ಕನ್ನಡ ವಿಶ್ವವಿದ್ಯಾಲಯ ಕರ್ನಾಟಕದ ಹೆಮ್ಮೆಯ ಸಂಸ್ಥೆ. ವಿದ್ಯೆಯನ್ನು ಸೃಷ್ಠಿಸುವ ಆಶಯಕ್ಕೆ ಮಹತ್ವದ ಯೋಜನೆಗಳನ್ನು ಹಮ್ಮಿಕೊಂಡು ನಾಡಿನ ಸಂಸ್ಕೃತಿ, ಇತಿಹಾಸ, ಮತ್ತಿತರ ಕ್ಷೇತ್ರಗಳಲ್ಲಿ ತನ್ನನ್ನು ತೊಡಗಿಸಿಕೊಂಡಿದೆ. ಆ ನಿಟ್ಟಿನಲ್ಲಿ ಪ್ರಾಚೀನ ಇತಿಹಾಸ ಮತ್ತು ಪುರಾತತ್ವ ಅಧ್ಯಯನ ವಿಭಾಗವು ಹಮ್ಮಿಕೊಂಡಿರುವ ಯೋಜನೆಗಳಲ್ಲಿ ಸ್ಥಳೀಯ ಚರಿತ್ರೆ ಪುರಾತತ್ವ ಮಾಲೆ ಯೋಜನೆಯು ಸಹ ಒಂದು. ಇದರ ಅನ್ವಯ ಸಾಂಸ್ಕೃತಿಕವಾಗಿ ಶ್ರೀಮಂತವಾಗಿರುವ ನೆಲೆಗಳನ್ನು ಆಯ್ಕೆ ಮಾಡಿಕೊಂಡು ಅಲ್ಲಿನ ಭೌಗೋಳಿಕತೆ, ಇತಿಹಾಸ, ಶಾಸನ, ದೇವಾಲಯಗಳು, ಮೂರ್ತಿಶಿಲ್ಪಗಳು, ಕೆರೆಕಟ್ಟೆಗಳು ಹಾಗೂ ಜನರ ನಂಬಿಕೆ ಮತ್ತು ಅಚರಣೆಗಳನ್ನು ಕುರಿತಂತೆ ಹೊಸದಾಗಿ ಕ್ಷೇತ್ರಕಾರ್ಯ ಕೈಗೊಂಡು ಸಿದ್ಧಪಡಿಸಿದ ಸಂಶೋಧನ ಲೇಖನಗಳನ್ನು ಆ ಸ್ಥಳದಲ್ಲೇ ನಡೆಸುವ ವಿಚಾರಗೋಷ್ಠಿಯಲ್ಲಿ ಮಂಡಿಸಲಾಗುವುದು. ಹೀಗೆ ಮಂಡಿತವಾದ ಲೇಖನಗಳು ಸ್ಥಳೀಯ ಇತಿಹಾಸ ಮತ್ತು ಸಂಸ್ಕೃತಿಯನ್ನು ಅರಿಯಲು ಸಹಾಯಕವಾಗಿವೆ. ಈಗಾಗಲೇ ವಿಭಾಗದ ವತಿಯಿಂದ ಕುರುಗೋಡು, ತೊಣ್ಣೂರು, ಹಾನಗಲ್ಲು ಕೃತಿಗಳು ಪ್ರಕಟವಾಗಿದ್ದು, ನಾಡಿನ ವಿದ್ಯಾರ್ಥಿಗಳು, ಸಂಶೋಧಕರು ಮತ್ತು ಆಸಕ್ತರ ಗಮನ ಸೆಳೆದಿದೆ. ಈ ಮುಂದೆ ಮೈಲಾರ, ಬಸವನ ಬಾಗೇವಾಡಿ, ಬ್ರಹ್ಮಗಿರಿ, ಜನಗಳೂರು, ಕಿತ್ತೂರು ಕೃತಿಗಳು ಪ್ರಕಟಗೊಳ್ಳಲಿವೆ.

ನಾಗಮಂಗಲವನ್ನು ಕುರಿತ ವಿಚಾರ ಸಂಕಿರಣವು ದಿನಾಂಕ ೧೭ ಮತ್ತು ೧೮ ಜುಲೈ ೨೦೦೮ ರಂದು ನಾಗಮಂಗಲದ ಗಾಂಧಿಭವನದಲ್ಲಿ ನಡೆಯಿತು. ಅಲ್ಲಿ ಮಂಡಿಸಿದ ಸಂಶೋಧನ ಲೇಖನಗಳ ಸಂಗ್ರಹವೇ ಪ್ರಸ್ತುತ ಕೃತಿ ನಾಗಮಂಗಲ. ಇದು ಪ್ರಕಟಗೊಳ್ಳಲು ಆಯಾಯಾ ಕ್ಷೇತ್ರದ ಸಂಶೋಧಕರು ಕಾರಣಕರ್ತರಾಗಿದ್ದಾರೆ. ಹೊಸದಾಗಿ ಕ್ಷೇತ್ರಕಾರ್ಯ ನಡೆಸಿ ಮಾಹಿತಿಗಳನ್ನು ಕಲೆಹಾಕಿ ತಮ್ಮ ಪರಿಶ್ರಮವನ್ನು ದಾಖಲಿಸಿದ್ಧಾರೆ. ಆ ಪರಿಶ್ರಮದ ಮೂರ್ತರೂಪವೇ ಪ್ರಸ್ತುತ ಕೃತಿ ನಾಗಂಮಗಲ. ಈ ಹಿನ್ನೆಲೆಯಲ್ಲಿ ಸಂಶೋಧಕರಾದ ಡಾ. ರಂಗರಾಜು ಎನ್.ಎಸ್. ಶ್ರೀ ರಾಜೇಂದ್ರಪ್ಪ, ಎಸ್., ಡಾ. ರಾಮದಾಸ ರೆಡ್ಡಿ, ಡಾ. ನಾಗರಾಜು ಡಿ.ಎಮ್., ಡಾ.ಅಕ್ಕಮಹಾದೇವಿ, ಡಾ. ಸೆಲ್ವಪಿಳ್ಳೆ ಅಯ್ಯಂಗಾರ‍್, ಡಾ. ತಿಪ್ಪೇಸ್ವಾಮಿ ಎಸ್. ಡಾ. ಸ್ವಾಮಿ ಎಲ್. ಎನ್., ಡಾ.ಎಂ.ಪಿ. ಮಹಾದೇವಯ್ಯ, ಡಾ.ಸುರೇಶ್ ಬಿ.ಸಿ., ಶ್ರೀ ಮಹಮ್ಮದ್ ಕಲೀಂ ಉಲ್ಲಾ, ಡಾ.ಕೇಶವನ್ ಪ್ರಸಾದ್ ಇವರುಗಳನ್ನು ತುಂಬು ಗೌರವದಿಂದ ನೆನೆಯುತ್ತೇನೆ. ಈ ಸಂಶೋಧನಾ ಲೇಖನಗಳು ನಾಡಿನ ಇತಿಹಾಸ ಮತ್ತು ಪುರಾತತ್ವ ಕ್ಷೇತ್ರಕ್ಕೆ ಮಹತ್ವದ ಸೇರ್ಪಡೆಗಳಾಗಿವೆ.

ನಮ್ಮ ನೆಚ್ಚಿನ ಮಾನ್ಯ ಕುಲಪತಿಗಳಾದ ಡಾ.ಎ. ಮುರಿಗೆಪ್ಪ ಅವರನ್ನು ಈ ಸಂದರ್ಭದಲ್ಲಿ ತುಂಬು ಪ್ರೀತಿಯಿಂದ ನೆನೆಯುತ್ತೇನೆ. ಅವರು ತೋರಿದ ಆಸಕ್ತಿ ನಮಗೆ ಪ್ರೇರಕ ಶಕ್ತಿ. ಅದೇ ರೀತಿ ಮಾನ್ಯ ಕುಲಸಚಿವರಾದ ಡಾ.ಮಂಜುನಾಥ ಬೇವಿನಕಟ್ಟೆ ಅವರು ಸಹ ಪ್ರಸ್ತುತ ಕೈಂಕರ್ಯದಲ್ಲಿ ನೆರವಾಗಿದ್ದಾರೆ. ಅವರಿಗೂ ನನ್ನ ವಂದನೆಗಳು.ಇನ್ನು ನಮ್ಮ ವಿಭಾಗದ ಸಹೋದ್ಯೋಗಿ ಮಿತ್ರರಾದ ಡಾ.ಸಿ.ಎಸ್. ವಾಸುದೇವನ್, ಡಾ.ವಾಸುದೇವ ಬಡಿಗೇರ, ಶ್ರೀ ರಮೇಶನಾಯಕ ಮತ್ತು ಡಾ.ಎಸ್. ವೈ. ಸೋಮಶೇಖರ ಅವರುಗಳ ಸಹಕಾರವನ್ನು ನೆನೆಯುತ್ತೇನೆ.

ನಾಗಮಂಗಲದಲ್ಲಿ ಹಮ್ಮಿಕೊಂಡ ವಿಚಾರ ಸಂಕಿರಣವು ಯಶಸ್ವಿಗೊಳ್ಳಲು ಅಲ್ಲಿನ ಸಾಹಿತ್ಯ ವೇದಿಕೆ ಬಹುವಾಗಿ ಶ್ರಮಿಸಿದೆ. ಇದರ ಅಧ್ಯಕ್ಷರಾದ ಶ್ರೀ ಮುಹಮ್ಮದ್ ಕಲೀಂ ಉಲ್ಲಾ ಮತ್ತು ಅವರ ಸ್ನೇಹಿತರು ಬಹುವಾಗಿ ಶ್ರಮಿಸಿ ಎರಡು ದಿನಗಳ ವಿಚಾರಸಂಕಿರಣ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು. ಅವರ ಪರಿಶ್ರಮದ ಫಲವಾಗಿ ಪ್ರಸ್ತುತ ನಾಗಮಂಗಲ ಕೃತಿಯನ್ನು ಹೊರತರಲು ಸಾಧ್ಯವಾಯಿತು. ಹಾಗಾಗಿ ಶ್ರೀ ಕಲೀಂ ಉಲ್ಲಾ ಮತ್ತು ಅವರ ಸ್ನೇಹಿತರನ್ನು ಬಹುವಾಗಿ ನೆನೆದು ಹೃದಯಪೂರ್ವಕ ವಂದನೆಗಳನ್ನು ಸಲ್ಲಿಸುತ್ತೇನೆ. ಅದೇ ರೀತಿ ಕ್ಷೇತ್ರಕಾರ್ಯದಲ್ಲಿ ತೆರಳಿದ್ದ ವಿದ್ವಾಂಸರಿಗೆ ಎಲ್ಲಾ ರೀತಿಯಲ್ಲೂ ಸಹಕರಿಸಿದ ನಾಗಮಂಗಲದ ಜನತೆಯನ್ನು ಪ್ರೀತಿಯಿಂದ ನೆನೆಯುತ್ತೇನೆ. ಇನ್ನು ಈ ವಿಚಾರಗೋಷ್ಠಿಯ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿದ್ದ ಮೈಸೂರು ವಿಶ್ವವಿದ್ಯಾಲಯ ಪ್ರಾಚೀನ ಇತಿಹಾಸ ಮತ್ತು ಪುರಾತತ್ವ ಅಧ್ಯಯನ ವಿಭಾಗದ ಪ್ರಾಧ್ಯಾಪಕರಾದ ಡಾ. ಎಂ.ವಿ. ಕೃಷ್ಣಪ್ಪನವರು ಆಶಯ ಭಾಷಣ ಮಾಡಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದ್ಧಾರೆ. ಅವರಿಗೆ ತುಂಬು ಹೃದಯದ ಧನ್ಯವಾದಗಳು ಸಲ್ಲುತ್ತವೆ. ಇನ್ನು ಸಮಾರೋಪ ಭಾಷಣ ಮಾಡಿ ಕಾರ್ಯಕ್ರಮಕ್ಕೆ ಘನತೆಯನ್ನು ತಂದುಕೊಟ್ಟ ಪ್ರೊ.ಲಕ್ಷ್ಮಣ್ ತೆಲಗಾವಿಯವರನ್ನು ತುಂಬು ಗೌರವದಿಂದ ನೆನೆದು, ವಂದನೆಗಳನ್ನು ಸಲ್ಲಿಸುತ್ತೇನೆ.

ಇನ್ನ ಕೊನೆಯದಾಗಿ ಪ್ರಸ್ತುತ ಕೃತಿ ನಾಗಮಂಗಲವನ್ನು ತುಂಬಾ ಅಚ್ಚುಕಟ್ಟಾಗಿ ಮುದ್ರಿಸಿದ ಡಾ. ಮಂಜುನಾಥ ಬೇವಿನಕಟ್ಟೆ, ನಿರ್ದೇಶಕರು, ಪ್ರಸಾರಾಂಗ ಕನ್ನಡ ವಿಶ್ವವಿದ್ಯಾಲಯ ಮತ್ತು ಡಾ. ಸುಜ್ಞಾನಮೂರ್ತಿ, ಸಹಾಯಕ ನಿರ್ದೇಶಕರು, ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಇವರುಗಳ ಸಹಕಾರವನ್ನು ಸ್ಮರಿಸುತ್ತೇನೆ. ಇನ್ನು ಕೃತಿಯ ಅಕ್ಷರ ಸಂಯೋಜಿಸಿದ ಶ್ರೀ ಸಾವಳಗಿ ಶಿವಲಿಂಗೇಶ್ವರ ಗ್ರಾಫಿಕ್ಸ್ನ ಶ್ರೀಮತಿ ರಶ್ಮಿ ಕೃಪಾಶಂಕರ‍್ ಅವರಿಗೆ ವಂದನೆಗಳು. ಪ್ರಸ್ತುತ ಕೃತಿ ಕರ್ನಾಟಕದ ಇತಿಹಾಸ ಮತ್ತು ಪುರಾತತ್ವ ಅಧ್ಯಯನ ಕ್ಷೇತ್ರವನ್ನು ವಿಸ್ತರಿಸಿದೆ ಎಂದು ಭಾವಿಸುತ್ತೇನೆ.

ಸಿ. ಮಹದೇವ