ಮಾನವ ಯಾವುದನ್ನು ಪವಿತ್ರ ಭಾವನೆಯಿಂದ ನೋಡುವನೋ ಅದರೊಡನೆ ಇರಿಸಿಕೊಳ್ಳುವ ಸಂಬಂಧವೇ ಧರ್ಮವೆಂಬ (ರಿಲಿಜಿಯನ್) ಶಬ್ದದ ಅರ್ಥ, ಪವಿತ್ರವೆನಿಸತಕ್ಕದು ಅತಿಮಾನುಷವೇ ಇರಬೇಕೆಂಬ ನಿಯಮವಿಲ್ಲ. ಮಾನವಾಕೃತಿಯಲ್ಲಿಯೇ ಇರಬೇಕೆಂದು ಇಲ್ಲ. ವೈಯಕ್ತಿಕ ಭಾವನೆ ಮಾತ್ರವೆಂದೂ ಅದರರ್ಥವಲ್ಲ. ದೇವರು ಎಂಬ ಶಬ್ದವನ್ನು ವೈಯಕ್ತಿಕ ಇಲ್ಲವೆ ಅತಿಮಾನುಷವೆಂಬ ಅಭಿಪ್ರಾಯದಲ್ಲಿ ಬಳಸುವುದಾದರೆ ಅಂಥ ದೇವತಾ ಸ್ವರೂಪಗಳೊಡನೆ ಮಾನವ ಸಂಬಂಧ ಧರ್ಮವೆನಿಸುತ್ತದೆ. ವಿಶ್ವಧರ್ಮಗಳ ಇತಿಹಾಸಕಾರರು ಮಾನವ ಸಂಸ್ಕೃತಿಯು ಶೈಶವಾಸ್ಥೆಯಲ್ಲಿ ಧರ್ಮ ಮತ್ತು ಜಾದು (ವಿಚ್ ಕ್ರ‍್ಯಾಫ್ಟ) ಬೇರ್ಪಡಿಸಲಾರದಷ್ಟು ಕೂಡಿಕೊಂಡಿದ್ದವೆಂದು ಅಭಿಪ್ರಾಯಪಟ್ಟಿದ್ದಾರೆ. ಯಾವ ಉದ್ದೇಶಗಳಿಗಾಗಿ ಧರ್ಮ ಪ್ರವೃತ್ತಿ ಹೊರಟಿದೆಯೋ ಹೆಚ್ಚು ಕಡಿಮೆ ತತ್ಸಮಾನ ಉದ್ದೇಶಗಳಿಗಗಿಯೇ ಜಾದುವು ಹೊರಟಿರುತ್ತದೆ. ಇವೆರಡನ್ನು ವಿಭಾಗಿಸುವ ಅಂಶವೆಂದರೆ ಭಕ್ತಿ ಭಾವವೇ ಅಗಿದೆ. ದೇವತಾದಿಗಳ ವಿಷಯದಲ್ಲಿ ಭಕ್ತಿಭಾವವಿದ್ಧಾಗ ಧರ್ಮ ಭಕ್ತಿಯಿಲ್ಲದೆ ಹೋದಾಗ ಕೇವಲ ತಂತ್ರ ಮಂತ್ರಾದಿಗಳ ಬಾಹ್ಯಾಚಾರಕ್ಕೆ ಮಾತ್ರ ಪ್ರಾಶಸ್ತ್ಯವೊದಗಿದಾಗ ಜಾದುವಿನ ಮಂತ್ರ ಮಾಟಗಳಿಗೆ ಆಸ್ಪದವಾಗುತ್ತಲೆ ಇದೆ. ತಂತ್ರ ಮಂತ್ರಾದಿಗಳೇ ಭಕ್ತಿ ಸಮನ್ವಿತವಾದಾಗ ಧರ್ಮಾಚರಣೆಗಳೆನಿಸುತ್ತದೆ. ಆದುದರಿಂದಲೇ ಪೂಜ್ಯವಸ್ತು ಮತ್ತು ಪೂಜಾ ಕರ್ಮಗಳು ಧರ್ಮದ ಪ್ರಧಾನ ಘಟಕಗಳಾಗಿವೆ. ಇವೆರಡರ ಪರಸ್ಪರ ಪ್ರಕ್ರಿಯೆಯ ಫಲವಾಗಿಯೇ ವಿಶ್ವದಲ್ಲಿ ಪ್ರಸಿದ್ಧವಾಗಿರುವ ನಾನಾ ಧರ್ಮಗಳು ಉದಯವಾಗಿವೆ.

ಪ್ರಾಚೀನ ಕಾಲದಿಂದಲೂ ನಾವು ವರ್ಣವ್ಯವಸ್ಥೆಯನ್ನು ಕಾಣಬಹುದು. ಋಗ್ವೇದದ ಪುರುಷಸೂಕ್ತದಲ್ಲಿ ಬ್ರಾಹ್ಮಣನು ಪುರುಷನ ಮುಖದಿಂದಲೂ, ಕ್ಷತ್ರಿಯನು ಬಾಹುವಿನಿಂದಲೂ, ವೈಶ್ಯನು ತೊಡೆಯಿಂದಲೂ ಹಾಗು ಶೂದ್ರರು ಪಾದಗಳಿಂದಲೂ ಹುಟ್ಟಿದನೆಂದು ಹೇಳಿದೆ. ಇದರಲ್ಲಿ ಸಾಂಕೇತಿಕವಾದ ಅರ್ಥವಿರುವುದನ್ನು ಗಮನಿಸಬಹುದು. ಇಲ್ಲಿ ಗಮನಿಸಬೇಕಾದ ಅಂಶವೆಂದರೆ ಈ ವರ್ಗ ವ್ಯವಸ್ಥೆಯಲ್ಲಿ ಅಂತಹ ಹೇಳಿಕೊಳ್ಳುವಂತಹ ನಿಯಮಗಳೇನೂ ಇರಲಿಲ್ಲ. ಶೂದ್ರರನ್ನು ಬಿಟ್ಟರೆ ಯಾರು ಯಾವ ವರ್ಗವನ್ನು ಬೇಕಾದರೂ ಸೇರುವ ಸೌಲಭ್ಯವಿದ್ದಿತು. ಈ ಪದ್ಧತಿ ವಿರಳವಾದರೂ ಸಹ ಕೆಲವರು ಕ್ಷತ್ರಿಯರೂ, ಒಬ್ಬಿಬ್ಬರು ವೈಶ್ಯರೂ ಬ್ರಾಹ್ಮಣರಾಗಿರುವುದುಂಟು. ನಂತರದಲ್ಲಿ ಬ್ರಾಹ್ಮಣಗಳ ಕಾಲದಲ್ಲಿ ವ್ಯಕ್ತಿಯ ವರ್ಣವನ್ನು ನಿರ್ಣಯಿಸುತ್ತಿದ್ದುದು ಅವನ ಹುಟ್ಟೇ ಹೊರತು ವೃತ್ತಿಯಲ್ಲವಾಗಿತ್ತು. ಕ್ರಮೇಣವಾಗಿ ಇದನ್ನು ಉಳಿಸುವುದು ಕಷ್ಟವಾಗುತ್ತಾ ಬಂದಿರಬೇಕು. ಬೇರೆ ಬೇರೆ ವರ್ಣಗಳವರು ಬೇರೆ ಬೇರೆಯವರ ವೃತ್ತಿಗಳನ್ನವಲಂಬಿಸಿದರು. ಬೇರೆ ವರ್ಣಗಳ ಸ್ತ್ರೀಯರ ಸಂಪರ್ಕವನ್ನು ಪಡೆದರು. ಇದರಿಂದ ವರ್ಣಸಾಂಕರ್ಯವುಂಟಾಯಿತು. ಇದರಿಂದಾಗಿಯೇ ಇನ್ನಿತರ ಜಾತಿಗಳ ಉದ್ಭವವಾಗಿರಬಹುದು. ಹಲವು ಪ್ರಾಚೀನ ಗ್ರಂಥಗಳಲ್ಲಿ ಕಮ್ಮಾರ, ನಾವಿದ, ವೈದ್ಯ ಮುಂತಾದ ವೃತ್ತಿಕಾರರ ಉಲ್ಲೇಖವಿದೆ. ಇದವರನ್ನು ಯಾವ ವರ್ಗಗಳಿಗೆ ಸೇರಿಸಬೇಕೋ ತಿಳಿಯದು. ಹೀಗೆ ಜಾತಿವ್ಯವಸ್ಥೆಯ ಮೂಲವು ಬಹಳ ಪ್ರಾಚೀನವಾದುದಾಗಿದೆ. ಯಾವ ಕಾಲದಿಂದ ಒಂದು ವರ್ಣದವರು ಮತ್ತೊಂದು ವರ್ಣದವರ ವೃತ್ತಿಯನ್ನು ಕೈಗೊಂಡರೋ, ಆಗಲೇ ವರ್ಣವ್ಯವಸ್ಥೆಯು ಕಡಿಮೆಯಾಯಿತು ಎಂದು ಹೇಳಬಹುದು.

ಧಾರ್ಮಿಕ ಪೂಜಾವಿಧಿಗಳೆಗೆಲ್ಲ ಹೆಚ್ಚಾಗಿ ಒಬ್ಬ ಪರಮಾತ್ಮ ಭಗವಂತನ ತತ್ವಸಿದ್ಧಾಂತಗಳೇ ಉಪ ಪಂಥಗಳಾಗಿ ಉದಯವಾದವು. ಈ ರೀತಿಯಲ್ಲಿಯೇ ಏಕದೇವತಾ ವಾದದಂತೆ ಅನೇಕ ದೇವತಾ ವಾದಗಳು ಉಂಟು. ಬೌದ್ಧ ಧರ್ಮದಲ್ಲಿ ಭಗವಂತನಿಗೆ ಸ್ಥಾನವೇ ಇಲ್ಲ. ಎಲ್ಲಾ ಧರ್ಮಗಳಿಗೂ ಅನ್ವಯಿಸಬಲ್ಲ ಸಾಮಾನ್ಯಂಶವನ್ನು ಎತ್ತಿ ತೋರಿಸುವ ಪ್ರಯತ್ನ ೨೦ನೆಯ ಶತಮಾನದಲ್ಲಿ ಆರಂಭವಾಯಿತು. ಯಾವುದೇ ಧರ್ಮವಿರಲಿ ಅದರಲ್ಲಿ ಪವಿತ್ರವೆನಿಸುವ ಕರ್ಮಾಂಗಗಳ ಜಪಮಂತ್ರಾದಿಗಳು, ಕಥಾನಕಗಳು, ತಂತ್ರಗಳು, ಪವಿತ್ರಕ್ಷೇತ್ರಗಳು, ತೀರ್ಥನದಿಗಳು, ಪುಣ್ಯನದಿಗಳು, ಶುಭಾಶುಭ ಶಕುನಾದಿಗಳು, ಆಚಾರ್ಯ ಪರಂಪರೆ ನಿತ್ಯತತ್ವಗಳು, ಧಾರ್ಮಿಕ ಸಾಹಿತ್ಯ, ವಿಧಿ ನಿಷೇಧಗಳು ಮುಂತಾದವು ಕೂಡಿರುತ್ತವೆ. ಇದು ಭಿನ್ನ ಭಿನ್ನ ಮತಗಳಲ್ಲಿ ಇವೆಲ್ಲ ವಿಭಿನ್ನವಾಗಿಯೇ ಇದ್ದರೂ ಪವಿತ್ರಭಾವನೆ ಮಾತ್ರ ಸಕಲ ಮತ ಪ್ರಕ್ರಿಯೆಗಳಿಗೂ ಸಮಾನವಾಗಿಯೇ ಇರುವುದರಿಂದ ಅದು ಧರ್ಮ ಶಬ್ದದಿಂದ ವಾಚ್ಯವಾಗುತ್ತದೆ. ಹೀಗೆ ಮತವೆಂಬುದು ಧಾರ್ಮಿಕ ಆಚಾರ ವಿಚಾರಗಳಲ್ಲಿನ ವೈಶಿಷ್ಟ್ಯದ ಸೂಚಕವಾಗಿರುವ ಸಂಕುಚಿತ ವ್ಯಾಪ್ತಿಯ ಶಬ್ದ,ಧರ್ಮ ಎಂಬುದು ಮತೀಯ ಆಚಾರ ವಿಚಾರಗಳ ಹಿಂದಿರುವ ಸಮಾನ ಮನೋವೃತ್ತಿಯನ್ನು ಸೂಚಿಸುವ ವಿಶಾಲಾರ್ಥಕವಾದ ವ್ಯಾಪಕ ಶಬ್ದ, ವೈಷ್ಣವ, ಶೈವ ಮುಂತಾದ ಪರಂಪರೆಗಳು ಪಂಥಗಳಾದರೆ ಸನಾತನ ಧರ್ಮ ಎಂಬುದು ಅವುಗಳಿಗೆಲ್ಲ ಅನ್ವಯಿಸುವ ವಿಶಾಲಾರ್ಥಕ ಶಬ್ದ, ಇದಕ್ಕೆ ಪ್ರವರ್ತಕನಾದ ಮಹಾಪುರುಷನೊಬ್ಬನ ಉಲ್ಲೇಖವು ಇಲ್ಲವಾದ್ದರಿಂದ ಅದು ಸನಾತನ ಧರ್ಮ, ಆದರೆ ಭೌದ್ಧ, ಜೈನ, ಕ್ರೈಸ್ತ, ಮುಸ್ಲಿಂ ಮುಂತಾದ ಧರ್ಮಗಳಿಗೆ ಒಬ್ಬ ಧಾರ್ಮಿಕ ಹಾಗೂ ಇನ್ನಿತರ ವಿಚಾರಗಳಲ್ಲಿ ಅವು ಬೆಸೆದುಕೊಂಡಿರುತ್ತವೆ. ಮೇಲೆ ಉಲ್ಲಖಿಸಿದ ತತ್ವಗಳ ಆಧಾರದ ಮೇಲೆ ಈ ಊರಿನಲ್ಲಿ ಮುಖ್ಯವಾಗಿ ಹಿಂದೂ, ಜೈನ ಮತ್ತು ಮುಸ್ಲಿಂ, ಎಂಬ ಮೂರು ಮತಗಳನ್ನು ಹಾಗೂ ಇವುಗಳ ಅನೇಕ ಪಂಥಗಳನ್ನು ಕಾಣಬಹುದಾಗಿದೆ.

ಇವುಗಳಲ್ಲಿ ಭಾರತದ ಪ್ರಮುಖ ಧರ್ಮವದ ಹಿಂದೂ ಅಥವಾ ಸನಾತನ ಧರ್ಮವೇ ಈ ಊರಿನ ಮುಖ್ಯವಾದ ಮತವಾಗಿದ್ದು, ಈ ಧರ್ಮದ ಆಧಾರದ ಮೇಲೆಯೇ ಊರಿನಲ್ಲಿ ಪ್ರತಿಯೊಂದು ಚಟುವಟಿಕೆಗಳು ನಡೆಯುತ್ತಿತ್ತು ಎಂದು ಇಲ್ಲಿರುವ ಶಾಸನಗಳಿಂದ ತಿಳಿಯಬಹುದು. ಧರ್ಮಕಾರ್ಯಗಳು, ದೇವರಿಗೆ ನಂದಾದೀಪ ದಾನ, ಸುವರ್ಣನಾಣ್ಯ ಹಾಗೂ ವೃತ್ತಿಭೂಮಿಗಳ ದಾನ ಇತ್ಯಾದಿಗಳು ಭಾರತೀಯ ಧರ್ಮಶಾಸ್ತ್ರಗಳ ಆಧಾರದ ಮೇಲೆ ನಡೆದ ಧಾರ್ಮಿಕ ಕಾರ್ಯಗಳಾಗಿವೆ. ಹಿಂದೂ ಮತದಲ್ಲಿ ವೈಷ್ಣವ ಹಾಗು ಶೈವ ಪಂಥಗಳನ್ನು ಕಾಣಬಹುದು. ಆದರೆ ಇವುಗಳಲ್ಲಿ ಉಪಪಂಥಗಳು ಹೇಗೆ ಉದಯವಾಗಿರಬಹುದೆಂಬುದರ ವಿಷಯದಲ್ಲಿ ಇನ್ನೂ ಭಿನ್ನಾಭಿಪ್ರಾಯಗಳಿವೆ.

ಸಾಮಾನ್ಯವಾಗಿ ವೈಷ್ಣವ ಆಗಮಗಳ ಪ್ರಕಾರ, ಶಿವನ ದೇವಾಲಯವು ಮುಖ್ಯದೇವಾಲಯದ ಅಥವಾ ಊರಿನ ಈಶಾನ್ಯಕ್ಕಿರಬೇಕು. ಇಂದು ಇಲ್ಲಿರುವ ಭುವನೇಶ್ವರ ದೇವಾಲಯಲವೂ ಸಹ ಊರಿನ ಹಾಗೂ ಮುಖ್ಯದೇವಾಲಯದ ಸೌಮ್ಯಕೇಶವನಿಗೆ ಈಶಾನ್ಯಭಾಗದಲ್ಲಿದೆ. ಇಲ್ಲಿಯ ದೇವಾಲಯಗಳನ್ನು ಅವಲೋಕಿಸಿದಾಗ ಇಲ್ಲಿಯ ಪ್ರಧಾನ ದೇವರಾಗಿ ಸೌಮ್ಯಕೇಶವನು ಇದ್ಧಾನೆ. ಇದೇ ರೀತಿಯಲ್ಲಿ ಯೋಗನರಸಿಂಹ ಮತ್ತು ಕೋದಂಡರಾಮ ದೇವಾಲಯಗಳ ವೈಷ್ಣವರ ಪಂಥಕ್ಕೆ ಸೇರಿದವೆಂದು, ನಂತರದಲ್ಲಿ ವೀರಭದ್ರ ಮತ್ತು ನಗರೇಶ್ವರ ದೇವಾಲಯವು ಸಹ ಮುಖ್ಯದೇವರ ದೇವಾಲಯದಿಂದ ನೈರುತ್ಯದಲ್ಲಿದ್ದು, ಇದು ಇಲ್ಲಿನ ಶೈವ ಪಂಥದ ಧಾರ್ಮಿಕ ಕಾರ್ಯಗಳಿಗೆ ಮೂಲವಾಗಿವೆ. ವಿಶ್ವಕರ್ಮದವರಿಗೆ ಇಲ್ಲಿನ ಶ್ರೀಕಾಳಿಕಾಂಬ ಕಮಠೇಶ್ವರ ದೇವಾಲಯವು ಈ ಪಂಥಕ್ಕೆ ಸೇರಿದುದಾಗಿದೆ. ಇವಲ್ಲದೆ ಇಲ್ಲಿನ ಜಡೆಮುನೇಶ್ವರ, ಎಲ್ಲಮ್ಮ, ಬಡಗೂಡಮ್ಮ ಆಂಜನೇಯ, ಲಕ್ಷ್ಮೀ, ಮಾರಮ್ಮ ಮುಂತಾದ ಗುಡಿಗಳಿವೆ. ಇಲ್ಲಿ ಸುಮಾರು ೮ ಆಂಜನೇಯ ಗುಡಿಗಳಿದ್ದು, ಇವುಗಳೂ ಸಹ ವೈಷ್ಣವ ಪಂಥದ ವ್ಯಾಪ್ತಿಗೆ ರುತ್ತದೆ. ಆದರೆ ಇಲ್ಲಿ ವೈಷ್ಣವ ಪಂಥದವರನ್ನು ಬಿಟ್ಟರೆ ಉಳಿದೆಲ್ಲ ಪಂಥದವರು ಎಲ್ಲ ದೇವರುಗಳನ್ನು ಪೂಜಿಸುತ್ತಾರೆ. ಕೆಲವು ಪಂಥಗಳಲ್ಲಿ ಪ್ರತ್ಯೇಕವಾದ ದೇವರಿಲ್ಲದೆ ಎಲ್ಲ ದೇವರುಗಳ ಸಮುದಾಯದವರಿದ್ಧಾರೆ. ಆದರೆ ಹಿಂದೂ ಧರ್ಮದ ಎಲ್ಲ ಪಂಥದವರಿಗೆ ಮುಖ್ಯ ದೇವರಾಗಿ ಸೌಮ್ಯಕೇಶವನಾಗಿದ್ದಾನೆ.

ಇಲ್ಲಿನ ಬಡಗೊಡಮ್ಮ ಗುಡಿಯು ಇಲ್ಲಿನ ಪ್ರಮುಖ ಗ್ರಾಮದೇವತೆಯಾಗಿದೆ. ಈ ದೇವತೆ ತುರುವೇಕೆರೆಯ ತಾಲ್ಲೂಕು ದಂಡಿನಶಿವರದಿಂದ ಬಂದಿದೆ. ಪಾಳೆಯಗಾರರ ಕಾಲದಲ್ಲಿ ತನ್ನ ಊರಿನ ಮೇಲೆರಗಿದ ದಂಡನೆಲ್ಲ ನಾಶಮಾಡಿ ಕೊನೆಗೆ ಬೇಸರಗೊಂಡು ದಕ್ಷಿಣದ ದಿಕ್ಕಿಗೆ ಬಂದು ಇಲ್ಲಿ ನೆಲಸಿತೆಂಬ ಐತಿಹ್ಯವಿದೆ. ಇಲ್ಲಿಯ ಪೂಜಾರಿಯು ಗಂಗಾಮತಸ್ಥರಾಗಿದ್ದು, ಪೂಜಾಕಾರ್ಯಗಳಲ್ಲಿ ಮಾತ್ರ ಉಪ್ಪಾರರಿಗೆ ಪ್ರಥಮ ಆದ್ಯತೆಯನ್ನು ನೀಡಲಾಗಿದೆ. ಬೆಸ್ತ ಜನಾಂಗದ ಗುಡ್ಡನು ಹಲ್ಲಿನಿಂದ ಮರಿ ಸಿಗಿಯುತ್ತಾನೆ (ಗಾವು ಸಿಗಿಯುತ್ತಾನೆ). ಅಂದರೆ ಹರಕೆಗೆ ಬಿಟ್ಟ ಕುರಿಗಳ ಕೆಳಗುತಿಯನ್ನು ಕಚ್ಚುವುದು. ಮಡಿವಾಳ ಜನಾಂಗದವರು ಸಹ ಇಲ್ಲಿಗೆ ಪೂಜೆ ಸಲ್ಲಿಸುತ್ತಾರೆ. ಈ ಗ್ರಾಮದೇವತೆಗೆ ಎಲ್ಲ ಜನಾಂಗದವರು ನಡೆದುಕೊಳ್ಳುತ್ತಾರೆ. ದಡಿಗದ ಕೋಡಿಯಲ್ಲಿ ಮಾರಮ್ಮನ ಪೂಜೆಯನ್ನು ಹಲವು ಜನಾಂಗದವರು ಮಾಡುತ್ತಾರೆ. ಇದನ್ನು ಗಮನಿಸಿದಾಗ ಕಾಲಂತರದಿಂದಲೂ ಬೆಳೆದು ಬಂದಂತಹ ಪರಂಪರೆಯಿಂದ ಬೇರೆ ಬೇರೆ ವೃತ್ತಿಗಳನ್ನು ಅನುಸರಿಸುತ್ತ ಆ ವೃತ್ತಿಗಳ ರಹಸ್ಯಗಳನ್ನು ಕಾಪಾಡಲು ಮಾಡಿದ ಪ್ರಯತ್ನದಲ್ಲಿ, ತನ್ನ ಗುಂಪಿನವರಲ್ಲದ ಬೇರೆ ಗುಂಪಿನ ಜೊತೆ ಹೊಂದಾಣಿಕೆ ಮಾಡಿಕೊಳ್ಳದ ಮನುಷ್ಯ ಸ್ವಭಾವದಲ್ಲಿ ಈ ರೀತಿಯಲ್ಲಿ ಒಂದುಗೂಡಿ ಅಚರಿಸುವ ಹಬ್ಬಗಳ ಮೂಲವನ್ನು ಹುಡುಕಬೇಕಾಗುತ್ತದೆ. ಇಲ್ಲಿಯ ಮತ್ತೊಂದು ಧರ್ಮವಾದ ಮುಸ್ಲಿಂ ಧರ್ಮವು ಸಹ ಶತಮಾನಗಳಷ್ಟು ಇತಿಹಾಸವನ್ನು ಹೊಂದಿದೆ. ಇವರ ಧಾರ್ಮಿಕ ಕಾರ್ಯಗಳಿಗೆ ಮಸೀದಿಗಳು ಹಾಗೂ ದರ್ಗಗಗಳು ಇವೆ.

ಇಲ್ಲಿ ವೈಷ್ಣವ ಮತ್ತು ಶೈವ ಪಂಥಗಳನ್ನು ಕಾಣಬಹುದುದಾದರೂ ಮೊದಲಿಗೆ ಈ ಕ್ಷೇತ್ರದ ಶೈವಸಂಪ್ರದಾಯವನ್ನು ವಿವೇಚಿಸಬಹುದು. ಭಾರತದಲ್ಲಿ ಶೈವ ಪಂಥವು ಬಹಳ ಪ್ರಾಚೀನವಾದ ಪಂಥವಾಗಿದೆ. ಶೈವಪಂಥದಲ್ಲಿ ಲಾಕುಳ ಮತ್ತು ಪಾಶುಪತರಿಗೆ ಕಾಳಾಮುಖರೆಂಬ ಹೆಸರೂ ಇದೆ. ಕಾಳಾಮುಖರು ಕಾಪಾಲಿಕರ ಗುಂಪಿಗೆ ಸೇರಿದಂತೆ ರಾಮಾಜುರು ನಿರೂಪಿಸುವುದನ್ನು ಆಧಾರವಾಗಿಟ್ಟುಕೊಂಡು ಡಾ. ಆರ‍್.ಜಿ. ಭಂಡಾರ್ಕರ‍್ ಅವರು ಕಾಳಾಮುಖರೂ ಕಾಪಾಲಿಕರೂ ಒಂದೇ ಎಂದು ಹೇಳುತ್ತಾರೆ. ಆದರೆ ಇದಕ್ಕೆ ಯಾವುದೇ ಆಧಾರವೂ ಇಲ್ಲ. ಕಾಪಾಲಿಕರದು ಸಂಪೂರ್ಣವಾಗಿ ವಾಮಾಚಾರಗಳ ಪಂಥವಾದರೆ, ಕಾಳಾಮುಖರದು ಶುದ್ಧ ಸಾತ್ವಿಕಾಚರಣೆಗಳ ಪಂಥ.೩.

ವೀರಶೈವ ಪಂಥಕ್ಕೆ ಮೂರು ಹೆಸರುಗಳಿಗೆ ವೀರಶೈವ, ಲಿಂಗಮತ, ಲಿಂಗಾಯತ, ಶೈವ ಎಂದರೆ ಶಿವನ ಉಪಾಸಕ, ಶಿವನನ್ನು ಆರಾಧ್ಯ ದೈವವಾಗಿ ಉಳ್ಳವನು ಅದಕ್ಕೆ ವಿಶೇಷಣವಾದ “ವೀರ” ಎನ್ನುವ ಮಾತಿಗೆ ಎರಡು ಅರ್ಥ ಹೇಳಬಹುದು. ಒಂದು ಶಿವನ ಬಗ್ಗೆ ಅಚಲವಾದ ಏಕೈಕವಾದ ನಿಷ್ಠೆಯನ್ನು ಅದು ಹೇಳಬಹದು. ಎಡನೆಯದಾಗಿ ವೀರಶೈವ ಮತವನ್ನು ಪ್ರಸಾರ ಮಾಡಲು ಹೊರಟಾಗ ಅದರ ನಾಯಕರು ಎದುರಿಸಿದ ಸಮಸ್ಯೆಗಳು, ಪ್ರತಿಬಂಧಕಗಳು, ಅವರ ನಿಷ್ಠೆ ಅರ್ಥವೇ ಗ್ರಾಹ್ಯವಾದುದು. “ಲಿಂಗವಂತ” ಎನ್ನುವ ಮಾತನ್ನು ವಿವರಿಸುವುದು ಇನ್ನೂ ಸುಲಭ. ಧನವನ್ನು ಉಳ್ಳವನು ಧನವಂತ ಹಾಗೆಯೇ ಲಿಂಗವನ್ನು ಉಳ್ಳವನು ಲಿಂಗವಂತ. ಈ ಪದಗಳು ಕ್ರಿ.ಶ. ೧೨ನೆಯ ಶತಮಾನದ ವಚನಕಾರರಲ್ಲೇ ಕಾಣಿಸಿಕೊಂಡಿವೆ. ಲಿಂಗವಂತ ಮಾತಿನ ಬಳಕೆ ಈಗ ಬಹಳ ಕಡಿಮೆ. ಇದು ವಚನ ಸಾಹಿತ್ಯದಲ್ಲೂ ಕಾಣುವುದಿಲ್ಲ. ಈ ಪದದ ನಿಷ್ಪತ್ತಿ ತೊಡಕಾದುದು ಮತ್ತು ವಾದಗ್ರಸ್ತವಾದುದು. ಇದರಲ್ಲಿ ಎರಡು ಪದಗಳು ಸ್ಪಷ್ಟವಾಗಿದೆ. ಲಿಂಗ + ಆಯತ “ಲಿಂಗಾಯತ” ಎನ್ನುವುದು ದೇಹದ ಮೇಲೆ ಧರಿಸುವ ಇಷ್ಟ ಲಿಂಗವನ್ನು ಹೇಳುತ್ತದೆಯೆಂಬುದರ ಬಗ್ಗೆ ಅನುಮಾನವಿಲ್ಲ. ಹಾಗಾದರೆ “ಆಯತ” ಎಂದರೇನು ? “ಆಯತ” ಸಂಸ್ಕೃತ ಪದ. ಅದರ ಅರ್ಥ ವಿಸ್ತಾರ ಎಂದು. ಅವರ ಪ್ರಕಾರ ಲಿಂಗಾಯತ ಎನ್ನುವುದು ಲಿಂಗವನ್ನು ಧರಿಸಿ ವಿಸ್ತಾರಗೊಂಡವರನ್ನು ಎಂದರೆ ಧನ್ಯರಾದವರನ್ನು ಎಂದು ಸೂಚಿಸುತ್ತದೆ. ಇದು ಒಂದು ರೀತಿಯ “Folk Etymology” ಎಂದು ಕಾಣುತ್ತದೆ. ಎರಡನೆಯ ವಿವರಣೆ ಲಿಂಗಾಯತ ಎನ್ನುವುದು ಲಿಂಗವಂತ ಶಬ್ದದ ತದ್ಭವ ಅಥವಾ ಇನ್ನೊಂದು ರೂಪ ಲಿಂಗಾಯತ. ಅಂದರೆ ಈ ಶಬ್ದದ ಪರಿವರ್ತನೆ ಹೇಗಾಯಿತು ಎಂಬುದನ್ನು ತರ್ಕ ಸಮ್ಮತವಾಗಿ ವಿವರಿಸುವುದು ಬಹಳ ಕಷ್ಟವಾಗುತ್ತದೆ.

ಶಬ್ದಗಳ ರೂಪ ಬದಲಾವಣೆ “ಲೋಕಾಯತ” ಎಂಬ ಒಂದು ವರ್ಗದ ಜನ ಹಿಂದೆ ಇದ್ದಿತು (ಚಾರ್ವಕ ಎಂಬುದು ಅವರಿಗೆ ಇದ್ದ ಇನ್ನೊಂದು ಹೆಸರು) ಲೋಕಾಯತ ಎಂದರೆ ಈ ಲೋಕದ ಬಗ್ಗೆ ಮಾತ್ರ ಆಸಕ್ತಿಯುಳ್ಳವರು. ಇವರಿಗೆ ಈ ಲೋಕ ಅದು ಕೊಡುವ ಸುಖಗಳು ಮಾತ್ರ ಸತ್ಯ. ಬೇರೆಯವರ ಗೊಡವೆ ಇವರಿಗಿಲ್ಲ. ಈ ಪದದ ಅರ್ಥದ ಆಧಾರದ ಮೇಲೆ ಲಿಂಗಾಯತ ಪದವನ್ನು ಹೀಗೆ ವಿವರಿಸಲು ಸಾಧ್ಯ. “ಲಿಂಗಾಯತ” ಶಬ್ದವು ಲಿಂಗದ ಬಗ್ಗೆ ಮಾತ್ರ ಇರುವ ಕಳಕಳಿಯನ್ನು ಸೂಚಿಸುತ್ತದೆ. ಲಿಂಗಾಯತನಿಗೆ (ಇಷ್ಟ) ಲಿಂಗವೊಂದು ಮಾತ್ರ ಸತ್ಯ, ಅವನ ಸಂಬಂಧ ಅದರ ಜೊತೆ ಸದಾ ಇರತಕ್ಕದ್ದು. ದೇಹದ ಮೇಲೆ ಇಷ್ಟ ಲಿಂಗವನ್ನು ಧರಿಸುವುದು ವೀರಶೈವ ಮತದ ಲಕ್ಷಣವೆಂಬುದನ್ನು ವೀರಶೈವನಾದವನು ಇಷ್ಟಲಿಂಗವನ್ನು ಯಾವಾಗಲೂ ಬಿಟ್ಟಿರಬಾರದೆಂಬುದನ್ನು ನೆನಪಿನಲ್ಲಿಟ್ಟುಕೊಂಡರೆ ಲಿಂಗಾಯತ ಪದದ ಮೇಲಿನ ವಿವರಣೆ ಹೆಚ್ಚು ಸ್ಪಷ್ಟವಾಗುತ್ತದೆ. ಈ ರೀತಿಯ ಧರ್ಮಾಧಾರಿತ್ವ ತತ್ವಗಳ ಆಧಾರದ ಮೇಲೆ ನಿರ್ಮಿತವಾದ ಪಂಥವೇ ವೀರಶೈವ ಪಂಥವಾಯಿತು. ಇವರ ಮೂಲ ದೇವರಾಗಿ ಶಿವನನ್ನು ಆರಾಧನೆ ಮಾಡಲು ಪ್ರಾರಂಭಿಸಿದರು. ಇಲ್ಲಿ ಸುಮಾರು ೭೦ ವೀರಶೈವ ಕುಟುಂಬಗಳಿವೆ. ಇಲ್ಲಿ ಕ್ರಿ.ಶ. ೧೧೩೪ ರ ಶಾಸನದಲ್ಲಿ ಶಂಕರನಾರಾಯಣ ದೇವರ ಉಲ್ಲೇಖವಿದೆ. ಆದುದರಿಂದ ಇಲ್ಲಿ ಶೈವರು ಈ ಕಾಲಕ್ಕಿಂತ ಹಿಂದಿನಿಂದಲೂ ಇದ್ದರೆಂದು ಹೇಳಬಹುದು.

ನಾಗಮಂಗಲದಲ್ಲಿ ದೊರೆತಿರುವ ಶಾಸನಗಳಲ್ಲಿ ಈ ಊರನ್ನು ಚತುರ್ವೇದಿ ಭಟ್ಟರತ್ನಾಕರವಾದ ನಾಗಮಂಗಲ ಎಂದು ಉಲ್ಲೇಖಿಸಿರುವುದರಿಂದ ಇಲ್ಲಿ ವೈಷ್ಣವರು ವಾಸಿಸುತ್ತಿದ್ದದು ತಿಳಿಯುತ್ತದೆ. ಇದೇ ತಾಲ್ಲೂಕಿನ ಬೆಳ್ಳೂರಿನ ಕ್ರಿ.ಶ. ೧೨೬೯ ರ ಶಾಸನವೊಂದರಲ್ಲಿ ೫ ಬೆಳ್ಳೂರಿನ ಇಬ್ಬರು ವ್ಯಕ್ತಿಗಳ ನಡುವೆ ಒಪ್ಪಂದವೇರ್ಪಟ್ಟಾಗ ಅದನ್ನು ತೀರ್ಮಾನ ಮಾಡಲು ಹಾಗೂ ದಾನ ನೀಡಿರುವುದನ್ನು ಸಮ್ಮತಿಸಲು ತಿರುನಾರಾಯಣಪುರವಾದ ಮೇಲುಕೋಟೆಯ ಶ್ರೀವೈಷ್ಣವರು, ತೊಣ್ಣೂರಿನ ಶ್ರೀಲಕ್ಷ್ಮೀನಾರಾಯಣ ದೇವಾಲಯದ ಶ್ರೀವೈಷ್ಣವರು, ನಾಗಮಂಗಲದ ಚೆನ್ನಕೇಶವ ದೇವರ ಶ್ರೀವೈಷ್ಣವರು ಮುಂತಾದ ಹದಿನೆಂಟುನಾಡಿದ ಶ್ರೀವೈಷ್ಣವರನ್ನು ಒಟ್ಟುಗೂಡಿಸಿ ಬರೆಸಿದ ಶಾಸನವಾಗಿದೆ. ಇದರಿಂದ ತಿಳಿಯುವ ಪ್ರಮುಖವಾದ ವಿಷಯವೆಂದರೆ, ಅಂದಿನ ಕಾಲದಲ್ಲಿ ಇಲ್ಲಿನ ಶ್ರೀವೈಷ್ಣವರು ಪ್ರಮುಖರಾಗಿದ್ದರು ಹಾಗು ಯಾವುದೇ ಒಂದು ಕಾರ್ಯಗಳನ್ನು ಮಾಡುವಾಗಲೂ ಸಹ ಅವರವರ ಪಂಥಕ್ಕೆ ಸೇರಿದವರೆಲ್ಲರನ್ನು ಒಟ್ಟುಗೂಡಿಸಿಕೊಂಡು ಕಾರ್ಯಮಾಡುತ್ತಿದ್ದುದು ತಿಳಿಯುತ್ತದೆ.

ಕ್ರಿ.ಶ. ೧೨ನೆಯ ಶತಮಾನದ ಆದಿಭಾಗದಲ್ಲಿ ಚೋಳರ ಮೇಲೆ ಹೊಯ್ಸಳ ಅರಸರ ಅಧಿಕಾರ ಪ್ರಭಾವಯುತವಾಗಿ ಬೆಳೆಯಲಾರಂಭಿಸಿತು. ಆ ಕಾಲದಲ್ಲಿ ತಮಿಳುನಾಡಿನಲ್ಲಿ ಆಳುತ್ತಿದ್ದ ಚೋಳರು ಧಾರ್ಮಿಕ ಅಚರಣೆಗಳಲ್ಲಿ ಸ್ವಾತಂತ್ತ್ಯವನ್ನು ನೀಡದೆ ಕೆಲವೊಂದು ನಿರ್ದಿಷ್ಠ ಪಂಥಗಳನ್ನು ಆಚರಣೆಗೊಳಿಸಲು ಇತರ ಧಾರ್ಮಿಕ ಪಂಥಗಳ ಮುಖಂಡರುಗಳನ್ನು ಬಲವಂತಪಡಿಸಲಾರಂಭಿಸಿದರು. ಇಂತಹ ಇಂತಹ ಕಾಲದಲ್ಲಿ ತಮಿಳುನಾಡನ್ನು ತೊರೆದು ಕರ್ನಾಟಕಕ್ಕೆ ಬಂದವರು ಶ್ರೀರಾಮಾನುಜಾಚಾರ್ಯರು. ಇವರು ತಾವು ನಂಬಿದ್ದ ವಿಶಿಷ್ಟಾದ್ವೈತ ಸಿದ್ಧಾಂತವನ್ನು ಪ್ರಚಾರಪಡಿಸಿದರು ಮಾತ್ರವಲ್ಲದೇ ಈ ಸಿದ್ಧಾಂತವನ್ನು ಪ್ರಚಾರಪಡಿಸಿದರು. ಮಾತ್ರವಲ್ಲದೆ ಈ ಸಿದ್ಧಾಂತವನ್ನು ಆನುಸರಿಸಿದವವರಿಗೆಲ್ಲರಿಗೂ ಒಂದು ವಿಶಿಷ್ಟ ಚಿಹ್ನೆಗಳನ್ನು ನೀಡಿ ಅವರನ್ನು ಶ್ರೀವೈಷ್ಣವರೆಂದು ಕರೆದರು. ಹಾಗಾಗಿ ಶ್ರೀರಾಮಾನುಜಾಚಾರ್ಯರನ್ನು ಗುರುಗಳನ್ನಾಗಿ ಒಪ್ಪಿಕೊಂಡರನ್ನು ಶ್ರೀವೈಷ್ಣವರೆಂದು ಕರೆಯಲಾಯಿತು. ರಾಮಾನುಜರಿಗಿಂತ ಮೊದಲೇ ಕ್ರಿ.ಶ. ೮-೯ನೇಯ ಶತಮಾನದಲ್ಲಿ ಶ್ರೀಶಂಕರರು ಆರಂಭಿಸಿದ್ದ ಆದ್ವೈತ ಸಿದ್ಧಾಂತವನ್ನು ಅನುಸರಿಸಿದವರನ್ನು ಸ್ಮಾರ್ತರೆಂದೂ, ಕ್ರಿ.ಶ. ೧೩ನೆಯ ಶತಮಾನದಲ್ಲಿ ಬಂದ ಮಧ್ವಾಚಾರ್ಯರರ ಅನುಯಾಯಿಗಳನ್ನು ಮಾಧ್ವರು ಎಂದು ಇಂದಿಗೂ ಕರೆಯಲಾಗುತ್ತದೆ. ಆದರೂ ರಾಜಮನೆತನಗಳ ಆಶ್ರಯದಲ್ಲಿ ಬೆಳೆದು ಶ್ರೀವೈಷ್ಣವ ಮತಕ್ಕೆ ಸಿಕ್ಕಿದ ಪ್ರೋತ್ಸಾಹ ಇನ್ನಾವ ಪಂಥಗಳಿಗೂ ಸಿಗಲಿಲ್ಲ ಎಂಬುದು ನಿರ್ವಿವಾದವಾದ ಅಂಶವಾಗಿದೆ. ಹೊಯ್ಸಳರ ನಂತರ ವಿಜಯನಗರದ ಅರಸರು. ಮೈಸೂರು ಅರಸರು ಈ ಸಿದ್ದಾಂತಕ್ಕೆ ಪ್ರೋತ್ಸಾಹವನ್ನು ನೀಡಿದರು. ಉದಾ:- ಸೌಮ್ಯಕೇಶವನಿಗೆ ದಾನ ದತ್ತಿ ನೀಡಿದುದು ಮತ್ತು ದೇವಾಲಯದಲ್ಲಿ ಆಳ್ವಾರರ ವಿಗ್ರಹಗಳನ್ನು ಪ್ರತಿಷ್ಠಾಪಿಸಿರುವುದು ಈ ಪಂಥಕ್ಕೆ ದೊರೆತ ರಾಜಾಶ್ರಯದ ಪ್ರಮಾಣವನ್ನು ತಿಳಿಸುತ್ತದೆ. ಹಾಗೂ ಹೊಯ್ಸಳರ ಕಾಲದ ಹಲವು ವೈಷ್ಣವ ದೇವಾಲಯಗಳಲ್ಲಿ ಆಳ್ವಾರರ ವಿಗ್ರಹಗಳಿರುವುದು ಈ ಧರ್ಮಪ್ರಚಾರಕರಿಗೆ ದೊರೆತ ಗೌರವೆನ್ನಬಹುದು.

ಶ್ರೀರಾಮಾನುಜಾಚಾರ್ಯರು ತಮಿಳುನಾಡಿನಲ್ಲಿ ಜನಿಸಿ ತಮ್ಮ ಪಂಥ ಪ್ರಚಾರಕ್ಕಾಗಿ ಇಡೀ ಭಾರತವನ್ನು ಪರ್ಯಟನ ಮಾಡಿದರೆಂದು ತಿಳಿದುಬರುತ್ತದೆ. ಇವರು ಹೊಯ್ಸಳನಾಡಿಗೆ ಬಂದು ತೊಣ್ಣೂರು, ಮೇಲುಕೋಟೆ ಮತ್ತು ಇತರ ಸ್ಥಳಗಳಲ್ಲಿ ಇಪ್ಪತ್ತು ವರ್ಷಗಳ ಕಾಲ ಇದ್ದು, ಮತ ಪ್ರಚಾರ ಮಾಡಿದರು. ಆಳ್ವಾರರಿಂದ ಪ್ರಾರಂಭವಾಗಿ ನಾಥಮುನಿ ಮತ್ತು ರಾಮಾನುಜಾಚಾರ್ಯರಿಂದ ಪ್ರಚಾರಕ್ಕೆ ಬಂದ ಈ ಸಂಪ್ರದಾಯಕ್ಕೆ ಶ್ರೀರಾಮಾನುಜಾಚಾರ್ಯರು ವಿಶಿಷ್ಟ ರೂಪವನ್ನು ಕೊಟ್ಟರು. ಇಲ್ಲಿ ಆಡಳಿತ ನಡೆಸುತ್ತಿದ್ದ ಹೊಯ್ಸಳ ವಿಷ್ಣುವರ್ಧನ ಕರ್ನಾಟಕದ ಪ್ರದೇಶಗಳನ್ನು ಅಂದರೆ ನೀಲಗಿರಿ, ಕಣ್ಣಿಗಾಲ, ಕೊಳ್ಳೆಗಾಲ, ತಲಕಾಡು ಮುಂತಾದ ಪ್ರದೇಶಗಳನ್ನು ಚೋಳರ ಹಿಡಿತದಿಂದ ಬಿಡಿಸುವುದರಲ್ಲಿ ತಲ್ಲೀನನಾಗಿದ್ದ. ಇಂತಹ ಸಮಯದಲ್ಲಿ ಹೊಯ್ಸಳ ರಾಜಧಾನಿಯಾದ ದೋರಸಮುದ್ರದಿಂದ ಯುದ್ದಕ್ಕಾಗಿ ಬರಲು ಸಾಧ್ಯವಿಲ್ಲವಾಗಿ ತೊಣ್ಣುರು ಗ್ರಾಮದಲ್ಲಿ ತನ್ನ ಯುದ್ಧಕ್ಕಾಗಿ ರಾಜಧಾನಿಯೊಂದನ್ನು ಹೊಂದಿದ್ದನು. ಈ ತೊಣ್ಣೂರು ನಾಗಮಂಗಲದಿಂದ ಕೆಲವೇ ಮೈಲುಗಳ ಅಂತರದಲ್ಲಿದೆ. ಇಲ್ಲಿಯೇ ರಾಮಾನುಜರು ಜೈನನಾಗಿದ್ದ ವಿಷ್ಣುವರ್ಧನನ್ನು ವೈಷ್ಣವನನ್ನಾಗಿ ಮಾಡಿದರೆಂದು ಐತಿಹ್ಯ. ಸದ್ಯ ನಾಗಮಂಗಲದಲ್ಲಿ ಸ್ಮಾರ್ತರು ೭೫ ಕುಟುಂಬ, ಶ್ರೀವೈಷ್ಣವರು ೫ ಕುಟುಂಬ ಹಾಗೂ ಮಾಧ್ವರ ೧೦ ಕುಟುಂಬಗಳಿವೆ.

ಭಾರತದ ಮೂಲ ಕಸುಬು ವ್ಯವಸಾಯವಾಗಿದೆ. ಇದನ್ನು ಒಕ್ಕಲುತನ ಎಂದು ಕರೆಯುತ್ತಾರೆ. ಇದೇ ಹೆಸರಿನ ಪಂಥದವರಾದ ಒಕ್ಕಲಿಗರಿಗೆ ಮೂಲ ಇತಿಹಾಸವನ್ನು ಹೇಳಲು ನಿಖರವಾದ ಆಧಾರಗಳಿಲ್ಲ. ಎಲ್ಲ ಜನಾಂಗಗಳಿಗೂ ಒಂದೊಂದು ಮೂಲ ಕಸಬುಗಳು ಇದ್ದ ಹಾಗೆ ಒಕ್ಕಲುತನವನ್ನು ಮಾಡುವವನು ಒಕ್ಕಲಿಗ ಎಂದು ಹೇಳಲಾಗುತ್ತಿತ್ತು. ಆದರೆ ಈ ಎಲ್ಲ ಪಂಥದವರು, ಧರ್ಮದವರು ಎಲ್ಲಾ ಕೆಲಸಗಳನ್ನು ಮಾಡುತ್ತಿರುವುದರಿಂದ ಕೆಲಸದ ಆಧಾರದ ಮೇಲೆ ಪಂಥವನ್ನು ಹೇಳಲಾಗುವುದಿಲ್ಲ. ಇಂದು ಇಲ್ಲಿ ನೆಲೆಸಿರುವ ಬಹುಸಂಖ್ಯಾತ ಗೌಡ ಸಮುದಾಯವನ್ನು ನಾವು ಶೈವರು ಎಂದು ಹೇಳುವಂತಿಲ್ಲ. ಹಾಗೆಯೇ ವೈಷ್ಣವರು ಎಂದೂ ಸಹ ಹೇಳುವಂತಿಲ್ಲ. ಈ ಸಮುದಾಯವು ಶಬ್ದಾರ್ಥದಲ್ಲಿ ಹೇಳುವುದಾದರೆ ಹಲವು ಶಾಸನಗಳಲ್ಲಿ ಗಾವುಂಡರೆಂದು ಉಲ್ಲೇಖಿಸಿರುವ ಹೆಸರುಗಳಿವೆ. ಆದರೆ ಇವರನ್ನು ಗೌಡರು ಎಂದು ಹೇಳಲಾಗುವುದಿಲ್ಲ. ಲಾಲನಕೆರೆಯ ಶಾಸನವೊಂದರಲ್ಲಿ ದಂಡನಾಯಕ ಏಚಿರಾಜ ಅವನ ಹೆಂಡತಿ ಕಾಮಯಕ್ಕ ಮತ್ತು ಅವರ ಐದು ಗಂಡು ಮಕ್ಕಳ ಉಲ್ಲೇಖವಿದೆ. ಈ ದಂಡನಾಯಕನು ಲಾಲನಕೆರೆಯನ್ನು ಗೌಡಿಕೆಯನ್ನು ಉಂಬಳಿಯಾಗಿ (ಗೌಡಿಕೆಯನ್ನು ನಡೆಸುವುದಕ್ಕಾಗಿ ಪಡೆದ ಉಂಬಳಿ) ಪಡೆದನು. ಇದು ದಂಡನಾಯಕತ್ವ ನಡೆಸುವುದಕ್ಕಾಗಿ ಪಡೆದ ಸಂಭಾವನೆಯಾಗಿದೆ. ನಾಗಮಂಗಲದ ದೊಡ್ಡಜಟಕದ ಶಾಸನದಲ್ಲಿ ದೇವಾಲಯಕ್ಕೆ ದಾನ ನೀಡಿದವರ ವಂಶಾವಳಿಯನ್ನು ತಿಳಿಸುತ್ತದೆ.೭ ಇದರಲ್ಲಿ ಮಾರಸಿಂಗ ಗಾವುಂಡನ ಮಗ ಪುರುಷಮಾಣಿಕ್ಯ ಶೆಟ್ಟಿ ಈಗನ ಮಗ ಹುಳ್ಳೆಯ ನಾಯಕ ನಂತರದಲ್ಲಿ ಹೆಮ್ಮೆಯ ನಾಯಕ ಮತ್ತು ಧುರ್ಮಣ ಅಥವಾ ದುಮ್ಮೆಯ ನಾಯಕ ಎಂದು ಉಲ್ಲೇಖಿತವಾಗಿದೆ. ಇವರಲ್ಲಿ ಹೆಮ್ಮೆಯನಾಯಕರನು ಜೈನನಾಗಿದ್ದನು (ಇವನ ಬಿರುದುಗಳು ಜಿನಸಮಯ ಸಮುದ್ಧರಣ, ಪಾರಿಷದೇವಪಾದಾರಾಧಕ, ಒಟಗೆರಮಲ್ಲ). ಆದರೆ ಈತನು ಶಿವಾಲಯವನ್ನು ಸಹ ಕಟ್ಟಿಸಿದುದರಿಂದ ಆತನು ಶೈವಧರ್ಮಿಯನಾಗಿದ್ದನೆಂಬುದು ಸ್ಪಷ್ಟ. ಈತನಿಗೆ ಕನ್ನೆಗೆರೆಮಲ್ಲ ಎಂದು ಸಹ ಉಲ್ಲೇಖವಿದೆ. ಇದನ್ನು ಗಮನಿಸಿದಾಗ ಶಬ್ದದ ಮೂಲ ಅರ್ಥದಲ್ಲಿ ಹೇಳುವುದು ಸಮಂಜಸವಾದುದಲ್ಲವಾಗಿದೆ. ಆದರೆ ಗೌಡ ಎಂದರೆ ಗ್ರಾಮದ ಮುಖಂಡ ಎಂದು ಸಹ ಉಲ್ಲೇಖಿಸಹುದು. ಇವರಲ್ಲಿಯೂ ಕೆಲವರು ಆಹಾರ ಪದ್ಧತಿಯಲ್ಲಿ ಶೈವ ಹಾಗು ವೈಷ್ಣವ ಪದ್ಧತಿಯನ್ನು ಅನುಸರಿಸುತ್ತಾರೆ. ಒಕ್ಕಲಿಗರಲ್ಲಿ ದಾಸ ಒಕ್ಕಲಿಗ, ಗಂಗಡಕಾರ ಒಕ್ಕಲಿಗ, ನಾಮಧಾರಿ ಒಕ್ಕಲಿಗ ಎಂಬ ಉಪಸಮುದಾಯಗಳಿವೆ. ಆದರೆ ಮೂಲ ಕಸಬಾದ ಒಕ್ಕಲುತನ ಮಾಡುವವನೇ ಒಕ್ಕಲಿಗ ಎಂದು ಹೇಳಲಾಗುತ್ತಿದೆ. ಇವರನ್ನು ಪ್ರಾದೇಶಿಕವಾಗಿ ಗೌಡ ಎಂಬ ಹೆಸರಿನಿಂದಲೂ ಕರೆಯುವುದರಿಂದ ಗೌಡ ಎಂದರೆ ಮುಖಂಡ ಅಥವಾ ನಾಯಕ ಎಂದು ಉಲ್ಲೇಖಿತವಾಗುತ್ತದೆ. ಅದುದರಿಂದ ಸ್ಟಷ್ಟವಾದ ಆಧಾರವನ್ನು ಹೇಳಲಾಗದಿದ್ದರು ಸಹ ಸ್ವಾತಂತ್ರ ಪೂರ್ವದ ದಶಕದಲ್ಲಿ ಹಾಗೂ ನಂತರದ ದಶಕಗಳಲ್ಲಿ ಇದೊಂದು ಬಹಳ ಪ್ರಬಲವಾದ ಸಮುದಾಯವಾಗಿ ಬೆಳೆಯಿತು. ಪ್ರಸ್ತುತ ಪಟ್ಟಣದಲ್ಲಿ ಈ ಸಮುದಾಯದವರು ಸುಮಾರು ೧೨೦ ಕುಟುಂಬಗಳಿವೆ.

ಕುರುಬರು ಸಹ ಇಲ್ಲಿನ ಒಂದು ದೊಡ್ಡ ವರ್ಗವೆಂದು ಹೇಳಬಹುದು. ಅವರ ಮುಖ್ಯ ಉದ್ಯೋಗ ಕುರಿ ಸಾಕಣೆಯಾದರೂ ಎಷ್ಟೋ ಜನ ಅವರಲ್ಲಿ ರೈತರು ಹಾಗು ಇನ್ನಿತರ ಕೆಲಸಗಳನ್ನು ಮಾಡುವವರು ಇದ್ಧಾರೆ. ಒಂದು ಜಾತಿಯಾಗಿ ಕುರುಬರು ತಮ್ಮದೇ ವೈಶಿಷ್ಟ್ಯಗಳನ್ನು ಪಡೆದಿದ್ದಾರೆ. ಕೆಲವು ಜಾತಿಗಳಲ್ಲಿ ತಮ್ಮವರೇ ಆದ ಗುರುಗಳಿರುವುದಿಲ್ಲ (ಉದಾಹರಣೆಗೆ ಒಕ್ಕಲಿಗರು). ಆದರೆ ಕುರುಬರಲ್ಲಿ ಒಡೆಯರು ಎಂಬ ಅದೇ ಜಾತಿಯಲ್ಲಿ ಉಪಜಾತಿ ಎಂದು ಹೇಳಬಹುದಾದ ಒಂದು ವರ್ಗವು ಪುರೋಹಿತ ಸ್ಥಾನದಲ್ಲಿದ್ದುಕೊಂಡು ಕುರುಬರ ಎಲ್ಲ ಧಾರ್ಮಿಕ ವಿಧಿಗಳಿಗೆ ಬಾಧ್ಯರಾಗಿದ್ಧಾರೆ. ವೀರಶೈವ ಜಂಗಮರಿಗೂ ಒಡೆಯರಿಗೂ ಆಚಾರ ವ್ಯವಹಾರಗಳಲ್ಲಿ ಯಾವ ಭೇದವೂ ಕಾಣಬರುವುದಿಲ್ಲವಾದರೂ, ವೀರಶೈವರ ಜಂಗಮರು ತಮ್ಮ ಸಮಾನವೆಂದು ಒಪ್ಪಿಕೊಳ್ಳುವುದಿಲ್ಲ. ಒಡೆಯರುಗಳು ಸಹ ಶಿವನ ಆರಾಧಕರಾಗಿದ್ದು ಶಿವನನ್ನು ರೇವಣಸಿದ್ದೇಶ್ವರ ಎಂಬ ನಾಮಾಂಕಿತದಿಂದ ಪೂಜಿಸುತ್ತಾರೆ. (ಕುರುಬರಲ್ಲಿ ಶಿವನನ್ನು ಬೀರಪ್ಪ ಎಂದೂ ಪೂಜಿಸುತ್ತಾರೆ) ಒಡೆಯರುಗಳಲ್ಲಿ ಗಂಡು ಮಗು ಹುಟ್ಟಿದ್ದ ಮೂರು ದಿನಗಳಲ್ಲಿ ಪೀಠ ಇರುವ ಪುಟ್ಟ ಲಿಂಗವನ್ನು ಮಗುವಿಗೆ ಕಟ್ಟುತ್ತಾರೆ. ಇದೇ ಹುಟ್ಟುಲಿಂಗ, ಮುಂದೆ ಲಗ್ನಕ್ಕೆ ಮೊದಲು ಎರಡನೆಯ ವಿಧಿವತ್ತಾದ ಲಿಂಗದೀಕ್ಷೆ ನಡೆಯುತ್ತದೆ. ಜಂಗಮರಲ್ಲಾದರೆ, ಎಂಟು ಅಥವಾ ಹತ್ತು ವಯಸ್ಸಿನ ಒಳಗೆ ಲಿಂಗದೀಕ್ಷೆಯಾಗುತ್ತದೆ. “ಒಡೆಯ” ಎಂದರೆ ಯಜಮಾನ, ಮುಖ್ಯಸ್ಥ ಎಂದರ್ಥ. “ಒಡೆಯರ‍್” ಎಂಬ ಹೆಸರನ್ನು ಮೈಸೂರು ದೊರೆಗಳು ಹೊಂದಿದ್ದರು. ವೀರಶೈವ ಜಂಗಮರು ತಮ್ಮ ಹೆಸರುಗಳ ವಾರ್ಗಿಕವಾಗಿ ಆ ಪದವನ್ನು ಹೊಂದಿರುವುದು ಕಂಡುಬರುತ್ತದೆ. (ಉದಾಃ- ಚನ್ನಯ್ಯ ಒಡೆಯರ‍್, ಸಿದ್ಧವೀರಣ್ಣೊಡೆಯ) ಒಡೆಯರ ಹೆಂಡತಿಯರನ್ನು “ಒಡೆಯರಮ್ಮ” (ಒಡೇರಮ್ಮ) ಎಂದು ಕರೆಯುತ್ತಾರೆ. ಭಾರತೀಯ ಸ್ತ್ರೀ ಇತಿಹಾಸದಲ್ಲಿ ಮತ್ತು ಸಮಕಾಲೀನದಲ್ಲಿ ಪ್ರಮುಖ ಸ್ಥಾನವನ್ನು ಪಡೆದಿದ್ಧಾಳೆ. ಇದು ಕುರುಬರ ಉಪಜಾತಿಯಾದ ಒಡೆಯರ‍್ ಪದ್ಧತಿಯಲ್ಲಿ ದೊರಕಿರುವ ಸ್ಥಾನವನ್ನು ಕುರಿತದ್ದಾಗಿದೆ.

ಕಮ್ಮಾರರು ಸಹ ಐತಿಹಾಸಿಕವಾಗಿ ಬೆಳೆದು ಬಂದವರು. ಕ್ರಿ.ಶ. ೧೮೪೫ರ ಶಾಸನದಲ್ಲಿ ಕಮ್ಮಾರರು ದೇವಾಲಯದ ಗೋಪುರ, ಬಾಗಿಲುವಾಡಗಳು, ಚಿನ್ನ ಮತ್ತು ಬೆಳ್ಳಿಯ ಉತ್ಸವಮೂರ್ತಿಗಳು ಮತ್ತು ಆಭರಣಗಳನ್ನು ಮಾಡಿ ಹಾಕಿರುವುದರ ಬಗ್ಗೆ ಉಲ್ಲೇಖವಿದೆ.೧೦ ಇಲ್ಲಿ ಕಮ್ಮಾರರ ಸಂತತಿಯನ್ನು ಎಂದು ಉಲ್ಲೇಖಿಸಲಾಗಿದೆ. ಪಟ್ಟಣದಲ್ಲಿ ಸುಮಾರು ೫೦ ಕುಟುಂಬ ವಿಶ್ವಕರ್ಮ ಜನಾಂಗದವರು ಇದ್ದಾರೆ. ಇವರ ಆರಾಧ್ಯ ದೈವ ಶ್ರೀಕಾಳಿಕಾಂಬ ಕಮಠೇಶ್ವರ. ಇಂದಿಗೂ ೫-೬ ಕುಟುಂಬಗಳು ಲೋಹಶಿಲ್ಪ ಕೆಲಸವನ್ನು ಮಾಡುತ್ತಿವೆ. ಇವರು ವಂಶಪಾರಂಪರ್ಯವಾಗಿ ಲೋಹ ಶಿಲ್ಪವನ್ನು ಮಾಡುತ್ತಿರುವ ಮನೆತನಗಳಾಗಿವೆ. ಹಿಂದೆ ನಾಗಮಂಗಲದಲ್ಲಿ ಹಾಗೂ ಶ್ರವಣಬೆಳಗೊಳದಲ್ಲಿ ಕಲಾಶಾಲೆಗಳನ್ನು ನಿರ್ಮಿಸಬೇಕೆಂಬ ಉದ್ಧೇಶವು ಸಹ ಇದ್ದಿತ್ತು. ಇಂದಿಗೂ ಇಲ್ಲಿ ತಯಾರಿಸಿದ ನಟರಾಜ ಮೂರ್ತಿಗಳು ಮೈಸೂರು ಟೆಕ್ನಿಕಲ್ ಇನ್ಸಸ್ಟಿಟ್ಯೂಟ್ ನಲ್ಲಿ ಕಂಡುಬರುತ್ತವೆ.೧೧ ನೀಲಕಂಠಾಚಾರ್ಯರು ಇದೇ ಊರಿನವರಾಗಿದ್ದು, ಶಿಲ್ಪಕಲಾ ಅಕಾಡೆಮಿಯ ಅಧ್ಯಕ್ಷರು ಸಹ ಆಗಿದ್ದರು.

ವರ್ಣಗಳ ನಡುವಿ ಪ್ರಭೇದವು ಬೆಳೆದದ್ದರಿಂದಾಗಿ ಅಸ್ಪ್ರಶ್ಯತೆಗೆ ಕಾರಣವಾಯಿತು. ಇವರು ಸಮಾಜದಲ್ಲಿ ಕೊನೆಯ ಗುಂಪಿಗೆ ಸೇರಿದವರಾಗಿದ್ದು, ಇನ್ನುಳಿದ ಮೇಲ್ಪಂಕ್ತಿಯ ಜನರಿಗೆ ಸೇವೆ ಮಾಡುವುದೇ ಇವರ ಕಾಯಕವಾಗಿ ಬೆಳೆದು ಬಂದಿತ್ತು. ಈ ರೀತಿಯ ಅಸ್ಪ್ರಶ್ಯತೆಯು ನಮ್ಮ ದೇಶದಲ್ಲಿ ಪ್ರಾಚೀನ ಕಾಲದಿಂದಲೇ ಆರಂಭಗೊಂಡು ಇನ್ನೂ ಆಚರಣೆಯಲ್ಲಿದೆ. ಇವರ ಧಾರ್ಮಿಕ ಆಚರಣೆಗಳು ಇನ್ನೂ ಮೂಢ ನಂಬಿಕೆಯಿಂದ ತುಂಬಿವೆ. ಅವರ ಸಾಮಾಜಿಕ ಜೀವನವು ಹಲವಾರು ಕಂದಾಚಾರಗಳಿಂದ ಕೂಡಿದೆ. ಆರ್ಥಿಕ ಸ್ಥಿತಿಗತಿಗಳು ಇನ್ನು ಕೆಳಮಟ್ಟದಲ್ಲಿಯೇ ಇವೆ.೧೨ ಧಾರ್ಮಿಕವಾಗಿ ಇವರು ಹೆಚ್ಚಿನ ನಂಬಿಕೆಯುಳ್ಳರಾಗಿದ್ದು, ಕಲೆವು ಕಂದಾಚಾರಗಳ ನಡುವೆಯ ಗ್ರಾಮದೇವತೆಗಳ ಹಬ್ಬಕ್ಕೆ ಒಳಗಾಗಿದ್ಧಾರೆ. ಗ್ರಾಮದೇವತೆಗಳ ಬಗ್ಗೆ ಸೂಕ್ಷ್ಮವಾಗಿ ಅಧ್ಯಯನಗಳನ್ನು ನಡೆಸಿದಾಗ ಈ ಕೊನೆಯ ಗುಂಪಿಗೆ ಸೇರಿದವರಿಗೆ ದೇವಾಲಯಗಳ ಪ್ರವೇಶ ನಿಷಿದ್ಧ ಹಾಗೂ ಇನ್ನಿತರ ಕಾರ್ಯಗಳಿಂದ ನಿಷೇಧಕ್ಕೊಳಪಟ್ಟಿದ್ದರಿಂದ ಗ್ರಾಮದೇವತೆಗಳ ಹಬ್ಬಗಳು, ಕಾರ್ಯಗಳು ಹೆಚ್ಚಿನ ಸಂಖ್ಯೆಯಲ್ಲಿ ಉದ್ಭವವಾದವೆಂದು ಹೇಳಬಹುದು. ಇವರಲ್ಲಿ ಗ್ರಾಮದೇವತೆಗೆ ಪ್ರಾಮುಖ್ಯತೆಯನ್ನು ಕೊಟ್ಟಿದ್ದಾರೆ. ಇವರಲ್ಲಿ ಹೊಲೆಯರು ಮತ್ತು ಮಾದಿಗರು ಎಂಬ ಎರಡು ಉಪಪಂಗಡಗಳಿವೆ. ಹೊಲೆಯರಲ್ಲಿ ಸಾದೊಲೆಯರು, ತಿಗುಳೊಲೆಯರು, ಮಗ್ಗದೊಲೆಯರು, ಹಗ್ಗದೊಲೆಯರು, ದೊನೆಯೊಲೆಯರು ಹೀಗೆ ಹಲವು ಉಪಪಂಗಡಗಳಿದ್ದು ತಾವು ಗಂಗಡಿಕಾರಹೊಲೆಯ ಜಾತಿಗೆ ಸೇರಿದವರೆಂದು ಹೇಳಿಕೊಳ್ಳುವ ಇವರು ಪೂಜೆ ಮಾಡುವುದಷ್ಟೆ ಕೆಲಸ. ಮಾದಿಗರು ಪಟ್ಟಣದ ಸ್ವಚ್ಛತಾ ಕಾರ್ಯ ಹಾಗೂ ಇನ್ನಿತರ ಕೆಲಸ ಕಾರ್ಯಗಳನ್ನು ಮಾಡುತ್ತಾರೆ. ಇವರಿಗೂ ಸಹ ತಮ್ಮದೇ ಆದಂತಹ ಗ್ರಾಮದೇವತೆಗಳಿದ್ದು, ಧಾರ್ಮಿಕ ಕಾರ್ಯಗಳು ಬೇರೆಯವರಿಗಿಂತ ಹೊರತಾಗಿಲ್ಲ.

ನಾಗಮಂಗಲದಲ್ಲಿ ಗಾಣಿಗರ ಸುಮಾರು ಇನ್ನೂರು ಕುಟುಂಬಗಳಿವೆ. ಇವರು ಗಾಣದಿಂದ ಎಣ್ಣೆ ತೆಗೆದು ವ್ಯಾಪಾರ ಮಾಡುತ್ತಾರೆ. ದೇವರಿಗೆ ದೀಪೋತ್ಸವ ಕಾರ್ಯಗಳಿಗೆ ಎಣ್ಣೆಯನ್ನು ನೀಡುವುದು ಸಹ ಇವರ ಕಾರ್ಯಗಳಲ್ಲಿ ಒಂದಾಗಿತ್ತು. ಇವರನ್ನು ಜ್ಯೋತಿಫಣದವರು ಎಂದು ಸಹ ಕರೆಯುತ್ತಾರೆ. ಶಾಸನಗಳಲ್ಲಿ ಗಾಣಿಗರನ್ನು ತೆಲ್ಲಿಗರು ಎಂದು ಉಲ್ಲೇಖಿಸಲಾಗಿದೆ. ಇವರು ಸಹ ಪ್ರಾಚೀನ ಕರ್ನಾಟಕದಲ್ಲಿ ದೇವಾಲಯಗಳನ್ನು ಕಟ್ಟಿಸಿದ್ದಾರೆ.೧೩ ಪ್ರಸ್ತುತ ನಾಗಮಂಗಲದಲ್ಲಿರುವ ಗಾಣಿಗರು ಕೃಷಿ, ವ್ಯಾಪಾರ ಉದ್ದಿಮೆಗಳಲ್ಲಿ ತೊಡಗಿದ್ದಾರೆ. ಇವರು ಹಿಂದೆ ಕುಸ್ತಿ ಕಲೆಯಲ್ಲಿ ಪಳಗಿದ್ದರು. ನಾಗಮಂಗಲದ ಪಾಳೆಯಗಾರನಾಗಿದ್ದ ಚನ್ನಯ್ಯ ಗಾಣಿಗ ಕುಲದವನೆಂದು ತಿಳಿದುಬರುತ್ತದೆ.

ನಾಗಮಂಗಲದಲ್ಲಿ ಸುಮಾರು ಅರವತ್ತು ಕುಟುಂಬ ಆರ್ಯವೈಶ್ಯ ಜನಾಂಗದವರಿದ್ದು, ಇವರು ಮೂಲತಃ ಮೈಸೂರಿನಿಂದ ಬಂದವರಾಗಿದ್ಧಾರೆ. ಇವರ ಮೂಲದೇವತೆಯಾದ ಕನ್ನಿಕಾಪರಮೇಶ್ವರಿಯನ್ನು ಪೂಜಿಸುತ್ತಾರೆ. ಮಡಿವಾಳಶೆಟ್ಟಿ (ಅಗಸ) ಎಂದು ಕರೆಯುವ ಇವರು ಬಟ್ಟೆಗಳ ಶುಚಿತ್ವ ಕಾರ್ಯ ಮಾಡುತ್ತಾರೆ. ದೇವರ ಬಟ್ಟೆಗಲನ್ನು ಶುಚಿಗೊಳಿಸುವುದು ಇವರ ಕಾರ್ಯಗಳಲ್ಲಿ ಒಂದಾಗಿತ್ತು. ಇವರು ಲಕ್ಷ್ಮೀ ದೇವಿಯನ್ನು ಮನೆದೇವರೆಂದು ಪೂಜಿಸುತ್ತಾರೆ. ಇಲ್ಲಿ ಬೆಸ್ತ ಸಮುದಾಯದ ಇಪ್ಪತ್ತು ಕುಟುಂಬಗಳಿವೆ. ಇವರು ಮೂಲದೇವತೆಯಾಗಿ ಮಾಸ್ತಮ್ಮಳನ್ನು ಪೂಜಿಸುತ್ತಾರೆ. ಇವರಲ್ಲದೆ ಕುಂಬಾರರ ಮೂವತ್ತು ಕುಟುಂಬಗಳಿವೆ. ಇವರ ಮೂಲದೇವರು ಮಂಚಿದೇವರು. ನಾವಿದರ ಕೆಲವು ಕುಟುಂಬಗಳಿವೆ. ಇವರು ನಾದಸ್ವರ ನುಡಿಸುತ್ತಾರೆ.

ಮೇಲೆ ವಿವರಿಸಿದ ಜಾತಿಗಳಲ್ಲದೆ ಇನ್ನೂ ಹಲವು ಜಾತಿಗಳಿವೆ. ಅವುಗಳೆಂದರೆ ದೊಂಬರು, ಹಕ್ಕಿಪಿಕ್ಕಿಗಳು ಮುಂತಾದವರು. ಇವರೆಲ್ಲರೂ ಒಂದು ರೀತಿಯಲ್ಲಿ ಅಲೆಮಾರಿಗಳು. ಇವರನ್ನು ಪ್ರತ್ಯೇಕವಾಗಿ ಒಂದು ಜಾತಿ ಎಂದು ಕರೆಯುವುದು ಕಷ್ಟ.

ಭಾರತದಲ್ಲಿ ಮತ್ತೊಂದು ಪ್ರಾಚೀನ ಧರ್ಮವಾದ ಜೈನ ಧರ್ಮವು ಸಹ ಬಹಳ ಪ್ರಬಲವಾದಂತಹ ಧರ್ಮವಾಗಿತ್ತು. ನಾಗಮಂಗಲಕ್ಕೆ ಹತ್ತಿರವಾಗಿ ಜೈನ ಕ್ಷೇತ್ರಗಳಾದ ಕಂಬದಹಳ್ಳಿ ಹಾಗೂ ಕೆಲವೇ ಮೈಲುಗಳ ದೂರದಲ್ಲಿ ಜೈನ ಕ್ಷೇತ್ರವಾದ ಶ್ರವಣಬೆಳಗೊಳವಿದೆ. ಪ್ರಸ್ತುತ ಈ ಪಟ್ಟಣದಲ್ಲಿ ೨೦ ವರ್ಷಗಳ ಹಿಂದೆ ಮೈಸೂರಿನಿಂದ ಬಂದು ನೆಲೆಸಿರುವ ೪ ಜೈನ ಕುಟುಂಬಗಳಿವೆ. ಇವರಲ್ಲದೆ. ಕ್ರಿಶ್ಚಿಯನ್ ಧರ್ಮದವರ ೩ ಕುಟುಂಬಗಳಿವೆ. ಇವರು ಸರ್ಕಾರಿ ಕೆಲಸದ ನಿಮಿತ್ತ ಬೇರೆ ಕಡೆಯಿಂದ ಬಂದಿರುವುದರಿಂದ ಅವರ ವಿವರಣೆಯನ್ನು ನೀಡಿಲ್ಲ.

ಭಾರತದಲ್ಲಿರುವ ಮತ್ತೊಂದು ಧರ್ಮವಾದ ಇಸ್ಲಾಂ ಧರ್ಮವು ತನ್ನದೇ ಆದಂತಹ ಐತಿಹಾಸಿಕತೆಯನ್ನು ಹೊಂದಿದೆ. ಮುಸ್ಲಿಮರ ಪವಿತ್ರ ಗ್ರಂಥ ಖುರಾನ್ ಇದು ನಿಗದಿ ಮಾಡಿರುವ ವಿಧಿ ವಿಧಾನಗಳಿಗನುಗುಣವಾಗಿ ತಮ್ಮ ಜೀವನ ನಡೆಸುತ್ತಾರೆ. ಇಸ್ಲಾಂನ ಸ್ಥಾಪಕ ಪ್ರವಾದಿ ಮಹಮದ್ ಅಲ್ಲಾನನ್ನು ಬಿಟ್ಟು ಬೇರೆ ದೇವರಿಲ್ಲ ಎಂದು ಈ ಧರ್ಮ ಬೋಧಿಸುತ್ತದೆ. ಪವಿತ್ರ ಖುರಾನ್ ಇಸ್ಲಾಂನ ಮತ ತತ್ವಗಳನ್ನು ಒಳಗೊಂಡಿದೆ. ಅದರಲ್ಲಿ ಮುಸ್ಲಿಂರು ಪ್ರತಿದಿನ ೫ ಬಾರಿ ಪ್ರಾರ್ಥನೆ ಸಲ್ಲಿಸಬೇಕು. ಬಡವರಿಗೆ ದಾನ ಮಾಡಬೇಕು. ರಂಜಾನ್ ದಿನ ೫ ಬಾರಿ ಪ್ರಾರ್ಥನೆ ಮಾಡಬೇಕು. ತನ್ನ ಜೀವನದಲ್ಲಿ ಕೊನೆ ಪಕ್ಷ ಒಮ್ಮೆಯಾದರೂ ಮೆಕ್ಕಾಗೆ ಪವಿತ್ರ ಯಾತ್ರೆ ಕೈಗೊಳ್ಳಬೇಕು ಎಂದು ಹೇಳುತ್ತಾ ಇದು ಉತ್ತಮ ಜೀವನಾದರ್ಶಗಳಿಗೆ ಹೆಚ್ಚು ಪ್ರಾಮುಖ್ಯತೆಯನ್ನು ಕೊಡುತ್ತದೆ. ಎಲ್ಲಾ ಧರ್ಮಗಳಂತೆಯೇ ಇದೂ ಸಹ ಸ್ವರ್ಗದ ಸುಖ ಮತ್ತು ನರಕದ ದುಃಖಗಳನ್ನು ಬಹಳ ನೈಜವಾಗಿ ವಿವರಿಸುತ್ತದೆ. ಇಲ್ಲಿ ಸುಮಾರು ೨೦೦೦ ಕುಟುಂಬಗಳಿದ್ದು, ಇವರೆಲ್ಲರು ಸುನ್ನಿ ಪಂಗಡಕ್ಕೆ ಸೇರಿದವರು. ಷಿಯಾ ಪಂಗಡಕ್ಕೆ ಸೇರಿದವರು ಇಲ್ಲಿ ಇರುವುದಿಲ್ಲ. ಇವರು ನೂರಾರು ವರ್ಷಗಳ ಹಿಂದೆ ಬಿಜಾಪುರದಿಂದ ವಲಸೆ ಬಂದವರು.೧೪ ಇಲ್ಲಿ ೪ ಮಸೀದಿಗಳಿದ್ದು, ಊರಿನ ಮಧ್ಯದಲ್ಲಿರುವ ಜಾಮಿಯಾ ಮಸೀದಿಯು ಶತಮಾನದಷ್ಟು ಹಳೆಯದು. ಕ್ರಿ.ಶ. ೧೯೬೦ ರ ದಶಕದಲ್ಲಿ ನಿರ್ಮಾಣವಾದ ಮೆಕ್ಕಾ ಮಸೀದಿಯು ಪಟ್ಟಣದ ಮಂಡ್ಯರಸ್ತೆಯಲ್ಲಿ ತಾಲ್ಲೂಕು ಕಛೇರಿಯ ಹಿಂಭಾಗದಲ್ಲಿದೆ. ಇತ್ತೀಚಿಗೆ ನಿರ್ಮಾಣವಾದ ಹನೀಪ್ ಮಸೀದಿಯು ಇತ್ತೀಚಿನದಾಗಿದೆ. ನಾಗಮಂಗಲದ ಪಡುವಲಪಟ್ಟಣದ ಬೆಟ್ಟದ ಮೇಲೆ ಹಜರತ್ ಘಂಗರು ದಿವಾನ ಹಾಗು ಹಜರತ ಉರುಸಲ್ ದಿವಾನ್ ರವರ ದರ್ಗಗಳಿವೆ. ಮೈಸೂರು ರಸ್ತೆಯಲ್ಲಿ ನಿಜಾಮ್ ಶಾ ವಲಿಯ ದರ್ಗ ಇದೆ.೧೫

ಒಟ್ಟಿನಲ್ಲಿ ನಾಗಮಂಗಲ ಪಟ್ಟಣವು ಮೊದಲಿಗೆ ಶ್ರೀವೈಷ್ಣವರ ನೆಲೆಯಾಗಿದ್ದು, ನಂತರ ಶೈವಪಂಥದವರು ಇಲ್ಲಿ ಏಳಿಗೆಗೆ ಬಂದರು. ಇವರ ಜೊತೆ ಇನ್ನುಳಿದ ಹಿಂದೂ ಧರ್ಮದ ಹಲವು ಜಾತಿ, ಪಂಥಗಳು ಸಹ ಇಲ್ಲಿ ನೆಲೆಯೂರಿದ್ದವು. ತದನಂತರದಲ್ಲಿ ಇನ್ನುಳಿದ ಧರ್ಮದವರು ಇಲ್ಲಿಗೆ ಬಂದು ನೆಲೆಯೂರಿದರು. ಇಲ್ಲಿ ಒಬ್ಬ ಜನಸಂಖ್ಯೆ ೧೬೫೦೨ ಇದೆ. ಇದರಲ್ಲಿ ಪರಿಶಿಷ್ಟ ಜಾತಿಗೆ ಸೇರಿದವರು ೧೫೦೮, ಪರಿಶಿಷ್ಟ ಪಂಗಡಕ್ಕೆ ಸೇರಿದವರು ೪೮ ಜನರಿದ್ಧಾರೆ.

 

ಅಡಿಟಿಪ್ಪಣಿಗಳು

೧. ದತ್ತ ಎನ್.ಕೆ., ಅರಿಜನ್ ಅನ್ಡ್ ಗ್ರೋಥ್ ಅಫ್ ಕ್ಯಾಸ್ಟ್ ಇನ್ ಇಂಡಿಯಾ, ಪು. ೫೭-೫೮

೨. ಮುಹಮ್ಮದ್ ಕಲೀಂ ಉಲ್ಲಾ, ೨೦೦೩ : ನಾಗಮಂಗಲ ತಾಲ್ಲೂಕು ದರ್ಶನ, ಪು ೮೪

೩. ಚಿದಾನಂದಮೂರ್ತಿ ಎಂ., ಕನ್ನಡ ಶಾಸನಗಳ ಸಾಂಸ್ಕೃತಿಕ ಅಧ್ಯಯನ, ಪು. ೧೪೨

೪. ಚಿದಾನಂದಮೂರ್ತಿ ಎಂ., ಲಿಂಗಾಯತ ಅಧ್ಯಯನಗಳು, ಪು. ೪೩೨

೫. E.C. vii, ಶಾಸನ ೮೩, ಪು. ೮೧

೬. E.C. vii, ಶಾಸನ ೬೧, ಪು. ೩೩-೩೭

೭. E.C. vii, ಶಾಸನ ೧೩೨, ಪು. ೧೨೬

೮. ಚಿದಾನಂದ ಮೂರ್ತಿ ಎಂ., ಜನ -ಜನಪದ-ಜಾನಪದ, ಸಂಪುಟ-೩, ಪು. ೧೫೮

೯. ಅದೇ, ಪು. ೧೫೬

೧೦. E.C. vii, ಶಾಸನ ಸಂಖ್ಯೆ -೧೨, ಪು೧೧

೧೧. ಶ್ರೀಕಂಠಶಾಸ್ತ್ರೀ, ಸಂಶೋಧನಾ ಲೇಖನಗಳು, ಪು.೪೩೦

೧೨. ಶರ್ಮ ಎ.ಆರ‍್., ಕುಲಜನಾಂಗ ಮತ್ತು ಅಲ್ಪಸಂಖ್ಯಾತರ ಸಂಬಂಧಗಳು, ಪು ೧೨೧

೧೩. ಚಿದಾನಂದಮೂರ್ತಿ ಎಂ., ಕನ್ನಡ ಶಾಸನಗಳ ಸಾಂಸ್ಕೃತಿಕ ಅಧ್ಯಯನ, ಪು ೪೯೦

೧೪. ಮುಹಮ್ಮದ್ ಕಲೀಂ ಉಲ್ಲ ೨೦೦೩ : ನಾಗಮಂಗಲದ ತಾಲ್ಲೂಕು ದರ್ಶನ, ಪು ೨೦

೧೫. ಅದೇ, ಪು ೨೦-೨೧