ದಕ್ಷಿಣ ಭಾರತದ ರಾಜವಂಶಗಳಲ್ಲಿ ಗಂಗರು, ಹೊಯ್ಸಳರು, ವಿಜಯನಗರ ಅರಸರು, ಮೈಸೂರು ಒಡೆಯರು ಮತ್ತು ಇತರೆ ಮನೆತನದನವರು ನಾಗಮಂಗಲವನ್ನು ಆಳಿದರು. ಇವರ ಆಳ್ವಿಕೆಯ ಕಾಲವು ಸ್ಮರಣೀಯ. ಕ್ರಿ.ಶ.೮-೯ನೆಯ ಶತಮಾನದಲ್ಲಿ ಗಂಗರ ಎರಡನೆಯ ಮಾರಸಿಂಗ ನಾಗಮಂಗಲದ ವೀರಗಲ್ಲಿನ ಶಾಸನದಲ್ಲಿ ನಾಡಿಗಾಗಿ ಮಡಿದ ವೀರನನ್ನು ಸ್ಮರಿಸುವ ಬರಹಿದೆ. ಈ ವೀರಗಲ್ಲಿನ ಶಾಸನ ಗಂಗರ ಆಳ್ವಿಕೆಯನ್ನು ದೃಢೀಕರಿಸುತ್ತದೆ (ಚಿತ್ರ. ೧).

ಕ್ರಿ.ಶ. ೧೦ನೆಯ ಶತಮಾನದ ಕೊನೆಯಲ್ಲಿ ಕರ್ನಾಟಕದ ಇತಿಹಾಸದಲ್ಲಿ ಕಾಣಿಸಕೊಂಡು ೧೧ನೇ ಶತಮಾನದಲ್ಲಿ ಪ್ರಾಬಲ್ಯಕ್ಕೆ ಬಂದು, ಕರ್ನಾಟಕ ಸಾಮ್ರಾಜ್ಯವನ್ನು ಕಟ್ಟಿ, ೧೪ನೇ ಶತಮಾನದ ಪೂರ್ವಾರ್ಧದ ಕೊನೆಯವರಿಗೂ ಯಶಸ್ವಿಯಾದ ಪ್ರಭುತ್ವವನ್ನು ನಡೆಸಿದ ಹೊಯ್ಸಳರ ಆಳ್ವಿಕೆಯ ಮಹತ್ಸಾಧನೆಗಳಿಂದ ಕೂಡಿದೆ. ಹೊಯ್ಸಳ ಸಂತತಿಯು ಅಡಳಿತ, ಧರ್ಮ, ರಾಜಕೀಯ, ಸಾಮಾಜಿಕ, ಕಲೆ ಮತ್ತು ವಾಸ್ತುಶಿಲ್ಪಕ್ಕೆ ಪ್ರೋತ್ಸಾಹ ನೀಡಿದರು. ಹೊಯ್ಸಳರ ಕಾಲದಲಲ್ಲಿ ಪ್ರಮುಖವಾಗಿ ಶೈವ, ವೈಷ್ಣವ, ಜೈನ ಶಾಸನಗಳನ್ನು ಕಾಣಬಹುದು. ಪ್ರಸ್ತುತ ನಾಗಮಂಗಲ ಪಟ್ಟಣದಲ್ಲಿ ಹದಿಮೂರು ಶಾಸನಗಳು ಬೆಳಕಿಗೆ ಬಂದಿವೆ. ಈ ಎಲ್ಲ ಶಾಸನಗಳು ನಾಗಮಂಗಲದ ಇತಿಹಾಸ ಮತ್ತು ಸಂಸ್ಕೃತಿಯನ್ನು ಕಟ್ಟಿಕೊಡಲು ಸಹಕಾರಿಯಾಗಿವೆ. ಕ್ರಿ.ಶ.೧೧೩೪ ನಾಗಮಂಗಲದ ವಿಷ್ಣುವರ್ಧನನ ಪ್ರಶಸ್ತಿ ಶಾಸನ (ಸವೆದು ಹೋದ ಶಾಸನ) ವಿಷ್ಣುವರ್ಧನನ ಪಟ್ಟದರಸಿಯಾದ ಬಮ್ಮಲದೇವಿಯನ್ನು ಉಲ್ಲೇಖಿಸುತ್ತದೆ. ವಿಷ್ಣುವರ್ಧನನ ಪಟ್ಟದರಸಿ, ಶಾಂತಲೆಯು ಕ್ರಿ.ಶ.೧೧೩೧ರಲ್ಲಿ ಮರಣ ಹೊಂದಿದಳೆಂಬುದು ತಿಳಿದ ವಿಚಾರ. ಅವಳ ಸ್ಥಾನಮಾನ ಅವಳ ನಂತರ ಬಮ್ಮಲದೇವಿಗೆ ದೊರೆಯಿತು. ಈ ಅರಸಿ ಕಲ್ಕುಣಿನಾಡಿಗೆ ಸೇರಿದ ನಾಗಮಂಗಲದ ಶಂಕರ ನಾರಾಯಣ ದೇವಾಲಯವನ್ನು ಜೀರ್ಣೋದ್ಧಾರಗೊಳಿಸಿ ದೇವರ ಪೂಜೆ ನೈವೇದ್ಯಾದಿಗಳಿಗೆ ಅರಿಕಿನಕಟ್ಟ ಗ್ರಾಮವನ್ನು ದಾನವಾಗಿತ್ತಳು. ಈ ದಾನವನ್ನು ಸೂರ್ಯ್ಯಭರಣ ಪಂಡಿತರಿಗೆ ಧಾರಾಪೂರ್ವ್ವಕವಾಗಿ ಕೊಡಲಾಯಿತು. ಧಾರ್ಮಿಕವಾಗಿ ಈ ಶಾಸನ ಬಹಳ ಮಹತ್ವ ಹೊಂದಿದೆ.

ಕ್ರಿ.ಶ.೧೧೭೧ ರಲ್ಲಿ ಎರಡನೆಯ ಬಲ್ಲಾಳನು ದ್ವಾರಸಮುದ್ರದಲ್ಲಿ ರಾಜ್ಯವಾಳುತ್ತಿರಲು ಆದರೆ ಆ ಹೊತ್ತಿಗೆ ವೀರಬಲ್ಲಾಳನಿನ್ನೂ ಸಿಂಹಾಸನ ವನ್ನೇರಿರಲಿಲ್ಲ. ಆದರೂ ಒಂದನೆಯ ನರಸಿಂಹನ ಆಳ್ವಿಕೆಯ ಕಡೆಯ ವರ್ಷಗಳಲ್ಲಿ ರಾಜಕುಮಾರನು ಪ್ರಕ್ಷುಬ್ದಗೊಂಡು ತನ್ನ ತಂದೆಯ ವಿರೋಧವಾಗಿ ಬಂಡೆದ್ದನೆಂಬುದು ತಿಳಿದಿದೆ. ಪ್ರಸ್ತುತ ಈ ಶಾಸನ ಆತ ರಾಜಕುಮಾರನಾಗಿದ್ಧಾಗ ಇಂತಹ ಸಂದರ್ಭದಲ್ಲಿ ಹಾಕಿಸಿದ ಶಾಸನವಾಗಿರಬೆಕು. ವಿಷ್ಣುವರ್ಧನೆಂಬ ಬಿರುದನ್ನು ಹೊಂದಿದ್ದ ಈ ಯುವರಾಜಕುಮಾರನು ತನ್ನ ತಾತನಂತೆ ಮಹತ್ವಾಕಾಂಕ್ಷಿಯಾಗಿದ್ದು ಸ್ವತಂತ್ರವಾಗಿ ಸಾಮ್ರಾಜ್ಯವನ್ನಾಳುವ ಸಮಯವನ್ನು ನಿರೀಕ್ಷಿಸುತ್ತಿದ್ದನು. ನಾಗಮಂಗಲವನ್ನು, ವೀರಬಲ್ಲಾಳನು ಚತುರ್ವೇದಿ ಭಟ್ಟರತ್ನಾಕರ ಅಗ್ರಹಾಋವೆಂದು ಕರೆದಿದ್ದು, ಚನ್ನಕೇಶವದೇವರಿಗೆ ದೇವದಾನವಾಗಿ ಭೂಮಿಯನ್ನ ಬಿಟ್ಟಿದ್ದಾಗಿ ತಿಳಿಸುತ್ತದೆ. ಈ ಶಾಸನವನ್ನು ವಲಯಶಾಸನವೆಂದು ವರ್ಣಿಸಿದ್ದು ಬಹುಶಃ ಅದನ್ನು ಸರದಿಯ ಮೇಲೆ ಅನುಭವಿಸಲು ವೃತ್ತಿಯಾಗಿ ಕೊಟ್ಟಿರಬೇಕು. ವೀರಬಲ್ಲಾಳನು ಚನ್ನಕೇಶವ ದೇವರಿಗೆ ಧಾರ್ಮಿಕ ನಿಷ್ಠೆಯನ್ನು ತೋರಿಸುವ ಇದು ಬಹಳ ಪ್ರಮುಖವಾದದ್ದು. ಕ್ರಿ.ಶ.೧೨೬೯ರ ಬೆಳ್ಳೂರು ಶಾಸನದಲ್ಲಿ ತಂಬಿಯಣ್ಣ ಮತ್ತು ತಿರುವರಂಗ ಪೆರುಮಾಳೆನಂಬಿಯಾರಿಗೂ ಮಹಾಜನರಿಗೂ ತಿರುನಾರಾಯಣ ಪುರ ಅಥವಾ ಮೇಲುಕೋಟೆ, ತೊಂಡನೂರು, ನಾಗಮಂಗಲ, ದಡಿಗವೇ ಮೊದಲಾದ ೧೮ ನಾಡುಗಳು ಶ್ರೀವೈಷ್ಣವರ ಮುಂದೆ ಆದ ಅಂಥ ಒಂದು ಒಪ್ಪಂದದ ವಿವರವಿದೆ. ಕ್ರಿ.ಶ.೧೩೨೯ ರ ಶಾಸನವು ನಾಗಮಂಗಲದ ಚನ್ನಕೇಶವ ದೇವರಿಗೆ ಕಜದಾಳುಮಲ್ಲದೇವ ಮತ್ತು ಅವನ ಹೆಂಡತಿ ಚನ್ನಾದೇವಿಯ ಹಲತ್ತಿ( ಹಾಲ್ತಿ) ಯಲ್ಲಿ ಭೂಮಿದಾನ ನೀಡಿದ ತನ್ನ ಧಾರ್ಮಿಕ ನಿಷ್ಠೆಯನ್ನು ಮೆರೆದಿದ್ಧಾರೆ. ಕ್ರಿ.ಶ.೧೪-೧೫ನೆಯ ಶತಮಾನದ ಶಾಸನದಲ್ಲಿ ಕೇಶವ ದೇವರ ಹೊರಗೋಡೆಯ ಅರೆಗಂಬವೊಂದರ ಮೇಲಿನ ಶಾಸನದಲ್ಲಿ ಸಂಕರ ( ಮು) ಕರಣಿಕರು ಕಂಬವೊಂದನ್ನು ನಿಲ್ಲಿಸಲು ನಾಲ್ಕು ಗದ್ಯಾಣುಗಳನ್ನು ನೀಡಿದ ಉಲ್ಲೇಖವಿದೆ.

ಕ್ರಿ.ಶ.೧೫೧೧ ರ ಕೃಷ್ಣದೇವರಾಯನ ಶಾಸನದಲ್ಲಿ ನಾಗಮಂಗಲದ ವೀರಭದ್ರ ದೇವಾಲಯ ರಂಗಮಂಟಪ ಮುಂಭಾಗದಲ್ಲಿ ಗಂಧಗೋಡಿ ಮಂಟಪವನ್ನು ಕಟ್ಟಿಸಿದ ವಿಷಯವನ್ನು ದಾಖಲು ಮಾಡಿದೆ. ಈ ಗಂಧಗೋಡಿ ಮಂಟಪವು ಬಹುಶಃ ರಂಗಮಂಟಪದೊಳಗಿನ ಗಂಧದ ಮಂಟಪವಾಗಿದ್ದು, ದೇವರ ಉತ್ಸವ ಮೂರ್ತಿಗಳನ್ನು ಇಲ್ಲಿ ಕೂಡಿಸುತ್ತಿದ್ದಿರಬಹುದು. ದಾನಿಯಾದ ಹೊನ್ನಿಸೆಟ್ಟಿಯು ಅಕ್ಕನಚೆನ್ನಿಸೆಟ್ಟಿಯ ಮಗನಾಗಿದ್ದು, ಅರಮನೆಯ ಬೇಹಾರಿಯಾಗಿದ್ದನು. ಇದು ಒಂದು ಧಾರ್ಮಿಕ ನಿಷ್ಠೆಯನ್ನು ತೋರಿಸುವ ಶಾಸನವಾಗಿದೆ.

ತಿಬ್ಬಹಳ್ಳಿ ಶಾಸನದಲ್ಲಿ ಕೃಷ್ಣದೇವರಾಯನು ವಿದ್ಯಾನಗರದಲ್ಲಿ ಆಳುತ್ತಿರುವಾಗ ನಾಗಮಂಗಲದಕ್ಕೆ ಸೇರಿದ ಚನ್ನಪಟ್ಟಣದ ಯಿರಪದೇವರಿಗೆ ಅಮೃತಪಡಿಗೆ ರಾಜನು ದಾನ ನೀಡಿದ ವಿವರವಿದೆ. ಕ್ರಿ.ಶ.೧೫೪೪ ರಲ್ಲಿ ಸದಾಶಿವಮಹರಾಯರು ರಾಜ್ಯವಾಳುತ್ತಿರಲು ಸಾಮಂತ ಚಂಗರಾಜು ತಿಂಮಪನಾಯಕ ಕದಪನಾಯಕರು, ತಿರುಣನಾಯಕರು ತಮ್ಮ ಸ್ವಾಮಿಯ ನಿರುಪದಲ್ಲಿ ಅಗ್ರಹಾರ ದೇವಸ್ಥಾನದಲ್ಲಿ ದಾನ ಮಾಡಿದ್ದನ್ನು ದಾಖಲಿಸುತ್ತದೆ. ಈ ಶಾಸನದಲ್ಲಿ ದೇವಸ್ಥಾನವನ್ನು ನಿರ್ಮಾಣ ಮಾಡಿದ್ದನ್ನು ದಾಖಲಿಸುತ್ತದೆ. ಕ್ರಿ.ಶ.೧೫೪೯ ರ ಶಾಸನವೊಂದರಲ್ಲಿ ನಾಗಮಂಗಲದ ಮಹಾಜನಗಳ ನಿಯೋಗದ ಸೂಚನೆಯಂತೆ ವೀರಭದ್ರದೇವರಿಗೆ ವರ್ಷ ಪ್ರತಿ ೫ ಪಣಗಳು ತೆರಿಗೆಯನ್ನು (ಅಳಿಬಳಿ) ಬಾಲ್ದಳಿಸೆಟ್ಟಿಯ ಮಗ ಚೋಕಸೆಟ್ಟಿಯು ಧರ್ಮವಾಗಿ ಬಿಡುತ್ತಾನೆ. ಈ ಶಾಸನವನ್ನು ಬರೆದವನು ಸೇನಬೋವ ಶ್ರೀರಂಗಿ ದೇವನ ಮಗ ಕಾವಂಣ್ನನು ಎಂದು ಹೆಸರಿಸಿದೆ. ಕ್ರಿ.ಶ.೧೮೪೫ ರ ನಾಗಮಂಗಲದ ಶಾಸನದಲ್ಲಿ ಹಯವಸಗೋತ್ರ ಚಿಕಂಣೈಯಜಕಂಣ್ಯಯನವರ ಸಂತತಿಯ ಕಂಮಗಾರ ಆದ ಚಿಂಣೈಯ ವೆಂಗಟಪತೈಯ್ಯ ತಿಂಮಪ್ಪೈಯ್ಯನವರ ಮಕ್ಕಳು, ಮೊಮ್ಮಕ್ಕಳು, ಅದೇ ಹೆಸರಿನವರು ಶ್ರೀಯವರ ಪಾದಕ್ಕೆ ಸೇವಾರ್ಥವಾಗಿ ಗೋಪುರ ವಿಮಾನ ಜೀರ್ಣೋದ್ದಾರ ಮಾಡಿಸಿ ದೇವರ ಪ್ರಭಾವಳಿಗಳು, ಬಾಗಿಲುವಾಡಗಳು, ಚಿನ್ನಬೆಳ್ಳಿ ಆಭರಣಗಳನ್ನು ಬೇಕಾದಂತಹ ಸಲಕರಣೆಗಳನ್ನು ನೀಡಿದ ಬಗ್ಗೆ ತಿಳಿಸುತ್ತದೆ.

ನಾಗಮಂಗಲ ಪರಿಸರದ ಶಾಸನಗಳು

ಕ್ರಿ.ಶ. ೯೬೩ ರ ಆರಣಿಗ್ರಾಮದ ಗಂಗ ಎರಡನೆಯ ಮಾರಸಿಂಹನ ಕಾಲದ ಶಾಸನದಲ್ಲಿ ಸತ್ಯವಾಕ್ಯ ಪೆರ್ಮಾನಡಿ ಮಾಗಳಿನಾಡಿನಲ್ಲಿ ರಾಜವೊಳಬೇಡಿನಲ್ಲಿ, ಗಂಗವಾಡಿ ತೊಂಭತ್ತಾರು ಸಾವಿರವನ್ನು ಆಳುತ್ತಿರುವಾಗ ಗೊಣೂರು ಯುದ್ಧದಲ್ಲಿ ನೊಳಂಬರನ್ನು ಸೋಲಿಸಿ ನೊಳಂಬಾಂತಕ ಬಿರುದು ಪಡೆದದ್ದನ್ನು ತಿಳಿಸುತ್ತದೆ. ಆರಣಿಯೂರಿನಲ್ಲಿ ಕೆರೆ ಕಟ್ಟಿದ್ದಕ್ಕೋಸ್ಕರ ಮಂತ್ರಿಯಾದ ಮಾಬಲಯ್ಯನು ಬಿತ್ತುವಟ್ಟವನ್ನು ದಾನ ನೀಡಿದ ದಾಖಲೆಯಿದೆ. ನಾಂಗಮಂಗಲದ ಸುಕದರೆ ಗ್ರಾಮದ ವಿಷ್ಣುವರ್ಧನನ ಕಾಲದ ಶಾಸನದಲ್ಲಿ ಒಂದು ಬಸದಿಯನ್ನು ಕಟ್ಟಿಸಿ ಗ್ರಾಮದಲ್ಲಿ ದಕ್ಷಿಣ ಮತ್ತು ಪಶ್ಚಿಮ ಭಾಗದಲ್ಲಿ ಒಂದು ಕೆರೆಯನ್ನು ಉತ್ಖನನ ಮಾಡಿಸಿ, ಸನ್ಯಾಸಿಗಳ ಆಹಾರದಾನಕ್ಕೆ ಜಕ್ಕಿಸೆಟ್ಟಿಯ ಕೆಲವು ನಿಗದಿಪಡಿಸಿದ ಭೂಮಿಗಳನ್ನು ದ್ರವಿಳ ಸಂಘದ ದಯಾಪಾಲದೇವನಿಗೆ ದಾನ ನೀಡಿದ ದಾಖಲೆಯಿದೆ. ಹಾಗೂ ಕ್ರಿ.ಶ.೧೧೩೯ ರ ಇದೆ ರಾಜನ ಕಾಲದ ಪುರದಕಟ್ಟೆ ಶಾಸನದಲ್ಲಿ ಎರಡು ಕೆರೆಗಳನ್ನು ಉತ್ಖನನ ಮಾಡಿ ಕಾಸ್ಯಪಗೋತ್ರದ ಮಾಚೋಡ ಮತ್ತು ಮಾಕವ್ವೆ ಹೆಸರಿನಲ್ಲಿ ಅವರ ಮಕ್ಕಳು ಮಾಚಸಮುದ್ರ ಮತ್ತು ಮಾಕಸಮುದ್ರ ಎಂದು ಹೆಸರಿಸಿದ್ದನ್ನು ತಿಳಿಸುತ್ತದೆ. ಇದೇ ಶಾಸನದಲ್ಲಿ ಕಲಿದೇವ ದೇವರನ್ನು ಹೆಸರಿಸುತ್ತದೆ. ಕ್ರಿ.ಶ. ೧೧೩೮ ರ ಲಾಲನಕೆರೆ ಶಾಸನ ಹೊಯ್ಸಳ ವಂಶಾವಳಿಯನ್ನು ತಿಳಿಸುತ್ತ, ಮೂಲಸ್ಥಾನ ಮಲ್ಲಿಕಾರ್ಜುನ ದೇವರ ಜೀರ್ಣೋದ್ಧಾರ ದೀಪಾಲಂಕಾರಕ್ಕೆ, ಪೂಜೆ, ನೈವೇದ್ಯಕ್ಕೋಸ್ಕರ ಜಕ್ಕಜೀಯ ಕೇತಜಿಯವರಿಗೆ ದೇಚಿರಾಜನು ದಾನ ನೀಡಿದ ವಿವರವಿದೆ. ಈ ಶಾಸನದಿಂದ ರಾಜನು ಶೈವ ಮತ್ತು ಜೈನ ಧರ್ಮಗಳನ್ನು ಪ್ರೋತ್ಸಾಹಿಸುತ್ತಿದ್ದದನ್ನು ಕಾಣುತ್ತೇವೆ. ವಿಷ್ಣುವರ್ಧನನ ಕಾಲದ ದಡಗ ಶಾಸನದಲ್ಲಿ ತೇದಿಯಿಲ್ಲದೆ ಸವೆದು ಹೋದ ಕಲ್ಲು ದಡಿಗಕೆರೆಯ ಪಂಚಬಸದಿಗೆ ಬಾಹುಬಲಿಕೂಟಕ್ಕೆ ಎಲ್ಲಾ ಆದಾಯಗಳಿಂದಲೂ ಕೆಲವು ಭೂಮಿಯನ್ನು ದೇವರಿಗೋಸ್ಕರ ಇಬ್ಬರು ಮಂತ್ರಿಗಳಾದ ಮಹಾಪ್ರದಾನ ದಂಡನಾಯಕ ಮರಿಯಾನೆ ಮತ್ತು ಭರತಿಯಮ್ಮನು ದಾನ ನೀಡಿದ್ಧಾನೆ. ತಿಂತ್ರಿಣೆಗಚ್ಚದ ಮತ್ತು ಕಾಣೂರ್ಗ್ಗಣ ಕುಂದಕುಂದಾನ್ವಯ, ಮೂಲಸಂಘದ ಮುನಿಭದ್ರ ಸಿದ್ಧಾನ್ತದೇವರ ಶಿಷ್ಯ ಮೇಘಚಂದ್ರ ಸದ್ಧಾನ್ತದೇವರು ದಾನ ಪಡೆದಿದ್ಧಾರೆ. ಈ ಒಂದು ದಾನವನ್ನು ನಾಲ್ಕು ಬಸದಿಗಳಿಗೆ ಸಮನಾಗಿ ಹಂಚಿದ ದಾಖಲೆಯಿದೆ. ಈ ಶಾಸನದಿಂದ ಆರ್ಥಿಕ ಮತ್ತು ಧಾರ್ಮಿಕ ವಿಶೇಷತೆಯನ್ನು ಕಾಣಬಹುದು. ಕ್ರಿ.ಶ.೧೧೪೫ರ ಒಂದನೇ ನರಸಿಂಹನ ಕಾಲದ ಯಲ್ಲಾದಹಳ್ಳಿ ಶಾಸನದಲ್ಲಿ, ಸೂರನಹಳ್ಳಿಯ ಪಾರ್ಶ್ವಜಿನದೇವಸ್ಥಾನ ಕಟ್ಟಿಸಿ, ಕೌಶಿಕ ಕುಲದ ದೇವರಾಜ ವಿಷ್ಣುವರ್ಧನನ ಮಹಾಪ್ರಧಾನನು ಭೂಮಿ ದಾನ ನೀಡಿದ ವಿವರವಿದೆ. ನಾಲ್ವತ್ತು ಹೊನ್ನುಗಳನ್ನು ರಾಜನು ದಾನ ನೀಡಿದ ದಾಖಲೆಯಿದೆ. ಈ ಗ್ರಾಮವನ್ನು ಪಾರ್ಶ್ವಪುರ ಎಂದು ಹೆಸರಿಸಿದೆ. ಈ ಒಂದು ಶಾಸನದಲ್ಲಿ ಗಮನಿಸಬೇಕಾದ ಅಂಶವೆಂದರೆ ದೇವರ ಹೆಸರಿನಲ್ಲಿಯೇ ಗ್ರಾಮವನ್ನು ಹೆಸರಿಸಿರುವುದು ಹಾಗು ಈ ದಾನವನ್ನು ಪಡೆದವನು ಪುಸ್ತಕಗುಚ್ಚ ಮತ್ತು ದೇಶಿಯಗಣ ಕೊಂಡಕುಂದಾನ್ವಯ ಮೂಲಸಂಘಕ್ಕೆ ಸೇರಿದ ಮುನಿಚಂದ್ರ ಭಟ್ಟಾರಕನೆಂದು ತಿಳಿಸುತ್ತದೆ. ಈ ಶಾಸನ ಆರ್ಥಿಕ ಮತ್ತು ಧಾರ್ಮಿಕ ವಿಷಯಗಳನ್ನೊಳಗೊಂಡಿದೆ. ಕ್ರಿ.ಶ.೧೧೭೮ರ ಹಟ್ಟಣ ಶಾಸನದಲ್ಲಿ ಹೊಯ್ಸಳರ ಎರಡನೆಯ ಬಲ್ಲಾಳನವರೆಗೆ ವಂಶಾವಳಿಯನ್ನು ತಿಳಿಸುತ್ತದೆ. ವಿಷ್ಣುವರ್ಧನ ಬನವಾಸಿ, ವಿರಾಟನಗರ, ಬಳ್ಳಾರಿ, ವಲ್ಲೂರು, ಇರುಂಗೋಳನಕೋಟೆ, ಕಾರುಕನಕೊಳ್ಳ, ಕುಮ್ಮಟ, ಚಿಂಚಿಲೂರು, ರಾಚವೂರು ಮತ್ತು ಮುಗದನೂರನ್ನು ಜಿಯಿಸಿದ್ದನ್ನು ಹಾಗು ಪಟ್ಟಣಸ್ವಾಮಿ ಸೋವಿಸೆಟ್ಟಿ ಮೂರು ಕೆರೆಗಳನ್ನು ಮತ್ತು ಪಾರ್ಶ್ವಜಿನಾಲಯವನ್ನು ನಿರ್ಮಿಸಿದ ಬಗ್ಗೆ ತಿಳಿಸುತ್ತದೆ.

ಕ್ರಿ.ಶ. ೧೨೭೧ ರ ಬೆಳ್ಳೂರು ಮೂರನೆಯ ನರಸಿಂಹನ ಕಾಲದ ಶಾಸನದಲ್ಲಿ ಪಂಚಿಕೇಶ್ವರ ದೇವಾಲಯದಲ್ಲಿ ಇಂದ್ರಪೂಜೆ ಮತ್ತು ಅರಣ್ಯಪೂಜೆ ನಡೆಸುವುದಕ್ಕೋಸ್ಕರ ಬೆಳ್ಳೂರಿನ ಉದ್ಭವ ನರಸಿಂಹಪುರದಲ್ಲಿ ಪೆರುಮಾಳದಂಡನಾಯಕನು ದಾನ ನೀಡಿದ ವಿವರವಿದೆ. ಇಲ್ಲಿಯ ಮಹಾಜನರು, ಹನ್ನೆರಡು ಒಕ್ಕಲುಗಳು, ಮನೆ ತೆರಿಗೆ ವಾರ್ಷಿಕ ೨೭ ಗದ್ಯಾಣ ೨ ಪಣಗಳನ್ನು ಕೊಟ್ಟಿದ್ಧಾರೆ. ಹಾಗೂ ವಿದ್ಯಾರ್ಥಿಗಳ ಋಗ್ವೇದ, ಯಜುರ್ವೇದ ಅಧ್ಯಯನ ಹಾಗೂ ಆಹಾರ ದಾನಕ್ಕೆ ಭೂಮಿ ನೀಡಿದ ದಾಖಲೆ ಇದೆ.

ವಿಜಯನಗರ ಕಾಲದ ಶಾಸನದಲ್ಲಿ ಕೆಲ್ಲಂಗೆಜೆಯ ಹಿರಿಯ ಹೊನ್ನೆಯನಾಯಕನ ಮಗ ವರದೆಯ ನಾಯಕನು ಊರ ಮುಂದೆ ಶ್ರೀಮಲ್ಲಿಕಾರ್ಜುನ ದೇವರ ದೇವಾಲಯದ ಗರ್ಭಗೃಹ, ಸುಖನಿವಾಸ, ರಂಗಮಂಟಪ ನಿರ್ಮಿಸಿ, ಈ ಗ್ರಾಮ ಶೂದ್ರವಾಡವಾಗಿದ್ದುದನ್ನು ಅಗ್ರಹಾರವ ಮಾಡಿ, ಹಳೆ ಕೆರೆಯನ್ನು ಜೀರ್ಣೋದ್ಧಾರ ಮಾಡಿ, ಹೊಸದಾಗಿ ವರದರಾಜು ಸಮುದ್ರವೆಂಬ ಕೆರೆಯನ್ನು ಕಟ್ಟಿ ಶ್ರೀಮಲ್ಲಿಕಾರ್ಜುನ ದೇವರ ಶ್ರೀಪಾದಕ್ಕೆ ಸಮರ್ಪಿಸಿದ್ದನ್ನು ತಿಳಿಸುತ್ತದೆ. ಈ ಶಾಸನ ವಾಸ್ತುಶಿಲ್ಪ ಮತ್ತು ಸಾಮಾಜಿಕ ವಿಷಯವನ್ನು ಒಳಗೊಂಡಿದೆ.

ಕ್ರಿಶ. ೧೫೨೧ರ ದೊಂದೇಮಾದಹಳ್ಳಿ ಶಾಸನದಲ್ಲಿ ನಾಗಮಂಗಲದ ಅಶೇಷ ಮಹಾಜನಂಗಳು ಜಂನಿಕೊಚಿಗಳ ಮಗ ವಿಠಣ್ಣನವರಿಗೆ ಕೊಟ್ಟ ವೋಲೆಯ ಕ್ರಮವೆಂತೆಂದಡೆ ಯೆಂಜಹೊಸಹಳ್ಳಿಯ ಮೂಡಣ ಹೊಲದೊಳಗೆ ಮಲ್ಲಿಗೆದಡುವಿನ ಮಾವಿನಹಳವು ನವಿಲಹಳವು ಕೂಡಿದಲ್ಲಿ ಕೆಜೆಯ ಕಟ್ಟುವುದಕ್ಕೆ ಭೂಮಿ ದಾನ ನೀಡಿದ್ಧಾರೆ.

ಕೊನೆಯದಾಗಿ ಭಾರತೀಯ ಇತಿಹಾಸದ ಕೆಲವು ವ್ಯಕ್ತಿಗಳು ಮತ್ತು ಘಟನೆಗಳ ಬಗ್ಗೆ ಬೇರಾವ ಮೂಲದಿಂದಲೂ ದೊರೆಯದಂಥ ವಿಷಯಗಳನ್ನು ತಿಳಿಸುವಲ್ಲಿ ಶಾಸನಗಳ ಮಹತ್ವ ಅತಿ ಹೆಚ್ಚಿನದಾಗಿದೆ. ಶಾಸನಗಳು ಚರಿತ್ರೆ ಮತ್ತು ರಾಜಕೀಯ ವಿಷಯದ ಪ್ರಮುಖ ದಾಖಲೆಗಳು ಮಾತ್ರವಾಗಿರದೆ, ಸಾಂಸ್ಕೃತಿಕ  ಮಹತ್ವವನ್ನು ಹೊಂದಿವೆ. ಹೀಗೆ ಭಾರತದ ಇತಿಹಾಸ ಮತ್ತು ಸಂಸ್ಕೃತಿಯನ್ನು ತಿಳಿಯುವಲ್ಲಿ ಅವುಗಳ ಮೌಲ್ಯ ಅಪಾರವೆನಿಸಿದೆ. ನಾಗಮಂಗಲದ ಶಾಸನಗಳಲ್ಲಿ ರಾಜಕೀಯ, ಸಾಮಾಜಿಕ, ಆರ್ಥಿಕ, ಧಾರ್ಮಿಕ ವಿವರಗಳನ್ನು ಒಳಗೊಂಡ ವಿವರಗಳಿವೆ.

 

ಅಧ್ಯಯನ ಗ್ರಂಥಗಳು

೧. E.C., ಸಂಪುಟ -೭

೨. Annual Report of Indian Epigraphy