಲ್ಲಿ ಮೂಡಿಸುವ ವಿಚಾರಗಳು ‘ಅವುಗಳನ್ನು ಓದುವ ಓದುಗರು’ ಮನುಷ್ಯತ್ವದ ಸಮಾನ ಲಕ್ಷಣಗಳನ್ನು ಹೊಂದಿರುತ್ತಾರೆ ಎಂಬುದನ್ನು ಸಾಂಪ್ರದಾಯಿಕ ವಿಮರ್ಶಾ ನೆಲೆಯ ಪ್ರಪಾದನೆ ಎನ್ನುತ್ತಾರೆ. ಅಲ್ಲದೆ ಇಂಥ ವೈಚಾರಿಕತೆ ಬಂಡವಾಳ ಶಾಹಿಗಳ ಭ್ರಮಾಚಿಂತನೆಗಳಿಗೆ ಒಳ್ಳೆಯ ಉದಾಹರಣೆ ಎಂಬುದು ನವ ಚರಿತ್ರಕಾರರ ವಾದ. ಮಾನವನು ಐಡಿಯಾಲಜಿಯ ಫಲಿತವಾಗಿ ಸಮಾಜದಲ್ಲಿನ ಅಧಿಕಾರದ ಸ್ಥಿತ್ಯಂತರಗಳನ್ನು ಗ್ರಹಿಸಬಲ್ಲ ಸಾಮರ್ಧ್ಯವನ್ನು ಹೊಂದಿರುತ್ತಾನೆ. ಜೊತೆಗೆ ಇಂಥ ಸ್ಥಿತ್ಯಂತರಗಳಿಗೆ ಆತ ಕಾರಣಕರ್ತನಾಗಬಲ್ಲವನೂ ಹೌದು ಎಂಬುದು ನವ ಚರಿತ್ರಕಾರರ ಅಭಿಮತ.

ಓದುಗರನ್ನು ಕುರಿತ ಚಿಂತನೆ

ಒಂದು ಕೃತಿಯ ಓದು ಅಂದರೆ ಎಲ್ಲವನ್ನೂ ಕಳಚಿ ಓದುವ ನಿರ್ಲಿಪ್ತ ಕ್ರಮ ಅಲ್ಲ ಎಂಬುದು ನವ ಚರಿತ್ರಕಾರರ ವಾದ. ಅಂದರೆ ಓದುಗನ ಐಡಿಯಾಲಜಿಗಿಂತ ಭಿನ್ನವಾದ ಲೋಕದೃಷ್ಟಿಯನ್ನು ಹೊಂದಿರುವ ಲೇಖಕನ ಕೃತಿಯೊಂದನ್ನು ಓದುವಾಗ ಅದರಲ್ಲಿನ ವಿಚಾರಗಳನ್ನು ಈಗಾಗಲೇ ಅಂತರ್ಗತವಾಗಿರುವ ತನ್ನ ಸಂಸ್ಕೃತಿಯ ಪೂರ್ವಗ್ರಹಿಕೆಗಳಿಗೆ ಹೊಂದಿಸಿಕೊಂಡು, ಓದಿ, ವ್ಯಾಖ್ಯಾನಿಸಿಕೊಳ್ಳುವ ಕ್ರಮ ಎಂಬುದು ಇವರ ವಾದ. ಇಲ್ಲಿ ಎಲ್ಲ ಪ್ರದೇಶ, ಕಾಲಗಳಿಗೂ ಅನ್ವಯವಾಗುವ ಮಾನಯ ಮೌಲ್ಯಗಳು ಪ್ರಾತಿನಿಧಿಕವಾಗಿ ಓದಿಸಿಕೊಂಡು ಹೋಗುವ ಪರಿಪಾಠವನ್ನು ಓದುಗ ಹೊಂದಿರುತ್ತಾನೆ. ಆದರೆ ಇದ್ದದ್ದನ್ನು ಇದ್ದ ಹಾಗೆಯೇ ನಿರ್ಲಿಪ್ತವಾಗಿ ವ್ಯಾಖ್ಯಾನಿಸಲು ಸಾಧ್ಯ ಎಂಬುದನ್ನು ಮಾನವತಾವಾದಿ ಆದರ್ಶೀಕರಣದ ಭ್ರಮೆ ಎಂತಲೇ ಇವರು ವಾದಿಸುತ್ತಾರೆ. ಏಕೆಂದರೆ ಲೇಖಕನಂತೆ ಓದುಗನೂ ಕೂಡ ತನ್ನ ಕಾಲದ ಸಾಮಾಜಿಕ ಸನ್ನಿವೇಶ ಹಾಗೂ ಐಡಿಯಾಲಜಿಗಳಿಂದಲೇ ರೂಪುತಳೆಯುತ್ತಿರುತ್ತಾನೆ. ಆದ್ದರಿಂದ ಓದುವಿಕೆಯ ಪ್ರಕ್ರಿಯೆಯನ್ನು ನವ ಚರಿತ್ರಕಾರರು ಎರಡು ರೀತಿಯಲ್ಲಿ ಗುರುತಿಸುತ್ತಾರೆ. ಅಂದರೆ ಒಂದು ಸಹಜ (Naluralization) ಅಂUಕಾರದ ಕ್ರಮ, ಇನ್ನೊಂದು ಅಳವಡಿಕೆಯ (Appropriation) ಕ್ರಮ.

ವಿಮರ್ಶೆಯ ಸ್ವರೂಪವನ್ನು ಕುರಿತು

ನವ ಚರಿತ್ರಕಾರರು ತಮ್ಮ ವಿಮರ್ಶೆಯು ಸಮಕಾಲೀನ ಪರಿಸರ ಹಾಗೂ ಸಂಕಥನಗಳಿಂದ ರೂಪುಗೊಳ್ಳುತ್ತಿರುತ್ತದೆ ಎಂಬುದನ್ನು ಒಪ್ಪುತ್ತಾರೆ. ಪಠ್ಯವೊಂದರಲ್ಲಿ ಮೊದಲೇ ಸಿದ್ಧವಾಗಿರುವ ಅರ್ಧ ಗ್ರಹಿಕೆಗಳನ್ನು ಹುಡುಕುವುದು ಸರಿ ಅಲ್ಲ ಎಂಬುದು ಇವರ ವಾದ. ಇದಕ್ಕೆ ಬದಲಾಗಿ ಅದು ಸಾಹಿತ್ಯಕ ಹಾಗೂ ಸಾಂಸ್ಕೃತಿಕ ಚರಿತ್ರೆಗಳನ್ನು ಸಂರಚಿಸುವ ದಿಸೆಯಲ್ಲಿ ರೂಪುಗೊಳ್ಳು ವಂತಿರಬೇಕು ಎನ್ನುತ್ತಾರೆ. ನಮ್ಮ ಅಗತ್ಯಗಳಿಗೆ ತಕ್ಕಂತೆ ಹಿಂದಿನ ಪಠ್ಯಗಳನ್ನು ವಿಮರ್ಶಿಸಿ ಕೊಳ್ಳುವುದಕ್ಕೆ ಸಾಧ್ಯವಿದೆ ಎಂಬ ಎಚ್ಚರ ಈ ಪಂಥದವರಿಗೆ ಇದೆ. ಹೀಗಾಗಿ ನವ ಚರಿತ್ರಕಾರರು ಗತಕಾಲದಿಂದ ವರ್ತಮಾನದವರೆಗಿನ ಚರಿತ್ರೆಯನ್ನು ‘ನಿರಂತರ ಪ್ರಕ್ರಿಯೆ’ ಎಂದು ಗ್ರಹಿಸಿ ದರೂ, ಅದರಲ್ಲಿ ಅಡೆ-ತಡೆ, ಛಿದ್ರತೆಗಳ ತೊಡಕುಗಳಿವೆ ಎಂಬುದನ್ನು ಗ್ರಹಿಸಿದ್ದಾರೆ. ಹೀಗಾಗಿ ವಿಮರ್ಶೆಯ ಸ್ವರೂಪದಲ್ಲಿ ಐಡಿಯಾಲಜಿಗಳ ವಿಭಿನ್ನತೆಗಳು ತಲೆದೋರುತ್ತವೆ. ಈ ವ್ಯತ್ಯಾಸ, ವೈಪರೀತ್ಯಗಳ ಪರಿಜ್ಞಾನ ನವ ಚಾರಿತ್ರಿಕ ವಿಮರ್ಶೆಗೆ ಅವಶ್ಯಕ ಎಂಬುದು ಇವರ ಅಭಿಮತ.

ಭೂತಕಾಲದ ಪಠ್ಯಗಳನ್ನು ವಿಮರ್ಶಿಸುವಾಗ ವರ್ತಮಾನವನ್ನು ಜೋಡಿಸಿ ಕೊಟ್ಟು- ತೆಗೆದುಕೊಳ್ಳುವ ಅನುಸಂಧಾನದ ಪ್ರಕ್ರಿಯೆಯನ್ನು ನವ ಚರಿತ್ರಕಾರರು ಅನುಸರಿಸುವು ದುಂಟು. ಇದರಿಂದ ಹಿಂದಿನ ಪಠ್ಯಗಳ ವ್ಯಾಖ್ಯಾನದ ಮೂಲಕವೇ ಸಮಕಾಲೀನ ಸನ್ನಿವೇಶದ ಜಾತಿ, ಲಿಂಗ, ವರ್ಣ ಮೊದಲಾದ ಸಮಾಜದ ವಿಭಿನ್ನ ಅಧಿಕಾರದ ವಿನ್ಯಾಸಗಳನ್ನು ಗ್ರಹಿಸಲು ಸಾಧ್ಯ. ಉದಾಹರಣೆಗೆ ಹಿಂದಿನ ರಾಜಪ್ರಭುತ್ವಗಳನ್ನು ಇಂದಿನ ಹೊಸ ಸರ್ಕಾರಗಳೊಂದಿಗೆ ಹೋಲಿಸಿ ನೋಡುವಂಥದ್ದು. ಸಾಹಿತ್ಯಕ ಪಠ್ಯಗಳನ್ನು ರಾಜಕಾರಣದ ಹಿನ್ನೆಲೆಯಲ್ಲಿ  ಓದಿ ವ್ಯಾಖ್ಯಾನಿಸುವ ಪ್ರಕ್ರಿಯೆ ೧೯೭೦ರ ದಶಕದ್ದು. ೧೯೮೦ರ ದಶಕದಲ್ಲಿ ಇದೇ ಪ್ರಕ್ರಿಯೆಯನ್ನು ಸಾಂಸ್ಕೃತಿಕ ಕಾವ್ಯಮೀಮಾಂಸೆ(Cultural Poetics)ಯ ಅಡಿಯಲ್ಲಿ ವ್ಯಾಖ್ಯಾನಿಸಿದ ನವ ಚರಿತ್ರಕಾರರು ಹೊಸ ಬಗೆಯ ವಿಮರ್ಶಾ ಸ್ವರೂಪಕ್ಕೆ ಅವಕಾಶಮಾಡಿ ಕೊಟ್ಟರು. ಈ ಹಂತದಲ್ಲಿ ಕೃತಿಕಾರನಿಗೆ ದೊರೆತಿದ್ದ ರಾಜಕಾರಣದ ಆಶ್ರಯ, ಅದರ ಸ್ವರೂಪ, ಪ್ರತಿಬಂಧನೆ, ಮುದ್ರಣದ ಮುಕ್ತತೆ ಇತ್ಯಾದಿಗಳನ್ನು ಅನುಸರಿಸಿ ಅವನು ಎಷ್ಟರಮಟ್ಟಿಗೆ ಆಳುವ ಅಧಿಕಾರಶಾಹಿಯ ಪ್ರತಿಬಿಂಬವಾಗಿದ್ದ ಎಂಬುದನ್ನು ಅನಾವರಣಗೊಳಿಸಲಾಯಿತು. ಈ ಘಟ್ಟದಲ್ಲಿ ಸಾಂಸ್ಕೃತಿಕ ಸ್ತರಗಳನ್ನು ಸಹ ಪರಿಗಣಿಸಿದ್ದು ನವ ಚರಿತ್ರಕಾರರ ವಿಶೇಷತೆ ಗಳಲ್ಲಿ ಒಂದು. ಕನ್ನಡದ ಸಂದರ್ಭದಲ್ಲಿ ಹೇಗೆ ಪಂಪನ ಕಾವ್ಯಗಳು ರಾಜಕೀಯ ಕೇಂದ್ರಿತವೋ, ಅಂತೆಯೇ ಸಂಸ್ಕೃತಿ ಕೇಂದ್ರೀತವೂ ಆಗಿದ್ದುದನ್ನು ಗಮನಿಸಬಹುದು.

೧೯೭೦-೮೦ರ ದಶಗಳಲ್ಲಿ ನವ ಚಾರಿತ್ರಿಕ ವಿಮರ್ಶಕರಲ್ಲಿ ಫ್ರಾಯ್ಡ್‌ನ ಚಿಂತನೆಗಳ ಪ್ರಭಾವವು ಆಯಿತು. ಅವನ ದಮನ (Suppression), ಪಲ್ಲಟ (ಸ್ಥಿತ್ಯಂತರ) Displacement),  ಪರ್ಯಾಯ (Substitution) ಮೊದಲಾದ ಪರಿಕಲ್ಪನೆಗಳು ಬಳಕೆಗೆ ಬಂದವು. ಒಟ್ಟಾರೆ ೭೦ರ ದಶಕದಲ್ಲಿ ಪ್ರಾಚೀನ ಪಠ್ಯಗಳ ವಿಮರ್ಶೆ, ೮೦ರ ದಶಕದಲ್ಲಿ ಸ್ತ್ರೀವಾದಿ ವಿಮರ್ಶೆ ಹಾಗೂ ಸಮಕಾಲೀನ ಕೃತಿಗಳ ವಿಮರ್ಶೆಯನ್ನು ನವ ಚಾರಿತ್ರಿಕವಾದದ ಚಿಂತಕರು ನಡೆಸಿದ್ದನ್ನು ಪರಿಗಣಿಸಬಹುದು. ಅಲ್ಲದೆ ೯೦ರ ದಶಕದಲ್ಲಿ ವಿರಚನವಾದಿ ನಿಲುವುಗಳನ್ನು ಹಿಂದಕ್ಕೆ ಸರಿಸಿ ಹೊಸಬಗೆಯ ತಾತ್ವಿಕತೆ ಹಾಗೂ ಪ್ರಯೋಗಗಳನ್ನು ಮಾಡಿದ್ದು ನವ ಚರಿತ್ರಕಾರರ ಬದ್ಧತೆಯನ್ನು ಸ್ಪಷ್ಟಪಡಿಸುತ್ತದೆ. ಅಲ್ಲದೆ ಸ್ಟೀಫನ್ ಗ್ರೀನ್ ಬ್ಲಾಟ್ ಹಾಗೂ ರೇಮಂಡ್ ವಿಲಿಯಮ್ಸ್‌ರ ತಾತ್ವಿಕ ನಿಲುವುಗಳು ಸಾಂಸ್ಕೃತಿಕವಾಗಿ ನವ ಚಾರಿತ್ರಿಕ ವಾದವನ್ನು ಇನ್ನಷ್ಟು ಗಟ್ಟಿಗೊಳಿಸಿದವು. ಒಟ್ಟಾರೆ ನವ ಚಾರಿತ್ರಿಕವಾದದ ಪ್ರಭಾವ ‘ನವ ಚರಿತ್ರೆ’ಯ ಚಿಂತನೆಗಳ ಮೇಲೂ ಆಗಿದೆ ಎಂದರೆ ತಪ್ಪಾಗಲಾರದು.