‘ಚರಿತ್ರೆ’ ಎಂಬ ಪರಿಕಲ್ಪನೆ ತನ್ನದೇ ಆದ ಪರಿಚಲನೆಗಳಿಂದ ವಿಭಿನ್ನ ಅರ್ಧ. ವ್ಯಾಖ್ಯಾನಗಳಿಂದ ಮುಂದುವರೆಯುತ್ತಿದೆ. ಆದರೆ ಈ ಹಿಂದಿನ ಶತಮಾನಗಳ ಪರಿಚಲನೆಗೂ ಈ ಹೊತ್ತಿನ ಹೊಸನೆಲೆಗಳ ಪರಿಚಲನೆಗಳಿಗೂ ಅಗಾಧವಾದ ಅಂತರ ಇದೆ. ಎಲ್ಲ ಬಗೆಯ ಸಾಂಪ್ರದಾಯಕ ನೋಟ, ವಿಧಿ-ವಿಧಾನ, ವಿಶ್ಲೇಷಣ ಕ್ರಮಗಳಿಗೂ ಸೆಡ್ಡು ಹೊಡೆಯುವ ದಿಸೆಯಲ್ಲಿ ‘ಚರಿತ್ರೆ’ ತನ್ನ ಚಲನೆಯನ್ನು ಮುಂದುವರೆಸಿದೆ. ಬಹುಶಃ ಇದಕ್ಕೆ ಆಧುನಿಕ ಜಗತ್ತು, ಆವಿಷ್ಕಾರಗಳು, ಆಲೋಚನಾಕ್ರಮಗಳು ಮುಖ್ಯ ಎಂದು ಮೇಲ್ನೋಟಕ್ಕೆ ಹೇಳಬಹುದು. ಆದರೆ ಈ ಆಲೋಚನಾಕ್ರಮದ ಹಿಂದೆ ಅಡಗಿರುವುದೇ ‘ಮನಸ್ಸು’. ಮನಸ್ಸು ಅಥವಾ ಮನಶಾಸ್ತ್ರೀಯ ನೆಲೆಗಳ ಅಧ್ಯಯನದ ಪ್ರಕ್ರಿಯೆ ಎಲ್ಲ ಜ್ಞಾನಶಾಖೆಗಳನ್ನು ಒಳಗೊಂಡು ಅನುಸಂಧಾನಗೊಳ್ಳುತ್ತಿರುವುದು ಸಾಮಾನ್ಯ ಸಂಗತಿ. ಆದರೆ ಚರಿತ್ರೆಯ ಶಿಸ್ತಿನಲ್ಲಿ ಇದರ ಪರಿಕ್ರಮ ನಿಜಕ್ಕೂ ಚಿಂತನಶೀಲವಾದುದು. ಅಷ್ಟೇ ಅಲ್ಲದೆ ಅಧ್ಯಯನಕ್ಕೆ ವಿಪುಲವಾದ ಒಳನೋಟಗಳಿಗೆ ದಾರಿ ಮಾಡಿಕೊಡುವಂಥದ್ದು. ನವ ಚಾರಿತ್ರಿಕವಾದದ ದಿಸೆಯಲ್ಲಿ ಚರಿತ್ರೆಯ ಇನ್ನೊಂದು ಮಗ್ಗಲನ್ನು ಪರಿಶೀಲಿಸುವ ಅಗತ್ಯವೂ ಇದೆ.

‘ಚರಿತ್ರೆ’ ಎಂದಾಕ್ಷಣ ಕೇವಲ ತೇದಿ, ಯುದ್ಧ ಅಥವಾ ಕಾಲಾನುಕ್ರಮದ ಘಟನಾವಳಿಗಳ ಸರಮಾಲೆಗಳೇ ಅಲ್ಲ ಎಂಬ ಎಚ್ಚರ ಇತ್ತೀಚಿಗೆ ಮೂಡತೊಡಗಿದೆ. ಇದು ಬುದ್ದಿsಜೀವಿ ವಿದ್ವಾಂಸರ ವಲಯದ ಮಾತಾದರೂ ಮಿತಿಗಳೇ ಇಲ್ಲ ಎಂಬುದು ಇದರ ಅರ್ಧವಲ್ಲ. ಬದಲಾಗಿ ಅಕ್ಷರಬಲ್ಲವರ ನಡುವಿನ ಸಂವಾದದ ಚರಿತ್ರೆಯ ಕಟ್ಟುವಿಕೆಯನ್ನು ಇನ್ನೊಮ್ಮೆ ಪರಿಶೀಲಿಸುವ ಜರೂರು ಕಾಣಿಸಿಕೊಂಡಿದೆ. ಇದರಿಂದ ನಾವು ಸಾಗಿ ಬಂದ ದಾರಿಯ ಅರ್ಧ ವಿಶ್ಲೇಷಣೆಯ ಮಿತಿಗಳೂ ಅನಾವರಣಗೊಳ್ಳಲಾರಂಭಿಸಿವೆ.

ಮಾನವನ ‘ಮನಸ್ಸು’ ಹಾಗೂ ಅವನ ಬಳಕೆಯ ‘ಭಾಷೆ’ಗಳಿಗೆ  ಬಿಡಿಸಲಾಗದ ನಂಟಿನ ವಿಚಾರಗಳನ್ನು ಕುರಿತು ಸಾಕಷ್ಟು  ಅಧ್ಯಯನಗಳೂ ಆಗಿವೆ, ಆಗುತ್ತಿವೆ. ಈ ದಿಸೆಯಲ್ಲಿಯೇ ಚರಿತ್ರೆ ಹಾಗೂ ಅಕ್ಷರ ಸ್ವರೂಪಿ ‘ಕಟ್ಟುವಿಕೆ’ಯ ಕ್ರiಕ್ಕೂ ನಂಟಿದೆ. ಇಲ್ಲಿ ಇನ್ನೊಮ್ಮೆ ಮನಸ್ಸಿನ ಸಂವೇದನೆಯ ಮಾಧ್ಯಮವಾಗಿ ಭಾಷೆ ಬಳಕೆ ಆಗುತ್ತಿರುವುದು ಸಹಜ, ಆದರೆ ಭಾಷೆಯ ಬಳಕೆಯ ಮುಖೇನ ‘ಚರಿತ್ರೆ’ ಅಥವಾ ಇನ್ನಾವುದೇ ಶಿಸ್ತನ್ನು ಕಟ್ಟುವುದು ಅಥವಾ ಒಡೆಯುವುದನ್ನು ಗಮನಿಸಬೇಕಾಗುತ್ತದೆ. ಆಗ ಇಲ್ಲಿ ಮಾನವನ ಮನಸ್ಸಿನ ಪರಿಚಲನಾ ಕ್ರಮದ ದಾಖಲಾತಿಯ ವಿವರ, ವಿಶ್ಲೇಷಣೆಗಳು ದೊರೆಯುತ್ತಾ ಹೋಗುತ್ತವೆ. ಈ ಬಗೆಯ ಅಧ್ಯಯನದ ಅನಾವರಣ, ತೇದಿ, ಘಟನಾವಳಿಗಳ ದಾಖಲಾತಿಗಳಿಗಿಂತ ಭಿನ್ನ ಬಗೆಯದು. ಈ ಕುರಿತಂತೆ ಚಿಂತನೆ ಇನ್ನಷ್ಟು ವಿಪುಲವಾಗಿಯೇ ನಡೆಯಬೇಕಿದೆ. ಆಗ ಮಾತ್ರ ಭಾಷಿಕ ನೆಲೆಗಳ ಸಮಾಜದ ವಿಭಿನ್ನ ಸ್ತರಗಳು ಅನಾವರಣಗೊಳ್ಳಲು ಸಾಧ್ಯ. ‘ನವ ಚಾರಿತ್ರಿಕವಾದ’ದ ಆಶಯವೂ ಸಹ ಅದೇ. ಕನ್ನಡದ ಸಂಧರ್ಭದಲ್ಲಿ ಫ್ರಾಯ್ಡ್‌ನಿಂದ ಪ್ರೇರಿತವಾದ ಮನೋ ವೈಜ್ಞಾನಿಕ ನೆಲೆಗಳ ಅಧ್ಯಯನದ ಕೊರತೆಯ ಹಿನ್ನೆಲೆಯಲ್ಲಿ ಈ ಮೇಲಿನ ಮಾತುಗಳನ್ನು ಎಚ್ಚರದಿಂದಲೇ ಪ್ರಸ್ತಾಪಿಸಲಾಗುತ್ತಿದೆ.

ಯಾವುದೇ ‘ಭಾಷೆ’ಯ ಹಿಡಿತಕ್ಕೆ ಸಿಕ್ಕಿ ಅರ್ಧ-ವ್ಯಾಖ್ಯಾನಗಳಿಗೆ ಎಡೆಮಾಡಿಕೊಡುವ ‘ಶಿಸ್ತು’ ಅಂತಿಮ ದರ್ಶನವನ್ನೇನೂ ಕೊಡುವುದಿಲ್ಲ. ಈ ಮಾತು ‘ಚರಿತ್ರೆ’ಯ ಜ್ಞಾನ ಶಿಸ್ತಿಗೂ  ಅನ್ವಯ ಆಗುತ್ತದೆ. ಅಂದರೆ ಇಲ್ಲಿ ಅಡಗಿರುವ ಜ್ಞಾನದ  ಹಿಂದಿನ ‘ಮನಸ್ಸು’ ಅಧ್ಯಯನಕ್ಕೆ ಒಳಗಾಗಬೇಕಿದೆ. ಹಲವು ಶತಮಾನಗಳ ಚರಿತ್ರೆಯ ಹರಿವನ್ನು ಈಗಾಗಲೇ ದಾಖಲಿಸುತ್ತಾ ಬಂದಿದ್ದೇವೆ. ಆದರೆ ಈ ದಾಖಲಾತಿ ಅಥವಾ ವಿಶ್ಲೇಷಣೆಗಳು ಎಷ್ಟರಮಟ್ಟಿಗೆ ‘ಸತ್ಯ’ ಅಥವಾ ‘ವಸ್ತುನಿಷ್ಟ’ವಾದುದು ಎಂಬುದನ್ನು ಪರಿಶೀಲಸಬೇಕಾದ ಜರೂರು ಇದೆ. ಈ ಜರೂರು ದೊಡ್ಡ ಸವಾಲಾಗಿ ಚರಿತ್ರೆಕಾರರನ್ನು ಕಾಡುತ್ತಿರುವುದು, ವಿಭಿನ್ನ ವಿಶ್ಲೇಷಣೆ ಗಳನ್ನು ಹೊರಹಾಕುತ್ತಿರುವುದು ಈ ಹೊತ್ತಿನ ಗಂಭೀರ ಚರ್ಚೆಗಳಲ್ಲಿ ಒಂದು. ‘ಸತ್ಯ’ ಎಂಬುದಕ್ಕೆ ಹಲವು ಮುಖಗಳಿರುವಂತೆ ‘ವಸ್ತುನಿಷ್ಟತೆ’ಗೂ ಪರಿಪೂರ್ಣತೆ ಇಲ್ಲದಿರುವ ಸಂಗತಿ ಚರಿತ್ರೆಕಾರರಿಗೆ ತಿಳಿದಿರುವ ಹಿನ್ನೆಲೆಯಲ್ಲಿಯೇ ಪರಿಶೀಲಿಸಬೇಕಿದೆ.

ಇಲ್ಲಿಯವರೆಗೂ ನಡೆದ ಎಲ್ಲ ಬಗೆಯ ಅಧ್ಯಯನಗಳು ‘ಏಕ ಕೇಂದ್ರಿತ’ ನೆಲೆಗಳನ್ನು ಒಡೆದು ಹಾಕಿವೆಯಾದರೂ ವಿಶ್ಲೇಷಣೆಯ ಪರಿಚಲನೆ ಮುಂದುದರೆದೇ ಇದೆ. ಇದು ಒಳ್ಳೆಯ ಲಕ್ಷಣವೂ ಹೌದು. ಒಂದು ಶಿಸ್ತಿನ ಚಲನಶೀಲತೆಯ ಪರಿಕ್ರಮವೂ ಹೌದು. ಏಕೆಂದರೆ ನಿಂತ ನೀರಾದರೆ ಅಥವಾ ಜಡ್ಡುಗಟ್ಟಿದರೆ ಆ ಶಿಸ್ತು ತನ್ನ ಕೊನೆಗಾಲವನ್ನು ಮುಟ್ಟಿದಂತೆಯೇ ‘ಏಕ ಕೇಂದ್ರಿತ’ ನೆಲೆಗಳಿಗೆ ಭಿನ್ನವಾಗಿ ಅಂಚಿನ ಅಥವಾ ಅಲಕ್ಷ್ಯಕ್ಕೆ ಒಳಪಡಿಸಿದ ಎಲ್ಲ ಸಂಗತಿ, ವಿಚಾರಗಳ ಕಡೆಗೂ ನಾವು ಇಂದು ಗಮನಹರಿಸುತ್ತಿದ್ದೇವೆ. ಆದರೆ ಅವೆಲ್ಲವೂ ಇನ್ನೊಮ್ಮೆ ಕೇವಲ ‘ಅಕ್ಷರ’ ಸಮುದಾಯದ ಪರಿಮಿತಿಗಳಿಗೆ ಮಾತ್ರ ಒಳಗಾಗಿರುವುದು ಗಂಭೀರವಾದ ಸಂಗತಿ. ಇಲ್ಲಿ ಪ್ರಧಾನಭಿತ್ತಿಯಾಗಿ ಅನಾವರಣಗೊಂಡಿರುವುದು ‘ಜ್ಞಾನ’ದ ಹರಿವಿನ ದಾಖಲಾತಿ. ಅಂದರೆ ಅಕ್ಷರ ಲೋಕದರ್ಶನಕ್ಕೆ ಕಾಣಸಿಕ್ಕಿರುವ ಚಿತ್ರಣ ಮಾತ್ರ. ಬದಲಾಗಿ ಮಾನವನ ಮನಸ್ಸಿನ ನಿರಂತರೆಯ ಅಥವಾ ಹರಿವಿನ ದಾಖಲಾತಿ ಇಲ್ಲ, ಅಂತೆಯೇ ವಿಶ್ಲೇಷಣೆಗಳ ನೋಟವೂ ಕಡಿಮೆ. ಈ ಮಾತಿನ ಅರ್ಧ ಆಲೋಚನೆಯೇ ಹರಿದಿಲ್ಲ ಎಂಬುದಲ್ಲ. ಬದಲಾಗಿ ಫುಕೋ ಅಂಥವರ ಜ್ಞಾನದ ವಿಸ್ತರಣೆಯ ನೆಲೆಗಳಲ್ಲಿ ಅಧ್ಯಯನ ಶೀಲರು ಮುಂದುವರೆಯುತ್ತಿಲ್ಲ ಎಂಬುದು ಗಮನಾರ್ಹ. ನವಚರಿತ್ರಿವಾದದ ‘ಪ್ರತಿನಿಧೀ ಕರಣ’ದ ಸುತ್ತಲಿನ ಚರ್ಚೆಗಳು ಸಹ ಈ ದಿಸೆಯಿಂದಲೇ ಹೊರಟಂಥವು.

ಚರಿತ್ರೆಯ ಹೊಸ ಪರಿಕ್ರಮದಲ್ಲಿ ಈ ಬಗೆಯ ಮನಸ್ಸಿನ ನಿರಂತರೆಯ ಏಳು-ಬೀಳುಗಳ ಚರಿತ್ರೆಯನ್ನು ಪರಿಶೀಲನೆಗೆ ಇನ್ನಷ್ಟು ಒಳಪಡಿಸಬೇಕಿದೆ. ಆಗ ಮಾತ್ರ ಇಲ್ಲಿಯವರೆಗಿನ ದಿಸೆಗಳಿಗಿಂತ ಭಿನ್ನವಾದ ಒಳನೋಟಗಳು ಅನಾವರಣಗೊಳ್ಳುತಾ ಹೋಗುತ್ತವೆ. ಅಂತೆಯೇ ಸಾಂಪ್ರದಾಯಿಕ ಚರಿತ್ರೆಯ ಆಲೋಚನಾಕ್ರಮಕ್ಕೆ, ಚಿಂತೆನೆಗಳಿಗೆ ಸರಿಯಾದ ಪೆಟ್ಟುಕೊಡಲು ಸಾಧ್ಯ. ಇದರಿಂದ ‘ಅಕ್ಷರ’ಲೋಕದ ಚರಿತ್ರೆಗಿಂತ ಮನಸ್ಸಿನ ಅಥವಾ ‘ಮಾತು’ ಪ್ರಧಾನವಾಗಿ ಹರಿದುಬಂದ ಚರಿತ್ರೆಯ ಲೋಕದೃಷ್ಟಿ ಅನಾವರಣಗೊಳ್ಳುತ್ತಾ ಹೋಗಲು ಸಾಧ್ಯ ಆಗುತ್ತದೆ. ಮನಸ್ಸು, ಭಾಷೆ ಹಾಗೂ ಅಕ್ಷರಗಳು ಕಟ್ಟಿಕೊಡುವ ಚರಿತ್ರೆಗಿಂತ ಮಾತು, ಜ್ಞಾನದ ಹರಿವಿನ ಪ್ರಪಂಚ ಕಟ್ಟಿಕೊಡುವ ಚರಿತ್ರೆಯ ಪರಿಕ್ರಮ ತನ್ನನ್ನು ಹೊಸ ಬಗೆಯಲ್ಲಿ ತೆರೆದುಕೊಳ್ಳುತ್ತದೆ. ಆಗ ಮಾತ್ರ ಫುಕೋ ಹೇಳುವ ‘ಜ್ಞಾನದ ಕೇಂದ್ರೀಕರಣ’ದ ನೆಲೆಗಳನ್ನು ಮೀರುವುದಷ್ಟೇ ಅಲ್ಲ, ಬದಲಾಗಿ ‘ಅಕ್ಷರ’ದ ಹಿಡಿತದ ಶಕ್ತಿಯನ್ನು ಕಳಚಿಕೊಂಡು ನೋಡಲು, ಅನಾವರಣ ಗೊಳ್ಳಲು ಚಿಂತಿಸಬಹುದು. ಚರಿತ್ರೆಯ ವಿಶ್ಲೇಷಣೆಯಲ್ಲಿ ಈ ಬಗೆಯ ಹೊಸ ಮಗ್ಗ ಲೊಂದನ್ನು ಹುಟ್ಟುಹಾಕುವುದರ ಜೊತೆಗೆ ಅದಕ್ಕೆ ಪೂರಕವಾದ ವೈಧಾನಿಕತೆಯೊಂದನ್ನು ರೂಪಿಸಿಕೊಳ್ಳಬೇಕಾದ ಜರೂರು ಇದೆ. ಆಗ ಮಾತ್ರ ಚರಿತ್ರೆಯ ಇನ್ನುಳಿದ ಅಥವಾ ಇದುವರೆಗೂ ಕಾಣಸಿಗದಿದ್ದ ಹೊಸ ಚಹರೆಗಳೂ ಕಾಣಿಸಿಕೊಳ್ಳುತ್ತಾ ಹೋಗಬಹುದು.

ಚರಿತ್ರೆಯ ಹೊಸ ಪರಿಕ್ರಮದ ಮಗ್ಗಲೊಂದು ‘ನೆನಪೇ’ ಪ್ರಧಾನಧಾರೆ ಎಂಬುದನ್ನು ಸಾಬೀತುಗೊಳಿಸುವುದರಲ್ಲಿ ಅನುಮಾನವಿಲ್ಲ. ನೆನಪು ಹಾಗೂ ಮರೆವಿನ ತಾಕಲಾಟಗಳ ನಡುವಿನ ಅನುಸಂಧಾನದ ಚರಿತ್ರೆಯಲ್ಲಿ ‘ಅಧಿ ಚರಿತ್ರೆ’ಯ ಬಾಗಿಲು ತೆಗೆದುಕೊಳ್ಳುವ ಸಾಧ್ಯತೆಗಳಿವೆ. ಆಗ ದೇಶೀ ನೆಲೆಗಳ ನಂಬಿಕೆ-ಆಚರಣೆ, ಪ್ರಕೃತಿಯ ಏರು-ಪೇರು, ಪ್ರಾಣಿ-ಪಕ್ಷಿಗಳ ಸಾಕ್ಷಿ-ಆಧಾರಗಳ ಕಧಾನಕವೊಂದು ತೆರೆದುಕೊಳ್ಳಬಹುದು. ಈ ಬಗೆಯ ಚರಿತ್ರೆಗಳು ‘ಮಾತು’ ಹಾಗೂ ‘ನೆನಪು’ಗಳನ್ನು ಪ್ರಮುಖ ಭಿತ್ತಿಯನ್ನಾಗಿಸಿಕೊಳ್ಳಲಿವೆ.