ರಾಜಕಾರಣದ ಮೇಲೆ ನವ ಚಾರಿತ್ರಿಕವಾದದ ಪರಿಣಾಮ ವಿಭಿನ್ನ ರೀತಿಯದು. ಆದರೆ ನವ ಚಾರಿತ್ರಿಕವಾದದಲ್ಲಿಯೇ ಅಡಗಿರುವ ರಾಜಕಾರಣದಲ್ಲಿ ತುಂಬ ಸಂದಿಗ್ಥತೆ ಇದೆ. ನವ ಚಾರಿತ್ರಿಕವಾದವು ಒಂದೆಡೆ ಮಾರ್ಕ್ಸ್‌ವಾದದ ಇನ್ನೊಂದು ಆವೃತ್ತಿಯೆಂದೂ, ಹಾಗೆಯೇ ಇನ್ನೊಂದೆಡೆ ಇದು ವಸಾಹತುವಾದದ ಇನ್ನೊಂದು ಚಹರೆಯೆಂದೂ ಕರೆಸಿ ಕೊಂಡಿದೆ. ಈ ಎರಡೂ ನಿಲುವುಗಳು ಒಂದು ಇನ್ನೊಂದನ್ನು ಒಪ್ಪದಿರುವ ಸಂಗತಿಯನ್ನೂ ನವ ಚಾರಿತ್ರಿಕವಾದದ ಚರ್ಚೆಗಳಲ್ಲಿ ಕಾಣಲು ಸಾಧ್ಯವಿದೆ. ಹೀಗಾಗಿ ನಿಖರವಾಗಿ ಹಿಡಿತಕ್ಕೆ ದೊರೆಯದ ನವ ಚಾರಿತ್ರಿಕವಾದ ರಾಜಕಾರಣದ ಚಿಂತನೆಗೊಂದು ಪ್ರಶ್ನೆಯಾಗಿಯೇ ಉಳಿದಿದೆ.

ಇದಕ್ಕೆ ಕಾರಣಗಳೂ ಇಲ್ಲದಿಲ್ಲ. ನವ ಚಾರಿತ್ರಿಕವಾದ ಎಂದರೇನೆಂಬುದರ ಬಗೆಗೆ ವಿಭಿನ್ನ ಅಭಿಪ್ರಾಯಗಳಿದ್ದರೂ ಅದು ರೂಪುಗೊಂಡಿರುವುದು ಸಾಹಿತ್ಯಕ-ಸಾಹಿತ್ಯೇತರ ಪಠ್ಯಗಳಿಂದ ಎನ್ನುವುದು ನಿರ್ವಿವಾದ. ಅಲ್ಲದೆ ನವ ಚಾರಿತ್ರಿಕವಾದಿಗಳು ಕಾರ್ಯ-ಕಾರಣ ಸಂಬಂಧವನ್ನು ಯಧಾವತ್ತಾಗಿ ಒಪ್ಪಿಕೊಳ್ಳುವುದೂ ಇಲ್ಲ. ಈ ಎಲ್ಲ ಅಂಶಗಳು ನವ ಚಾರಿತ್ರಿಕ ವಾದದ ಮುಖ್ಯ ಅಧ್ಯಯನ ವಿಷಯಗಳಾಗಿರುವುದರಿಂದ ಇದರ ಕಥನ, ಬದ್ಧತೆ, ಅಧಿಕಾರದ ನೆಲೆ ಹಾಗೂ ಚಾರಿತ್ರಿಕ ದೃಷ್ಟಿಕೋನಗಳ ಬಗೆಗೆ ವಿಭಿನ್ನ ರೀತಿಯ ವಾಗ್ವಾದಗಳು ಇಲ್ಲದಿಲ್ಲ. ಕೆಲವು ಸಲ ನವ ಚಾರಿತ್ರಿಕವಾದದ ಚಿಂತನೆಗಳೂ ತಮ್ಮದೇ ಆದ ವಿವೇಚನೆಯಲ್ಲಿ ತಲ್ಲೀನ ವಾಗಿಬಿಡುವುದರಿಂದ ಅವು ಅಷ್ಟು ಪ್ರಭಾವಿಯಾಗಲಾರವು ಎಂಬ ಅಭಿಪ್ರಾಯವೂ ಉಂಟು.

ನವ ಚಾರಿತ್ರಿಕವಾದದ ಚಿಂತನಾ ನೆಲೆಗಳನ್ನು ಯಾವುದೋ ಒಂದು ನಿರ್ದಿಷ್ಟ ರಾಜಕೀಯ ಚಿಂತನಾಧಾರೆಗೆ ಸೀಮಿತಗೊಳಿಸುವುದು ಅದರ ಒಳನೋಟಗಳನ್ನೇ ನಗಣ್ಯಮಾಡಿದಂತೆ ಆಗುತ್ತದೆ. ಈ ಮಾತಿನ ಅರ್ಧ ಯಾವುದೇ ಸಂಸ್ಕೃತಿ ಇಲ್ಲವೆ ವಿಮರ್ಶಾಕ್ರಮ ತನ್ನ ಆಂತರ್ಯ ದೊಳಗೆ ತನ್ನದೇ ಆದ ರಾಜಕಾರಣವನ್ನು ಹುದುಗಿಸಿಕೊಂಡಿರುತ್ತದೆ ಎಂದಾಗಲಿ ಅಥವಾ ಅವು ಸಂಪೂರ್ಣ ಸ್ವಾತಂತ್ರ್ಯಅಥವಾ ಸಂಪೂರ್ಣ ಅಧೀನತೆಯನ್ನು ಬೋಧಿಸುತ್ತದೆ ಎಂದಾಗಲಿ, ಚರಿತ್ರೆಯ ಸಂದರ್ಭಗಳನ್ನು ತನ್ನ ಮರೆಮಾಚಿದ ರಾಜಕೀಯ ಉದ್ದೇಶಗಳಿಗೆ ಅನುರೂಪವಾಗಿ ಅಳವಡಿಸಿಕೊಳ್ಳುವುದೆಂದಾಗಲಿ ಅಲ್ಲ. ಬದಲಾಗಿ ಈ ಬಗೆಯ ಎಲ್ಲ ಹುನ್ನಾರಗಳಿಗೆ ಪ್ರತಿ ರೋಧಗಳನ್ನು ಒಡ್ಡುವುದೇ ನವ ಚಾರಿತ್ರಿಕವಾದದ ಪ್ರಧಾನ ಆಶಯ. ನವ ಚಾರಿತ್ರಿಕವಾದದ ಈ ನಿಲುವನ್ನು ಎಡ ಹಾಗೂ ಬಲಪಂಥಗಳೆರಡೂ ಪ್ರಶ್ನಿಸಿವೆ. ಸಾಹಿತ್ಯವಾಗಲಿ, ವಿಮರ್ಶೆ ಯಾಗಲಿ ಒಂದು ನಿಶ್ಚಿತ ರಾಜಕೀಯ ನಿಲುವನ್ನು ಇರಿಸಿಕೊಂಡಿರುತ್ತವೆ. ಇಲ್ಲವೆ ಅವು ಸಂಪೂರ್ಣ ಅರಾಜಕೀಯವಾಗಿಬಿಡುತ್ತವೆ ಎನ್ನುವುದು ಈ ಪಂಥಗಳವರ ವಾದ.

ನವ ಚಾರಿತ್ರಿಕವಾದದ ಅಂತರ್ಯದಲ್ಲಿನ ರಾಜಕಾರಣವೇನು ಎಂಬ ಪ್ರಶ್ನೆ ಇಂದಿನ ಬಹುಪಾಲು ನವ ಚಾರಿತ್ರಿಕವಾದಿಗಳ ಪರಿಕಲ್ಪನೆಗಳನ್ನೇ ಒರೆಸಿ ಹಾಕಬಲ್ಲ ಪ್ರಶ್ನೆಯಾಗಿದೆ. ಹೀಗಾಗಿ ಇದನ್ನೇ ಬೇರೊಂದು ರೀತಿಯಲ್ಲಿ ಹೇಳಬಹುದು. ನವ ಚಾರಿತ್ರಿಕವಾದದ ಚಾರಿತ್ರಿಕ ಸಂದರ್ಭಗಳೇನು ಹಾಗೂ ವಿಭಿನ್ನ ರಾಜಕೀಯ ನಿಲುವುಗಳೊಂದಿಗೆ ವಾಗ್ವಾದ ನಡೆಸಲು ಅವು ಹೇಗೆ ಪೂರಕವಾಗಿ ಒದಗಿ ಬಂದಿದೆ ಎಂಬುದು ಮುಖ್ಯವಾಗುತ್ತದೆ.

ಒಂದು ಸಮರ್ಪಕ ಪ್ರಶ್ನೆಯನ್ನು ರೂಪಿಸಿ ಅದಕ್ಕೊಂದು ಉತ್ತರವನ್ನು ಹೇಳಲು ಸಾಧ್ಯವಿಲ್ಲ. ಈ ವಿಸ್ತಾರವಾದ ಪರಿಕಲ್ಪನೆ ಹುಟ್ಟಲು ಕಾರಣವಾದ ಸಂದರ್ಭವನ್ನು ಅರಿಯುವ ತಾಳ್ಮೆ, ತಿಳುವಳಿಕೆಯಾಗಲಿ ಇಂದಿಗೂ ಕಾಣುತ್ತಿಲ್ಲ. ಒಂದು ವಿಶಿಷ್ಟ ದೃಷ್ಟಿಕೋನದ ಹಿನ್ನೆಲೆ ಯಲ್ಲಿ, ಅಂದರೆ ಮಾರ್ಕ್ಸ್‌ವಾದ ಹಾಗೂ ೧೯೬೦ರ ಮಹತ್ತ್ವದ ರಾಜಕೀಯ ಸಂದರ್ಭಗಳ ಹಿನ್ನೆಲೆಯಲ್ಲಿ ಮಾತ್ರ ಇದನ್ನು ಬರೆಯಲು ಸಾಧ್ಯ. ಮಾರ್ಕ್ಸಿಸ್ಟರು ನವ ಚಾರಿತ್ರಿಕವಾದವನ್ನು ‘ಎಡಪಂಥದ ಭ್ರಮನಿರಸನ’ ಎಂದೇ ವ್ಯಾಖ್ಯಾನಿಸಿದ್ದಾರೆ. ನವ ಚಾರಿತ್ರಿಕವಾದದ ಮೇಲೆ ಎಡಪಂಧೀಯರ ಪ್ರಭಾವನ್ನು ಒಪ್ಪಿದರೂ ಅದರ ತೀವ್ರವಾದ ಚಟುವಟಿಕೆಗಳನ್ನು ಗಮನಿಸಿದರೆ ಆ ಬಗೆಯ ಭ್ರಮನಿರಸನವನ್ನು ಒಪ್ಪಲು ಸಾಧ್ಯವಿಲ್ಲ. ಅಮೆರಿಕಾದ ಕೆಲವು ರಾಜಕೀಯ ಚಿಂತನೆಗಳು ೬೦ರ ದಶಕದಲ್ಲಿ ನವ ಚಾರಿತ್ರಿಕವಾದವನ್ನು ಮಾರ್ಕ್ಸ್‌ವಾದದಿಂದ ಬೇರ್ಪ ಡಿಸಿದವು. ನವ ಚಾರಿತ್ರಿಕವಾದ ಇದಕ್ಕೆ ಪ್ರತಿಕ್ರಿಯಿಸದೆಯೇ ಎಡಪಂಧೀಯ ಪ್ರಭಾವದಲ್ಲೇ ಮುಂದುವರೆಯಿತು. ಇಲ್ಲಿ ಮುಖ್ಯವಾಗಿ ನವ ಚಾರಿತ್ರಿಕವಾದದ ಸ್ವರೂಪ, ಅದನ್ನು ಪ್ರತಿ ನಿಧಿಸುವ ಕಲ್ಪನೆ, ವಿಚಾರಗಳನ್ನು ಸಮಸ್ಯೀಕರಿಸುವುದು, ಒಂದು ಚಾರಿತ್ರಿಕ ವಿಷಯದ ದ್ವಂದ್ವದ ನೆಲೆ ಹಾಗೂ ಅದರ ಚರಿತ್ರೀಕರಣದ ಬಗ್ಗೆ ವಿವೇಚಿಸಲಾಯಿತು.

ಹೊಸ ಎಡಪಂಧೀಯ ಬಣ್ಣ ಹುಟ್ಟುವ ಒಂದು ತಲೆಮಾರಿಗೆ ಮುಂಚೆಯೇ ಅಮೆರಿಕಾದ ಎಡಪಂಧೀಯ ಸಾಹಿತ್ಯ ವಿಮರ್ಶಕರು ಪ್ರಬಲವಾದ ರಾಜಕೀಯವನ್ನಾಗಿ ಸಮಸ್ಯಾತ್ಮಕವಾದ ಒಂದು ‘ಫಾರ್ಮಲಿಸಂ’ನ್ನು ಬೆಳೆಸಿದರು. ಅಮೆರಿಕಾದ ಎಡಪಂಥವು ತನ್ನ ಹಲವು ವಲಯ ಗಳಲ್ಲಿ ಯುದ್ಧದ ಅನಂತರ ಸಾಂಪ್ರದಾಯಿಕವಾದ ಪ್ರೊಲಿಟೆರಿಯೆಟ್ ಕೇಂದ್ರಿತ ರಾಜಕೀಯ ಕಲ್ಪನೆಗಿಂತ ಭಿನ್ನವಾದ ಸಂಸ್ಕೃತಿನಿಷ್ಠ ‘ಎಸ್ತೆಟಿಕ್ ಮಾಡರ್ನಿಸಂ’ ಎಂಬ ಹೊಸ ರಾಜಕೀಯ ಕಲ್ಪನೆಯನ್ನು ನೀಡಿತು. ಆಧುನಿಕತೆಯೆಂದರೆ ಒಂದು ಸಾಮಾಜಿಕ ಕ್ರಾಂತಿಯನ್ನು ಬೆಂಬಲಿಸುವ, ಸ್ಟಾಲಿನ್‌ನ್ನು ವಿರೋಧಿಸುವ ಒಂದು ಬೆಳವಣಿಗೆಯಾಗಿದೆ ಎಂದು ಬಿಂಬಿಸ ಲಾಯಿತು. ಫಿಲಪ್ ರವ್, ವಿಲಿಯಂ ಫಿಲಿಪ್, ಡ್ವೈಟ್ ಮಾಕ್‌ಡೊನಾಲ್ಡ್, ಹೆರಾಲ್ಡ್, ರೋಸನ್‌ಬರ್ಗ್, ಮೆರಿ ಮೆಕಾರ್ಧಿ ಮೊದಲಾದ ಚಿಂತಕರು ೧೯೩೯ರ ನಂತರ ಸ್ಟಾಲಿನ್ ನಿಂದ ಪ್ರಭಾವಿತವಾದ ಎಡಪಂಥವನ್ನು ವಿರೋಧಿಸಿದರು. ‘ಡೆಮಾಕ್ರಟಿಕ್ ಪಾರ್ಟಿ’ ಬಗೆಗಿನ ವಿಲಕ್ಷಣ ವ್ಯಾಮೋಹ, ಅದರ ಭಾವುಕವಾದ ಸಾಂಪ್ರದಾಯಿಕವಾದ ರಾಷ್ಟ್ರೀಯತೆಗಳು ಆಗ ಟೀಕೆಗೆ ಒಳಗಾದವು. ಅಮೆರಿಕಾದ ಸಾಂಪ್ರದಾಯಿಕ ಧಾರೆಗಳನ್ನು ಇದು ನಾಶಪಡಿಸುವುದೆಂದೇ ಅವರು ಭಾವಿಸಿದರು. ಆದ್ದರಿಂದಲೇ ೧೯೪೦ರ ಅವಧಿಯಲ್ಲಿ ಹೆರಾಲ್ಡ್ ರೊಸೆನ್ಬರ್ಗ್‌ರಂಥವರು ಹೊಸತಲೆಮಾರಿನ ದುಡಿಯುವ ವರ್ಗ, ಹೊಸ ಸಂಸ್ಕೃತಿ, ಸಂಪ್ರದಾಯ ವಿಮುಕ್ತ ಅಮೆರಿಕಗಳನ್ನು ಉತ್ತೇಜಿಸಿದ್ದು. ಆದರೆ ಆ ಪ್ರಯತ್ನಗಳು ಸಾರ್ಧಕವೇನೂ ಆಗಲಿಲ್ಲ. ಹೊಸ ಸಂಸ್ಕೃತಿ ಬುಡವಿಲ್ಲದ ಬೌದ್ದಿsಕತೆ ಗಳೂ ವಿಪರೀತ ಮಹತ್ತ್ವ ಪಡೆದು ತನ್ನಲ್ಲೇ ಸಾಮಾಜಿಕ ದ್ವಂದ್ವಗಳನ್ನು ಅದುಮಿಕೊಂಡಿತು.

ಅರವತ್ತರ ದಶಕದ ಸಂಸ್ಕೃತಿಚಿಂತಕರು ತಮ್ಮ ರಾಜಕೀಯ ನಿಲುವುಗಳ ಜೊತೆಗೆ ಸೌಂದರ್ಯ ಪ್ರಜ್ಞೆಯನ್ನೂ ಕುರಿತು ವಿಶೇಷವಾಗಿ ಆಲೋಚಿಸಿದರು. ಏಕೆಂದರೆ ಆಗ, ಯುದ್ಧಕ್ಕೆ ಮುನ್ನ  ಫಾರ್ಮಲಿಸಂ ತನ್ನ ಪರಾಕಾಷ್ಠೆ ತಲುಪಿತು. ಆ ಚಿಂತಕರು ಕೇವಲ ಮಾರ್ಕ್ಸ್‌ನ ಸೌಂದರ್ಯ ಕಲ್ಪನೆಯನ್ನಷ್ಟೇ ಪರಿಗಣಿಸಿ ವಿಚಾರ ಮಾಡಿದ್ದರೆ ಅಷ್ಟೇನೂ ಪ್ರಯೋಜನ ವಾಗುತ್ತಿರಲಿಲ್ಲ. ಬದಲಾಗಿ ಆ ಕಾಲದ ಚಿಂತಕರು ಪಶ್ಚಿಮದ ಹಲವು ಮಾರ್ಕ್ಸ್ ವಾದಿಗಳ ಪ್ರಭಾವಕ್ಕೆ ಅದರಲ್ಲೂ ಲುಕಾಕ್ಸ್‌ನ ಪ್ರಭಾವಕ್ಕೆ ಒಳಗಾಗಿದ್ದರು. ಈ ಎಲ್ಲಾ ಮೂಲಗಳಿಂದ ಆ ಕಾಲದ ಚಿಂತಕರು, ಅದರಲ್ಲೂ ಫಾಂಕ್‌ಫರ್ಟ್ ಪಂಥದ ಚಿಂತಕರು, ಅಸಂಖ್ಯ ಸಾಂಸ್ಕೃತಿಕ ಸಂಗತಿಗಳನ್ನು ಸ್ವೀಕರಿಸಿದರು. ಉದಾಹರಣೆಗೆ ಬೂರ್ಷ್ವಾ ಕಾಲಘಟ್ಟವು ತನ್ನ ಸಾಂಸ್ಕೃತಿಕ ದ್ವಂದ್ವಗಳಿಗೊಂದು ತಪ್ಪು ಅರ್ಧವನ್ನು ಕಲ್ಪಿಸಲು ಸಂಸ್ಕೃತಿಯನ್ನು ಅಪವ್ಯಾಖ್ಯಾನಿಸಿದ್ದು ಯಾರಿಗೂ ತಿಳಿಯದ ಸಂಗತಿಯೇನಲ್ಲ. ಈ ಅಪವ್ಯಾಖ್ಯಾನವನ್ನೇ ಪ್ರಶಂಸಿಸುವ ಪ್ರಜ್ಞೆಯನ್ನು ರೂಪಿಸಿ, ಈ ಅಪವ್ಯಾಖ್ಯಾನಗಳು ಸಾಮಾಜಿಕವಲ್ಲದ ಕಾರಣ ಗಳಿಂದ ಹುಟ್ಟಿದ್ದೆಂದು ಪ್ರಮಾಣೀಕರಿಸಿ ಈ ಅಪವ್ಯಾಖ್ಯಾನವನ್ನೇ ಅನುಮೋದಿಸುವ ಪ್ರಜ್ಞೆ ಯನ್ನು ರೂಪಿಸುವುದೇ ಅದರ ಉದ್ದೇಶವಾಗಿತ್ತು. ಮಾರ್ಕ್ಸಿಸ್ಟ್ ವಿಮರ್ಶಕರು ಈ ಎಲ್ಲ ತಪ್ಪು ವ್ಯಾಖ್ಯಾನಗಳನ್ನು ಸರಿಪಡಿಸಲು ಪ್ರಯತ್ನಿಸಿದರು.

ಇದಕ್ಕೆ ಪರ್ಯಾಯವಾಗಿ ಆ ಕಾಲದ ಇದಕ್ಕೆ ಸಮಕಾಲೀನವಾದ ಇನ್ನೊಂದು ವಿಮರ್ಶಾ ಧಾರೆ ಯುಟೋಪಿಯನ್ ಬೂರ್ಷ್ವಾಕಲೆಯ ಅರ್ಧವಿಲ್ಲದ ಆಕಾಂಕ್ಷೆಗಳನ್ನು ಹಾಗೂ ಹಲವು ತೊಡಕುಗಳನ್ನು ಸೂಕ್ಷ್ಮವಾಗಿ ಗಮನಿಸಿತು. ಅಲ್ಲದೆ ಕ್ರಿಯಾಶೀಲತೆಯೊಂದೇ ಈ ಎಲ್ಲ ದ್ವಂದ್ವ ಹಾಗೂ ಘರ್ಷಣೆಗಳಿಗೆ ಇರುವ ಏಕಮಾತ್ರ ಪರಿಹಾರ ಎಂಬುದನ್ನು ಓದುಗರಿಗೆ ಮನವರಿಕೆ ಮಾಡಿಕೊಟ್ಟದ್ದು ಗಮನಾರ್ಹ.

ಅರವತ್ತರ ದಶಕದಲ್ಲಿ ಮಾರ್ಕ್ಸಿಸ್ಟ್ ವಿಮರ್ಶಕರು ಬ್ರೆಕ್ಟ್‌ನಂಥವರ ಬರೆಹಗಳಿಂದ ಮುಕ್ತರಾಗಿರಲಿಲ್ಲ. ಸಾಂಪ್ರದಾಯಿಕ ದಂದ್ವಗಳ ವಿಶ್ಲೇಷಣೆಯಲ್ಲಿ ಸಂಸ್ಕೃತಿ ಚಿಂತನೆಯ ಪಾತ್ರ ತುಂಬ ಮಹತ್ತ್ವದ್ದೆಂದು ಬ್ರೆಕ್ಟ್ ಪಂಥ ಭಾವಿಸಿತ್ತು. ಬೆಕ್ಟ್ ಪಂಥದವರಲ್ಲಿ ಆ ಮಟ್ಟದ ಕ್ರಾಂತಿಕಾರಕತೆ ಇಲ್ಲವೆಂದೇ ಅಮೆರಿಕನ್ ಫಾರ್ಮಲಿಸ್ಟರು ಭಾವಿಸಿದ್ದರು. ಈ ಇಬ್ಬರ ನಡುವೆ ಏನೇ ಭಿನ್ನಾಭಿಪ್ರಾಯಗಳಿದ್ದರೂ ಆಧುನಿಕ ರೂಪಗಳ ಅಪಾಯಕಾರೀ ಪರಿಣಾಮಗಳ ಬಗ್ಗೆ ಎರಡೂ ಕಡೆಯವರಿಗೂ ಆತಂಕವಿತ್ತು. ಅಲ್ಲದೆ ಸಂಪ್ರದಾಯದೊಳಗಿನ ದ್ವಂದ್ವಗಳನ್ನು ಎಲ್ಲ ಪಂಥದವರೂ ಬಯಲಿಗೆಳೆಯಲು ಪ್ರಯತ್ನಿಸಿದರು. ಹೊಸ ಎಡ ಪಂಧಿಯರು ಕಾರ್ಯಕಾರಣ ಸಂಬಂಧವನ್ನು  ಅವಲಂಬಿಸಿ ಈ ದ್ವಂದ್ವಗಳ ಮೂಲವನ್ನು ಶೋಧಿಸಲೆತ್ನಿಸಿ ದರು. ಇದರಿಂದ ಬೌದ್ದಿsಕ ವಲಯಗಳು ಶೋಷಿತರ ಪರವಾಗಿ ದನಿಯೆತ್ತುವುದನ್ನೇ ನಿಲ್ಲಿಸಿದವು.

ಇಂಥ ನಿಲುವುಗಳು ನಿಜಕ್ಕೂ ಜೀವಂತವಾಗಿಯೇ ಇದ್ದವು. ಈ ತಲೆಮಾರಿನ  ವಿಮರ್ಶಕರು ಕೇವಲ ಮಾರ್ಕ್ಸ್‌ವಾದದ ಸಿದ್ಧಾಂತಿಗಳಷ್ಟೇ ಆಗಿರಲಿಲ್ಲ. ಆ ವಿಮರ್ಶಕರು ಹೊಸ ಎಡಪಂಥದ ರಾಜಕೀಯ ಸಂಸ್ಕೃತಿಯಲ್ಲಿಯೂ ಜೀವಿಸಿದ್ದರು. ಮಾರ್ಕ್ಸ್‌ನ ಹಲವು ನಂಬಿಕೆಗಳನ್ನು ಸಂಸ್ಕೃತಿಯಿಂದ ಪ್ರತ್ಯೇಕಿಸಿ ಅದನ್ನು ಮರುಪರಿಶೀಲಿಸಿದರು.  ಮೊದಲಿಗೆ ಹೊಸ ಎಡಪಂಧಿಯರು ಕಾರ್ಯ-ಕಾರಣ ಸಂಬಂಧದ ನೆರವಿನಿಂದ ದ್ವಂದ್ವಗಳ ಮೂಲವನ್ನು ಶೋಧಿಸಲಾರಂಭಿಸಿದ್ದರು. ಸಹಜವಾಗಿಯೇ ಬೌದ್ದಿsಕವರ್ಗವು ಶೋಷಿತರ ಪರ ದನಿ ಯೆತ್ತಲಿಲ್ಲ. ಆ ಕುರಿತು ಆಲೋಚಿಸಲೂ ಇಲ್ಲ. ಹೊಸ ಎಡಪಂಧಿಯ ಕಾರ್ಯಕರ್ತರು ವ್ಯಕ್ತಿವಾದವನ್ನು ಎತ್ತಿ ಹಿಡಿದರು. ಕೆಳವರ್ಗದ ಹಿತವನ್ನು ಗಮನದಲ್ಲಿರಿಸಿಕೊಳ್ಳದೇ ಬಂಡಾಯವೆದ್ದರು. ೧೯೪೦ರಲ್ಲಿ ಹೆರಾಲ್ಡ್ ರೋಸನ್‌ಬರ್ಗ್ ತನ್ನದೇ ಆದ ಅನುಭವದ ಹಿನ್ನೆಲೆಯಲ್ಲಿ ಈ ದ್ವಂದ್ವನ್ನು ವಿವರಿಸಿದ. ಈ ಎಲ್ಲ ದ್ವಂದ್ವವನ್ನೂ ವರ್ಗಸಂಘರ್ಷ ಎಂಬ ಒಂದೇ ಪದದಿಂದ ಕರೆಯ ಬಹುದು. ಆದರೆ ಈ ಪ್ರಯತ್ನಗಳನ್ನು ಹೊಸ ಎಡ ಪಂದಿsಯರು ಸಂಪೂರ್ಣ ನಿರಾಕರಿಸಿದುದನ್ನು ಪ್ರಸ್ತಾಪಿಸಲೇಬೇಕಿದೆ.

ಉದಾಹರಣೆಗೆ, ಹೊಸ ಎಡಪಂದಿsಯರು ಸಾಮಾನ್ಯ ಹಿತಾಸಕ್ತಿ ಹಾಗೂ ವಿಕೇಂದ್ರೀ ಕರಣಗಳ ವಿಷಯದಲ್ಲಿ ಹೋರಾಡಿದರು. ಶೋಷಣೆಯನ್ನು ವ್ಯವಸ್ಥಿತವಾಗಿ ಪೋಷಿಸುವ ಪದ್ಧತಿಗಳ ವಿರುದ್ಧ ದನಿಯೆತ್ತಿದರು. ಮಧ್ಯಮವರ್ಗದ ಬಿಳಿ ಚರ್ಮದ ನಾಗರಿಕ ಹಕ್ಕುಗಳ ಕಾರ್ಯಕರ್ತರು ತಾವು ನಿಜವಾದ ಪ್ರತಿನಿಧಿಗಳಲ್ಲ ಎಂಬುದನ್ನು ಅರಿತರು. ಅಲ್ಲದೆ ಕರಿಯರ ನಾಗರಿಕ ಹಕ್ಕುಗಳ ಹೋರಾಟ ತೀವ್ರವಾಯಿತು. ಇದು ಜನಸೇವೆಗೆ ತೋರಿದ ವಿರೋಧದ ನಿಲುವೆಂದು ಅರ್ಧವಲ್ಲ, ಅಥವಾ ಮಧ್ಯಮವರ್ಗದ ವಿರುದ್ಧದ ಧೋರಣೆಯೂ ಅಲ್ಲ, ಐಕ್ಯತೆಯೆಂಬುದು ಅದು ೩೦ರ ದಶಕದ ಚಿಂತಕರಿರಲಿ ಅಥವಾ ೬೦ರ ದಶಕದವರಿರಲಿ ಎಲ್ಲ ಕಾಲಕ್ಕೂ ಅಗತ್ಯವೇ ಆಗಿದೆ. ಆದರೆ ಅದರ ಐಕ್ಯತೆಯ ನೆಲೆ ಮಾತ್ರ ಬದಲಾಯಿತು. ಶೋಷಿತ ವರ್ಗದ ನೆಲೆಯಿಂದ ಐಕ್ಯತೆಯ ಜಿಜ್ಞಾಸೆ ಇನ್ನೂ ವಿಸ್ತಾರವಾಯಿತು. ಜನಸೇವೆ ಆತ್ಮಶುದ್ದಿಯ ಮಾರ್ಗವೆಂದು ನಂಬಲಾಯಿತು. ಆತ್ಮಸಾಕ್ಷಾತ್ಕಾರ, ಸ್ವಾತಂತ್ರ್ಯ ಮೊದಲಾದ ಕಲ್ಪನೆಗಳು ಮಧ್ಯಮವರ್ಗದ ಜಡ ಸಂಪ್ರದಾಯಿಕತೆಯಿಂದ ತಣ್ಣಗಾದವು.

ಹೀಗೆ ವ್ಯವಸ್ಥಿತ ಸಾಂಪ್ರದಾಯಿಕ ಕಾರ್ಮಿಕ ವರ್ಗದಿಂದ ಸಾಮಾಜಿಕ ನೆಲೆಯಲ್ಲಿ ಹೊಸ ಎಡಪಂಥವು ಬೆಳೆಯಲಾರಂಭಿಸಿತು. ಅಲ್ಪಸಂಖ್ಯಾತರು, ಎಲ್ಲ ವರ್ಗದ ಮಹಿಳೆಯರು, ಕಾಲೇಜು ವಿದ್ಯಾರ್ಧಿಗಳು ಹೀಗೆ ಎಲ್ಲರ ಚಳವಳಿಗಳು ಈ ಧಾರೆಯಲ್ಲಿಯೇ ಒಂದಾಗಿ ಇದರ ಪ್ರತಿನಿಧೀಕರಣ ಅಸಾಧ್ಯವಾಯಿತು. ಇಲ್ಲಿ ಸಂಸ್ಕೃತಿ ವಿಮರ್ಶೆಯನ್ನು ಹೇಗೆ ಪ್ರಭಾವಿಸ ಬಲ್ಲವು ಎಂಬ ಚರ್ಚೆ ಪ್ರಧಾನ ಆಗುತ್ತದೆ. ಪ್ರತಿನಿಧೀಕರಣದ ಕಲ್ಪನೆಯೇ ಹೊರಟು ಹೋದದ್ದು ಸಾಹಿತ್ಯಾಧ್ಯಯನಕ್ಕೆ ತುಂಬ ಅನುಕೂಲವಾಯಿತು. ಸಂಸ್ಕೃತಿಯೆಂಬುದು ತನ್ನನ್ನು ತಾನು ಪ್ರತ್ಯೇಕೀಕರಿಸಿಕೊಳ್ಳದೆ ಎಲ್ಲದರೊಡನೆ ಒಂದಾಯಿತು. ಇಂಥ ಅನೇಕ ಬಗೆಯ ಸಂಘರ್ಷಗಳ ಹಿನ್ನೆಲೆಯೇ ಮಾರ್ಕ್ಸ್‌ವಾದದ ಜಡ್ಡುಗಟ್ಟಿದ ಚಿಂತನೆಗಳಿಂದ ಹೊರತಾದ ನಿಲುವುಗಳು ರೂಪು ತಳೆಯತೊಡಗಲು ಕಾರಣ. ಹೀಗೆ ರೂಪು ತಳೆದ ನಿಲುವುಗಳ ಮೊತ್ತ ವಾಗಿಯೂ ನವ ಚಾರಿತ್ರಿಕವಾದದ ಚಿಂತನೆಗಳು ಮುಂದುವರೆದಿವೆ.