ಗಾಯಕರಾಗಿ, ಹಾರ್ಮೋನಿಯಂ ವಾದಕರಾಗಿ ಹಿಂದೂಸ್ಥಾನಿ ಸಂಗೀತದಲ್ಲಿ ತಮ್ಮದೇ ಆದ ಛಾಪು ಮೂಡಿಸಿರುವ ಹುಬ್ಬಳ್ಳಿಯ ಶ್ರೀ ನಾಗನಾಥ ಒಡೆಯರ್ ಅವರು ಕರ್ನಾಟಕದ ಜನಾನುರಾಗಿ ಸಂಗೀತಗಾರಲ್ಲೊಬ್ಬರು.

ಅವರು ಜನಿಸಿದ್ದು ಹಾವೇರಿ ಜಿಲ್ಲೆಯ ಬಂಕಾಪೂರದಲ್ಲಿ, ೧೯೪೪ರ ಮಾರ್ಚ್ ತಿಂಗಳ ೯ ರಂದು. ಬಾಲ್ಯದಲ್ಲಿಯೇ ಸಂಗೀತದತ್ತ ಒಲವು ಬೆಳೆಸಿಕೊಂಡ ಅವರು ತಮ್ಮ ೧೦ನೇ ವಯಸ್ಸಿನಲ್ಲಿ ಪಂ. ವ್ಹಿ. ಎಚ್‌. ಇನಾಮದಾರ ಅವರಲ್ಲಿ ಪ್ರಾರಂಭಿಕ ಸಂಗೀತ ಶಿಕ್ಷಣ ಪಡೆದುಕೊಂಡರು. ಅಖಿಲ ಭಾರತ ಗಾಂಧರ್ವ ಮಹಾ ಮಂಡಳದಿಂದ ಸಂಗೀತ ವಿಶಾರದ ಹಾಗೂ ಕರ್ನಾಟಕ ಸರ್ಕಾರದ ಸಂಗೀತ ವಿದ್ವತ್‌ ಪರೀಕ್ಷೆಯಲ್ಲಿ ಉನ್ನತ ದರ್ಜೆಯಲ್ಲಿ ತೇರ್ಗಡೆ ಹೊಂದಿದರು. ಮುಂದೆ ತಮ್ಮ ಚಿಕ್ಕಪ್ಪ ಶ್ರೀ ರಾಘವೇಂದ್ರ ಚವಟೆಯವರಲ್ಲಿ ಅನಂತರ ಪದ್ಮವಿಭೂಷಣ ಡಾ. ಗಂಗೂಬಾಯಿ ಹಾನಗಲ್ಲ ಅವರ ಬಳಿ ೧೦ ವರ್ಷಗಳ ಸುದೀರ್ಘ ಸಂಗೀತ ಶಿಕ್ಷಣ ಪಡೆದು ಕಿರಾಣಾ ಘರಾಣೆಯ ಸಂಗೀತಗಾರರಾಗಿ ಹೆಸರು ಪಡೆದಿದ್ದಾರೆ.

ಆಕಾಶವಾಣಿ ಹಾಗೂ ದೂರದರ್ಶನದ ‘ಬಿ-ಹೈ’ ಕಲಾವಿದರಾಗಿರುವ ಅವರು ಬೆಂಗಳೂರು ಹಾಗೂ ದೆಹಲಿ ದೂರದರ್ಶನದಿಂದ ಕಾರ್ಯಕ್ರಮ ನೀಡಿದ್ದಾರೆ. ಬೆಂಗಳೂರು, ಮೈಸೂರು, ಹೈದ್ರಾಬಾದ, ಪುಣೆ, ಮುಂಬೈ ಮುಂತಾದೆಡೆಗಳಲ್ಲಿ ಸಂಗೀತ ಕಾರ್ಯಕ್ರಮ ನೀಡಿದ್ದಾರೆ. ಉತ್ತಮ ಹಾರ್ಮೋನಿಯಂ ವಾದಕರೂ ಆಗಿರುವ ಅವರು ಗಂಗೂಬಾಯಿ ಹಾನಗಲ್ಲ, ಭೀಮಸೇನ ಜೋಶಿ, ಬಸವರಾಜ ರಾಜಗುರು, ಅರ್ಜುನ ಸಾ ನಾಕೋಡ ಮುಂತಾದ ಸಂಗೀತ ದಿಗ್ಗಜರಿಗೆ ಸಮರ್ಥವಾಗಿ ಹಾರ್ಮೋನಿಯಂ ಸಾಥ್‌ ನೀಡಿದ್ದಾರೆ. ನಾಡಿನ ಪ್ರತಿಷ್ಠಿತ ಲಕ್ಕುಂಡಿ ಉತ್ಸವ, ಚಾಲುಕ್ಯ ಉತ್ಸವ ಮುಂತಾದ ಸಂಗೀತ ಉತ್ಸವಗಳಲ್ಲಿ ಅವರು ಸಂಗೀತ ಕಛೇರಿ ನೀಡಿದ್ದಾರೆ.

ಅವರಿಗೆ ಅನೇಕ ಪುರಸ್ಕಾರ ಬಂದಿವೆ. ಹುಲಗೂರಿನ ಶ್ರೀ ಪುಣ್ಯ ಸಾಧನ ಜೀವನ್ಮುಕ್ತಾಲಯದ ಶ್ರೀ ಶ್ರೀ ವೆಂಕಟೇಶ್ವರ ಸ್ವಾಮಿಗಳಿಂದ ‘ಸಂಗೀತ ರತ್ನ’, ಗದುಗಿನ ಕರುನಾಡ ಚೇತನ, ಹಾಗೂ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯ ‘ಕರ್ನಾಟಕ ಕಲಾಶ್ರೀ’ (೨೦೦೧) ಮುಂತಾದವುಗಳು ಗಮನಾರ್ಹವಾಗಿವೆ.