‘ನವ ಚಾರಿತ್ರಿಕವಾದ’ ಎಂಬ ಪರಿಕಲ್ಪನೆಯು ತೀರ ಇತ್ತೀಚಿನದು. ಸಾಹಿತ್ಯ ಹಾಗು ಚರಿತ್ರೆ ಜ್ಞಾನಶಿಸ್ತುಗಳೆರಡರಲ್ಲೂ ಆಸಕ್ತಿ ಹೊಂದಿದ್ದ ನನಗೆ ಈ ಕುರಿತಂತೆ ಕುತೂಹಲವೂ ಇತ್ತು. ‘ನ್ಯೂ ಹಿಸ್ಟಾರಿಸಿಸಂ’ ಪರಿಕಲ್ಪನೆಯ ಬಗೆಗೆ ನನ್ನ ಮಾರ್ಗದರ್ಶಕರೂ, ನಾಡಿನ ಖ್ಯಾತ ಚಿಂತಕರೂ ಆದ ಕಿ.ರಂ.ನಾಗರಾಜ ಅವರು ಅಧ್ಯಯನ ಮಾಡಲು ಹುರಿದುಂಬಿಸುತ್ತಲೇ ಇದ್ದರು. ಆದರೆ ನನ್ನದೇ ಆದ ಮಿತಿಗಳೊಂದಿಗೆ ಪ್ರಸ್ತುತ ರೂಪದಲ್ಲಿ ಈ ಕೃತಿ ಪ್ರಕಟ ಆಗುತ್ತಿದೆ. ಸಾಹಿತ್ಯ ಹಾಗು ಚರಿತ್ರೆಗಳೊಂದಿಗೆ ಬೆಸೆದುಕೊಂಡಿರುವ ಈ ಪರಿಕಲ್ಪನೆಯನ್ನು ಕುರಿತು ಕೆಲಸ ಮಾಡಲು ಕನ್ನಡ ವಿಶ್ವವಿದ್ಯಾಲಯವು ಸಹ ಅನುವು ಮಾಡಿಕೊಟ್ಟದ್ದು ಸಂತಸದ ಸಂಗತಿ. ಈ ಹಿನ್ನೆಲೆಯಲ್ಲಿ ಹಿಂದಿನ ಎಲ್ಲ ಕುಲಪತಿಗಳಿಗೂ ಹಾಗೂ ಈ ಹೊತ್ತಿನ       ಡಾ. ಎ.ಮುರಿಗೆಪ್ಪನವರಿಗೂ ನಾನು ಆಭಾರಿಯಾಗಿದ್ದೇನೆ.

ಬಹುಶಃ ಕನ್ನಡದಲ್ಲಿಯೇ ಮೊದಲ ಕೃತಿ ಇದೆಂದು ಭಾವಿಸಿರುವ ನನಗೆ ನಾಡಿನ ಹಲವು ವಿದ್ವಾಂಸರ ಒತ್ತಾಯ, ಒತ್ತಾಸೆಗಳು ಕಾರಣವಾಗಿವೆ. ಖ್ಯಾತ ಚಿಂತಕರಾಗಿದ್ದ ಡಿ.ಆರ್.ನಾಗರಾಜ ಅವರು ಈ ಕುರಿತು ಆಲೋಚನೆ ಮಾಡಲು ಹೇಳಿದ್ದರಾದರೂ ಪ್ರಸ್ತುತ ಕೃತಿ ಬರುವ ವೇಳೆಗೆ ಅವರೇ ಇಲ್ಲವಾದ ಕೊರತೆ ನನ್ನನ್ನು ಕಾಡುತ್ತಿದೆ. ಬಿ.ಸುರೇಂದ್ರರಾವ್, ಸಿ.ಎನ್.ರಾಮಚಂದ್ರನ್, ಬಸವರಾಜ ಕಲ್ಗುಡಿ, ಎಸ್.ಚಂದ್ರಶೇಖರ್, ಕೆ.ವಿ.ನಾರಾಯಣ ಮೊದಲಾದ ವಿದ್ವಾಂಸರು ಈ ಕುರಿತು ವಿಚಾರಿಸುತ್ತಲೇ ಇದ್ದರು. ಇವರೆಲ್ಲರಿಗೂ ಧನ್ಯವಾದಗಳು. ಹಲವು ತಾಂತ್ರಿಕ ಕಾರಣಗಳಿಂದಾಗಿ ಪ್ರಸ್ತುತ ಕೃತಿಯು ಈಗ ತಡವಾಗಿ ಪ್ರಕಟ ಆಗುತ್ತಿದೆ. ಹಿಂದಿನಿಂದಲೂ ಪ್ರೋವಿಶ್ವವಿದ್ಯಾಲಯದ ಸಂಸ್ಥಾಪಕ ಕುಲಪತಿಗಳೂ, ಹಿತೈಷಿಗಳೂ ಆದ ಡಾ. ಚಂದ್ರಶೇಖರ ಕಂಬಾರ ಮೇಷ್ಟರು ಹಾಗೂ ವಿಶ್ವವಿದ್ಯಾಲಯದ ಎಲ್ಲ ಸಹೋದ್ಯೋಗಿ ಮಿತ್ರರಿಗೂ ನನ್ನ ಧನ್ಯವಾದಗಳು. ಅಂತೆಯೇ  ಚರಿತ್ರೆ ವಿಭಾಗದ ಹಾಗೂ ಪ್ರಸಾರಾಂಗದ ಗೆಳೆಯರೆಲ್ಲರಿಗೂ ನನ್ನ ನೆನಕೆಗಳು. ಪ್ರತ್ಯಕ್ಷವಾಗಿ ಪರೋಕ್ಷವಾಗಿ ಸಹಕರಿಸಿದ ಎಲ್ಲರನ್ನೂ ಈ ಸಂದರ್ಭದಲ್ಲಿ ನೆನಪು ಮಾಡಿಕೊಳ್ಳುತ್ತೇನೆ.

ಡಾ. ಸಿ.ಆರ್. ಗೋವಿಂದರಾಜು