ಸೌಮ್ಯಕೇಶವ ದೇವಾಲಯ

ದೂರ ತಾಲ್ಲೂಕು ಕೇಂದ್ರದಿಂದ – ೦.
ಜಿಲ್ಲಾ ಕೇಂದ್ರದಿಂದ – ೪೦ ಕಿ.ಮೀ.

ಸೌಮ್ಯಕೇಶವ ದೇವಾಲಯ ಹೊಯ್ಸಳ ಹಾಗೂ ವಿಜಯನಗರ ವಾಸ್ತುಶಿಲ್ಪದ ಸಂಗಮ. ಈ ದೇವಾಲಯದ ಶಿಖರ ನಮ್ಮ ರಾಜ್ಯದ ಅತಿ ಎತ್ತರದ ಶಿಖರಗಳನ್ನು ಹೊಂದಿರುವ ದೇವಾಲಯಗಳಲ್ಲಿ ಒಂದು. ಸೌಮ್ಯ ಕೇಶವ ದೇವಾಲಯದ ಮುಖ್ಯ ಗುಡಿಯಲ್ಲಿರುವ ವಿಗ್ರಹದಿಂದಾಗಿ ಈ ದೇವಾಲಯವನ್ನು ಸೌಮ್ಯ ಕೇಶವ ದೇವಾಲಯ ಎಂದು ಕರೆಯುತ್ತಾರೆ. ವಿಗ್ರಹದ ಮುಖ ಸೌಮ್ಯತೆಯಿಂದಾಗಿ ಈ ಹೆಸರು ಬಂದಿರಬಹುದು. ಮುಖಮಂಟಪ ಹಾಗೂ ಪ್ರವೇಶದ್ವಾರ ಅದರ ಮೇಲೆ ಏಳು ಅಂತಸ್ತಿನ ದ್ರಾವಿಡ ಶೈಲಿಯ ಶಿಖರವನ್ನು ನಿರ್ಮಿಸಲಾಗಿದೆ.

 

ಆದಿಚುಂಚನಗಿರಿ
ದೂರ ತಾಲ್ಲೂಕು ಕೇಂದ್ರದಿಂದ – ೨೫ಕಿ.ಮೀ.
ಜಿಲ್ಲಾ ಕೇಂದ್ರದಿಂದ – ೬೫ ಕಿ.ಮೀ.

ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠವು ಒಕ್ಕಲಿಗರ ಎರಡು ಗುರುಪೀಠ ಮಠಗಳಲ್ಲಿ ಒಂದು. ಇದು ಪ್ರಾಚೀನ ಶಾಸನಗಳಲ್ಲಿ ಚುಂಚನಕೋಟೆ, ಚುಂಚನಹಳ್ಳಿ, ಆದಿಚುಂಚನಗಿರಿ ಎಂದು ಕರೆಯಲ್ಪಟ್ಟಿದೆ. ಚುಂಚನೆಂಬುವನಿಂದ ನಿರ್ಮಿಸಲ್ಪಟ್ಟ ಅಥವಾ ಚುಂಚಲಗಿಡ ಹೇರಳವಾಗಿದ್ದರಿಂದ ಈ ಊರಿಗೆ ಚುಂಚನಹಳ್ಳಿ ಎಂದೂ, ಇಲ್ಲಿರುವ ಬೆಟ್ಟಕ್ಕೆ ಚುಂಚನಗಿರಿ ಎಂದು ಹೆಸರು ಬಂದಿರಬಹುದು. ಚುಂಚನಹಳ್ಳಿಯಿಂದ ಬೆಟ್ಟದ ಕಡೆ ಹೊರಟಾಗ ಮಾರ್ಗ ಮಧ್ಯದಲ್ಲಿ ಅನೇಕ ನವಿಲುಗಳ ದರ್ಶನವಾಗುತ್ತದೆ. ದ್ರಾವಿಡ ಶೈಲಿಯಲ್ಲಿ ಕಾಲಭೈರವನ ವಿಶಾಲವಾದ ದೇವಾಲಯವು ನಿರ್ಮಾಣಗೊಂಡಿದೆ. ಮಠದಲ್ಲಿ ಸಿಂಹಾಸನವಿದೆ.

 

ಬಸದಿಗಳ ತಾಣ ಕಂಬದಳ್ಳಿ :

ದೂರ ತಾಲ್ಲೂಕು ಕೇಂದ್ರದಿಂದ – ೧೮ ಕಿ.ಮೀ.
ಜಿಲ್ಲಾ ಕೇಂದ್ರದಿಂದ – ೫೮ ಕಿ.ಮೀ.

 


ಕೊಲುವ ಧರ್ಮವನೊಯ್ದು ಒಲೆಯೊಳಗೆ ಇಕ್ಕುವ ಕೊಲಲಾಗದೆಂಬ ಜಿನನ ಮತವೆನ್ನ ತಲೆಯ ಮೇಲಿರಲಿ ಸರ್ವಜ್ಞ. ಅಹಿಂಸೆಯ ಮೂಲ ಮಂತ್ರವನ್ನು ವಿಶ್ವದಾದ್ಯಂತ ಸಾರಿದ ಜೈನ ಧರ್ಮದ ಬಗ್ಗೆ ಸರ್ವಜ್ಞ ಕವಿ ಹೇಳಿದ ಮಾತುಗಳಿವು. ನಾಗಮಂಗಲ ತಾಲ್ಲೂಕಿನಲ್ಲಿರುವ ಕಂಬದಹಳ್ಳಿಯ ಪಂಚಕೂಟ ಬಸದಿಗಳು. ಈ ಸುಂದರ ಬಸದಿಗಳ, ಜಿನನ ವಿಗ್ರಹಗಳ ತಾಣ ರಾಜ್ಯದಲ್ಲಿ ಮತ್ತೊಂದಿಲ್ಲ ಎನ್ನಬಹುದು. ದೂರದಿಂದಲೇ ಒಂದು ಬೃಹದಾಕಾರದ ಕಂಬ ಗೋಚರಿಸುತ್ತದೆ. ಈ ಕಂಬದಿಂದಲೇ ಈ ಹಳ್ಳಿಗೆ ಕಂಬದಹಳ್ಳಿ ಎಂಬ ಹೆಸರು ಬಂದಿದೆ.