ಸೃಷ್ಟಿಯ ಸಕಲ ಜೀವರಾಶಿಗಳಲ್ಲೆಲ್ಲಾ ಮಾನವನೇ ಶ್ರೇಷ್ಠವಾದ ಪ್ರಾಣಿ. ಉಳಿದ ಯಾವುದೇ ಜೀವಿಗಳಿಗೂ ಇಲ್ಲದ ವಿವೇಚನಾ ಗುಣ ಮಾನವ ಜೀವಿಗೆ ಮಾತ್ರ ಇದೆ. ಆ ಒಂದು ವಿಶಿಷ್ಟ ಗುಣದಿಂದಲೇ ಅವನು ಕಾಡುಮಾನವನಿಂದ ಇಂದು ಅನ್ಯ ಗ್ರಹಗಳಿಗೂ ಹೋಗಿ ಬರುವಷ್ಟು ಅಗಾಧವಾದ ಜ್ಞಾನದ ಅರಿವು ಅವನಲ್ಲಿ ವೃದ್ಧಿಯಾಗಿದೆ. ಇಷ್ಟಾಗಿಯೂ ಪ್ರಕೃತಿಯ ಮುಂದೆ ಅನು ಅಸಹಾಯಕ. ಏಕೆಂದರೆ, ಕೆಲವೇ ಸೆಕೆಂಡುಗಳಲ್ಲಿ ಅಸಂಖ್ಯಾತ ಜನರನ್ನು ಬಲಿತೆಗೆದುಕೊಳ್ಳುವ ಸುನಾಮಿ, ಭೂಕಂಪ, ಚಂಡಮಾರುತ ಹಾಗೂ ಅತಿವೃಷ್ಠಿಯಂತರ ಪ್ರಕೃತಿಯ ಮುನಿಸಿಗೆ ಪರಿಹಾರ ಕಂಡುಕೊಳ್ಳುವುದು ಸಾಧ್ಯವಾಗಿಲ್ಲ. ಇವುಗಳ ಮುಂದೆ ಮಾನವನ ಯಾವ ಜ್ಞಾನವು ನಡೆಯುತ್ತಿಲ್ಲ. ಪ್ರಕೃತಿಯ ಇಂಥಹ ದೈತ್ಯ ಶಕ್ತಿಯನ್ನು ಕಂಡು ಬೆರಗಾದ ಆದಿಮಾನವ ಭಯಭೀತವಾಗಿ ವಿನಮ್ರವಾಗಿ ಅವುಗಳೆದುರು ವಿಧೇಯತೆಯಿಂದ ತಲೆಬಾಗಿದ. ಇಡೀ ಭೂಮಂಡಲವನ್ನೇ ಬೆಳಗಿಸಿ ಸಕಲ ಜೀವರಾಶಿಗಳಿಗೆ ಚೈತನ್ಯವನ್ನು ಕೊಟ್ಟು, ಬಳಿಕ ಕತ್ತಲೆಗೊಳಿಸಿ ವಿಶ್ರಾಂತಿ ಹೊಂದುವಂತೆ ಅಜ್ಞಾಪಿಸುವಂತಹ ಬೆಳಕಿನ ಉಂಡೆಯನ್ನು (ಸೂರ್ಯ) ಕಂಡು ಮೊದಲಿಗೆ ವಿಸ್ಮಿತನಾಗಿ ಕೈಗಳ ಜೋಡಿಸಿ ತಲೆಬಾಗಿ ತನ್ನ ಭಯವನ್ನು ವ್ಯಕ್ತಪಡಿಸಿದ್ಧಾನೆ. ತಾನು ನಿತ್ಯವು ಸಂಗ್ರಹಿಸುತ್ತಿದ್ದ ಆಹಾರವನ್ನು ಸೇವಿಸುವುದಕ್ಕೆ ಮೊದಲು ಅದರ ಸ್ವಲ್ಪ ಭಾಗವನ್ನು ಪ್ರತ್ಯೇಕವಾಗಿ ತೆಗೆದಿರಿಸಿ ತನ್ನನ್ನು ಸಲಹುತ್ತಿರುವ ಅಗೋಚರವಾದ ಶಕ್ತಿಗೆ ಅರ್ಪಿಸುತ್ತಿದ್ದನು.

ತದನಂತರದಲ್ಲಿ ತನ್ನಗುಂಪಿನಲ್ಲಿ ಹಿರಯರು ಸಾವನ್ನಪ್ಪಿದಾಗ ಅಥವಾ ಕ್ರೂರಪ್ರಾಣಿಗಳಿಗೂ ಇಲ್ಲವೇ ಮಾರಣಾಂತಿಕ ರೋಗಗಳಿಗೆ ತುತ್ತಾದಾಗ ಸತ್ತವರಿಗೂ ಒಂದಿಷ್ಟು ಆಹಾರವನ್ನು ತೆಗೆದಿರಿಸುವುದು ರೂಢಿಯಾಯಿತು. ಏಕೆಂದರೆ, ಇದೂವರೆಗೆ ನಮ್ಮೊಡನಿದ್ದು ಸಾವಿನ ಅನಂತರ ತಮ್ಮಿಂದ ಶಾಶ್ವತವಾಗಿ ಇಲ್ಲದಾಗುವುದನ್ನು ಒಪ್ಪಿಕೊಳ್ಳದ ಮನಸ್ಸು ತಾವು ಆಹಾರ ಸೇವಿಸುವಾಗೆಲ್ಲಾ ತಮ್ಮನ್ನು ಅಗಲಿದ ವ್ಯಕ್ತಿಗೂ ಒಂದು ಪಾಲು ತೆಗೆದಿರಿಸುವುದುರಿಂದ, ಸತ್ತ ವ್ಯಕ್ತಿ ತಾವು ಇಟ್ಟ ಆಹಾರವನ್ನು ಸೇವಿಸುವನು ಎಂದು ನಂಬುತ್ತಿದ್ದರು. ಆರಂಭದಲ್ಲಿ ಇಂತಹ ಮಾನಸಿಕ ಸ್ಥಿತಿಯನ್ನು ಹೊಂದಿದ ಮಾನವನು ಸಂಚಾರಿ ಅಥವಾ ಅಲೆಮಾರಿ ಬದುಕನ್ನು ರೂಡಿಸಿಕೊಂಡಿದ್ದನ್ನು. ಆದರೆ ಪಶುಪಾಲನೆಯ ಬಳಿಕ ಕೃಷಿಯನ್ನು ಕಲಿತಾಗ ಕೆಲವು ತಿಂಗಳು ಅಥವಾ ವರ್ಷಗಳು ಒಂದೇ ಸ್ಥಳದಲ್ಲಿ ವಾಸಿಸುವುದು ಅನಿವಾರ್ಯವಾಯಿತು. ಒಂದು ನಿರ್ದಿಷ್ಟ ಪ್ರದೇಶದಲ್ಲಿ ನೆಲೆನಿಂತಾಗ ತಾನು ತನ್ನ ಹಿರಿಯರಿಗೆ ಹಾಗೂ ಅಗೋಚರ ಶಕ್ತಿಗೆ ಸಲ್ಲಿಸುತ್ತಿದ್ದ ಗೌರವವನ್ನು ಮುಂದುವರಿಸಿದನು. ಆಗ ಒಂದುಮರದ ನೆರಳಿನಲ್ಲಿ ಎಲೆಯನ್ನು ಹಾಸಿ ಅದರಲ್ಲಿ ಆಹಾರವನ್ನು ಇರಿಸುತ್ತಿದ್ದನು. ಗುರುತಿಗಾಗಿ ಅಲ್ಲೊಂದು ಕಲ್ಲನ್ನಿಟ್ಟು ಬರುತ್ತಿದ್ದುದ್ದು ಸಹಜವಾಗಿತ್ತು. ಹೀಗೆ ಮುಂದುವರಿದ ಆದಿಮಾನವನ ಬದುಕು ಪ್ರಕೃತಿಯ ವಿಸ್ಮಯಗಳಾದ ಸೂರ್ಯ, ಚಂದ್ರ, ಭೂಮಿಗಳಿಗೆ ಸದಾ ಋಣಿಯಾಗಿರುವುದೇ ಅಲ್ಲದೆ, ತಮ್ಮೊಡನೆ ಇದ್ದು ಸಾವಿನಿಂದ ಕಣ್ಮರೆಯಾದ ಗುಂಪಿನ ಸದಸ್ಯರಿಗೂ ತನ್ನ ಗೌರವಪೂರ್ಣ ನಮನಗಳನ್ನು ಸಲ್ಲಿಸುತ್ತಿದ್ದನು.

ಹೀಗೆ ಪ್ರಕೃತಿ ಮತ್ತು ಹಿರಿಯರನ್ನು ಮಾತ್ರ ಗೌರವಿಸಿ ತನ್ನ ವಿಧೇಯತೆಯನ್ನು ತಾನು ಆಹಾರವನ್ನು ಅರ್ಪಿಸಲು ಆಯ್ಕೆ ಮಾಡಿಕೊಳ್ಳುತ್ತಿದ್ದ ಮರ ಹಾಗೂ ಗುರುತಿಗಾಗಿ ಇರಿಸುತ್ತಿದ್ದ ಕಲ್ಲಿಗೂ ಸಹ ವಿಸ್ತರಿಸಿದನು. ಮುಂದುವರಿದು ಆ ಸ್ಥಳಕ್ಕೆ ತಪ್ಪಲಿನಿಂದ ಚಪ್ಪರವನ್ನು ನಿರ್ಮಿಸಿ ಮಳೆ-ಗಾಳಿಯಿಂದ ರಕ್ಷಿಸುವ ಪ್ರಯತ್ನ ಮಾಡಿದನು. ತದನಂತರದಲ್ಲಿ ಅದೊಂದು ಗುಡಿಸಲಾಗಿ ಪರಿವರ್ತನೆಯಾಯಿತು. ಸಾವಿರಾರು ವರುಷಗಳ ತರುವಾಯ ಆ ಗುಡಿಸಲೇ (ದೇವಸ್ಥಾನ) ಗುಡಿಯಾಯಿತು. ಅಲ್ಲಿ ಇರಿಸುತ್ತಿದ್ದ ಕಲ್ಲೇ ಪೂಜೆಗೆ ಅರ್ಹವಾದ ಅಗೋಚರ ಶಕ್ತಿಯ ಪ್ರತೀಕವಾಗಿತ್ತು. ಮುಂದೆ ಆ ಸಾಮಾನ್ಯಕಲ್ಲು ಭಿನ್ನ ರೂಪಗಳನ್ನು ತಳೆಯುತ್ತಾ ಮಾನವನನ್ನು ಹೋಲುವ ಆದರೆ ಎರಡಕ್ಕಿಂತ ಹೆಚ್ಚು ಕೈ ಹಾಗೂ ಒಂದಕ್ಕಿಂತ ಹೆಚ್ಚು ತಲೆಗಳು, ಅದಕ್ಕೆ ವಿಚಿತ್ರವಾದ ಆಭರಣದ ಅಲಂಕಾರದೊಂದಿಗೆ ಪ್ರತಿಷ್ಠಾಪಿಸುವ ಮೂಲಕ ಅದಕ್ಕೆ ಮುಕ್ತ ಬಯಲಿನಿಂದ ಗುಡಿ ಕಟ್ಟಿ ಬಂಧನಕ್ಕೆ ಒಳಪಡಿಸಲಾಯಿತು. ಸಾವಿರಾರು ವರುಷಗಳ ಹಿಂದೆ ಪೂಜಿಸುತ್ತಿದ್ದ ಒಂದು ಸಾಮಾನ್ಯ ಕಲ್ಲೇ ಇಂದಿಗೂ ಆಧುನಿಕ ಗುಡಿಯಲ್ಲೂ ಪೂಜಾರ್ಹವಾಗಿರುವುದನ್ನು ಕಾಣುತ್ತೇವೆ. ಆದರೆ ಜನ-ಜಾತಿಗಳಿಗೆ ಅನುಗುಣವಾಗಿ ಆ ಕಲ್ಲೇ ಹತ್ತು ಹಲವಾರು ಬೇರೆ ಬೇರೆ ದೇವರುಗಳಿಗಾಗಿ ಪೂಜೆಗೆ ಒಪ್ಪಿತವಾಗಿವೆ. ಈ ಹೆಸರುಗಳು ಪ್ರಾದೇಶಿಕವಾಗಿದ್ದು, ಆ ಭಾಗದ ಜನರ ಆಶೋತ್ತರಗಳನ್ನು ಈಡೇರಿಸುವ ರೋಗ-ರುಜಿನಗಳಿಂದ ರಕ್ಷಿಸುವ, ಕಾಲಕಾಲಕ್ಕೆ ಮಳೆ-ಬೆಳೆಯನ್ನು ನೀಡುವ ಒಪ್ಪಾರೆ ಸುತ್ತೇಳು ಗ್ರಾಮದ ಜನರನ್ನು ಕಾದು ಕಾಪಾಡುವ ದೇವರು ಅಥವಾ ದೇವತೆಯಾಗಿರುತ್ತದೆ.

ಸಾಮಾನ್ಯವಾಗಿ ಅತ್ಯಂತ ಹಳೆಯ ದೇವಸ್ಥಾನಗಳನ್ನು ಅವಲೋಕಿಸಿದಾಗ ಅವುಗಳು ಒಂದು ಗ್ರಾಮಕ್ಕೆ ಮಾತ್ರ ಸೀಮಿತವಾಗಿರದೆ, ಸುತ್ತಿನ ಏಳು ಗ್ರಾಮಗಳಿಗೂ ಪೂಜಾರ್ಹವಾಗಿರುವುದು ಕಂಡುಬರುತ್ತದೆ. ಆಯಾ ದೇವಸ್ಥಾನದ ದೇವತೆ ಅಥವಾ ದೇವರಿಗೆ ಜರುಗುವ ಹಬ್ಬ ಮತ್ತು ಜಾತ್ರೆಯು ಸಹ ಏಳುಗ್ರಾಮಗಳು ಕೂಡಿ ನೆರವೇರಿಸುವುದು ವಾಡಿಕೆ. ಆ ಸಂದರ್ಭದಲ್ಲಿ ಪ್ರತಿಯೊಂದು ಗ್ರಾಮಕ್ಕೂ ಅವರದೇ ಆದ ದೇವತಾ ಕಾರ್ಯಗಳು ನಿಗದಿಯಾಗಿರುತ್ತದೆ. ಯಾವುದೇ ಕಾರಣಕ್ಕೂ ಆ ನಿಯಮವನ್ನು ಮೀರುವಂತಿಲ್ಲ. ಹೀಗೆ ಪೂಜಿಸಲ್ಪಡುವ ದೈವಗಳಿಗೆ ತೇರು, ತೆಪ್ಪ, ಕೊಂಡ ಎಂಬುದಾಗಿ ಹತ್ತಾರು ಆಚರಣೆಗಳು ಜರುಗುತ್ತವೆಯಾದರೂ ಅಂತಿಮವಾಗಿ ಒಂದು ವಿಧಿಯು ಮಾತ್ರ ಪ್ರತಿಯೊಂದು ಗ್ರಾಮದಲ್ಲಿ ಪ್ರತಿಯೊಂದು ದೈವಗಳಿಗೆ ವಿಧವಿಧವಾದ ತಿಂಡಿ-ತಿನಿಸುಗಳು ಮತ್ತು ಹಣ್ಣು-ಕಾಯಿ-ಹೂವುಗಳನ್ನು ಅರ್ಪಿಸುವುದು ಇದ್ದೇ ಇರುತ್ತದೆ. ಅಂದರೆ, ಆದಿಮಾನವ ಅಂದು ಅಗೋಚರ ಶಕ್ತಿಗಳಿಗೆ ಹಾಗೂ ತನ್ನ ಹಿರಿಯರಿಗೆ ಅರ್ಪಿಸಿದ ಆಹಾರದ ಪ್ರತಿರೂಪವೇ ಇಂದು ಆಧುನಿಕ ಮಾನವನ ದೈವಗಳಿಗೆ ಸಂಕೀರ್ಣ ವ್ಯವಸ್ಥೆಯೊಂದಿಗೆ ಜರುಗಿಸುವ ಪೂಜೆ-ಪುನಸ್ಕಾರ, ಹಬ್ಬ-ಜಾತ್ರೆ-ಉತ್ಸವವಾಗಿ ಮಾರ್ಪಾಟಾಗಿದೆ.

ಇದಿಷ್ಟು ಪ್ರಸ್ತಾವನೆಯೊಂದಿಗೆ ಲೇಖನದ ಶೀರ್ಷಿಕೆಯಲ್ಲಿ ಕಾಣಿಸಿರುವಂತೆ ನಾಗಮಂಗಲದ ಗ್ರಾಮದೇವತೆಯಾದ “ಬಡಗೊಡಮ್ಮ” ನ ಹಬ್ಬದ ಅಚರಣೆಯನ್ನು ಕುರಿತು ಚರ್ಚೆಗೆ ಒಳಪಡಿಸಲು ಬಯಸುತ್ತೇನೆ. ನಾಗಮಂಗಲ ಒಂದು ಪ್ರಮುಖವಾದ ತಾಲ್ಲೂಕು ಕೇಂದ್ರವಾಗಿದ್ದು, ಸಕ್ಕರೆ ನಗರವಾದ ಮಂಡ್ಯ ಜಿಲ್ಲೆಗೆ ಸೇರಿದೆ. ಇದು ಐತಿಹಾಸಿಕವಾಗಿ, ಧಾರ್ಮಿಕವಾಗಿ ಮತ್ತು ಸಾಂಸ್ಕೃತಿವಾಗಿ ಬಹಳ ಮಹತ್ವದ ಸ್ಥಾನವನ್ನು ಹೊಂದಿದೆ. ಈ ವಿಷಯಗಳನ್ನು ಕುರಿತು ಪ್ರತೇಕ ಲೇಖನಗಳಲ್ಲಿ ಹೆಚ್ಚಿನ ಮಾಹಿತಿಯನ್ನು ತಿಳಿದುಕೊಳ್ಳಬಹುದಾಗಿದೆ.

ನಾಗಮಂಗಲ ಎಂಬ ಹೆಸರು ಬಂದುದರ ಬಗೆಗಿನ ಕಥೆಯೊಂದು ಹೀಗಿದೆ. “ಹಂಗುರು ಮರದ (ಪೊದೆಯ) ಬುಡದಲ್ಲಿದ್ದ ಹುತ್ತದಲ್ಲಿ ನೆಲೆಗೊಂಡಿದ್ದ ನರಸಿಂಹಸ್ವಾಮಿಯನ್ನು ನಾಗವೊಂದು ಮಂಡಳಾಕಾರದಲ್ಲಿ ಸುತ್ತುತ್ತಿದ್ದುದ್ದನ್ನು ಕಂಡ ಪಾಳೆಯಗಾರನೊಬ್ಬ ಅಲ್ಲಿ ಗುಡಿಕಟ್ಟಿ ಸ್ಥಾಪನೆ ಮಾಡಿದ ಊರು ನಾಗಮಂಗಲ”. ಹಾಗೆಯೇ ನಾಗಮಂಗಲದ ಗ್ರಾಮದೇವತೆಯಾಗಿರುವ ಬಡಗೂಡಮ್ಮ ಇಲ್ಲಿ ಬಂದು ನೆಲಗೊಂಡಿರುವ ಕುರಿತು ಒಂದು ಐತಿಹ್ಯ ಚಾಲ್ತಿಯಲ್ಲಿದೆ. ನಾಗಮಂಗಲದ ಬಡಗಲಾಗಿರುವ ಹಿರಿಯ ಕೆರೆಯ ಬಡಗಲ ಕೋಡಿಯ ಪಕ್ಕದಲ್ಲಿ ಪೂರ್ವಾಭಿಮುಖವಾಗಿರುವ ಗುಡಿ, ಬಡಗುಡಮ್ಮನ ಗುಡಿ. ಬಡಗುಡಮ್ಮನನ್ನು ಅರಸಮ್ಮ ಎಂದು ಕರೆಯುತ್ತಾರೆ. ಅರಸಮ್ಮ ತುರುವೇಕೆರೆ ತಾಲ್ಲೂಕು ದಂಡಿನಶಿವರದಿಂದ ವಲಸೆ ಬಂದವಳು. ಪಾಳೆಯಗಾರರ ಕಾಲದಲ್ಲಿ ತನ್ನ ಊರಿನ ಮೇಲೆ ಎರಗಿದ ದಂಡನ್ನೆಲ್ಲಾ ನಾಶಮಾಡಿ ತಾನು ನಷ್ಟವನ್ನು ಅನುಭವಿಸಿ, ಬೇಸರಗೊಂಡ ಅರಸಮ್ಮ ದಕ್ಷಿಣದ ಕಡೆಗೆ ಬರುತ್ತಿರುವಾಗ ನಾಗಮಂಗಲದ ಪಕ್ಕದ ಉಪ್ಪಾರಹಳ್ಳಿ ಆಂಜನೇಯಸ್ವಾಮಿ ಕೋಟೆ ಕಟ್ಟಿ ಅವಳನ್ನು ತಡೆದು ಅಲ್ಲೇ ನಿಲ್ಲಿಕೊಂಡನೆಂದು ಪ್ರತೀತಿ. ಬರುವ ಮಾರ್ಗದಲ್ಲಿ ದಂಡಿನವರು ಮೋಸದಿಂದ ಬಂದು ಅರಸಮ್ಮನ ತಲೆ ಕಡಿದದ್ದರಿಂದ ಉದ್ಭವ ಮೂರ್ತಿಗೆ ತಲೆ ಇಲ್ಲ. ಮೊದಲಿಗೆ ಇದಕ್ಕೆ ಯಾವುದೇ ಗುಡಿ ಇದ್ದಿರಲಿಲ್ಲ. ಕ್ರಮೇಣ ಮಣ್ಣಿನ ಗುಡಿಯನ್ನು ನಿರ್ಮಿಸಿದ್ದಿರಬಹುದು. ಇತ್ತೀಚಿಗೆ ಒಳಭಾಗದಲ್ಲಿ ನಾಲ್ಕು ಕಲ್ಲಿನ ಕಂಬಗಳುಳ್ಳ ಸಾಧಾರಣವಾದ ಗುಡಿಯನ್ನು ಕಟ್ಟಿಸಿದ್ಧಾರೆ. ಗರ್ಭಗುಡಿಯಲ್ಲಿ ಒಂದು ಹಾಸುಬಂಡೆ ಸುಮಾರು ಒಂದೂವರೆಗೆ ಅಡಿ ಎತ್ತರ ಹಾಗೂ ನಾಲ್ಕು ಅಡಿ ಉದ್ದವಿದೆ. ಸೂಕ್ಷ್ಮವಾಗಿ ಗಮನಿಸಿದರೆ ಇದೊಂದು ಹುಟ್ಟುಬಂಡೆ ಎಂಬಂತೆ ಕಾಣಬರುತ್ತದೆ. ಆ ಬಂಡೆಯ ಮೇಲೆ ಶಿರವಿಲ್ಲದ ಸ್ತ್ರೀ ದೇವತೆಯನ್ನು ಕಡೆದಿರುವ ಉಬ್ಬುಶಿಲ್ಪ ಇದಾಗಿದೆ. ಈ ಗುಡಿಯ ಹಿಂಭಾಗದಲ್ಲಿ ಒಂದು ವಿಶಾಲವಾದ ಕೆರೆಯಿದೆ. ಈ ಪ್ರದೇಶ ಬಂಡೆಯಿಂದ ಕೂಡಿದೆ. ನಾಗಮಂಗಲದ ಪಟ್ಟಣದಿಂದ ಬಡಗೂಡಮ್ಮನ ಗುಡಿ ಸುಮಾರು ಎರಡು ಕಿಲೋಮಿಟರ ದೂರದಲ್ಲಿದ್ದು, ಸ್ವಲ್ಪ ಎತ್ತರದಲ್ಲಿಯೂ ಇದೆ. ಗ್ರಾಮದ ಒಳಗೂ ಒಂದು ಬಡಗುಡಮ್ಮನ ಗುಡಿಯಿದ್ದು ಅಲ್ಲಿಯೂ ಸಹ ಪೂಜೆ ಸಲ್ಲಿಸುವುದುಂಟು. ಇಲ್ಲಿರುವುದು ಮೆರೆಯುವ ವಿಗ್ರಹ ಮಾತ್ರ. ಈ ದೇವತೆಯ ಪೂಜಾರಿಗಳು ಗಂಗೆಮತಸ್ಥರು ಅಂದರೆ ಬೆಸ್ತರು.

ಹಬ್ಬದ ಆಚರಣೆಗಳು :

ಯುಗಾದಿ ಹಬ್ಬವು ಮುಗಿದ ಮರುದಿನ ಬಡಗೂಡಮ್ಮನ ಹಬ್ಬದ ಬಗ್ಗೆ ಮಾತುಕತೆ ನೆರವೇರುತ್ತದೆ. ಅಂದು ಬೆಳಿಗ್ಗೆ ಮುದ್ದೇಗೌಡನ ಕೊಪ್ಪಲು, ಭದ್ರಿಕೊಪ್ಪಲು, ಉಪ್ಪಾರಹಳ್ಳಿ, ಮದಲಹಳ್ಳಿ, ಸಾರಿಮೇಗಲಕೊಪ್ಪಲು, ಗೊಲ್ಲರಕೊಪ್ಪಲು ಮತ್ತು ಕೆಂಚೇಗೌಡರ ಕೊಪ್ಪಲುಗಳಿಗೆ ಸುದ್ದಿಯನ್ನು ಕಳುಹಿಸುವರು. ಅಂದು ಸಂಜೆ ಬಡಗೂಡಮ್ಮನ ಹಬ್ಬ ನೆರವೇರಿಸುವ ಕುರಿತು ನಿರ್ಧಾರ ತೆಗೆದುಕೊಳ್ಳಲಾಗುವುದು. ಮರುದಿನವೇ ಈ ಎಲ್ಲಾ ಗ್ರಾಮಗಳಲ್ಲೂ ಹಬ್ಬ ಸಾರಣೆಯನ್ನು ಮಾಡಿಸುತ್ತಾರೆ. ಸಾಮಾನ್ಯವಾಗಿ ಹಬ್ಬವು ಶುಕ್ರವಾರದಂದೇ ಆರಂಭವಾಗುವುದು ವಾಡಿಕೆ. ಹಬ್ಬದ ಸಿದ್ಧತೆಗಾಗಿ ಕನಿಷ್ಟ ಎಂಟು – ಹತ್ತು ದಿನಗಳ ಕಾಲಾವಕಾಶ ದೊರೆಯುತ್ತದೆ. ಆಗ ಎಲ್ಲಾ ಗ್ರಾಮದವರು ಹಬ್ಬ ಸಿದ್ಧತೆಯನ್ನು ಮಾಡಿಕೊಳ್ಳುವರು. ಹಬ್ಬವು ಶುಕ್ರವಾರ ಕಂಬವನ್ನು ಪ್ರತಿಷ್ಠಾಸಿವುದುರ ಮೂಲಕ ಆರಂಭವಾಗುತ್ತದೆ. ಅದಕ್ಕೆ ಮೊದಲು ಮಂಗಳವಾರದಂದು ಹುಂಡಿಪೂಜೆಯನ್ನು ನೆರವೇರಿಸಿ ಸಂಬಂಧಪಟ್ಟ ಏಳು ಗ್ರಾಮಗಳಲ್ಲೂ ಕಾಲ್ನಡಿಗೆಯಲ್ಲಿ ಸಂಚರಿಸಿ ಕಾಣಿಕೆಯನ್ನು ಸಂಗ್ರಹಿಸುವ ಪದ್ಧತಿ ಇದೆ.

ಅಂದು ಬೆಳಿಗ್ಗೆ ದುಬ್ಬಿಗಡಿಗೆ ಅಂದರೆ ಕಾಣಿಕೆಯನ್ನು ಸ್ವೀಕರಿಸಲು ಬಳಸುವ ಮಣ್ಣಿನ ಗಡಿಗೆಗೆ ಪೂಜೆ ಸಲ್ಲಿಸಿ ಅದರ ಒಳಗಡೆಗೆ ಬೇವಿನಸೊಪ್ಪು ಮತ್ತು ಬಿಲ್ವಪತ್ರದ ಎಲೆಯನ್ನು ಹಾಕಿ ಬಾಯನ್ನು ಅರಿಸಿನ ಹಚ್ಚಿದ ಒಂದು ಮಡಿಬಟ್ಟೆಯಿಂದ ಕಟ್ಟಿರುತ್ತಾರೆ. ಈ ಹುಂಡಿಗೆ ಪೂಜೆ ಸಲ್ಲಿಸಿ ತಿಮ್ಮೇಗೌಡರ ಕುಟುಂಬದವರು ಒಂದು ಗಂಟನ್ನು ಹಾಕುವರು. ಆನಂತರ ಹುಂಡಿಗೆ ಛತ್ರಿಯನ್ನು ಹಿಡಿದುಕೊಂಡು ತಮಟೆ (ಎರಡು) ಯನ್ನು ಬಾರಿಸುತ್ತಾ ಹಣ ಸಂಗ್ರಹಕ್ಕೆ ಹೊರಡುವರು. ಹಳ್ಳಿಗೆ ಹೊರಡುವ ಮೊದಲು ಬ್ರಾಹ್ಮಣರ ಮನೆಯಲ್ಲಿ ಪೂಜೆ ಸಲ್ಲಿಸುವುದು ಹಿಂದಿನಿಂದ ಬಂದ ವಾಡಿಕೆ. ಮುದ್ದೇಗೌಡನಕೊಪ್ಪಲು ಮೊದಲು ಹಣ ಸಂಗ್ರಹಿಸುವ ಹಳ್ಳಿ, ಗ್ರಾಮಸ್ಥರು ಸಂಪ್ರದಾಯಬದ್ಧವಾಗಿ ಹುಂಡಿಯನ್ನು ಕೊಂಡ್ಯೊಯ್ದವರನ್ನು ಬರಮಾಡಿಕೊಳ್ಳುವರು. ಪ್ರತಿ ಕುಟುಂಬದವರು ತಮ್ಮ ಶಕ್ತಾನುಸಾರ ಕಾಣಿಕೆ ಸಲ್ಲಿಸುವರು. ಅನಂತರ ಈ ಗ್ರಾಮದ ಓರ್ವ ಈಡಿಗರ ಮನೆಯಲ್ಲಿ ಬೆಳಗಿನ ತಿಂಡಿಯನ್ನು ಕೊಡುವುದು ಸಂಪ್ರದಾಯ. ಅಲ್ಲಿ ತಿಂಡಿ ತಿಂದ ಬಳಿಕ ಬದ್ರಿಕೊಪ್ಪಲಿಗೆ ಪ್ರಯಾಣ ಬೆಳೆಸುವರು. ಅಲ್ಲಿಂದ ಉಪ್ಪಾರಹಳ್ಳಿಗೆ ಹೋಗಿ ಕಾಣಿಕೆ ಸಂಗ್ರಹ ಅದ ಬಳಿಕ ಊಟವನ್ನು ಮಾಡುವರು. ಉಪ್ಪಾರಹಳ್ಳಿ ಬಡಗೂಡಮ್ಮನ ತವರು ಮನೆ ಎಂದು ಹೇಳುತ್ತಾರೆ. ಮುಂದುವರಿದು ಮದಲಹಳ್ಳಿ, ಸಾರಿಮೇಗಲ ಕೊಪ್ಪಲು, ಗೊಲ್ಲರಕೊಪ್ಪಲು, ಕೆಂಚೇಗೌಡನ ಕೊಪ್ಪಲು ಒಟ್ಟು ಏಳು ಹಳ್ಳಿಗಳಲ್ಲೂ ಕಾಣಿಕೆ ಸಂಗ್ರಹಿಸುವಾಗ ಹುಂಡಿ ಮತ್ತು ಛತ್ರಿಯನ್ನು ಹಿಡಿದವರು ಕಾಲಿಗೆ ಚಪ್ಪಲಿಯನ್ನು ಹಾಕಬಾರದು ಹಾಗೂ ಕಾಣಿಕೆ ಸಂಗ್ರಹಕ್ಕೆಂದು ಹೊರಟವನು ನಡೆದುಕೊಂಡೇ ಹೋಗಬೇಕು.

ಹಬ್ಬ ಸಾರಣೆಯಾದ ಮುಂದಿನ ಶುಕ್ರವಾರ ಊರ ಮಧ್ಯದಲ್ಲಿರುವ ಬಡಗೂಡಮ್ಮನ ದೇವಸ್ಥಾನದ ಮುಂದೆ ಕಂಬ ನೆಡುವ ಶಾಸ್ತ್ರವಿದೆ. ಶುಕ್ರವಾರದಂದು ಶಾಸ್ತ್ರೋಕ್ತವಾಗಿ ಈ ಕಾರ್ಯವನ್ನು ನೆರವೇರಿಸುವರು. ಗಂಗಾಮತಕ್ಕೆ ಸೇರಿದ ಓರ್ವ ಮೈನೆರೆಯದ ಹೆಣ್ಣಿನ ಕೈಯಲ್ಲಿ ಕಳಸವನ್ನು ಹಿಡಿಸಿಕೊಂಡು ಕೊಳದ ಬಳಿ ಹೋಗಬೇಕು. ಚಿಗಳಿ, ತಂಬಿಟ್ಟು, ನೆಲ್ಲಕ್ಕಿ, ನೆಲಗಡಲೆ ಮತ್ತು ಹೊನ್ನೆಳೆಗಂಟು ಕಟ್ಟಿಕೊಂಡು ಹೋಗುವರು. ಕೊಳದ ಹತ್ತಿರ ಕಳಸಕ್ಕೆ ಪೂಜೆ ಸಲ್ಲಿಸಿ ಅರಿಶಿನದ ಕೊನೆಯನ್ನು ಕಟ್ಟುವರು. ಬರುವಾಗ ಮಾವಿನಸೊಪ್ಪು, ದರ್ಭೆಹುಲ್ಲು, ಬಾಳೆಕಂದು ಮತ್ತು ಅತ್ತಿಕೊನೆಯನ್ನು ಹೊತ್ತು ತರಬೇಕು. ದೇವಸ್ಥಾನದ ಮುಂದೆ ಕಂಬ ನೆಡುವವರು ಮಡಿವಾಳಶೆಟ್ಟಿ ಸಮುದಾಯಕ್ಕೆ ಸೇರಿದವರು. ಕೊಳದಿಂದ ಪೂಜಿಸಿ ತಂದ ಕಳಸವನ್ನು ದೇವಸ್ಥಾನದ ಒಳಗಿಟ್ಟು, ಅರಿಶಿನ ಕೊನೆಯನ್ನು ಬಿಚ್ಚಿ ಅಮ್ಮನ ಬಲಗೈಗೆ ಕಟ್ಟುವರು. ಇಲ್ಲಿಗೆ ಕಂಬ ನೆಡುವ ಶಾಸ್ತ್ರ ಮುಗಿಯುತ್ತದೆ.

ಕಂಬ ನೆಡುವ ಕಾರ್ಯಕ್ರಮ ಮುಗಿದ ಬಳಿಕ ಅಂದಿನ ರಾತ್ರಿಯಿಂದಲೇ ಏಳು ಗ್ರಾಮದವರು ಬಂದು ರಂಗದ ಕುಣಿತ ಮಾಡುವುದು ಉಂಟು. ಆದರೆ ಇತ್ತೀಚೆಗೆ ರಂಗಕುಣಿಯಲು ಬರುವುದಕ್ಕೆ ಗ್ರಾಮಸ್ಥರು ಹೆಚ್ಚಿನ ಆಸಕ್ತಿ ಹೊಂದಿರುವುದು ಕಂಡುಬರುತ್ತಿಲ್ಲ. ಕೇವಲ ಒಂದು ಅಥವಾ ಎರಡು ಗ್ರಾಮದ ಜನರು ಕಡಿಮೆ ಸಂಖ್ಯೆಯಲ್ಲಿ ಬಂದು ರಂಗದ ಕುಣಿತ ಮಾಡುತ್ತಿರುವುದಾಗಿ ಗ್ರಾಮದ ಯಜಮಾನರಿಂದ ತಿಳಿದುಬರುತ್ತದೆ. ಹೀಗೆ ಪ್ರತಿರಾತ್ರಿ ರಂಗದ ಕುಣಿತ ನಡೆಯುವ ಸಂದರ್ಭದಲ್ಲಿ ಗ್ರಾಮದ ಜನರು ಬೆಲ್ಲದ ಪಾನಕ ಅಥವಾ ಮಜ್ಜಿಗೆಯನ್ನು ಕೊಡುವುದುಂಟು. ಕೊನೆಯ ಎರಡನೇ ದಿನದಂದು ಅಂದರೆ ಬುಧವಾರ ಹೂವಿನ ಚಪ್ಪರ ಕಾರ್ಯಕ್ರಮ ಜರುಗುವುದು. ಅಂದು ಊರಿನ ಪ್ರಮುಖ ಬೀದಿಗಳಲ್ಲಿ ಒಂದು ಸುತ್ತು ಮೆರವಣಿಗೆ ಬರುತ್ತಾರೆ. ಕಾರಣ ರಂಗಕ್ಕೆ ಬರಲಾಗದ ಹಿರಿಯ-ಕಿರಿಯರಿಗೆ ಆಶೀರ್ವಾದ ಸಿಗಲಿ ಎಂಬುದೇ ಆಗಿದೆ. ಇದಾದ ಮರುದಿನವೇ (ಗುರುವಾರ) ತುಂಬುರಂಗವಿದೆ. ಅಂದರೆ ಅಂದು ರಂಗ ಕುಣಿತ ಮಾಡುವ ಕೊನೆಯ ದಿನವಾಗಿದ್ದು, ಬಹಳಷ್ಟು ಹಳ್ಳಿಗಳಿಂದ ಜನರು ಬಂದು ಕುಣಿತ ಮಾಡುವರು.

ಆನಂತರ ಬಹುಮುಖ್ಯವಾದ ಕೆಲಸವೆಂದರೆ, ಏಳು ಗ್ರಾಮಗಳಿಗೆ ಅಮ್ಮನ ಪ್ರಸಾದದೊಂದಿಗೆ ಕಹಳೆ ಮತ್ತು ತಮಟೆ ಸಮೇತರಾಗಿ ಹಬ್ಬಕ್ಕೆ ಆಹ್ವಾನಕೊಡುವುದು. ಇದು ಗುರುವಾರದಂದೇ ಮುಗಿಯುತ್ತದೆ. ಏಕೆಂದರೆ ಶುಕ್ರವಾರದಂದು ಅಧಿಕೃತವಾಗಿ ಹಬ್ಬ ಆರಂಭವಾಗುತ್ತದೆ. ಊರ ಹೊರವಲಯದಲ್ಲಿರುವ (ಪ್ರವಾಸಿಮಂದಿರದ ಸಮೀಪ) ಬಡಗೂಡಮ್ಮ ದೇವಸ್ಥಾನದಲ್ಲಿ ಬ್ರಾಹ್ಮಣ ಪುರೋಹಿತರಿಂದ ಎರಡು ಗಂಟೆಯ ಸುಮಾರಿಗೆ ಅಮ್ಮನಿಗೆ ಅಭಿಷೇಕ ನೆರವೇರುವುದು. ಇದರ ಖರ್ಚನ್ನು ಮುದ್ದೇಗೌಡನ ಕೊಪ್ಪಲಿನ ಪಟೇಲರ ಕುಟುಂಬದವರು ವಹಿಸಿಕೊಳ್ಳುವರು. ಇದು ಹಿಂದಿನಿಂದ ನಡೆದುಬಂದ ಪದ್ಧತಿಯಾದ್ದರಿಂದ ಈಗಲೂ ಮುಂದುವರಿದಿದೆ. ಅಭಿಷೇಕ ನೆರವೇರಿದ ಬಳಿಕ ಅಮ್ಮನಿಗೆ ಕವಚ ಧರಿಸುವರು ಹಾಗು ಅಲಂಕಾರ ಮಾಡುವರು. ಆರುಗಂಟೆಗೆ ಕೊಂಡಕ್ಕೆ ಬೆಂಕಿ ಹಚ್ಚುವರು. ಆ ಕೆಲಸಕ್ಕಾಗಿ ನೇಮಕವಾದವರು ಮಾತ್ರ ಕೊಂಡಕ್ಕೆ ಬೆಂಕಿಯನ್ನು ಉರಿಸಿ ಕೆಂಡಮಾಡುವರು. ಕೊಂಡದ ಉದ್ದವು ಹನ್ನೆರಡು ದಾಟು ಅಂದರೆ ಹದಿನೆಂಟು ಮೊಳವಿರುತ್ತದೆ. ಹಬ್ಬ ಪ್ರಧಾನ ದೇವಸ್ಥಾನದಲ್ಲಿ ಎಲ್ಲಾ ಸಿದ್ಧತೆಗಳು ನಡೆಯುತ್ತಿದ್ದಂತೆ ಗ್ರಾಮದ ಜನರೆಲ್ಲರೂ ದೇವತೆಗೆ ಅರ್ಪಿಸಲು ಮಡೆಯನ್ನು ಸಿದ್ಧಪಡಿಸುವರು.

ದೇವಸ್ಥಾನದಿಂದ ಉತ್ಸವ ಮೂರ್ತಿಯು ಹೊರಡುವುದಕ್ಕೆ ಒಂದು ಗಂಟೆ ಮುಂಚಿತವಾಗಿಯೇ ಬಂಡಿ ಹೊರಡುವುದು. ಬಂಡಿಗೆ ಪ್ರಥಮವಾಗಿ ಬದ್ರಿಕೊಪ್ಪಲಿನ ಉಪ್ಪಾರರು ಸಿದ್ಧಪಡಿಸಿದ ಅಡುಗೆಯನ್ನು ಹಾಕಬೇಕು. ಅದಕ್ಕಾಗಿ ಅವರು ನಿಗದಿ ಪಡಿಸಿದಷ್ಟು ಹಣವನ್ನು ಕೊಟ್ಟು ಕುಂಬಾರರಿಂದ ಮಡಕೆಗಳನ್ನು ತಂದು ಅಡುಗೆ ಸಿದ್ಧಪಡಿಸುವರು. ಮುದ್ದೆ, ಅನ್ನ, ಸಾರು, ಪಾಯಸವನ್ನು ಎಡೆ ಹಾಕಿ, ಪೂಜೆ ಸಲ್ಲಿಸಿ, ತೀರ್ಥ ಹಾಕಿ ಬಂಡಿ ತುಂಬಿಸುವರು. ಬಳಿಕ ಬಂಡಿಗೆ ಎತ್ತುಗಳನ್ನು ಕಟ್ಟುವರು. ಆನಂತರ ಗ್ರಾಮದ ಪ್ರತಿಕುಟುಂಬದವರು ಹಾಲು ಅನ್ನ, ಮೊಸರನ್ನವನ್ನು ಭಕ್ತಿಯಿಂದ ಬುತ್ತಿಕಟ್ಟಿ ಬಂಡಿಗೆ ಹಾಕುವರು.

ಬಂಡಿಗೆ ಮೊದಲು ಎತ್ತು ಕಟ್ಟಬೇಕಾದವರು ನಾಗಮಂಗಲದವರು. ಈಗಾಗಲೇ ನಿಗದಿಪಡಿಸಿದ ಸ್ಥಳದವರೆಗೆ ಅಂದರೆ ರಂಗದಲ್ಲಿನವರೆಗೆ ತಲುಪಿದ ನಂತರ ಮುದ್ದೇಗೌಡನ ಕೊಪ್ಪಲಿನವರು ಮಂಗಳಾರುತಿ ಎತ್ತಿ ಮಾಲೆಯನ್ನು ಕೊಡಬೇಕು ಹಾಗು ಸುಂಕದ ಕಟ್ಟೆವರೆಗೆ ಬಂಡಿಗೆ ತಮ್ಮ ಎತ್ತುಗಳನ್ನು ಕಟ್ಟಬೇಕು. ಇವರ ನಂತರ ಬದ್ರಿಕೊಪ್ಪಲಿನವರು ನೆರಲೆ ಮರದವರೆಗೆ ತಮ್ಮ ಎತ್ತುಗಳನ್ನು ಕಟ್ಟಿ ಬಂಡಿಯನ್ನು ಎಳೆದೊಯ್ಯಬೇಕು. ಅನಿವಾರ್ಯ ಕಾರಣಗಳಿಂದ ಕೆಲವು ಗ್ರಾಮದವರು ಬಂಡಿಯನ್ನು ಕಟ್ಟಲು ಎತ್ತುಗಳನ್ನು ತರುತ್ತಿಲ್ಲವಾದ್ದರಿಂದ ಈಗಾಗಲೇ ಕಟ್ಟಿರುವ ಎತ್ತುಗಳಿಂದಲೇ ಬಂಡಿಯನ್ನು ನಿಗದಿತ ಸ್ಥಳಕ್ಕೆ ತಂದು ನಿಲ್ಲಿಸುವರು. ರಾತ್ರಿ ಹತ್ತಕ್ಕೆ ಹೊರಟು ಬೆಳಿಗ್ಗೆ ಸುಮಾರು ನಾಲ್ಕು ಗಂಟೆಗೆ ತಲುಪುವರು.

ಬಂಡಿ ಹೊರಟ ಒಂದು ಗಂಟೆಯ ಬಳಿಕ ಉತ್ಸವ ಮೂರ್ತಿ ಹೊರಟು ಗ್ರಾಮದ ಜನರಿಂದ ಸಿದ್ಧಪಡಿಸಲಾದ ಮಡೆಯನ್ನು ಗ್ರಾಮದ ಮಾರಮ್ಮನ ಗುಡಿಯವರೆಗೆ ಮಾತ್ರ ತರುವುದುಂಟು. ಅಲ್ಲಿಂದ ಅವುಗಳನ್ನು ವಾಪಸ್ ಒಯ್ಯುವರು. ಮೊದಲಿಗೆ ಮಡಿವಾಳ ಸಮುದಾಯದವರು ಒಂದು ಗೂಡೆಯಲ್ಲಿ (ಕುಕ್ಕೆ) ತಂಬಿಟ್ಟು ಆರತಿ ಕೊಡಬೇಕು. ಗ್ರಾಮದ ಲಕ್ಷ್ಮೀ, ಕೃಷ್ಣ, ಹುಚ್ಚಮ್ಮ ಇವರಿಗೆ ಪೂಜೆ ಸಲ್ಲುವುದು. ಈ ಸಂದರ್ಭದಲ್ಲಿ ನಿರ್ಧಿಷ್ಟಪಡಿಸಿದ ಕುಟುಂಬದವರು ಬಾಣಬಿರುಸುಗಳನ್ನು ಹಚ್ಚುವರು. ಮಡೆಯ ಜೊತೆಗೆ ತಂದಿರುವ ತಂಬಿಟ್ಟಿನ ಆರತಿಗಳನ್ನು ಮಾತ್ರ ಬಡಗೂಡಮ್ಮನ ದೇವಸ್ಥಾನಕ್ಕೆ ತರಬೇಕು.

ನಾಗಮಂಗಲ ಗ್ರಾಮದಿಂದ ಹೊರಟ ಬಂಡಿಯು ನಿಗದಿತ ಸ್ಥಳದಲ್ಲಿ ನಿಲ್ಲಬೇಕು. ಏಕೆಂದರೆ, ಉಪ್ಪಾರಹಳ್ಳಿಯಿಂದ ಆಂಜನೇಯ ಉತ್ಸವಮೂರ್ತಿ, ಮಡೆ ಮತ್ತು ತಂಬಿಟ್ಟಿನ ಆರತಿಯನ್ನು ತರುವವರು ಆಗ ಆ ಸ್ಥಳದಿಂದ ಅಂದರೆ ಪ್ರವಾಸಿಮಂದಿರದ ವೃತ್ತದಿಂದ ಕಹಳೆ, ತಮಟೆ ವಾದನದ ಜೊತೆಯಲ್ಲಿ ಅಮ್ಮನನ್ನು (ಬಡಗೊಡಮ್ಮನ ಉತ್ಸವ ಮೂರ್ತಿ) ಮೆರವಣಿಗೆಯಲ್ಲಿ ಕರೆತರುವರು. ಆಗ ಉಪ್ಪಾರಹಳ್ಳಿಯ ಆಂಜನೇಯ ಮತ್ತು ಬಡಗೊಡಮ್ಮ ಒಟ್ಟಿಗೆ ಮೆರವಣಿಗೆಯಲ್ಲಿ ಬಂದು ಬಡಗೊಡಮ್ಮನ ಮೂಲ ದೇವಸ್ಥಾನವನ್ನು ಮೂರು ಸುತ್ತು ಬರುವರು. ಬಂಡಿ, ಬಡಗೊಡಮ್ಮ ಮತ್ತು ಆಂಜನೇಯ ಎಲ್ಲರೂ ಬಂದು ದೇವಸ್ಥಾನದ ಆವರಣದಲ್ಲಿ ಬಂದುದರ ಸಂಕೇತವಾಗಿ ಆ ಗಳಿಗೆಯಲ್ಲಿ ರಾಮಬಾಣ ಬಿರುಸು ಹಚ್ಚುವರು. ಆ ಬಾಣವು ಹಚ್ಚಿದ ಸ್ಥಳದಿಂದ ಉರಿದುಕೊಂಡು ಹೋಗಿ ಮತ್ತೆ ವಾಪಸ್ ಬರುವಂತೆ ತಂತಿಯ ಮೂಲಕ ವ್ಯವಸ್ಥೆ ಮಾಡುತ್ತಾರೆ.

ಬಂಡಿಯಲ್ಲಿ ತಂದಿರುವ ಕೊಂಡಕ್ಕೆ ಎಡೆ (ನೈವೇದ್ಯ) ಹಾಕುವರು. ಆಗ ಉಪ್ಪಾರಹಳ್ಳಿಯವರು ಕುರಿಯನ್ನು ಬಲಿಕೊಡುವ ಮೂಲಕ ಕೊಂಡಕ್ಕೆ ಶಾಂತಿ ಮಾಡುವರು. ಅವರ ನಂತರ ನಾಗಮಂಗಲದ ಒಕ್ಕಲಿಗ ಯಜಮಾನರು ಮರಿಯನ್ನು ಬಲಿಕೊಡಬೇಕು. ಬಲಿಕೊಡುವ ಪ್ರಕ್ರಿಯೆ ಮುಗಿಯುಷ್ಟವರಲ್ಲಿ ಪೂಜಾರಿಗೆ ಆವೇಶ ಬರುವುದು. ಇದನ್ನು ಅಮ್ಮ ಮೈಮೇಲೆ ಬಂದಿದ್ಧಾಳೆ ಎಂದು ನಂಬುವರು. ಈಗಾಗಲೇ ಸಿದ್ಧಪಡಿಸಲಾಗಿರುವ ಕೊಂಡಕ್ಕೆ ಬಡಗೂಡಮ್ಮನ ಪೂಜಾರಿಯು ಆವೇಶದಿಂದ ಮೊಟ್ಟಮೊದಲನೆಯದಾಗಿ ಹಾದು ಹೋಗುವನು. ಆನಂತರ ಕ್ರಮವಾಗಿ ಭದ್ರಿಕೊಪ್ಪಲಿನ ಬಂದಮ್ಮ, ಮೂರು ಜನ ಅಮ್ಮನ ಪೂಜಾರಿಗಳು, ಲಕ್ಷ್ಮೀ ದೇವತೆ, ಕೃಷ್ಣ ಮತ್ತು ಹುಚ್ಚಮ್ಮನ ಪೂಜಾರಿಗಳು ಕೊಂಡ ಹಾಯುವರು. ಆದರೆ ರೇಣುಕ ಎಲ್ಲಮ್ಮನ ಪೂಜಾರಿಯು ಕೊಂಡ ಹಾಯುವುದಿಲ್ಲ. ಈ ದೇವತೆಯ ಪೂಜಾರಿಯ ಉಪ್ಪಾರ ಸಮುದಾಯಕ್ಕೆ ಸೇರಿದವನಾಗಿರುತ್ತಾನೆ.

ಹೀಗೆ ಹಿಂದಿನ ನೇಮಕದಂತೆ ಕೊಂಡವನನು ಹಾಯ್ದ ಬಳಿಕ ಅಮ್ಮನಿಗೆ ವಿಶೇಷ ಪೂಜೆ ಸಲ್ಲಿಸಲಾಗುವುದು. ಆಗ ಉಪ್ಪಾರಹಳ್ಳಿಯಿಂದ ತಂದಿರುವ ಮಡೆಯನ್ನು ಅಮ್ಮನಿಗೆ ನೈವೇದ್ಯ ಮಾಡಿ ಪ್ರಥಮ ಪೂಜೆ ಸಲ್ಲಿಸುವರು. ಅದಾದ ನಂತರ ನಾಗಮಂಗಲದ ಅಮ್ಮನ ಪೂಜಾರಿ ಸಮುದಾಯವಾದ ಮಡಿವಾಳಶೆಟ್ಟಿರಿಮದ ಅಮ್ಮನಿಗೆ ವಿಶೇಷ ಆರತಿ ಪೂಜೆ ಸಲ್ಲಿಸಲಾಗುವುದು. ಇವಿಷ್ಟು ಕಾರ್ಯಕ್ರಮಗಳು ನೆರವೇರುವುದಕ್ಕೆ ಸಮಯ ಒಂಭತ್ತು ಗಂಟೆಯಾಗಿರುತ್ತದೆ. ಆಗ ಎಲ್ಲರೂ ತಮ್ಮ ತಮ್ಮ ಊರಿಗೆ ವಾಪಸಾಗುವರು. ಪುನಃ  ತೇರಿಗಾಗಿ ಹನ್ನೆರಡರಿಂದ ಒಂದು ಗಂಟೆ ಒಳಗೆ ಉತ್ಸವ ದೇವತೆಯನ್ನು ಅಣಿಗೊಳಿಸಬೇಕು. ಏಕೆಂದರೆ, ಗ್ರಾಮಸ್ಥರಿಂದ ಆರತಿಯನ್ನು ಸ್ವೀಕರಿಸಿ ಬಡಗೂಡಮ್ಮನ ದೇವಸ್ಥಾನವನ್ನು ತಲುಪುವುದು ಸಾಯಂಕಾಲ ಐದು ಗಂಟೆಯಾಗುತ್ತದೆ. ದೇವಸ್ಥಾನದ ಬಳಿ ಬಂದ ಬಳಿಕ ತೇರಿಗೆ ಬ್ರಾಹ್ಮಣ ಪುರೋಹಿತರಿಂದ ಪುಣ್ಯಾಹಃ ಕಾರ್ಯ ನೆರವೇರಿಸಲಾಗುವುದು ಹಾಗೂ ಬಲಿಯನ್ನು ತೇರಿನ ಸುತ್ತ ಹಾಕುವರು. ತೇರನ್ನು ಕಟ್ಟುವ ಜವಾಬ್ದಾರಿ ಒಕ್ಕಲಿಗೆ ಸಮುದಾಯದ್ದು. ಅದನ್ನು ಸಿಂಗರಿಸುವ ಕೆಲಸ ಮಡಿವಾಳರದ್ದು.

ಇದಿಷ್ಟು ಕ್ರಿಯಾದಿಗಳು ಮುಗಿದ ಬಳಿಕ ಪ್ರತಿಯೊಂದು ಗ್ರಾಮದ ಎಲ್ಲಾ ಕೋಮಿನ ಮುಖಂಡರುಗಳಿಗೆ ಗೌರವಾರ್ಥವಾಗಿ ಹೂವಿನ ಮಾಲೆಯನ್ನು ಹಾಕುವ ಸಂಪ್ರದಾಯವಿದೆ. ಜೊತೆಗೆ ತಾಲ್ಲೂಕಿನ ಪ್ರಮುಖ ಸರ್ಕಾರಿ ಅಧಿಕಾರಿಗೂ ಮಾಲಾರ್ಪಣೆ ಮಾಡಿ ಗೌರವಿಸುವುದುಂಟು. ಆಗ ಅಮ್ಮನನ್ನು ರಥದ ಮೇಲೆ ಕೂರಿಸುವರು. ಮತ್ತೊಮ್ಮೆ ಅಮ್ಮನಿಗೆ ಪೂಜೆ ಸಲ್ಲಿಸಿ ತೇರನ್ನು ಸಾರ್ವಜನಿಕರು ಎಳೆಯುವರು. ಆದರೆ ತೇರನ್ನು ನಡೆಸುವುದು ನಾಗಮಂಗಲದ ಒಕ್ಕಲಿಗೆ ಸಮುದಾಯದ ಯಜಮಾನರ ಜವಾಬ್ಧಾರಿ. ದೇವಸ್ಥಾನವನ್ನು ಒಂದು ಸುತ್ತು ಬಂದು ತೇರು ಹೊರಟ ಸ್ಥಳದಲ್ಲಿ ತಂದು ನಿಲ್ಲಿಸಲಾಗುವುದು. ಇದು ಮುಗಿಯುತ್ತಿದ್ದಂತೆ ಅಮ್ಮನಿಗೆ ಹರಕೆ ಸಲ್ಲಿಸುವರು. ಅದು ಮರಿಗಳನ್ನು ಗಾವು ಸಿಗಿಯುವ ಹರಕೆಯಾಗಿರುತ್ತದೆ. ಅಂದರೆ ಅಮ್ಮನ ಪೂಜಾರಿಯು ಹೋತ ಅಥವಾ ಟಗರು ಯಾವುದೇ ಇರಲಿ ಅದಕ್ಕೆ ಪೂಜೆ ಸಲ್ಲಿಸಿ ತೀರ್ಥವನ್ನು ಪ್ರೋಕ್ಷಿಸುವರು. ಅದು ತಲೆಯನ್ನು ಒದರಿದ ಅನಂತರ ಪೂಜಾರಿಯು ಹರಕೆಯ ಪ್ರಾಣಿಯನ್ನು ಹಿಡಿದು ಅದರ ಕುತ್ತಿಗೆ ಭಾಗವನ್ನು ಹಚ್ಚಿ ರಕ್ತವನ್ನು ಹೀರುವ ಮೂಲಕ ಬಲಿಕೊಡಲಾಗುವುದು. ಒಟ್ಟು ಹದಿನೆಂಟು ಗಾವು ಸಿಗಿಯುವುದು. ಈ ಹದಿನೆಂಟು ಹರಕೆಯ ಮಡಿವಾಳೇಶ್ವರ ಆರು ಕುಟುಂಬಗಳಿಗೆ ಸಮಪಾಲು ಸಲ್ಲಬೇಕು.

ಬಡಗೂಡಮ್ಮನ ಹಬ್ಬಕ್ಕೆ ಆಗಮಿಸಿರುವ ಹತ್ತಾರು ಗ್ರಾಮದ ಭಕ್ತರು ಹರಳನ್ನು ಬಟ್ಟೆಯಲ್ಲಿ ಕಟ್ಟಿ ಕೊಂಡಕ್ಕೆ ಹಾಕುವರು ಹಾಗೂ ತೇರಿಗೆ ಬಾಳೆಹಣ್ಣು ಮತ್ತು ಜವನವನ್ನು ಎಸೆದೆ ತಮ್ಮ ಹರಕೆಯನ್ನು ಒಪ್ಪಿಸುವುದುಂಟು.

ಸಮಾರೋಪ

ಗ್ರಾಮದೇವತೆ ಅಥವಾ ದೇವರಿಲ್ಲದೆ ಗ್ರಾಮಗಳೇ ಇಲ್ಲ ಎಂದರೆ ತಪ್ಪಾಗಲಾರದು. ಕರ್ನಾಟಕ ಮಾತ್ರವಲ್ಲ. ಇಡೀ ಭಾರತದ ಯಾವುದೇ ಗ್ರಾಮವನ್ನು ಹುಡುಕಾಡಿದರು ಒಂದು ದೇವತೆ ಮತ್ತು ದೇವರು ಮಾತ್ರವಲ್ಲ ಹತ್ತಾರು ಹಲವಾರು ದೈವಗಳು ಹಾಗು ಅವುಗಳದೇ ಆದ ದೇವಸ್ಥಾನ ಅಥವಾ ನಿರ್ಧಿಷ್ಟ ಆರಾಧನಾ ಸ್ಥಳವಿರುವುದನ್ನು ಕಂಡೇ ಕಾಣುತ್ತೇವೆ. ವಸ್ತುಸ್ಥಿತಿ ಹೀಗಿರುವಾಗ ನಾಗಮಂಗಲದ ಗ್ರಾಮದೇವತೆಯ ವಿಶೇಷವೇನು ಎಂಬ ಪ್ರಶ್ನೆ ಎದುರಾಗುವುದು ಸಾಮಾನ್ಯ. ನಮಗೆ ತಿಳಿದಿರುವಂತೆ ತ್ರಿಕೋನಾಕಾರದ ಕಲ್ಲು, ಗುಂಡುಕಲ್ಲು, ಒರಳಕಲ್ಲು, ಲಿಂಗದಕಲ್ಲು, ಆಯತಾಕಾರದ ಕಲ್ಲು, ಬೇವಿನಮರ, ಬನ್ನೀಮರ, ಅರಳೀಮರ, ಕಬ್ಬಿಣದ ತ್ರಿಶೂಲ, ಹುತ್ತ, ಕಲ್ಲಿನ ವಿವಿಧ ಆಕಾರ ಮತ್ತು  ಹೆಸರಿನ ವಿಗ್ರಹಗಳು, ಲೋಹದ ಪ್ರತಿಮೆಗಳು ಪೂರ್ಣ ರೂಪ, ಕೇವಲ ಶಿರದಭಾಗ, ಮಣ್ಣಿನ ಗಡಿಗೆ (ಕಳಸ), ಇತ್ತೀಚಿಗೆ ಬೆಳ್ಳಿ, ಚಿನ್ನ, ಕಂಚು, ತಾಮ್ರದ ಕಳಸಗಳು, ಲೋಹದ ಕತ್ತಿ ಹೀಗೆ ಏನೆಲ್ಲವೂ ದೇವತೆ ಹಾಗು ದೇವರುಗಳಾಗಿ ಗ್ರಾಮದ ಜನರಿಂದ ಪೂಜಿಸಲ್ಪಡುವವು. ಅಷ್ಟೇ ಅಲ್ಲ ಪ್ರತಿಯೊಂದು ಗ್ರಾಮ ದೈವಗಳು ಹೇಗೆ ಪ್ರತಿಷ್ಠಾಪನೆ ಹೊಂದಿದವು ಎಂಬುದಕ್ಕೆ ಒಂದೊಂದು ಪವಾಡದ ಕಥೆಗಳನ್ನು ಹೊಂದಿರುತ್ತವೆ. ಸಾಮಾನ್ಯವಾಗಿ ದೈವದ ವಿಚಾರದಲ್ಲಿ ಅದರ ಸತ್ಯಾಸತ್ಯತೆಯನ್ನು ಯಾರು ಪ್ರಶ್ನಿಸುವುದಿಲ್ಲ. ಏಕೆಂದರೆ ಮಾನವನು ಕಲ್ಪಿಸಿಕೊಂಡಿರುವಂತೆ ದೈವಕ್ಕೆ  ಅಸಾಧ್ಯವಾದುದು ಏನೂ ಇಲ್ಲ. ಆದ್ದರಿಂದ ಅದು ನಡೆದಿದೆ ಎಂದು ಭ್ರಮಿಸಿಕೊಳ್ಳುತ್ತಾನೆ. ಹಾಗೆಯೇ ನಾಗಮಂಗಲ ಮತ್ತು ಸುತ್ತಮುತ್ತಲಿನ ಏಳು ಗ್ರಾಮಗಳಾದ ಮುದ್ದೇಗೌಡನಕೊಪ್ಪಲು, ಬದ್ರಿಕೊಪ್ಪಲು, ಉಪ್ಪಾರಹಳ್ಳಿ, ಮದಲಹಳ್ಳಿ, ಸಾರಿಮೇಗಲಕೊಪ್ಪಲು, ಗೊಲ್ಲರಕೊಪ್ಪಲು ಮತ್ತು ಕೆಂಚೇಗೌಡನಕೊಪ್ಪಲುಗಳು ಆರಾಧಿಸುವ ಬಡಗೂಡಮ್ಮನಿಗೂ ಒಂದು ಐತಿಹ್ಯವುಂಟು.

ಬಡಗೂಡಮ್ಮನನ್ನು ಅರಸ್ಮ್ಮ ಎಂದು ಕರೆಯುತ್ತಾರೆ. ಅರಸಮ್ಮ ತುರುವೇಕೆರೆ ತಾಲ್ಲೂಕು ದಂಡಿನಶಿವರದಿಂದ ವಲಸೆ ಬಂದವಳು. ಪಾಳೆಯಗಾರರ ಕಾಲದಲ್ಲಿ ತನ್ನ ಊರಿನ ಮೇಲೆ ಎರಗಿದ ದಂಡನ್ನೆಲ್ಲಾ ನಾಶಮಾಡಿ, ತಾನೂ ನಷ್ಟವನ್ನು ಅನುಭವಿಸಿ ಬೇಸರಗೊಂಡ ಅರಸಮ್ಮ ದಕ್ಷಿಣದ ಕಡೆಗೆ ಬರುತ್ತಿರುವಾಗ ನಾಗಮಂಗಲದ ಪಕ್ಕದ ಉಪ್ಪಾರಹಳ್ಳಿ ಆಂಜನೇಯಸ್ವಾಮಿ ಕೋಟೆ ಕಟ್ಟಿ ಅವಳನ್ನು ತಡೆದು, ಅಲ್ಲೇ ನಿಲ್ಲಿಸಿಕೊಂಡನೆಂದು ಪ್ರತೀತಿ. ಬರುವ ಮಾರ್ಗದಲ್ಲಿ ದಂಡಿನವರು ಮೋಸದಿಂದ ಬಂದು ಅರಸಮ್ಮನ ತಲೆ ಕಡಿದಿದ್ದರಿಂದ ಉದ್ಭವ ಮೂರ್ತಿಗೆ ತಲೆ ಇಲ್ಲ. ಈ ಐತಿಹ್ಯವನ್ನು ಗ್ರಹಿಸಿದಾಗ ಒಂದು ಅಂಶ ಸ್ಪಷ್ಟವಾಗುತ್ತದೆ. ಅದೇನೆಂದರೆ, ಒಂದು ಹೆಣ್ಣು ತನ್ನನ್ನು ನಂಬಿದ ಜನತೆಗಾಗಿ ಹೋರಾಡಿ, ತನ್ನದೆಲ್ಲವನ್ನೂ ಕಳೆದುಕೊಂಡು ಅಂತಿಮವಾಗಿ ಮೋಸಗಾರರ ಸಂಚಿಗೆ ಬಲಿಯಾಗಿ ಪ್ರಾಣತ್ಯಾಗ ಮಾಡಿರುವುದು. ಅರಸಮ್ಮ ಯಾರು? ಯಾವ ಕಾಲಘಟ್ಟದಲ್ಲಿ, ಯಾವ ಪಾಳೆಯಗಾರರ ಮನೆತನಕ್ಕೆ ಸೇರಿದವಳಾಗಿದ್ದಳು? ಅಲ್ಲಿ ಅರಸಮ್ಮನ ಸ್ಥಾನ ಯಾವುದಿತ್ತು? ಈ ಸಂಗತಿಗಳೆಲ್ಲ ಸಂಪೂರ್ಣ ಇತಿಹಾಸಕ್ಕೆ ಸಂಬಂಧಿಸಿದವುಗಳಾದ್ದರಿಂದ ಅದನ್ನು ಕುರಿತು ಇಲ್ಲಿ ಚರ್ಚಿಸಲು ಹೋಗುವುದಿಲ್ಲ. ಬದಲಿಗೆ ಅರಸಮ್ಮ ಎಂಬ ಹೆಸರಿನ ಓರ್ವ ಮಹಿಳೆಯು ಜನತೆಗಾಗಿ ಹೋರಾಡಿ ವೀರ ಮರಣ ಹೊಂದಿದ ಪರಿಣಾಮ ಆಕೆ ಆ ಭಾಗದ ಜನರಿಗೆ ಮಹಾನ್ ತ್ಯಾಗಮಯಿಯಾಗಿ, ಧೀರ ಮಹಿಳೆಯಾಗಿ ಎಲ್ಲರ ಗೌರವಕ್ಕೆ ಪಾತ್ರಳಾಗಿದ್ದಾಳೆ. ಆ ಮಹಿಳೆಯೇ ಪೂಜಾರ್ಹಳಾಗಿ ಎಲ್ಲರ ಪಾಲಿನ ದೇವತೆಯಾಗಿರುವುದು ಸಹಜವೇ ಆಗಿದೆ.

ಅರಸಮ್ಮನ ಶಿರಚ್ಛೇದನವಾಗಿ ಕೇವಲ ಮುಂಡವೊಂದೇ ಅವರಿಗೆ ದೊರೆತಿರುವ ಕಾರಣ ಮುಂದೆ ಅದನ್ನೇ ಅರಸಮ್ಮನ ಪ್ರತಿರೂಪವೆಂದು ಪರಿಗಣಿಸಿ ಆರಾಧಿಸಲು ರೂಢಿಸಿಕೊಂಡಿರುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ. ಏಕೆಂದರೆ, ಹಿಂದೂ ಧರ್ಮದಲ್ಲಿ ಹೆಣ್ಣನ್ನು ದೇವತೆಯೆಂದು ಆರಾಧಿಸುತ್ತಿರುವುದು ಹೊಸದೇನಲ್ಲ. ಅದರ ಮುಂದುವರಿಕೆಯಾಗಿ ಸತಿ (ಕಲ್ಲು), ಮಾಸ್ತಿ (ಕಲ್ಲು) ಮಾರಿ, ಮಸಣಿ, ಹುಚ್ಚಮ್ಮ, ಎಲ್ಲಮ್ಮ, ಹುಲಿಗೆಮ್ಮ, ಚಿಕ್ಕಮ್ಮ (ತಾಯಿ), ದೊಡ್ಡಮ್ಮ (ತಾಯಿ) , ಚೌಡಮ್ಮ, ಚಾಮುಂಡಮ್ಮ ಹೀಗೆ ನಾಡಿನಾದ್ಯಂತ ಸಾವಿರಾರು ಸ್ತ್ರೀ ದೈವಗಳ ಆರಾಧನೆ, ಹಬ್ಬ-ಜಾತ್ರೆ-ಉತ್ಸವ ನೆರವೇರುವುದನ್ನು ಕಾಣುತ್ತೇವೆ. ಅಂದರೆ ಪ್ರಾದೇಶಿಕವಾಗಿ ಬೇರೆ ಬೇರೆ ಕಾಲಘಟ್ಟದಲ್ಲಿ ಸಾರ್ವಜನಿಕರಿಗಾಗಿ ಹೋರಾಡಿ ಮಡಿದ ಅಥವಾ ಜಯಶಾಲಿಗಳಾದ ಅಥವಾ ಸಾರ್ವಜನಿಕ ಉದ್ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದಂತಹ ಧೀರ ಹಾಗೂ ತ್ಯಾಗಮಯಿ ಮಹಿಳೆಯರು ದೇವತೆಯ ಸ್ಥಾನಕ್ಕೇರಿರುವುದರಲ್ಲಿ ಆಶ್ಚರ್ಯವೇನಿಲ್ಲ. ಅಂಥದ್ದೇ ಒಂದು ಸಾಧ್ಯತೆ ನಾಗಮಂಗಲದ ಪ್ರಧಾನ ದೇವತೆಯಾಗಿರುವ ಬಡಗೂಡಮ್ಮ ಇಂದು ಸುತ್ತಲ ಏಳು ಗ್ರಾಮಗಳಲ್ಲಿ ದೇವತೆಯಾಗಿದ್ದಾಳೆ.

ಇಲ್ಲಿ ಮತ್ತೊಂದು ಪ್ರಮುಖವಾದ ಅಂಶವನ್ನು ಕುರಿತು ಸ್ಪಷ್ಟೀಕರಣ ನೀಡುವುದು ಸೂಕ್ತವೆನಿಸುತ್ತದೆ. ಅದೆಂದರೆ ಈ ಗ್ರಾಮದೇವತೆ “ಬಡಗೂಡಮ್ಮ” ಎಂಬ ಹೆಸರು ಬರಲು ಕಾರಣ ಏನಿರಬಹುದು ಎಂಬುದು. ಅಂದರೆ ಅರಸಮ್ಮನನ್ನು ಸಂಚಿನಿಂದ ಶಿರವನ್ನು ಕತ್ತರಿಸಿ ಕೊಲೆಗೈದ ಸ್ಥಳ ಇದಾಗಿರಬಹುದು, ಇಲ್ಲವೇ ಆ ಸ್ಥಳದಲ್ಲಿ ಸಂಸ್ಕಾರ ಕ್ರಿಯೆ ನಡೆಸಿರುವ ಸಾಧ್ಯತೆ ಇದೆ. ಏಕೆಂದರೆ ಕೆರೆಯ ಅಂಚಿನಲ್ಲಿ ಶವ ಸಂಸ್ಕಾರ ನಡೆಯುವುದು ಇಂದಿಗೂ ರೂಢಿಯಲ್ಲಿರುವ ಪದ್ಧತಿ. ಅದಾದ ಹಲವಾರು ವರುಷಗಳ ಆನಂತರ ಅದೇ ಸ್ಥಳದಲ್ಲಿ ಸ್ಮಾರಕವೊಂದನ್ನು ಸ್ಥಾಪಿಸಲಾಗಿದೆ.

ಮುಂದುವರಿದು ಅಲ್ಲೇ ಇದ್ದ ಒಂದು ಹುಟ್ಟುಬಂಡೆಯಲ್ಲಿ ಶಿಲ್ಪಿಯೋರ್ವನು ಶಿರವಿಲ್ಲದ ಸ್ತ್ರೀಯ ದೇಹವನ್ನು ಕೆತ್ತಲಾಗಿದೆ. ಮೂಲತಃ ಅದೊಂದು ವಿಶಾಲವಾದ ಬಯಲಾಗಿತ್ತು. ಶಿಲ್ಪದ ಕೆತ್ತನೆ ಪೂಜೆ ಆರಂಭವಾದ ನಂತರದಲ್ಲಿ ಅದಕ್ಕೆ ನೆರಳು ಮಾಡಲಾಗಿದ್ದು, ಕ್ರಮೇಣ ಮಣ್ಣಿನಿಂದ ದೇವಸ್ಥಾನವನ್ನು ನಿರ್ಮಿಸಿರುವ ಸಾಧ್ಯತೆ ಇದೆ. ಈ ದೇವಸ್ಥಾನವು ನಾಗಮಂಗಲದ ಬಡಗಲು ದಿಕ್ಕಿನಲ್ಲಿರುವ ಹಿರಿಯಕೆರೆಯ ಬಡಗಲ ಕೋಡಿಯ ಪಕ್ಕದಲ್ಲಿ ಪೂರ್ವಾಭಿಮುಖವಾಗಿದೆ. ಅಂದರೆ ಹಿರಿಯಕೆರೆಯ ಬಡಗಲು ಕೋಡಿಯ ಪಕ್ಕದಲ್ಲಿ ಈ ದೇವಸ್ಥಾನವು ಇರುವುದರಿಂದ ಅಮ್ಮನ ಮೂಲ ಹೆಸರು ಅರಸಮ್ಮ ಎಂಬುದು ಮರೆತು ಬಡಗಲು ಕೋಡಿಯಮ್ಮ ಎಂಬುದಾಗಿ ಕರೆಯುವುದು ರೂಢಿಯಲ್ಲಿ ಬಂದಿದೆ. ಅದೇ ಕ್ರಮೇಣ ಬಡಗಲು ಕೋಡಿಯಮ್ಮ >ಬಡಗಲ್ ಕೋಡ್ಯಮ್ಮ > ಬಡಗಲು ಗುಡಿಯಮ್ಮ > ಬಡಗಲುಗೂಡಮ್ಮ ಎಂಬುದಾಗಿ ಜನರ ಬಾಯಲ್ಲಿ ಖಾಯಂ ಆಗಿ ಉಳಿದು ಇಂದು ಅದು ಚಾಲ್ತಿಯಲ್ಲಿದೆ.

ಮತ್ತೊಂದು ಅತಿಮುಖ್ಯವಾದ ಸಂಗತಿಯೆಂದರೆ, ಹಬ್ಬದ  ಆಚರಣೆಯನ್ನು ಕುರಿತು, ಯಾವುದೇ ಗ್ರಾಮ ದೇವತೆಯಾಗಲಿ ಒಂದು ಗ್ರಾಮಕ್ಕೆ ಮಾತ್ರ ಸಂಬಂಧಪಟ್ಟಿರುವುದು ಸಾಮಾನ್ಯವಾದ ವಿಚಾರ. ಆದರೆ ಬಡಗೂಡಮ್ಮನ ಹಬ್ಬ ಆಚರಣೆಯ ಸಂದರ್ಭದಲ್ಲಿ ನಾವು ಒಂದು ವಿಶೇಷತೆಯನ್ನು ಕಾಣುತ್ತೇವೆ. ನಾಗಮಂಗಲವನ್ನು ಹೊರತುಪಡಿಸಿ ಸುತ್ತಿನ ಏಳು ಗ್ರಾಮಗಳು ಹಬ್ಬದಲ್ಲಿ ಪಾಲ್ಗೊಳ್ಳುವುದು. ಜೊತೆಗೆ ನಾಗಮಂಗಲ ಊರಿನ ಒಳಗಡೆ ಒಂದು ಪ್ರತ್ಯೇಕ ದೇವಸ್ಥಾನವನ್ನು ನಿರ್ಮಿಸಿ ಅಲ್ಲೊಂದು ಅಮ್ಮನ ಉತ್ಸವಮೂರ್ತಿಯನ್ನು ಪ್ರತಿಷ್ಠಾಪಿಸಿ ನಿತ್ಯ ಪೂಜೆಯನ್ನು ಸಲ್ಲಿಸುವುದೇ ಅಲ್ಲದೆ, ಬಡಗೂಡಮ್ಮನ ಹಬ್ಬದ ಸಂದರ್ಭದಲ್ಲಿ ಈ ದೇವಸ್ಥಾನದ ಮುಂದೆ ಮೊದಲು ಕಂಬ ನೆಡುವ ಶಾಸ್ತ್ರವನ್ನು ನೆರವೇರಿಸುವರು ಹಾಗು ಇಲ್ಲಿನ ಉತ್ಸವ ಮೂರ್ತಿಯನ್ನು ಮೆರವಣಿಗೆಯಲ್ಲಿ ಒಯ್ದು ತೇರಿನಲ್ಲಿಟ್ಟು ಬಡಗೂಡಮ್ಮನ (ಊರಿಂದ ಹೊರಗಿರುವ ಪ್ರವಾಸಿ ಮಂದಿರದ ಹತ್ತಿರ) ದೇವಸ್ಥಾನವನ್ನು ಒಂದು ಸುತ್ತು ಪ್ರದಕ್ಷಿಣೆ ಮಾಡುವ ಮೂಲಕ ರಥೋತ್ಸವವನ್ನು ಆಚರಿಸುವರು. ಇಲ್ಲಿಯೂ ಸಹಾ ಪ್ರತಿಯೊಂದು ಗ್ರಾಮದವರು ತಮಗೆ ನೇಮಿಸಲ್ಪಟ್ಟ ಕರ್ತವ್ಯವನ್ನು ಚಾಚೂ ತಪ್ಪದೆ ನಿರ್ವಹಿಸುವುದೇ ಅಲ್ಲದೆ ತಮ್ಮ ಗ್ರಾಮಕ್ಕೆ ದತ್ತವಾದ ಅಧಿಕಾರವನ್ನು ಪಡೆಯುವಲ್ಲಿಯೂ ಅಷ್ಟೇ ಕಟ್ಟುನಿಟ್ಟು.

ಕೊಂಡ ಹಾಯುವ ಮೊದಲು ನಾಗಮಂಗಲ ಗ್ರಾಮಸ್ಥರು ಬಂಡಿ ಕಟ್ಟಿ ಇಡೀ ಗ್ರಾಮದ ಜನವರ್ಗದವರಿಂದ ಮೀಸಲು ಅಡುಗೆಯನ್ನು ಸಂಗ್ರಹಿಸಿ ಬಡಗೂಡಮ್ಮನ ದೇವಸ್ಥಾನದ ಬಳಿಗೆ ಒಯ್ಯುವುದು. ಆದರೆ ಈ ಕ್ರಿಯೆ ಮೇಲೆ ಹೇಳಿದಷ್ಟು ಸರಳವಾಗಿಲ್ಲ. ಏಕೆಂದರೆ, ಬದ್ರಿಕೊಪ್ಪಲಿನ ಉಪ್ಪಾರ ಸಮುದಾಯದವರು ಕುಂಬಾರರ ಮನೆಯಲ್ಲಿ ನಿಗದಿಪಡಿಸಿದ ಹಣವನ್ನು ಸಂದಾಯ ಮಾಡಿ ಮಡಿಕೆಗಳನ್ನು ಪಡೆದುಕೊಳ್ಳಬೇಕು. ಬಳಿಕ ಬಹಳ ಭಕ್ತಿಯಿಂದ ಮುದ್ದೆ – ಅನ್ನ-ಸಾರು ಮತ್ತು ಪಾಯಸವನ್ನು ಅಣಿಗೊಳಿಸಿ ನೈವೇದ್ಯ ಮಾಡಿ ಪೂಜೆ ಸಲ್ಲಿಸಿ ತೀರ್ಥ ಹಾಕಿ ಬಂಡಿಯನ್ನು ತುಂಬುವರು. (ಐದಾರು ರಾಗಿ ಮುದ್ದೆ, ಅನ್ನ, ಸಾರು, ಪಾಯಸ) ಅನಂತರ ಬಂಡಿಯನ್ನು ಹೂಡುವುದು. ಮೊದಲಿಗೆ ನಾಗಮಂಗಲದ ಗ್ರಾಮದವರು ಎತ್ತುಗಳನ್ನು ಕಟ್ಟಿ ಬಂಡಿಯನ್ನು ಹೂಡುವರು. ಮೊದಲಿಗೆ ಬಂಡಿಗೆ ಮಂಗಳಾರತಿಯನ್ನು ಮಾಡಿ ಮಾಲೆಯನ್ನು ಹಾಕುವುದು ಪದ್ಧತಿ. ಆನಂತರ ಊರಿನ ಜನರು ತಾವುಗಳು ಸಿದ್ಧಪಡಿಸಿರುವ ಹಾಲು ಅನ್ನ, ಮೊಸರನ್ನವನ್ನು ಬುತ್ತಿಕಟ್ಟಿ ಬಂಡಿಗೆ ಹಾಕುವರು.

ಹೀಗೆ ಬಂಡಿಯನ್ನು ಕಟ್ಟಿ ಗ್ರಾಮಸ್ಥರು ನೀಡಿದ ವಿವಿಧ ಅಡುಗೆಗಳನ್ನು ಸಂಗ್ರಹಿಸಿ ಒಂದೊಂದು ಗ್ರಾಮದವರು ನಿಗಧಿಪಡಿಸಿದ ಸ್ಥಳದವರೆಗೆ ತಮ್ಮ ಸೇವೆಯನ್ನು ಸಲ್ಲಿಸಿ ಮತ್ತೊಂದು ಗ್ರಾಮದವರಿಗೆ ವಹಿಸುವರು. ಅವರೂ ಸಹ ಬಂಡಿಗೆ ಮಂಗಳಾರತಿಯನ್ನು ಮಾಡಿ ಎತ್ತುಗಳಿಗೆ ಮಾಲೆಯನ್ನು ಹಾಕಿ ಬಂಡಿ ಹೂಡುವರು. ಈ ಸೇವೆಯನ್ನು ಕ್ರಮವಾಗಿ ನಾಗಮಂಗಲ ಗ್ರಾಮ ಪ್ರಥಮ ಬಂಡಿ ಹೂಡಿದ ಸ್ಥಳದಿಂದ ರಂಗದ ಕಲ್ಲಿನವರೆಗೂ, ಮುದ್ದೇಗೌಡನ ಕೊಪ್ಪಲಿನವರು ಮುಂದುವರಿದು ಸುಂಕದಕಟ್ಟೆಯವರೆಗೂ, ಬದ್ರಿಕೊಪ್ಪಲಿನವರು ನೇರಲೆಮರದವರೆಗೂ, ಸಾರಿಮೇಗಲಕೊಪ್ಪಲಿನವರು ಸೇವೆ ಸಲ್ಲಿಸಿ ಗೊಲ್ಲರಕೊಪ್ಪಲಿನವರಿಗೆ ಬಂಡಿಯನ್ನು ಹೂಡಲು ಅನುವು ಮಾಡಬೇಕಾಗಿತ್ತು. ಆದರೆ ಗೊಲ್ಲರಕೊಪ್ಪಲಿನಿಂದ ಬಂಡಿಹೂಡಲು ಯಾರು ಬಾರದ ಕಾರಣ ಸಾರಿಮೇಗಲ ಕೊಪ್ಪಲಿನವರೆಗೆ ಮುಂದುವರಿಸುತ್ತಾರೆ ಮತ್ತು ಬಂಡಿಯು ಬಂದ ನಿಲ್ಲಬೇಕಾದ ಸ್ಥಳದವರೆಗೂ ಅವರೇ ಸೇವೆಯನ್ನು ಸಲ್ಲಿಸುವರು. ಆಗ ಉಪ್ಪಾರಹಳ್ಳಿಯಿಂದ ಆಂಜನೇಯಸ್ವಾಮಿ ಉತ್ಸವಮೂರ್ತಿಯೊಂದಿಗೆ ಮಡೆ, ತಂಬಿಟ್ಟಿನ ಆರತಿಯನ್ನು ತರುವವರೆಗೆ ಕಾಯ್ದಿದ್ದು (ಪ್ರವಾಸಮಂದಿರದ ವೃತ್ತ) ಕಹಳೆ ಮತ್ತು ತಮಟೆ ವಾದನದ ಜೊತೆಯಲ್ಲಿ ಒಟ್ಟಿಗೆ ಬಂದು ಅಮ್ಮನ ದೇವಸ್ಥಾನವನ್ನು ಸುತ್ತು ಹಾಕುವರು. ಅದೇ ಸಮಯಕ್ಕೆ ಬಾಣಬಿರುಸುಗಳನ್ನು ಹಚ್ಚುವರು. ಈ ಕೆಲಸವನ್ನು ನೇಮಿಸಿದ ಅಕ್ಕಸಾಲಿ ಕುಟುಂಬದವರು ಮಾತ್ರ ನಿರ್ವಹಿಸಬೇಕು.

ಅಮ್ಮನಿಗೆ ಬಂಡಿಯಲ್ಲಿ ಗ್ರಾಮಸ್ಥರು ನೀಡಿದ ವಿವಿಧ ಅಡುಗೆಯನ್ನು ಸಾಗಿಸಿಕೊಂಡು ಬರುವ ಪ್ರಕ್ರಿಯೆ ಹಾಗೂ ಉಪ್ಪಾರ ಹಳ್ಳಿಯವರು ಆಂಜನೇಯಸ್ವಾಮಿ ಉತ್ಸವ ಮೂರ್ತಿಯೊಂದಿಗೆ ಅಮ್ಮನಿಗೆ ಮಡೆ, ತಂಬಿಟ್ಟಿನ ಆರತಿ ತರುವುದನ್ನು ಗಮನಿಸಿದರೆ ವಂಚಕರಿಗೆ ಬಲಿಯಾದ ಅರಸಮ್ಮನಿಗೆ ಸಲ್ಲಿಸಲಾಗುತ್ತಿರುವುದು ಸಂಸ್ಕಾರದ ಒಂಭತ್ತು ಅಥವಾ ಹನ್ನೊಂದನೇ ದಿನದ ಕ್ರಿಯೆಯನ್ನು ಹೋಲುತ್ತದೆ. ಅಂದರೆ ಅರಸಮ್ಮ ಕೇವಲ ಒಂದು ಕುಟುಂಬಕ್ಕೆ ಸೀಮಿತಳಾಗಿರಲಿಲ್ಲ. ಸುತ್ತೇಳು ಗ್ರಾಮವನ್ನು ಆಳುತ್ತಿದ್ದ ಓರ್ವ ಪಾಳೆಯಗಾರನ/ಸಾಮಂತ ಅರಸನಿಗೆ ಇವಳು ಅರಸಿಯಾಗಿದ್ದಳು. ಆದ್ದರಿಂದ ಆಕೆಯ ಸಾವಿನ ಸೂತಕಕ್ಕೆ ಇಡೀ ಪಾಳೆಯಪಟ್ಟಿಗೆ ಸೇರಿದ್ದ ಗ್ರಾಮಗಳು ಒಳಗಾಗಿರುವುದನ್ನು ಊಹಿಸಬಹದುದಾಗಿದೆ. ಆ ಹಿನ್ನೆಲೆಯಲ್ಲಿ ಆರಂಭಗೊಂಡಿರುವ ಒಂದು ಚಿಕ್ಕಪ್ರಮಾಣದ ಸಾಂಪ್ರದಾಯಿಕ ಆಚರಣೆ ಇಂದು ಸಂಬಂಧಿಸಿದ ಸುತ್ತೇಳು ಗ್ರಾಮದ ಎಲ್ಲಾ ಸಮುದಾಯಗಳು ಒಂದಾಗಿ ಕೂಡಿ ಆಚರಿಸುವ ಹಬ್ಬವಾಗಿ ಪರಿಣಮಿಸಿದೆ. ಸಹಜವಾಗಿ ಗ್ರಾಮದೇವತೆಯ ಹಬ್ಬಗಳಲ್ಲಿ ರೂಢಿಯಲ್ಲಿದ್ದಂತೆ ’ಕೊಂಡ ಹಾಯುವುದು’, ’ರಥೋತ್ಸವ’ ವನ್ನು ಜರುಗಿಸುವುದು, ಬಲಿಕೊಡುವುದು (ಗಾವು ಸಿಗಿಯುವುದು) ಬೇರೆ ಬೇರೆ ಕಾಲಘಟ್ಟದಲ್ಲಿ ಭಕ್ತರು ಆಚರಣೆಯಲ್ಲಿ ತಂದಿದ್ದಾರೆ.

ಸಾಮಾನ್ಯವಾಗಿ ಇತರೆ ಗ್ರಾಮದೇವತೆ ಹಬ್ಬದ ಸಂದರ್ಭದಲ್ಲಿ ವಿಶೇಷವಾದ ವಾದ್ಯವನ್ನು (ಗಾಳಿವಾದ್ಯ, ಚರ್ಮವಾದ್ಯ, ತಾಳ ಇತ್ಯಾದಿ) ಬಳಸುವುದು ಕಂಡುಬರುತ್ತದೆ. ಆದರೆ ಬಡಗೂಡಮ್ಮನ ಹಬ್ಬದ ಪ್ರತಿಯೊಂದು ಸಂದರ್ಭದಲ್ಲಿ ತಮಟೆ ಮತ್ತು ಕಹಳೆಯ ಬಳಕೆಯೂ ಸಹ ವಿಶೇಷವಾಗಿದೆ. ಏಕೆಂದರೆ, ಇವುಗಳು ರಾಜರ ಕಾಲದಲ್ಲಿ ಯುದ್ಧ ಘೋಷಣೆಯ ಮೊದಲು, ಆನಂತರ ಜಯಗಳಿಸಿದ ಸಂಕೇತವಾಗಿ ಬಳಕೆಯಾಗುವಂಥವು. ಅರಸಮ್ಮನ ಬಲಿದಾನವನ್ನು ಅತ್ಯಂತ ಗೌರವದಿಂದ ಸ್ವೀಕರಿಸಿದ ಜನರು ನಮ್ಮೆಲ್ಲರಿಗಾಗಿ ಪ್ರಾಣತ್ಯಾಗ ಮಾಡಿದ ಮಹಾ ತ್ಯಾಗಮಯಿ ಎಂದು ಆಕೆಯ ಸಾವನ್ನು ಒಪ್ಪಿಕೊಂಡಿದ್ಧಾರೆ. ಆಕೆಯ ಹೆಸರು ಶಾಶ್ವತವಾಗಿ ಉಳಿಯಬೇಕು ಎಂಬ ಅವರ ಅಂತರಂಗದ ಅಭಿಲಾಷೆಯೇ ಸುತ್ತೇಳು ಹಳ್ಳಿಗಳ ಲಕ್ಷಾಂತರ ಜನರು ಇಂದು ಆಚರಿಸುತ್ತಿರುವ (ಬಡಗೂಡಮ್ಮನ) ಅರಸಮ್ಮನ ಹಬ್ಬವಾಗಿದೆ. ಕಾಲಕಾಲಕ್ಕೆ ಅಲ್ಪಸ್ವಲ್ಪ ಬದಲಾವಣೆಗೆ ಒಳಗಾದರೂ ಮೂಲ ನಾಗಮಂಗಲ ಗ್ರಾಮದ ಜನರ ಪಾತ್ರ ಹಾಗೂ ಸುತ್ತಲಿನ ಏಳು ಗ್ರಾಮಗಳ ಸಹಕಾರದಿಂದ ಮಾತ್ರ ಸಾಧ್ಯವಾಗಿದೆ.

ಹಾಗೆಯೇ ಭಾರತದ ಸಂದರ್ಭ (ಹಿಂದೂ ಸಂಪ್ರದಾಯಸ್ಥ ಮನಸ್ಸುಗಳು) ದಲ್ಲಿ ಈ ಹಬ್ಬವನ್ನು ಪರಿಶೀಲಿಸಿದಾಗ ಎಷ್ಟೇ ವಿದ್ಯಾವಂತರಾಗಿ, ವಿಜ್ಞಾನಿಗಳಾಗಲಿ, ತಂತ್ರಜ್ಞಾನಿಗಳಾಗಲಿ ಧರ್ಮದ ಚೌಕಟ್ಟನ್ನು ಮೀರುವುದು ಬಹಳ ಅಪರೂಪ. ತಮ್ಮ ಪೂರ್ವಜರು ನಂಬಿದ್ದ ಸಂಪ್ರದಾಯ ಆಚರಣೆಗಳನ್ನು ಮೀರದೆ, ಮೀರಿದರೂ ಅವುಗಳಿಗೆ ಅಪಚಾರವಾಗದಂತೆ ಎಚ್ಚರಿಕೆ ವಹಿಸುವುದು ಕಂಡುಬರುತ್ತದೆ. ಆದ್ದರಿಂದಲೇ ಭಾರತವು ಇಂದಿಗೂ ಒಂದು ಸಂಪ್ರದಾಯಸ್ಥರ ರಾಷ್ಟ್ರವಾಗಿದೆ.

 

ಮಾಹಿತಿ ನೀಡಿದ ವಕ್ತೃಗಳು

೧. ಕೆಂಪೇಗೌಡ, ವಯಸ್ಸು ೪೫, ರೈತ, ನಾಗಮಂಗಲ

೨. ನಾಗೇಶ,ವಯಸ್ಸು ೩೨, ವ್ಯಾಪಾರಿ, ನಾಗಮಂಗಲ

೩. ವೆಂಕಟೇಶ ಮೂರ್ತಿ ಎನ್.ಜಿ. ವಯಸ್ಸು ೪೦,ಶಿಲ್ಪಿ, ನಾಗಮಂಗಲ

೪. ಗಂಗಣ್ಣ, ವಯಸ್ಸು ೪೦, ಪೂಜಾರಿ, ನಾಗಮಂಗಲ