ನವ ಚಾರಿತ್ರಿಕವಾದದ ಅಜೆಂಡಾ ಅಡಗಿರುವುದೇ ಎಲ್ಲ ಬಗೆಯ ಏಕಮುಖಿ ನೆಲೆಗಳನ್ನು, ಏಕಮುಖಿ ವೈಚಾರಿಕ ಚಿಂತನಾಧಾರೆಗಳನ್ನು ತುಂಡರಿಸುವುದರಲ್ಲಿ. ಹೀಗಾಗಿ ಒಂದು ದೊಡ್ಡದಾದ ಹಾಗೂ ಸಾಂಪ್ರದಾಯಿಕ ನೆಲೆಯ ಚಿಂತನಾಪಡೆಯೊಂದಿಗೆ ಸಂಘರ್ಷಕ್ಕೆ ನಿಲ್ಲಬೇಕಾಯಿತು. ಈ ಬಗೆಯ ಯುದ್ಧದಲ್ಲಿ ನವ ಚಾರಿತ್ರಿಕವಾದವು ನಿರೀಕ್ಷಿತ ಜಯವನ್ನು ಪಡೆಯಿತು. ಹೀಗಾಗಿ ಜಗತ್ತಿನಾದ್ಯಂತ ಯಾವುದೇ ಬಗೆಯ ಭೌದ್ದಿsಕ ತಡೆಗೋಡೆಗಳು ನವ ಚಾರಿತ್ರಿಕವಾದದ ಬಿರುಸಿಗೆ ಛಿದ್ರವಾಗದೆ ಉಳಿಯಲು ಸಾಧ್ಯ ಆಗಿಲ್ಲ. ಒಂದು ಇನ್ನೊಂದನ್ನು ಪ್ರತ್ಯೇಕಿಸಿ ನೋಡುವ ಅಡೆ-ತಡೆಗಳನ್ನು ಒಡ್ಡುವ ಜ್ಞಾನ ಶಿಸ್ತುಗಳ ಚಿಂತಕರಿಗೆ ಎಲ್ಲಿಲ್ಲದ ಸೈದ್ಧಾಂತಿಕವಾದ ಬಲ ಹಾಗೂ ಅಚಲವಾದ ದೃಢತೆಗಳು ಕಾಣಿಸಿಕೊಂಡವು. ಶ್ರೇಷ್ಟವಾದ ನಂಬಿಕೆ, ಆದರ್ಶಗಳಿಗೆ ಈ ವಾದದ ಚಿಂತಕರು ಪ್ರಬಲ ವಿರೋಧಿಗಳೆಂದು ಗುರುತಿಸುವ ಹುನ್ನಾರಗಳು ನಡೆಯದೇ ಇರಲಿಲ್ಲ. ಜಗತ್ತಿನ ದೊಡ್ಡಣ್ಣನಾದ ಅಮೆರಿಕಾದ ಮೌಲ್ಯ, ಆದರ್ಶಗಳಿಗೆ ನವ ಚಾರಿತ್ರಿಕವಾದವೇ ದೊಡ್ಡ ವಿರೋಧಿ ಅನ್ನುವಷ್ಟರ ಮಟ್ಟಿಗೆ ಅಲ್ಲಿನ ಶಿಕ್ಷಣ ತಜ್ಞ ವಿಲಿಯಮ್ ಬೆನ್ನೆಟ್(‘ಟು ರಿಕ್ಲೇಮ್ ಲೆಗಸಿ’ ಎಂಬ ಭಾಷಣದ ಮುಖೇನ)ರಂಥವರು ಮೂದಲಿಸಿದ್ದೂ ಉಂಟು. ಆದರೆ ಅವೆಲ್ಲವನ್ನೂ ಮೆಟ್ಟಿನಿಂತ ನವ ಚಾರಿತ್ರಿಕವಾದವು ತನ್ನ ಸಾಂಸ್ಕೃತಿಕವಾದ ವಿಭಿನ್ನತೆಯಲ್ಲಿಯೇ ಉತ್ತರವನ್ನು ನೀಡುತ್ತಾ ಬಂದಿದೆ.

ಈ ಪರಿಕಲ್ಪನೆಯು ಸೈದ್ಧಾಂತಿಕ ನೆಲೆಯಲ್ಲಿ ಬಹುಮುಖಿ ಆಯಾಮಗಳನ್ನು  ಹೊಂದಿರು ವುದರ ಜೊತೆಗೆ ಎಲ್ಲ ಜ್ಞಾನಗಳೊಂದಿಗೂ ತನ್ನದೇ ಆದ ತಾದಾತ್ಮ್ಯವನ್ನು ಪಡೆಯಿತು. ಕಳೆದ ಶತಮಾನದ ಕೊನೆಯ ಹಂತದಲ್ಲಿ ಹಾಗೂ ಈ ಶತಮಾನದ ಆರಂಭದಲ್ಲಿಯೇ ನವ ಚಾರಿತ್ರಿಕವಾದವು ಒಂದು ಬಗೆಯ ಬೌದ್ದಿsಕ ಚಳವಳಿಯ ನೇತೃತ್ವವನ್ನೇ ವಹಿಸಿಕೊಂಡಿದೆ ಎನ್ನಬಹುದು. ಮಾರ್ಕ್ಸ್‌ವಾದದ ಮಿತಿಗಳನ್ನು ಮೀರಿದ ಹೊಸರೂಪದ ಸೈದ್ಧಾಂತಿಕತೆಯಾಗಿ ನವ ಚಾರಿತ್ರಿಕವಾದ ತನ್ನ ಆಳ-ಅಗಲಗಳನ್ನು ವಿಸ್ತರಿಸಿಕೊಳ್ಳುತ್ತಿದೆ. ಆರಂಭದಲ್ಲಿ ಸಾಂಸ್ಕೃತಿಕ ಮೀಮಾಂಸೆ ಎಂದು ಗುರುತಿಸಿಕೊಂಡು ಮುಂದುವರೆದ ಈ ವಾದ ಇಂದು ಸಾಂಸ್ಕೃತಿಕ ಭೌತವಾದ, ಸ್ತ್ರೀವಾದಿ ಮಾರ್ಕ್ಸ್‌ವಾದ ಹಾಗೂ ಮನೋವಿಶ್ಲೇಷಣೆಯ ಇನ್ನೊಂದು ರೂಪವಾಗಿ ವಿಸ್ತ್ರತಗೊಂಡಿದೆ. ಇದರ ಜೊತೆಗೆ ಪುನರುಜ್ಜೀವನ(ರೆನೈಸಾನ್ಸ್)ದ ಅಧ್ಯಯನ ನೆಲೆಗಳಲ್ಲಿಯೂ ಹೆಚ್ಚು ಗಾಢವಾಗಿ, ಅಷ್ಟೇ ಪರಿಣಾಮಕಾರಿಯಾಗಿ ಈ ವಾದ ಪುನರ್ರಚನೆ ಗೊಂಡಿದೆ. ಈ ಬಗೆಯ ಚಳವಳಿ ಸ್ವರೂಪದ ಸೈದ್ಧಾಂತಿಕ ಸಾಹಿತ್ಯ ಹಾಗೂ ಇನ್ನಿತರ ಜ್ಞಾನಶಾಖೆಗಳಲ್ಲಿ ಪಠ್ಯ ಹಾಗೂ ಹೊರಗಿನ ಜಗತ್ತಿನಲ್ಲಿನ ಅನೇಕ ಸ್ಥಿತ್ಯಂತರಗಳನ್ನು ವಿಶ್ಲೇಷಿ ಸುವ ಕಾಳಜಿಯನ್ನು ಮೂಡಿಸಿರುವುದು ಭರವಸೆಯ ಸಂಕೇತವೇ ಸರಿ.

ಹಿಂದಿನ ಎಲ್ಲ ಬಗೆಯ ಸಾಂಪ್ರದಾಯಿಕವಾದ ಸೌಂದರ್ಯ ಮೀಮಾಂಸೆಗಳನ್ನು ಧಿಕ್ಕರಿಸುವ ಈ ಚಿಂತನೆ ಸಮಾಜ ಹಾಗೂ ಸಂಸ್ಕೃತಿಯ ವಿಭಿನ್ನ ಚಹರೆಗಳನ್ನು ಉಳಿಸಿ ಕೊಳ್ಳುವಲ್ಲಿ ಗಮನಹರಿಸುವಂಥದ್ದು, ಸಂಸ್ಕೃತಿ ವಿಮರ್ಶೆಯಲ್ಲಿನ ವೈವಿಧ್ಯತೆಗಳನ್ನು  ಈ ವಾದವು ಪ್ರಧಾನ ಭಿತ್ತಿಯನ್ನಾಗಿಸಿಕೊಳ್ಳುತ್ತದೆ. ಪಶ್ಚಿಮದ ನಾಗರೀಕತೆಯಿಂದ ಭಿನ್ನವಾಗಿ ನಿಲ್ಲುವ ನವ ಚಾರಿತ್ರಿಕತೆಯ ಚಿಂತನೆ ಪ್ರತೀತ ಗುಣವನ್ನು ಹೊಂದಿರುವಂಥದ್ದು. ಜೊತೆಗೆ ಸಾಹಿತ್ಯದ ದೇಶಿ ಹಾಗೂ ಜನಪದ ಚಿಂತನೆಗಳನ್ನು ಒಪ್ಪಿಕೊಳ್ಳುತ್ತದೆ. ಅಂದರೆ ಮಾನವ ಶಾಸ್ತ್ರಜ್ಞರ ಹಾಗೂ ಸಂಸ್ಕೃತಿ ಚಿಂತಕರ ಹಿನ್ನೆಲೆಯಿಂದ ನೋಡುವ ಎಲ್ಲ ಬಗೆಯ ದೇಶೀ ಆಚರಣೆ, ರೂಢಿ-ಪದ್ಧತಿಗಳು, ನಂಬಿಕೆಗಳನ್ನು ನವ ಚಾರಿತ್ರಿಕವಾದ ಬಳಸಿಕೊಳ್ಳುತ್ತದೆ. ಹೀಗಾಗಿ ಸಾಂಸ್ಕೃತಿಕ ಅನುಸಂಧಾನ, ಹಿಂದಿನ ರಾಜಕಾರಣದ ವಿಶಿಷ್ಟತೆಗಳು, ಚಾರಿತ್ರಿಕವಾದ ಮಹತ್ತ್ವ, ಇತರೆ ಐಡಿಯಾಲಾಜಿಗಳೊಂದಿಗಿನ ಸಂಬಂಧ ಇತ್ಯಾದಿಗಳೆಲ್ಲವೂ ಇಲ್ಲಿ ಚರ್ಚೆಯ ವಿಷಯಗಳೇ ಆಗಿವೆ. ಸಂಸ್ಕೃತಿಯನ್ನು ಕ್ರಿಯಾಶೀಲತೆಯ ಪ್ರಯೋಗಗಳಲ್ಲಿ ರೂಪಿಸಿ ಕೊಳ್ಳುವಲ್ಲಿ ಕ್ಲಿಫೋರ್ಡ್ ಗಿರ್ಟ್ಸ್, ವಿಕ್ಟರ್ ಟರ್ನರ್ ಮೊದಲಾದ ಸಂಸ್ಕೃತಿನಿಷ್ಠ ಮಾನವ ಶಾಸ್ತ್ರಜ್ಞರ ಕೊಡುಗೆ ಅಪಾರವಾದುದು. ತಮ್ಮ ‘ಗಾಢವಾದ ನಿರೂಪಣೆ’(Thick discrption)ಗಳ ಮುಖೇನ ಚಾರಿತ್ರಿಕವಾಗಿ ನಡೆದುಹೋದ ಘಟನೆಗಳ ಹಿಂದಿನ ತತ್ವ, ಆಶಯಗಳನ್ನು ಪುನರ್ರಚಿಸಿಕೊಂಡು ಅಭ್ಯಾಸ ಮಾಡುವುದು ಈ ಪಂಥದವರ ವಿಶೇಷತೆ. ಇದರಿಂದಾಗಿ ಯಾವುದೇ ಸಮಾಜವೊಂದರ ನಿಯಂತ್ರಣ ಶಕ್ತಿ-ಸಾಮರ್ಧ್ಯಗಳನ್ನು ಅನಾವರಣ ಮಾಡಲು ಸಾಧ್ಯ ಎಂಬುದು ಇವರ ನಂಬಿಕೆ. ಈ ದಿಸೆಯಲ್ಲಿ ಜ್ಹಾನ್ ರಾಲ್ಫ್, ಫೋಕ್ಹೊಂಟಾ ಮೊದಲಾದವರು ನಡೆಸಿದ ತಂದೆಯವರುಗಳೊಂದಿಗಿನ ಸಂವಾದವನ್ನು ಕುರಿತ ಅಧ್ಯಯನ ಗಳು ಒಳ್ಳೆಯ ಉದಾಹರಣೆಗಳು. ಅಂತೆಯೇ ಫ್ರೆಢ್ರಿಕ್ ನೀಷೆಯ ‘ನಾನು ನನ್ನ ಕೊಡೆಯನ್ನು ಕಳೆದುಕೊಂಡೆ’ ಎಂಬಂಥ ಬರೆಹಗಳನ್ನು ಉಲ್ಲೇಖಿಸಬಹುದು.

ಸಂಸ್ಕೃತಿ ಅಧ್ಯಯನಗಳೆಂಬುವು ಅನೇಕ ಜ್ಞಾನಶಿಸ್ತುಗಳು ಪರಸ್ಪರ ಕೊಟ್ಟು-ತೆಗೆದು ಕೊಳ್ಳುವುದರ ಸಂಬಂಧದೊಂದಿಗೆ ಬೆಸೆದುಕೊಂಡಿರುತ್ತವೆ. ಅಲ್ಲದೆ ಈ ಬಗೆಯ ಸಂಕೀರ್ಣತೆಯ ಸಂಬಂಧಗಳೇ ಸಮಾಜದ ಅಸ್ತಿತ್ವವವನ್ನು ನಿರ್ಧರಿಸುತ್ತಿರುತ್ತವೆ. ಅಂತೆಯೇ ಯಾವುದೇ ಭಾಷೆಯ ಸ್ವರೂಪವು ಆ ಸಮಾಜದಲ್ಲಿನ ಸಂವಾದ, ಸಂವಹನ ಹಾಗೂ ಇತರೆ ವಿಷಯಗಳಿಂದ ನಿರ್ಧಾರ ಆಗುತ್ತಿರುತ್ತದೆ ಎಂಬುದು ಈ ಪಂಥದವರ ಹೇಳಿಕೆ. ಅಂದರೆ ಈ ಬಗೆಯ ಸಂಕೀರ್ಣತೆಗಳೆಲ್ಲವನ್ನೂ ಒಡೆದು ನೋಡಲು ಬರುವುದಿಲ್ಲ ಎಂಬ ವಾದ ಈ ಚಿಂತನೆಯದು. ಆದರೆ ಇದರಲ್ಲಿ ಹೊಸದೇನಿದೆ? ಗತವನ್ನು ವಿಶಿಷ್ಟ ನೆಲೆಗಳಿಂದ ಪರಿಶೀಲಿಸು ವುದುನ್ನು ಹೊರತುಪಡಿಸಿ ಎಂಬ ಮೂದಲಿಕೆಯ ಮಾತುಗಳು ಸಹ ನವ ಚಾರಿತ್ರಿಕವಾದದ ವಿರುದ್ಧ ಕೇಳಿಬಂದವು. ಒಂದಕ್ಕೊಂದು ಸಂಬಂಧವೇ ಇಲ್ಲದಂತೆ ಹಿಂದಿನ ಅಧ್ಯಯನ ಕ್ರಮಗಳು ತಮ್ಮ ವೈಧಾನಿಕತೆಯನ್ನು ರೂಪಿಸಿಕೊಂಡಿದ್ದವು. ಅವುಗಳನ್ನು ಮನವರಿಕೆ ಮಾಡಿಕೊಡುವುದರ ಮುಖೇನ ಪರಸ್ಪರ ಸಂಬಂಧಗಳನ್ನು ಬೆಸೆದು ತೋರಿಸಿದ ಹೆಗ್ಗಳಿಕೆ ನವ ಚಾರಿತ್ರಿಕವಾದದ ಚಿಂತಕರದು. ಅಲ್ಲಿಯವರೆಗೂ ಹಿಂದಿನ ಆಚರಣೆ, ನೃತ್ಯ, ಸಂಗೀತ, ಉಡುಗೆ-ತೊಡುಗೆ, ಜನಪ್ರಿಯ ಕತೆಗಳು, ಕ್ರೀಡೆ, ನಂಬಿಕೆ ಮೊದಲಾದವುಗಳಿಗೆ ಯವುದೇ ಸಂಬಂಧವೇ ಇಲ್ಲ ಅನ್ನುವ ರೀತಿಯಲ್ಲಿ ಅಧ್ಯಯನಗಳು ಅನಾವರಣಗೊಳ್ಳುತ್ತಿದ್ದವು. ಇಂಥ ಹಿನ್ನೆಲೆಗಳಿಂದಲೇ ಅನೇಕ ವಿದ್ವಾಂಸರು (ಉದಾಹರಣೆಗೆ: ಜೆ.ಹಿಲ್ಲಿಸ್ ಮಿಲ್ಲರ್ ಮೊದಲಾದವರು) ಭಾಷೆ ಹಾಗೂ ಸಮಾಜವನ್ನು ಪ್ರತ್ಯೇಕಿಸಿ ನೋಡಿದ್ದು.

ಹೊಸ ಸಂಸ್ಕೃತಿ ಮೀಮಾಂಸೆಯ ಅಧ್ಯಯನದ ಫಲಿತಗಳು ಬುದ್ಧಿಜೀವಿಗಳ ಗಮನವನ್ನು ಸೆಳೆದಿರಲಿಲ್ಲ. ಕೇವಲ ಒಂದು ದಶಕದಲ್ಲಿಯೇ ನವ ಚಾರಿತ್ರಿಕವಾದವು ಅನೇಕ ಜ್ಞಾನ ಶಿಸ್ತುಗಳಲ್ಲಿ ಅಳವಡಿಕೆ ಆಯಿತು. ಈ ಚಿಂತನೆಯ ವೇಗ ಅನೇಕ ಲೇಖನ, ಕೃತಿಗಳ ಪ್ರಕಟಣೆಗೂ ಕಾರಣವಾಗದಿರಲಿಲ್ಲ. ಇದಕ್ಕೆ ಹೆಚ್ಚು ಚಾಲನೆ ನೀಡಿದವರು ಪುನರುಜ್ಜೀವನ (ರೆನೈಸಾನ್ಸ್)ದ ವಿದ್ವಾಂಸರು. ಇವರು ನವ ಚಾರಿತ್ರಿಕವಾದದ ತಿರುಳನ್ನು ಅರ್ಧಮಾಡಿಕೊಂಡು ಅದರ ಆಶಯ, ತತ್ವಗಳನ್ನು ಪ್ರಚುರಪಡಿಸಿದ್ದು ಗಮನಾರ್ಹವಾದುದು. ಈ ಅವರ ವಿಚಾರ ಗಳಲ್ಲಿ ಕೆಲವನ್ನು ಪರಿಶೀಲಿಸಬಹುದು. ಇವರು ಜಗತ್ತಿನಲ್ಲಿ ಯಾವುದೇ ಪಠ್ಯ(Text)ವು ಸರ್ವತಂತ್ರ ಸ್ವತಂತ್ರ ಅಲ್ಲ ಎಂಬುದನ್ನು ರುಜುವಾತುಪಡಿಸಿದರು. ಅಲ್ಲದೆ ಪ್ರತಿಯೊಂದು ಪಠ್ಯವೂ ವಿರೋಧದ ನೆಲೆಗಳಿಂದಲೇ ಅರ್ಥ, ವ್ಯಾಖ್ಯಾನಗಳನ್ನು ಪಡೆದಿರುತ್ತದೆ ಎಂಬುದನ್ನು ಮನವರಿಕೆ ಮಾಡಿಸಿದರು(ಉದಾಹರಣೆಗೆ ಭಯಭೀತರಾದ ಯಹೂದ್ಯರು, ನೀಗ್ರೋಗಳು, ಭಾರತೀಯರು ಇತ್ಯಾದಿ). ಅಧಿಕಾರವು ಕೇಂದ್ರದೊಂದಿಗೆ ನೇರ ಸಂಬಂಧ ಹೊಂದಿರುತ್ತದೆ ಹಾಗೂ ಪ್ರಭುತ್ವ, ಧರ್ಮ ಮೊದಲಾದ ಪರುಷ ಕೇಂದ್ರಿತ ಕಲ್ಪನೆಗಳು ಎಂಬ ವಿಚಾರಗಳನ್ನು ಹುಟ್ಟುಹಾಕಿದ್ದು ಸಹ ಇವರೇ. ರೆನೈಸಾನ್ಸ್ ಕಾಲದ ಪಠ್ಯಗಳನ್ನು ವಿಶೇಷವಾಗಿ ಅಧ್ಯಯನ ನಡೆಸಿ ಆ ಕಾಲದ ಸಂಸ್ಕೃತಿ ಹಾಗೂ ರಾಜಕಾರಣದ ಅಧಿಕಾರಕ್ಕೂ ಹೇಗೆ ನೇರವಾದ ಅಂತಃಸಂಬಂಧ ಇದೆ ಎಂಬುದನ್ನು ಈ ವಿಸ್ವಾಂಸರು ಬಹಿರಂಗಗೊಳಿಸಿದ್ದುಂಟು. ಅದರಲ್ಲೂ ಇಂಗ್ಲೆಂಡಿನ ವಾರ್ಬರ್ಗ್ ಕೋರ್ಟಲ್ಡ್ ಸಮೂಹದಿಂದ ಗುರುತಿಸಿಕೊಂಡಿದ್ದ ಸ್ಟೀವೆನ್ ಆರ್ಗಲ್, ರಾಯ್‌ಸ್ಟ್ರಾಂಗ್, ಡಿ.ಜೆ.ಗೋರ್ಡನ್ ಮೊದಲಾದವರು ಆರಂಭಿಕ ಶೋಧಗಳನ್ನು  ಮಾಡಿದವರು. ಆದರೆ ಇವರಾರೂ ‘ನವ ಚಾರಿತ್ರಿಕವಾದ’ ಎಂಬ ಈ ನಿಖರವಾದ ಪರಿಕಲ್ಪನೆ ಯಿಂದ ಗುರುತಿಸಿಕೊಂಡಿರಲಿಲ್ಲ. ಮುಂದೆ ಸ್ಟೀಫನ್ ಜೆ.ಗ್ರೀನ್‌ಬ್ಲಾಟ್ ಅಂಥವರಿಂದ ಮಾತ್ರ ಈ ಪರಿಕಲ್ಪನೆ ಅದೇ ಹೆಸರಿನಲ್ಲಿ ಅನಾವರಣಗೊಂಡಿತು.

ಆರಂಭದಲ್ಲಿ ಸ್ಟೀಫನ್ ಗ್ರೀನ್‌ಬ್ಲಾಟ್ ಅವರು ಸಹ ೧೯೭೦ರ ದಶಕದ ಅಧ್ಯಯನಗಳ ಹಿನ್ನೆಲೆಯಲ್ಲಿ ‘ನವ ಚಾರಿತ್ರಿಕವಾದ’ ಎಂಬ ಹೆಸರಿನಡಿಯಲ್ಲಿ ಕರೆದುಕೊಳ್ಳಲು ಹಿಂದೆ ಸರಿದದ್ದು ಉಂಟು. ಏಕೆಂದರೆ ಅಂದು ರೆನೈಸಾನ್ಸ್ ಕಾಲದ ಸಾಹಿತ್ಯ, ನಾಟಕಗಳಲ್ಲಿನ ಸಮಾಜ ಹಾಗೂ ಸಂಸ್ಕೃತಿ ವಿಚಾರಗಳನ್ನು ಮಾತ್ರ ಚಿತ್ರಿಸುವ ಉದ್ದೇಶವನ್ನು ಹೊಂದಿದ್ದರು. ಹೀಗಾಗಿ ‘ಸಂಸ್ಕೃತಿ ಮೀಮಾಂಸೆ’ಯಾಗಿಯೂ ನೋಡವುದು ಸರಿ ಎನ್ನಿಸಿತ್ತು. ಅಂದರೆ ‘ಚರಿತ್ರೆ’ ಹಾಗೂ ‘ಸಂಸ್ಕೃತಿ’ಗಳನ್ನು  ಅಂತರ್‌ಪಠ್ಯೀಯ (Intertexual) ನೆಲೆಯಲ್ಲಿಯೇ ನೋಡುವುದಾಗಿತ್ತು. ‘ಸಂಸ್ಕೃತಿ ಮೀಮಾಂಸೆ’ ಎಂಬ ಪದವೇ ಅದು ಸಂಸ್ಕೃತಿನಿಷ್ಠವಾಗಿರುವು ದರಿಂದ ಚರಿತೆ ಗೂ ಮೀಮಾಂಸಾನಿಷ್ಠವಾದ ‘ಸಂಪ್ರದಾಯ’ಕ್ಕೂ ಬದ್ಧವಾಗಿದೆ ಎಂಬುದನ್ನು ತಿಳಿಸುವ ಪ್ರಯತ್ನಗಳು ನಡೆದವು. ಚರಿತ್ರೆ ಹಾಗೂ ಸಂಪ್ರದಾಯಗಳೆರಡಕ್ಕೂ ಅವಿಭಾಜ್ಯ ಸಂಬಂಧವಿರುವುದರಿಂದ ಅವೆರಡನ್ನು ವಿರೋಧದ ನೆಲೆಯಿಂದ ನೋಡಿ ಅಧ್ಯಯನ ಮಾಡಲು ಬರುವುದಿಲ್ಲ ಎಂಬ ಮಾತುಗಳೂ ಕೇಳಿಬಂದವು. ಆದರೆ ಇತ್ತೀಚೆಗೆ ನವ ಚಾರಿತ್ರಿಕವಾದವು ಈ ಸಾಂಪ್ರದಾಯಿಕ ವಿಧಾನಗಳನ್ನು ತನ್ನ ಅಧ್ಯಯನಗಳಲ್ಲಿ ಒಳಗು ಮಾಡಿಕೊಂಡಿದೆ ಯಾದರೂ, (ಕೆಲವೊಮ್ಮೆ ಹಿಂದಿನ ವಿದ್ವತ್ತನ್ನೇ ಅನುಸರಿಸಿದರೂ) ಸಾಹಿತ್ಯ ಚರಿತೆಗಳ, ಪಠ್ಯ-ಪರಿಸರಗಳ ನಡುವೆ ಇರುವ ನಂಟನ್ನು ವಿಭಿನ್ನ ರೀತಿಯಲ್ಲಿ ವಿಶ್ಲೇಷಿಸುತ್ತಿದೆ. ಅಂದರೆ ವ್ಯಕ್ತಿನಿಷ್ಟತೆ ಅಥವಾ ಪಠ್ಯವೊಂದರ ವಿಶಿಷ್ಟತೆಯನ್ನು ಸಮಾಜದ ಸಾಹಿತ್ಯಕ ನೆಲೆಗಳಲ್ಲಿ ಪರಿಶೀಲಿಸಬೇಕಾದ ವಿಧಾನವನ್ನು ಅಳವಡಿಸಿಕೊಳ್ಳಲಾಗಿದೆ.

ಇಂದು ಪಠ್ಯದ ಚಾರಿತ್ರಿಕತೆ ಹಾಗೂ ಚಾರಿತ್ರಿಕ ಪಠ್ಯಾತ್ಮಕತೆಯ ಸಿದ್ಧ ಸೂತ್ರಗಳು ಚಾಲ್ತಿಯಲ್ಲಿವೆ. ಭಾಷೆ ಹಾಗೂ ಸಮಾಜದ ಸಂಬಂಧಗಳು ಸಾಹಿತ್ಯದ ಪರಿಭಾಷೆಯನ್ನು ಚಲನಶೀಲವನ್ನಾಗಿಸುವುದರ ಜೊತೆಗೆ ಒಂದು ಸಂಕಥನವನ್ನೇ ಹುಟ್ಟುಹಾಕಿವೆ. ಇತ್ತೀಚಿನ ವಿಮರ್ಶಾ ನೆಲೆಗಳು ಸಾಂಸ್ಕೃತಿಕ ಸಂಕಥನದ ಜೊತೆಗೆ ಸಮಾಜಿಕ ಚಳವಳಿಗಳನ್ನು ಸಹ ಹುಟ್ಟು ಹಾಕುವಷ್ಟರ ಮಟ್ಟಿಗೆ ಪ್ರಬಲತೆ ಹೊಂದಿರುವಂಥದ್ದು. ಹೀಗಾಗಿ ಸಾಹಿತ್ಯದ ಸಾಮಾಜಿಕ ನೆಲೆಗಳ ಪರಿಣಾಮ ಏಕಮುಖಿ ನೆಲೆಯದ್ದಲ್ಲ ಎಂಬುದನ್ನು ರುಜುವಾತು ಪಡಿಸಿದೆ. ಅಂದರೆ ಬರೆಹ, ಓದು ಹಾಗೂ ಗ್ರಹಿಕೆಯ ಸನ್ನಿವೇಶಗಳು ಸಮಾಜದಿಂದ ಪ್ರಭಾವಕ್ಕೆ ಒಳಗಾಗುತ್ತಿರುತ್ತವೆ. ಆದ್ದರಿಂದ ಚಾರಿತ್ರಿಕ ಸಂದರ್ಭ, ಸಮಾಜ ಹಾಗೂ ವಿಮರ್ಶಾ ವಿಧಾನಗಳ ವಿಶ್ಲೇಷಣೆಯ ಮೇಲೆ ಪ್ರಭಾವ ಬೀರುವಷ್ಟರಮಟ್ಟಿಗೆ ಗಾಢವಾಗಿರುತ್ತದೆ ಎಂಬುದನ್ನು ಇತ್ತೀಚಿನ ನವ ಚಾರಿತ್ರಿಕವಾದದ ಚಿಂತಕರು ನಿರೂಪಿಸಿದ್ದಾರೆ.

ಯಾವುದೇ ಗ್ರಹಿಕೆ ಹಾಗೂ ವಿಶ್ಲೇಷಣೆಗಳು ಚರಿತ್ರೆಯ ರಚನೆಯಲ್ಲಿ ಇತಿಹಾಸಕಾರರನ್ನು ಪೂರ್ವಾಗ್ರಹಪೀಡಿತರನ್ನಾಗಿಸುತ್ತವೆ ಎಂಬ ವಿಚಾರ ಅಧ್ಯಯನಕಾರನಿಗೆ ಮೊದಲೇ ತಿಳಿದಿರುತ್ತದೆ. ಹೀಗಾಗಿ ಸಂಶೋಧನೆಯ ಮಿತಿಗಳ ಅರಿವು ಸಹಜ. ಇದನ್ನು ಮರೆತವನಂತೆ ನಟಿಸಿ ತಮ್ಮದೇ ಅಂತಿಮ ಸತ್ಯ, ಅತ್ಯಂತ ನಿಖರವಾದ ಸತ್ಯ ಅಥವಾ ಅಧಿಕೃತವಾದ ಸತ್ಯ ಎಂಬ ಫಲಿತಗಳನ್ನು ಪ್ರಕಟಿಸುವ ಹುಂಬತನದ ಬಗೆಗೆ ನವ ಚಾರಿತ್ರಿಕವಾದವು ಎಚ್ಚರಿಕೆಯಿಂದ ಇರುತ್ತದೆ. ಸಾಂಪ್ರದಾಯಿಕ ಪಠ್ಯ-ಆಕರಗಳನ್ನು ಸರಿಪಡಿಸುವಲ್ಲಿ ಗತ ಹಾಗೂ ವರ್ತಮಾನದ ಸಂಬಂಧಗಳನ್ನು ನಿರೂಪಿಸುವಲ್ಲಿ (Historicize) ನವ ಚಾರಿತ್ರಿಕವಾದ ಸಹಕರಿಸುತ್ತದೆ. ಪ್ರತಿಯೊಬ್ಬ ಚರಿತ್ರೆಕಾರನ ರಚನೆಯೂ ಕಥನವೇ ಆಗಿದ್ದು, ಅವನೊಬ್ಬ ಕವಿ ಮಾಡುವಲ್ಲಿ ದಾರ್ಶನಿಕನಂತೆ ವಿಶ್ಲೇಷಕನಾಗಿ ನೆಲೆಸಿರುತ್ತಾನೆ. ಹಿಂದಿನ ಪಠ್ಯಗಳ ಗ್ರಹಿಕೆ, ಅನುಸಂಧಾನ, ವ್ಯಾಖ್ಯಾನಗಳ ಮೇಲೆ ಪುನರುಜ್ಜೀವನದ ಅಥವಾ ಸ್ಥಿತ್ಯಂತರದ ಪ್ರಭಾವ ಇದ್ದೇ ಇರುತ್ತದೆ. ಇಂಥ ವಿಶ್ಲೇಷಣಾ ವೈಧಾನಿಕತೆಯನ್ನು ರೂಪಿಸುವ ನವ ಚಾರಿತ್ರಿಕವಾದವು ಸಂಸ್ಕೃತಿ ಮೀಮಾಂಸೆ ಯಾಗಿಯೂ, ಸಾಂಸ್ಕೃತಿಕ ರಾಜಕಾರಣದ ನಡುವೆ ನಿರಂತರ ಸಂಬಂಧವನ್ನು ಬೆಸೆಯುವ ಕೊಂಡಿಯಾಗಿಯೂ ಸಂವಾದವನ್ನು ನಡೆಸುವ ಆಯಾಮವನ್ನು ಹೊಂದಿದೆ.

ಕಳೆದ ಎರಡು-ಮೂರು ದಶಕಗಳಲ್ಲಿ ಸ್ತ್ರೀವಾದವು ಸಂಸ್ಕೃತಿ ಅಧ್ಯಯನದ ಬೌದ್ದಿsಕ ವಲಯದಲ್ಲಿ ಗಂಭೀರವಾದ ನೆಲೆಗಳನ್ನು ಕಂಡುಕೊಂಡಿದೆ. ಪಶ್ಚಿಮದ ಅಧ್ಯಯನ ಕ್ಷೇತ್ರವು ಸಮಾಜದಲ್ಲಿನ ಹೆಣ್ಣಿನ ಬದುಕು ಹಾಗೂ ಲಿಂಗದ ಪ್ರಶ್ನೆ, ತಾರತಮ್ಯದ ನಿಲುವುಗಳನ್ನು ಪ್ರಧಾನ ಭಿತ್ತಿಗೆ ತರುತ್ತಿದೆ. ಇದು ಎಷ್ಟರಮಟ್ಟಿಗೆ ಪ್ರಭಾವ ಬೀರಿದೆಯೆಂದರೆ ಅದು ನಮ್ಮ ಮನೋ-ಚಟುವಟಿಕೆಗಳನ್ನು ನಿಯಂತ್ರಿಸುವಷ್ಟು. ಅಷ್ಟೇ ಅಲ್ಲದೆ ಓದುಗರ ಓದುವ ದೃಷ್ಟಿ ಕೋನವನ್ನೇ ಬದಲಾಯಿಸುವಷ್ಟರಮಟ್ಟಿಗೆ ಗಮನಸೆಳೆದಿದೆ. ರೆನೈಸಾನ್ಸ್ ಕಾಲದ ಸಾಹಿತ್ಯ ಕೃತಿಗಳು, ರಂಗಭೂಮಿ, ನಾಟಕಗಳಲ್ಲಿ ಹೆಣ್ಣನ್ನು ಹೇಗೆ ನಗಣ್ಯ ಮಾಡಲಾಗಿತ್ತು ಎಂಬುದನ್ನು ನವ ಚಾರಿತ್ರಿಕವಾದದ ಚಿಂತಕರು ಅನಾವರಣ ಮಾಡಿದರು. ಫೇಮಿನಿಸ್ಟ್ ಆಲೋಚನೆ, ನಂಬಿಕೆಗಳಿಗಿಂತ ಭಿನ್ನವಾದ ನೆಲೆಗಳಲ್ಲಿ ಸಂಶೋಧನೆ, ಅಧ್ಯಯನಗಳು ನಡೆಯುವಷ್ಟರ ಮಟ್ಟಿಗೆ ನವ ಚಾರಿತ್ರಿಕವಾದವು ಪರಿಣಾಮ ಬೀರಿದೆ.