ನಾಗಮಂಗಲವು ಮಂಡ್ಯ ಜಿಲ್ಲೆಯಲ್ಲಿರುವ ಒಂದು ತಾಲ್ಲೂಕು ಕೇಂದ್ರವಾಗಿದೆ. ಇದು ಮೈಸೂರಿನಿಂದ ಉತ್ತರಕ್ಕೆ ಸುಮಾರು ೬೫ ಕಿ.ಮೀ. ದೂರದಲ್ಲಿದೆ. ನಾಗಮಂಗಲದಲ್ಲಿರುವ ಶಾಸನಗಳು ಅಲ್ಲಿನ ಇತಿಹಾಸ ಮತ್ತು ಸಂಸ್ಕೃತಿಯ ಮೇಲೆ ಬೆಳಕನ್ನು ಚೆಲ್ಲುತ್ತವೆ. ಇತಿಹಾಸ ಕಾಲದಲ್ಲಿ ವೀರರು ಜೀವನದ ಹಂಗನ್ನು ತೊರೆದು ಗ್ರಾಮವನ್ನು ಕಳ್ಳರಿಂದ ರಕ್ಷಿಸಿ, ಗೋವು ಕಳ್ಳರ ಜೊತೆ ಹೋರಾಡುತ್ತಿದ್ದರು. ತಮ್ಮ ಅರಸರ ಪರವಾಗಿ ಹೋರಾಡಿ ಮಡಿದ ವೀರರ ಸ್ಮರಣಾರ್ಥವಾಗಿ ಕಲ್ಲುಗಳನ್ನು ನಿಲ್ಲಿಸುತ್ತಿದ್ದರು. ಹೀಗೆ ನಿಲ್ಲಿಸಿದ ಕಲ್ಲುಗಳನ್ನು ವೀರಗಲ್ಲು ಎಂದು ಕರೆಯುತ್ತಾರೆ. ವೀರಗಲ್ಲನ್ನು ನಿಲ್ಲಿಸುವಲ್ಲಿ ಲೌಕಿಕ ಮತ್ತು ಪಾರಮಾರ್ಥಿಕ ದೃಷ್ಟಿಗಳೆರಡೂ ಇತ್ತೆಂದು ತೋರುತ್ತದೆ. ವೀರನ ಪರಾಕ್ರಮವನ್ನು ಮೆಚ್ಚಿ ವೀರಗಲ್ಲನ್ನು ನೆಡುವುದು, ಅವನ ಪರಾಕ್ರಮ ಲೋಕಕ್ಕೂ ತಿಳಿಯಲೆಂದು ವೀರಗಲ್ಲನ್ನು ನಿಲ್ಲಿಸುತ್ತಿದ್ದರು. ವೀರಗಲ್ಲುಗಳನ್ನು ಹಾಕಿಸುತ್ತಿದ್ದ ಪದ್ಧತಿ ಗಂಗರ ಕಾಲದಿಂದಲೂ ಇದ್ದಿತು. ಯುದ್ಧದಲ್ಲಿ ಜಯಶಾಲಿಯಾದರೆ ಲಕ್ಷ್ಮಿಯೂ ಲಭಿಸುತ್ತಾಳೆ, ಮೃತನಾದರೆ ಸುರಾಂಗನೆಯರು ಸ್ವರ್ಗಲೋಕದಲ್ಲಿ ಚೆನ್ನಾಗಿ ನೋಡಿಕೊಳ್ಳುತ್ತಾರೆ ಎಂಬ ನಂಬಿಕೆಯು ಇಲ್ಲಿನ ವೀರತ್ವಕ್ಕೆ ಪೂರಕವಾಗಿತ್ತು. ಯುದ್ಧದಲ್ಲಿ ಗೆದ್ದು ಹಿಂದಕ್ಕೆ ಬರುವುದು ಅಥವಾ ಸೋತು ಪ್ರಾಣ ಬಿಡುವುದು ಎರಡಕ್ಕೂ ಸಮಾನವಾದ ಗೌರವಿದೆ. ಸೋತು ಹಿಂದಕ್ಕೆ ಬರುವುದು ಸಾವಿಗಿಂತ ಕಡೆಯದಾದುದು ಎಂದು ಸಹ ನಂಬಿದ್ದರು.

ಪ್ರಸ್ತುತ ನಾಗಮಂಗಲ ಪಟ್ಟಣದ ಮುಖ್ಯರಸ್ತೆಯ ಬದಿಯಲ್ಲಿ ಉಬ್ಬುಶಿಲ್ಪವುಳ್ಳ ಶಾಸನಯುಕ್ತ ವೀರಗಲ್ಲಿದೆ (ಚಿತ್ರ ೧). ಇದು ಗಂಗರ ಕಾಲದ್ದು, ಇದು ತುಂಬಾ ಆಕರ್ಷಕವಾಗಿದ್ದು, ನೋಡುಗರಿಗೆ ಮನಸೆಳೆಯುವಂತಿದೆ. ಈ ಪಟ್ಟಣದ ಪಶ್ಚಿಮಕ್ಕೆ ಸುಮಾರು ೨ ಕಿ.ಮೀ. ದೂರದಲ್ಲಿ ಬೆಟ್ಟದ ಮಲ್ಲೇನಹಳ್ಳಿಯಲ್ಲಿ ಸುಮಾರು ೧೧೫ ವೀರಗಲ್ಲುಗಳಿವೆ. ಇವು ಗ್ರಾಮದ ಮುಂಭಾಗದಲ್ಲಿರುವ ಅರಳಿಮರದ ಬುಡದಲ್ಲಿವೆ. ಈ ಎಲ್ಲಾ ವೀರಗಲ್ಲುಗಳಲ್ಲಿ ವಿಶೇಷ ಲಕ್ಷಣಗಳುಳ್ಳ ಕೆಲವು ವೀರಗಲ್ಲುಗಳನ್ನು ಈ ಕೆಳಗಿನಂತೆ ವಿವರಿಸಲಾಗಿದೆ. ಇವುಗಳಲ್ಲಿ ಕೆಲವು ಸೋಪುಗಲ್ಲಿನಲ್ಲಿಯೂ, ಕೆಲವನ್ನು ಮೃದು ಕಪ್ಪು ಕಲ್ಲಿನಲ್ಲಿಯೂ, ಮತ್ತೆ ಕೆಲವನ್ನು ಒರಟು ಗ್ರಾನೈಟ್ ಶಿಲೆಯಿಂದ ಮಾಡಲಾಗಿದೆ. ಇವುಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿರುವವು ಕೇವಲ ಗೀರುಗಳಿಂದ ರಚಿಸಿದ ವೀರಗಲ್ಲುಗಳಾಗಿವೆ.

ನಾಗಮಂಗಲದ ವೀರಗಲ್ಲು

ಇದು ಸುಮಾರು ೫ ಅಡಿ ಎತ್ತರ ಮತ್ತು ೪ ಅಡಿ ಅಗಲವನ್ನು ಹೊಂದಿದ್ದು ಒರಟು ಗ್ರಾನೈಟ್ ಶಿಲೆಯಿಂದ ಕೆತ್ತನೆ ಮಾಡಲಾಗಿದೆ. ಇದು ಸುಮಾರು ಅರ್ಧ ಅಡಿ ದಪ್ಪವಾಗಿದೆ. ಇದು ಸುಮಾರು ಮೂರು ಹಂತಗಳ ಶಿಲ್ಪಗಳನ್ನು ಹೊಂದಿದ್ದು, ಶಿಲ್ಪಗಳ ಪ್ರತಿ ಪಟ್ಟಿಕೆಯಲ್ಲಿ ಶಾಸನವನ್ನು ಕೆತ್ತಲಾಗಿದೆ. ಇದು ಗಂಗರ ರಾಜ ಎರಡನೆಯ ಮಾರಸಿಂಗನ ಕಾಲದಲ್ಲಿ ಇಡುಗೋರಿನ ಗಾವುಂಡನಾದ ತನದಕಯ್ಯ ಎಂಬುವನು ಅದ್ದಿಯಾಪಳ್ತಿಯಾಳ್ ನಲ್ಲಿ ತುರುಗಳ್ಳರೊಡನೆ ಹೋರಾಡಿ ಮಡಿದನು. (ಎ.ಕ.ಸಂ.-೭, ಶಾಸನ ಸಂಖ್ಯೆ-೧೨, ಪು.೧೦) ಇದರ ಕಾಲ ಕ್ರಿ.ಶ.೯೬೩-೬೪. ಇದರಲ್ಲಿ ಮೂರು ಹಂತಗಳಲ್ಲಿ ಶಿಲ್ಪಗಳನ್ನು ಕೆತ್ತನೆ ಮಾಡಲಾಗಿದೆ. ಈ ವೀರಗಲ್ಲಿನ ಕೆಳಗಿನ ಹಂತದಲ್ಲಿ ವೀರನು ಖಡ್ಗ ಮತ್ತು ಗುರಾಣಿಗಳನ್ನು ಹಿಡಿದುಕೊಂಡು ಹೋರಾಡುತ್ತಿರುವ ದೃಶ್ಯದ ಸನ್ನಿವೇಶವನ್ನು ಕೆತ್ತಲಾಗಿದೆ. ಇವನ ಮುಂಭಾಗದಲ್ಲಿ ಮತ್ತೊಬ್ಬನ ವ್ಯಕ್ತಿಯ ಚಿತ್ರವು ಭಗ್ನವಾಗಿದೆ. ಇದು ಉಬ್ಬು ಶಿಲ್ಪವಾದ್ಧರಿಂದ ಇದರ ಚಕ್ಕೆ ಎಡೆದು ಹೋಗಿದೆ. ವೀರನ ಹಿಂಭಾಗದಲ್ಲಿ ಗೋವುಗಳು ಹೆದರಿ ಓಡುತ್ತಿರುವುದನ್ನು ಚಿತ್ರಿಸಲಾಗಿದೆ. ಎರಡನೆಯ ಹಂತದಲ್ಲಿ ವೀರನನ್ನು ದೇವಕನ್ನಿಕೆಯರು ಸ್ವರ್ಗಕ್ಕೆ ಕರೆದೊಯ್ಯುತ್ತಿದ್ದಾರೆ. ಮೂರನೆ ಹಂತದಲ್ಲಿ ವೀರನು ಧ್ಯಾನಾಸಕ್ತನಾಗಿ ಕುಳಿತಿದ್ಧಾನೆ. ಇವನ ಅಕ್ಕಪಕ್ಕದಲ್ಲಿ ಚಾಮರಧಾರಣೆಯರು ನಿಂತಿದ್ಧಾರೆ. ಇದರ ಮೇಲ್ಭಾಗದ ಹಂತದ ಶಿಲ್ಪವು ಬಹುಶಃ ಮುರಿದುಹೋಗಿದೆ.

ಬೆಟ್ಟದ ಮಲ್ಲೇನಹಳ್ಳಿಯ ವೀರಗಲ್ಲುಗಳು

ಇಲ್ಲಿ ಸುಮಾರು ೧೧೫ ವೀರಗಲ್ಲುಗಳಿದ್ದು, ಇವುಗಳಲ್ಲಿ ಕೆಲವು ವೀರಗಲ್ಲುಗಳ ವಿವರಣೆಯನ್ನು ಮಾತ್ರ ನೀಡಿದ್ದೇನೆ. ಇಲ್ಲಿ ನಾಲ್ಕು ವೀರರ ಗುಡಿಗಳನ್ನು ಸಹ ಮಾಡಲಾಗಿದೆ. ಈ ಗುಡಿಗಳ ಹೊರ ಭಾಗದಲ್ಲಿ, ಗುಡಿಗೆ ನೇರವಾಗಿ ಸುಮಾರು ೧ ಅಡಿ ಎತ್ತರದ ವೀರಗಲ್ಲುಗಳನ್ನು ಹಾಕಲಾಗಿದೆ. ಇವುಗಳೆಲ್ಲವೂ ಸಹ ಸಾಮಾನ್ಯವಾಗಿ ರೇಖಾಚಿತ್ರಗಳಿಂದ ರಚಿತವಾಗಿದೆ.

ವೀರರ ಗುಡಿಗಳ ಬಗ್ಗೆ ಅಧ್ಯಯನ ಮಾಡುವ ಮೊದಲು ಗುಡಿ ಎಂಬ ಪದವನ್ನು ಯಾವ ಅರ್ಥದಲ್ಲಿ ಬಳಸುತ್ತಿದ್ಧೇವೆ ಎಂಬುದನ್ನು ಖಚಿತ ಪಡಿಸುವುದು ಸೂಕ್ತವೆಂದು ತೋರುತ್ತದೆ. ಕರ್ನಾಟಕದಲ್ಲಿ ದೇವಾಲಯ, ದೇವಸ್ಥಾನ, ಗುಡಿ ಎಂಬ ಪದಗಳನ್ನು ದೈವ ಅಥವಾ ದೇವರುಗಳು ಇರುವ ಕಟ್ಟಡವನ್ನು ನಿರ್ದೇಶಿಸುವಲ್ಲಿ ಪ್ರಯೋಗಿಸುತ್ತೇವೆ. ಇಲ್ಲಿ ಗುಡಿ ಎಂಬ ಪದವನ್ನು ಮೂರು ಚಪ್ಪಡಿಗಳಿಂದ ನಿರ್ಮಿಸಿದ, ಅಂತಹುದೇ ಮತ್ತೊಂದು ಚಪ್ಪಡಿಯ ಮೇಲೆ ವೀರನ ಶಿಲ್ಪವನ್ನು ಬಿಡಿಸಿರುವ ಒಂದು ಸಣ್ಣ ಹಾಗೂ ಸರಳವಾದ ಕಟ್ಟಡ ಎಂಬ ಅರ್ಥದಲ್ಲೂ ಅಂಥ ಕಟ್ಟಡವನ್ನು ನಿರ್ದೇಶಿಸುವುದಕ್ಕೂ ಪ್ರಯೋಗಿಸುತ್ತೇವೆ. ಇದು ದೇವಾಲಯಗಳ ಹಾಗೆ ಕಟ್ಟಡವನ್ನು ಹೊಂದಿರುವುದಿಲ್ಲ. ಇಂತಹ ಐದು ಗುಡಿಗಳು ಇಲ್ಲಿವೆ. ಇಲ್ಲಿನ ವೀರಗಲ್ಲುಗಳ ಪಕ್ಕದಲ್ಲಿ ಒಂದು ಸುಮಾರು ೪ ಅಡಿ ಅಗಲ, ೫ ಅಡಿ ಎತ್ತರದ ಚಪ್ಪಡಿ ಕಲ್ಲುಗಳಿದ್ದು, ಇಲ್ಲಿ ಹಲವು ಸಣ್ಣಸಣ್ಣ ಕುಳಿಗಳನ್ನು ತೋಡಲಾಗಿದೆ. ಇದು ಪಿತೃ ಪಕ್ಷದ ಅಚರಣೆ ರೀತಿಯಲ್ಲಿ ಮಡಿದ ವೀರರಿಗೆ ದಿನದಂದು ಎಡೆಯನ್ನು ಹಾಕುವುದಕ್ಕೆ ಈ ರೀತಿಯಲ್ಲಿ ಮಾಡಿಕೊಂಡಿದ್ದಾರೆ.

ವೀರಗಲ್ಲು ಸಂಖ್ಯೆ ೧

ಈ ಕಲ್ಲಿನಲ್ಲಿ ಮೂರು ಹಂತದಲ್ಲಿ ಶಿಲ್ಪವನ್ನು ಕೆತ್ತಲಾಗಿದೆ. ಮೊದಲನೆಯ ಹಂತದ ಶಿಲ್ಪದ ಭಾಗವು ನೆಲದಲ್ಲಿ ಹೂತುಹೋಗಿದೆ. ಎರಡನೆಯ ಹಂತದಲ್ಲಿ ದೇವಮಾನವರು ವೀರನನ್ನು ಸ್ವರ್ಗಕ್ಕೆ ಮಂಟಪದೊಳಗೆ ಕುಳ್ಳರಿಸಿ ಕರೆದುಕೊಂಡು ಹೋಗುತ್ತಿರುವ ದೃಶ್ಯವಿದೆ. ಮೂರನೆಯ ಹಂತದಲ್ಲಿ ವೀರನು ಧ್ಯಾನಾಶಕ್ತನಾಗಿ ಕುಳಿತಿರುವುದು. ಇವನ ಪಕ್ಕದಲ್ಲಿ ಸ್ತ್ರೀಯು ಕುಳಿತಿದ್ಧಾಳೆ. ಇವರಿಬ್ಬರ ಪಕ್ಕದಲ್ಲಿ ಲಿಂಗವನ್ನು ಚಿತ್ರಿಸಲಾಗಿದೆ. ಇದರ ಪಕ್ಕದಲ್ಲಿ ನಂದಿಯನ್ನು ಚಿತ್ರಿಸಲಾಗಿದೆ. ಮೇಲ್ಭಾಗದಲ್ಲಿ ಸೂರ್ಯ, ಚಂದ್ರರನ್ನು ಚಿತ್ರಿಸಲಾಗಿದೆ. ಇದಕ್ಕೆ ಸುಂದರವಾದ ಪ್ರಭಾವಳಿಯನ್ನು ಸಹ ಕೆತ್ತಲಾಗಿದೆ.

ವೀರಗಲ್ಲು ಸಂಖ್ಯೆ ೨

ಇದು ಸಹ ಮೂರು ಹಂತದ ಶಿಲ್ಪಗಳನ್ನು ಹೊಂದಿದೆ. ಕೆಳಹಂತದಲ್ಲಿ ವೀರನು ಭರ್ಜಿಯನ್ನು ಹಿಡಿದು ಮತ್ತೊಬ್ಬನಿಗೆ ತಿವಿಯುವ ರೀತಿಯಲ್ಲಿದೆ. ಎರಡನೆಯ ಹಂತದಲ್ಲಿ ಒಬ್ಬನು ಖಡ್ಗ ಮತ್ತು ಗುರಾಣಿಯನ್ನು ಹಿಡಿದಿದ್ದು ಮತ್ತೊಬ್ಬನು ಭರ್ಜಿಯನ್ನು ಹಿಡಿದಿದ್ಧಾನೆ. ಮೂರನೆಯ ಹಂತದಲ್ಲಿ ದಂಪತಿಗಳಿಬ್ಬರು ಲಿಂಗಕ್ಕೆ ಪೂಜೆಯನ್ನು ಸಲ್ಲಿಸುತ್ತಿದ್ಧಾರೆ. ಲಿಂಗದ ಮತ್ತೊಂದು ಬದಿಯಲ್ಲಿ ಒಬ್ಬನು ಪೂಜೆಯನ್ನು ಸಲ್ಲಿಸುತ್ತಿದ್ದು, ಇವನ ಪಕ್ಕದಲ್ಲಿ ನಂದಿಯನ್ನು ಚಿತ್ರಿಸಿದ್ದು ಮೇಲ್ಭಾಗದಲ್ಲಿ ಸೂರ್ಯ, ಚಂದ್ರರನ್ನು ಚಿತ್ರಿಸಲಾಗಿದೆ. ಇದಕ್ಕೂ ಸಹ ಸುಂದರವಾದ ಪ್ರಭಾವಳಿಯನ್ನು ಕೆತ್ತಲಾಗಿದೆ.

ವೀರಗಲ್ಲು ಸಂಖ್ಯೆ ೩

ಈ ವೀರಗಲ್ಲಿನಲ್ಲಿ ಎರಡು ಹಂತದ ದೃಶ್ಯಗಳಿವೆ. ಕೆಳ ಹಂತದಲ್ಲಿ ವೀರನನ್ನು ಚಿತ್ರಿಸಲಾಗಿದೆ. ವೀರನು ಒಂದು ಕೈಯಲ್ಲಿ ಕಠಾರಿಯನ್ನು ಮತ್ತೊಂದು ಕೈಯಲ್ಲಿ ಖಡ್ಗವನ್ನು ಹಿಡಿದಿದ್ಧಾನೆ. ಮತ್ತೊಬ್ಬನು ಕತ್ತಿಯನ್ನು ಮತ್ತು ಗುರಾಣಿಯನ್ನು ಹಿಡಿದಿದ್ಧಾನೆ. ಇದರಲ್ಲಿ ವೀರನು ಅಲಂಕಾರಿಕವಾಗಿ ವಸ್ತ್ರವನ್ನು ಧರಿಸಿದ್ಧಾನೆ. ಸೊಂಟದಲ್ಲಿ ಚಿಕ್ಕದಾದ ಕಠಾರಿಯನ್ನು ಸಿಕ್ಕಿಸಿಕೊಂಡಿದ್ಧಾನೆ. ಎರಡನೇ ಹಂತದಲ್ಲಿ ಶಿವಲಿಂಗವನ್ನು ಚಿತ್ರಿಸಿದ್ದು, ಶಿವಲಿಂಗದ ಪಕ್ಕದಲ್ಲಿ ಕೈಮುಗಿದು ಕುಳಿತಿರುವ ದಂಪತಿಯನ್ನು ಚಿತ್ರಿಸಲಾಗಿದೆ. ಲಿಂಗಕ್ಕೆ ಋಷಿಯೊಬ್ಬನು ಪೂಜೆಯನ್ನು ಸಲ್ಲಿಸುತ್ತಿರುವಂತೆ ಚಿತ್ರಿಸಲಾಗಿದೆ. ಇವನ ಪಕ್ಕದಲ್ಲಿ ನಂದಿಯನ್ನು ಚಿತ್ರಿಸಲಾಗಿದೆ. ಅದರ ಮೇಲ್ಭಾಗದಲ್ಲಿ ಸೂರ್ಯ ಮತ್ತು ಚಂದ್ರನನ್ನು ಕೆತ್ತಲಾಗಿದೆ. ಇದಕ್ಕೂ ಸಹ ಸುಂದರವಾದ ಪ್ರಭಾವಳಿಯನ್ನು ಕೆತ್ತಲಾಗಿದೆ.

ವೀರಗಲ್ಲು ಸಂಖ್ಯೆ ೪

ಈ ವೀರಗಲ್ಲಿನಲ್ಲಿ ಮೂರು ದೃಶ್ಯಗಳಿವೆ. ಕೆಳ ಹಂತದಲ್ಲಿ ವೀರನನ್ನು ಚಿತ್ರಿಸಲಾಗಿದೆ. ವೀರನು ಬಿಲ್ಲು ಬಾಣಗಳನ್ನು ಹಿಡಿದಿದ್ಧಾನೆ. ಸೊಂಟದಲ್ಲಿ ಮತ್ತೊಂದು ಕತ್ತಿಯನ್ನು ಸಿಕ್ಕಿಸಿಕೊಂಡಿದ್ಧಾನೆ. ಇವನ ವೇಷಭೂಷಣಗಳು ಗಮನ ಸೆಳೆಯುತ್ತವೆ. ಕಿವಿಯಲ್ಲಿ ಅಗಲವಾದ ಕುಂಡಲ ಕೊರಳಲ್ಲಿ ಉದ್ದನೆಯ ಮಣಿಸರ, ಕೈಕಡಗ, ಕಾಲ್ಗಡಗ ಮುಂತಾದ ಆಭರಣಗಳನ್ನು ಧರಿಸಿರುವನು. ತನ್ನ ತಲೆಯ ಕೇಶವನ್ನು ನೆತ್ತಿಯ ಮೇಲೆ ಸಿಂಬಿಯಂತೆ ವೃತ್ತಾಕಾರವಾಗಿ ಕಟ್ಟಿ ಅಲಂಕರಿಸಿದ್ಧಾನೆ. ವೀರನ ಹಿಂಭಾಗದಲ್ಲಿ ಛತ್ರಿಯನ್ನು ಕೆತ್ತಲಾಗಿದೆ. ಎರಡನೆಯ ಹಂತದಲ್ಲಿ ವೀರನನ್ನು ಚಾಮರಧಾರಣಿಯರು ಸ್ವರ್ಗಕ್ಕೆ ಕರೆದುಕೊಂಡು ಹೋಗುತ್ತಿರುವುದರ ದೃಶ್ಯವಿದೆ. ಮೂರನೆಯ ಹಂತದಲ್ಲಿ ವೀರನು ಧ್ಯಾನಾಸಕ್ತನಾಗಿ ವಿರಾಜಮಾನನಾಗಿ ಕುಳಿತಿದ್ಧಾನೆ. ಇವನ ಅಕ್ಕಪಕ್ಕದಲ್ಲಿ ದೇವಾಂಗನೆಯರು ನಿಂತಿದ್ಧಾರೆ.

ಮೇಲೆ ವಿವರಿಸಿದ ನಾಲ್ಕು ವೀರಗಲ್ಲುಗಳನ್ನು ಬಿಟ್ಟರೆ ಉಳಿದೆಲ್ಲವೂ ಸಹ ಮಂಟಪದ ರಚನೆಯೊಳಗೆ ಉಬ್ಬುಶಿಲೆಗಳನ್ನು ಕೆತ್ತಲಾಗಿದೆ. ಮತ್ತೆ ಕೆಲವು ರೇಖಾ ಚಿತ್ರಗಳ ರೀತಿಯಲ್ಲಿ ಚಿತ್ರಿಸಲಾಗಿದೆ. ಮತ್ತೆ ಕೆಲವು ಅಷ್ಟೇನು ಸ್ಪಷ್ಟವಲ್ಲದ ವೀರಗಲ್ಲುಗಳಾಗಿವೆ. ಮತ್ತೆ ಕೆಲವು ಶಿಲ್ಪಗಳು ಅಷ್ಟೇನೂ ಹೆಚ್ಚಿನ ಉಬ್ಬು ಶಿಲ್ಪಗಳನ್ನು ಹೊಂದಿಲ್ಲದೆ ಸಾಮಾನ್ಯ ಅಲಂಕರಣವನ್ನು ಹೊಂದಿವೆ. ಎಲ್ಲಾ ವೀರಗಲ್ಲುಗಳು ಸಹ ಸಾಮಾನ್ಯವಾದ ಅಲಂಕರಣವನ್ನು ಹೊಂದಿವೆ. ಸಾಮಾನ್ಯವಾಗಿ ಹೆಚ್ಚಿನ ಸಂಖ್ಯೆಯಲ್ಲಿ ಎಲ್ಲಿ ವೀರಗಲ್ಲುಗಳು ದೊರಕುತ್ತವೆಯೋ ಅಲ್ಲಿ ಒಂದಾದರೂ ಮಹಾಸತಿ ಕಲ್ಲು ಕಂಡುಬರುವುದು ಸಹಜ. ಅದರೆ ಇಲ್ಲಿ ಯಾವುದೇ ಮಹಾಸತಿ ಕಲ್ಲುಗಳು ದೊರೆತಿಲ್ಲ. ಅದರೆ ಇಲ್ಲಿ ಮಹಾಸತಿ ಕಲ್ಲುಗಳು ದೊರೆಯದೆ ಇರುವುದರಿಂದ ಇಲ್ಲಿ ಸತಿಪದ್ಧತಿ ಇಲ್ಲವೆಂದು ತೀರ್ಮಾನಿಸಲಾಗದು. ಗುಡಿಯೊಳಗೆ ಇರುವ ಪ್ರತಿಯೊಂದು ವೀರಗಲ್ಲಿನಲ್ಲಿ ಕೆಳಹಂತದಲ್ಲಿ ವೀರನು ನಿಂತಿದ್ದು, ಅಕ್ಕಪಕ್ಕದಲ್ಲಿ ದೇವಾಂಗನೆಯರು ಸಹ ನಿಂತಿದ್ಧಾರೆ. ಎರಡನೆಯ ಹಂತದಲ್ಲಿ ವೀರನು ಧ್ಯಾನಾಸಕ್ತನಾಗಿ ಕುಳಿತಿದ್ಧಾನೆ. ಇವನ ಪಕ್ಕದಲ್ಲಿ ದೇವಮಾನವರು ನಿಂತಿರುವಂತೆ ಚಿತ್ರಿಸಲಾಗಿದೆ. ಮೇಲ್ಬಾಗದಲ್ಲಿ ಲಿಂಗ ಮತ್ತು ನಂದಿಯನ್ನು ಚಿತ್ರಿಸಲಾಗಿದೆ. ಈ ಎಲ್ಲಾ ಶಿಲ್ಪಗಳನ್ನು ಪ್ರತ್ಯೇಕವಾದ ಚೌಕಟ್ಟಿನ ಒಳಗೆ ಕೆತ್ತಲಾಗಿದೆ. ಇಲ್ಲಿರುವ ವೀರಗಲ್ಲುಗಳಲ್ಲಿ ಹಲವು ವೀರಗಲ್ಲುಗಳು ಸ್ವಲ್ಪ ಬದಲಾವಣೆಯೊಂದಿಗೆ ಒಂದೇ ರೀತಿಯ ಲಕ್ಷಣಗಳನ್ನು ಹೊಂದಿವೆ.

ಇಲ್ಲಿನ ವೀರಗಲ್ಲುಗಳನ್ನು ಅವಲೋಕಿಸಿದಾಗ ಬಹುಶಃ ಈ ಪ್ರದೇಶವು ಒಂದು ಯುದ್ಧ ಭೂಮಿಯಾಗಿರಬಹುದೆಂದು ಊಹಿಸಬಹುದು. ಇಲ್ಲಿರುವ ಐದು ವೀರರ ಗುಡಿಗಳಿಗೂ ತಲಾ ಒಂದೊಂದು ಊರಿನವರು ಹಬ್ಬದ ವೇಳೆಯಲ್ಲಿ ಪೂಜೆ ಸಲ್ಲಿಸುತ್ತಿದ್ಧಾರೆ.

 

ಆಕರ ಗ್ರಂಥಗಳು

೧. ಚಿದಾನಂದಮೂರ್ತಿ ಎಂ., ಕನ್ನಡ ಶಾಸನಗಳ ಸಾಂಸ್ಕೃತಿಕ ಅಧ್ಯಯನ

೨. ಶೇಷಶಾಸ್ತ್ರಿ ಆರ‍್., ಕರ್ನಾಟಕದ ವೀರಗಲ್ಲುಗಳು

೩. ಪರಮಶಿವಮೂರ್ತಿ ಡಿ.ವಿ., ಕನ್ನಡ ಶಾಸನಶಿಲ್ಪ

೪. ಶೆಟ್ಟರ‍್ ಎಸ್., ಮೆಮೊರಿಯಲ್ ಸ್ಟೋನ್

೫. ತಿಪ್ಪೇರುದ್ರಸ್ವಾಮಿ ಎಚ್., ಕರ್ನಾಟಕ ಸಂಸ್ಕೃತಿ ಸಮೀಕ್ಷೆ

೬. ಕಲಬುರ್ಗಿ ಎಂ.ಎಂ., ಸಮಾಧಿ ಬಲಿದಾನ ವೀರಮರಣ ಸ್ಮಾರಕಗಳು

೭. ಹಿರೇಮಠ ಬಿ.ಆರ್., ವೀರಗಲ್ಲುಗಳು

೮. E.C.VII ನಾಗಮಂಗಲ ತಾಲ್ಲೂಕು