ಕರ್ನಾಟಕ ರಾಜ್ಯದ ದಕ್ಷಿಣ ಮೈದಾನ ಪ್ರದೇಶದಲ್ಲಿರುವ ಜಿಲ್ಲೆ ಮಂಡ್ಯ. ಮಾಂಡವ್ಯ ಮುನಿಳಿಂದ ’ಮಂಡೆಯ’ ನಂತರ ಮಂಡ್ಯ ಆಯಿತೆಂದು ಪ್ರತೀತಿ. ಕ್ರಿ.ಶ. ೧೮೮೨ರ ವರೆಗೆ ಹಾಸನ, ೧೯೩೯ ರವರೆಗೆ ಮೈಸೂರು ಜಿಲ್ಲೆಗಳಿದ್ದು, ನಂತರ ೧೯೩೯ ರಜುಲೈ ೧ ರಂದು ಮಂಡ್ಯ ಜಿಲ್ಲೆಯಾಯಿತು. ಜಿಲ್ಲೆಯಲ್ಲಿ ೭ ತಾಲ್ಲೂಕುಗಳಿದ್ದು, ನಾಗಮಂಗಲದ ಒಂದು ತಾಲ್ಲೂಕಾಗಿದೆ. ಈ ತಾಲ್ಲೂಕು ಕಸಬ, ಬಿಂಡಿಗನವಿಲೆ, ಬೆಳ್ಳೂರು, ದೇವಲಾಪುರ ಮತ್ತು ಹೂಣಕೆರೆ ಹೋಬಳಿಗಳಿಂದ ಕೂಡಿದೆ. ನಾಗಮಂಗಲದ ಉತ್ತರ ಮತ್ತು ಪೂರ್ವಕ್ಕೆ ತುಮಕೂರು ಜಿಲ್ಲೆ, ಪಶ್ಚಿಮದಲ್ಲಿ ಹಾಸನ ಜಿಲ್ಲೆ ಮತ್ತು ಕೃಷ್ಣರಾಜಪೇಟೆ ತಾಲ್ಲೂಕು ಹಾಗೂ ದಕ್ಷಿಣದಲ್ಲಿ ಪಾಂಡವರಪುರ ತಾಲ್ಲೂಕುಗಳು ಸುತ್ತವರಿದಿವೆ. ನಾಗಮಂಗಲವು ಜಿಲ್ಲೆಯ ತಾಲ್ಲುಕುಗಳ ಪೈಕಿ ವಿಸ್ತೀರ್ಣದಲ್ಲಿ ಶೇಕಡ ೨೧ ರಷ್ಟು ಇದ್ದು ( ೧೦೪೫ ಚ.ಕಿ.ಮೀ.) ಪ್ರಥಮ ಸ್ಥಾನದಲ್ಲಿದೆ. ತಾಲ್ಲೂಕು ಪೂರ್ವರೇಖಾಂಶ ೭೬೦ ೭೬’ – ೭೬೦ ೫೪’ ಉತ್ತರ ಅಕ್ಷಾಂಶ ೧೨೦ ೩೮’- ೧೩೦ ೦೦’ ರವರೆಗೆ ಇದೆ.

ನಾಗಮಂಗಲ ಪ್ರದೇಶ ಹಿಂದೆ ದಂಡಕಾರಣ್ಯದ ಭಾಗವಾಗಿದ್ದು, ಲೋಹಿತ ವಂಶದವರು ಇಲ್ಲಿಗೆ ಮೊದಲು ವಲಸೆ ಬಂದರು. ಆ ವಂಶದ ಒಬ್ಬ ಪಾಳೆಯಗಾರರ ಕನಸಿನಲ್ಲಿ ಕಂಡ ದೇವರಿರುವ ಹುತ್ತವನ್ನು ಅರಸುತ್ತ ನಾಗಮಂಗಲವಿರುವ ಸ್ಥಳಕ್ಕೆ ಬಂದು ಅಲ್ಲಿ ಸರ್ಪವೊಂದು ಸುತ್ತುತ್ತಿದ್ದುದನ್ನು, ನರಸಿಂಹದೇವರು ಅವಿರ್ಭಾವವಾಗಿದ್ದದನ್ನು ಕಂಡು ಅಲ್ಲಿಯೇ ದೇವಾಲಯ ನಿರ್ಮಿಸಿದರು. ಈ ಸ್ಥಳಕ್ಕೆ ನಾಗಮಂಡಲದವೆಂದು ನಂತರ ನಾಗಮಂಗಲವೆಂದು ಕರೆಲಾಯಿತು. ಮಹಾಭಾರತ ಕಾಲದಲ್ಲಿ ಮಣಿಪುರವೆಂದೂ, ನಂತರದ ದಿನಗಳಲ್ಲಿ ಚತುರ್ವೇದ ಭಟ್ಟಾರಕರತ್ನ ಅಗ್ರಹಾರವೆಂದೂ, ಮಣಿಪುರ, ನಾಗಪುರ, ನಾಗಮಂಡಲ, ನಾಗಮಂಗಲ ಎಂಬ ಹೆಸರುಗಳು ಆದ ಬಗ್ಗೆ ಐತಿಹ್ಯ ಇದೆ.

ನಾಗಮಂಗಲವು ದಕ್ಷಿಣ ಪ್ರಸ್ಥಭೂಮಿಗೆ ಸೇರಿದ್ದು, ಬಹುಭಾಗ ಸಮತಟ್ಟಾದ ಭೂಭಾಗವಾಗಿ ಪೂರ್ವ ಮತ್ತು ದಕ್ಷಿಣಕ್ಕೆ ಇಳಿಜಾರಾಗಿದೆ. ಬಸವನಕ್ಕಲು ಬೆಟ್ಟ, ಹಾಲತಿ, ಹದ್ದಿನಕಲ್ಲು ಹನುಮಂತರಾಯನ ಬೆಟ್ಟ, ಆದುಚುಂಚನಗಿರಿ ಬೆಟ್ಟ ಹಾಗೂ ಇತರೆ ಬೆಟ್ಟಗಳಿದ್ದು, ಆದಿಚುಂಚನಗಿರಿ ಬೆಟ್ಟ (೧೦೬೦ ಅಡಿ) ಕಾಪಾಲಿಕ ಪಂಥದವರ ಪ್ರಮುಖ ಎಡೆಯಾಗಿದ್ದರೆ, ಹದ್ದಿನಕ್ಕಲು ಹನುಮಂತರಾಯನ ಬೆಟ್ಟವು ಸಂಪ್ರದಾಯಸ್ಥರ ಪವಿತ್ರ ಸ್ಥಳವಾಗಿದೆ. ಈ ಭೂಭಾಗವು ಸಮುದ್ರ ಮಟ್ಟದಿಂದ ೭೬೦ ರಿಂದ ೯೨೦ ಮೀಟರ ಎತ್ತರದಲ್ಲಿದ್ದು, ಭಾರತದ ಪರ್ಯಾಯದ್ವೀಪದ ಒಂದು ಭಾಗವಾಗಿದೆ. ಆರ್ಕೀಯನ್ ಕಲ್ಪಕ್ಕೆ ಸೇರಿದ ಧಾರವಾಡ ಶಿಲಾಸೋಮ, ಕ್ಲೋಸ್ ಪೇಟೆ ಶಿಲಾಸ್ತೋಮದಡಿಯಲ್ಲಿದ್ದು, ಗ್ರಾನೈಟ್, ನೈಸ್, ಶಿಸ್ಟ್ ಕಲ್ಲುಗಳು ಹೇರಳವಾಗಿ ಕಂಡುಬಂದರೆ ಕ್ವಾರ್ಟ್ಜೈಟ್ ಮತ್ತು ಸುಣ್ಣಶಿಲೆಯಂತ ಇತರ ಶಿಲೆಗಳು ವಿರಳವಾಗಿ ಕಂಡುಬರುತ್ತವೆ.

ನಾಗಮಂಗಲದ ಪಶ್ಚಿಮ ಭಾಗದಲ್ಲಿರುವ ಹೊನಬೆಟ್ಟದ ಶಿಲೆಗಳಲ್ಲಿ ಸ್ವಲ್ಪಮಟ್ಟಿನ ಚಿನ್ನದ ನಿಕ್ಷೇಪಗಳು, ಮೃದುವಾದ ಬಳಪದ ಕಲ್ಲು ಹಾಗೂ ದೇವಲಾಪುರ ಭೂಭಾಗದಲ್ಲಿ ಆಭರಣಗಳಿಗೆ ಬಳಸುವ ಹರಳುಗಳು ದೊರೆಯುತ್ತವೆ. ಭೂಮಿ ಮುಖ್ಯವಾಗಿ ಮರಳು ಮಿಶ್ರಿತ ಕೆಂಪುಮಣ್ಣಿನ ಭೂ ಪ್ರದೇಶವಾಗಿದೆ ಹಾಗು ಊರಿನ ನಾಲ್ಕು ದಿಕ್ಕುಗಳಲ್ಲಿ ಪ್ರಾಚೀನ ಕೆರೆಗಳಾದ ಹಿರಿಕೆರೆ, ಸೂಳೆಕೆರೆ, ಸಿಂಗರಸಿನಕೆರೆ ಹಾಗೂ ಅಮ್ಮನಕೆರೆಗಳಿದ್ದು, ನೀರಾವರಿಯಿಂದ ತೆಂಗು, ಬಾಳೆ, ಮೆಣಸಿನಕಾಯಿ ಇತರೆ ತರಕಾರಿ ಬೆಳೆಗಳನ್ನು ಹಾಗೂ ಆಹಾರ ಧಾನ್ಯಗಳನ್ನು ಬೆಳೆಯುತ್ತಿದ್ದರು. “ತಿರುಗನಹಳ್ಳಿ ಸಣ್ಣ” ಎಂಬ ಜಾತಿಯ ಭತ್ತ ವಿಶೇಷ ಬೆಳೆ ಮತ್ತು ಹಳ್ಳಿಕಾರು ಜಾತಿಯ ರಾಸುಗಳಿಗೆ ಹೆಸರಾದ ಸ್ಥಳವಾಗಿದೆ.

 

ಭೂಭಾಗವು ಬಹುತೇಕ ಭೂಕಂಪ ಮುಕ್ತವಲಯವಾಗಿದ್ದು, ಸುತ್ತಮುತ್ತಲ ಪ್ರದೇಶಗಳಲ್ಲಿ ಮಾತ್ರ ಭೂಕಂಪ ಆದ ಬಗ್ಗೆ ವರದಿಯಾಗಿದೆ. ಅದರಲ್ಲಿ ೧೯೬೭, ೧೯೬೮, ೧೯೬೯, ೧೯೭೦, ೧೯೭೧ ರವರೆಗೆ ಅಲ್ಪ ಪ್ರಮಾಣದಲ್ಲಿ ಆದ ಬಗ್ಗೆ ವರದಿಯಾಗಿದ್ದರೆ, ೧೯೭೨ ರಲ್ಲಿ ೪.೨ ರಿಂದ ೪.೫ ಪ್ರಮಾಣದಲ್ಲಿ ದೇವಗೌಡನ ಕೊಪ್ಪಲಿನಲ್ಲಿ ಸಂಭವಿಸಿದ ಭೂಕಂಪ ಪ್ರಮುಖವಾಗಿದ್ದು, ಯಾವುದೇ ಸಾವು, ನೋವು ಆದ ಬಗ್ಗೆ ವರದಿಯಾಗಿಲ್ಲ. ಈ ಭಾಗದ ಉಷ್ಣತೆ ೧೬೦ ಸೆಲ್ಸಿಯಸ್ ನಿಂದ ೩೯೦ ಸೆಲ್ಸಿಯಸ್ ಇರುತ್ತದೆ.

ಜಿಲ್ಲೆಯ ವಾರ್ಷಿಕ ಸುರಾಸರಿ ಮಳೆಯ ಪ್ರಮಾಣ ೬೯೧.೨ ಮಿ.ಮೀ. ಆದರೆ ನಾಗಮಂಗಲದಲ್ಲಿ ಸ್ವಾತಂತ್ತ್ಯ ಪೂರ್ವದಲ್ಲಿ ಅತಿ ಹೆಚ್ಚು ಮಳೆ ಕ್ರಿ.ಶ.೧೯೦೩ ರಲ್ಲಿ ೧೧೪೮.೪ ಮಿ.ಮೀ. ವಾರ್ಷಿಕವಾಗಿ ಆಗಿದ್ದರೆ, ಅತಿ ಕಡಿಮೆ ಕ್ರಿ.ಶ.೧೯೧೩ ರಲ್ಲಿ ೩೬೨.೫ ಮಿ.ಮೀ. ಆದ ಬಗ್ಗೆ ವರದಿಯಾಗಿದೆ. ೧೯೨೫ ನವೆಂಬರ ೧೨ ರಂದು ೨೪ ಗಂಟೆಗಳಲ್ಲಿ ಬಿದ್ದ ಮಳೆ ೨೦೦.೭ ಮಿ.ಮೀ. ದಾಖಲಾದ ಗರಿಷ್ಠ ಮಳೆಯಾಗಿದೆ. ಸ್ವಾತಂತ್ತ್ಯ ನಂತರ ಅತಿ ಹೆಚ್ಚು ಮಳೆ ಕ್ರಿ.ಶ. ೧೯೭೭ ರಲ್ಲಿ ೧೩೨೪.೫ ಮಿ.ಮೀ. ಆದರೆ, ಅತಿ ಕಡಿಮೆ ೧೯೬೫ ರಲ್ಲಿ ೨೮೪.೩ ಮಿ.ಮೀ. ವಾರ್ಷಿಕ ಮಳೆಯಾದ ಬಗ್ಗೆ ವರದಿಯಾಗಿದೆ. ಕೃಷಿ ಯೋಗ್ಯ ಭೂಮಿಯ ಬಹುಪಾಲನ್ನು ಒಳಗೊಂಡಿರುವ ಬಯಲು ಪ್ರದೇಶ ಅಡಿಗಡಿಗೆ “ಬರಗಾಲಕ್ಕೆ” ಈಡಾಗುತ್ತಿದೆ. ಈ ಭಾಗದಲ್ಲಿ ಅತ್ಯಂತ ದಾಖಲೆ ಪಡೆದಿರುವ ಮಳೆಯ ವೈಫಲ್ಯ ಕ್ರಿ.ಶ. ೧೨೯೬ ರಲ್ಲಿ ಆರಂಭವಾಗಿ ಇಡೀ ದಕ್ಷಿಣ ಭಾರತದಲ್ಲೇ ಆವರಿಸಿ ೧೨ ವರ್ಷ ಇತ್ತೆಂದು ದಾಖಲಾಗಿದೆ. ೧೬ನೆಯ ಶತಮಾನದ ಕೊನೆಯಲ್ಲಿ “ಸುಣ್ಣದಕ್ಕಿ ಬರ” ಬಹಳ ಭೀಕರವಾಗಿದ್ದು ಸುಮಾರು ೭ ವರ್ಷ ಸತತವಾಗಿ ಮಳೆ ಬೀಳದೆ ಗಿಡ, ಮರ, ಬಳ್ಳಿ ತೋಟಗಳೆಲ್ಲ ನಾಶವಾಗಿ ಪ್ರಾಣಿ ಪಕ್ಷಿಗಳಿಗೆ ಆಹಾರ, ನೀರು, ನೆರಳಿಲ್ಲದೆ ಸತ್ತು ಜನರು ವಿಧಿಯಿಲ್ಲದೆ ಬಿದಿರಕ್ಕಿ ಮತ್ತು ಕತ್ತಾಳೆ ಗೆಡ್ಡೆಗಳನ್ನು ತಿಂದು ಜೀವನ ಸಾಗಿಸುತ್ತಿದ್ದರು (ಜ.ಜಿ.ಗ್ಯ.ಪು- ೪೯೦). ಕ್ರಿ.ಶ. ೧೭೯೯ ರಲ್ಲಿ ಕಾಲರ ಹಾಗೂ ಪ್ಲೇಗು ಬಂದು ನಾಗಮಂಗಲವು ಸೇರಿಕೊಂಡು ೧,೫೦,೦೦೦ ಇದ್ದ ಜನಸಂಖ್ಯೆ ಕ್ರಿ.ಶ.೧೮೦೦ರ ವೇಳೆಗೆ ಮೈಸೂರು ಸಂಸ್ಥಾನದಲ್ಲಿ ೩೨,೦೦೦ ಸಾವಿರಕ್ಕೆ ಇಳಿಯಿತೆಂದು ಬುಕಾನನ್ ವಿವರಿಸಿದ್ಧಾನೆ. ಕ್ರಿ.ಶ.೧೮೭೯ ರಲ್ಲಿ ಸಂಭವಿಸಿದ ಬರಗಾಲದಿಂದ ನಾಗಮಂಗಲದಲ್ಲಿ ಅಡಿಕೆ ಮರ ನಾಶವಾಗಿ, ತೆಂಗು ಮಾತ್ರ ಉಳಿದಿತ್ತೆಂದು ಹಯವದನರಾವ್ ಉಲ್ಲೇಖಿಸಿದ್ಧಾರೆ. ಕ್ರಿ.ಶ. ೧೮೯೧-೯೨ ರಲ್ಲಿ ನಾಗಮಂಗಲ, ಕೆ.ಆರ‍್. ಪೇಟೆ, ಮಳವಳ್ಳಿ ತಾಲ್ಲೂಕುಗಳು ಬರಗಾಲಕ್ಕೀಡಾದ ಬಗ್ಗೆ ಹಾಗೂ ಕ್ರಿ.ಶ. ೧೮೯೮-೯೯, ೧೯೦೧-೦೨, ೧೯೦೮-೦೯ರಲ್ಲಿ  ಮಳೆಯಿಲ್ಲದೆ ನಾಗಮಂಗಲದ ಅರ್ಥಿಕ ಜೀವನದ ಮೇಲೆ ಪ್ರಭಾವ ಬೀರಿತು. ಹಾಗಯೇ, ಕ್ರಿ.ಶ.೧೯೨೨-೨೩ ರಲ್ಲಿ ನಾಗಮಂಗಲದ ಸುತ್ತಮುತ್ತಲ ೯ ಹಳ್ಳಿಗಳು ಮಳೆಯಿಲ್ಲದೆ ತುಂಬಾ ತೊಂದರೆಗೊಳಗಾದ ಬಗ್ಗೆ ವರದಿಯಾಗಿದೆ. ಒಟ್ಟಾರೆ ಈ ಭೂಭಾಗವು “ಮಳೆಯ ನೆರಳಿನ ಭೂಭಾಗವಾಗಿ” ಮಳೆಯಿಲ್ಲದೆ ಸದಾ ಸಂಕಷ್ಟಕ್ಕೆ ಈಡಾಗುತ್ತಿರುತ್ತದೆ. ಇಷ್ಟಾದರೂ ಜಿಲ್ಲೆಯಲ್ಲೇ ಅತಿ ಕಡಿಮೆ ನೀರಾವರಿ ಪ್ರದೇಶವಾಗಿದೆಯೆಂದು ೧೯೯೭-೯೮ ದಾಖಲಾತಿ ತಿಳಿಸುತ್ತದೆ. (ಮ.ಜಿ.ಗ್ಯಾ.ಪು. ೨೧೮).

ನಾಗಮಂಗಲವು ದಟ್ಟಕಾಡುಗಳಿಲ್ಲದ, ಕ್ರೂರ ಕಾಡುಪ್ರಾಣಿಗಳಿಲ್ಲದ ವಿರಳವಾಗಿರುವ ಭೂಭಾಗವಾಗಿದೆ. ಪ್ರತಿ ಜಿಲ್ಲೆಯಲ್ಲಿ ಒಟ್ಟು ಭೌಗೋಳಿಕವಾಗಿ ಕನಿಷ್ಠ ಶೇ. ೩೩ ರಷ್ಟು ಅರಣ್ಯವಿರಬೇಕೆಂದು ಅರಣ್ಯನೀತಿ ಇದ್ದರೂ ಶೇ. ೮ ಮಾತ್ರ ಇದೆ. ಸಸ್ಯಶಾಸ್ತ್ರಜ್ಞರಾದ ಚಾಂಪಿಯನ್ ಮತ್ತು ಸೇತ್ ಅವರು ವಾಯುಗುಣದ ಅಧಾರದ ಮೇಲೆ ಈ ಭೂಭಾಗದ ಅರಣ್ಯಗಳು ದಕ್ಷಿಣ ಉಷ್ಣವಲಯದ ಒಣ ಉದುರೆಲೆ ಅರಣ್ಯ ವರ್ಗಕ್ಕೆ ಸೇರುತ್ತದೆ ಎಂದು, ಇಲ್ಲಿಯ ಮರಗಿಡಗಳು ಹಾರ್ಡಿಲುಕಿಯ ಭಿನ್ನಾಟ, ಟರೋಕಾರ್ಪಸ್ ಮಾರ್ಸೋಪಿಯಂ, ಅಲ್ಜೀಜಿಯ, ಟಿರ್ಮಿನೀಲಿಯ ಪಾನಿಕುಬೇಟ, ಟರ್ಮಿನೇಲಿಯಾ ಚೆಬುಲಾ, ಸಂಟಾಲಂ ಆಲ್ಬಂ, ಅಜಡಿರಾಕ್ಟ್ ಇಂಡಿಕ ಇತ್ಯಾದಿ ಮುಖ್ಯ ಜಾತಿಗೆ ಸೇರಿವೆ ಎಂದಿದ್ಧಾರೆ. ಆದಿಚುಂಚನಗಿರಿ ಮಯೂರವನವು ಕುರುಚಲ ಗಿಡದ ಗುಡ್ಡಗಳಲ್ಲಿ ಕಂಡುಬರುವ ನವಿಲುಗಳನ್ನು ಸಂರಕ್ಷಿಸಿ ಸಂತಾನಾಭಿವೃದ್ಧಿಗೆ ಪ್ರಾಧಾನ್ಯತೆ ನೀಡಿದೆ.

 

ಜಿಲ್ಲೆಯಲ್ಲಿ ಕಾವೇರಿ, ಹೇಮಾವತಿ, ಲೋಕಪಾವನಿ, ಶಿಂಷಾ, ವೀರವೈಷ್ಣವಿ ನದಿಗಳು ಪ್ರಮುಖವಾಗಿ ಕಾವೇರಿ ಜಲಾನಯನ ಪ್ರದೇಶದಡಿಯಲ್ಲಿ ಹರಿಯುತ್ತಿವೆ. ಲೋಕಪಾವನಿ ನದಿಯು ನಾಗಮಂಗಲ ತಾಲ್ಲೂಕಿನ ಹೊಣಕೆರೆ (ಹೊನ್ನಾಕರೆ) ಹೋಬಳಿಯಲ್ಲಿ ಹುಟ್ಟುತ್ತದೆ. ಬೋಗಾದಿ ಸುತ್ತಮುತ್ತಲ ಪ್ರದೇಶದಿಂದ ಹರಿದು ಬರುವ ನೀರನ್ನು ಕೂಡಿಕೊಂಡು, ಹೊಣಕೆರೆ, ಚೀಣ್ಯ, ಮಾಚಲಕಘಟ್ಟ, ಕಾಳೇನಹಳ್ಳಿ, ಹುಲೀಕೆರೆ, ಸುಂಕತೊಣ್ಣೂರು, ನುಗ್ಗೆಹಳ್ಳಿ, ಕುಂತಿಬೆಟ್ಟ, ಕೆ.ಶೆಟ್ಟಹಳ್ಳಿ, ಕರಿಘಟ್ಟದ ಸಂಗಮದಲ್ಲಿ ಕಾವೇರಿ ನದಿಗೆ ಸೇರುತ್ತದೆ. ಶಿಂಷಾ ನದಿಯು ತುಮಕೂರು ಜಿಲ್ಲೆಯ ತುರುವೆಕೆರೆ ತಾಲ್ಲೂಕಿನಲ್ಲಿ ಹುಟ್ಟಿ ದಕ್ಷಿಣಾಭಿಮುಖವಾಗಿ ಸಾಗಿ ನಾಗಮಂಗಲದ ತಾಲ್ಲೂಕಿನ ದೇವರಹಳ್ಳಿಯ ಹತ್ತಿರ ತಾಲ್ಲೂಕಿನ ಗಡಿಗುಂಟ ಹರಿದು ಕಾವೇರಿ ನದಿ ಸೇರುತ್ತದೆ. ವೀರವೈಷ್ಣವಿ ನಾಗಮಂಗಲ ತಾಲ್ಲೂಕಿನ ಬೆಳ್ಳೂರು ಹೋಬಳಿಯಲ್ಲಿ ಪ್ರವೇಶಿಸಿ ದೊಡ್ಡ ಜಟಕಾದ ಹತ್ತಿರ ಶಿಂಷಾ ನದಿಗೆ ಸೇರುತ್ತದೆ.

ಪಂಚನದಿಗಳ ನಾಡೆಂಬ ಹೆಗ್ಗಳಿಕೆಗೆ ಪಾತ್ರವಾದ ಮಂಡ್ಯ ಜಿಲ್ಲೆ, ಪ್ರಾಚೀನ ಕಾಲದಿಂದಲೂ ಮಾನವನ ನಾಗರೀಕತೆಯ ವಿಕಾಸಕ್ಕೆ ಯೋಗ್ಯಸ್ಥಾನವೆಂದು ಪರಿಗಣಿಸಲ್ಪಟ್ಟಿದೆ. ಫಲವತ್ತಾದ ನದಿ ಕಣಿವೆಗಳು, ಬೆಟ್ಟಗುಡ್ಡಗಳ ಪ್ರದೇಶ, ಬಯಲು ಪ್ರದೇಶ, ಅರಣ್ಯ, ನದಿ, ಪ್ರಾಣಿ ಸಂಪತ್ತು, ವಾಸಿಸಲು ಯೋಗ್ಯ ನೈಸರ್ಗಿಕ ಗುಹೆಗಳು, ಶಿಲಾಯುಧ ತಯಾರು ಮಾಡಲು ಯೋಗ್ಯವಾದ ವಿವಿಧ ಜಾತಿಯ ಕಲ್ಲುಗಳು ಮುಂತಾದ ನೈಸರ್ಗಿಕ ಸಂಪತ್ತುಗಳಿಂದ ಕೂಡಿದ ಪ್ರದೇಶವಾಗಿ ಮಾನವ ವಿಕಾಸದ ಸರಣಿಯಲ್ಲಿ ಸಾಕಷ್ಟು ಪ್ರಭಾವ ಬೀರಿದೆ. ಇಷ್ಟೆಲ್ಲಾ ಸೌಲಭ್ಯಗಳಿದ್ದರೂ ಪೂರ್ವೇತಿಹಾಸದ ನೆಲೆಗಳು ಅನ್ವೇಷಿಸಲ್ಪಟ್ಟಿರುವುದು ಅತಿ ವಿರಳವೆಂದೇ ಹೇಳಬಹುದು. ನಾಗಮಂಗಲ ಮತ್ತು ಮಂಡ್ಯ ಪರಿಸರದಲ್ಲಿ ಪರಿವೀಕ್ಷಣೆ ಕಾರ್ಯ ಕೈಗೊಂಡು ಆದಿ ಹಳೆಶಿಲಾಯುಗ, ಸೂಕ್ಷ್ಮಶಿಲಾಯುಗ, ನವಶಿಲಾಯುಗ, ಬೃಹತ್ ಶಿಲಾಯುಗ ಮತ್ತು ಇತಿಹಾಸ ಆರಂಭ ಕಾಲದ ಸಂಸ್ಕೃತಿಗಳ ಅವಶೇಷಗಳನ್ನು ಈ ನದಿ ತೀರಗಳ ನೆಲೆಗಳಲ್ಲಿ ಸಂಶೋಧಕರು ಸಂಶೋಧಿಸಿದ್ದಾರೆ.

ಕಳೆದ ಶತಮಾನದ ಕಡೆಯ ಪಾದದಲ್ಲಿ ರಾಬರ್ಟ್ ಬ್ರೂಸಿಫೂಟ್ ಅವರು ಕುಂತಿ ಬೆಟ್ಟದ ಪರಿಸರದಲ್ಲಿ ಪರಿವೀಕ್ಷಣಾ ಕಾರ್ಯ ಕೈಗೊಂಡು ನವಶಿಲಾಯುಗದ ಸಂಸ್ಕೃತಿ, ಬೃಹತ್ ಶಿಲಾಯುಗದ ಸಂಸ್ಕೃತಿಗಳ ಅವಶೇಷಗಳನ್ನು ಪತ್ತೆ ಹಚ್ಚಿದ್ದಾರೆ. ಡಾ.ಎಂ.ಎಸ್. ಕೃಷ್ಣಮೂರ್ತಿ ಅವರು ಆದಿ ಹಳೆಶಿಲಾಯುಗ, ಮಧ್ಯಶಿಲಾಯುಗದ, ನವಶಿಲಾಯುಗ ಸಂಸ್ಕೃತಿ, ಬೃಹತ್ ಶಿಲಾಯುಗ ಸಂಸ್ಕೃತಿ ಮತ್ತು ಇತಿಹಾಸ ಆರಂಭ ಕಾಲದ ಅವಶೇಷಗಳನ್ನು ಇದೇ ನೆಲೆಯಲ್ಲಿ ಪತ್ತೆ ಹಚ್ಚಿ ಪ್ರಕಟಿಸಿದ್ಧಾರೆ. ಹಾಗೆಯೇ ಪ್ರೊ. ಎಸ್.ಜಿ. ರಾಮದಾಸರೆಡ್ಡಿ ಅವರು ಪಾಂಡವರಪುರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಧ್ಯಾಪಕರಾದ ಪ್ರೊ. ಬಿ.ಎಸ್. ಮಂಜುನಾಥ್, ಗ್ರಾಮದ ಮುಖಂಡ ಹೆಚ್. ಗಿರಿರಾಜು ಹಾಗು ಕಾಲೇಜಿನ ವಿದ್ಯಾರ್ಥಿಗಳ ಸಹಕಾರದೊಂದಿಗೆ ಇದೇ ನೆಲೆಯಲ್ಲಿ ಅಂತ್ಯ ಹಳೆಶಿಲಾಯುಗ, ನವಶಿಲಾಯುಗ, ಸಂಸ್ಕೃತಿ, ಬೃಹತ್ ಶಿಲಾಯುಗ ಸಂಸ್ಕೃತಿ ಮತ್ತು  ಇತಿಹಾಸ ಆರಂಭ ಕಾಲದ ಅವಶೇಷಗಳನ್ನು ಸಂಗ್ರಹಿಸಿ ಪ್ರಕಟಿಸಿದ್ಧಾರೆ. ಡಾ.ಸಿ. ಮಹದೇವ ಅವರು ಶ್ರೀರಂಗಪಟ್ಟಣ ಪರಿಸರದಲ್ಲಿ ಅಂತ್ಯ ಹಳೆಶಿಲಾಯುಗ – ಸೂಕ್ಷ್ಮ ಶಿಲಾಯುಗ ಸಂಸ್ಕೃತಿಯ ಉಪಕರಣಗಳನ್ನು, ಕಚ್ಚಾ ವಸ್ತುಗಳನ್ನು, ಸಂಗ್ರಹಿಸಿ ಈ ಎಡೆ ಅಯುಧ ತಯಾರಿಕಾ ಕಾರ್ಖಾನೆಯಾಗಿತ್ತೆಂದಿದ್ಧಾರೆ. ಸೆಣಬ ಪರಿಸರದಲ್ಲಿ ಡಾ.ಎನ್.ಎಸ್. ರಂಗರಾಜು ಅವರು ಬೃಹತ್ ಶಿಲಾಯುಗ ಸಂಸ್ಕೃತಿಯ ಅವಶೇಷಗಳನ್ನು ಮತ್ತು ಸಮಾಧಿಗಳನ್ನು ಪತ್ತೆ ಹಚ್ಚಿದ್ಧಾರೆ.

ತಾಲ್ಲೂಕಿನ ಬಿಂಡಿಗನವಿಲೆ ಹೋಬಳಿಯ ಹರಳಹಳ್ಳಿ ಗ್ರಾಮದ ಪರಿಸರದಲ್ಲಿ ಡಾ.ಎಂ.ಎಸ್. ಕೃಷ್ಣಮೂರ್ತಿ ಅವರು ಆದ ಹಳೆಶಿಲಾಯುಗದ ಹಾಗು ಇತಿಹಾಸ ಆರಂಭ ಕಾಲದ ಅವಶೇಷಗಳನ್ನು ಪತ್ತೆ ಹಚ್ಚಿದ್ಧಾರೆ. ಇದೇ ಹೋಬಳಿಯ ಅಣೆಚನ್ನಾಪುರ ನೆಲೆಯಲ್ಲಿ ಇದೇ ಲೇಖಕರು, ವಿದ್ಯಾರ್ಥಿಯಾದ ಚನ್ನಮಾದೇಗೌಡ, ಸ್ಥಳೀಯರಾದ ಮುಹಮದ್ ಕಲೀಂ ಉಲ್ಲಾರ ಸಹಕಾರದೊಂದಿಗೆ ಭೂ ಅನ್ವೇಷಣೆ ಮಾಡಲು ಹೋದಾಗ ನೆಲೆಯ ಸುತ್ತಲೂ ಬೃಹದಾಕಾರದ ಗ್ರಾನೈಟ್ ಗುಡ್ಡ, ನೈಸರ್ಗಿಕ ಗುಹೆಗಳಿಂದ ಸುತ್ತುವರಿದಿರುವ, ಮಧ್ಯೆ ಸಮತಟ್ಟಾದ ಸುಮಾರು ೩ ಹೆಕ್ಟೇರ‍್ ಮಣ್ಣಿನಿಂದ ಕೂಡಿದ ಭೂಮಿಯಲ್ಲಿ ನವಶಿಲಾಯುಗ ಸಂಸ್ಕೃತಿ, ಬೃಹತ್ ಶಿಲಾಯುಗ ಸಂಸ್ಕೃತಿ ಮತ್ತು ಇತಿಹಾಸ ಆರಂಭ ಕಾಲದ ಅವಶೇಷಗಳು ಕ್ರಮವಾಗಿ ಬೂದು, ಬೂದು ಮಿಶ್ರಿತ ಕೆಂಪು, ಕವಣೆಕಲ್ಲು, ಕುಟ್ಟುವಕಲ್ಲು, ಆಹಾರ ಧಾನ್ಯ ಅರೆಯಲು ಬಳಸಿದ ಮುರಿದ ಅಡಿಗಲ್ಲು ದೊರಕಿದ್ದು, ಕುಂತಿಬೆಟ್ಟದ ಅನ್ನಪೂರ್ಣೇಶ್ವರಿ ದೇವಾಲಯದ ನೆಲೆಯಲ್ಲಿ ಸಿಕ್ಕಿರುವ ಅಡಿಗಲ್ಲಿನ ಹಾಗೆ ಹೋಲಿಕೆಯಿದೆ ಹಾಗು ದಪ್ಪ ಮಡಿಕೆ ತುಂಡುಗಳು, ಹೇರಳವಾದ ಬೂದಿ ಮಣ್ಣು, ಕೆಂಪು, ಕಪ್ಪು, ಕೆಂಪು ಮತ್ತು ಕಪ್ಪು ಬಣ್ಣದ ಮಡಿಕೆ ತುಣುಕುಗಳು, ಕಬ್ಬಿಣ ಕರಗಿಸಿದ ನಂತರ ಉಳಿಯುವ ಕಿಟ್ಟ, ಕಬ್ಬಿಣದ ಅದಿರು, ಮೂಳೆ ತುಂಡುಗಳು ಡಾಲ್ಮನ್ ಸಿಸ್ಟ್ ಸಮಾಧಿ ಇತರೆ ಅವಶೇಷಗಳು ದೊರಕಿವೆ. ಅಲ್ಲದೆ ಕೆಂಪು ಬಣ್ಣದ ರಸ್ಸೆಟ್ ಕೊಟೆಡ್ ಪೆಯಿಂಟೆಡ್ ಮಡಿಕೆ ತುಂಡುಗಳು, ನೀರಿನ ಹೂಜಿಯ ಮೂರ್ತಿಗಳು, ಸುಟ್ಟಮಣ್ಣಿನ ಅವಶೇಷ ಹಾಗು ಇತರೆ ಅವಶೇಷಗಳು ನೆಲೆಯಲ್ಲಿ ದೊರಕಿದ್ದು, ತಲಕಾಡು, ಬನವಾಸಿ, ಕೊಪ್ಪಳ, ಟಿ.ನರಸೀಪುರ ನೆಲೆಗಳ ಅವಶೇಷಗಳ ಜತೆ ಹೋಲಿಕೆಯಿವೆ. ಈ ನೆಲೆಯ ಗುಡ್ಡದಲ್ಲಿ ಹೆಚ್ಚಿನ ಸಂಶೋಧನೆಗಳು ನಡೆದರೆ ಈ ಸಂಸ್ಕೃತಿಯ ಅವಶೇಷಗಳು ಮತ್ತು ಬಣ್ಣದ ಚಿತ್ರಗಳು ಸಿಗುವ ಸಾಧ್ಯತೆಯಿದೆ. ನಾಗಮಂಗಲ ಪರಿಸರದ ಆದಿಚುಂಚನಗಿರಿ ಬೆಟ್ಟದಲ್ಲಿ ಡಾ.ಸಿ. ಮಹದೇವ ಅವರು ಸೂಕ್ಷ್ಮ ಶಿಲಾಯುಗ ಸಂಸ್ಕೃತಿ, ನವಶಿಲಾಯುಗ ಸಂಸ್ಕೃತಿ ಮತ್ತು ಇತಿಹಾಸ ಆರಂಭ ಕಾಲದ ಅವಶೇಷಗಳನ್ನು ಪತ್ತೆ ಹಚ್ಚಿದ್ದಾರೆ.

ಇದೇ ಲೇಖಕರು, ಬಿಂಡಿಗನವಿಲೆ ಕಡೆ ಹಾಗು ಹೋಗುವ ನಾಗಮಂಗಲ ಪಟ್ಟಣದ ಹೊರಭಾಗದ ಪಾಳು ದೇವಾಲಯದ ಸುತ್ತಮುತ್ತ ಕ್ಷೇತ್ರ ಕಾರ್ಯ ಮಾಡುವಾಗ ಬೃಹತ್ ಶಿಲಾಯುಗ ಸಂಸ್ಕೃತಿಯ ಮತ್ತು ಇತಿಹಾಸ ಆರಂಭ ಕಾಲದ ಅವಶೇಷಗಳನ್ನು ಪತ್ತೆ ಹಚ್ಚಿದ್ಧಾರೆ. ಒಟ್ಟಿನಲ್ಲಿ ನಾಗಮಂಗಲ ಪರಿಸರವು ಭೌಗೋಳಿಕವಾಗಿ ಮತ್ತು ಪ್ರಾಗೈತಿಹಾಸಿಕವಾಗಿ ಮಹತ್ವದ ಭೂಭಾಗವಾಗಿದ್ದು, ಈ ಪರಿಸರದಲ್ಲಿ ಇನ್ನೂ ಹೆಚ್ಚಿನ ಸಂಶೋಧನೆ ನಡೆದರೆ ಈ ಪರಿಸರದ ಪ್ರಾಗತಿಹಾಸದ ಮೇಲೆ ಹೊಸ ಬೆಳಕು ಚೆಲ್ಲಬಹುದು.

 

ಆಧಾರ ಗ್ರಂಥಗಳು

೧. ಭಾರತದ ಗ್ಯಾಸೆಟಿಯರ‍್, ೨೦೦೩ : ಕರ್ನಾಟಕ ರಾಜ್ಯ, ಮಂಡ್ಯ ಜಿಲ್ಲೆ

೨. ಕನ್ನಡ ವಿಷಯ ವಿಶ್ವಕೋಶ , ೧೯೭೯ : ಪುಟ ೮೨೮

೩. ಕರ್ನಾಟಕ ಪರಂಪರೆ, ೧೯೭೦ : ಸಂಪುಟ -೧

೪. ಸೂರ್ಯನಾಥ ಕಾಮತ್ ( ಸಂ), ೧೯೮೪ : ಕರ್ನಾಟಕ ರಾಜ್ಯ ಗ್ಯಾಸೆಟಿಯರ‍್, ಭಾಗ – ೧

೫. ಮಂಡ್ಯ ಜಿಲ್ಲೆ ಅಂಕಿ ಅಂಶಗಳ ನೋಟ, ೨೦೦೭

೬. E.C. ಸಂ.-೩

೭. ಫೂಟ್ ಆರ್.ಬಿ. ೧೯೧೬ : ದಿ ಫೂಟ್ ಕಲೆಕ್ಷನ್ ಆಫ್ ಪ್ರಿಹಿಸ್ಟಾರಿಕ್ ಅಂಡ್ ಪ್ರೋಟೋಹಿಸ್ಟಾರಿಕ್ ಆಂಟಿಕ್ಟಿಟೀಸ್, ಮದ್ರಾಸ್, ಪು ೭೩-೨೪

೮. ಕೃಷ್ಣಮೂರ್ತಿ ಎಂ.ಎಸ್., ೧೯೮೯ : ಕುಂತಿಬೆಟ್ಟದ  ಪ್ರಾಕ್ತನಾನ್ವೇಷಣೆ – ಒಂದು ಟಿಪ್ಪಣೆ, ಇತಿಹಾಸ ದರ್ಶನ ಪುಟ ೧-೩

೯. ಮಹದೇವ ಸಿ. ೨೦೦೧ : ಕರ್ನಾಟಕ ಪುರತಾತ್ವ ಶೋಧ, ಪು ೧-೪

೧೦. ಎಂ.ಎ.ಆರ‍್. : ೧೯೫೬ – ೧೯೪೭

೧೧. ದೇವರಾಜು ಡಿ.ವಿ. ಮತ್ತು ಗೋಪಾಲ್ ಆರ‍್. : ಶೇಷಾಚಂದ್ರಿಕ,, ಪುಟ ೫೮

೧೨. ಶ್ರೀನಿವಾಸ್ ಕೆ.ಆರ‍್. : ದಕ್ಷಿಣ ಭಾರತದ ಬೃಹತ್ ಶಿಲಾಯುಗದ ಸರ್ವೇಕ್ಷಣ ಪುಟ ೧೦೩-೧೧೫

೧೩. ರಂಗರಾಜು, ಎನ್.ಎಸ್. ಅವರಿಂದ ಮಾಹಿತಿ

೧೪. ಮಹದೇವ ಸಿ. ೨೦೦೧ : ಕರ್ನಾಟಕ ಪುರಾತತ್ವ ಶೋಧ

೧೫. ಕೃಷ್ಣಮೂರ್ತಿ ಎಂ.ಎಸ್. ಅವರಿಂದ ಮಾಹಿತಿ

೧೬. ದೇವರಾಜ್ ಡಿ.ವಿ., ಗೋಪಾಲ್ ಆರ‍್., ೧೯೮೪ : ತಲಕಾಡು ಉತ್ಖನನ ವರದಿ

೧೭. ಶೇಷಾದ್ರಿ , ೧೯೭೨ : ಟಿ.ನರಸೀಪುರ ಉತ್ಖನನ ವರದಿ

೧೮. ನರಸಿಂಹಮೂರ್ತಿ ಎ.ವಿ. ಅವರಿಂದ ಕೊಪ್ಪ ಉತ್ವಖನನ ಬಗ್ಗೆ ಮಾಹಿತಿ.

೧೯. ನರಸಿಂಹಮೂರ್ತಿ ಎ.ವಿ., ದೇವರಾಜು ಡಿ.ವಿ., ೧೯೯೭ : ಎಕ್ಸ್ ಕವೇಶನ್ ಅಟ್ ಬನವಾಸಿ

೨೦. ಕನ್ನಡ ವಿಷಯ ವಿಶ್ವಕೋಶ, ೨೦೦೫

೨೧. ನಾಯಕ ಹಾ.ಮಾ. (ಪ್ರ.ಸಂ), ಕನ್ನಡ ವಿಶ್ವಕೋಶ ಸಂಪುಟಗಳು

೨೨. ದೇಜಗೌ, ೧೯೯೪ : ಸಿರಿಯೊಡಲು , ಮಂಡ್ಯ

೨೩. ಹಯವದನರಾವ್, ೨೯೨೭ : ಮೈಸೂರು ಗ್ಯಾಸೆಟಿಯರ‍್

೨೪. ರಾಮದಾಸ ರೆಡ್ಡಿ ಎಸ್.ಜಿ., ೨೦೦೬ : ವೇದಾವತಿ ನದಿಯ ತೀರದ ಸಾಂಸ್ಕೃತಿಕ ಒಂದು ಅಧ್ಯಯನ ಪ್ರೌಢ ಮಹಾ ಪ್ರಬಂಧ (ಅಪ್ರಕಟಿತ), ಮೈಸೂರು ವಿಶ್ವವಿದ್ಯಾಲಯ

೨೬. ಸುಂದರ ಅ., ೧೯೭೫ : ದಿ ಅರ್ಲಿ ಛೆಂಬರ‍್ ಟೂಲ್ಸ್ ಆಫ್ ಸೌತ್ ಇಂಡಿಯ

೨೭. ಗುರುರಾಜರಾವ್ ಬಿ.ಕೆ., ೧೯೭೨ : ಮೆಗಥಿಕ್ ಕಲ್ಚರ‍್ ಆಫ್ ಸೌತ್ ಇಂಡಿಯ

೨೮. ಮಾರ್ಗಭಂದು ಸಿ., ೧೯೮೪ : ಆರ್ಕಿಯಾಲಜಿ ಆಫ್ ದಿ ಶಾತವಾಹನ ಕಾಶ್ಯತ್ರಪ ಟೈಮ್ಸ್

೨೯. ವೀಲ್ಹರ‍್ ಆರ‍್.ಇ.ಎಂ., ೧೯೪೭-೪೮ : ಏನ್ಸಿಯಂಟ್ ಇಂಡಿಯ, ಸಂ.೪

೨೦. ಮಹದೇವ ಸಿ., ೨೦೦೮ : ಆದಿಚುಂಚನಗಿರಿಯ ಇತಿಹಾಸ ಮತ್ತು ಪುರಾತತ್ವ, ಮಂಡ್ಯ ಜಿಲ್ಲೆಯ ಇತಿಹಾಸ ಮತ್ತು ಪುರಾತತ್ವ, ಡಾ. ಆರ‍್. ಗೋಪಾಲ (ಸಂ).