ಮನುಷ್ಯನ ಜೀವನವನ್ನು ರೂಪಿಸುವಲ್ಲಿ ಸಂಸ್ಕೃತಿಯನ್ನು ಪೋಷಿಸುವಲ್ಲಿ ಆಚರಣೆಗಳು ಮಹತ್ವದ ಪಾತ್ರವನ್ನು ವಹಿಸುತ್ತವೆ. ಇವು ಮಾವನ ಜೀವನದ ಅವಿಭಾಜ್ಯ ಅಂಗಗಳಾಗಿ ಬೆಳೆದು, ಸಂಪ್ರದಾಯವಾಗಿ ಮಾರ್ಪಾಡುತ್ತವೆ. ಮನುಷ್ಯನ ನಂಬಿಕೆಗಳ ಅನುಸಾರವಾಗಿ ಪ್ರಕೃತಿಯೊಂದಿಗೆ, ತನ್ನ ಸಮುದಾಯದೊಂದಿಗೆ ಬೆರೆತು ತಮ್ಮ ಸುಖ, ಸಂತೋಷ, ಸಂಭ್ರಮಗಳನ್ನು ಅಭಿವ್ಯಕ್ತಿಗೊಳಿಸುವ ಸಲುವಾಗಿ ಧಾರ್ಮಿಕ ವಿಧಿ, ಕ್ರಿಯೆಗಳನ್ನು ರೂಢಿಸಿ ಕೊಂಡು, ಆಚರಣೆಗಳು ಬೆಳೆದುಬಂದಿವೆ. ಈ ಆಚರಣೆಗಳಿಗೆ ನಂಬಿಕೆಯೇ ಬೆನ್ನೆಲಬು.

ಆಚರಣೆಗಳು ಒಂದು ನಿರ್ದಿಷ್ಟ ಕಾರಣಗಳಿಗಾಗಿ, ನಿಗದಿತ ಸಮಯದಲ್ಲಿ ನಿಯಮಬದ್ಧವಾಗಿ ನಡೆಯುವುದರಿಂದ ತನ್ನ ಸಮುದಾಯವನ್ನು ನಿಯಂತ್ರಿಸುವ ಮತ್ತು ಅದನ್ನು ಸರಿದಾರಿಯಲ್ಲಿ ಕೊಂಡೊಯ್ಯುವ ಸಾಮರ್ಥ್ಯವನ್ನು ಹೊಂದಿದೆ. ವ್ಯವಸಾಯ ಪ್ರಧಾನವಾದ ನಮ್ಮ ಹಳ್ಳಿಗಳಲ್ಲಿ ಎಲ್ಲ ವರ್ಗದ ಜನರ ಒಗ್ಗಟ್ಟನ್ನು ಕಾಪಾಡುವುದೇ ಇದರ ಮುಖ್ಯ ಉದ್ದೇಶ. ಊರಿನಲ್ಲಿ ಮಕ್ಕಳಿಗೆ ಸಿಡುಬು, ಅಮ್ಮ ಇತ್ಯಾದಿ ಮಾರಕರೋಗಗಳು ಬರದ ಹಾಗೆ ಅಮ್ಮನಿಗೆ ತಂಪು ಮಾಡುವ ಹಬ್ಬವೇ ಮಾರಿಹಬ್ಬ. ಊರಿನ ಮಾರಿಗುಡಿಯು ಪಡುವಲ ಪಟ್ಟಣ ರಸ್ತೆಯಲ್ಲಿದೆ. ಮಾರಿ ಹಬ್ಬವನ್ನು ಶಿವರಾತ್ರಿಯಿಂದ ಯುಗಾದಿಯ ಒಳಗಡೆ ಊರಿನ ಎಲ್ಲ ಜನಾಂಗದವರೂ ಸೇರಿ ಮಾಡುವ ಹಬ್ಬ. ಈ ಹಬ್ಬದಲ್ಲಿ ಮುಸಲ್ಮಾನರೂ ಪಾಲ್ಗೊಳ್ಳುವುದು ಒಂದು ವಿಶೇಷ. ಈ ದೇವಿಯ ಅರ್ಚಕರು ಗಂಗೆ ಮತಸ್ಥರು. ದೇವತೆಯ ನೇವೇದ್ಯ ತಂಬಿಟ್ಟು, ಮೊಸರನ್ನ ಮತ್ತು ಹುರುಳಿಕಾಳನ್ನು ಬೇಯಿಸಿ ಇಡುತ್ತಾರೆ.

ಸುಂಕದಮ್ಮನ ಹಬ್ಬ ನಾಗಮಂಗಲದಲ್ಲಿ ಆಚರಿಸುವ ಅತಿ ರಂಜನೀಯ ಹಬ್ಬ. ಊರಿನಲ್ಲಿ ಸಾಂಕ್ರಾಮಿಕ ರೋಗಗಳು ಬರದಿರಲೆಂದು ಈ ಹಬ್ಬವನ್ನು ಆಚರಿಸಲಾಗುತ್ತದೆ. ಸುಂಕದಮ್ಮನಿಗೆ ಯಾವುದೇ ಗುಡಿಯಿಲ್ಲ. ಮಂಡ್ಯ ರಸ್ತೆಯ ಸಿನಿಮಾ ಮಂದಿರದ ಹತ್ತಿರವಿರುವ ಜಾಗದಲ್ಲಿ ಈ ಹಬ್ಬವನ್ನು ಆಚರಿಸುತ್ತಾರೆ. ಶುಕ್ರವಾರದ ದಿನ ಊರಿನ ಯಲ್ಲಮ್ಮ ಗುಡಿಯ ಹತ್ತಿರ ಕುಂಬಾರರು ಜೇಡಿಮಣ್ಣು ತರುತ್ತಾರೆ. ಆಚಾರರು ಈ ಮಣ್ಣಿನಿಂದ ಅಮ್ಮನ ಗೊಂಬೆ ಮಾಡುತ್ತಾರೆ. ಮಂಗಳವಾರ ಉಪ್ಪಾರಶೆಟ್ಟರು ಅಮ್ಮನಿಗೆ ಪೂಜೆ ಮಾಡುತ್ತಾರೆ. ಒಂದು ನಿರ್ದಿಷ್ಟ ಕಾಲದಲ್ಲಿ ಪೋತರಾಜ ಅಮ್ಮನನ್ನು ಹೊರಡಿಸುತ್ತಾನೆ. ಪೋತರಾಜ ಸುಂಕದಮ್ಮನನ್ನು ಈಗಿನ ಮಂಡ್ಯ ಸರ್ಕಲ್ ನ ಹತ್ತಿರ ಹೊರಗೆ ಹೋಗು ಎಂದು ದಬ್ಬತ್ತಾನೆ. ಬಹುಶಃ ನಮ್ಮ ಊರು ಮಂಡ್ಯ ಸರ್ಕಲ್ ನ ಬಳಿಯೇ ಮುಕ್ತಾಯವಾಗುತ್ತಿತ್ತು ಎಂದೆನಿಸುತ್ತದೆ. ಹಾಗಾಗಿ ಪೋತರಾಜ ದೇವಿಯನ್ನು ಊರಿನಿಂದ ಹೊರಗೆ ದಬ್ಬುತ್ತಾನೆ. ನಂತರ ದೇವಿಯು ಸಿನಿಮಾ ಮಂದಿರದ ಬಳಿ ಇರುವ ನಿರ್ದಿಷ್ಟ ಜಾಗಕ್ಕೆ ಬರುತ್ತದೆ. ಅಲ್ಲಿ ಎಡೆ ಇಟ್ಟು, ಪೂಜಿಸಲಾಗುತ್ತದೆ. ಇದೇ ಸ್ಥಳದಲ್ಲಿ ಒಂದು ಕುರಿಯನ್ನು ಬಲಿಕೊಡಲಾಗುತ್ತದೆ. ನಂತರ ಎಡೆಯ ಸಾಮಾಗ್ರಿಗಳನ್ನು ಊರಿನಿಂದ ಸುಮಾರು ಎರಡು ಮೂರು ಕಿ.ಮೀ. ದೂರದ ಒಂದು ಪ್ರದೇಶದಲ್ಲಿಟ್ಟು, ಹಿಂದಿರುಗಿ ನೋಡದೇ ಬರುತ್ತಾರೆ. ಆ ದಿನ ಎಲ್ಲರ ಮನೆಯಲ್ಲಿ ಬಾಡೂಟ.

ನಾಗಮಂಗಲದ ರೈತರು ವ್ಯವಸಾತ ಪ್ರಾರಂಭಿಸುವುದು ಯುಗಾದಿ ದಿನ. ಪ್ರಥಮವಾಗಿ, ಸಾಂಕೇತಿವಾಗಿ ನೇಗಿಲು ಹೂಡುತ್ತಾರೆ. ಇದನ್ನು ಹೊನ್ನಾರು ಎನ್ನುತ್ತಾರೆ. ಸಗಣಿಯಲ್ಲಿ ಗಣಪತಿಯ ಆಕಾರ ಮಾಡಿಕೊಂಡು ಅದಕ್ಕೆ ಗರಿಕೆ ಕಟ್ಟಿ, ಕುಕ್ಕೆಯಲ್ಲಿ ಇಟ್ಟುಕೊಂಡು, ಹೊಲಕ್ಕೆ ಹೋಗಿ, ನೇಗಿಲು ಹೂಡುತ್ತಾರೆ. ಇನ್ನು ಬೆಳೆ ಕೊಯ್ಲಿನ ಸಂದರ್ಭದಲ್ಲಿ ಮಾಡುವುದೇ ಮುನಿ ಹಬ್ಬ. ಆ ದಿನ ಕೋಳಿ ಕೋಯ್ದ, ಅದರ ರಕ್ತದಲ್ಲಿ ಅನ್ನ ಬೆರೆಸಿ, ಆ ಅನ್ನವನ್ನು ಹೊಲಗಳಲ್ಲಿ ಚೆಲ್ಲುತ್ತಾರೆ.

ಮಳೆ ಬಾರದಿದ್ದರೆ, ಸಮೀಪದ ಪಡುವಲಪಟ್ಟಣದ ಬಳಿ ಇರುವ ಕಾನನ ಬ್ರಹ್ಮ ದೇವಾಲಯಕ್ಕೆ ಮಂಗಳವಾರದಂದು ಹೋಗಿ, ಪೂಜೆ ಸಲ್ಲಿಸುತ್ತಾರೆ. ದೇವರಿಗೆ ಬೆಲ್ಲದನ್ನ ಹಾಗು ಮೊಸರನ್ನದ ಅಭಿಷೇಕ ಮಾಡುತ್ತಾರೆ. ಶನಿವಾರ ಊರಿನ ಸಮೀಪದ ಬೆಟ್ಟದ ಮೇಲಿನ ಆಂಜನೇಯ ಸ್ವಾಮಿಗೆ ಪೂಜೆ ಸಲ್ಲಿಸುತ್ತಾರೆ. ಮಹಿಳೆಯರು ತಿಂಗಳ ಮಾಮನ ಆಚರಣೆ ಮಾಡುತ್ತಾರೆ. ಅಂದರೆ ನಿರ್ದಿಷ್ಟ ಜಾಗದಲ್ಲಿ ರಂಗೋಲೆ ಹಾಕಿ, ಅದರ ಮೇಲೆ ನೀರು ತುಂಬಿದ ಚೊಂಬುಗಳನ್ನಿಡುತ್ತಾರೆ. ಚೊಂಬುಗಳನ್ನು ಎಕ್ಕದ ಎಳೆಗಳಿಂದ ಮುಚ್ಚುತ್ತಾರೆ. ಪೂಜೆಗೆ ಉಪ್ಪು ಹಾಕದ ಮೂರು ಸಪ್ಪೆ ರೊಟ್ಟಿ ಎಡುತ್ತಾರೆ. ಪೂಜೆಯ ನಂತರ ಎಕ್ಕದ ಎಲೆಗಳಿಂದ ಮುಚ್ಚಿದ ನೀರು ತುಂಬಿದ ಚೊಂಬುಗಳನ್ನು ತಲೆಕೆಳಗಾಗಿ ಮಾಡಿಕೊಂಡು ಪದ ಹೇಳುತ್ತಾ ಹೊಡರುತ್ತರೆ. ಹೀಗೆ ಹೋಗುತ್ತಿರುವಾಗ ಚೊಂಬಿನಿಂದ ನೀರು ಎಲ್ಲಿ ಚೆಲ್ಲಿ ಹೋಗುತ್ತದೆಯೋ ಅಲ್ಲಿ ಪೂಜೆ ಮಾಡಿ ಬರುತ್ತಾರೆ. ಹೀಗೆ ಸುಮಾರು ಹತ್ತು ಹದಿನೈದು ದಿನ ನಡೆಯುತ್ತದೆ. ಕೊನೆಯ ದಿನ ಇಬ್ಬರು ಯುವಕರಿಗೆ ಗಂಡು ಹೆನ್ಣಿನ ವೇಷ ಹಾಕಿ ಮದುವೆ ಮಾಡುತ್ತಾರೆ.

ನಾಗಮಂಗಲದ ಬಲಗೈನವರ ಬಳಿಯಿರುವ ಛಲವಾದಿ ಸಂಪ್ರದಾಯದ ದೇಶೀಸ್ ಸೌಟು ಉಲ್ಲೇಖವಾರ್ಹವಾಗಿದೆ. ಹಿಂದೆ ಧಾನ್ಯ ಸಂಗ್ರಹಿಸಲು ಮಠಾಧಿಪತಿಗಳಿಂದ ಪರವಾನಗಿ ಪಡೆದ ಛಲವಾದಿಗಳು ಈ ಸೌಟನ್ನು ಬಳಸುತ್ತಿದ್ದರು. ಈ ಸೌಟು ಎಲ್ಲಾ ಜಾತಿಯವರ ಚಿಹ್ನೆಯನ್ನ ಹೊಂದಿದೆ, ಇದು ಅದಕ್ಕಿದ್ದ ಸಾರ್ವಜನಿಕ ಸಮ್ಮತಿಯನ್ನು ಸೂಚಿಸುತ್ತಿದ್ದು, ಅಂದಿನ ದಿನಗಳಲ್ಲಿ ಸರ್ವೇಸಾಮಾನ್ಯ ಪದ್ಧತಿ ಇದಾಗಿತ್ತು.

ನಾಗಮಂಗಲದ ಮಾದಿಗ ಜನಾಂಗದ ರಕ್ಷಕಿ ಎಲ್ಲಮ್ಮ, ಸಾಮಾನ್ಯವಾಗಿ ಏಪ್ರಿಲ್ ನಲ್ಲಿ ಅಂದರೆ, ಯುಗಾದಿ ಹಬ್ಬದೊಳಗೆ ಈ ಹಬ್ಬವನ್ನು ಆಚರಿಸುತ್ತಾರೆ. ಶನಿವಾರ ಮೂಗವಳ್ಳಿ, ರಾತ್ರಿಯಲ್ಲಿ ರಂಗದ ಕುಣಿತ, ಭಾನುವಾರ ದೇವರ ಉತ್ಸವ. ಉತ್ಸವಮೂರ್ತಿಯ ಮೆರವಣಿಗೆ, ಸಿಹಿ ಊಟ, ಸೋಮವಾರ ದೇವರ ಆರತಿ, ತಂಬಿಟ್ಟು, ಉತ್ಸವಮೂರ್ತಿಯ ಮೆರವಣಿಗೆ, ಮಂಗಳವಾರ ಬಾಡೂಟ. ಈ ಹಬ್ಬಕ್ಕೆ ದೂರದ ಊರುಗಳಿಂದ ಹೆಣ್ಣುಮಕ್ಕಳನ್ನು ಕರೆಯುವುದು ಕಡ್ಡಾಯ. ಹಬ್ಬಕ್ಕೆ ಬಂದ ನೆಂಟರಿಷ್ಟರು ಮಂಗಳವಾರ ಊಟದ ನಂತರ ತಮ್ಮ ತಮ್ಮ ಊರುಗಳಿಗೆ ಹಿಂದಿರುಗುತ್ತಾರೆ. ಹಿಂದೆ, ಈ ಜನಾಂಗದಲ್ಲಿ ಬಸವಿ ಬಿಡುವ ಸಂಪ್ರದಾಯವಿತ್ತು. ಈಗ ಇದನ್ನು ಆಚರಿಸುತ್ತಿಲ್ಲ. ಹೊಲೆಯರ ಇಷ್ಟದೇವತೆ ಬಿಸಿಲು ಮಾರಮ್ಮ. ಈ ದೇವಿಯ ಹಬ್ಬದ ಆಚರಣೆ ಮತ್ತು ಯಲ್ಲಮ್ಮನ ಹಬ್ಬದ ಆಚರಣೆಯಲ್ಲಿ ಹೆಚ್ಚು ವ್ಯತ್ಯಾಸವಿಲ್ಲ.

ಮುಸಲ್ಮಾನರಲ್ಲಿ ಆಚರಿಸುವ ಪ್ರಮುಖ ಹಬ್ಬಗಳಲ್ಲದೇ, ನಮ್ಮ ಊರಿನಲ್ಲಿ ಪೂರ‍್ ಕೆ ಫಾತೆಹ, ಗ್ಯಾರವೀಂ, ಬಾರವೀ ಎಂಬ ಹಬ್ಬಗಳನ್ನು ಮತ್ತು ಅಗತ್ಯಬಿದ್ಧಾಗ ತರ್ತಾತುರತ್ ಬೀಬಿಯ ಹರಕೆಗಳನ್ನು ಮಾಡಿಕೊಳ್ಳುತ್ತಾರೆ. ಆದರೆ, ಇತ್ತೀಚಿಗೆ ಈ ಹಬ್ಬಗಳ ಆಚರಣೆ ಕಡಿಮೆಯಾಗುತ್ತಿದೆ. ಜಾಫರ‍್ ಸಾದಿಖ್ ಎಂಬ ಸಂತನ ಹೆಸರಿನಲ್ಲಿ ಆರಿಸುವ ಹಬ್ಬವೇ ಪೂರ‍್ ಕೆ ಫಾತೆಹ. ಬಹುಶಃ ಮುಸಲ್ಮಾನರು ಆಚರಿಸುವ ವೆಜೆಟೇರಿಯನ್ ಹಬ್ಬ ಇದೊಂದೇ. ಈ ಹಬ್ಬದಲ್ಲಿ ತರಕಾರಿ ಪಲಾವ್, ಪಾಯಸ ಇತ್ಯಾದಿ ಮಾಡಿ, ಪೂರಿ ಎಂಬ ಕರ್ಜಿಕಾಯಿಯನ್ನು ಮಾಡುತ್ತಾರೆ. ಇದರಲ್ಲಿ ಬೆಲ್ಲ ಹಾಗೂ ಬೇಯಿಸಿದ ಕಡಲೇಬೇಳೆಯ ಹೂರಣವನ್ನು ತುಂಬಿ ಮಾಡುತ್ತಾರೆ. ಈ ಪೂರಿಗಳನ್ನು ತಯಾರು ಮಾಡುವ ದಿನದಿಂದ ಅವು ಮುಗಿಯುವರೆಗೂ ಮನೆಯಲ್ಲಿ ಮಾಂಸವನ್ನು ಮಾಡುವುದಿಲ್ಲ. ಈ ಸಂದರ್ಭದಲ್ಲಿ ಒಬ್ಬ ಪ್ರಾಮಾಣಿಕ ಮರ ಕಡಿಯುವ ಕಥೆಯನ್ನು ಓದುತ್ತಾರೆ. ಯಾವುದಾದರೂ ವಸ್ತು ಕಳೆದುಹೋದರೆ, ತುರ್ತಾತುರತ್ ಬೀಬಿಗೆ ಹರಕೆ ಮಾಡಿಕೊಳ್ಳುತ್ತಾರೆ. ತುಂಬಾ ಸತ್ಯವಂತೆಯಾದ ಈಕೆಯ ಹೆಸರಿನಲ್ಲಿ ಹರಕೆ ಮಾಡಿಕೊಂಡರೆ ಅದು ತುರ್ತಾಗಿ ಸುದ್ಧಿಯಾಗುತ್ತದೆಂದು ನಂಬಿಕೆ. ಹಾಗೆ ಹರಕೆ ಮಾಡಿಕೊಂಡವರಿಗೆ ಕಾರ್ಯಸಿದ್ಧಿಯಾದರೆ ಹುರಿಗಡಲೆಯೊಡನೆ ಬೆಲ್ಲವನ್ನು ಹಾಕಿ, ಮಕ್ಕಳಿಗೆ ಹಂಚುತ್ತಾರೆ. ಸಾಮಾನ್ಯವಾಗಿ ಕೋಳಿಗಳು ಕಳೆದುಹೋಗಿದ್ದಾಗ ಹೀಗೆ ಹರಕೆ ಮಾಡಿಕೊಳ್ಳುತ್ತಿದ್ದರು. ರಾತ್ರಿ ಅದು ಯಾವ ಹೊಟ್ಟೆಯನ್ನೂ ಹೊಕ್ಕಿರದಿದ್ದರೆ, ಅದು ಬೆಳಗಿನ ಜಾವ ಜಗಲಿಯ ಮುಂದೆ ನಿಂತು ಕೂಗುತ್ತಿತ್ತು.

ನಮ್ಮ ಊರಿನಲ್ಲಿ ಪಡವಲಪಟ್ಟಣ ರಸ್ತೆಯ ಬಳಿ ಇರುವ ಗುಡ್ಡದ ಮೇಲೆ ಹಜರತ್ ಘಂಗರೂ ದಿವಾನ್ – ಉರುಸುಲ್ ದಿವಾನ್ ರವರ ದರ್ಗಾ ಇದೆ. ದರ್ಗಾ ಎಂದರೆ, ಮುಸ್ಲಿಂ ಸಂತರನ್ನು ಸಮಾಧಿಮಾಡುವ ಸ್ಥಳ. ಇಲ್ಲಿ ಸಮಾಧಿಯಾಗಿರುವ ಹಜರತ್ ಘಂಗರೂ ದಿವಾನ್ – ಉರುಸುಲ್ ದಿವಾನ್ ರವರು ನಾಗಮಂಗಲದ ರಕ್ಷಕರೆಂದು ಮುಸ್ಲಿಮರು ನಂಬುತ್ತಾರೆ. ಹಿಂದೆ, ಊರಿನಲ್ಲಿ ಪ್ಲೇಗ್, ಕಾಲರಾ ಇತ್ಯಾದಿ ಸಾಂಕ್ರಾಮಿಕ ರೋಗಗಳು ಹರಡಿದ್ದಾಗ, ಇವರು ಕುದುರೆ ಮೇಲೆ ಊರಿನಲ್ಲಿ ಸಂಚರಿಸಿ, ಜನರ ರಕ್ಷಣೆ ಮಾಡುತ್ತಿದ್ದರೆಂದು ಜನ ನಂಬುತ್ತಾರೆ. ಇವರ ವಾರ್ಷಿಕ ಗಂಧದ ಉತ್ಸವವನ್ನು ಬಕ್ರೀದ ಹಬ್ಬದ ನಂತರ ಆಚರಿಸುತ್ತಾರೆ. ಹೀಗೆ ನಾಗಮಂಗಲದಲ್ಲಿ ಕೆಲವು ಆಚರಣೆಗಳು, ಹಬ್ಬಗಳು ವಿಶೇಷ ಗಮನ ಸೆಳೆಯುತ್ತವೆ.