ಕನ್ನಡ ವಿಶ್ವವಿದ್ಯಾಲಯವು ಕರ್ನಾಟಕ ಸಂಸ್ಕೃತಿಯ ಪ್ರಾತಿನಿಧಿಕ ಸಂಸ್ಥೆ. ಇಲ್ಲಿರುವ ಎಲ್ಲಾ ಅಧ್ಯಯನ ವಿಭಾಗಗಳು ನಾಡು-ನುಡಿ ಕುರಿತಂತೆ ಅಧ್ಯಯನ ಮತ್ತು ಸಂಶೋಧನೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿವೆ. ಅವುಗಳಲ್ಲಿ ಒಂದಾದ ಪ್ರಾಚೀನ ಇತಿಹಾಸ ಮತ್ತು ಪುರಾತತ್ವ ಅಧ್ಯಯನ ವಿಭಾಗವು ಹಲವು ಮಹತ್ವದ ಯೋಜನೆಗಳನ್ನು ರೂಪಿಸಿಕೊಂಡು ಕ್ರೀಯಾಶೀಲವಾಗಿದೆ. ಆ ಯೋಜನೆಗಳಲ್ಲಿ ಸ್ಥಳೀಯ ಚರಿತ್ರೆ ಮತ್ತು ಪುರಾತತ್ವ ಮಾಲೆ ಸಹ ಒಂದು. ಇದರ ಅಂಗವಾಗಿ ನಾಡಿನ ಚಾರಿತ್ರಿಕ ಮತ್ತು ಸಾಂಸ್ಕೃತಿಕ ನೆಲೆಗಳನ್ನು ಗುರುತಿಸಿ, ವಿದ್ವಾಂಸರಿಂದ ಸಮಗ್ರ ಅಧ್ಯಯನ ನಡೆಸಲಾಗುವುದು. ಈ ಸಂಶೋಧನಾ ಲೇಖನಗಳನ್ನು ಅಲ್ಲಿಯೇ ನಡೆಸುವ ವಿಚಾರಸಂಕಿರಣದಲ್ಲಿ ಮಂಡಿಸುವ ಮೂಲಕ ಸ್ಥಳೀಯರಲ್ಲಿ ಐತಿಹಾಸಿಕ ಪ್ರಜ್ಞೆಯನ್ನು ಜಾಗೃತಗೊಳಿಸುವುದಲ್ಲದೆ, ಸ್ಮಾರಕಗಳ ಮಹತ್ವ ಹಾಗೂ ಸಂರಕ್ಷಣೆಯ ಅಗತ್ಯವನ್ನು ತಿಳಿಹೇಳಲಾಗುವುದು. ಈಗಾಗಲೇ ವಿಭಾಗವು ನಾಡಿನ ಹಲವು ಚಾರಿತ್ರಿಕ ಸ್ಥಳಗಳನ್ನು ಕುರಿತು ಕೃತಿಗಳನ್ನು ಹೊರತಂದಿದೆ. ಪ್ರಸ್ತುತ ನಾಗಮಂಗಲ ಕೃತಿ ಅಂತಹ ಪ್ರಯತ್ನಗಳಲ್ಲಿ ಒಂದು.

ನಾಗಮಂಗಲವು ಮಂಡ್ಯ ಜಿಲ್ಲೆಯ ತಾಲ್ಲೂಕುಗಳಲ್ಲಿ ದೊಡ್ಡದಿದ್ದು, ಜಿಲ್ಲಾ ಕೇಂದ್ರದಿಂದ ವಾಯುವ್ಯಕ್ಕೆ ೪೦ ಕಿ.ಮೀ. ದೂರದಲ್ಲಿ ಬೀದರ‍್- ಶ್ರೀರಂಗಪಟ್ಟಣ ರಾಜ್ಯಹೆದ್ದಾರಿಯಲ್ಲಿದೆ. ಚಾರಿತ್ರಿಕವಾಗಿ ಮತ್ತು ಸಾಂಸ್ಕೃತಿಕವಾಗಿ ನಾಗಮಂಗಲ ಪಟ್ಟಣವು ತನ್ನದೇ ಆದ ಛಾಪನ್ನು ಮೂಡಿಸಿದೆ. ನಾಗಮಂಗಲ ತಾಲ್ಲೂಕು ಪ್ರದೇಶವು ಮೊದಲಿಗೆ ಹಾಸನ ಜಿಲ್ಲೆಯಲ್ಲಿತ್ತು. ಕ್ರಿ.ಶ.೧೮೮೨ರ ನಂತರ ಮೈಸೂರು ಜಿಲ್ಲೆಗೆ ಸೇರಿತು. ಕ್ರಿ.ಶ.೧೯೩೯ ಜುಲೈ ೧ ರಂದು ಮಂಡ್ಯ ಜಿಲ್ಲೆ ರಚನೆಯಾದಾಗ ಅಂತಿಮವಾಗಿ ಅದರಲ್ಲಿ ಸೇರಿತು. ನಾಗಮಂಗಲ ಪಟ್ಟಣವು ಸಮುದ್ರಮಟ್ಟದಿಂದ ಸುಮಾರು ೭೮೬ ಮೀ. ಎತ್ತರದಲ್ಲಿದೆ. ನಾಗಮಂಗಲವು ತಾಲ್ಲೂಕು ಕೇಂದ್ರವಾಗಿದ್ದು, ಹೊಣಕೆರೆ, ದೇವಲಾಪುರ, ಬಿಂಡಿಗನವಿಲೆ, ಬೆಳ್ಳೂರು ಮತ್ತು ಕಸಬ ಹೋಬಳಿಗಳನ್ನು ಒಳಗೊಂಡು ೩೬೬ ಗ್ರಾಮಗಳನ್ನು ಹೊಂದಿದೆ. ಇವುಗಳಲ್ಲಿ ೨೩ ಹಾಳುಗ್ರಾಮಗಳಾಗಿವೆ (ಬೇಚಿರಾಕ್). ತಾಲ್ಲೂಕಿನ ಒಟ್ಟು ವಿಸ್ತೀರ್ಣ ೧೦೪೫ ಚದುರ. ಕಿಲೋಮೀಟರ, ೨೦೦೧ ರ ಜನಗಣತಿಯ ಪ್ರಕಾರ ೧,೯೦,೮೧೪ ಜನಸಂಖ್ಯೆ ದಾಖಲಾಗಿವೆ. ಪೂರ್ವ ಭಾಗದಲ್ಲಿ ಮದ್ದುರು ಮತ್ತು ಕುಣಿಗಲ್ ತಾಲ್ಲೂಕುಗಳು, ಪಶ್ಚಿಮ ಭಾಗದಲ್ಲಿ ಕೃಷ್ಣರಾಜಪೇಟೆ ಮತ್ತು ಚನ್ನರಾಯಪಟ್ಟಣ ತಾಲ್ಲೂಕುಗಳು, ಉತ್ತರದಲ್ಲಿ ತುರುವೇಕೆರೆ ತಾಲ್ಲೂಕು, ದಕ್ಷಿಣದಲ್ಲಿ ಪಾಂಡವಪುರ ತಾಲ್ಲೂಕುಗಳಿಂದ ಸುತ್ತುವರೆದಿರುವ ನಾಗಮಂಗಲ ಪ್ರದೇಶವು ಕೃಷಿ ಪ್ರಧಾನವಾದದ್ದು. ತಾಲ್ಲೂಕಿನಲ್ಲಿ ದಟ್ಟ ಅರಣ್ಯ ಪ್ರದೇಶವಿಲ್ಲ. ಕುರುಚಲು ಕಾಡುಗಳನ್ನು ಕೆಲವೆಡೆಗಳಲ್ಲಿ ಕಾಣಬಹುದು. ಬೆಟ್ಟಗುಡ್ಡಗಳು ಅಲ್ಲಲ್ಲಿ ಕಂಡುಬಂದರೂ ಹೆಚ್ಚಾಗಿ ಬಯಲು ಪ್ರದೇಶವನ್ನು ಹೊಂದಿದೆ. ಬೆಟ್ಟಗಳಲ್ಲಿ ಚುಂಚನಗಿರಿ, ಬಸವನಕಲ್ ಬೆಟ್ಟ, ಹದ್ದಿನಕಲ್ಲುಹನುಮಂತರಾಯನಬೆಟ್ಟ, ಹಾಲ್ತಿಬೆಟ್ಟ, ಕೋಟೆಬೆಟ್ಟ ಪ್ರಮುಖವಾಗಿವೆ. ತಾಲ್ಲೂಕಿನಲ್ಲಿ ಹರಿಯುವ ಲೋಕಪಾವನಿ ಮತ್ತು ವೀರವೈಷ್ಣವಿ ನದಿಗಳು ಕೃಷಿಗೆ ಸಹಕಾರಿಯಾಗಿವೆ. ಅಲ್ಲದೆ ೨೨ ಕೆರೆಗಳಿದ್ದು, ೩೯೪೦ ಎಕರೆ ಭೂಮಿಗೆ ನೀರುಣಿಸುತ್ತಿವೆ. ತಾಲ್ಲೂಕಿನಲ್ಲಿ ಪಶುಸಂಪತ್ತು ಸಮೃದ್ಧವಾಗಿದ್ದು, ಹಳ್ಳಿಕಾರ‍್ ತಳಿಯ ದನಗಳಿಗೆ ಪ್ರಸಿದ್ಧಿ. ಹೆಚ್ಚಿನ ಸಂಖ್ಯೆಯಲ್ಲಿ ಕುರಿ, ಮೇಕೆ, ಎಮ್ಮೆ, ಹಂದಿ ಮತ್ತು ಕೋಳಿಗಳ ಪಶುಪಾಲನೆಯನ್ನು ಕಾಣುತ್ತೇವೆ. ಹಿಂದೆ ಬ್ರಿಟೀಷ್ ಸರ್ಕಾರ ತಾಲ್ಲೂಕಿನ ಹೆರಗನಹಳ್ಳಿಯಲ್ಲಿ ಉತ್ತಮ ತಳಿಯ ಕುರಿ ಸಾಕಾಣಿಕೆ ಕೇಂದ್ರವನ್ನು ಸ್ಥಾಪಿಸಿತ್ತು. ಕಾರಣಾಂತರಗಳಿಂದ ಕ್ರಿ.ಶ.೧೮೬೩ ರಲ್ಲಿ ಅದನ್ನು ಮುಚ್ಚಲಾಯಿತು. ತಾಲ್ಲೂಕಿನ ಸಂತೆಗಳಲ್ಲಿ ಕುರಿ ಮತ್ತು ಮೇಕೆಗಳ ವ್ಯಾಪಾರ ವಹಿವಾಟು ನಡೆಯುತ್ತದೆ. ಹಾಗೆಯೇ ಚುಂಚನಗಿರಿ ಹಾಗೂ ಕೋಟೆಬೆಟ್ಟಗಳ ಜಾತ್ರೆಗಳಲ್ಲಿ ದನಗಳ ವ್ಯಾಪಾರ ಹೆಚ್ಚು.

ನಾಗಮಂಗಲ ಪರಿಸರದಲ್ಲಿರುವ ಬಿಂಡಿಗವಿಲೆ, ಆದಿಚುಂಚನಗಿರಿ ಮತ್ತು ಅಣೆಚೆನ್ನಾಪುರದ ನೆಲೆಗಳಲ್ಲಿ ಪ್ರಾಗಿತಿಹಾಸಕಾಲದ ಕುರುಹುಗಳು ಕಂಡುಬಂದಿವೆ. ಇದರಿಂದ ಪ್ರಾಗತಿಹಾಸ ಕಾಲದಿಂದಲೂ ಮಾನವನ ಚುಟವಟಿಕೆಗಳ ಕೇಂದ್ರವಾಗಿರುವ ನಾಗಮಂಗಲ ಪ್ರದೇಶವು ಸಹಜವಾಗಿಯೇ ಪಶುಪಾಲನೆ ಮತ್ತು ಕೃಷಿ ಸಂಸ್ಕೃತಿಯನ್ನು ಮೈಗೂಡಿಸಿಕೊಂಡಿರುವುದು ಗಮನಾರ್ಹ. ಆದಿಚುಂಚನಗಿರಿಯಲ್ಲಿ ಸೂಕ್ಷ್ಮಶಿಲಾಯುಗ ಕಾಲದಿಂದ ಆದಿ ಇತಿಹಾಸಕಾಲದವರೆಗಿನ ಪ್ರಾಚ್ಯವಶೇಷಗಳು ಕಂಡುಬಂದಿದ್ದು, ನಿರಂತರವಾದ ಸಾಂಸ್ಕೃತಿಕ ಚಲನೆಯನ್ನು ಗುರುತಿಸಬಹುದು. ಇತಿಹಾಸ ಕಾಲದಲ್ಲಿ ಇತರ ಪ್ರದೇಶಗಳಂತೆ ನಾಗಮಂಗಲ ಪ್ರದೇಶವು ಸಹ ಗಂಗರು, ರಾಷ್ಟ್ರಕೂಟರು, ಚಾಲುಕ್ಯರು, ಹೊಯ್ಸಳರು, ವಿಜಯನಗರ ಅರಸರ ಮತ್ತು ಮೈಸೂರು ಅರಸರ ಆಳ್ವಿಕೆಗೆ ಒಳಪಟ್ಟಿತ್ತು. ಇದಕ್ಕೆ ದಾಖಲೆಗಳೆಂಬಂತೆ ಶಾಸನಗಳು, ವೀರಗಲ್ಲುಗಳು, ದೇವಾಲಯ, ಕೋಟೆ ಹಾಗೂ ಕೆರೆಕಟ್ಟೆಗಳನ್ನು ಇಂದಿಗೂ ಕಾಣಬಹುದು.

ನಾಗಮಂಗಲ ಪ್ರದೇಶವು ಜನಪದ ಸಂಸ್ಕೃತಿಯ ತವರು. ಇಂದಿಗೂ ಈ ಭಾಗದಲ್ಲಿ ಅನೇಕ ನಂಬಿಕೆ ಮತ್ತು ಅಚರಣೆಗಳು ಜೀವಂತವಾಗಿವೆ. ಇದರ ಬೆನ್ನಲ್ಲೇ ಬೆಳೆದುಬಂದಿರುವ ಐತಿಹ್ಯ, ಕಥೆ, ಕಾವ್ಯ ಮೊದಲಾದ ಮೌಖಿಕ ಆಕರಗಳು ಗತ ಇತಿಹಾಸ ಮತ್ತು ಸಂಸ್ಕೃತಿಯ ಮೇಲೆ ಬೆಳಕು ಚೆಲ್ಲುತ್ತವೆ. ಸ್ಥಳೀಯ ಗ್ರಾಮದೈವಗಳು, ಜಾತ್ರೆಗಳು ಮತ್ತು ಆಚರಣೆಗಳು ನಾಗಮಂಗಲ ಪಟ್ಟಣದ ಜನರ ನಂಬಿಕೆ ಮತ್ತು ಆಚರಣೆಗಳನ್ನು ಪರಿಚಯಿಸುತ್ತವೆ.

ನಾಗಮಂಗಲ ಮತ್ತು ಪರಿಸರದಲ್ಲಿ ದೊರೆಯುವ ಶಾಸನಗಳು ಇಲ್ಲಿನ ದೇವಾಲಯಗಳಿಗೆ ನೀಡಿದ ದಾನದತ್ತಿಗಳ ವಿವರಗಳನ್ನು ಒದಗಿಸುತ್ತದೆ. ಸಾಂಸ್ಕೃತಿಕ ಬೆಳವಣಿಗೆಯನ್ನು ಗುರುತಿಸುವಲ್ಲಿ ಈ ಶಾಸನಗಳು ಪ್ರಮುಖವಾಗಿವೆ. ಗಂಗರ ಕಾಲದ ವೀರಗಲ್ಲು ಶಾಸನ ನಾಗಮಂಗಲದ ಪ್ರಾಚೀನ ಶಾಸನವಾಗಿದೆ. ಈ ವೀರಗಲ್ಲು ಶಾಸನ ಇಲ್ಲಿನ ಪ್ರವಾಸಿ ಮಂದಿರದ ಎದುರು  ಬೀದರ್- ಶ್ರೀರಂಗಪಟ್ಟಣ ರಾಜ್ಯ ಹೆದ್ದಾರಿಯ ಅಂಚಿನಲ್ಲಿದೆ. ಇದನ್ನು ಸ್ಥಳಾಂತರಿಸಿ ಸಂರಕ್ಷಿಸಬೇಕಾಗಿವೆ. ಇಲ್ಲಿನ ಹೊಯ್ಸಳರ ಮತ್ತು ವಿಜಯನಗರದ ಶಾಸನಗಳು ನಾಗಮಂಗಲದ ಚರಿತ್ರೆಯನ್ನು ಕಟ್ಟಿಕೊಡುವಲ್ಲಿ ಉಪಯುಕ್ತವಾಗಿವೆ.

ಮೂಲತಃ ಅಗ್ರಹಾರವಾಗಿದ್ದ ನಾಗಮಂಗಲ ಪಟ್ಟಣ, ಕಾಲಾಂತರದಲ್ಲಿ ರಾಜ್ಯಾಡಳಿತದ ಕೇಂದ್ರವಾದದ್ದು ಗಮನಾರ್ಹ, ಹೊಯ್ಸಳರ ಕಾಲದವರೆಗೆ ಇದು ಶ್ರೀವೈಷ್ಣವರ ಅಗ್ರಹಾರವಾಗಿದ್ದು, ವಿಜಯನಗರ ಕಾಲದಲ್ಲಿ ಲೋಹಿತ ವಂಶದವರ ರಾಜಧಾನಿ ಕೇಂದ್ರವಾಯಿತು. ಇವರು ವಿಜಯನಗರದ ಸಾಮಂತರಾಗಿದ್ದು, ಇಲ್ಲಿ ಕೋಟೆ ನಿರ್ಮಿಸಿದವರು. ಇವರು ಮೇಲುಕೋಟೆಯಲ್ಲಿ ದೇವಾಲಯಗಳನ್ನು ಜೀರ್ಣೋದ್ಧಾರ ಮಾಡಿದರು. ಮುಖ್ಯವಾಗಿ ಕಾವೇರಿ ನದಿಗೆ ಆಣೆ ನಿರ್ಮಿಸಿ ಹರವು ಮೊದಲಾದ ಗ್ರಾಮಗಳಿಗೆ ಕಾಲುವೆ ಮೂಲಕ ನೀರಾವರಿ ಸೌಲಭ್ಯ ಒದಗಿಸಿದರು. ಅಲ್ಲದೆ ನಾಗಮಂಗಲದಲ್ಲಿ ಕೆರೆ ಮತ್ತು ಕೊಳಗಳನ್ನು ನಿರ್ಮಿಸಿ ಕೃಷಿಯನ್ನು ಅಭಿವೃದ್ಧಿಪಡಿಸಿದರು. ಇವರ ಜನಹಿತ ಕಾರ್ಯಗಳು ಮೆಚ್ಚುವಂತಹವು. ನಾಗಮಂಗಲದಲ್ಲಿ ಹಂಪೆ ಅರಸನ ಹೆಸರಿನಲ್ಲಿ ಕೊಳವೊಂದಿದ್ದು, ಈ ಹಂಪೆ ಅರಸ ಯಾರು? ಎಂಬುದು ಇನ್ನೂ ಚರ್ಚೆಯಾಗೇ ಉಳಿದಿದೆ.

ಚನ್ನಪಟ್ಟಣದ ಜಗದೇವರಾಯನ ಅಧೀನದಲ್ಲಿ ನಾಗಮಂಗಲದ ಪಾಳೆಯಗಾರನಾಗದ್ದ ಚೆನ್ನಯ್ಯ ಎಂಬುವನು ಗಾಣಿಗ ಕುಲದವನೆಂಬ ಐತಿಹ್ಯ ಗಮನಾರ್ಹವಾದದು. ಈತನ ಅಣ್ಣ ದೊಡ್ಡಯ್ಯ ಎಂಬುವನು ಮೈಸೂರಿನ ದಳವಾಯಿ ಬೆಟ್ಟದ ಅರಸುವಿನ ಮೇಲೆ ಹೊನ್ನೆಮಡು ಎಂಬಲ್ಲಿ (ಜಕ್ಕನ ಹಳ್ಳಿ ಹತ್ತಿರ, ನಾಗಮಂಗಲ ತಾಲ್ಲೂಕು) ಯುದ್ಧ ಮಾಡಿ ಮರಣ ಹೊಂದುತ್ತಾನೆ. ಪಾಳೆಯಗಾರ ಚೆನ್ನಯ್ಯನ ಮನೆತನದವರು ಈಗಲೂ ನಾಗಮಂಗಲದಲ್ಲಿ ನೆಲೆಸಿದ್ಧಾರೆ. ಇವರು ತಿಳಿಸುವಂತೆ, ಅವರ ಪೂರ್ವಿಕರು ಚನ್ನಪಟ್ಟಣ ತಾಲ್ಲೂಕಿನ ಕೋಡಂಬಳ್ಳಿ ಪಕ್ಕದ ಹುಣಸನಹಳ್ಳಿಯನವರು. ಅಲ್ಲಿಂದ ನಾಗಮಂಗಲಕ್ಕೆ ವಲಸೆ ಬಂದು ನೆಲೆಸಿದವರು. ಈ ಮನೆತನದವರು ಈಗಲೂ ಚನ್ನಪಟ್ಟಣದ ಬಳಿ ಇರುವ ದೇವರ ಹೊಸಹಳ್ಳಿಯ ಆಂಜನೇಯಸ್ವಾಮಿಗೂ ಮತ್ತು ಹುಣಸನಹಳ್ಳಿಯ ಗ್ರಾಮದೇವತೆ ಬಿಸಿಲು ಮಾರಮ್ಮನಿಗೆ ಭಕ್ತಿಯಿಂದ ನಡೆದುಕೊಳ್ಳುತ್ತಾರೆ. ಇದು ಈ ಮನೆತನದವರ ಮೂಲನೆಲೆಯನ್ನು ಸೂಚಿಸುತ್ತದೆ. ಈ ಮನೆತನದವರು ಕುಸ್ತಿಪಟುಗಳಾಗಿದ್ದರು. ಇವರು ಪಿತೃಪಕ್ಷದ ಸಂದರ್ಭದಲ್ಲಿ  ಕತ್ತಿ, ಕಠಾರಿಗಳನ್ನು ಪೂಜಿಸುತ್ತಾರೆ. ಈ ಕುರಿತು ಇನ್ನು ಹೆಚ್ಚಿನ ಆಧಾರಗಳು ಲಭ್ಯವಾಗಬೇಕಾಗಿದೆ. ಈಗಲೂ ನಾಗಮಂಗಲದಲ್ಲಿ ಅಸಂಖ್ಯಾತ ಗಾಣಿಗ ಕುಟುಂಬಗಳಿದ್ದು, ಇವರು ಕೋಟೆಯ ಹೊರಭಾಗದಲ್ಲಿ ನೆಲಸಿರುವುದು ಗಮನಾರ್ಹ. ಇದು ಇವರ ವಲಸೆಯನ್ನು ಪುಷ್ಠೀಕರಿಸುತ್ತದೆ.

ವಿಜಯನಗರೋತ್ತರ ಕಾಲದಲ್ಲಿ ಸಣ್ಣಪುಟ್ಟ ಜಾತಿಗಳು ಸಹ ಸ್ಥಳೀಯ ಪಾಳೆಯಗಾರನಾಗಿ ಆಡಳಿತ ನಡೆಸಿದ ಸಂಗತಿಗಳು ನಡೆಸಿದ ಸಂಗತಿಗಳು ನಾಗಮಂಗಲ ತಾಲ್ಲೂಕಿನ ಜನಪದ ಕಥೆಗಳಲ್ಲಿ ದೊರೆಯುತ್ತವೆ. ಈ ಕುರಿತಂತೆ ಪ್ರತ್ಯೇಕ ಅಧ್ಯಯನ ನಡೆಯಬೇಕು.

ಪ್ರಸಿದ್ಧ ಅಗ್ರಹಾರವಾಗಿದ್ದ ನಾಗಮಂಗಲದಲ್ಲಿ ಪ್ರಾಚೀನ ಗುಡಿಗಳು ನಿರ್ಮಾಣಗೊಂಡಿವೆ. ಅವುಗಳಿಂದಾಗಿ ನಾಗಮಂಗಲ ಪಟ್ಟಣವು ಇಂದು ಸಾಂಸ್ಕೃತಿಕ ನೆಲೆಯಾಗಿ ಗೋಚರಿಸಿದೆ. ಪ್ರಸ್ತುತ ಕ್ಷೇತ್ರಕಾರ್ಯದ ಸಂದರ್ಭದಲ್ಲಿ ಡಾ. ಎನ್.ಎಸ್. ರಂಗರಾಜುರವರು ಗಂಗರ ಕಾಲದ ದೇವಾಲಯವನ್ನು ಬೆಳಕಿಗೆ ತಂದಿದ್ದಾರೆ. ಅದಕ್ಕಾಗಿ ಅವರನ್ನು ಅಭಿನಂದಿಸುತ್ತೇನೆ. ಇಲ್ಲಿರುವ ಸೌಮ್ಯಕೇಶವ, ಯೋಗನರಸಿಂಹ, ಭುವನೇಶ್ವರ ಮತ್ತು ವೀರಭದ್ರದೇವಾಲಯಗಳು ಅಧ್ಯಯನ ಯೋಗ್ಯವಾಗಿದ್ದು, ಪ್ರಾದೇಶಿಕ ವಾಸ್ತು ಲಕ್ಷಣಗಳ ಬೆಳವಣಿಗೆಯನ್ನು ಗುರುತಿಸುವ ಪ್ರಯತ್ನಗಳು ನಡೆಯಬೇಕಿದೆ.

ಬೇಲೂರಿನ ದೇವಾಲಯದಂತೆ ಇಲ್ಲೂ ಸಹ ಹೊಯ್ಸಳರ ಕಾಲದ ಸೌಮ್ಯಕೇಶವ ದೇವಾಲಯವು ಜಗತಿಯ ಮೇಲೆ ನಿರ್ಮಿಸಲ್ಪಟ್ಟಿದೆ. ನಂತರದ ಕಾಲದ ಇತರ ವಾಸ್ತು ರಚನೆಗಳಿಂದಾಗಿ ದೇವಾಲಯದ ಸೌಂದರ್ಯ ಇಮ್ಮಡಿಸಿದೆ. ಇಲ್ಲಿನ ಭುವನೇಶ್ವರ ದೇವಾಲಯದ ಕಾಲಮಾನ, ಅಲ್ಲಿರುವ ಶಿಲ್ಪಗಳ ಶೈಲಿ ಮತ್ತು ಲಕ್ಷಣಗಳನ್ನು ಕುರಿತಂತೆ ವಿದ್ವಾಂಸರಲ್ಲಿ ಜಿಜ್ಞಾಸೆಗಳಿವೆ.

ಹೊಯ್ಸಳರ ಕಾಲದ ಶ್ರೀವೈಷ್ಣವರ ಅಗ್ರಹಾರಗಳಲ್ಲಿ ಸಾಮಾನ್ಯವಾಗಿ ನರಸಿಂಹ ದೇವಾಲಯಗಳ ನಿರ್ಮಾಣವನ್ನು ಕಾಣುತ್ತೇವೆ. ತೊಣ್ಣೂರು, ಮೇಲುಕೋಟೆ, ಮದ್ದೂರು, ನುಗ್ಗೆಹಳ್ಳಿ ಮೊದಲಾದ ಅಗ್ರಹಾರಗಳಲ್ಲಿರುವಂತೆ ನಾಗಮಂಗಲದಲ್ಲೂ ಯೋಗಾನರಸಿಂಹ ದೇವಾಲಯವನ್ನು ಕಾಣುತ್ತೇವೆ. ಹೀಗೆ ನರಸಿಂಹ ದೇವಾಲಯಗಳ ರಚನೆಯ ಹಿಂದಿರುವ ಧಾರ್ಮಿಕ ಆಶಯವನ್ನು ಗುರುತಿಸಬೇಕಾಗಿದೆ. ಅದೇ ರೀತಿ ಅಲ್ಲಿ ಶಿವನ ದೇವಾಲಯವನ್ನು ಸಹ ಕಾಣುತ್ತೇವೆ. ಅಂದರೆ ಊರಿನ ಈಶಾನ್ಯ ಭಾಗದಲ್ಲಿ ಶಿವನ ದೇವಾಲಯವಿರುವುದು ಸಾಮಾನ್ಯ. ನಾಗಮಂಗಲದಲ್ಲಿ ಭುವನೇಶ್ವರ ದೇವಾಲಯವಿದ್ದು, ಶೈವ-ವೈಷ್ಣವ ಪಂಥಗಳ ಸಹಭಾಳ್ವೆಯನ್ನು ಗುರುತಿಸಬಹುದು. ಸಾಮಾನ್ಯವಾಗಿ ಶ್ರೀವೈಷ್ಣವರ ಅಗ್ರಹಾರಗಳು ಮೊದಲಿಗೆ ಶೈವ ಅಗ್ರಹಾರ, ಇಲ್ಲವೇ ಜೈನಕ್ಷೇತ್ರಗಳಾಗಿದ್ದ ಸೂಚನೆಗಳು ದೊರೆಯುತ್ತವೆ. ಅಂದರೆ ನಂತರದ ಹೊಯ್ಸಳರ ಕಾಲದಲ್ಲಿ ರಾಜಮನ್ನಣೆ ಗಳಿಸಿದ ಶ್ರೀವೈಷ್ಣವ ಧರ್ಮ ತನ್ನ ಪ್ರಭಾವದಿಂದ ಪ್ರಾಚೀನ ಅಗ್ರಹಾರಗಳನ್ನು ಶ್ರೀವೈಷ್ಣವರ ಚತುರ್ವೇದ ಮಂಗಲಗಳಾಗಿ ಪರಿವರ್ತಿಸಿಕೊಳ್ಳುತ್ತದೆ. ಈ ಗ್ರಾಮ ಪರಿವರ್ತನೆ ಗಮನಾರ್ಹವಾದುದು. ಈ ಪರಿವರ್ತನೆ ಕೇವಲ ಧಾರ್ಮಿಕವಾಗಿರದೆ ಅದು ಭಾಷೆ, ಸಾಹಿತ್ಯ, ವಾಸ್ತುಶಿಲ್ಪ, ಮೂರ್ತಿಶಿಲ್ಪ, ನಂಬಿಕೆ ಮತ್ತು ಅಚರಣೆಗಳನ್ನು ಒಳಗೊಂಡ ಸಾಂಸ್ಕೃತಿಕ ಪರಿವರ್ತನೆಯಾಗಿತ್ತು. ಈ ನೆಲೆಯಲ್ಲಿ ಸ್ಥಳೀಯ ಅಧ್ಯಯನಗಳು ನಡೆಯಬೇಕಿದೆ. ಆಗ ಮಾತ್ರ ನಮ್ಮ ಮೂಲ ಸಂಸ್ಕೃತಿಯ ಬೇರುಗಳನ್ನು ಗುರುತಿಸಲು ಸಾಧ್ಯವಾಗುವುದು.

ನಾಗಮಂಗಲದ ದೇವಾಲಯಗಳಲ್ಲಿ ಕಾಣಬರುವ ಮೂರ್ತಿಶಿಲ್ಪಗಳು ಅಧ್ಯಯನ ಯೋಗ್ಯವಾಗಿವೆ. ಭುವನೇಶ್ವರ ದೇವಾಲಯದಲ್ಲಿರುವ ಲಕುಲೀಶ ಶಿಲ್ಪ ಮಹತ್ವದ್ದಾಗಿದ್ದು, ಕಲಾವಿಮರ್ಶಕರ ಗಮನ ಸೆಳೆದಿದೆ. ನಾಗಮಂಗಲದಲ್ಲಿ ಹೊಯ್ಸಳರ ಪೂರ್ವ, ಹೊಯ್ಸಳ, ವಿಜಯನಗರ ಮತ್ತು ವಿಜಯನಗರೋತ್ತರ ಕಾಲದ ಮೂರ್ತಿಶಿಲ್ಪಗಳು ಕಂಡುಬರುತ್ತವೆ. ಈ ಹಿನ್ನೆಲೆಯಲ್ಲಿ ನಾಗಮಂಗಲವು ಮೂರ್ತಿಶಿಲ್ಪ ಕಲಾಪರಂಪರೆಯ ಅಧ್ಯಯನಕ್ಕೆ ಸೂಕ್ತವಾದ ನೆಲೆ. ದೇವಾಲಯಗಳಲ್ಲಿರುವ ಲೋಹಶಿಲ್ಪಗಳು ಸಹ ಗಮನಾರ್ಹವಾಗಿವೆ. ನಾಗಮಂಗಲದಲ್ಲಿ ಇಂದಿಗೂ ಪಂಚಲೋಹದ ಮೂರ್ತಿಗಳನ್ನು ರಚಿಸುವ ಲೋಹಶಿಲ್ಪಿಗಳಿದ್ದಾರೆ. ದೇವರ ಉತ್ಸವಮೂರ್ತಿಗಳು, ವಾಹನಗಳು, ಪ್ರಭಾವಳಿ ಮತ್ತು ಕವಚಗಳನ್ನು ರಚಿಸುತ್ತಾರೆ. ಇಲ್ಲಿನ ಲೋಹಶಿಲ್ಪಗಳ ಕಲಾಕೃತಿಗಳು ವಿದೇಶಗಳಲ್ಲಿ ಮೆಚ್ಚುಗೆ ಪಡೆದಿದೆ. ಹೀಗಾಗಿ ನಾಗಮಂಗಲದಲ್ಲಿರುವ ಲೋಹಶಿಲ್ಪ ಕಲಾಪರಂಪರೆಯನ್ನು ಕುರಿತು ವಿಸ್ತೃತ ಅಧ್ಯಯನ ನಡೆಯಬೇಕಾಗಿದೆ.

ನಾಗಮಂಗಲವು ಸ್ಥಳ ದುರ್ಗವಾಗಿದ್ದು, ಸುತ್ತಲೂ ಎರಡು ಸುತ್ತಿನ ಕೋಟೆಯನ್ನು ಹೊಂದಿತ್ತು. ಅದರೆ ಕೋಟೆಯ ಭಾಗಗಳು ಅಲ್ಲಲ್ಲಿ ಬಿದ್ದು ಹೋಗಿ ವಸತಿ ಮನೆಗಳು ನಿರ್ಮಾಣವಾಗಿವೆ. ಆದರೂ ಉಳಿದಿರುವ ಕೋಟೆಗೋಡೆಯ ಅವಶೇಷಗಳು ನಾಗಮಂಗಲ ಪಟ್ಟಣವನ್ನು ಸುತ್ತುವರೆದಿದ್ದು ರಕ್ಷಣಾ ವ್ಯವಸ್ಥೆಯನ್ನು ಚಿತ್ರಿಸುವಲ್ಲಿ ಉಪಯುಕ್ತವಾಗಿವೆ. ನಾಗಮಂಗಲದ ಸುತ್ತಲೂ ಕೆರೆಕಟ್ಟೆಗಳಿದ್ದು, ನೀರಿನ ಬರ ಇರಲಿಲ್ಲ. ಕೊಳ, ಬಾವಿಗಳು ಸಹ ಸಾಕಷ್ಟಿದ್ದವು. ಹೀಗಾಗಿ ನಾಗಮಂಗಲವು ಧಾರ್ಮಿಕವಾಗ, ರಾಜಕೀಯವಾಗಿ, ಸಾಂಸ್ಕೃತಿಕವಾಗಿ ಬೆಳೆದು ಪಟ್ಟಣವಾಗಿ ರೂಪುಗೊಳ್ಳಲು ಅಲ್ಲಿನ ಜಲಸಂಪನ್ಮೂಲವೇ ಮುಖ್ಯ ಕಾರಣವೆನ್ನಬಹುದು.

ನಾಗಮಂಗಲದ ಪಟ್ಟಣದಲ್ಲಿ ಎಲ್ಲ ಮತಪಂಥೀಯರು ನೆಲೆಸಿದ್ದು, ಕೋಮು ಸೌಹಾರ್ದತೆಯನ್ನು ಕಾಪಾಡಿಕೊಂಡು ಬಂದಿದ್ಧಾರೆ. ಹಿಂದೂ ಮತ್ತು ಮುಸಲ್ಮಾನರು ಜತೆಗೂಡಿ ಪಟ್ಟಣದಲ್ಲಿ ಸಾಂಸ್ಕೃತಿಕ ಚಟುವಟಿಕೆಗಳನ್ನು ನಡೆಸುವ ಮೂಲಕ ಇತರರಿಗೆ ಮಾದರಿಯಾಗಿದ್ಧಾರೆ. ಮುಸಲ್ಮಾನ ಬಂಧುಗಳು ಹೆಚ್ಚಿನ ಸಂಖ್ಯೆಯಲ್ಲಿದ್ದು, ಕೃಷಿ ಮತ್ತು ವ್ಯಾಪಾರ ವೃತ್ತಿಗಳಲ್ಲಿ ತೊಡಗಿದ್ದಾರೆ. ಇಲ್ಲಿನ ಶಿಕ್ಷಕರು ಮತ್ತು ಸಾಹಿತ್ಯವೇದಿಕೆಯ ಅಧ್ಯಕ್ಷರಾದ ಶ್ರೀ ಮುಹಮ್ಮದ್ ಕಲೀಂ ಉಲ್ಲಾ ಅವರು, ತಾಲ್ಲೂಕಿನಲ್ಲಿ ದುಸ್ಥಿತಿಯಲ್ಲಿರುವ ಮಹತ್ವದ ಪ್ರಾಚೀನ ದೇವಾಲಯಗಳನ್ನು ಧರ್ಮಸ್ಥಳದ ಧರ್ಮೊಸ್ಥಾನ ಟ್ರಸ್ಟ್ ಹಾಗೂ ಸರ್ಕಾರದ ಗಮನಕ್ಕೆ ತಂದು ಅವುಗಳ ನವೀಕರಣಕ್ಕೆ ಕಾರಣಕರ್ತರಾಗಿದ್ಧಾರೆ. ಇದು ಅವರ ಈ ನೆಲದ ಸಾಂಸ್ಕೃತಿಕ ಒಲವನ್ನು ಎತ್ತಿ ತೋರಿಸುತ್ತದೆ. ನಾಗಮಂಗಲ ಪಟ್ಟಣದಲ್ಲಿ ನೆಲೆಸಿರುವ ಎಲ್ಲಾ ವರ್ಗದ ಜನರು ತಮ್ಮ ತಮ್ಮ ನಂಬಿಕೆ ಮತ್ತು ಅಚರಣೆಗಳನ್ನು ನಿಷ್ಠೆಯಿಂದ ಆಚರಿಸುತ್ತಾರೆ. ಪರಸ್ಪರ ಗೌರವಿಸುವ ಮೂಲಕ ಜಾನಪದ ಸಂಸ್ಕೃತಿಯ ಹಿರಿಮೆಯನ್ನು ಸಾರಿದ್ಧಾರೆ. ನಾಗಮಂಗಲದಲ್ಲಿ ಆಚರಿಸುವ ಕೆಲವು ಆಚರಣೆಗಳು ಸಂಶೋಧಕರ ಗಮನ ಸೆಳೆದಿವೆ. ಅವುಗಳನ್ನು ಸವಿವರವಾಗಿ ಪ್ರಸ್ತುತ ಕೃತಿಯಲ್ಲಿ ದಾಖಲಿಸಲಾಗಿದೆ.

ನಾಗಮಂಗಲ ಪಟ್ಟಣದಲ್ಲಿ ಶಿಷ್ಟದೇವತೆಗಳಿರುವಂತೆ ಗ್ರಾಮದೇವತೆಗಳ ಸಂಖ್ಯೆಯೂ ದೊಡ್ಡದಿದೆ. ಅವುಗಳಲ್ಲಿ ಎಲ್ಲಮ್ಮ, ಬಡಗೂಡಮ್ಮ, ಆಂಜನೇಯ ಮುಖ್ಯವಾಗಿವೆ. ಇಲ್ಲಿನ ಬಡಗೂಡಮ್ಮ ಎಂಬ ಗ್ರಾಮದೇವತೆಯ ಹೆಸರು ಬಹುಶಃ ಬಡಿಕೋಡಿಯಮ್ಮ ಎಂಬುದರಿಂದ ಬಂದಿರಬಹುದು. ಏಕೆಂದರೆ ಹಿರಿಕೆರೆಯ ಬಡಗಣ ಅಂದರೆ ಉತ್ತರ ದಿಕ್ಕಿನಲ್ಲಿರುವ ಕೋಡಿಯ ದಂಡೆಯ ಮೇಲಿರುವ ಈ ಗ್ರಾಮದೇವತೆಯನ್ನು ಬಡಕೋಡಿಯಮ್ಮ ಎಂದು ಕರೆಯುತ್ತಿದ್ದು, ಅದು ಕಾಲಕ್ರಮೇಣ ಬಡಕೋಡಮ್ಮ >ಬಡಕೂಡಮ್ಮ> ಬಡಗೂಡಮ್ಮ ಎಂದು ರೂಪಾಂತರ ಆದಂತೆ ಕಾಣುತ್ತದೆ. ಈ ಕುರಿತು ಹೆಚ್ಚಿನ ಪರಿಶೀಲನೆ ನಡೆಯಬೇಕಿದೆ. ಅಲ್ಲದೆ ತಾಲ್ಲೂಕಿನ ಮುಳುಕಟ್ಟೆಯಮ್ಮ ಮತ್ತು ಸೋಮನಹಳ್ಳಿ ಅಮ್ಮ ತುಂಬಾ ಪ್ರಸಿದ್ಧಿ ಪಡೆದ ಗ್ರಾಮದೇವತೆಗಳಾಗಿವೆ. ಈ ಗ್ರಾಮದೇವತೆಗಳನ್ನು ಕುರಿತಂತೆ ಜನಪದ ಕಥೆಗಳಿವೆ. ಈ ಕಥೆಗಳು ಸ್ಥಳೀಯ ಚರಿತ್ರೆಯನ್ನು ಕಟ್ಟಿಕೊಡುವಲ್ಲಿ ಮಹತ್ವದ ಪಾತ್ರ ವಹಿಸುತ್ತವೆ. ಹೀಗಾಗಿ ಈ ಗ್ರಾಮದೇವತೆಗಳನ್ನು ಕುರಿತು ವಿಶ್ಲೇಷಣಾತ್ಮಕವಾದ ಅಧ್ಯಯನಗಳು ನಡೆಯಬೇಕಿದೆ. ಗ್ರಾಮದೇವತೆಗಳು, ಅವುಗಳಿಗೆ ನಡೆಯುವ ಪೂಜೆ ಪುನಸ್ಕಾರಗಳು, ಜಾತ್ರೆಗಳು, ಭಕ್ತರು, ಅರ್ಚಕರ ವರ್ಗ ಹಾಗೂ ಅವರ ಮೂಲಚೂಲಗಳು ಸ್ಥಳೀಯ ಅಧ್ಯಯನಕ್ಕೆ ಮಹತ್ವದ ಆಕರಗಳಾಗಿವೆ. ಹೆಚ್ಚಿನ ಅರ್ಚಕರು ಕೆಳಜಾತಿಯವರೇ ಆಗಿದ್ದು, ಗ್ರಾಮದೇವತೆಗಳಿಗೂ ಅವರಿಗೂ ಇರುವ ಸಂಬಂಧಗಳ ಸ್ವರೂಪವನ್ನು ಗ್ರಹಿಸಬೇಕಾಗಿದೆ. ಅದು ಸಮುದಾಯಗಳ ಇತಿಹಾಸ ರಚನೆ ಸಹಾಯಕವಾಗುವುದು.

 

ಹೀಗೆ ನಾಗಮಂಗಲ ಪಟ್ಟಣವು ಹೈದರ‍್, ಟಿಪ್ಪು ಮತ್ತು ಬ್ರಿಟಿಷ್ ಆಡಳಿತ ಕಾಲದಲ್ಲೂ ತನ್ನ ಸಾಂಸ್ಕೃತಿಕ ವರ್ಚಸ್ಸನು ಉಳಿಸಿಕೊಂಡು ಕೋಮುಸೌಹಾರ್ದತೆಗೆ ಹೆಸರಾಗಿದ್ದಾರೆ. ಪಟ್ಟಣವು ಕೃಷಿ ಮತ್ತು ವ್ಯಾಪಾರ ಚಟವಟಿಕೆಗಳಿಂದ ಕೂಡಿದ್ದು, ಸದಾ ಗಿಜಗುಡುತ್ತಿರುತ್ತದೆ. ಸುತ್ತಲಿನ ಗ್ರಾಮೀಣ ಪ್ರದೇಶದ ಜನರು ಒಂದಿಲ್ಲೊಂದು ಕಾರಣಗಳಿಂದಾಗಿ ಪಟ್ಟಣದ ಸಂಪರ್ಕವನ್ನು ನಿರಂತರವಾಗಿ ಹೊಂದಿದ್ಧಾರೆ. ಇಲ್ಲಿನ ಜನ ಸಾಹಸ ಪ್ರವೃತ್ತಿಯುಳ್ಳವರು. ದೂರದ ಊಟಿ, ಬೆಂಗಳೂರು, ಶಿವಮೊಗ್ಗ, ಮುಂಬಯಿಗಳಲ್ಲಿ ನೆಲಸಿ, ಉದ್ಯಮಶೀಲರಾಗಿದ್ಧಾರೆ. ಮೊದಲಿಗೆ ತೀವ್ರ ಬರವನ್ನು ಎದುರಿಸುತ್ತಿದ್ದು, ಇತ್ತೀಚೆಗೆ ಹೇಮಾವತಿ ನೀರು ಈ ಕೊಳವೆಬಾವಿಗಳಿಂದಾಗಿ ಕೃಷಿ ಚಟುವಟಿಕೆಗಳು ಅಧಿಕಗೊಂಡಿವೆ. ಇದರ ಪರಿಣಾಮ ನಾಗಮಂಗಲ ಪಟ್ಟಣದ ಮೇಲೂ ಆಗಿದೆ. ನಾಗಮಂಗಲ ಪಟ್ಟಣದಲ್ಲಿ ಅನೇಕ ಸಾಂಸ್ಕೃತಿಕ ಸಂಘಟನೆಗಳು ಕ್ರಿಯಾಶೀಲವಾಗಿವೆ. ಕಲೆ, ಸಾಹಿತ್ಯ, ನಾಟಕ, ಸಂಗೀತ ಹಾಗೂ ಜನಪದ ಕಲೆಗಳಲ್ಲಿ ಸಿದ್ಧಿಯನ್ನು ಪಡೆದ ಮಹನೀಯರು ಇಲ್ಲಿದ್ದು, ನಾಡಿಗೆ ತಮ್ಮದೇ ಆದ ಕೊಡುಗೆಗಳನ್ನು ನೀಡಿದ್ಧಾರೆ.

ನಾಗಮಂಗಲದ ಇತಿಹಾಸ ಮತ್ತು ಪರಾತತ್ವ ಮೊದಲಬಾರಿಗೆ ಸಂಶೋಧನಾ ನೆಲೆಯಲ್ಲಿ ನಡೆದು ಪ್ರಸ್ತುತ ಕೃತಿಯಲ್ಲಿ ಪ್ರಕಟಗೊಳ್ಳುತ್ತಿದೆ. ಇಲ್ಲಿನ ಎಲ್ಲ ಲೇಕನಗಳ ನಾಡಿನ ಸ್ಥಳೀಯ ಚರಿತ್ರೆ ಪುರಾತತ್ವ ಅಧ್ಯಯನದ ವ್ಯಾಪ್ತಿಯನ್ನು ವಿಸ್ತರಿಸುವಲ್ಲಿ ಮಹತ್ವದ ಪಾತ್ರ ವಹಿಸಿವೆ. ಹಾಗಾಗಿ ಈ ಲೇಖನ ಸಿದ್ಧಪಡಿಸಿದ ಎಲ್ಲ ವಿದ್ವಾಂಸರುಗಳಿಗೆ ತುಂಬು ಹೃದಯದ ವಂದನೆಗಳನ್ನು ಅರ್ಪಿಸುತ್ತೇನೆ. ಸಂಶೋಧನ ಲೇಖನಗಳಲ್ಲಿ ವ್ಯಕ್ತವಾಗಿರುವ ಅಭಿಪ್ರಾಯಗಳು ಆಯಾಯ ಲೇಖಕರದೇ ಆಗಿರುತ್ತದೆ. ಕರ್ನಾಟಕದಲ್ಲಿ ನಾಗಮಂಗಲದಂತಹ ಸ್ಥಳಗಳು ಸಾವಿರಾರು ಇವೆ. ಒಂದೊಂದು ಗ್ರಾಮಗಳು ತಮ್ಮದೇ ಅದ ಚರಿತ್ರೆ ಮತ್ತು ಸಂಸ್ಕೃತಿಯನ್ನು ಹೊಂದಿವೆ. ಅವುಗಳ ದಾಖಲಾತಿ, ವಿಶ್ಲೇಷಣೆ, ವಿಮರ್ಶೆ ಭವಿಷ್ಯದ ಸಂಶೋಧನೆಗಳಿಗೆ ಅನುವು ಮಾಡಿಕೊಡುತ್ತದೆ. ಈ ಸಂದರ್ಭದಲ್ಲಿ ಎಲ್ಲ ಸಂಶೋಧಕರಿಗೆ ಸಹಕರಿಸಿ ಉಪಯುಕ್ತ ಮಾಹಿತಿ ನೀಡಿ ಸತ್ಕರಿಸಿದ ನಾಗಮಂಗಲದ ಜನತೆಯನ್ನು ಮರೆಯಲಾರೆ. ಪ್ರಸ್ತುತ ಕೃತಿ ನಾಗಮಂಗಲ ನಾಡಿನ ವಿದ್ವಾಂಸರು, ಆಸಕ್ತರು, ವಿದ್ಯಾರ್ಥಿಗಳು ಮತ್ತು  ಪ್ರವಾಸಿಗರಿಗೆ ಉಪಯುಕ್ತವಾದಲ್ಲಿ ನಮ್ಮೆಲ್ಲರ ಶ್ರಮ ಸಾರ್ಥಕವಾದಂತೆ.

ಸಿ. ಮಹದೇವ