ಜಾನಪದ ಅಧ್ಯಯನ ಹಲವಾರು ಅಧ್ಯಯನ ಕ್ಷೇತ್ರಗಳಿಂದ ತತ್ವಗಳನ್ನು, ವಿಧಾನಗಳನ್ನು ಸ್ವೀಕರಿಸಿ ವಿಶ್ಲೇಷಣೆಗೆ ಹಾಗೂ ವಿವೇಚನೆಗೆ ಅಳವಡಿಸಿಕೊಂಡಿರುವುದನ್ನು ಗಮನಿಸಬಹುದು. ಮಾನವಶಾಸ್ತ್ರ, ಮನೋವಿಜ್ಞಾನ, ಸಾಹಿತ್ಯ, ಸಂಸ್ಕೃತಿ ಅಧ್ಯಯನ, ಇತಿಹಾಸ, ಪುರಾತತ್ವ, ಭಾಷಾವಿಜ್ಞಾನ ಮುಂತಾದ ಅಧ್ಯಯನ ವಿಭಾಗಗಳಲ್ಲಿ ಬಳಕೆಯಾಗಿರುವ ವಿಧಾನಗಳ ಸ್ಫೂರ್ತಿ ಜಾನಪದ ಅಧ್ಯಯನದ ಹರವನ್ನು ವಿಶಾಲಗೊಳಿಸಿದೆ. ಜಾನಪದ ಅಧ್ಯಯನಕ್ಕೆ ಪೂರಕವಾಗುವ ಮುಖ್ಯ ಅಧ್ಯಯನ ವಿಭಾಗಗಳಲ್ಲಿ ಇತಿಹಾಸವೂ ಒಂದು. ಇವೆರಡೂ ಪರಸ್ಪರ ಪೂರಕವಾದವು ಎಂದರೆ ತಪ್ಪಾಗದು. ಜಾನಪದದ ಅನೇಕ ಪ್ರಕಾರಗಳ ಅಧ್ಯಯನದಲ್ಲಿ ಇತಿಹಾಸದ ತತ್ವಗಳ ಬಳಕೆ ಅನಿವಾರ್ಯ, ಜಾನಪದದ ಐತಿಹಾಸಿಕ ಅಂಶಗಳನ್ನು ಪತ್ತೆಹಚ್ಚಲು ಶಾಸನ, ಓಲೇಗರಿ, ಕಡತ, ಸ್ಮಾರಕ ಶಿಲೆ, ನಾಣ್ಯ, ಇತ್ಯಾದಿಗಳು ಕೂಡ ನೆರವಾಗುತ್ತವೆ. ಇವು ಇತಿಹಾಸದ ಆಕರಗಳೇ ಅಗಿವೆ. ಅದೇ ರೀತಿ ಇತಿಹಾಸಕ್ಕೆ ಅತ್ಯಗತ್ಯ. ಈ ನಿಟ್ಟಿನಲ್ಲಿ ಹೆಚ್ಚಿನ ಅಧ್ಯಯನ ನಡೆಯಬೇಕಾಗಿದೆ. ಇತಿಹಾಸದ ಅಧ್ಯಯನವೆಂದರೆ ಕೇವಲ ರಾಜಕೀಯ ಇತಿಹಾಸ ಎಂಬ ತಪ್ಪು ಕಲ್ಪನೆ ಇದೆ. ಸಾಂಸ್ಕೃತಿಕ ಇತಿಹಾಸವನ್ನು ಸೇರಿಸಿಕೊಳ್ಳದ ಇತಿಹಾಸ ಅಪೂರ್ಣವೆಂಬುದನ್ನು ಇತ್ತೀಚಿನ ಕಾಲದಲ್ಲಿ ಒತ್ತಿ ಹೇಳಲಾಗುತ್ತಿದೆ. ಸಾಂಸ್ಕೃತಿಕ ಇತಿಹಾಸಕ್ಕೆ ಆಕರವಾಗಬಹುದಾದ ಮುಖ್ಯ ವಿಷಯವೆಂದರೆ, ಮೌಖಿಕ ಸಾಹಿತ್ಯ. ಹಿಂದಿನ ತಲೆಮಾರಿನ ಅನೇಕ ಇತಿಹಾಸ ತಜ್ಞರು ಮೌಖಿಕ ಇತಿಹಾಸದ ಕಡೆ ಗಮನವನ್ನೇ ಕೊಟ್ಟಿರಲಿಲ್ಲ. ಜಾನಪದದ ವೈಜ್ಞಾನಿಕ ಅಧ್ಯಯನಕ್ಕೆ ವಿಶಿಷ್ಟವಾದ ಕೊಡುಗೆಯನ್ನು ನೀಡಿದ ರಿಚರ್ಡ್ ಎಂ. ಡಾರ್ಸನ್ ಮೂಲತಃ ಇತಿಹಾಸದ ವಿದ್ವಾಂಸರು. ಇವರು ಇತಿಹಾಸದ ಅಧ್ಯಯನದಲ್ಲಿ ಮೌಖಿಕ ಇತಿಹಾಸಕ್ಕೆ ಅತ್ಯಂತ ಮುಖ್ಯ ಪಾತ್ರವಿರಬೇಕೆಂಬುದನ್ನು ಒತ್ತಾಯಪೂರ್ವಕವಾಗಿ ಹೇಳುತ್ತಿದ್ದರು. ಇದರ ಬಗ್ಗೆ ಅವರು ಅನೇಕ ಲೇಖನಗಳನ್ನು, ಪುಸ್ತಕಗಳನ್ನು ಪ್ರಕಟಿಸಿದ್ಧಾರೆ. ಇತಿಹಾಸದ ಸಮಗ್ರ ಚಿಂತನೆಯಲ್ಲಿ ಮೌಖಿಕ ಇತಿಹಾಸದ ಅನಿವಾರ್ಯ ಪಾತ್ರವನ್ನು ನಿರ್ದೇಶಿಸುವಲ್ಲಿ ಇಂಥ ವಿದ್ವಾಂಸರ ಕೃಷಿ ಅಡಗಿದೆ.

ಭಾರತೀಯ ಮೌಖಿಕ ಇತಿಹಾಸ ನಿರ್ಮಾಣದಲ್ಲಿ ಕರ್ನಲ್ ಮೆಕೆಂಜಿಯಂಥ ಮಹನೀಯರ ಕೊಡುಗೆಯನ್ನು ಸ್ಮರಿಸಬೇಕು. ಇವರ ಕೈಫಯತ್ತುಗಳು ಈ ನಿಟ್ಟಿನಲ್ಲಿ ಅತ್ಯಂತ ಉಪಯುಕ್ತ ಮಾಹಿತಿಗಳಾಗಿವೆ. ದಕ್ಷಿಣ ಭಾರತದ ಮೌಖಿಕ ಇತಿಹಾಸ ನಿರ್ಮಾಣಕ್ಕೆ ಕೈಪೀಯತ್ತುಗಳು ಬಹಳಷ್ಟು ನೆರವಾಗುತ್ತವೆ. ಮೆಕೆಂಜಿ ಸಂಗ್ರಹಿಸಿದ ಕೈಫಯತ್ತುಗಳಲ್ಲಿ ನಾಗಮಂಗಲದ ಕೈಫಿಯತ್ತು ಕೂಡ ಒಂದು. ನಾಗಮಂಗಲದ ಬಗೆಗಿನ ವಿಷಯವನ್ನು ಮೆಕೆಂಜಿ ಅವರು ಸಂಗ್ರಹಿಸಿ ೨೦೧ ವರ್ಷಗಳು ಕಳೆದಿವೆ. ನಾಗಮಂಗಲದ ತಿಮ್ಮಯ್ಯ ರಾಯರು, ಶೀನಪ್ಪ, ಬಾಳರಾಯ, ವೆಂಕಟರಮಣಯ್ಯ ಮೊದಲಾದವರು ಹೇಳಿದ ಮಾತುಗಳನ್ನು ದಾಖಲಿಸಲಾಗಿದೆ. ಆಗ ಈ ಸ್ಥಳ ಅರಣ್ಯವಾಗಿತ್ತು. ಆಗ ಚಕ್ರಗೇರಿಯ ತಪಸ್ವಿಯೊಬ್ಬರು ಈ ಅರಣ್ಯಕ್ಕೆ ಬಂದು ಇಲ್ಲಿ ದೇವರ ಪ್ರತಿಷ್ಠೆ ಮಾಡಿ, ದೇವಸ್ಥಾನ ಕಟ್ಟಿಸಿ ಮನೆಯನ್ನು ಕಟ್ಟಿಕೊಂಡು ವಾಸವಿದ್ದರು.

ತಿಮ್ಮಣ್ಣ ಎಂಬಾತ ಮಲಗಿದ್ಧಾಗ, ಒಂದು ಮಹಾ ಸರ್ಪ ಆತನ ಮೇಲೆ ನೆರಳು ಮಾಡಿಕೊಂಡು ಹೆಡೆ ತೆಗೆದು ಆಡುತ್ತಿತ್ತು. ಈತನ ಮನೆಯಲ್ಲಿರುವ ಹಸು ಮೇಯಲು ಹೋದಾಗ ಒಂದು ಹುತ್ತದಲ್ಲಿ ತಾನಾಗಿ ಹಾಲು ಕರೆಯುತ್ತಿತ್ತು. ಇದನ್ನು ಅರಿತ ತಿಮ್ಮಣ್ಣ ಹುತ್ತವನ್ನು ಅಗೆದು ನೋಡಿದಾಗ ನರಸಿಂಹಸ್ವಾಮಿ ದೇವರ ವಿಗ್ರಹ ಸಿಕ್ಕಿತು. ಆಗ ಅವನು ನರಸಿಂಹಸ್ವಾಮಿಗೆ ಗುಡಿ ಕಟ್ಟಿಸಿದ. ತಿಮ್ಮಣ್ಣನ ತಾಯಿ ಲಕ್ಷ್ಮಮ್ಮನಿಗೆ ಸಿದ್ಧರು ಸಿದ್ಧರಸವನ್ನು ನೀಡಿದರು. ಲಕ್ಷ್ಮಮ್ಮ ರಸ ತುಂಬಿದ ತಂಬಿಗೆಯನ್ನು ಅಡುಗೆ ಮನೆಯೊಳಗೆ ಒಲೆಯ ಮೇಲುಭಾಗದಲ್ಲಿದ್ದ ಅಟ್ಟದ ಮೇಲಿಟ್ಟಳು. ಕಬ್ಬಿಣದ ಕಾವಲಿಯಲ್ಲಿ ಆಕೆ ರೊಟ್ಟಿ ಸುಡುತ್ತಿದ್ದಾಗ, ಬೆಂಕಿಯ ತಾಪಕ್ಕೆ ಆ ಸಿದ್ಧರಸದ ಒಂದು ಹನಿ ಕಬ್ಬಿಣದ ಕಾವಲಿಯ ಮೇಲೆ ಬಿದ್ದು ಅದು ಚಿನ್ನವಾಯಿತು. ತಿಮ್ಮಣ್ಣ ನೋಡಿ ಆಶ್ಚರ್ಯಪಟ್ಟು, “ಈ ರಸವನ್ನು ನಮ್ಮಲ್ಲೇ ಇರಿಸಿಕೊಳ್ಳಬಾರದು” ಎಂದು ಭಾವಿಸಿ ಆಗ ರಾಜ್ಯಕ್ಕೆ ಪ್ರಭುಗಳಾಗಿದ್ದ ವಿಜಯನಗರದ ಅರಸ ಸಾಳ್ವ ಕೃಷ್ಣರಾಯರ ಬಳಿಗೆ ಹೋದ. ಸಾಳ್ವ ಕೃಷ್ಣರಾಯರು ಆ ರಸದ ಪರೀಕ್ಷೆ ಮಾಡಿಸಿ ಈತನ ಪ್ರಾಮಾಣಿಕತೆಯನ್ನು ತಿಳಿದು ಉಡುಗೊರೆ ಕೊಟ್ಟನು. ಅಷ್ಟೇ ಅಲ್ಲದೆ ದಂಡನಾಯಕನೆಂದು ಹೆಸರು ಕೊಟ್ಟು “ಈ ದಕ್ಷಿಣ ದೇಶದಲ್ಲಿ ನೀನು ಪ್ರಭುವಾಗಿ ಕೋಟೆ ಕೊತ್ತಳ ಮಾಡಿಕೊಂಡು ಇರು” ಎಂದು ಹೇಳಿ ಕಳುಹಿಸಿದರು.

ತಿಮ್ಮಣ್ಣ ತನ್ನ ಊರಿಗೆ ಬಂದು ನರಸಿಂಹದೇವರ ಗುಡಿಯನ್ನು ವಿಸ್ತಾರವಾಗಿ ಕಟ್ಟಿಸಿ ನಾಗಮಂಗಲವೆಂದು ಹೆಸರಿಟ್ಟು, ಊರಿಗೆ ಉತ್ತರ ಭಾಗದಲ್ಲಿರುವ ಕೆರೆ ಹಾಳಾಗಿರುವುದನ್ನು ನೋಡಿ ಹೂಳೆತ್ತಿಸಿ, ಉದ್ಧಾರ ಮಾಡಿದನು. ತಿಮ್ಮಪ್ಪನ ತಾಯಿ ಲಕ್ಷ್ಮಮ್ಮ ಯಾವಾಗಲೂ ನಿನ್ನ ಹೆಸರಿನಲ್ಲೇ ಧರ್ಮಕಾರ್ಯಗಳನ್ನು ಮಾಡಿದೆ. ನನ್ನ ಹೆಸರಲ್ಲಿ ಮಾಡುವುದಿಲ್ಲವೆ? ಎನ್ನಲು ಅವನು ಒಂದು ಕೆರೆಯನ್ನು ಊರಿನ ಪೂರ್ವಭಾಗದಲ್ಲಿ ತೋಡಿಸಿ ಅದಕ್ಕೆ “ಅಮ್ಮನ ಕೆರೆ” ಎಂದು ಹೆಸರಿಟ್ಟನು.

ತಿಮ್ಮಣ್ಣನ ತರುವಾಯ ಸಾಳ್ವ ನರಸಿಂಗರಾಯರು, ಹಂಪಿ ಅರಸು, ಚಿನ್ನ ಅರಸು ಎಂಬ ಇಬ್ಬರು ಅಣ್ಣತಮ್ಮಂದಿರನ್ನು ಇಲ್ಲಿಗೆ ರಾಜ್ಯ ಸಂರಕ್ಷಣಾರ್ಥವಾಗಿ ಕಳುಹಿಸಿಕೊಟ್ಟರು. ಅನಂತರದ ವಿಜಯನಗರದ ದಳವಾಯಿ ಜಗದೇವರಾಯ ಇಲ್ಲಿಯ ರಾಜ್ಯಭಾರ ವಹಿಸಿಕೊಂಡು ಹಂಪಿ ಅರಸು ಮತ್ತು ಚನ್ನ ಅರಸು ಈ ಇಬ್ಬರನ್ನು ಶ್ರೀರಂಗಪಟ್ಟಣಕ್ಕೆ ಕಳುಹಿಸಿದ. ಜಗದೇವರಾಯನ ಸಂತತಿಯವರೇ ನಾಗಮಂಗಲವನ್ನು ಆನಂತರ ಕಾಲದಲ್ಲಿ ಆಳಿದರು. ಆಮೇಲೆ ಮೈಸೂರಿನ ಅರಸರರು ಈ ಪ್ರದೇಶವನ್ನು ತಮ್ಮ ಆಡಳಿತಕ್ಕೆ ವಹಿಸಿಕೊಂಡರು. ಹೀಗೆ ನಾಗಮಂಗಲದ ಕೈಫಿಯತ್ತಿನಿಂದ ತಿಮ್ಮಣ್ಣನಿಂದ ಬ್ರಿಟಿಷರ ಕಾಲದ ತನಕ ಆ ಊರನ್ನು ಆಳಿದವರ ಬಗೆಗಿನ ಮೌಖಿಕ ಪರಂಪರೆಯಲ್ಲಿ ಉಳಿದು ಬಂದ ಇತಿಹಾಸದ ಸ್ವರೂಪವನ್ನು ಸ್ವಲ್ಪಮಟ್ಟಿಗಾದರೂ ಈ ಆಕರಗಳು ತಿಳಿಸುತ್ತವೆ.

ನಾಗಮಂಗಲವನ್ನು ಕುರಿತಂತೆ ಅನೇಕ ಐತಿಹ್ಯಗಳು, ಪುರಾಣ ಕಥೆಗಳು, ಪ್ರಚಾರದಲ್ಲಿವೆ. ಕ್ಷೇತ್ರ ಕಾರ್ಯದ ಸಂದರ್ಭದಲ್ಲಿ ದೊರೆತ ಐತಿಹ್ಯಗಳನ್ನು ಮೂರು ಬಗೆಯಲ್ಲಿ ವಿಭಜಿಸಬಹುದು. ೧. ನಾಗಮಂಗಲ ಹಾಗೂ ಇನ್ನಿತರ ಕೆಲವು ಸ್ಥಳಗಳಿಗೆ ಸಂಬಂಧಿಸಿದ ಐತಿಹ್ಯಗಳು. ೨. ಗ್ರಾಮದೇವತೆಗಳಿಗೆ ಸಂಬಂಧಿಸಿದ ಐತಿಹ್ಯಗಳು ೩. ಕೆರೆಕಟ್ಟೆಗಳಿಗೆ ಸಂಬಂಧಿಸಿದ ಐತಿಹ್ಯಗಳು.

ನಾಗಮಂಗಲ ಹಾಗೂ ಇನ್ನಿತರ ಸ್ಥಳಗಳಿಗೆ ಸಂಬಂಧಿಸಿದ ಐತಿಹ್ಯಗಳು

ನಾಗಮಂಗಲ : ನಾಗಮಂಗಲ ಎಂದು ಹೆಸರಾದುದಕ್ಕೆ ದೊರೆತ ಐತಿಹ್ಯಗಳೆಲ್ಲ ಹೆಚ್ಚು ಕಡಿಮೆ ಒಂದೇ ಬಗೆಯ ಪುರಾಣ ಹೇಳುತ್ತವೆ. ಅಲ್ಪಸ್ವಲ್ಪ ಪಾಠ ಭೇದಗಳಿರಬಹುದು ಅಷ್ಟೇ. ಹಿಂದೆ ಈ ಪ್ರದೇಶ ಗೊಂಡಾರಣ್ಯವಾಗಿತ್ತು. ಪಾಳೆಯಗಾರನೊಬ್ಬ ಕನಸಿನಲ್ಲಿ ಹುತ್ತವೊಂದನ್ನು ಕಂಡು ಈ ಹುತ್ತ ಹುಡುಕುತ್ತಾ ಬರುತ್ತಿದ್ದ. ನಾಗರ ಹಾವೊಂದು ಹುತ್ತದ ಬಳಿ ಮಂಡಲಾಕಾರವಾಗಿ ಸುತ್ತುತ್ತಿದ್ದುದನ್ನು ಕಂಡು ಇದೇ ತಾನು ಕನಸಿನಲ್ಲಿ ಕಂಡ ಪ್ರಶಸ್ತವಾದ ಸ್ಥಳವೆಂದು ನಿರ್ಧರಿಸಿ, ಆ ಸ್ಥಳದಲ್ಲಿ ದೇವಾಲಯ ನಿರ್ಮಾಣ ಮಾಡಲು ತೀರ್ಮಾನಿಸಿದ. ಈ ಕಾರಣದಿಂದಾಗಿ ಈ ಪ್ರದೇಶಕ್ಕೆ ನಾಗಮಂಡಲ ಎಂದು ಹೆಸರಾಯಿತು. ಇದೇ ಕ್ರಮೇಣ ನಾಗಮಂಗಲವಾಯಿತು.

ಇದನ್ನು ಬಭ್ರುವಾಹನ ಕ್ಷೇತ್ರ ಎಂದು ಕೂಡ ಕರೆಯುವರು. ಯೋಗನರಸಿಂಹನ ದೇವಾಲಯವಿರುವ ಆವರಣದಲ್ಲೇ ಬಭ್ರುವಾಹನ ಹಿಂದೆ ಯಾಗ ಮಾಡಿದ ಎಂದು ಪ್ರತೀತಿಯಿದೆ. ಯಾಗದ ಸಂದರ್ಭದಲ್ಲಿ ನೀರಿನ ಆವಶ್ಯಕತೆ ಉಂಟಾಯಿತಂತೆ. ಕೂಡಲೇ ಬಭ್ರುವಾಹನ ಬಿಲ್ಲಿಗೆ ಬಾಣ ಹೂಡಿ ನೆಲಕ್ಕೆ ಬಾಣ ಬಿಟ್ಟ. ಆ ಜಾಗದಲ್ಲಿ ಹೊಂಡ ಆಗಿ ನೀರು ಚಿಮ್ಮಿತು. ಆ ನೀರಿನಿಂದ ಯಾಗ ಸಂಪೂರ್ಣವಾಯಿತಂತೆ. ಆ ಜಾಗದಲ್ಲೇ ಇಂದಿಗೂ ಒಂದು ನೆಲಬಾವಿಯಿದೆ. ಇದಕ್ಕೆ ನಿರ್ದಿಷ್ಟವಾದ ಆಕಾರವಿಲ್ಲ. ವಕ್ರವಾಗಿದೆ. ಈ ಕಾರಣದಿಂದ ನಾಗಮಂಗಲಕ್ಕೆ ಹಿಂದೆ ಮಣಿಪುರ, ಫಣಿಪುರ ಎಂಬ ಹೆಸರುಗಳಿದ್ದವೆಂದು ತಿಳಿದು ಬರುತ್ತದೆ. ಬಭ್ರುವಾಹನ ತನ್ನ ತಂದೆಯಾದ ಅರ್ಜುನನ್ನು ಬದುಕಿಸಲು ನಾಗಲೋಕದಿಂದ ನಾಗಮಣಿ ತಂದ. ನರಸಿಂಹಸ್ವಾಮಿ ದೇವಾಲಯದಲ್ಲಿ ದೇವರ ಎಡಭಾಗದಲ್ಲಿ ಹುತ್ತವಿದೆ. ಇದೇ ನಾಗಲೋಕಕ್ಕೆ ದಾರಿ ಬಭ್ರುವಾಹನ ಮಣಿಪುರವೇ ಈ ನಾಗಮಂಗಲ ಎಂಬುದು ಇನ್ನೊಂದು ಐತಿಹ್ಯ.

ನರಸಿಂಹನಾಯಕ ಎಂಬ ಪಾಳೆಯಗಾರ ಯೋಗನರಸಿಂಹ ದೇವಾಲಯ ಕಟ್ಟಿಸಿದ. ಹುತ್ತದ ಕೋವೆಯಲ್ಲಿ ಸಿಕ್ಕ ನರಸಿಂಹನ ವಿಗ್ರಹವನ್ನು ತೆಗೆದು ಪ್ರತಿಷ್ಠಾಪಿಸಿ ದೇವಾಲಯ ನಿರ್ಮಾಣ ಮಾಡಲಾಯಿತು. ಈ ಹುತ್ತದ ಮೇಲೆ ಹಂಗರ ಗಿಡ ಇತ್ತು. ಸಾಧಾರವಾಗಿ ಇದೊಂದು ಕುರುಚಲು ಡಿ. ಆದರೆ ಮೂವತ್ತು ಅಡಿ ಉದ್ಧದ ಮರದ ಕಾಂಡವೊಂದು ಈಗಲೂ ದೇವಾಲಯದ ಅವರಣದಲ್ಲಿದೆ. ಆ ಮರ ಸುಮಾರು ಸಾವಿರ ವರ್ಷಗಳಷ್ಟು ಹಳೆಯದೆಂದು ಹೇಳುತ್ತಾರೆ.

ನಾಗಮಂಗಲಕ್ಕೆ “ಚತುರ್ವೇದ ಭಟ್ಟಾರತ್ನಾಕ ಅಗ್ರಹಾರ” ಎಂಬ ಹೆಸರು ಇತ್ತಂತೆ, ಚತುರ್ವೇದಗಳನ್ನು ಅಧ್ಯಯನ ಮಾಡುವ ಮಠಮಾನ್ಯಗಳು ಪಾಠಶಾಲೆಗಳು ಇಲ್ಲಿ ಇದ್ದವು. ಅರ್ಚಕರು, ಪುರೋಹಿತರು ಹೆಚ್ಚಾಗಿ ಇಲ್ಲಿ ವಾಸಿಸುತ್ತಿದ್ದು ವೇದಾಧ್ಯಯನಕ್ಕೆ ಅನುಕೂಲಕರವಾದ ವಾತಾವರಣವೂ ಇತ್ತು. ಈ ಐತಿಹ್ಯಕ್ಕೆ ಪೂರಕವಾಗಿ ಶಾಸನಬದ್ದ ಆಧಾರಗಳು ಇವೆ. ಈ ಪ್ರದೇಶದಕ್ಕೆ ’ವೀರ ಬಲ್ಲಾಳ ಚತುರ್ವೇದಿ ಭಟ್ಟರತ್ನಾಕರ’ ಎಂಬ ಹೆಸರಿತ್ತೆಂದು ಶಾಸನದಲ್ಲಿ ಉಲ್ಲೇಖವಿದೆ. ವಿದ್ಯೆಯ ಪ್ರಸಾರಕ್ಕಾಗಿ ರಾಜರು ಇನ್ನಿತರರು ದಾನಧರ್ಮ ಮಾಡುತ್ತಿದ್ದ ವಿಚಾರ ಹದಿಮೂರನೆಯ ಶತಮಾನಕ್ಕೆ ಸಂಬಂಧಿಸಿದ ಶಾಸನ (ನಾ, ಮಂ, ೭೪) ತಿಳಿಸುತ್ತದೆ. ವೇದಾಧ್ಯಯನ ಮತ್ತು ಬಾಲಶಿಕ್ಷೆಯಾಗಿ ದತ್ತಿಬಿಟ್ಟ ಪ್ರಸ್ತಾವವಿದೆ. ನಾಗಮಂಗಲದಲ್ಲಿ ವಿದ್ಯೆಯ ಪ್ರಸಾರ ಹಾಗೂ ಸಂಸ್ಕೃತಿ ಪ್ರಸಾರಕ್ಕೆ ಪ್ರೋತ್ಸಾಹ ನೀಡುತ್ತಿದ್ದರೆಂಬ ಐತಿಹ್ಯಕ್ಕೆ ಇದು ಪೂರಕವಾದ ಆಧಾರವಾಗಿದೆ.

ಈ ಊರಿನಲ್ಲಿ ಒಳಕೋಟೆ, ಹೊರಕೋಟೆಗಳು ಇದ್ದವು. ಒಳ ಕೋಟೆಯ ಒಳಗೆ ಯೋಗ ನರಸಿಂಹ ಹಾಗು ಸೌಮ್ಯಕೇಶವ ದೇವಾಲಯಗಳು ನಿರ್ಮಾಣವಾದುವು. ಇವರೆಡೂ ದೇವಾಲಯಗಳ ನಡುವೆ ರಾಜ ಪ್ರತಿನಿಧಿಗಳ ಅರಮನೆ ಇತ್ತು ಎಂದು ಹೇಳುವರು. ಇಲ್ಲಿ ಕಲ್ಲಿನ ಬಚ್ಚಲುಗಳು ಸಿಕ್ಕಿರುವುದು ಇದಕ್ಕೆ ಅಧಿಕೃತ ಆಧಾರ.

ಮೊದಲ ಹಳ್ಳಿ ಅತ್ಯಂತ ಪ್ರಮುಖ ಸ್ಥಳ. ನಾಗಮಂಗಲ ನಿರ್ಮಾಣವಾಗುವ ಮುನ್ನ ಇಲ್ಲಿಯ ಅರಸರು ಮೊದಲಹಳ್ಳಿಯಲ್ಲೇ ವಾಸ್ತವ್ಯ ಹೂಡಿದ್ದು, ಆನಂತರ ನಾಗಮಂಗಲ ಪ್ರದೇಶ ಹುಡುಕಿ ಪಟ್ಟಣ ನಿರ್ಮಾಣ ಮಾಡಿದರೆಂದು ತಿಳಿಯ ಬರುತ್ತದೆ.

ಇನ್ನೊಂದು ಐತಿಹ್ಯದ ಪ್ರಕಾರ ರಾಮಾನುಜಾಚಾರ್ಯರ ದಿವ್ಯಾಜ್ಞೆಯಂತೆ ನಾಗಮಂಗಲ ನಿರ್ಮಾಣವಾದುದಾಗಿ ತಿಳಿದುಬರುತ್ತದೆ. ಮೇಲುಕೋಟೆಯ ಆಡಳಿತ ನಡೆಸುವ ಅಧಿಕಾರಿಗಳಿದ್ದುದು, ಕೆಳಕೋಟೆಯಾದ ನಾಗಮಂಗಲದಲ್ಲಿ. ಹುತ್ತದಲ್ಲಿದ್ದ ಯೋಗನರಸಿಂಹಸ್ವಾಮಿ ವಿಗ್ರಹವನ್ನೂ, ಇದಕ್ಕೆ ಪೂರ್ವದ ನೇರಕ್ಕೆ ಒಂದು ಮೈಲು ದೂರದಲ್ಲಿರುವ “ಚಕ್ರತೀರ್ಥ” ವನ್ನು ರಾಮಾನುಜಚಾರ್ಯರು ಗುರುತಿಸಿ, ಜೀರ್ಣೋದ್ಧಾರ ಮಾಡಿದರು. ನರಸಿಂಹಸ್ವಾಮಿ ಎದುರಿಗೆ ಯಾವ ಕಟ್ಟಡವನ್ನು ವಾಸ್ತುಶಿಲ್ಪಿಗಳು ನಿರ್ಮಿಸಿರುವುದಿಲ್ಲ. ಇದು ನಗರ ನಿರ್ಮಾಣ ಯೋಜನೆಗನುಗುಣವಾಗಿ ರೂಪಿತವಾದ ಪಟ್ಟಣ ಎಂಬ ಹೇಳಿಕೆ ಇದೆ.

ವಿಷ್ಣುವರ್ಧನನ ಎರಡನೆಯ ರಾಣಿ ಬಮ್ಮಲಾದೇವಿ (ವಿಷ್ಣುವರ್ಧನನ ಸಾಮಂತ ಜಗದೇವರಾಯನ ಮಗಳು) ಜಕಣಾಚಾರ್ಯನಿಂದ ಈ ದೇವಸ್ಥಾನ ಕಟ್ಟಿಸಿದಳು. ದೇವರ ಪ್ರತಿಷ್ಠೆಯಾಗಬೇಕಾಗಿರುವುದು ಚಕ್ರತೀರ್ಥದ ನೇರಕ್ಕೆ ಎಂದು ಕೂಡ ರಾಮಾನುಜರು ನಿರ್ದೇಶನ ನೀಡಿದ್ದರಂತೆ. ಅದೇ ಜಕಣಾಚಾರ್ಯನಿಂದ ಈ ದೇವಾಲಯ ನಿರ್ಮಾಣವಾಯಿತು. ಈ ಊರಿನ ರಚನೆ ಸಂಪೂರ್ಣ ವಾಸ್ತುಶಾಸ್ತ್ರಕ್ಕೆ ಆನುಗುಣವಾಗಿದೆ. ಊರಿನ ನಾಲ್ಕು ದಿಕ್ಕುಗಳಲ್ಲೂ ರಕ್ಷಣಾಮೂರ್ತಿಯಾದ ಆಂಜನೇಯನ ಗುಡಿಗಳು, ನೈಋತ್ಯ ದಿಕ್ಕಿನಲ್ಲಿ ಕ್ಷೇತ್ರಪಾಲಕನಾದ ವೀರಭದ್ರ ಸಪ್ತಮಾತೃಕಾ ಗುಡಿ, ಉತ್ತರ ದಿಕ್ಕಿನಲ್ಲಿ ರುಂಡವಿರುವ ಬಡಗೋಡಮ್ಮ ಗುಡಿಗಳಿವೆ. ಎರಡು ಸುತ್ತಿನ ಕೋಟೆಗಳಿವೆ. ಪ್ರತಿಯೊಂದು ವೃತ್ತಿಯವರೆಗೂ ಬೇರೆ ಬೇರೆ ಬೀದಿಗಳು, ಕೆರೆ, ಕೊಳಗಳೂ, ಯಾತ್ರಾರ್ಥಿಗಳಿಗೆ ಅನ್ನ ಛತ್ರ, ಮಂಟಪಗಳಿವೆ. ಒಣಪ್ರದೇಶವಾಗಿ ಬರಪೀಡಿತ ಪ್ರದೇಶವಾಗಿಯೂ ಸುಸಂಪನ್ನ ಪ್ರದೇಶವಾಗಿಯೂ ಇದ್ದು ಅನೇಕ ಆಕ್ರಮಣಕ್ಕೆ ತುತ್ತಾಗಿ ಸೊರಗಿ, ಗರಿಕೆಯಂತೆ ಮತ್ತೆ ತಲೆಯೆತ್ತಿ ನಿಂತಿದೆ.

ಚಕ್ರಕೊಳ: ಚಕ್ರಕೊಳಕ್ಕೆ ಅನೇಕ ವರ್ಷಗಳ ಇತಿಹಾಸವಿದೆ. ದ್ವಾಪರಯುಗದ ಕೊನೆಯಲ್ಲಿದ್ದ ಧರ್ಮರಾಯನ ಅಶ್ವಮೇಧಯಾಗದ ಕುದುರೆಯನ್ನು ಅರ್ಜುನನ ಮಗ ಬಭ್ರುವಾಹನ ತಡೆದು ಕಟ್ಟಿದ್ದ. ತಂದೆ ಮಗನಿಗೆ ಯುದ್ಧವಾದಾಗ ಮಗನ ಬಾಣ ಪ್ರಯೋಗದಿಂದ ಅರ್ಜುನ ಬಿದ್ದು ಸತ್ತ. ಬಭ್ರುವಾಹನ ತಾಯಿ ಅರ್ಜುನನ್ನು ಗುರುತಿಸಿ ಸಂಕಟಪಟ್ಟು ಶ್ರೀಕೃಷ್ಣನನ್ನು ಪ್ರಾರ್ಥಿಸಿದಾಗ ಅರ್ಜುನನನ್ನು ಬದುಕಿಸಿದ ಪಿರ್ತವಧೆಗಾಗಿ ಶೋಕಿಸಿ ಬಭ್ರುವಾಹನ ಸಾಯಲು ಸಿದ್ಧನಾದ. ಆದರೆ ಶ್ರೀಕೃಷ್ಣ ಸಮಾಧಾನ ಹೇಳಿ ಪಾಪ ಪರಿಹಾರಾರ್ಥ ತಪಸ್ಸು ಮಾಡಲು ಹೇಳಿದ. ಅವನು ತಪಸ್ಸು ಮಾಡಿದ ಜಾಗವೇ ಚಕ್ರಕೊಳ.

ಗೋದಾವರಿಯ ದಕ್ಷಿಣ ಭಾಗ, ಕಾವೇರಿಯ ಉತ್ತರದ ಈ ಭಾಗ ವಿಶಾಲ ಗೊಂಡಾರಣ್ಯ. ಶ್ರೀಕೃಷ್ಣ ಸಕಲ ತೀರ್ಥಗಳೂ ಇವೆ ಎಂದು ಹೇಳಿ ತನ್ನ ಚಕ್ರದಿಂದ ಗುರುತು ಮಾಡಿ ಈ ಜಾಗ ತೋರಿಸಿದನಂತೆ. ಆ ಜಾಗದಲ್ಲಿ ಬೆಳೆದ ದರ್ಭೆಯನ್ನೆಲ್ಲ ಕತ್ತರಿಸಿ ನಾಲ್ಕು ಆಡಿ ಆಳ ತೆಗೆದಾಗ ಸ್ಫಟಿಕ ಶುದ್ಧ ನೀರು ಚಿಮ್ಮಿತು. ಇಂದಿಗೂ ಇಲ್ಲಿ ಶುದ್ಧನೀರು ದೊರೆಯುತ್ತದೆ. ಈ ಭೂಭಾಗದಲ್ಲಿ ಸಿಕ್ಕಿದ ಗಡ್ಡಗೆಣಸು, ಹಣ್ಣುಹಂಪಲುಗಳನ್ನು ತಿಂದು ಆರು ತಿಂಗಳು ಕೃಭ್ರಚಾಂದ್ರಾಯಣ ವ್ರತ ಆಚರಿಸಿ ಬಭ್ರುವಾಹನ ಪರಿಶುದ್ಧನಾದ.

ಈ ನೀರಿಗೆ ಪಾಚಿ ಕಟ್ಟುವುದಿಲ್ಲ. ನೀರಿನ ಮಟ್ಟ ಯಾವಾಗಲೂ ಮೂರೂವರೆ ಅಡಿ ಇರುವಂತೆ ಹೆಚ್ಚಿನ ನೀರು ಹೊರಗೋಗುವಂತೆ ವೈಜ್ಞಾನಿಕ ಹಿನ್ನೆಲೆಯಿಂದ ಈ ಕೊಳ ನಿರ್ಮಾಣಗೊಂಡಿದೆ. ತೆಲುಗು ಬಣಜಿಗ ಜಾತಿಗೆ ಸೇರಿದ ಪಾಳೆಯಗಾರ ಜಗದೇವರಾಯ ೧೬ನೆಯ ಶತಮಾನದ ಕೊನೆಯ ಅವಧಿಯಲ್ಲಿ (೧೫೭೭) ನಾಗಮಂಗಲದ ಹೊರವಲಯದಲ್ಲಿ ನಿರ್ಮಿಸಿದ ಕೊಳ ಇದು. ಜಗದೇವರಾಯ ತನ್ನ ರಾಣಿಯೊಡನೆ ಜಲಕ್ರೀಡೆ ಆಡಲು ಉದ್ಯಾನವನ ಮಧ್ಯೆ ಇದು ನಿರ್ಮಿತವಾಗಿದೆ. ಕೊಳದ ಮಧ್ಯೆ ಒಂದು ಮಂಟಪ (ಕಲ್ಲಿನ) ಇದೆ.

ವಿಜಯನಗರದ ಶ್ರೀರಂಗ ಮತ್ತು ಗೊಲ್ಕೊಂಡದ ದೊರೆಗಳ ಮಧ್ಯೆ ನಡೆದ ಯುದ್ಧದಲ್ಲಿ ಜಗದೇವರಾಯ ಪೆನುಗೊಂಡೆಯನನ್ನು ರಕ್ಷಿಸಿದ. ಯುದ್ಧದ ವಿಜಯೋತ್ಸವದ ಕಾಣಿಕೆಯಾಗಿ ವಿಜಯನಗರದ ಅರಸ ನಾಗಮಂಗಲ ಪ್ರದೇಶದ ಒಡೆತನವನ್ನು ಜಗದೇವರಾಯನಿಗೆ ಒಪ್ಪಿಸಿದ. ಜಗದೇವರಾಯ ಮುಂದೆ ಈ ಪ್ರದೇಶವನ್ನು ಆಡಳಿತ ಕೇಂದ್ರವನ್ನಾಗಿ ಅಭಿವೃದ್ಧಿಗೊಳಿಸಿದ. ವಿಜಯನಗರದ ವೈಭವವನ್ನೆಲ್ಲ ತಾನಾಳುತ್ತಿದ್ದ ಈ ಪ್ರದೇಶದಲ್ಲಿ ಅಳವಡಿಸಲು ಪ್ರಯತ್ನಿಸಿದ. ಅದರ ಫಲವೇ ಈ ಚಕ್ರಕೊಳ ಎಂದು ಹೇಳುತ್ತಾರೆ ಇತಿಹಾಸ ತಜ್ಞರು.

ಬೊಮ್ಮಲಾಪೂರ : ವಿಷ್ಣುವರ್ಧನನ ರಾಣಿ ಬೊಮ್ಮಲಾದೇವಿ ನಾಗಮಂಗಲದ ಶಂಕರನಾರಾಯಣ ದೇವಾಲಯವನ್ನು ಜೀರ್ಣೋದ್ಧಾರ ಮಾಡಿಸಿದಂತೆ. ಈಕೆ ನಾಗಮಂಗಲ ತಾಲ್ಲೂಕಿನ ಬೊಮ್ಮಲಾಪುರದವಳೆಂಬ ಕಾರಣಕ್ಕೆ ಈ ಊರಿಗೆ ಬೊಮ್ಮಲಾಪುರ ಎಂಬ ಹೆಸರು ಬಂತೆಂದು ಸ್ಥಳ ಕಥೆ ಇದೆ.

ಅಳಿಯಸಂದ್ರ : ಮರಿಯಣ್ಣ ದಂಡನಾಯಕ ನಾಗಮಂಗಲ ತಾಲ್ಲೂಕಿನ ಅಳಿಯಸಂದ್ರದವನು. ಈತನ ಹೆಣ್ಣು ಮಕ್ಕಳನ್ನು ಹೊಯ್ಸಳ ಬಲ್ಲಾಳ ಮದುವೆಯಾಗಿ ಈ ಊರಿಗೆ ಅಳಿಯನಾದ್ದರಿಂದ ಅದಕ್ಕೆ ಈ ಹೆಸರಾಯಿತು. ಅಳಿಯ ಸಮುದ್ರ ಅಳಿಯಸಂದ್ರವಾಯಿತು.

ಸ್ಥಳನಾಮಗಳ ಅಧ್ಯಯನ, ಸಂಶೋಧನ ಮಹಾಪ್ರಬಂಧವಾಗುವಷ್ಟು ವಿಶಾಲ ಹರವುಳ್ಳ ಕ್ಷೇತ್ರ. ಹಾಗಾಗಿ ಈ ನಿಟ್ಟಿನಲ್ಲಿ ಇನ್ನೂ ಹೆಚ್ಚಿನ ಅಧ್ಯಯನ ನಡೆಯಬೇಕಿದೆ. ಈವೆರೆಗೆ ನಾಗಮಂಗಲದ ಸುತ್ತಮುತ್ತಲಿನ ಕೆಲವು ಸ್ಥಳನಾಮಗಳನ್ನು ಪರಿಶೀಲಿಸಲಾಯಿತು. ಇವುಗಳಿಗೆ ಸಂಬಂಧಿಸಿದ ಐತಿಹ್ಯಗಳನ್ನು ಹೀಗೆ ಹೇಳಬಹುದು.

೧. ದಟ್ಟಾರಣ್ಯವಾಗಿದ್ದು ಪ್ರದೇಶವನ್ನು ವಾಸಯೋಗ್ಯವಾಗುವ ಸ್ಥಳವಾಗಿ ಮಾರ್ಪಡಿಸಿದ್ದು, ೨. ಆ ಪ್ರದೇಶಕ್ಕೆ ಮೊದಲು ಬಂದ ವ್ಯಕ್ತಿಯ ಹೆಸರೇ ಆ ಊರಿನ ಹೆಸರಾಗಿರುವುದು. ೩. ಅಲ್ಲಿಯ ಸ್ಥಳೀಯ ದೇವತೆಯ ಹೆಸರೇ ಆ ಊರಿಗಿರುವುದು. ೪. ನಾಗಮಂಗಲ, ಚುಂಚನಗಿರಿ, ಮಾಚಲಘಟ್ಟ ಇತ್ಯಾದಿ ಸ್ಥಳಗಳನ್ನು ಕುರಿತಂತೆ ಐತಿಹಾಸಿಕ, ಪೌರಾಣಿಕ ಕಥೆಗಳಿದ್ದರೆ, ಉಳಿದ ಊರುಗಳಿಗೆ ಸಾಮಾಜಿಕವಾದ ಅಂಶಗಳಿವೆ. ೫. ಇಲ್ಲಿಯ ಊರುಗಳು ಬೆಟ್ಟ, ಕೋಟೆ, ಗಿರಿ, ಘಟ್ಟ, ಕಾವಲ್, ಕೊಪ್ಪ, ಕೆರೆ, ಸಂದ್ರ, ಮಡು, ಪುರ, ಹಳ್ಳಿ ಎಂಬ ಉಪಸರ್ಗಗಳನ್ನು ಹೊಂದಿವೆ.

ಮಡು, ಸಂದ್ರ, ಕೆರೆ, ಗೆರೆ ಇತ್ಯಾದಿ ಉಪಸರ್ಗಗಳು ನೀರಿನ ಸಮೃದ್ಧತೆಯನ್ನು ಹಾಗೂ ನೀರಿರುವ ಪ್ರದೇಶವನ್ನು ಸೂಚಿಸುವಂತವು. ಗಿರಿ, ಘಟ್ಟಗಳೆಂಬ ಉಪಸರ್ಗಗಳು ಎತ್ತರವಾದ ಬೆಟ್ಟಗುಡ್ಡಗಳನ್ನು ಸೂಚಿಸಿದರೆ, ಕೋಟೆ ಎಂಬುದು ಕೋಟೆ ಗೋಡೆಯಿಂದ ಕೂಡಿದ ಐತಿಹಾಸಿಕ ಅಂಶಗಳನ್ನು ತಿಳಿಸುತ್ತದೆ. ಒಟ್ಟಾರೆ ಭೂಸೂಚಿ, ಜಲಸೂಚಿ, ಶಿಲಾಸೂಚಿ, ಅಡವಿಸೂಚಿ, ಸಸ್ಯಸೂಚಿ, ವ್ಯಕ್ತಿನಾಮಸೂಚಿ ಸ್ಥಳನಾಮಗಳು ನಾಗಮಂಗಲದಲ್ಲಿ ಕಂಡು ಬರುತ್ತವೆಂದು ಹೇಳಬಹುದು.

ಗ್ರಾಮದೇವತೆಗಳಿಗೆ ಸಂಬಂಧಿಸಿದ ಐತಿಹ್ಯಗಳು

ಮುಳಕಟ್ಟಮ್ಮ : ಮುಳಕಟ್ಟೆಯ ಗೌಡರ ಮನೆಯಲ್ಲಿ ಅಪಾರ ರಾಸುಗಳಿದ್ದವಂತೆ. ಅವರ ಆಳು ದಿನ ದನಗಳನ್ನು ಮೇಯಿಸಲು ಸೀಗೆಮಳೆಗೆ ಹೋಗುತ್ತಿದ್ದ. ಗೌಡರ ಮನೆಯ ಹಸುಗಳ ಪೈಕಿ ಒಂದು ಹಸು ಮಾತ್ರ ಹಾಲು ಕೊಡುತ್ತಿರಲಿಲ್ಲವಂತೆ. ಹಸು ಮೇಯಿಸುತ್ತಿದ್ದ ಆಳಿನ ಮೇಲೆ ಗೌಡನಿಗೆ ಅನುಮಾನ ಬಂದು ಅವನಿಗೆ ಹೊಡೆದುಬಡಿದು ಹಿಂಸೆಕೊಟ್ಟ. ಆಳಿಗೆ ತುಂಬಾ ಬೇಸರವಾಗಿ ಹಾಲು ಕೊಡದ ಆ ಹಸುವನ್ನು ಹಿಂಬಾಲಿಸಿದ. ಅದು ಹುತ್ತದ ಬಾಯಿಗೆ (ಕೋವೆಗೆ) ಹಾಲು ಕರೆಯುತ್ತಿದ್ದುದ್ದನ್ನು ಕಂಡು ಹಸು ಕಡಿದು ಎಳೆದ. ಹುತ್ತದಲ್ಲಿ ವಾಸವಾಗಿದ್ದ ದೇವತೆ ಕೋಪಗೊಂಡು ಹುತ್ತದಿಂದ ಹೊರಕ್ಕೆ ಬಂದು ತನ್ನ ಕ್ರೂರ ದೃಷ್ಟಿ ಬೀರಿದಳು. ಅವಳ ಕೆಂಗಣ್ಣನ್ನು ಕಂಡ ಗೌಡರ ಮನೆಯ ಆಳು ಹೆದರಿ ತನ್ನನ್ನು ಕಾಪಾಡುವಂತೆ ಬೇಡಿಕೊಂಡ. ಆ ತಾಯಿ ಸುಪ್ರೀತಳಾಗಿ ತಾನು ಅಲ್ಲಿರುವ ವಿಚಾರವನ್ನು ಯಾರಿಗೂ ಹೇಳಕೂಡದು. ಒಂದು ವೇಳೆ ಹೇಳಿದರೆ ನಿನ್ನ ತಲೆ ಸಹಸ್ರ ಹೋಳಾಗುತ್ತದೆಂದು ಹೇಳುತ್ತಾಳೆ. ಆ ದಿನ ಸಂಜೆ ಮನೆಗೆ ಹೋದ ಮೇಲೆ ಆ ಹಸು ಚೆನ್ನಾಗಿ ಹಾಲು ಕರೆಯುತ್ತದೆ. ಗೌಡನಿಗೆ ಆಳಿನ ಮೇಲೆ ಅನುಮಾನವುಂಟಾಗುತ್ತದೆ. ನಿಜ ಹೇಳುವಂತೆ ಗೌಡ ಸತಾಯಿಸುತ್ತಾನೆ. ಆದರೆ ಆಳು ಹೇಳುವುದಿಲ್ಲ. ಗೌಡ ಕೆಲಸ ಬಿಡಿಸಿ ತನ್ನ ಮನೆಯಿಂದ ಹೊರಗೆ ಅಟ್ಟುತ್ತಾನೆ. ಮನೆಗೆ ಹೋದ ಮೇಲೆ ಆ ಹುಡುಗನ ತಾಯಿ ನಿಜ ಹೇಳುವಂತೆ ಒತ್ತಾಯ ಮಾಡುತ್ತಾಳೆ. ಆಗ ಅವನು ಸೀಗೆಮೆಳೆ ಹತ್ತಿರ ಒಂದು ಗುಂಡಿ ತೋಡಿಸಿ, ತಾನು ಸತ್ತರೆ ಇದರಲ್ಲಿ ಹೂತು ಹಾಕಿ ಎಂದು ಹೇಳಿ, ಊರಿನವರನ್ನೆಲ್ಲಾ ಕರೆಸಿ, ಎಲ್ಲರ ಎದುರಿಗೆ ತಾನು ಕಂಡ ದೇವತೆಯ ವಿಚಾರ ಹೇಳುತ್ತಾನೆ. ಅವನ ತಲೆ ಸಿಡಿಯುತ್ತದೆ. ಅವನನ್ನು ಆ ಗುಂಡಿಯಲ್ಲೇ ಹೂಳುತ್ತಾರೆ. ಇಲ್ಲಿ ಒಂದು ಕಂಬ ಇದೆ. ಅದನ್ನು ರಣಗಂಬ, ತೋರಣಗಂಬ ಎಂದು ಕರೆಯುತ್ತಾರೆ. ಜಾತ್ರೆ ಸಂದರ್ಭದಲ್ಲಿ ಈ ಕಂಬಕ್ಕೆ ವಿಶೇಷ ಪೂಜೆ, ಬಲಿ ಆಗುತ್ತದೆ. ಮುಳಕಟ್ಟಮ್ಮ ಅಥವಾ ಆ ಹುತ್ತದೆ ದೇವತೆ ಹುಚ್ಚಮ್ಮನಿಗೂ ಪೂಜೆ ಮಾಡಲು ಆರಂಭಿಸಿದರು. ಈ ಅಮ್ಮನಿಗೆ ಊರಿಕಾರೇಶ್ವರಿ, ವುಮ್ಮತ್ತೂರಮ್ಮ ಎಂಬ ಬೇರೆ ಬೇರೆ ಹೆಸರುಗಳಿವೆಯಂತೆ.

 

ಇನ್ನೊಂದು ಐತಿಹ್ಯದ ಪ್ರಕಾರ ಚಾಮರಾಜನಗರದ ಕಡೆಯಿಂದ ವಲಸೆ ಬಂದ ನರಭಕ್ಷಕಿ ದೇವತೆಯದು. ಈ ದೇವತೆಯನ್ನು ಪೂಜಿಸುತ್ತಿದ್ದವರು ತಮಗೂ ಉಳಿಗಾಳವಿಲ್ಲವೆಂದು ತಲೆಮರೆಸಿಕೊಂಡು ನಾಗಮಂಗಲದ ಕಡೆ ಬಂದು ನೆಲೆಸಿದರು. ಆ ದೇವತೆ ಇವರನ್ನು ಬಿಡದೆ ಗುಂಡುಕಲ್ಲು ರೂಪದಲ್ಲಿ ಬೆನ್ನಟ್ಟಿ ಬಂದಳು. ಇವರು ಈ ಗುಂಡುಕಲ್ಲನ್ನು ಮುಳುಕಟ್ಟೆಯ ಸೀಗೆಮಳೆಗೆ ಎಸೆದರು. ಆ ದೇವತೆ ಅಲ್ಲೇ ನೆಲೆನಿಂತಳು.

ಸೋಮನಹಳ್ಳಿ ಅಮ್ಮ : ಸೋಮನ ಹಳ್ಳಿಯಲ್ಲಿ ಒಬ್ಬ ಬೊಮ್ಮನಾಯಕ ಅಂತ ಪಾಳೇಗಾರ ಇದ್ದ. ಅವನ ಮಗಳು ಸೋಮನಾಯಕಿ. ಇವನ ಸೇನಾನಿ ತಿಮ್ಮನಾಯಕ. ಇವನ ಮಗ ಇಮ್ಮಡಿದಾಸ. ಪಾಳೇಗಾರನ ಮಗನೂ ಸೇನಾನಿ ಮಗಳೂ ಒಟ್ಟಿಗೆ ಬೆಳೆದ್ರು. ಈ ಹುಡುಗಿಗೆ ನಾಗಮಂಗಲದ ಪಾಳೇಗಾರನ ಜೊತೆ ಮದುವೆ ಆಯಿತು. ಸೋಮನಾಯಕಿ ಗಂಡನ ಮನೆಗೆ ಹೋಗುವಾಗ ಅಲ್ಲಿಂದ ಬರುವಾಗ ಯಾವಾಗಲೂ ಈ ಇಮ್ಮಡಿದಾಸನೇ ಗಾಡೀಲಿ ಜೊತೇಲಿ ಹೋಗ್ತಿದ್ದ. ಇವನು ತುಂಬಾ ಪರಾಕ್ರಮಿ. ಇವನು ಹುಲ್ಲು ಮೆದೆಯನ್ನು ಕಂಕುಳಲ್ಲಿ ಇರಿಸಿಕೊಂಡು ಬರುತ್ತಿದ್ದನಂತೆ.

ಹೀಗೆ ಇದ್ದಾಗ ಈ ಇಮ್ಮಡಿದಾಸನಿಗೆ ದುರಾಲೋಚನೆ ಬಂತು. ಹೇಗೂ ಈ ಬೊಮ್ಮನಾಯಕನಿಗೆ ಗಂಡು ಮಕ್ಕಳಿಲ್ಲ. ಇವನನ್ನು ಕೊಂದು ತಾನೇ ಸೋಮನಹಳ್ಳಿಗೆ ಪಾಳೇಗಾರನಾಗಬೇಕೆಂದು ಆಸೆಪಟ್ಟ. ಸೋಮನಾಯಕಿಯನ್ನು ಹಬ್ಬಕ್ಕೆಂದು ಕರೆತರುವಾಗ ಸೋಮನಹಳ್ಳಿಯ ಪಶ್ಚಿಮದಿಕ್ಕಿನಲ್ಲಿರುವ ಗುಹೆಯೊಂದರಲ್ಲಿ ಅವಳನ್ನು ಬಚ್ಚಿಟ್ಟ. ಇವನ ದುಷ್ಟಬುದ್ದಿ ತಿಳಿದ ಸೋಮನಾಯಕಿ ಅವನ ಜೊತೆ ಪ್ರೀತಿ ಇರುವಂತೆ ನಟನೆ ಮಾಡಿ ತಾನೊಂದು ಪೂಜೆ ಮಾಡುತ್ತಿರುವುದಾಗಿಯೂ, ಅದು ಮುಗಿಯುವ ತನಕ ತನ್ನನ್ನು ಮುಟ್ಟಬಾರದೆಂದು ಹೇಳಿದಳು. ಅದಕ್ಕೆ ಅವನೂ ಒಪ್ಪಿದ.

ಬೊಮ್ಮನಾಯಕನ ಕೋಟೆಗೆ ಎಲ್ಲಿಂದಲೋ ಬಂದ ಕಾಗೆಯೊಂದು ಊರಿನ ಬಸವಣ್ಣನನ್ನು ಕೊಂದುಹಾಕಿತು. ಸತ್ತ ಬಸವನನ್ನು ಕತ್ತರಿಸಿ ಆ ಊರಿನ ಮಾದಿಗರು ಬಾಡನ್ನು ಹಂಚಿಕೊಳ್ಳುತ್ತಿದ್ದ ಕಡೆಗೆ ಮೂರು ಜನ ಹೊಲೆಯ ಹುಡುಗರು ಹಸಿವಿನಿಂದ ಕಂಗೆಟ್ಟು ಬಂದರು. ತಮಗೂ ಸ್ವಲ್ಪ ಆ ಮಾಂಸ ಕೊಡಿ ಎಂದು ಕೇಳಿದರು. ಆದರೆ ಅವರು ಕೊಡಲಿಲ್ಲ. ಇವರು ಮೂರು ಜನ ಸೇರಿ ಅವರನ್ನೆಲ್ಲಾ ಹೊಡೆದು ಓಡಿಸಿ ಆ ಬಸವನ ಚರ್ಮದಲ್ಲೇ ಮಾಂಸಕಟ್ಟಿಕೊಂಡು ಹೋಗಿ ತಿಂದು ಹಸುವು ಇಂಗಿಸಿಕೊಂಡರು. ಇದನ್ನು ಕೇಳಿದ ಬೊಮ್ಮನಾಯಕ ಇವರನ್ನು ಕರೆಸಿ ಆ ಮಾರೀಚ ಕಾಗೆಯನ್ನು ಕೊಲ್ಲಿಸಿ ಮಗಳನ್ನು ಬಿಡಿಸಿಕೊಂಡು ಬರುವ ಕೆಲಸ ವಹಿಸಿಕೊಟ್ಟ. ಈ ಮೂವರು ಹುಡುಗರು ಕಾಡಿನಲ್ಲೆಲ್ಲಾ ಅಲೆಯುತ್ತಿದ್ಧಾಗ  ಹೂ ಕುಯ್ಯುತ್ತಿದ್ದ ಮುದುಕಿಯೊಬ್ಬಳನ್ನು ಕಂಡು ಅವಳ ಮೂಲಕ ಸೋಮಮ್ಮನ ವಿಷಯ ತಿಳಿದುಕೊಂಡರು. ಇಮ್ಮಡಿದಾಸ ಬರುವ ಜಾಗದಲ್ಲಿ ಒಂದು ಇಳಿಜಾರಾದ ಬಂಡೆ ಇತ್ತು. ಅದಕ್ಕೆ ಎಣ್ಣೆ ಸವರಿ ಬಂಡೆ ಕೆಳಗೆ ಇವರು ಕಾಯುತ್ತಾ ಕುಳಿತರು. ಅವನು ಬಂದವನೆ ಬಂಡೆ ಮೇಲೆ ಕಾಲಿಟ್ಟ ಕೂಡಲೇ ಜಾರಿ ಕೆಳಗೆ ಬಿದ್ದ. ತಕ್ಷಣ ಅವನ ಕಾಲುಗಳನ್ನು ಕಡಿದು. ಕೈಕಾಲು ಸೇರಿಸಿ ಕಟ್ಟಿ ಸೋಮನಾಯಕಿಯನ್ನು ಬಿಡಿಸಿಕೊಂಡು ಅವನನ್ನು ಹೊತ್ತುಕೊಂಡು ಕೋಟೆ ಬಾಗಿಲಿಗೆ ಬಂದು ನಾಯಕನಿಗೆ ಸುದ್ದಿ ಮುಟ್ಟಿಸಿದರು. ಅಲ್ಲಿಗೆ ಬಂದ ಬೊಮ್ಮನಾಯಕ ಇಬ್ಬರನ್ನು ಬೆಂಕಿಗೆ ನೂಕಿ ಎಂದ. ಅವರು “ನಿಮ್ಮ ಹೆಣ್ಣು ಮಕ್ಕಳು ಹೆಸರೆತ್ತದಿರಲಿ” ಎಂದು ಕೆಂಡಕ್ಕೆ ಹಾರಿದಳು. ಈ ಮೂರು ಜನರಿಗೆ ಹರಕೆಗೆ ಬಂದ ಮರಿಗಳನ್ನು ಪಡೆಯುವಂತೆ ಹೇಳಿ ಅವರಿಗೆ ಕತ್ತಿ ಗುರಾಣಿಗಳನ್ನು ಕೊಟ್ಟನಂತೆ. ಇಂದೂ ಈ ವಂಶದವರ ಮನೆಗಳಲ್ಲಿ ಇದನ್ನು ಇಟ್ಟು ಪೂಜೆ ಮಾಡುವ ಪದ್ಧತಿ ಇದೆಯಂತೆ. ಸೋಮನಾಯಕಿಯ ಆಟದ ಗೊಂಬೆಗಳನ್ನು ಸೋಮನಹಳ್ಳಿ ಅಮ್ಮನೆಂದು ಪೂಜಿಸುತ್ತಾರೆ. ಸುತ್ತಮುತ್ತಲಿನ ಊರಿನವರು ಈ ದೇವತೆಯ ಹಬ್ಬಕ್ಕೆ ಬರುತ್ತಾರೆ. ಸೋಮನಾಯಕಿಯ ಶಾಪದಿಂದ ಆ ಊರಿನಲ್ಲಿ ಹೆಣ್ಣುಮಕ್ಕಳಿಗೆ ಉಳಿಗಾಲವಿಲ್ಲದಂತಾಯ್ತು. ಹಾಗಾಗಿ ಈ ಊರಿನ ಗರ್ಭಿಣಿ ಹೆಂಗಸರನ್ನು ಬೇರೆ ಊರಿನಲ್ಲಿ ಹೆರಿಗೆ ಮಾಡಿಸಿ ಕರೆತರುತ್ತಿದ್ದರಂತೆ.

ಗ್ರಾಮದೇವತೆಗಳ ಅಧ್ಯಯನ ಇನ್ನೂ ನಡೆಯಬೇಕಾಗಿದೆ. ಇದೊಂದು ವಿಶಾಲವಾದ ಕ್ಷೇತ್ರಾಧ್ಯಯನ. ನಾಗಮಂಗಲದ ಸ್ಥಳನಾಮಗಳ ಬಗೆಗಿರುವ ಐತಿಹ್ಯಗಳಿಗೂ ಗ್ರಾಮದೇವತೆಗಳ ಬಗೆಗಿರುವ ಐತಿಹ್ಯಗಳಿಗೂ ಕೆಲವು ವಿಷಯಗಳಲ್ಲಿ ಹೋಲಿಕೆಗಳಿವೆ. ಬೇರೆಡೆಯಿಂದ ನಾಗಮಂಗಲಕ್ಕೆ ವಾಸ್ತವ್ಯಕ್ಕಾಗಿ ಬಂದ ವ್ಯಕ್ತಿ ಅಥವಾ ಕುಟುಂಬದ ದೇವತೆಗಳಿಗಾಗಿ ವಲಸೆ ಬಂದಂಥವು ಕೆಲವು. ಇನ್ನು ಕೆಲಸು ಸ್ಥಳೀಯ ದೇವತೆಗಳು. ಇನ್ನು ಕೆಲವು ಪ್ರತಿಷ್ಠಾಪನೆ ಮಾಡಿದ ದೇವತೆಗಳು ನಾಗಮಂಗಲದಲ್ಲಿವೆ.

ಕೆರೆಗಳಿಗೆ ಸಂಬಂಧಿಸಿದ ಐತಿಹ್ಯಗಳು :

ಸೂಳೆಕೆರೆ: ನಾಗಮಂಗಲದ ಪಟ್ಟಣದ ಪೂರ್ವಕ್ಕೆ ಇರುವ ಈ ಕೆರೆ ಐತಿಹಾಸಿಕವಾಗಿ ಅದರದೇ ಆದ ವೈಶಿಷ್ಟ್ಯವನ್ನು ಪಡೆದುಕೊಂಡಿದೆ. ತಿಮ್ಮಣ್ಣನಾಯಕನೆಂಬ ಪಾಳೆಯಗಾರ ಒಬ್ಬ ವೇಶ್ಯೆಯನ್ನು ಈ ಪ್ರದೇಶದ ಗುಡ್ಡದ ಬಂಡೆಕಲ್ಲಿನ ಮೇಲಿನ ಗುಹೆಯೊಳಗಿಟ್ಟುಕೊಂಡಿದ್ದನು. ಆ ಬಂಡೆಯ ಮೇಲೆ ಇಂದಿಗೂ ಪಾಳು ಮಂಟಪವಿದೆ. ನಾಗಮಂಗಲ ಪಟ್ಟಣದ ಸುತ್ತಮುತ್ತಲೂ ಕೆರೆಗಳಿವೆ. ಅದರಲ್ಲಿ ಈ ಕೆರೆಯೂ ಒಂದು. ವ್ಯವಸಾಯಕ್ಕೆ ಈ ಕೆರೆಯಿಂದ ನೀರು ಪೂರೈಕೆಯಾಗುತ್ತಿತ್ತು.

ಈ ಕೆರೆಯಲ್ಲಿ ಎಷ್ಟು ನೀರು ಬಂದರೂ ನಿಲ್ಲುತ್ತಿರಲಿಲ್ಲ. ಇದರಿಂದ ರಾಜನಿಗೆ ಚಿಂತೆ ಉಂಟಾಯಿತು. ಒಮ್ಮೆ ಅವನ ಕನಸಿನಲ್ಲಿ ಈ ಕೆರೆಯಲ್ಲಿ ನೀರು ನಿಲ್ಲಬೇಕಾದರೆ ನೀನು ಬೆಟ್ಟದಲ್ಲಿ ಇಟ್ಟುಕೊಂಡಿರುವವಳನ್ನು ಕೆರೆಗೆ ಬಲಿಕೊಟ್ಟರೆ ನೀರು ನಿಲ್ಲುತ್ತದೆ ಎಂದು ನುಡಿದಂತಾಯಿತು. ರಾಜ ಬೇಸತ್ತು ಅವಳ ಮನೆಯಲ್ಲಿ ಚಿಂತೆಯಿಂದ ಕುಳಿತಿರಲು ವೇಶ್ಯೆ ರಾಜನ ಚಿಂತೆಗೆ ಕಾರಣವೇನೆಂದು ಕೇಳಿದಾಗ ತನ್ನನ್ನು ಕೆರೆಗೆ ಬಲಿಕೊಡಬೇಕೆಂಬ ವಿಚಾರ ಕೇಳಿ ಅವಳೇ ಮನಸಾರೆ ಒಪ್ಪಿ ಚಿಂತೆ ಮಾಡಬೇಡಿ ಎಂದು ತಿಳಿಸಿ ಕೆರೆಯಲ್ಲಿ ಜೀವಂತ ಸಮಾಧಿಯಾದಳು. ಈಕೆ ಸಮಾಧಿಯಾಗುವ ಮೊದಲು “ಈ ಕೆರೆಯಲ್ಲಿ ಮಕ್ಕಳಿಲ್ಲದವರು ಸ್ನಾನ ಮಾಡಿದರೆ ಅವರಿಗೆ ಸಂತಾನವಾಗಲಿ” ಎಂದು ಹೇಳಿದಳು. ಈ ರೀತಿ ಕೆರೆ ನೀರಿನ ಉಳಿವಿಗಾಗಿ ತನ್ನನ್ನು ಅರ್ಪಿಸಿಕೊಂಡ ಅವಳ ನೆನಪಿನಲ್ಲೇ ಸೂಳೆಕೆರೆ ಇದೆ. ಸ್ವ- ಇಚ್ಛೆಯಿಂದ ಲೋಕ ಕಲ್ಯಾಣಕ್ಕೆ ಹೆಣ್ಣೊಬ್ಬಳು ತನ್ನನ್ನು ಅರ್ಪಿಸಿಕೊಂಡ ಸಂದರ್ಭವಿದು.

ಇದು “ಕೆರೆಗೆ ಹಾರ” ಎಂಬ ಜಾನಪದ ಕಥನ ಗೀತೆಯನ್ನು ನೆನಪಿಗೆ ತರುತ್ತದೆ. “ಕೆರೆಗೆ ಹಾರ” ತನಗೆ ಇಷ್ಟವಿಲ್ಲದಿದ್ದರೂ ಕಷ್ಟದಿಂದ ಹಾರವಾದ ಕಥೆ. ಹೆಣ್ಣನ್ನೇ ಬಲಿಕೊಡುವ ಅನೇಕ ಪ್ರಸಂಗಗಳು ಸಮಾಜದಲ್ಲಿರುವುದು ಸರ್ವವಿಧಿತ. ಅಂತಹ ಕಥೆಗಳ ಪೈಕಿ ಇದೂ ಒಂದು.

ಇನ್ನೊಂದು ಐತಿಹ್ಯದ ಪ್ರಕಾರ ತಿಮ್ಮಣ್ಣ ದಂಡನಾಯಕ ತನ್ನ ಪ್ರೇಯಸಿಗಾಗಿ ಆಕೆಯ ಹೆಸರಿನಲ್ಲಿ ಕಟ್ಟಿಸಿದ ಕೆರೆ ಇದು. ಗುಡ್ಡದ ಮೇಲೆ ವಿಹಾರಕ್ಕೆಂದು ಮಂಟಪವೊಂದನ್ನು ಕಟ್ಟಿಸಿದ. ಅದಕ್ಕೆ “ಸೂಳೆಮಂಟಪ” ಎಂದು ಹೆಸರಿತ್ತು. ಆದರೆ ಈ ಹೆಸರಿನಿಂದ ಕರೆಯುವುದು ಸರಿಯಲ್ಲವೆಂದು ಆ ಗುಡ್ಡಕ್ಕೆ ಇತ್ತೀಚಿಗೆ “ಗೆಳತಿಗುಡ್ಡ” ಎಂದು ಹೆಸರಿಟ್ಟಿದ್ದಾರೆಂದು ತಿಳಿದು ಬರುತ್ತದೆ.

ಒಟ್ಟಾರೆ ಹೇಳುವುದಾದರೆ ನಾಗಮಂಗಲದ ಸುತ್ತಮುತ್ತಲಿನ ಕೆರೆಗಳು ತಾಯಿಯ ಹೆಸರಿನಲ್ಲಿ, ಪ್ರೇಯಸಿಯ ಹೆಸರಿನಲ್ಲಿ ಕಟ್ಟಿದಂಥವು. ಚಕ್ರಕೊಳವೊಂದು ಮಾತ್ರ ಪೌರಾಣಿಕ ಹಿನ್ನೆಲೆಯುಳ್ಳವಂಥದ್ದು. ಇನ್ನುಳಿದವರು ಸಾಮಾಜಿಕ ಹಿನ್ನೆಲೆಯವು, ಹಿನ್ನಲೆಗಳೇನೆ ಇರಲಿ ಜನಹಿತಕ್ಕಾಗಿ ಕೆರೆಕಟ್ಟೆಗಳು ನಿರ್ಮಾಣಗೊಂಡಿರುವುದಂತೂ ಸತ್ಯಸಂಗತಿ.

ಜಾನಪದ ಸಾಹಿತ್ಯ

ಮಾಖಿಕ ಆಕರಗಳಲ್ಲಿ ಜಾನಪದ ಕಥೆ, ಗೀತೆ, ಗಾದೆ, ಒಗಟುಗಳೂ ಸೇರುತ್ತವೆ. ಜಾನಪದದ ದೃಷ್ಠಿಯಿಂದ ನಾಗಮಂಗಲ ಅತ್ಯಂತ ಮಹತ್ವವನ್ನು ಪಡೆದಿದೆ. ಜಾನಪದ ಕ್ಷೇತ್ರದ ದಿಗ್ಗಜರಲ್ಲಿ ಮೂರುನಾಲ್ಕು ಜನ ಈ ಜಿಲ್ಲೆಯವರು. ನಾಗಮಂಗಲದ ಜಾನಪದ ಸಾಹಿತ್ಯ ಮಂಡ್ಯ ಜಿಲ್ಲೆಗಿಂತ ಹೊರತಾದುದೇನಲ್ಲ. ಕಥೆ, ಗೀತೆ, ಗಾದೆ, ಒಗಟುಗಳೆಲ್ಲ ಮಂಡ್ಯ ಜಿಲ್ಲಯಲ್ಲಿರುವಂಥವೆ.

ಜಾನಪದ ಗೀತೆ : ನಾಗಮಂಗಲದ ಉಲ್ಲೇಖ ಕೆಲವು ಜನಪದ ಗೀತೆಗಳಲ್ಲಿವೆ. ಚುಂಚನಗಿರಿ ಸಂಬಂಧಿಸಿದ ಜನಪದ ಗೀತೆಗಳಲ್ಲಿ ನಾಗಮಂಗಲದ ಹೆಸರು ಇದ್ದೇ ಇರುತ್ತದೆ.

ಭೈರವ ಎಲ್ಲಿದ್ದಾನೆಂಬುದನ್ನು ಜನಪದರು “ಎಲ್ಲವನೆಲ್ಲವನೆಂದು” ಹಾಡುತ್ತಾ ;

ನಾಗಮಂಗಲದಾಚೆ ಬೆಳ್ಳೂರು ಬಯಲಾಚೆ
ಆಚೆ ಬೀರಳ್ಳಿ ಕೆರೆಯಾಚೆ – ಭೈರವನ
ದೊರೆತನ ಆದಿಚುಂಚನ ಗಿರಿಯಲಿ

ಎಂದಿದ್ಧಾರೆ ಜನಪದರು, ಅವನ ದೊರೆತನ ಆದುಚುಂಚನಗಿರಿಯಲ್ಲಿ ಎಂಬುದನ್ನು ಇಲ್ಲಿ ಸೂಚಿಸಲಾಗಿದೆ. ಆದುಚುಂಚನಗಿರಿ ಎಲ್ಲಿದೆ ಎಂಬುದನ್ನು ಸೂಚಿಸಲು ನಾಗಮಂಗಲವನ್ನೂ ಬೆಳ್ಳೂರನ್ನೂ ಸೇರಿಸಿ ಹಾಡಲಾಗಿದೆ.

ಭೈರವ “ಚುಂಚನಕಟ್ಟೆಯಿಂದ ಬಡಗಲ ಸೀಮಿಂದ ಬಂದ ಪಂಚಮುಖದ ಗೋರುಗೆಂಪಿನ ಪರದೇಸಿ” ಚುಂಚನಗಿರಿಯಲ್ಲಿ ಬಂದು ನೆಲೆನಿಂತ ವಿಚಾರವನ್ನು ಹೇಳಲಾಗಿದೆ. ಅವನಿಗೆ ಭಕ್ತರು ಸಿರಿಮಠ ಕಟ್ಟಿದ ವಿಚಾರವೂ ಜನಪದ ಗೀತೆಗಳಲ್ಲಿ ಅಭಿವ್ಯಕ್ತವಾಗಿದೆ.

ನಾಗಮಂಗಲ ಕುರಿತ ಗಾದೆಗಳು

ನಾಗಮಂಗಲದ ಉಲ್ಲೇಖವಿರುವ ಒಂದೆರಡು ಗಾದೆಗಳು ಲಭ್ಯವಿರುವುದರಿಂದ ಅವುಗಳನ್ನು ಇಲ್ಲಿ ಪರಿಶೀಲಿಸಲಾಗಿದೆ.

“ನಾಗಮಂಗಲಕ್ಕೆ ನಾಲಗೆಯೇ ದಾರಿ ”

ಭೌಗೋಳಿಕವಾಗಿ ನೋಡಿದಾಗ ಸಾರಿಗೆ ಸಂಪರ್ಕಗಳಿಲ್ಲದ ಕಾಲದಲ್ಲಿ ಈ ಗಾದೆ ಹುಟ್ಟಿಕೊಂಡಿರಬಹುದು. ಇಂಥ ಸಂದರ್ಭದಲ್ಲಿ ನಾಗಮಂಗಲಕ್ಕೆ ಹೋಗಬೇಕಾದ ವ್ಯಕ್ತಿಯೊಬ್ಬ ಯಾರನ್ನೋ “ನಾಗಮಂಗಲಕ್ಕೆ ದಾರಿ ಯಾವುದು ? ಎಂದು ಕೇಳಿದಾಗ ಆತನ ಮೇಲಿನ ಗಾದೆಯನ್ನು ಹೇಳಿದನೆನಪಿಸುತ್ತದೆ. ಕೇಳುತ್ತಾ ಕೇಳುತ್ತಾ ಹೋದರೆ ಯಾರಾದರೂ ದಾರಿ ತೋರಿಯಾರು ಎಂಬುದು ಇದರರ್ಥ. ಅಪರಿಚಿತ ಸ್ಥಳವೊಂದಕ್ಕೆ ಹೋಗುವ ಅನಿವಾರ್ಯತೆ ಒದಗಿಬಂದಾಗ ಮೌನವಾಗಿರದೆ ಬಾಯಿಬಿಟ್ಟು ವಿಚಾರಿಸಿದಲ್ಲಿ ತನ್ನ ಗುರಿ ಮುಟ್ಟಬಹುದೆಂಬ ಇಂಗಿತವೂ ಇಲ್ಲಿದೆ. ಓದು ಬರಹ ಹೊತ್ತಿಲ್ಲದನಿಗೆ ನಾಲಗೆಯೇ ಮಾರ್ಗಸೂಚಿಯಾಗುತ್ತದೆಂದು ಕೂಡ ಈ ಗಾದೆಯನ್ನು ಅರ್ಥೈಸಬಹುದು.

“ಕುಂತು ಕುಂತೂರ‍್ ಗೆದ್ದ ನಿಂತು ನಾಗಮಂಗಲ ಗೆದ್ದ ”

ಒಬ್ಬ ವ್ಯಕ್ತಿ ಜಾಣ್ಮೆ ಮತ್ತು ತಾಳ್ಮೆಯಿಂದ ಪ್ರತಿ ಹಂತದಲ್ಲೂ ಹೇಗೆ ವಿಜಯವನ್ನು ಸಾಧಿಸಬದಹುದೆಂಬ ಹಿನ್ನೆಲೆಯಲ್ಲಿ ಈ ಗಾದೆ ಹುಟ್ಟಿದೆ ಎನಿಸುತ್ತದೆ. ಹಿಂದಿನ ಕಾಲದಲ್ಲಿ ಪ್ರಾದೇಶಿಕವಾಗಿ ಗ್ರಾಮ ಅಥವಾ ಊರು ಆಡಳಿತ ವ್ಯವಸ್ಥೆಯ ಕೊನೆಯ ಘಟಕವಾಗಿತ್ತು. ಊರಿನ ಮುಖಂಡನನ್ನು ಗೌಡ ಎಂದು ಕರೆಯುತ್ತಿದ್ದರು. ಇವನ ಅಧೀನದಲ್ಲೇ ಊರಿನ ಅಡಳಿತವಿರುತ್ತಿತ್ತು. ಇಂಥ ವ್ಯಕ್ತಿ ಮುಂದೆ ಸ್ವತಂತ್ರ ಪಾಳೆಯಗಾರನ ಮಟ್ಟಕ್ಕೇರಿ ಸಣ್ಣ ಸೈನ್ಯ ಕಟ್ಟಿ ಸುತ್ತಮುತ್ತಲಿನ ಪ್ರದೇಶಗಳನ್ನು ತನ್ನ ತೋಳ್ಬಲ ಮತ್ತು ಜನಬಲದಿಂದ ಗೆಲ್ಲುತ್ತಿದ್ದನು. ಹೀಗೆ ಕುಂತು ಊರನ್ನು ಗೆದ್ದು ನಿಂತು ಸುತ್ತಮುತ್ತಲ ಪ್ರದೇಶವನ್ನು ಗೆದ್ದ. ಇಂಥ ಗೌಡನ ಗತ್ತನ್ನು ಗಮನಿಸಿದ ಸ್ಥಲೀಯ ಜನ ಈ ಮೇಲಿನಂತೆ ಆಡಿಕೊಂಡಿರಬಹುದು.

 

ವಿಜಯನಗರೋತ್ತರ ಕಾಲದಲ್ಲಿ ಪಾಲೆಯಗಾರಿಕೆ ವ್ಯವಸ್ಥೆ ಪ್ರವರ್ಧಮಾನಕ್ಕೆ ಬಂತು. ಈ ಕಾಲಘಟ್ಟದಲ್ಲೇ ಪ್ರಸ್ತುತ ಗಾದೆ ಹುಟ್ಟಿಕೊಂಡಿಬಹುದು. ಹದಿನಾರನೆಯ ಶತಮಾನದ ಕೊನೆಯ ಅವಧಿಯಲ್ಲಿ ಇಮ್ಮಡಿ ಜನದೇವರಾನೆಂಬಾತನ ಅಳ್ವಿಕೆಯಲ್ಲಿ ನಾಗಮಂಗಲ ಇತ್ತು. ವಿಜಯನಗರದ ಅರಸ ಶ್ರೀರಂಗ, ಯುದ್ಧದಲ್ಲಿ ಗೆದ್ದ ಕಾರಣದಿಂದ ಜಗದೇವರಾಯನಿಗೆ ಈ ಪ್ರದೇಶವನ್ನು ಕಾಣಿಕೆಯಾಗಿ ನೀಡಿರುವುದು ಐತಿಹಾಸಿಕ ಸಂಗತಿ. ಇದಕ್ಕೂ ಈ ಗಾದೆಗೂ ಸಂಬಂಧವಿರಬಹುದು. ಒಟ್ಟಾರೆ ಹೇಳುವುದಾದರೆ ಪರಾಕ್ರಮಿಯೊಬ್ಬನ ಶೌರ್ಯ ವೀರತ್ವವನ್ನು ತಿಳಿಸುವಂತದು ಮೇಲಿನ ಗಾದೆ. ಇದು ನಾಗಮಂಗಲ ಇತಿಹಾಸಕ್ಕೆ ತಳುಕು ಹಾಕಿಕೊಂಡಿರುವಂತಿದೆ.

“ನಾಚ್ಗೆ ಗೀಚ್ಗೆ ಎಲ್ಲಾ ನಾಗಮಂಗಲದಿಂದಾಚ್ಗೆ”

ನಾಚಿಕೆ ವ್ಯಕ್ತಿಯಲ್ಲಿರುವ ಸಹಜ ಸ್ವಭಾವ. ಯಾವೊಬ್ಬ ವ್ಯಕ್ತಿಯೂ ನಾಗಮಂಗದಲ್ಲಿ ನಾಚಿಕೆಯಿಂದ ಮುದುಡಿಕುಳಿತುಕೊಳ್ಳುವ ಹಾಗೆ ಇರಲಿಲ್ಲ. ಸಾಮಾಜಿಕವಾಗಿ ಮುಕ್ತವಾತಾವರಣ ಅಲ್ಲಿತ್ತು ಎಂಬುದು ಈ ಗಾದೆಯ ಅರ್ಥವಿರಬಹುದು. ಹಾಗೆಯೇ ರಾಜ ಜನರಿಗೆ ಎಲ್ಲಾ ರಂಗದಲ್ಲೂ ನಿರ್ಭಿಡೆಯಿಂದ ಪಾಲ್ಗೋಳ್ಳುವ ಅವಕಾಶವಿತ್ತಿದ್ದನೇನೋ ಎಂದೂ ಅನಿಸುತ್ತದೆ. ನಾಚಿಕೆ ಮುಜುಗರಗಳು ವ್ಯಕ್ತಿಯ ಬೆಳವಣಿಗೆಯನ್ನು ಕುಂಠಿತಗೊಳಿಸುತ್ತವೆ. ವ್ಯಕ್ತಿಯ ಸರ್ವತೋಮುಖ ಅಭಿವೃದ್ಧಿಗೆ ಸಂಕೋಚ  ಪ್ರವೃತ್ತಿ ತಕ್ಕುದಲ್ಲ ಎಂಬ ಅಂಶವೂ ಇಲ್ಲಿದೆ. ನಾಗಮಂಗಲದಲ್ಲಿರುವ ವ್ಯಕ್ತಿ ಇಂತಹ ಯಾವುದೇ ನಾಚಿಕೆಯನ್ನು ಇಟ್ಟುಕೊಳ್ಳದೆ ಅವುಗಳನ್ನೆಲ್ಲಾ ಊರಿಂದ ಆಚೆಯೇ ಬಿಟ್ಟು ಬದುಕಬೇಕು ಎಂಬ ವಿಚಾರ ಈ ಗಾದೆಯಲ್ಲಿದೆ.

ಜಾನಪದ ಸಾಹಿತ್ಯದ ಅವಲೋಕನದಿಂದ ಗೀತೆಗಳಲ್ಲಿ, ಗಾದೆಗಳಲ್ಲಿ ನಾಗಮಂಗಲದ ಉಲ್ಲೇಖಗಳಿರುವುದು ಕಂಡುಬಂದಿದೆ. ನಾಗಮಂಗಲದ ಇತಿಹಾಸದ ಪುನರ ನಿರ್ಮಾಣದಲ್ಲಿ ಅಲ್ಲಿಯ ದೇವಾಲಯಗಳು, ಕೋಟೆಯ ಅವಶೇಷಗಳು, ಕೆರೆಗಳು, ಕೊಳಗಳು, ಮೆಕೆಂಜಿ ಕೈಫಿಯತ್ತು, ಗೆಜೆಟಿಯರ, ಮೌಖಿಕವಾಗಿ ಇಂದಿಗೂ ದೊರೆಯುತ್ತಿರುವ ಜನಪದ ಗೀತೆಗಳು, ಗಾದೆಗಳು, ಐತಿಹ್ಯಗಳು ನೆರವಾಗುತ್ತವೆಂಬುದರಲ್ಲಿ ಸಂದೇಹವೇ ಇಲ್ಲ.

ವಕ್ತೃಗಳು

ಹೆಸರು ವಯಸ್ಸು ವೃತ್ತಿ ಜಾತಿ
ಕೆಂಚೇಗೌಡ ೬೦ ನಿವೃತ್ತ ಶಿಕ್ಷಕ ಕುರುಬ
ತಿರುನಾರಾಯಣ ೪೫ ಅರ್ಚಕರು ಬ್ರಾಹ್ಮಣ
ನಾರಾಯಣಶಾಸ್ತ್ರಿ ೮೫ ಅರ್ಚಕರು ಬ್ರಾಹ್ಮಣ
ಪ್ರಸನ್ನನಾಯಕಿ ಎನ್.ಕೆ. ೫೮ ಪ್ರಾಂಶುಪಾಲರು ಅಯ್ಯಂಗಾರ‍್
ಮಹಮದ್ ಕಲೀಂ ಉಲ್ಲಾ ೫೫ ಶಿಕ್ಷಕರು ಮುಸಲ್ಮಾನ
ರಾಜು ೩೦ ವ್ಯಾಪಾರಿ ನಾಯಕ
ರಾಮೇಗೌಡ ೬೦ ಕೃಷಿ ಒಕ್ಕಲಿಗ
ಶ್ರೀನಿವಾಸ ೪೫ ಸ್ವಯಂ ಸೇವಕ ಗಾಣಿಗ
ಶ್ರೀನಿವಾಸ ೪೫ ವ್ಯಾಪಾರಿ ಗಾಣಿಗ
ಸೌಮ್ಯನಾಯಕಿ ೮೦ ಗೃಹಿಣಿ ಅಯ್ಯಂಗಾರ

 

ಆಧಾರ ಗ್ರಂಥಗಳು

ಕಲಬುರ್ಗಿ ಎಂ.ಎಂ.,(ಸಂ), ೧೯೯೪ : ಕರ್ನಾಟಕದ ಕೈಫಿಯತ್ತುಗಳು, ಪ್ರಸಾರಾಂಗ, ಕನ್ನಡ ವಿ.ವಿ.,ಹಂಪಿ

ಮುಹಮ್ಮದ್ ಕಲೀಂ ಉಲ್ಲಾ (ಸಂ)., ೨೦೦೭ : ನಾಗಸಂಪಿಗೆ, ನಾಗಮಂಗಲ ತಾಲ್ಲೂಕು ಎರಡನೆಯ ಕನ್ನಡ ಸಾಹಿತ್ಯ ಸಮ್ಮೇಳನ, ನಾಗಮಂಗಲ.