‘ಚರಿತ್ರೆ’ ಅಥವಾ ‘ಇತಿಹಾಸ’ವನ್ನು ಕುರಿತ ಅರ್ಥ, ವ್ಯಾಖ್ಯಾನಗಳು ಸಾಕು ಅನ್ನುವಷ್ಟು ಇವೆ. ಆದರೆ ಪ್ರತಿಯೊಬ್ಬ ಚರಿತ್ರಕಾರನ ಸೈದ್ಧಾಂತಿಕ ನಿಲುವುಗಳ ಆಧಾರದ ಮೇಲೆ ಅವು ರಚನೆಗೊಂಡಿರುವುದರಿಂದ ನಮಗೆ ಮುಖ್ಯ ಅನ್ನಿಸುತ್ತವೆ. ಇಲ್ಲಿ ವಿಶ್ಲೇಷಣೆಯ ನಿಲುವುಗಳೂ ಸಹ ಅಡಕಗೊಂಡಿರುವುದು ಸಹಜ. ‘ಚರಿತ್ರೆ’ ಜ್ಞಾನಶಾಖೆ ಈ ಹೊತ್ತಿನಲ್ಲಿ ತನ್ನದೇ ಆದ ಅಧ್ಯಯನ ವಿಧಾನ, ಸೈದ್ಧಾಂತಿಕ ನಿಲುವು, ವಿಭಿನ್ನ ಅರ್ಧಗಳನ್ನೊಳಗೊಂಡ ಪರಿಕಲ್ಪನೆ, ವಿಶ್ಲೇಷಣಾ ಕ್ರಮ, ವಿಭಿನ್ನ ಪಂಥಗಳ ದೃಷ್ಟಿಕೋನ ಹೀಗೆ ಹತ್ತು ಹಲವು ನೆಲೆಗಳಲ್ಲಿ ವಿಸ್ತ್ರತಗೊಂಡಿದೆ. ಇದರ ಜೊತೆಗೆ ಜಗತ್ತಿನಾದ್ಯಂತ ಹೊಸ ಆಲೋಚನ ಕ್ರಮಗಳಿಗೆ ಹಾಗೂ ತಾಂತ್ರಿಕವಾದ ವೈಧಾನಿಕತೆಗಳಿಗೂ ತನ್ನನ್ನು ತಾನು ಸಜ್ಜುಗೊಳಿಸಿಕೊಂಡು ಮುಂದುವರೆದಿದೆ. ಹೀಗಿದ್ದರೂ ‘ಹೊಸ ಚರಿತ್ರೆ’ಯ ಮನೋಭೂಮಿಕೆಗೆ ಅನೇಕ ಚರಿತ್ರಕಾರರು ಒಗ್ಗಿಕೊಂಡಿಲ್ಲ. ಅಂತೆಯೇ ಸಂಸ್ಕೃತಿ ಕೇಂದ್ರಿತ ಬಹುಮುಖಿ ನೆಲೆಗಳಿಗೆ ಚರಿತ್ರೆಯ ಭಿತ್ತಿಯನ್ನು ಸಿದ್ಧಪಡಿಸಿ ಕೊಂಡಿಲ್ಲ. ಇನ್ನು ‘ನವ ಚಾರಿತ್ರಿಕವಾದ’ದ ತಿರುಳನ್ನು ಅರ್ಧ ಮಾಡಿಕೊಂಡು ಅದನ್ನು ಅನ್ವಯಿಸಿಕೊಳ್ಳುವುದು ದೂರದ ಮಾತೇ ಸರಿ. ಈ ದಿಸೆಯಲ್ಲಿ ಚರಿತ್ರೆ ಜ್ಞಾನಶಾಖೆಯಲ್ಲಿನ ಅನುಭವ-ಅನುಭೂತಿಗಳನ್ನು ಪರಿಶೀಲನೆ ಅಗತ್ಯ.

‘ಹಿಸ್ಟರಿ’ ಅನ್ನುವುದು ‘ವಾಸ್ತವಿಕತೆಗಳ ವಿಜ್ಞಾನ’ವೆಂದೇ ಇಂದು ರುಜುವಾತಾಗಿವೆ. ಅಲ್ಲದೆ ಯಾವುದೇ ಕಾಲದ ಚಾರಿತ್ರಕಾಂಶಗಳು ತನ್ನ ಜೀವಂತಕಾಲದ ಅನುಭವ-ಅನುಭೂತಿ ಗಳೊಂದಿಗೆ ಮೇಳೈವಿಸಿಕೊಂಡಿರುತ್ತವೆ ಎಂಬ ಅಂಶವೂ ಸಹ. ಆದರೆ ನಮ್ಮಲ್ಲಿ ಅನೇಕರು ಇಂದಿಗೂ ‘ಗತ’ದ ‘ಭೂತ’ಕ್ಕೆ ಬಲಿಯಾದವರು, ಅದರ ಗುಂಗಿನಿಂದ ಹೊರಗೆ ಬರುತ್ತಲೇ ಇಲ್ಲ. ಅಂದರೆ ‘ಚರಿತ್ರೆ’ ಎಂಬುದು ‘ಗತ’ದ ಅರ್ಧ-ವ್ಯಾಖ್ಯೆಗಳಿಗೆ ಮಾತ್ರ ಸೀಮಿತ. ಇನ್ನೂ ಕೆಲವರಿಗೆ ಆಕರಗಳನ್ನು ಕುರಿತಂತೆ ಎಲ್ಲಿಲ್ಲದ ಮೋಹ. ಈ ಹೊತ್ತಿಗೂ ‘ಆಕರಗಳಿಲ್ಲದೆ ಚರಿತ್ರೆಯೇ ಇಲ್ಲ’ ಎಂಬ ವ್ಯಾಖ್ಯಾನಕ್ಕೇ ಜೋತುಬಿದ್ದು ಹಲುಬುವುದುಂಟು. ಆಕರಗಳಿಗೆ ಜೀವವೇ ಇಲ್ಲ ಎಂಬ ಕನಿಷ್ಟ ತಿಳುವಳಿಕೆಯೂ ಇಲ್ಲದೆ ಅದೈsಸುವುದುಂಟು. ಆಕರಗಳಿಗೆ ಜೀವಕೊಟ್ಟು ಅವುಗಳನ್ನು ಮಾತನಾಡುವಂತೆ ಮಾಡುವವನೇ ಚರಿತ್ರಕಾರ ಎಂಬ ಅರಿವು ಸಹ ಇಲ್ಲ. ಇಂಥ ಕ್ಲೀಷೆಗೊಂಡ ವೈಚಾರಿಕತೆಯ ನೆರಳಿನಲ್ಲಿಯೆ ಚಿಂತನೆ ನಡೆಸುತ್ತಿರುವ ನಮ್ಮ ನಡುವಿನ ಬಹುಪಾಲು ಚರಿತ್ರಕಾರರ ಬಗೆಗೆ ಏನೆನ್ನಬೇಕೋ ತಿಳಿಯುತ್ತಿಲ್ಲ.

ಚರಿತ್ರೆ ಎಂದರೆ ‘ಗತ’, ‘ಗತ’ವೆಂದರೇನೆ ‘ಚರಿತ್ರೆ’ ಎಂದು ಮಾತನಾಡುವ ಅಜ್ಞಾನದ  ಪರಮಾವಧಿಯೂ ನಮ್ಮ ನಡುವೆ ಅನಾವರಣಗೊಳ್ಳುತ್ತಿರುತ್ತದೆ. ಇಂಥ ಸನ್ನಿವೇಶದಲ್ಲಿ ‘Past’ ಎನ್ನುವುದು ಕೇವಲ ‘ಶೋಧನೆ’ಯೋ ಅಥವಾ ಅದೊಂದು ‘ಹುಡುಕಾಟ’ದ ಪ್ರಕ್ರಿಯೆಯೋ ಎಂಬುದನ್ನು ಸಾಬೀತುಪಡಿಸಲಾಗದಷ್ಟು ಚರಿತ್ರಕಾರ ಕೈಕಟ್ಟಿ ಕೂರು ವಂತಾಗಿದೆ.  ಈ ಬಗೆಯ ನಮ್ಮ ಸನ್ನಿವೇಶಕ್ಕೆ ಕಾರಣಗಳೇನು ಎಂಬುದು ಚರ್ಚೆ ಆಗಬೇಕಿದೆ. ಅಲ್ಲದೆ ಈ ಬಗೆಯ ‘ಸಮೂಹ ಸನ್ನಿ’ಗಳಿಂದ ಚರಿತ್ರೆಯ ಜ್ಞಾನ ಶಾಖೆಯನ್ನು ಬಿಡುಗಡೆ ಗೊಳಿಸುವುದು ಸಹ ಈ ಹೊತ್ತಿನ ಅಧ್ಯಯನಕಾರರ ಹೊಣೆಯೂ ಹೌದು. ಸಮಕಾಲೀನ ಸಂಧರ್ಭದ ‘ಸಂಕಥನ’ವಾಗಿಯೂ ಚರಿತ್ರೆ ಹೇಗೆ ಪರಿಚಲಿಸುತ್ತಿದೆ ಎಂಬುದನ್ನು ರುಜುವಾತು ಪಡಿಸುವುದು ‘ನವ ಚರಿತ್ರಕಾರ’ರ ಜವಾಬ್ದಾರಿಯೂ ಹೌದು. ‘Past’ನ್ನು ಕುರಿತು ಆಲೋಚಿಸುವುದರ ಜತೆಗೆ ‘Present’ನ್ನು ಪರಿಶೀಲಿಸುವ ಪರಿಪಾಠವೊಂದು ನಮ್ಮ ನಡುವೆ ಜೀವಂತವಾಗಿಯೇ ತನ್ನ ಪರಿಚಲನೆಯನ್ನು ಮಾಡುತ್ತಿರುತ್ತದೆ ಎಂಬುದು ಇಲ್ಲಿ ಪ್ರಧಾನ ಚಿಂತನಾಕ್ರಮ ಆಗಬೇಕಿದೆ. ಆಗ ಮಾತ್ರ ‘ಚರಿತ್ರೆ’ಯು ‘ಆಗಿ ಹೋದುದಲ್ಲ’ ಬದಲಾಗಿ ಅದು ‘ಆಗುತ್ತಿರುವುದು’ ಎಂಬ ಸರಳವಾದ ಗ್ರಹಿಕೆ ಬರಲು ಸಾಧ್ಯ. ಅಲ್ಲದೆ ಚರಿತ್ರೆಯ ‘ರಚನೆ’ (Construction) ಹಾಗೂ ‘ಪುನಾರಚನೆ’(Re-Construction)ಗಳ ಅನು ಸಂಧಾನ ಸಾಧ್ಯವಾಗುತ್ತದೆ. ಈ ಹಿನ್ನೆಲೆಯಲ್ಲಿಯೇ ನವ ಚರಿತ್ರಕಾರರು ಎಲ್ಲ ಕಾಲಗಳನ್ನು ವರ್ತಮಾನದಲ್ಲಿಯೇ ಅನುಭೂತಿ ಹೊಂದಲು ಸಾಧ್ಯ ಎಂದಿರುವುದು.

ಆಧುನಿಕವಾದ ಜ್ಞಾನದ ವರಸೆ, ಸಿದ್ಧಾಂತ, ವಾದ-ವಿವಾದಗಳು ನಮಗಿಂದು ‘Self reflection’ನ ಓದು, ಅರ್ಧ ಗ್ರಹಿಕೆಗಳನ್ನು ಹೇಳಿಕೊಡುತ್ತಿವೆ. ಹೀಗಾಗಿ ಚರಿತ್ರೆಯನ್ನು ‘ಸಂರಚನೆ’ (Constructive) ಮಾಡುವ ಅಂತೆಯೇ ಅದನ್ನು ‘ನಿರಚನೆ’ (De-constructive) ಮಾಡುವ ನೆಲೆಗಳೂ ಸಹ ಅನಾವರಣಗೊಳ್ಳುವಂತೆ ಆಗಿದೆ. ‘Past’ನ್ನು ನಮ್ಮ ಮೂಲಕ ನೋಡುವ ಕ್ರಮವೊಂದು ಹೇಗಿದೆಯೋ ಹಾಗೆಯೇ ‘Past’ಗೂ(ಅಥವಾ ‘ಗತ’ಕ್ಕೂ) ತನ್ನದೇ ಆದಂಥ ‘ಗತದ ಗತ’ವೊಂದಿದೆ. ಅದನ್ನು ‘ಅಧಿ ಚರಿತ್ರೆ’(Meta History)ಯ ನೆಲೆಗಳಲ್ಲಿ ಪರಿಭಾವಿಸಲಾಗುತ್ತಿದೆ. ಈ ಕುರಿತ ಚಿಂತನೆಗಳು ಭಾರತ ಅಥವಾ ಕನ್ನಡದ ಸಂದರ್ಭದಲ್ಲಿ ಸಾಕಷ್ಟು ಆಗಿಲ್ಲ.

‘ಗತ’ದ ವೈಭವಗಳಿಗೆ ಜೋತುಬಿದ್ದು ವಿಶ್ಲೇಷಿಸುವ, ವ್ಯಾಖ್ಯಾನಿಸುವ ಕ್ರಮದ ಚರಿತ್ರೆಗೆ ಇನ್ನಷ್ಟು ಹಳೆಯ ಪರಂಪರೆಯೇ ಇದೆ. ಆದರೆ ಅದನ್ನು ಸ್ಥೂಲವಾಗಿ ವಸಾಹತುಶಾಹಿ ಕಾಲಘಟ್ಟದಿಂದ ಪರಿಶೀಲಿಸಬಹುದು. ಭಾರತದ ಚರಿತ್ರೆಯ ವ್ಯಾಖ್ಯಾನದ ನಿಲುವುಗಳಲ್ಲಿ ಈ ಬಗೆಯ ಆಲೋಚನಾಕ್ರಮಗಳನ್ನು ಗುರುತು ಮಾಡಲು ಸಾಧ್ಯ. ಅದರಲ್ಲೂ ಪಾಶ್ಚಾತ್ಯರು ತಮ್ಮ ಪಶ್ಚಿಮದ ‘ನಾಗರೀಕ’ ಕಣ್ಣುಗಳಿಂದ ನೋಡಿದ ನೋಟ ಗಮನಾರ್ಹವಾದುದು. ಅವರು ಪೂರ್ವದ ‘ಅನಾಗರೀಕ’ ಚರಿತ್ರೆಯನ್ನು ಹುಡುಕಿ ತೆಗೆದ ವಾರಸುದಾರರು ಎಂದು ‘ಕ್ಲೇಮು’ ಮಾಡಿಕೊಳ್ಳುವುದುಂಟು. ಈ ಹೊತ್ತಿಗೂ ಕೆಲವು  ಚರಿತ್ರೆಕಾರರು ಆ ಹಿರಿಮೆಯ ಗುಂಗಿನಿಂದ ಹೊರಗೆ ಬಂದಿಲ್ಲ. ಕುತೂಹಲದ ಸಂಗತಿ ಎಂದರೆ ತಮ್ಮ ‘ಚಸ್ಮಾ’ದ ಮೂಲಕ ನಮ್ಮನ್ನು ನೋಡಿದ ಪಾಶ್ಚಾತ್ಯರ ಕಣ್ಣಿಗೆ ನಾವು ಹೇಗೆ ಕಂಡೆವೋ ಹಾಗೆಯೇ ನಮ್ಮವರಿಗೂ ಕಂಡದ್ದು. ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಹೇಳುವುದಾದರೆ ಅವರ ಕನ್ನಡಕದಿಂದ ನಾವು, ನಮ್ಮ ಗತದ ಚರಿತ್ರೆಗಳು ಇನ್ನಷ್ಟು ಗಾಢವಾಗಿ ಅನಾವರಣಗೊಂಡಂಥದ್ದು. ಹೀಗೆ ಕಾಣುವ ನೋಟಗಳ ಹಿಂದಿನ ಚಿಂತನೆಯ ಪ್ರಭಾವವೇ ಈ ಹೊತ್ತಿಗೂ  ಮುಂದು ವರೆದಿದೆ. ಅದೇ ‘ಓರಿಯಂಟಲಿಸ್ಟ್’ ನೋಟಗಳ ಮುಂದುವರೆದ ಅವತರಣಿಕೆ. ಇದನ್ನು ನವ ಚರಿತ್ರೆಯ ಚಿಂತಕರು ವಿಭಿನ್ನ ರೀತಿಯ ಹೇಳಿಕೆಗಳಲ್ಲಿ  ರುಜುವಾತುಪಡಿಸಿದ್ದಾರೆ. ಅದರಲ್ಲೂ ಎಡ್ವರ್ಡ್ ಸಯೀದನ ಚಿಂತನೆಗಳು ಗಂಭೀರವಾದುವು.

‘ಓರಿಯಂಟಲಿಸ್ಟ್’ ಪಾಶ್ಚಾತ್ಯರು ತಮ್ಮ ಗತದ ‘ಭೂತ’ದ ಹಿರಿಮೆ-ಗರಿಮೆಗಳನ್ನು ತಮ್ಮ ಚರಿತ್ರೆಗೆ ಮೀಸಲಿಟ್ಟುಕೊಂಡು ಮೆರೆದು ವ್ಯಾಖ್ಯಾನಿಸತೊಡಗಿದ್ದರು. ಅದು ವಸಾಹತು ಶಾಹಿ ಕಾಲಘಟ್ಟದಲ್ಲಿ ನಮ್ಮ ಚರಿತ್ರೆಕಾರರನ್ನು ಎಷ್ಟರಮಟ್ಟಿಗೆ ಪ್ರಭಾವ ಬೀರಿತು ಅಂದರೆ, ಈ ಹೊತ್ತಿಗೂ ಆ ಖಾಯಿಲೆಯಿಂದ ಹೊರಗೆ ಬರಲಾಗದಷ್ಟು. ಭಾರತೀಯ ಮೇಲ್ಮಧ್ಯಮ ವಿದ್ಯಾವಂತ ಬುದ್ದಿಜೀವಿಗಳು, ಚಿಂತಕರು, ಚರಿತ್ರಕಾರರು, ಪಾಶ್ಚಾತ್ಯರ ಈ ‘ಗತ’ದ  ಭೂತಕ್ಕೆ ಹರಕೆಯ ಕುರಿಗಳಾದರು. ಅಲ್ಲದೆ ನಮ್ಮಲ್ಲಿನ ರಾಷ್ಟ್ರೀಯವಾದಿ ಚರಿತ್ರೆಯ ಬರೆಹಗಳಂತೂ ಗತದ ‘ಸುವರ್ಣ ಯುಗ’ಗಳ ವೈಭವವನ್ನೇ ಸಾಕ್ಷಾತ್ಕಾರಿಸಿಕೊಂಡದ್ದುಂಟು. ಭಾರತೀಯರಿಗೆ ‘ಚರಿತ್ರೆಯ ಪ್ರಜ್ಞೆ’ಯೇ ಇಲ್ಲವೆಂದು ಹೇಳಿದವರೆ ಅವರಿಗೆ ಬೇಕಾಗಿದ್ದ (ಒಡೆದು-ಆಳುವ ನೀತಿಗಾಗಿ) ನಮ್ಮ ಗತದ ಚರಿತೆಗೆ ಮುನ್ನುಡಿ ಬರೆದಿದ್ದರು. ಇದರಿಂದ ಪುಲಕಿತರಾದ ನಮ್ಮವರು ಇನ್ನಷ್ಟು ಆಳವಾಗಿ, ಅಗಲವಾಗಿ ಅಗೆದು ವಸಾಹತುಶಾಹಿಗೆ ಸೆಡ್ಡು ಹೊಡೆಯುವ ರೀತಿಯಲ್ಲಿ ಸಂಶೋಧನೆ ಮಾಡಿ ಭಾರತದ ‘ಏಕಮುಖಿ’ (Monoli thic) ಚರಿತ್ರೆಯ ಹುಟ್ಟಿಗೆ ಕಾರಣರಾದರು. ಅಂದಿನ ಆಂಗ್ಲಶಾಹಿ ಪ್ರಭುತ್ವವನ್ನು ಹೊರ ಗಟ್ಟಲು ನಡೆಸಿದ ಈ ಹುನ್ನಾರದ ‘ಗತ’ದ ಚರಿತ್ರೆ ಭಾರತೀಯರ ‘ಬಹುಮುಖಿ’ (Multi faces) ನೆಲೆಗಳನ್ನು ಮರೆಮಾಚಿಸಿದವು. ಹೀಗೆ ಮರೆಮಾಚಿಸಿದ ಕೆಟ್ಟ ಪರಿಣಾಮವೇ ಈ ಹೊತ್ತಿನ ಕೋಮುವಾದಿ ನೆಲೆಗಳ ಗತದ ‘ಭೂತ’ಕ್ಕೆ ಬಲಿಯಾದ ನಮ್ಮ ಮನೋ ಚಿಂತನೆ. ಅಂತೆಯೇ ಈ ಮೂಸೆಯಿಂದ ಹೊರಬರಲಾಗದ ಕಬಂಧದ ‘ಚರಿತ್ರೆ’. ಇದನ್ನು ಬಯಲು ಮಾಡಬೇಕಾದ ಜರೂರು ಈ ಹೊತ್ತಿನ ನವ ಚರಿತ್ರಕಾರರಿಗೆ ದೊಡ್ಡ ಸವಾಲೇ ಹೌದು.

ತೃತೀಯ ಜಗತ್ತಿನ ರಾಷ್ಟ್ರಗಳು ಈ ಹೊತ್ತು ಸ್ವಾಭಿಮಾನದಿಂದ ಮುಂದುವರೆಯಲು ನಿರ್ವಾಹತೀಕರಣದ ಸನ್ನಿವೇಶ ಬಿಡುತ್ತಿಲ್ಲ. ಇದಕ್ಕೆ ಕಾರಣ ಜಾಗತೀಕರಣದ ಪ್ರಕ್ರಿಯೆ. ಅಂತೆಯೇ ನಮ್ಮ ಕಣ್ಣಿಗೆ ನೇರವಾಗಿ ಕಾಣದ ನವವಸಾತೀಕರಣಕ್ಕೆ ಈಡುಮಾಡಿರುವದು. ವಸಾಹತುಶಾಹಿ ವಿರೋಧಿ ಚಿಂತನೆಗಳು, ಬರೆಹಗಳು ಹೊಸ ಆಲೋಚನಾಕ್ರಮದ ಚರಿತ್ರೆಯ ಬರೆಹಗಳಿಗೆ ನಮ್ಮ ಮನಸ್ಸು-ಚಿಂತನೆಗಳನ್ನು ಸಜ್ಜುಗೊಳಿಸಿಕೊಳ್ಳಲು ಬಿಡುತ್ತಿಲ್ಲ. ಇದರ ಪರಿಣಾಮವೇ ನಾವು ಈ ಹೊತ್ತಿಗೂ ಶಾಲಾ-ಕಾಲೇಜುಗಳಲ್ಲಿ ಬೋಧಿಸುತ್ತಿರುವ ‘ಗತ’ದ ‘ಭೂತ’ಕ್ಕೆ ಬಲಿಯಾದ ಚರಿತ್ರೆಯ ಪಾಠ-ಪ್ರವಚನಗಳು. ಹಿಂದಿನ ಎಲ್ಲ ಬಗೆಯ ಆಕರಗಳನ್ನು ಅವುಗಳ ಆಧಾರದ ಮೇಲೆ ರಚನೆಗೊಂಡ ಚರಿತ್ರೆಯ ವಿಶ್ಲೇಷಣೆ-ವ್ಯಾಖ್ಯಾನ ಗಳನ್ನು ಪ್ರಶ್ನಿಸುವ (Interrogate) ಅರಿವನ್ನೇ ನಾವು ಇಂದು ಕಳೆದುಕೊಂಡಿದ್ದೇವೆ. ಹೀಗೆ ಪ್ರಶ್ನಿಸುವ ಪರಿಪಾಠವೇ ಚರಿತ್ರೆ ಜ್ಞಾನಶಾಖೆಯ ಪ್ರಧಾನ ಅಸ್ತ್ರವೆಂದು ಇಂದು ಕೆಲವು ಹೊಸ ಚರಿತ್ರೆಕಾರರು ತೋರಿಸಿಕೊಡುತ್ತಿದ್ದಾರೆ. ಆದರೆ ಅದನ್ನು ಸ್ವೀಕರಿಸುವ ಅಥವಾ ನಿರಾಕರಿಸುವ ಪರಿಕ್ರಮಗಳೂ ಸಹ ನಮ್ಮಲ್ಲೇ ಅನೇಕರಿಗಿಲ್ಲ. ಹೀಗಾಗಿ ನಮಗೆ ‘ಗತ’ದ ಹುಡುಕಾಟಕ್ಕೆ ಕಲಿಸಲಾದ ಮಾರ್ಗೊಪಾಯಗಳೇ ಇಂದಿಗೂ ಅಕ್ಕರೆಯ ವಿಧಿ-ವಿಧಾನಗಳಾಗಿವೆ. ಅಂದಮೇಲೆ ಪರಿಚಿತವಾದ ಅರ್ಥ, ಪರಿಕರ, ವೈಧಾನಿಕತೆ, ವಿಶ್ಲೇಷಣೆ ವ್ಯಾಖ್ಯಾನ ಗಳನ್ನು ಪಕ್ಕಕ್ಕೆ ಸರಿಸಿ ನೋಡುವ ನೋಟ ಎಲ್ಲಿಂದ ಬರಬೇಕು. ನವ ಚಾರಿತ್ರಿಕವಾದದ ತಿರುಳು ಅಡಗಿರುವುದೇ ಈ ಬಗೆಯ ಪರಿಕರಗಳ ವಿರುದ್ಧ ದಿಕ್ಕಿಗೆ ಚಲಿಸುವುದರಲ್ಲಿ.

ಸಾಂಪ್ರದಾಯಿಕ ಆಲೋಚನ ಕ್ರಮ, ವಿಮರ್ಶಾ ನೆಲೆಗಳಿಂದ ಹೊರತಾದ ಹೊಸ ಆಯಾಮಗಳಿಂದ ಚರಿತ್ರೆಯ ಸಂಗತಿಗಳನ್ನು ನೋಡುತ್ತಿರುವವರು ಇಲ್ಲ ಅನ್ನುವಷ್ಟು ಕಡಿಮೆ. ಈ ದಿಸೆಯಲ್ಲಿ ಭಾರತದ ಚರಿತ್ರೆ ಹಾಗೂ ಚರಿತ್ರಲೇಖನ ಶಾಸ್ತ್ರದ ಪರಿಧಿಗಳಲ್ಲಿ ಕೆಲವು ಚರಿತ್ರೆಕಾರರು ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಆದರೆ ವೈಧಾನಿಕತೆಯ ನೆಲೆಗಳಲ್ಲಿ ಇನ್ನಷ್ಟು ಭರವಸೆಗಳು ಮೂಡುತ್ತಿಲ್ಲ. ಈ ಮಾತು ಕನ್ನಡದ ಸಂದರ್ಭಕ್ಕೂ ಅನ್ವಯಿಸುತ್ತದೆ. ‘ಗತ’ದ ‘ಭೂತ’ದಿಂದ ಪ್ರಜ್ಞಾಪೂರ್ವಕವಾಗಿ ಬಿಡಿಸಿಕೊಳ್ಳುವ ಪ್ರಯತ್ನ ಗಳ ಜರೂರು ಇದೆ. ಆಗ ಮಾತ್ರ ಯಾವುದೇ ಚರಿತ್ರೆಯ ವಸ್ತು, ವಿಷಯ, ಸಂಗತಿ, ಘಟನೆ ಮೊದಲಾದವುಗಳನ್ನು ಭಿನ್ನವಾದ ಬಹುಮುಖಿ ಆಯಾಮಗಳಿಂದ ಪ್ರವೇಶಿಸಲು ಸಾಧ್ಯ. ಅಲ್ಲದೆ ಚರಿತ್ರೆಯ ಅಧ್ಯಯನಗಳು ಸಾಂಸ್ಕೃತಿಕ ಸಂರಚನೆಗಳ ಮೊತ್ತವಾಗಿ ಹೊರ ಹೊಮ್ಮಲು ಎಡೆಮಾಡಿಕೊಟ್ಟಂತೆ ಆಗುತ್ತದೆ.