ನವ ಚಾರಿತ್ರಿಕವಾದದ ಚಿಂತನೆಗಳ ಜರೂರು ಎಷ್ಟರಮಟ್ಟಿಗೆ ಸರಿ ಅಥವಾ ಈ ವಾದದ ಮಿತಿಗಳು ಯಾವ ಸ್ವರೂಪದ್ದು ಎಂಬುದರ ಬಗೆಗೆ ವಿದ್ವಾಂಸರಲ್ಲಿ ಭಿನ್ನಾಭಿಪ್ರಾಯಗಳಿವೆ. ಸರಳವಾಗಿ ಹೇಳುವುದಾದರೆ ಇತಿಹಾಸವನ್ನು ಹೇಗೆ ಹೊಸದಾಗಿ ನೋಡಲು ಸಾಧ್ಯವಿದೆ ಎಂಬುದನ್ನು ನವ ಚಾರಿತ್ರಿಕವಾದ ಕಲಿಸುವಂಥದ್ದು. ಅಂದರೆ ಇಲ್ಲಿಯವರೆವಿಗೂ ಚಾಲ್ತಿ ಯಲ್ಲಿದ್ದ ಇತಿಹಾಸ ತತ್ವ ಹಾಗೂ ವಿಧಾನದ ಸಿದ್ಧಮಾದರಿಗಳೆಲ್ಲವನ್ನೂ ಪಕ್ಕಕ್ಕೆ ಸರಿಸಿ ಗ್ರಹಿಸಲು ಸಾಧ್ಯವಿದೆ ಎಂಬ ಸಂಗತಿಯನ್ನು ಮನದಟ್ಟು ಮಾಡಿಕೊಡುತ್ತದೆ. ಈ ದಿಸೆಯಲ್ಲಿ  ಮಾಕ್ಸ್ ವಾದಿ ಆರ್ಧಿಕತೆಯ ನೆಲೆಗಳಾಗಲಿ, ಈಗಾಗಲೇ ರಚನೆಗೊಂಡಿರುವ ಏಕಮುಖಿ ನೆಲೆಯ ಚರಿತ್ರೆಯಾಗಲಿ ಅಥವಾ ಇವುಗಳಿಂದಾದ ಪ್ರಭಾವ ಪರಿಣಾಮಗಳನ್ನಾಗಲಿ ಈ ಪಂಥವು ಒಪ್ಪುವುದಿಲ್ಲ. ಬದಲಾಗಿ ಇತಿಹಾಸ ಮತ್ತು ಸಂಸ್ಕೃತಿಗಳ ನಡುವೆ ಇರುವಂಥ ಒಂದು ನಿರಂತರವಾದ ಅನ್ಯೋನ್ಯ ಸಂಬಂಧ, ಸಂವಾದದ ಬಗೆಗೆ ಅರಿವನ್ನು ಮೂಡಿಸುವ ಕೆಲಸವನ್ನು ಮಾಡುತ್ತದೆ ನವ ಚಾರಿತ್ರಿಕವಾದದ ಒಟ್ಟು ಸಾರರೂಪವನ್ನು ಸಂಕ್ಷಿಪ್ತವಾಗಿ ಹೇಳಬಹುದು.

೧. ವ್ಯವಹಾರಿಕವಾದ ಎಲ್ಲ ಬಗೆಯ ಪ್ರಯೋಗಶೀಲತೆಗಳೊಂದಿಗೆ ಮಾತ್ರ ಯಾವುದೇ ಅಭಿವ್ಯಕ್ತಿ ಅನಾವರಣಗೊಳ್ಳಲು ಸಾಧ್ಯ.

೨. ಸಾಹಿತ್ಯ ಅಥವಾ ಸಾಹಿತ್ಯೇತರ ಎಂಬ ವಿಂಗಡಣಕ್ರಮವೇ ಹುರುಳಿಲ್ಲದ್ದು.

೩. ಎಲ್ಲ ಬಗೆಯ ವಾದ-ವಿವಾದಗಳು ವಿಮರ್ಶಾನೆಲೆಗಳು, ಹೋರಾಟಗಳು ತಾನು ಯಾವುದನ್ನು ವಿರೋಧಿ ನೆಲೆಯಿಂದ ತಿರಸ್ಕರಿಸಿತ್ತೋ ಅವೇ ಪರಿಕರಗಳನ್ನೇ ಸತ್ಯದ ಹುಡುಕಾಟಕ್ಕಾಗಿ ಬಳಸಿಕೊಳ್ಳುತ್ತವೆ.

೪.  ಯಾವುದೇ ಜ್ಞಾನ, ಚರ್ಚೆ, ಸಂಕಥನ, ಸಂವಾದ, ಅನುಸಂಧಾನಗಳು ಬದಲಾಗಲು ಸಾಧ್ಯತೆಯಿರುವ ಸತ್ಯಗಳನ್ನು ಮಾತ್ರ ಅನಾವರಣಗೊಳಿಸುತ್ತಿರುತ್ತವೆ. ಅಂತೆಯೇ ಮನುಷ್ಯ ಸ್ವಭಾವದ ಬದಲಾಯಿಸಲು ಸಾಧ್ಯವಾಗದ ಯಾವುದೇ ಅಂಶಗಳನ್ನು ಅಭಿವ್ಯಕ್ತಿಸಲು ಸಾಧ್ಯವಿಲ್ಲ.

೫. ಯಾವುದೇ ಒಂದು ಸಂಸ್ಕೃತಿಯನ್ನು ವಿವರಿಸುವ ಆರ್ಧಿಕತೆಯು ತನ್ನಲ್ಲಿ ಅಡಗಿರುವ ಬಂಡವಾಳಶಾಹಿಯ ನೆಲೆಗಳನ್ನೇ, ವಿಧಾನಗಳನ್ನೇ ಅಥವಾ ಅದರ ಭಾಷೆಯ ಮೂಲಕವೇ ವಿಶ್ಲೇಷಿಸಿಕೊಳ್ಳುವಲ್ಲಿ ಪರಿಸಮಾಪ್ತಿ ಕಾಣಬಯಸುತ್ತದೆ.

೬. ಯಾವುದೇ ಅಧ್ಯಯನದ ಫಲಿತಗಳು ಸಾಂಸ್ಕೃತಿಕ ಸಂರಚನೆಗಳ ಮೊತ್ತವಾಗಿಯೇ ಅನಾವರಣಗೊಳ್ಳುವಂಥದ್ದು.

ಹೀಗೆ ಅನೇಕ ಬಗೆಯ ತಾತ್ವಿಕ ನೆಲೆಗಳನ್ನು ನವ ಚಾರಿತ್ರಕವಾದದ ಚಿಂತನೆಗಳ ಮೊತ್ತದ ಸಾರರೂಪವೆಂದು ಹೇಳಲು ಬರುತ್ತದೆ. ಆದರೆ ಉದಾರವಾದಿ ಅಥವಾ ಮಾರ್ಕಿಸ್ಟ್ ಚಿಂತನೆಗಳ ಸಿದ್ಧಮಾದರಿಯ ವಿಮರ್ಶಾನೆಲೆಗಳನ್ನೇ ಅನುಮಾನದಿಂದ ನೋಡುತ್ತಿದ್ದ ಈ ಪಂಥದವರು, ವಿಶಿಷ್ಟವಾದ ಸಿದ್ಧಾಂತಗಳನ್ನೇ ರೂಪಿಸಿಕೊಂಡಿದ್ದರು ಎಂಬ ಟೀಕೆ ಇವರ ಮೇಲಿದೆ. ಸಾಂಪ್ರದಾಯಿಕ ವಿಮರ್ಶೆಗಳನ್ನು ಮೆಟ್ಟಿ ನಿಲ್ಲುವ ಭರಾಟೆಯಲ್ಲಿ ಅನಿರೀಕ್ಷಿತ, ಅಸಾಧಾರಣವಾದ ಪರಿಕಲ್ಪನೆಗಳ ಹುಟ್ಟಿಗೆ ಹಾಗೂ ಪರಿವರ್ತನೆಗಳಿಗೆ ಇವರು ಕಾರಣೀಭೂತ ರಾಗಿದ್ದಾರೆ ಎನ್ನಲಾಗಿದೆ.

ನವ ಚಾರಿತ್ರಿಕವಾದದ ಆಶಯಗಳು ಸ್ಪಷ್ಟವಾಗಿದ್ದರೂ ಪ್ರತ್ಯೇಕಿಸಿ ನೋಡುವ ಕೆಲವು ಸಿದ್ಧಮಾದರಿಗಳಲ್ಲಿಯೆ ಅನೇಕ ತೊಡಕುಗಳನ್ನು ಕೆಲವು ವಿದ್ವಾಂಸರು ಗುರುತಿಸಿದ್ದಾರೆ. ಬ್ರೂಕ್ ಧಾಮಸ್‌ರಂಥವರು ‘ಅಷ್ಟೂ ಜನ ಇತಿಹಾಸಕಾರರಿಗೆ ಅಷ್ಟೇ ಇತಿಹಾಸಗಳಿರುವು ದರಿಂದ ಅವೆಲ್ಲವನ್ನೂ ಒಂದೇ ಪ್ರಸ್ತಾವನೆಯ ಮುಖಾಂತರ ಪರಿಶೀಲಿಸಲು ಸಾಧ್ಯ ವಾಗುವುದಿಲ್ಲ’ ಎಂದಿದ್ದಾರೆ. ನವ ಚರಿತ್ರಕಾರರು ಹಿಂದಿನ ಇತಿಹಾಸವನ್ನೆಲ್ಲ ಪ್ರತ್ಯೇಕವಾಗಿ ನೋಡುವ ಇಲ್ಲವೇ ಸಮಗ್ರೀಕರಿಸಿ ನೋಡುವ ಮಿತಿಗಳಿಗೆ ಒಳಗಾಗಿದ್ದಾರೆ ಎನ್ನಲಾಗಿದೆ. ಉದಾಹರಣೆಗೆ ಟಿಲ್ಲಿಯಾರ್ಡ್‌ನಂಥವನಿಗೆ ಶೇಕ್ಸ್‌ಪಿಯರನ ಒಂದು ಭಾಷಣ ಎಲಿಜಬತೆನ್ ಕಾಲದ ಎಲ್ಲರಿಗೂ ಒಪ್ಪುವಂಥ ವಿಚಾರ ಎಂಬುದಾಗಿ ಪರಿಗಣಿಸುವುದು. ಅಂತೆಯೇ ಜಾರ್ಜ್ ಲುಕಾಕ್ಸ್‌ನಿಗೆ ಹ್ಯಾಮ್ಲೆಟನ ಸಾವು ಸಾಮ್ರಾಜ್ಯಶಾಹಿಯ ಸಾವು ಎಂದೇ ಪರಿಭಾವಿಸುವುದು, ಇತ್ಯಾದಿ.

ನವ ಚಾರಿತ್ರಿಕವಾದದ ಹೊಸ ಚಿಂತನೆಗಳಿಗೆ ಅನೇಕರು ತಮ್ಮನ್ನು ತಾವು ತೊಡಗಿಸಿ ಕೊಂಡಂತೆಯೇ ಟೀಕೆ-ಟಿಪ್ಪಣಿಗಳನ್ನೂ ಮಾಡಿದವರೂ ಉಂಟು. ಅದರಲ್ಲೂ ಕೆಲವು ಸಂಪ್ರದಾಯವಾದಿ ಬಲಪಂದಿsಯ ಚಿಂತಕರಂತೂ ತಮ್ಮ ಎಲ್ಲ ಬಗೆಯ ಪ್ರತಿರೋಧ, ಸಿಟ್ಟು-ಸೆಡವುಗಳನ್ನು ಅಭಿವ್ಯಕ್ತಿಸಿದ್ದಾರೆ. ಎಡ್ವರ್ಡ್‌ಪಾಟ್ಚರ್ ತನ್ನ ‘ದಿ ಕಮ್ಯುನಿಸ್ಟ್ ಮ್ಯಾನಿಫೆಸ್ಟೋ’ ಎಂಬ ಲೇಖನದಲ್ಲಿ “ವಿಮರ್ಶೆಯ ಕಲ್ಪನೆಯೆಂಬ ಸೈತಾನನು ಭೇಟಿಯಾಡ ಹೊರಟಿದ್ದಾನೆ. ಆ ಸೈತಾನ ಬೇರಾರು ಅಲ್ಲ; ನವ ಚಾರಿತ್ರಿಕವಾದಿ” ಎಂಬ ಸಾಲುಗಳಿಂದಲೇ ಪ್ರಾರಂಭಿಸುತ್ತಾನೆ. ಜೆ.ಹಿಲ್ಲಿಸ್ ಮಿಲ್ಲರ್‌ನಂತೂ “ಇತಿಹಾಸದತ್ತ ನೋಡುವವರು ಎಲ್ಲ ಸಿದ್ದಾಂತಗಳನ್ನು ಕಳಚಿ ಪಕ್ಕಕ್ಕಿಡಿ” ಎಂದಿದ್ದಾನೆ. ಕೆಲವು ಪತ್ರಿಕೆ, ನಿಯತಕಾಲಿಕಗಳು ಸಹ ನವ ಚಾರಿತ್ರಿಕವಾದವನ್ನು ಮೂದಲಿಸದೆ ಬಿಡಲಿಲ್ಲ. ‘ವಾಲ್ ಸ್ಟ್ರೀಟ್ ಜರ್ನಲ್’ ಈ ವಾದದ ಅನುಕರಣೆ ‘ಪಶುತ್ವದ ಕಡೆಗೆ ಪಯಣ’ ಮಾಡಿದಂತೆ ಎಂದು ಜರಿಯಿತು. ಅಲ್ಲದೆ ನ್ಯೂಯಾರ್ಕ್ ಟೈಮ್ಸ್, ನ್ಯೂಸ್ ಕ್, ಎನ್.ವೈ.ಆರ್.ಬಿ. ಮೊದಲಾದುವು ಈ ವಾದ ವನ್ನು ‘ಸಿದ್ಧಾಂತ ವಿರೋಧಿ’ ಎನ್ನುವುದರ ಜೊತೆಗೆ ‘ಇದು ಎಡಪಂದಿsಯ ವಿಮರ್ಶೆ ಯಲ್ಲಿ ಬಂಡಾಯ ಸ್ವರೂಪಿ ಹಾಗೂ ಪರಿಣಾಮದಲ್ಲಿ ವಿನಾಶಕಾರಿ’ ಎಂದು ಪ್ರತಿಬಿಂಬಿಸಿದವು.

ನವ ಚಾರಿತ್ರಿಕವಾದದ ಬಗೆಗೆ ಅನೇಕ ವಿಸ್ವಾಂಸರಲ್ಲಿ ದ್ವಂದ್ವಗಳೂ ಇವೆ. ಈ ವಾದವು ಐತಿಹಾಸಿಕ ಆಧಾರಗಳ ಮಹತ್ತ್ವವನ್ನೇ ಇಲ್ಲವಾಗಿಸಿ ಬಿಡಬಹುದು ಎಂಬ ಅನುಮಾನವನ್ನು ವ್ಯಕ್ತಪಡಿಸಿದ್ದಾರೆ. ಪುನರುಜ್ಜೀವನ(ರೆನೈಸಾನ್ಸ್)ದ ಅಧ್ಯಯನದೊಂದಿಗೆ ಸ್ತ್ರೀವಾದವನ್ನು ಜೋಡಿಸಿದ್ದು ಅನೇಕರಿಗೆ ಇಷ್ಟವಾಗಲಿಲ್ಲ. ಅಟೆರ್ಡಿಯನ್, ಗಾಯಿತ್ರೀ ಸ್ಪಿವಾಕ್, ಪೆಕೋರ ಮೊದಲಾದವರು ‘ನವ ಚಾರಿತ್ರಿಕವಾದವು ತನಗೆ ಯಾವುದು ಅಧಿಕೃತವೆಂದು ಭಾವಿಸು ತ್ತದೆಯೋ ಅದನ್ನೇ ಅನುಮಾನದಿಂದ ನೋಡಲು ಹೊರಡುವುದು ಮತ್ತೆ ಅದನ್ನೇ ಅನುಕರಿಸಲು ಹೊರಡುವುದು ಸಮಂಜಸವಾದುದಲ್ಲ’ ಎಂದು ಹೇಳಿರುವುದುಂಟು. ಆದರೆ ಇಂಥ ಅನೇಕ ದ್ವಂದ್ವಗಳು, ಟೀಕೆಗಳು ಈ ಪಂಥವನ್ನು ಇನ್ನಷ್ಟು ಪಕ್ವವಾಗುವಂತೆ ಮಾಡಿವೆ.

ನವ ಚಾರಿತ್ರಿಕವಾದವು ಕಳೆದೆರಡು ಮೂರು ದಶಕಗಳಲ್ಲಿ ಬೆಳೆದುಬಂದ ವೇಗವನ್ನು ಗಮನಿಸಿದರೆ ಎಂಥವರನ್ನೂ ದಂಗು ಬಡಿಸುವಂಥದ್ದೇ. ಇಂದು ಅನೇಕ ಶಿಸ್ತುಗಳವರು ನವ ಚಾರಿತ್ರಿಕವಾದದ ಚಿಂತನೆಗಳನ್ನು ಪರಿಗಣಿಸದೆಯೇ ಮುಂದುವರೆಯಲು ಸಾಧ್ಯ ಎಂಬ ಹೇಳಿಕೆಯನ್ನು ನೀಡಲು ಹಿಂಜರಿಯುತ್ತಿದ್ದಾರೆ. ಬಹುಶಃ ಇದಕ್ಕೆ ಅದರ ತತ್ವಗಳಲ್ಲಿನ ಗಟ್ಟಿತನವೇ ಕಾರಣ. ಇದರ ವ್ಯಾಪ್ತಿ ಎಷ್ಟೆಂದರೆ ಇಲ್ಲಿಯವರೆವಿಗೂ ಬಂದಿರುವ ನವ ಚಾರಿತ್ರಿಕವಾದದ ಲೇಖನ, ಕೃತಿ, ಸಂಪುಟಗಳ ಗಾತ್ರವೇ ಅದರ ಯಶಸ್ಸನ್ನು ಸಾರುವಂಥದ್ದು. ಹೀಗಾಗಿ ಪ್ರಾತಿನಿಧಿಕ ಅನ್ನಿಸುವ ಕೆಲವನ್ನಾದರೂ ಪಟ್ಟಿ ಮಾಡಲು ಸಾಧ್ಯ ಆಗುತ್ತಿಲ್ಲ. ಆದರೆ ಈ ಮಾತು ಭಾರತ ಅಥವಾ ಕನ್ನಡದ ಸಂದರ್ಭಕ್ಕೆ ಅನ್ವಯಿಸುವುದಿಲ್ಲ. ಈ ದಿಸೆ ಯಲ್ಲಿ ನಮ್ಮಲ್ಲಿ ಕೆಲಸಗಳು ಆಗಬೇಕಿದೆ.

ನವ ಚಾರಿತ್ರಿಕವಾದವು ತನ್ನ ಅಧ್ಯಯನ ಮಾರ್ಗದ ಬಗೆಗೆ ಸ್ವತಃ ತಾನೇ ನಿಷ್ಟುರವಾದ ವಿಮರ್ಶೆ, ಪರಿಶೀಲನೆ ಮಾಡಿಕೊಳ್ಳುತ್ತಿರುವುದರಿಂದ ವ್ಯವಸ್ಥಿತವಾದ ವಿಧಿ-ವಿಧಾನ ಅಥವಾ ಪರಿಣಾಮಗಳನ್ನು ಅಧಿಕೃತವಾಗಿ ಅಂತಿಮಗೊಳಿಸುತ್ತಿಲ್ಲ. ಬಹುಶಃ ಆದ್ದರಿಂದಲೇ ಈ ಮಾರ್ಗ ಎಲ್ಲರಿಗೂ ಅಕ್ಕರೆಯಾಗುತ್ತಿರುವುದು. ಏಕೆಂದರೆ ಗೊಂದಲ, ಸಮಸ್ಯೆ, ವಾದ-ವಿವಾದಗಳು ಯಾವುದೇ ಜ್ಞಾನಶಿಸ್ತಿನ ಪರಿಚಲನೆಗೂ ಅಗತ್ಯವಾದುದು. ಇಲ್ಲವಾದಲ್ಲಿ ಅವು ಅಂತಿಮ ಸತ್ಯಗಳನ್ನು ಘೋಷಿಸುವಲ್ಲಿ ಅಂತ್ಯ ಕಾಣುವ ಸಾಧ್ಯತೆಗಳೇ ಹೆಚ್ಚು. ಈ ಬಗೆಯ ಎಚ್ಚರ, ಅರಿವುಗಳೂ ನವ ಚಾರಿತ್ರಿಕವಾದವನ್ನು ಜೀವಂತವಾಗಿಡುವಲ್ಲಿ ಸಹಕರಿಸುತ್ತಿವೆ.

ಅಮೆರಿಕಾದಲ್ಲಿ ಇತಿಹಾಸದ ಬಗೆಗಿನ ‘ವಿಸ್ಮೃತಿ’ಗೆ ಪೂರಕವಾಗಿ ಸಾಹಿತ್ಯಾಧ್ಯಯನದಲ್ಲಿ ಚರಿತ್ರೆಯ ಪ್ರಶ್ನೆಗಳನ್ನು ಕುರಿತಂತೆ ಒಂದು ವಿಭಿನ್ನ ದೃಷ್ಟಿಕೋನವನ್ನು ಹುಟ್ಟುಹಾಕುವಲ್ಲಿ ಈ ವಾದ ಯಶಸ್ವಿಯಾಗಿದೆ. ಮಾನವಿಕ ಅಧ್ಯಯನಗಳಲ್ಲಿ ತೊಡಗಿರುವ ಅಧ್ಯಯನಕಾರರಿಗೆ ಭರವಸೆ ಹಾಗೂ ಹೆಮ್ಮೆಯ ಸಂಗತಿಗಳಿಂದ ಬೀಗುವಂತೆ ಮಾಡಿದೆ. ತಾಂತ್ರಿಕ ಶಿಕ್ಷಣ, ಮಿಲಿಟರಿ ಕ್ಷೇತ್ರದ ವೈಜ್ಞಾನಿಕ ಸಂಶೋಧನೆಗಳು, ರಾಜಕಾರಣ ಹಾಗೂ ವಾಣಿಜ್ಯ ಸಂಘ-ಸಂಸ್ಥೆಗಳು ಮೊದಲಾದವು ಸಮಾಜ ಹಾಗೂ ಸಂಸ್ಕೃತಿ ನೆಲೆಗಳಲ್ಲಿನ ಸಹಕಾರವನ್ನು ಬಯಸು ವಂತೆ ಮಾಡಿದ್ದು ಈ ವಾದದ ಫಲಿತಗಳೇ. ಈ ಹಿನ್ನೆಲೆಯಲ್ಲಿ ನವ ಚಾರಿತ್ರಿಕವಾದ ವನ್ನು ಕುರಿತ ಮಹತ್ತ್ವ ಮನವರಿಕೆ ಆಗುವಂಥದ್ದು. ಅದರಲ್ಲೂ ಚರಿತ್ರೆ ಎಂದರೆ ಗತಿಸಿಹೋದುದರ ಕತೆ ಎಂದು ಪರಿಭಾವಿಸುವ ವಿದ್ಯಾರ್ಧಿಗಳ ಪೂರ್ವಾಗ್ರಹವನ್ನು ತೊಡೆದುಹಾಕುವುದರ ಜೊತೆಗೆ ನಾವು ಇತಿಹಾಸದಲ್ಲಿಯೇ ಬದುಕುತ್ತಿದ್ದೇವೆ, ಇತಿಹಾಸವನ್ನೇ ಬದುಕಿಸುತ್ತಿದ್ದೇವೆ, ವರ್ತಮಾನವು ಸಹ ಇತಿಹಾಸದ ಭಾಗವೇ ಎಂಬುದನ್ನು ಮನವರಿಕೆ ಮಾಡಿಕೊಡುವುದರ ಮುಖೇನ ನವಚಾರಿತ್ರಕವಾದದ ಸಾಂಸ್ಕೃತಿಕ ಚಹರೆಗಳನ್ನು ಅನಾವರಣ ಮಾಡಿಕೊಡವ ಸವಾಲು ಚರಿತ್ರಕಾರರ ಮುಂದಿದೆ.