‘ನವ ಚಾರಿತ್ರಿಕವಾದ’ (New Historicism) ಎಂಬ ಪರಿಕಲ್ಪನೆ ರೂಪು ತಳೆದದ್ದೇ ಸ್ಟೀಫನ್ ಜೆ ಗ್ರೀನ್ ಬ್ಲಾಟ್‌ರಿಂದ. ಆದರೆ ಇದರ ರೂವಾರಿತನವನ್ನು ಗ್ರೀನ್ ಬ್ಲಾಟ್ ಸವಿನಯವಾಗಿ ಇತರರೊಂದಿಗೆ ಹಂಚಿಕೊಳ್ಳಲು ಬಯಸುವ ಸಂವೇದನಾಶೀಲ ಪ್ರಾಧ್ಯಾಪಕ. ೧೯೪೩ರಲ್ಲಿ ಕೇಂಬ್ರಿಡ್ಜ್‌ನಲ್ಲಿ ಹುಟ್ಟಿದ ಸ್ಟೀಫನ್ ಇಪ್ಪತ್ತು ವರುಷಗಳಿಗೂ ಹೆಚ್ಚು ಕಾಲ ಬರ್ಕ್‌ಲಿಯ ಕ್ಯಾಲಿಫೋರ್ನಿಯಾದ ವಿಶ್ವವಿದ್ಯಾಲಯದಲ್ಲಿ ಬೋಧನೆ, ಅಧ್ಯಯನಗಳಲ್ಲಿ ನಿರತರಾದವರು. ಅಂದರೆ ಎಪ್ಪತ್ತರ ದಶಕದಲ್ಲಿ ಆದ ಸಾಂಸ್ಕೃತಿಕ ಸ್ಥಿತ್ಯಂತರಗಳನ್ನು ಬಹಳ ಹತ್ತಿರದಿಂದ ನೋಡಿದವರು. ‘ರೆಪ್ರೆಸೆಂಟೇಷನ್ಸ್’ ಎಂಬ ನಿಯತಕಾಲಿಕವನ್ನು ಹುಟ್ಟು ಹಾಕಿದವರ ಪೈಕಿ ಸ್ಟೀಫನ್ ಸಹ ಒಬ್ಬರು. ‘ನವ ಚಾರಿತ್ರಿಕ ವಾದ’ದ ಮೊದಲ ಟಿಸಿಲುಗಳು ಕಂಡದ್ದು (೧೯೮೨ರ ವೇಳೆಗೆ) ಈ ನಿಯತಕಾಲಿಕದ ಅವರ ಲೇಖನದ ಮುಖಾಂತರವೇ. ೧೯೮೦-೯೦ರ ದಶಕಗಳಲ್ಲಿ ಅಮೆರಿಕಾದ ಅನೇಕ ಆಂಗ್ಲ ಸಾಹಿತ್ಯದ ವಿಭಾಗಗಳಲ್ಲಿ ಪರಿಚಿತರಾಗಿದ್ದ ಸ್ಟೀಫನ್ ಅಲ್ಲಿಂದ ಮುಂದಕ್ಕೆ ನಡೆದದ್ದು ಹಾವಾರ್ಡ್ ವಿಶ್ವವಿದ್ಯಾಲಯದ  ಕಡೆಗೆ. ಈ ಎರಡು ಮೂರು ದಶಕಗಳ ಅಧ್ಯಾಪನ, ಅಧ್ಯಯನದ ವೃತ್ತಿ ಅವರನ್ನು ‘ನವ ಚಾರಿತ್ರಿಕವಾದ’ದ ಜ್ಞಾನ ಶಿಸ್ತಿನ ಕಡೆಗೆ ಚಿಂತನೆ ನಡೆಸುವಂತೆ ಮಾಡಿತ್ತು. ಸಾಹಿತ್ಯದ ನೆಲೆಗಳಿಂದ ಸಾಂಸ್ಕೃತಿಕ ಮೀಮಾಂಸೆ(Cultural poetics)ಯ ಕಡೆಗೆ ಹೊರಳಿದ ಸ್ಟೀಫನ್ ಚಿಂತನಾ ನೆಲೆಗಳೂ ಪಠ್ಯಗಳನ್ನು ಮೀರಿ ಸಂದರ್ಭಗಳ ಕಡೆಗೆ ನಿಲ್ಲುವಂತೆ ಮಾಡಿದವು. ಕೇಂಬ್ರಿಡ್ಜ್‌ನಲ್ಲಿ  ರೇಮಂಡ್ ವಿಲಿಯಂಸ್‌ರ ಶಿಷ್ಯರಾಗಿದ್ದ ಇವರು, ಎಪ್ಪತ್ತರ ವೇಳೆಗೆ ಮಾರ್ಕ್ಸವಾದಿ ವಿಮರ್ಶಾ ನೆಲೆಗಳಿಂದ ದೂರ ಸರಿಯುವ ಸ್ಥಿತಿಗೆ ಬಂದು ತಲುಪಿದ್ದರು. ಬಹುಶಃ ಇದಕ್ಕೆ ಕಾರಣ ಆ ಹೊತ್ತಿನ ಆಂಗ್ಲೋ-ಅಮೆರಿಕನ್ ಸಾಂಸ್ಕೃತಿಕ ಸಂದರ್ಭ ಹಾಗೂ ಅವಸಾನದ ಹಂತಕ್ಕೆ ಬಂದು ತಲುಪಿದ್ದ ಮಾರ್ಕ್ಸ್‌ವಾದಿ ಸೈದ್ಧಾಂತಿಕತೆ.

‘Renaisance Self-Fashiong’ (೧೯೮೪) ಕೃತಿಯ ಮುಖೇನ ಗಮನ ಸೆಳೆದಿರುವ ಸ್ಟೀಫನ್ ‘Norton Shakespeare’ ಬೃಹತ್ ಸಂಪುಟದ ಮೂಲಕ ಪ್ರಖ್ಯಾತರಾದವರು. ಅಲ್ತುಸರ್, ಮಾರ್ಕ್ಸ್, ಫ್ರಾಯ್ಡ್, ಫುಕೋ ಮೊದಲಾದವರ ಚಿಂತನೆಗಳಿಂದ ಹಾದು ಬಂದಿರುವ ಸ್ಟೀಫನ್ ಗ್ರೀನ್‌ಬ್ಲಾಟ್ ‘ನವ ಚಾರಿತ್ರಕವಾದ’ದ ಹುಟ್ಟು, ಬೆಳವಣಿಗೆ ಹಾಗೂ ಅದರ ಭವಿಷತ್ತಿನ ಹರವಿನ ಬಗೆಗೆ ನಿಖರವಾಗಿ ಮಾತನಾಡಬಲ್ಲವರು. ಇತ್ತೀಚಿನ ಸಂದರ್ಶನವೊಂದರ (‘ದಿ ಹಿಂದೂ’ ದಿನಪತ್ರಿಕೆ, ೫.೬.೨೦೦೫, ಸಚ್ಚಿದಾನಂದ ಮೊಹಂತಿ ಅವರ ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ) ಮೂಲಕ ಅವರು ಈ ಪರಿಕಲ್ಪನೆಯನ್ನು ಕುರಿತು ವಿಸ್ತೃತವಾಗಿ ಚರ್ಚಿಸಿದ್ದಾರೆ. ಅಂದು ಸಾಹಿತ್ಯ ವಿಮರ್ಶೆಯು ಕಲಾಕೃತಿಯೊಂದು ತನ್ನ ಸೃಜನಶೀಲತೆಯ ಹುಟ್ಟಿಗೆ ಹೊರತು ಪಡಿಸಿದ ಸನ್ನಿವೇಶದಿಂದ ಮಾತ್ರ ಗ್ರಹಿಕೆಗೆ ಒಳಗಾಗುತ್ತಿದ್ದ ಕಾಲವಾಗಿ ರೂಪತಳೆದಿತ್ತು. ಈ ಸನ್ನಿವೇಶದಿಂದ ಅದನ್ನು ಪಾರುಮಾಡಿದ ಯಶಸ್ಸು ಸ್ಟೀಫನ್ ಅವರಿಗೆ ಸಲ್ಲುತ್ತದೆ. ಅಂದರೆ ಪಠ್ಯವೊಂದನ್ನು ಅದು ಹುಟ್ಟಿದ ಸಾಮಾಜಿಕ, ಸಾಂಸ್ಕೃತಿಕ ಸಂದರ್ಭಗಳಿಂದ ಹೊರತುಪಡಿಸಿ ನೋಡಲು ಬರುವುದಿಲ್ಲ ಎಂಬುದನ್ನು ಸ್ಪಷ್ಟಪಡಿಸಿದರು. ಇದರ ಜೊತೆಗೆ ಅದು ಹುಟ್ಟಿದ ಚಾರಿತ್ರಿಕ ಸಂದರ್ಭವೂ ಪರಿಗಣನೆಗೆ ಒಳಗಾಗುವಂಥದ್ದು ಎಂಬುದನ್ನು ರುಜುವಾತುಪಡಿಸಿದರು. ಆ ಮೂಲಕ ನವ ಚಾರಿತ್ರಿಕವಾದದ ಹುಟ್ಟು ಅಥವಾ ಸಾಂಸ್ಕೃತಿಕವಾದ ಚಹರೆಗಳ ಅನಾವರಣ ಆಯಿತು. ಸ್ಟೀಫನ್ ಗ್ರೀನ್‌ಬ್ಲಾಟರಿಗೂ ಮೊದಲು ಹೊಸ ಸಾಂಸ್ಕೃತಿಕ ಮೀಮಾಂಸೆಯ ಉಲ್ಲೇಖಗಳೇ ಇರಲಿಲ್ಲ ಎಂಬುದು ಈ ಮಾತಿನ ಅರ್ಧವಲ್ಲ. ಬದಲಾಗಿ ‘ನವ ಚಾರಿತ್ರಿಕವಾದ’ ಎಂಬ ಹೆಸರಿನಲ್ಲಿ ಇರಲಿಲ್ಲವಷ್ಟೇ. ಅದನ್ನು ಆಗುಮಾಡಿಸಿದವನೇ ಗ್ರೀನ್‌ಬ್ಲಾಟ್.

ಪುನರುಜ್ಜೀವನ (ರೈನೈಸಾನ್ಸ್) ಕಾಲಘಟ್ಟದ ಪಠ್ಯಗಳ ಗಂಭೀರ ಹಾಗೂ ವಿಶೇಷವಾದ ಅಧ್ಯಯನಗಳು, ಅಂದಿನ ಸಾಂಸ್ಕೃತಿಕ ಅಂಶಗಳು ಹಾಗೂ ರಾಜಕಾರಣದ ನಡುವೆ ಇದ್ದ ಅಂತರ್‌ಸಂಬಂಧ ಮೊದಲಾದವುಗಳ ಬಗೆಗೆ ಸಂಶೋಧನೆಗಳು ಆಗಿದ್ದವು. ಈ ದೆಸೆಯಲ್ಲಿ ವಾರ್ಬರ್ಗ್ ಸ್ಟೀವೆನ್ ಆರ್ಗಲ್, ರಾಯ್‌ಸ್ಟ್ರಾಂಗ್, ಡಿ.ಜೆ.ಗೋರ್ಡನ್ ಮೊದಲಾದವರು ನವ ಚಾರಿತ್ರಿಕವಾದದ ಇನ್ನೊಂದು ರೂಪವಾದ ಸಾಂಸ್ಕೃತಿಕ ಮೀಮಾಂಸೆಯ ಪರಿಭಾಷೆ ಯಲ್ಲಿಯೇ ಕೆಲಸ ಮಾಡಿದ್ದರು. ಆದರೆ ಅವು ಸ್ಟೀಫನ್ ಗ್ರೀನ್‌ಬ್ಲಾಟ್, ಲ್ಯೂಯಿಸ್ ಮ್ಯಾಂಟ್ರೋಸ್, ಕ್ಯಾಧರಿನ್ ಗಲ್ಲಘೇರ್ ಮೊದಲಾದವರಂತೆ ನವ ಚಾರಿತ್ರಿಕ ವಾದದ ಹೆಸರಿನಲ್ಲಿ ಗುರುತಿಸಿಕೊಂಡಿರಲಿಲ್ಲ.

Renissance self-Fashioning; from more to Shakespeare (1980), Allegoy and Representation (1981), ‘The power of Forms in the English Renanissance (1982), Representing the English Renaissance (1988), New world Encounters (1993), The Norton Shakespeare(1997), The Norton Anthology of English Literature (ಏಳನೆಯ ಪರಿಷ್ಕೃತ ಮುದ್ರಣ ೧೯೯೯) ಹೀಗೆ ಹತ್ತು ಹಲವು ಲೇಖನಗಳು, ಕೃತಿಗಳು, ಸಂಪಾದಿತ ಸಂಪುಟಗಳು ಗ್ರೀನ್ ಬ್ಲಾಟ್‌ರ ಹೆಸರನ್ನು ಸ್ಪಷ್ಟವಾಗಿ ‘ನವ ಚಾರಿತ್ರಕವಾದ’ ಎಂಬ ಹೆಸರಿನೊಂದಿಗೆ ನಿಖರವಾಗಿ ಗುರುತಿಸು ವಂತೆ ಮಾಡಿದವು. ಅಂತೆಯೇ ಕ್ಯಾಥರಿನ್ ಗಲ್ಲಘೇರ್ ಅವರ Practicing the New Historicism (೨೦೦೦) ಲ್ಯೂಯಿಸ್ ಮ್ಯಾಂಟ್ರೋಸ್‌ರ ಪುನರುಜ್ಜೀವನದ ಕಾವ್ಯ ಹಾಗೂ ಅಧಿಕಾರವನ್ನು ಕುರಿತ ಅಧ್ಯಯನಗಳು ಸಹ ಮುಖ್ಯವಾದುವು. ಇಂಥ ಬರೆಹಗಳು ಶೈಕ್ಷಣಿಕ, ಸಾಹಿತ್ಯಕ ಹಾಗೂ ಸಾಂಸ್ಕೃತಿಕ ವಲಯದಲ್ಲಿ ‘ನವ ಚಾರಿತ್ರಿಕವಾದ’ವನ್ನು ಒಂದು ವಿಮರ್ಶಾ ವಿಧಾನವನ್ನಾಗಿಯೇ ಗುರುತಿಸುವಂತೆ ಮಾಡಿದವು. ಅಲ್ಲದೆ ವಾಲ್ಟರ್ ಬೆನ್ ಮೈಕೆಲ್ಸ್ ಮೊದಲಾದವರ ಪ್ರಯತ್ನಗಳಿಂದಾಗಿ ಇದು ಕೆವಲ ಸಿದ್ಧಾಂತವಾಗಿ ಮಾತ್ರವಲ್ಲದೆ ಆಶಯ ವಾಗಿ, ಧೋರಣೆಯಾಗಿ, ವಿಭಿನ್ನ ನೋಟದ ಅನುಭೂತಿಯಾಗಿ ರೂಪುತಳೆಯಿತು. ಕೇವಲ ಒಂದೇ ದಶಕದಲ್ಲಿ ಈ ವಾದವು ಅನೇಕ ಜ್ಞಾನ ಶಿಸ್ತುಗಳಲ್ಲಿ ಪ್ರಯೋಗಶೀಲತೆಯನ್ನು ಪಡೆಯಿತು. ಅಲ್ಲದೆ ಸಾಕಷ್ಟು ಬರೆಹಗಳು ಸಹ ಪ್ರಕಟಗೊಂಡವು. ಇದಕ್ಕೆಲ್ಲ ಸ್ಟೀಫನ್ ಗ್ರೀನ್‌ಬ್ಲಾಟ್ ಅಂಥವರ ಬದ್ಧತೆಯೇ ಕಾರಣ.

ನವ ಚಾರಿತ್ರಿಕವಾದದ ಚಿಂತಕರಿಗೆ ಆಪ್ತವಾದ ಪ್ರಸರಣ, ವಿನಿಮಯ, ಅನುಸಂಧಾನ ಮೊದಲಾದ ಪರಿಕಲ್ಪನೆಗಳು ವಿಮರ್ಶಾ ನೆಲೆಗಳನ್ನೇ ಬದಲಿಸಬಲ್ಲಷ್ಟು ಪ್ರಬಲವಾಗಿ ಕಂಡವು. ಹೀಗೆ ಬಂಡವಾಳಶಾಹಿಯು ಪಠ್ಯವನ್ನಷ್ಟೇ ಅಲ್ಲದೆ ವಿಮರ್ಶಕನನ್ನು ಪ್ರಭಾವಿಸುತ್ತದೆಯೋ ಹಾಗೆಯೇ ನವ ಚಾರಿತ್ರಿಕವಾದವು ಪರಿಣಾಮ ಬೀರುವಂಥದ್ದು ಎಂಬುದನ್ನು ಕ್ಯಾಥರಿನ್ ಗಲ್ಲಘೇರ್ ಅಭಿಪ್ರಾಯಪಟ್ಟಿದ್ದಾನೆ. ಈ ಹಿನ್ನೆಲೆಯಲ್ಲಿಯೇ ಗ್ರೀನ್‌ಬ್ಲಾಟ್ “ಈ ಸ್ವಾಧೀನತೆಯ ಪ್ರಕ್ರಿಯೆಯು ಹಣ, ಅಧಿಕಾರ, ಎಲ್ಲವೂ ಒಳಗೊಂಡಂಥದ್ದು” ಎಂದಿರು ವುದು. ನವ ಚಾರಿತ್ರಿಕವಾದದ ಚಿಂತಕರು ತಮ್ಮ ಸೋಲಿನ ನೆಲೆಗಳನ್ನು ಸಹ ಹೀಗೆ ನಿರಂತರ ವಾಗಿ ಆತ್ಮಾವಲೋಕನ ಮಾಡಿಕೊಳ್ಳಬೇಕಾಗುತ್ತದೆ ಎಂಬುದನ್ನು ಈ ವಾದ ಪರಿಶೀಲಿಸಿತು. ಈ ಹಿನ್ನೆಲೆಯಲ್ಲಿಯೇ ಮ್ಯಾಂಟ್ರೋಸ್ ವಿನಿಮಯ ಪ್ರಕ್ರಿಯೆ ಕೇವಲ ಹಣ ಅಥವಾ ಜ್ಞಾನವನ್ನಷ್ಟೇ ಅಲ್ಲದೆ ಅಧಿಕಾರ, ಪ್ರತಿಷ್ಠೆಗಳನ್ನು ಸಹ ಸುತ್ತು ವರೆದಿರುತ್ತದೆ ಎಂದಿರು ವುದು. ಸಾಮಾಜಿಕ ಆಸ್ತಿಪಾಸ್ತಿಗಳು ಸ್ವಾಧೀನತೆ, ಮನೆಯ ಆಡಳಿತದ ಸ್ವಾಧೀನತೆ ನೀಡುವ ಸಂತಸದಷ್ಟೇ ಪುರುಷ ಪ್ರಧಾನ್ಯತೆಯ ಖುಷಿಯೂ ನೀಡಬಲ್ಲದು ಎಂಬುದನ್ನು ನವ ಚಾರಿತ್ರಿಕವಾದ ಮನವರಿಕೆ ಮಾಡಿಕೊಟ್ಟಿತು. ದ್ರವರೂಪಿಯಾದ ಹಣ ಹೇಗೆ ಪತ್ತೆಯಾಗದ ರೀತಿಯಲ್ಲಿ ವಿನಿಮಯವಾಗುವುದೋ ಅದೇ ರೀತಿಯಲ್ಲಿ ಸಾಮಾಜಿಕ ಅನುಕೂಲಗಳೂ ಸಹ ನಿರಂತರವಾಗಿ ಪರಿಭ್ರಮಣೆ ಆಗುತ್ತಿರುತ್ತವೆ ಎಂಬುದನ್ನು ಗ್ರೀನ್‌ಬ್ಲಾಟ್, ಮ್ಯಾಂಟ್ರೋಸ್ ರಂಥ ಚಿಂತಕರು ರುಜುವಾತುಪಡಿಸಿದರು. ಮ್ಯಾಂಟ್ರೋಸನ ‘ಆಸ್ ಯು ಲೈಕ್ ಇಟ್’ ಎಂಬ ನವ ಚಾರಿತ್ರಿಕತೆಯ ಅಧ್ಯಯನವೊಂದು ರೋಸ್‌ಲಿಂಡ್ ಎಂಬುವಳ ಲಿಂಗ ವ್ಯತ್ಯಾಸ ದಿಂದಾಗಿ ಅವಳಿಗಾಗುವ ಸಾಮಾಜಿಕವಾದ ಅನುಕೂಲಗಳನ್ನು ಪರಿಶೀಲನೆ ನಡೆಸುತ್ತದೆ. ಸಾಹಿತ್ಯದ ಪ್ರಕ್ರಿಯೆಯಲ್ಲಿ ಇದೊಂದು ಸಾಮಾನ್ಯ ಸಂಗತಿಯಾದರೂ ಸಮಾಜದ ನೆಲೆಗಳಲ್ಲಿ ಅಂತೆಯೇ ಚಾರಿತ್ರಿಕ ಸಂದರ್ಭದಲ್ಲಿ ಗಂಭೀರವಾದುದು ಎಂಬುದನ್ನು ಈ ಚಿಂತನೆ ಮನವರಿಕೆ ಮಾಡಿಕೊಟ್ಟಿತು.

ಲಾಭ ಹಾಗೂ ನಷ್ಟಗಳ ನಡುವಿನ ಗೊಂದಲಗಳನ್ನು ಬಗೆಹರಿಸುವುದೇ ವಿಮರ್ಶಕನ ಕರ್ತವ್ಯ ಎಂದು ಗ್ರೀನ್‌ಬ್ಲಾಟ್ ಸ್ಪಷ್ಟಪಡಿಸುತ್ತಾನೆ. ಮೆಕರಿ, ಅಲ್ತುಸರ್, ಈಗಲ್ಟನ್ ಮೊದಲಾದ ಚಿಂತಕರು ಪಠ್ಯವೊಂದರಲ್ಲಿ ಅಡಗಿರಬಹುದಾದ ಆತ್ಮವಂಚನೆಯನ್ನು ನಿರೂಪಿಸುತ್ತಾರೆ ಎಂದಿದ್ದಾರೆ. ಆದರೆ ಇದೇ ಸ್ಥಿತಿಯಲ್ಲಿ ನವ ಚಾರಿತ್ರಿಕವಾದದ ಚಿಂತಕರು ಅದರೊಳಗಿನ ಬಿರುಕನ್ನು ತೋರಿಸಿಕೊಡುವುದರ ಜೊತೆ ಜೊತೆಗೆ ಒಬ್ಬ ಚಿಕಿತ್ಸಕರಂತೆಯೂ ವರ್ತಿಸುತ್ತಾರೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿಯೇ ಇತ್ತೀಚೆಗೆ ಗಾಯತ್ರೀ ಸ್ಪಿವಾಕ್ ಅವರು ವಿಮರ್ಶಕರು ಕೃತಿಯೊಂದನ್ನು ತಮ್ಮ ಸಂಗಾತಿಯಂತೆಯೇ ಪರಿಭಾವಿಸಬೇಕೆ ಹೊರತು ರೋಗದಂತೆ ಅಲ್ಲವೆಂದು ವಾದಿಸಿದ್ದು.

ಗ್ರೀನ್‌ಬ್ಲಾಟ್ ಬೌದ್ದಿsಕ ವಿರೋಧಿ ಶಿಸ್ತೊಂದರ ವಿರುದ್ಧ ರೂಪುಗೊಳ್ಳುವ ಪ್ರತಿರೋಧದ, ಬಂಡಾಯದ ಧ್ವನಿಂiiನ್ನಾಗಿ ನವ ಚಾರಿತ್ರಿಕವಾದವನ್ನು ಪರಿಶೀಲಿಸಿದ್ದಾರೆ. ಸಾಂಪ್ರದಾಯಿಕ ಅಧ್ಯಯನಕಾರರು, ವಿದ್ವಾಂಸರು ಕೇವಲ ತಮ್ಮ ನಿಶ್ಚಿತವಾದ ಅಧ್ಯಯನದ ವಿಧಿ-ವಿಧಾನಗಳಿಗೆ ಜೋತುಬಿದ್ದು ಸಂವೇದನಾಶೀಲತೆಯನ್ನೇ ಕಳೆದುಕೊಂಡಿರುತ್ತಾರೆ ಎಂಬುದನ್ನು ಗ್ರೀನ್‌ಬ್ಲಾಟ್ ತಮ್ಮ ಚಿಂತನೆಗಳ ಮುಖೇನ ರುಜುವಾತುಪಡಿಸಿದರು. ಏಕಮುಖಿ ನೀತಿಗಳನ್ನು ತುಂಡರಿಸಿದ ಅವರ ಪ್ರಯೋಗಗಳು, ಅನುಕರಣೀಯ ನೆಲೆಗಳಲ್ಲಿ ಅನೇಕ ಶಿಸ್ತುಗಳಲ್ಲಿ ಅಳವಡಿಕೆ ಆಗುತ್ತಿವೆ.

ಗ್ರೀನ್‌ಬ್ಲಾಟ್ ಅವರು ‘ನವ ಚಾರಿತ್ರಿಕವಾದ’ವು ಹೇಗೆ ಅದು ತನ್ನ ‘ಸಾಂಸ್ಕೃತಿಕ ವಿಮರ್ಶಾ’ ನೆಲೆಗಳಿಂದ, ವಿಧಾನದಿಂದ ಹಾದು ಬಂದಿದೆಯೋ ಹಾಗೆಯೇ ಹೊಸ ಓದಿನ ಪರಿಧಿಗಳನ್ನು ವಿಸ್ತರಿಸುತ್ತಾ ಹೊಗುತ್ತದೆ ಎಂಬುದರಲ್ಲಿ ನಂಬಿಕೆ ಇಟ್ಟವರು. ಕೇವಲ ಸಾಹಿತ್ಯ ಕ್ಕಷ್ಟೇ ಸೀಮಿತವಾಗದೆ ರಾಜಕಾರಣ, ಸಮಾಜ, ಚರಿತ್ರೆ, ಸಂಸ್ಕೃತಿ ಅಧ್ಯಯನ ಮೊದಲಾದ ಜ್ಞಾನ ಶಾಖೆಗಳಲ್ಲಿ ನವ ಚಾರಿತ್ರಿಕವಾದವು ಅನೇಕ ಸಮಸ್ಯೆಗಳನ್ನು ಅರ್ಧ ಮಾಡಿಕೊಳ್ಳುವಲ್ಲಿ ಸಹಕರಿಸುತ್ತದೆ ಎಂಬ ಆಶಯದೊಂದಿಗೆ ಕೆಲಸ ಮಾಡುತ್ತಿರುವವರು.

ನವ ಚಾರಿತ್ರಿಕವಾದದ ಮುಂದುವರೆದ ಭವಿಷ್ಯದ ಬಗೆಗೂ ಆಶಾಭಾವನೆ ಹೊಂದಿರುವ ಗ್ರೀನ್‌ಬ್ಲಾಟ್ ಅದರ ಪರಿಚಲನೆ ಕುರಿತು ಉತ್ಸುಕತೆ ತೋರಿದ್ದಾರೆ. ಈ ವಾದವು ಕಾಲ, ಪ್ರದೇಶ ಹಾಗೂ ಸವಾಲುಗಳನ್ನು ಮೀರಿ ನಿಲ್ಲುವ ವಿಶಿಷ್ಟವಾದ ಪರಿಚಲನೆಯೊಂದನ್ನು ಪಡೆದಿದೆ ಎಂದು ನಂಬಿದ್ದಾರೆ.